Saturday, 29 January 2022

ಬಳೆಗಾರ

 


 #ಬಳೆಗಾರ

ಹಚ್ಚಹಸುರಿನ ಬಳೆಯ ಅಚ್ಚಕೆಂಬಳೆಯ
ಹೆಚ್ಚು ತಂದಿಹೆ ತಾಯೇ ಹೊರಗೆ ಬಾರೇ
ಅಚ್ಚುಮೆಚ್ಚಿನ ಚುಕ್ಕಿ ಗೀರಿನ ಬಳೆಯ
ಮೆಚ್ಚಿಕೊಳ್ಳುವಿ ತಾಯೇ ನೋಡು ಬಾರೇ||೧||

ರಂಗರಾಯರ ಮನಸ ಗೆದ್ದಿರುವ ಮಹಾತಾಯಿ
ಬಿಡಿಸಿಹೆನು ಅಂಗಳದಿ ಬಳೆಜೋಳಿಗೆ
ರಂಗುರಂಗಿನ ಬಳೆಯ ನಿಮಗಾಗಿ ತಂದಿಹೆನು
ತೊಡಿಸುವೆನು ಮೆದುವಾಗಿ ನಿಮ್ಮ ಕರಗಳಿಗೆ||೨||

ಮದುವೆಸೀಮಂತದಿ ಬೇಕು ಗಾಜಿನಬಳೆಗಳು
ಘಲ್ ಘಲ್ ಸದ್ದಿಗೆ ಮನದಿ ಉಲ್ಲಾಸ
ಇದುವೆ ಕಾರಣವಂತೆ ನಿದಿರೆ ಕದಿಯಲು ಸಖನ
ನಲ್ಲೆ ಮನಸಿನ ಒಳಗೆ ಬಲು ಸಂತಸ||೩||

ಹಿರಿಕಿರಿಯ ನಾರಿಯರೆ ಕೊಳ್ಳಿರಿ ಬಳೆಗಳನು
ಬಂಗಾರದ ಬಳೆಗಿಂತ ಮೆರುಗು
ಬರಿಗೈಯ ಯುವತಿಯರೆ ಬಿಳಿಗೈಯ ಬಾಲೆಯರೆ
ಸಿಂಗರಿಸಿ ನೋಡಿ ಕೈಗಳಿಗೆ ಸೊಬಗು||೪||

ಇತ್ತಿತ್ತ ಮರೆತಿಹರು ಬಳೆಶಾಸ್ತ್ರ ಸಂಸ್ಕ್ರತಿಯ
ಮುತ್ತೈದೆ ಬಾಳಿಗಿದು ಸಿರಿಯು ಹೆಣ್ಣೇ
ಹತ್ತೂರ ಸುತ್ತಿ ಮುಂದೆ ಸಾಗುವೆ ನಾನು
ಮತ್ತೆ ಬರುವುದು ಮಾತ್ರ ಎಂದೊ ಕಾಣೆ||೫||

✍️... ಅನಿತಾ ಜಿ.ಕೆ.ಭಟ್.
29-01-2022.

ಮಾಮ್ಸ್‌ಪ್ರೆಸೊ ದಿನದ ಚಿತ್ರಕ್ಕೆ ಬರೆದ ಸಾಲುಗಳು..


Sunday, 23 January 2022

ಮಗಳು

 


#ಮಗಳು

ನಗುವ ಚೆಲ್ಲಿ ಬೆಳಕು ಹರಡಿ
ಮನವ ತಣಿಸುವ ಮಗಳು...
ದುಗುಡ ಮರೆಸಿ ಪ್ರೀತಿ ಬೆರೆಸಿ
ಮಿನುಗುತಿಹ ಸಿರಿ ಹರಳು...||೧||

ಮೌನದಲಿ ಕಾಡಿ ಮಾತಿನರಮನೆ ಹೆಣೆದು
ಮರುಳು ಮಾಡುವ ಮುಗ್ಧ ಬಾಲೆ
ದಿನದಣಿಯೆ ಆಡಿ ಹೃದಯದಲಿ ಮೆರೆದು
ಇರುಳ ಕರಗಿಸುವ  ದೈವಲೀಲೆ...||೨||

ನಲುಮೆಯಿದ್ದೆಡೆ ಒಲಿಯುವವಳು
ಮೃದು ಮಧುರ ಭಾಷಿಣಿ
ಒಲುಮೆ ತೈಲದಿ ಬೆಳೆದ ಪ್ರಣತಿಯಿವಳು
ಮನೆಯ ಬೆಳಗುವ ಸದ್ಗುಣಿ..||೩||

ಬಣ್ಣಬಣ್ಣದ ಉಡುಗೆ ತೊಡುತಲಿ
ರಂಗು ರಂಗಿನ ಕನಸ ಮಾಲೆ
ಸಣ್ಣಸಣ್ಣ ಖುಷಿಗೂ ಕುಣಿದುನಲಿವ
ದೇವನುಡುಗೊರೆ ಕೋಮಲೆ..||೪||

ಜಗದ ವಿಸ್ಮಯ ಹೆಣ್ಣು ಚೇತನ
ಜೀವಭಾವದ ಸೃಷ್ಟಿಗೆ
ಹೆಣ್ಣು ಕೂಸದು ಶಾಪವಲ್ಲವು
ಬಾಳ ಭಾಗ್ಯ ದೀವಿಗೆ..||೫||

✍️... ಅನಿತಾ ಜಿ.ಕೆ.ಭಟ್.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು. 💐

Saturday, 15 January 2022

ಕಾಲ ಸರಿದಂತೆ...

 

#ಕಾಲ ಸರಿದಂತೆ...




ಪಳೆಯುಳಿಕೆಯಾಗಿಹೆನು ಎಂದು ಹಳಹಳಿಸುತಲಿ
ನಿಂತಿದ್ದೆ ಬೇಸರಿಸಿ ಮೂಲೆಯಲ್ಲಿ
ಫಳಫಳಹೊಳೆವಂತೆ ಸಿಂಗರಿಸಿ ಹೊರಮೈಯ
ನಿಲ್ಲಿಸಿಹರಿಂದೆನ್ನ ಮನೆಯ ಮುಂಬಾಗಿಲಲ್ಲಿ||೧||




ಹಿರಿಯರಿಗೆ ಸಂತೃಪ್ತಿ ಕಿರಿಯರಿಗೆ ಆಸಕ್ತಿ
ನೋಡುತಿಹರೆನ್ನ ಮುಟ್ಟಿಮುಟ್ಟಿ
ಸಂಭ್ರಮದ ಹೊಸಘಳಿಗೆ ನೆನೆಯುತಲಿ
ಮೈಪುಳಕ ವಯಸು ಹಿಮ್ಮೆಟ್ಟಿ||೨||

ಧಣಿಯಂದು ಬಂದಿಹನು ನನ್ನಬೆನ್ನೇರಿ
ನವವಧುವಿನೊಡನೆ ಈ ಮನೆಗೆ
ತವರಿನ ಬಳುವಳಿಯು ಜೋಡೆತ್ತು ಜೊತೆಗಿತ್ತು
ಅಭಿಮಾನ ನಮ್ಮೆಡೆಗೆ ಮನೆಯೊಡತಿಗೆ||೩||

ಫಲಹೊರೆಯ ಹೇರಿ ಪಟ್ಟಣಕೆ ಸಾಗಿದ್ದೆ
ತರುತಿದ್ದೆ ಬರುವಾಗ ತರತರದ ವಸ್ತು
ತುಂಬುಬಸುರಿಯ ತವರಿಗೊಯ್ದು ಮರಳಿದ್ದೆ
ಮುದ್ದುಕುವರನ ತೊಟ್ಟಿಲಲಿ ಹೊತ್ತು||೪||




ಬಂಡಿಯೇರಿದ ಎಳೆಯಬಾಲರಿಂದು
ನಿಂದಿಹರು ಯೌವ್ವನದ ಹೊಸ್ತಿಲಲ್ಲಿ
ವಾಹನದಿ ಬಂದಿಳಿವ ನವವಧೂವರರಿಂದು
ನನ್ನನೇರುವರು ಸಂಪ್ರದಾಯದ ಹೆಸರಿನಲ್ಲಿ||೫||

✍️... ಅನಿತಾ ಜಿ.ಕೆ.ಭಟ್.