Friday, 13 May 2022

ಹರಿದ ಪ್ಯಾಂಟ್- ಫ್ಯಾಷನ್ ಮತ್ತು ಅನಿರೀಕ್ಷಿತ ಬೆಳವಣಿಗೆ



       ಕೆಲವು ವಿಚಾರಗಳು ಮನದೊಳಗೆ ಸದಾ ಚಿಂತನ- ಮಂಥನವನ್ನು ಹುಟ್ಟು ಹಾಕುತ್ತಲೇ ಇರುತ್ತವೆ. ನಿರ್ದಿಷ್ಟವಾದ ಉತ್ತರವನ್ನು ಹುಡುಕುವಲ್ಲಿ ಸಫಲರಾಗುವುದಿಲ್ಲ, ಅಥವಾ ದೊರೆತ ಉತ್ತರದಿಂದ ತೃಪ್ತರಾಗುವುದಿಲ್ಲ. ಇಂದು ಮಕ್ಕಳ ಬಟ್ಟೆಗಳನ್ನಿಡುವ ವಾರ್ಡ್‌ರೋಬ್ ಶುಚಿಗೊಳಿಸುವಾಗ ಕಂಡ ಬಟ್ಟೆಯೊಂದು ನೆನಪಿನ ಎಳೆಯೊಂದನ್ನು ಬಿಚ್ಚಿಟ್ಟಿದೆ. ಮುಂದಿನ ಶೈಕ್ಷಣಿಕ ವರ್ಷದ ಯೂನಿಫಾರಂ ಬಟ್ಟೆಗಳನ್ನು ಜೋಡಿಸಲು ಹಳೆಯ ಬಟ್ಟೆಗಳ ವಿಲೇವಾರಿ ಆಗಲೇಬೇಕು. ಮುಂದಿನ ವರ್ಷ ಉಪಯೋಗ ಆಗಬಲ್ಲ ಮತ್ತು ಆಗದಂತಹ ಬಟ್ಟೆಗಳ ವಿಂಗಡನೆ ಮಾಡಿ,  ಸಮರ್ಪಕವಾದ ಜಾಗದಲ್ಲಿ ಮರುಜೋಡಿಸಬೇಕು. ಇಂತಹ ಸಂದರ್ಭದಲ್ಲಿ ನನಗೆ ಕಂಡಿದ್ದೇ ಆ ಹರಿದ ಪ್ಯಾಂಟ್.

    ಒಂದು ದಿನ ಸಂಜೆ ದೊಡ್ಡ ಮಗ ಮನೆಗೆ ಬರುವಾಗ ದೂರದಿಂದಲೇ ಗಮನಿಸುತ್ತಿದ್ದೆ. ಟವೆಲ್ ನಿಂದ ತೊಡೆಯ ಭಾಗ ಮುಚ್ಚಿಕೊಂಡು ಬರುತ್ತಿರುವಂತೆ ತೋರಿತು. ಸುಮ್ಮನೇ ಟವೆಲ್ ಕೈಯಲ್ಲಿ ಹಿಡಿದು ಏನೋ ಆಟವಾಡುತ್ತಾ  ಬರುವುದು ಆಗಿರಬಹುದೆಂದು ಭಾವಿಸಿದೆ. ಗೇಟ್ ತೆಗೆದು ಒಳಬರುತ್ತಿದ್ದಂತೆ ನಿಜವಾಗಿಯೂ ಮುಚ್ಚಿಕೊಂಡು ಬರುತ್ತಿರುವುದು ಎಂದರಿವಾಗಿ ಕುತೂಹಲ ಹೆಚ್ಚಾಯಿತು. ಬಂದವನೇ ಜಗಲಿಯಲ್ಲಿ ಪೆಚ್ಚಾಗಿ ಕುಳಿತು, "ಅಮ್ಮಾ ನನ್ನ ಪ್ಯಾಂಟ್ ಹರಿದಿದೆ.." ಅಂದ. "ಈ ವರ್ಷ ಹೊಲಿಸಿದ ಪ್ಯಾಂಟ್.. ಇಷ್ಟು ಬೇಗ ಹರಿಯುವುದಾದರೂ ಹೇಗೆ..?"ಎಂದು ನಾನೂ ಆಶ್ಚರ್ಯದಿಂದಲೇ ಕೇಳಿದೆ. ಸಣ್ಣಮಗ,  "ಅದಕ್ಕೆ ನಿಂಗೆ ನಾಚಿಕೆಯಾಯಿತಾ... ಮುಚ್ಚಿಕೊಂಡು ಬಂದಿರುವುದು ಕಂಡಿತು" ಎಂದು ರೇಗಿಸಲಾರಂಭಿಸಿದ. "ತೊಡೆಯ ಭಾಗ ಸುಮಾರು ಮೂರೂವರೆ ಇಂಚಿನಷ್ಟು ಹರಿದು ಬಲು ಮುಜುಗರವಾಯಿತು. ಸೇಫ್ಟಿ ಪಿನ್ ಇರಲೂ ಇಲ್ಲ.." ಎಂದು ಅಲವತ್ತುಕೊಂಡ. ತಕ್ಷಣವೇ.. ಸಣ್ಣ ಮಗ "ಹರಿದ ಪ್ಯಾಂಟ್ ಈಗ ಫ್ಯಾಷನ್..! ನಿಂಗೆ ಗೊತ್ತಿಲ್ವಾ..? ಹರಿದ ಪ್ಯಾಂಟ್ ಹಾಕಿಕೊಂಡು ಸ್ಟೈಲಾಗಿ ಎದೆಯೆತ್ತಿ ನಡೆಯಬೇಕು" ಎಂದು ಕ್ಯಾಟ್ ವಾಕ್ ಮಾಡಿ ತೋರಿಸಿದಾಗ,  ನನಗೆ ನಗೆ ಬಂದರೂ ತೋರಿಸುವಂತಿರಲಿಲ್ಲ. ನಕ್ಕರೆ ದೊಡ್ಡವನಿಗೆ ಮತ್ತಷ್ಟು ಬೇಸರವಾದೀತೆಂದು ಗಂಭೀರವಾಗಿಯೇ ಇದ್ದೆ.

       ಸಣ್ಣವನ ಮಾತೂ ನಿಜ. ಇಂದಿನ ಯುವಜನತೆ ಫ್ಯಾಷನ್ ಹೆಸರಿನಲ್ಲಿ ಹರಿದ ಜೀನ್ಸ್ ಪ್ಯಾಂಟ್ ಧರಿಸುವುದು ಸಾಮಾನ್ಯ. ಹಳೆಯ ಜೀನ್ಸ್ ಪ್ಯಾಂಟ್ ಗಳನ್ನು ಅವರವರ ಸ್ಟೈಲ್ ಸ್ಟೇಟ್‌ಮೆಂಟ್ ಗೆ ತಕ್ಕಂತೆ ಕತ್ತರಿಸಿ ತೊಟ್ಟು, ಸ್ವಲ್ಪವೂ ಮುಜುಗರ, ನಾಚಿಕೆ ಪಡದೆ ಓಡಾಡಿದರೆ ಇಂದು ಬೋಲ್ಡ್, ಧೈರ್ಯ ಶಾಲಿ ಎಂದೇ ಲೆಕ್ಕ. ರಿಪ್ಡ್ ಜೀನ್ಸ್ ಎಂಬ ಹೆಸರಿನಿಂದ ಕರೆಯಲ್ಪಡುವ ಇಂತಹಾ ಉಡುಗೆಗಳನ್ನು ತೊಡುವವರಿಗೆ ಆತ್ಮವಿಶ್ವಾಸ ಹೆಚ್ಚು ಎಂದು ಯುವಜನತೆಯ ಅಭಿಪ್ರಾಯ. ಸುತ್ತುಮುತ್ತಲಿನ ಜನರ ಗಮನಸೆಳೆಯುವ ಇಂತಹ ಉಡುಪುಗಳನ್ನು ಧರಿಸಿದವರು, ಯಾರು ನೋಡಲಿ ಬಿಡಲಿ ನನಗೇನು? ನಾನು, ನನ್ನಿಷ್ಟ, ನನ್ನಿಚ್ಛೆಯಂತಹ ಬಟ್ಟೆ ತೊಡುವ ಸ್ವಾತಂತ್ರ್ಯ ನನಗಿದೆ ಎಂದು ನಿರ್ಭಿಡೆಯಿಂದ ಹೆಜ್ಜೆ ಹಾಕುತ್ತಾರೆ. ಕೈಯಲ್ಲೊಂದು ಮೊಬೈಲ್ ಹಿಡಿದು ಸುತ್ತಲಿನವರ ನೋಟಕ್ಕೆ ಗಮನ ಕೊಡುವ ಗೋಜಿಗೇ ಹೋಗುವುದಿಲ್ಲ.

      ಮೊದಲೆಲ್ಲಾ ಮೈ ಮುಚ್ಚುವಂತಹ ಬಟ್ಟೆ, ಹೊಸ ಬಟ್ಟೆ  ಧರಿಸಿದರೆ ಸಿರಿವಂತರು ಎಂದು ಲೆಕ್ಕ. ಈಗ ಹಳೆಯ ಪ್ಯಾಂಟ್‌ನ್ನು ಹರಿದು  ಅಥವಾ ಅಲ್ಲಲ್ಲಿ ಹರಿಯಲ್ಪಟ್ಟ ಡಿಸೈನ್ ನ ಪ್ಯಾಂಟ್ ಖರೀದಿಸಿ, ಅದನ್ನು ತೊಟ್ಟು ಅರೆಬರೆ ಮೈ ಪ್ರದರ್ಶನ ಮಾಡಿದರೆ ಅದು ಸಿರಿವಂತಿಕೆಯ ದ್ಯೋತಕ. ಯುವಜನತೆಯ ಟ್ರೆಂಡ್ ಫ್ಯಾಷನ್ ಇದು. ತಪ್ಪೆಂದೇ ಹೇಳಲೂ ಸಾಧ್ಯವಿಲ್ಲ. ನೋಡುವವರ ದೃಷ್ಟಿಕೋನ ಸರಿಯಿದ್ದರೆ ಯಾವುದೇ ತಾಪತ್ರಯಗಳು ಇರಲಾರವು.

      ಆದರೆ ಫ್ಯಾಷನ್ ಎಂದು ಧರಿಸಿಕೊಂಡಾಗ ಸಮಾಜವನ್ನು ಎದುರಿಸುವುದಕ್ಕೂ, ಮೈ ಮುಚ್ಚುವಂತೆ ಬಟ್ಟೆ ತೊಡಬೇಕೆಂದು ಬಯಸುವವರ ಪ್ಯಾಂಟ್ ಅಕಸ್ಮಾತ್ ಹರಿದಾಗ, ಅದೇ ಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆಯ ಮೂಲಕ ಮನೆಗೆ ತಲುಪಬೇಕಾದಾಗ ಆಗುವ ಸಂಕೋಚಕ್ಕೂ ವ್ಯತ್ಯಾಸವಿದೆ. ಮಗನಿಗೆ ಎದುರಾದದ್ದು ಎರಡನೆಯ ಪರಿಸ್ಥಿತಿ.

     ಶಾಲೆಯಲ್ಲಿ ಗಮನವಿಟ್ಟು ಪಾಠ ಕೇಳುವವರೊಂದಿಗೆ, ಪಾಠ ಕೇಳಲು ಇಷ್ಟವಿಲ್ಲದೆ, ಕೇಳಿಸಿಕೊಳ್ಳುತ್ತಿರುವಂತೆ ನಟಿಸಿ, ಕೈಯಲ್ಲಿ ಬೇರೆಯೇ ಕೆಲಸ ಮಾಡುವವರಿರುತ್ತಾರೆ. ಆಗ ತರಗತಿ ನಡೆಯುತ್ತಿತ್ತು. ತರಗತಿಯಲ್ಲಿ ಸುಮ್ಮನೆ ಕುಳಿತು ಕೇಳಲು ಬೋರು ಬೋರು.. ಎನ್ನುವ ತಂಟೆ ಹುಡುಗನೊಬ್ಬ ಪಕ್ಕವೇ ಕುಳಿತಿದ್ದ. ಕ್ರಾಫ್ಟ್  ಮಾಡಲೆಂದು ಕಟ್ ಬ್ಲೇಡ್ ಶಾಲೆಗೆ ತಂದಿದ್ದ. ಅದನ್ನು ಕೈಯಲ್ಲಿ ಹಿಡಿದು ಡೆಸ್ಕಿನೊಳಗೆ ಅಲ್ಲಿ ಇಲ್ಲಿ ಕೊಯ್ಯುತ್ತಿದ್ದ. ಒಂದೆರಡು ಬಾರಿ ತನ್ನದೇ ಪ್ಯಾಂಟಿಗೆ ತೊಡೆಯ ಭಾಗಕ್ಕೆ ಗೀರಿದ. ಏನೂ ಆಗಲಿಲ್ಲ. ಏನೂ ಆಗುವುದಿಲ್ಲ ನೋಡು ಎಂದು ಪಾಠ ಕೇಳುತ್ತಿದ್ದವನ ಗಮನ ಸೆಳೆದು, ಬೇಡಬೇಡವೆಂದು ಪಿಸುಗುಟ್ಟಿದರೂ ಕೇಳದೆ ಗೀರಿದ. ಪ್ಯಾಂಟ್ ಹರಿಯಿತು..!! ಅಷ್ಟೇ ಆಗಿದ್ದು.. ದೇವರ ದಯೆಯಿಂದ ಚರ್ಮ ಹರಿಯಲಿಲ್ಲ. ಆಮೇಲೆ ನಿನ್ನ ಪ್ಯಾಂಟ್ ಮೆಟೀರಿಯಲ್ ಒಳ್ಳೆಯದಿರಲಿಲ್ಲ ಎಂಬ ಸಮಜಾಯಿಷಿ..!
ಇತ್ತ ಅಧ್ಯಾಪಕರಲ್ಲೂ ಹೇಳಲಾಗದೆ, ಹಾಗೆಯೂ ಇರಲಾಗದೇ ಟವೆಲ್ ಮುಚ್ಚಿಕೊಂಡು ಆಟದ ಅವಧಿಯಲ್ಲಿ ಆಟವಾಡಲೂ ಆಗದೇ ಚಡಪಡಿಸಿದ.  ಸಹಪಾಠಿ ಹುಡುಗಿಯರ ಬಳಿ ಸೇಫ್ಟಿ ಪಿನ್ ಕೇಳಬಹುದಿತ್ತಲ್ಲಾ.. ಎಂದರೆ ಅದಕ್ಕೂ ಸಂಕೋಚವೆಂಬ ಅಡ್ಡಗೋಡೆ. ಅಂತೂ ಟವೆಲ್ ಮುಚ್ಚಿಕೊಂಡು ಮನೆಗೆ ತಲುಪಿದ.

     ಫ್ಯಾಷನ್ ಸ್ಟೇಟ್ ‌ಮೆಂಟ್‌ಗೆ ಒಡ್ಡಿಕೊಂಡು ಹರಿದ ಪ್ಯಾಂಟನ್ನು ಆಯ್ದು ಧರಿಸುವುದಕ್ಕೆ ಮನಸ್ಸು ಮೊದಲೇ ಸಿದ್ಧಗೊಂಡಿರುತ್ತದೆ. ಅನಿರೀಕ್ಷಿತವಾಗಿ ಹರಿದು ಹೋಗುವಾಗ  ಕಸಿವಿಸಿಯ ಅನುಭವ. ಸಾಮಾಜಿಕ ಶಿಸ್ತಿಗೆ ಅನುಗುಣವಾಗಿ ನಮ್ಮ ಉಡುಗೆ ತೊಡುಗೆ ಇರಬೇಕೆಂದು ಬಯಸುವವರು, ಎಳವೆಯಿಂದಲೇ ಫ್ಯಾಷನನ್ನು ಸ್ವಲ್ಪ ಪಕ್ಕಕ್ಕಿಟ್ಟು ಗೌರವಯುತವಾದ ಉಡುಪುಗಳನ್ನು ಧರಿಸುವ ಅಭ್ಯಾಸದಲ್ಲೇ ಬೆಳೆದು ಬಂದವರಿಗೆ ಇಂತಹಾ ಸಂದರ್ಭದಲ್ಲಿ ಮುಜುಗರವಾಗುವುದು ಸಹಜ. ಯಾರೇನೇ ಅನ್ನಲಿ, ತಮಾಷೆ ಮಾಡಲಿ ನಾನು ಎದೆಯೆತ್ತಿ ನಡೆಯುತ್ತೇನೆ ಎಂಬ ಸ್ಪಷ್ಟ ನಿಲುವಿನ ನಿರ್ಭಿಡೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಅಷ್ಟೇನೂ ಸುಲಭವಲ್ಲ.

     ಈ ಘಟನೆಯಿಂದಾಗಿ ನಾನು ಇಬ್ಬರು ಮಕ್ಕಳ ಬ್ಯಾಗಿನಲ್ಲೂ ಸೇಫ್ಟಿ ಪಿನ್ ಇರಿಸುವ ಅಭ್ಯಾಸ ರೂಢಿಸಿಬಿಟ್ಟಿದ್ದೇನೆ. ಅನಿವಾರ್ಯತೆ ಎದುರಾದಾಗ ಉಪಯೋಗಕ್ಕಿರಲಿ ಎಂದು. ಸಣ್ಣ ಮಗ ಒಮ್ಮೆ ಕುಳಿತಲ್ಲಿಂದ ಏಳುವಾಗ ಡೆಸ್ಕ್ ನ ಆಣಿ (ನೈಲ್)ಸಿಕ್ಕಿ ಅಂಗಿ ಹರಿದಾಗ, ಸೇಫ್ಟಿ ಪಿನ್ ಹಾಕಿ ಸಂಕೋಚವಿಲ್ಲದೆ ಮನೆ ತಲುಪಿದ್ದ.

     ನಮ್ಮ ಬಾಲ್ಯದ ದಿನಗಳಲ್ಲಿ ಮನೆಯ ಹತ್ತಿರದಲ್ಲೇ ಇರುವ ಶಾಲೆಗಳಿಗೆ ಹೋಗುವ ಕ್ರಮವಿದ್ದುದು. ಹಳ್ಳಿಯ ಗದ್ದೆಯ ಬದು, ಗುಡ್ಡದ ದಾರಿಯಲ್ಲಿ ನಡೆದೇ ಹೋಗುವ ಸಂದರ್ಭದಲ್ಲಿ ಉಡುಗೆ ಹರಿದರೆ ಗಮನಿಸುವವರು ಯಾರೂ ಇರಲಿಲ್ಲ. ಆದರೆ ಈಗ ಹಾಗಲ್ಲ.. ದೂರದ ಶಾಲೆಗಳಿಗೆ ಹೋಗುವ ಮಕ್ಕಳು. ಶಾಲಾವಾಹನಗಳು ಮನೆಯ ಸಮೀಪದ ವರೆಗೆ ಬಂದರೆ ಅನುಕೂಲ. ಇಲ್ಲವೆಂದರೆ ಹತ್ತಾರು ಜನರ ನಡುವೆ ಸಾಗಬೇಕು. ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ ವಿದ್ಯಾರ್ಥಿಗಳಿಗೆ ಇಂತಹಾ ಸನ್ನಿವೇಶಗಳು ಬಹಳ ಪೇಚಾಟಕ್ಕೆ ಸಿಲುಕಿಸಬಲ್ಲವು. ಆದ್ದರಿಂದ ಮಾಸ್ಕ್, ಟವೆಲ್‌ನಂತೆ ಸೇಫ್ಟಿ ಪಿನ್‌ಗಳೂ ಸಹಾ ವಿದ್ಯಾರ್ಥಿಗಳ ಶಾಲಾ ಬ್ಯಾಗಿನಲ್ಲಿದ್ದರೆ ಉಪಯೋಗ ಆಗಬಲ್ಲದು.

     ಹರಿದ, ಹಳೆಯ ಪ್ಯಾಂಟುಗಳು, ಅಂಗಿಗಳು ತಮ್ಮ ಡ್ಯೂಟಿ ಮುಗಿಸಿ, ಗೋಣಿ ಚೀಲದೊಳಗೆ ಸೇರಿಕೊಂಡವು. ಹ್ಯಾಂಗರುಗಳು ಹೊಸ ಯೂನಿಫಾರಂಗಾಗಿ ಕಾಯುತ್ತಾ ಕುಳಿತಿವೆ.

✍️... ಅನಿತಾ ಜಿ.ಕೆ.ಭಟ್.
18-04-2022.
#ಪ್ರತಿಲಿಪಿ ಕನ್ನಡದ "ಡೈರಿ- 2022" ಏಪ್ರಿಲ್ ತಿಂಗಳ ಸ್ಪರ್ಧಾ ಬರಹ.

#ಈ ಡೈರಿಯ ಪುಟವನ್ನು ಪ್ರಥಮ ಬಹುಮಾನಕ್ಕೆ ಪರಿಗಣಿಸಿದ ಪ್ರತಿಲಿಪಿ ಕನ್ನಡದ ನಿರ್ವಾಹಕರಿಗೆ ಹಾಗೂ ನಿರ್ಣಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏