Wednesday, 30 October 2019

ಕೊಳವೆ ಬಾವಿ ದುರಂತಗಳಿಗೆ ಕಡಿವಾಣ ಹಾಕೋಣ



          ದೈನಂದಿನ ಕೆಲಸ ಕಾರ್ಯಗಳಿಗೆ ನೀರು ಅತೀ ಅವಶ್ಯಕ.ಹೊಲಗದ್ದೆಗಳಿಗೆ ಯಥೇಚ್ಛವಾಗಿ ನೀರುಣಿಸಬೇಕಾಗುತ್ತದೆ .ಮೊದಲೆಲ್ಲ ಭೂಮಿಯನ್ನು ಕೆಲವು ಅಡಿಗಳಷ್ಟು ಅಗೆದಾಗ ಸಿಗುತ್ತಿದ್ದ ನೀರು ಈಗ ಬತ್ತುತ್ತಿದೆ.ಮಾನವನ ದುರಾಸೆಯಿಂದ ಅರಣ್ಯನಾಶವಾಗಿ ಅತಿವೃಷ್ಟಿ ಅನಾವೃಷ್ಟಿ ಕಾಡುತಿದೆ.ಭೂಮಿಯ ಆಳಕ್ಕೆ ಮಳೆಯ ನೀರಿಳಿದು ಅಂತರ್ಜಲವಾಗುವ ಪ್ರಮಾಣ ಕಡಿಮೆಯಾಗಿದೆ.

          ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಅಂತರ್ಜಲವನ್ನೂ ಬಳಸಲು ಆರಂಭಿಸಿದನು. ಕೊಳವೆ ಬಾವಿಗಳನ್ನು ನಿರ್ಮಿಸಿದ  ..ಆರಂಭದ ದಿನಗಳಲ್ಲಿ ಯಥೇಚ್ಛವಾಗಿ ದೊರೆಯಲಾರಂಭಿಸಿ ಬಳಸುತ್ತಿದ್ದಂತೆ ನೀರಿನ ಪ್ರಮಾಣ ಕಡಿಮೆಯಾಗುವುದು ಕಂಡುಬಂತು.ನೀರು ದೊರೆಯುವ ಪ್ರಮಾಣ 1 ರಿಂದ 1.5 ಇಂಚಿನಷ್ಟು ಇದ್ದರೆ ಬಳಸುವುದು ಕಷ್ಟವೆಂದು ತಿಳಿದು ಉಪಯೋಗಿಸುವುದನ್ನು ನಿಲ್ಲಿಸುತ್ತಾರೆ.ಹಾಕಿದ ಪಂಪ್ ಸೆಟ್ ಕೂಡ ತೆಗೆಯುತ್ತಾರೆ..ಇಂತಹ ಸಂದರ್ಭದಲ್ಲಿ ಕೊಳವೆ ಬಾವಿಯನ್ನು ಮುಚ್ಚುತ್ತಾರೆಯೇ...? ಎಂದು ಪ್ರಶ್ನಿಸಿದರೆ ಕೆಲವರು ಮಾತ್ರ ಹೌದು ..ಮುಚ್ಚಿಸಿದ್ದೇವೆ .. ಎಂದರೆ ಬಹುತೇಕರದು ಇಲ್ಲ ಎಂಬ ಉತ್ತರವೇ ಸಿಗಬಹುದು.

          ಕೊರೆಯುವಾಗಲೇ ನೀರು ಸಿಗದಿದ್ದ ಕೊಳವೆ ಬಾವಿಗಳ ಕಥೆಯೂ ಭಿನ್ನವಾಗಿಲ್ಲ.ಒಂದು ಕಡೆ ನೀರು ಸಿಗದಿದ್ದರೆ ಇನ್ನೊಂದು ಕಡೆ ಕೊಳವೆ ಬಾವಿ ಕೊರೆಸುತ್ತಾರೆ .. ನಿರುಪಯುಕ್ತ ಕೊಳವೆಯನ್ನು ಮುಚ್ಚಲು ನಿರಾಸಕ್ತಿ ತೋರುತ್ತಾರೆ.. ಇನ್ನೊಂದು ಕೊಳವೆಬಾವಿ ಕೊರೆಸುವುದರಲ್ಲಿ ಇರುವಷ್ಟು ಆಸಕ್ತಿ ಹಿಂದಿನದನ್ನು ಮುಚ್ಚಿ ಯಾರಿಗೂ ತೊಂದರೆಯಾಗದಂತೆ ಕ್ರಮಕೈಗೊಳ್ಳುವಲ್ಲಿ ಇರುವುದಿಲ್ಲ..ಕುಡಿಯುವ ನೀರಿಗಾಗಿ,ಹೊಲಗದ್ದೆಗಳ ಬಳಕೆಗಾಗಿ ಕೊರೆದ ಕೊಳವೆ ಬಾವಿಗಳಲ್ಲಿ ಎಷ್ಟು ವಿಫಲಗೊಂಡ ಮತ್ತು ನಿರುಪಯುಕ್ತ ಆದವುಗಳಿವೆ ಎಂಬುದನ್ನು ಅಂದಾಜಿಸುವುದು ಕಷ್ಟಸಾಧ್ಯ.


            ಕೆಲವು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ತಿರಚ್ಚಿ ಜಿಲ್ಲೆಯ ನಡುಕಟ್ಟುಪಟ್ಟಿ ಸಮೀಪದಲ್ಲಿ ದುರ್ಘಟನೆಯೊಂದು ಸಂಭವಿಸಿದೆ.ಎರಡುವರ್ಷದ ಪುಟ್ಟ ಬಾಲಕ ಸುಜೀತ್ ವಿಲ್ಸನ್ ಮನೆಯ ಸಮೀಪ ಆಟವಾಡುತ್ತಿದ್ದಾಗ ತೆರೆದಿದ್ದ ಕೊಳವೆ ಬಾವಿಗೆ ಬಿದ್ದಿದ್ದಾನೆ.ವಿಷಯ ತಿಳಿದು 25 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಲು ಅಗ್ನಿಶಾಮಕ ದಳ, ಪೋಲೀಸ್ ಇಲಾಖೆ, ವಿಪತ್ತು ನಿರ್ವಹಣಾ ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದಾರೆ.ಸತತ ಮಳೆ, ಹವಾಮಾನ ವೈಪರೀತ್ಯ,ಕುಸಿಯುತ್ತಿರುವ ಮಣ್ಣು ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದ್ದರೂ ಪ್ರಯತ್ನ ಮುಂದುವರಿಸಿದ್ದಾರೆ.


          ಬಾಲಕ ಎಷ್ಟು ಸಂಕಟ ಅನುಭವಿಸಿದನೋ ಯೋಚಿಸಿದರೆ ಕಣ್ಣೀರು ಹರಿಯುತ್ತದೆ.ಉಸಿರಾಡುತ್ತಿದ್ದ ಬಾಲಕ ಮೂರು ದಿನಗಳ ನಿರಂತರ ಹೋರಾಟದ ನಂತರ ಅಸುನೀಗಿದ್ದಾನೆ.ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.ಸಮಾಜ ಪುಟ್ಟ ಬಾಲಕನ ದುರಂತ ಅಂತ್ಯಕ್ಕೆ ಕಂಬನಿ ಮಿಡಿದಿದೆ.ಅಧಿಕಾರಿಗಳು ಕೊಳವೆ ಬಾವಿಗಳನ್ನು ಮುಚ್ಚಿಸಲು ಮುಂದಾಗಿದ್ದಾರೆ.



         ಇಂತಹ ಘಟನೆಗಳು ಕರ್ನಾಕಟದಲ್ಲೂ ಹಲವಾರು ನಡೆದಿದೆ.ಸುಮಾರು ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿಯ ಝಂಜರವಾಡ ಗ್ರಾಮದಲ್ಲಿ ಆರು ವರ್ಷ ದ ಬಾಲಕಿ ಕಾವೇರಿಯನ್ನು ತೆರೆದು ಕೊಳವೆ ಬಾವಿ ಆಪೋಶನ ತೆಗೆದುಕೊಂಡಿದೆ.ಕಾವೇರಿಯ ತಾಯಿ ಸವಿತಾ.."ನಮಗೆ ಪರಿಹಾರ ಬೇಡ.ರಾಜ್ಯದಲ್ಲಿರುವ ಎಲ್ಲಾ ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಿ" ಎಂದು ಮನವಿ ಮಾಡಿದ್ದರು..


          ಕೆಲವು ವರ್ಷಗಳ ಹಿಂದೆ ವಿಜಾಪುರ ಜಿಲ್ಲೆಯ ನಾಗಠಾಣ ದ್ಯಾಜೀರಿ ಬಳಿ ನಾಲ್ಕು ವರ್ಷದ ಹುಡುಗಿ ಅಕ್ಷತಾ ಕೊಳವೆ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.ಇನ್ನೂ ಹಲವಾರು ಇಂತಹದೇ ಅವಘಡಗಳು ಸಂಭವಿಸಿವೆ.



        ಇಂತಹ ಘಟನೆ ನಡೆದಾಗ ಆ ಬಗ್ಗೆ ಎಚ್ಚೆತ್ತುಕೊಳ್ಳುವ ಜನ ನಂತರ ಮರೆತುಬಿಡುತ್ತಾರೆ.ನಿರುಪಯುಕ್ತ ಹಾಗೂ ವಿಫಲಗೊಂಡ ಕೊಳವೆ ಬಾವಿಗಳನ್ನು ಮುಚ್ಚುವುದು ಕಡ್ಡಾಯವೆಂದು ಸುಪ್ರೀಂ ಕೋರ್ಟ್ 2017 ರಲ್ಲಿ ಆದೇಶ ಹೊರಡಿಸಿದೆ.
ಇದು ಸಮಾಜದ ಜನರೆಲ್ಲ ಕೈಜೋಡಿಸಿ ಮಾಡಬೇಕಾದ ಕೆಲಸ.ಪ್ರತಿಯೊಬ್ಬರೂ ಕೂಡ ಇದು ನನ್ನ ಜವಾಬ್ದಾರಿ ಎಂದು ತಿಳಿದು ಕಾರ್ಯಪ್ರವೃತ್ತರಾಗಬೇಕಾಗಿದೆ .

*ನಮ್ಮ ಪರಿಸರದಲ್ಲಿ ಕೊಳವೆ ಬಾವಿ ಬಾಯ್ದೆರೆದು ನಿಂತಿದ್ದರೆ ಅದನ್ನು ಮುಚ್ಚಲು ಮುಂದಾಗೋಣ.ಸಾಧ್ಯವಿಲ್ಲವೆಂದಾದರೆ ಸ್ಥಳೀಯ ಮುಖಂಡರು, ಗ್ರಾಮಪಂಚಾಯತ್ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡೋಣ.

*ಕೆಲವು ಕಡೆ ನಿರುಪಯುಕ್ತ ಕೊಳವೆಯನ್ನು ಬರಿ ಕಲ್ಲಿನಿಂದ ಮುಚ್ಚಿರುತ್ತಾರೆ . ಅದನ್ನು ಯಾರೋ ಕಿಡಿಗೇಡಿಗಳು ತೆಗೆದುಹಾಕುವ ಕಾರ್ಯ ಮಾಡುತ್ತಾರೆ .ಅಂತಹ ಸಂದರ್ಭದಲ್ಲಿ ಅದನ್ನು ಶಾಶ್ವತವಾಗಿ ಮುಚ್ಚುವ ಕಾರ್ಯಕ್ಕೆ ಮುಂದಾಗೋಣ.


*ನಿರುಪಯುಕ್ತ ಕೊಳವೆ ಬಾವಿಗಳಲ್ಲಿ ಮಳೆಗಾಲದಲ್ಲಿ ಜಲಮರುಪೂರಣ ಮಾಡಿ ಅಂತರ್ಜಲ ಸಮೃದ್ಧವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬಹುದು..

*ಮಕ್ಕಳನ್ನು ಆಡಲು ಬಿಡುವ ಮೊದಲು ತೆರೆದ ಬೋರ್ ವೆಲ್ ಇದೆಯೇ ಎಂದು ಗಮನಿಸೋಣ.

*ಒಮ್ಮೆ ಕೊಳವೆ ಬಾವಿಯನ್ನು ಮುಚ್ಚಿದರೂ ಪುನಃ ತೆರೆದುಕೊಂಡಿದೆಯೇ ಎಂದು ಮರುಪರಿಶೀಲಿಸುವುದು ಉತ್ತಮ.


*ಅವರವರ ಜಮೀನಿನಲ್ಲಿ ತೆಗೆದ ಕೊಳವೆ ಬಾವಿಗಳನ್ನು ಮುಚ್ಚುವ  ಕಾರ್ಯವನ್ನು ವೈಯಕ್ತಿಕವಾಗಿ ಮಾಡೋಣ.

         ಕೊಳವೆಬಾವಿಗಳು ಇನ್ನಷ್ಟು ಮಕ್ಕಳನ್ನು ಬಲಿಪಡೆದು ಮೃತ್ಯು ಕೂಪಗಳು ಎಂದು ಕರೆಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳೋಣ . ಹೃದಯ ವಿದ್ರಾವಕ ಘಟನೆ ನಡೆಯದಂತೆ ನಾವೂ  ಅಳಿಲ ಸೇವೆ ಮಾಡೋಣ..

✍️... ಅನಿತಾ ಜಿ.ಕೆ.ಭಟ್.
30-10-2019.

ಒಲಿದ ಹೃದಯಕೆ ಒಲವಿನ ಉಡುಗೊರೆ




          ಬೆಳಿಗ್ಗೆ ಅಲಾರಾಂ ಹೊಡೆದುಕೊಂಡಾಗ ಯಾಕಾದರೂ ಇದು ಒದರಿಕೊಳ್ಳುತ್ತದೋ.. ಹಾಳಾದ್ದು ಸಿಹಿನಿದ್ದೆಯನ್ನೂ ಹಾಳುಮಾಡಿಬಿಡುತ್ತೆ..ಅಂತ ಗೊಣಗಿಕೊಂಡು ಇನ್ನೂ ನಿದ್ದೆಯಲ್ಲಿದ್ದ ಮುದ್ದಿನ ಪತಿ ಅಜಯನ ಮುಖವನ್ನೊಮ್ಮೆ ನೋಡಿ ಹೊದಿಕೆ ಹೊದಿಸಿ ಎದ್ದಳು ಅವನಿಕಾ... ಫ್ರೆಶ್ ಆಗಿ ಅಡುಗೆ ತಯಾರಿಯಲ್ಲಿ ತೊಡಗಿದಳು.ಅತ್ತೆ ಸರೋಜಮ್ಮ ಮೊದಲೇ  ಹಾಜರಾಗಿದ್ದರು.ಅವನಿಕಾ ಇಂದು ಯಾವತ್ತಿನಂತಿಲ್ಲ ಎಂದು ಅತ್ತೆಗೆ ಅರಿವಾಯಿತು.


"ಅವನಿಕಾ... ಏನಾದರೂ ಆರೋಗ್ಯ ಸಮಸ್ಯೆ ಇದೆಯಾ.".ಕೇಳಿದರು...
"ಇಲ್ಲ.. "ಎಂದಷ್ಟೇ ಚುಟುಕಾಗಿ ಉತ್ತರಿಸಿದ ಅವನಿಕಾ...

        ಅಜಯ್ ಎದ್ದು ಫ್ರೆಶ್ ಆಗಿ ಬಂದ.ಅವನಿಗೆ ಬಿಸಿ ಬಿಸಿ ಕಾಫಿ ಕೊಟ್ಟಳು..ಅವನಿಕಾಳ ಮುಖವೇ ಹೇಳುತ್ತಿತ್ತು ಅವಳ ಮೂಡ್ ಸರಿಯಿಲ್ಲ ಎಂದು..
"ಏನು ಮಹಾರಾಣಿಯವರು.. ಬೆಳಿಗ್ಗೆ ಬೆಳಿಗ್ಗೇನೇ ಮೂಡ್ ಔಟ್ ಆಗಿದ್ದು..."
ಉತ್ತರಿಸದೆ ಮತ್ತಷ್ಟು ಮುಖ ಸಿಂಡರಿಸಿಕೊಂಡು ಹೊರಟಳು ಅವನಿಕಾ...

       ಆಫೀಸ್ ಗೆ ಹೊರಟು ನಿಂತ ಅವನಿಕಾ ಅಜಯ್ ನಲ್ಲಿ ಸರೋಜಮ್ಮ ..."ಇವತ್ತು ಸ್ವಲ್ಪ ಬೇಗ ಬನ್ನಿ..ನಾಳೆ ಹಬ್ಬಕ್ಕೆ ಖರೀದಿ ಮಾಡೋದು ಇನ್ನೂ ಆಗಿಲ್ಲ..ಬಸ್ಸಲ್ಲಿ ಹೋಗೋಕೆ ಆಗಲ್ಲ.. ಮಂಡಿನೋವು..."

"ಸರಿ .. ಬಾಯ್ "ಎಂದು ಇಬ್ಬರೂ ಜೊತೆಯಾಗಿ ಹೊರಟರು..ಕಾರಲ್ಲಿ ಯಾವತ್ತೂ ಹರಟುತ್ತಿದ್ದ ಅವನಿಕಾ ಇವತ್ತು ಮಾತೇ ಆಡದೆ ಸುಮ್ಮನಿದ್ದಳು..ಕಾರಣ ಕಂಡುಹಿಡಿಯಲು ಅಜಯ್ ಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ.ಇಬ್ಬರೂ ಆಫೀಸಿಗೆ ಹೋಗಿ ಸಂಜೆ ಬೇಗ ಹೊರಡಲು ಬಾಸ್ ನ ಒಪ್ಪಿಗೆ ಪಡೆದರು.


        ಇಬ್ಬರೂ ಸಂಜೆ ಬೇಗ ಮನೆಗೆ ಬಂದಾಗ ಅಪ್ಪ ಸದಾನಂದ ರಾಯರು ಅಮ್ಮ ಸರೋಜಮ್ಮ ಹೊರಟು ನಿಂತಿದ್ದರು.ಶಾಪಿಂಗಿಗೆ ತೆರಳಿದರು.ಮೊದಲು  ವಸ್ತ್ರದ ಮಳಿಗೆಗೆ ತೆರಳಿದರು.ಇಬ್ಬರಿಗೂ ಚಂದದ ಝರಿಯಂಚಿನ ಸೀರೆ ಆಯ್ಕೆ ಮಾಡಿದರು.ಇನ್ನೊಂದು ಸೀರೆಯನ್ನು ಇರಲಿ ಎಂದರು ಸರೋಜಮ್ಮ.."ಯಾಕತ್ತೆ..ಈ ಹಬ್ಬಕ್ಕೆ ಒಂದು ಸಾಕಲ್ವಾ..ಮುಂದಿನ ಹಬ್ಬಕ್ಕೆ  ಮತ್ತೊಮ್ಮೆ ಬರೋಣ "ಎಂದಳು..
"ಅದೂ ಚೆನ್ನಾಗಿದೆ.. ಇರಲಿ.."  ಎಂದಾಗ ಸೇಲ್ಸ್ ಗರ್ಲ್ "ಅಮ್ಮನಿಗೆ ಇಷ್ಟವಾದ್ದು ಎರಡೂ ಇರ್ಲಿ.. ಯಾಕೆ ಬೇಡಾಂತೀರಿ.". ...
ಎಂದು ಅವನಿಕಾಳಲ್ಲಿ ಹೇಳುತ್ತಾ "ಅಮ್ಮಾ..ನಿಮ್ಮ ಮಗಳು ನಿಮಗೆ ಉಳಿತಾಯ ಮಾಡೋಕೆ ಹೇಳಿಕೊಡ್ತಾ ಇದಾಳೆ..."ಅಂದಾಗ ಸರೋಜಮ್ಮ ಸುಮ್ಮನೆ ನಕ್ಕು ಸೊಸೆಯ ಮುಖ ನೋಡಿದರು..

         ಅವನಿಕಾಗೆ ಸ್ವಲ್ಪವೂ ನಗೆಬರಲಿಲ್ಲ . .ಪಂಚೆಯೂ ಒಂದು ಹೆಚ್ಚೇ ಖರೀದಿ ಮಾಡಿದರು ‌.ಮನೆಗೆ ಬಂದು ಅಜಯ್ ಮಡದಿಯನ್ನು ಸಂತೋಷಗೊಳಿಸುವ ಸಲುವಾಗಿ "ಹೇಗೂ ಹಬ್ಬಕ್ಕೆ ಮೂರುದಿನ ರಜೆಯಿದೆ..ಅವನಿಕಾ ಲಾಂಗ್ ಡ್ರೈವ್ ಹೋಗಿ ಬರೋಣವಾ ಎಂದ.."
ಸದಾನಂದ ರಾಯರು"ಅಬ್ಬಾ...ಈಗ ನನ್ನ ಸೊಸೆಯ ಮುಖ ಅರಳಿತು"ಎಂದು ಛೇಡಿಸಿದರು..

"ಹೌದು...ಖುಷಿಯಾಗದೇ ಇರುತ್ತಾ...ಗಂಡ ಹೊರಗಡೆ ಸುತ್ತೋಕೆ ಕರ್ಕೊಂಡು ಹೋಗ್ತೀನಿ..ಅಂದಾಗ...ನೀವಂತೂ ನನ್ನನ್ನು ಔಟಿಂಗ್ ಕರ್ಕೊಂಡು ಹೋಗಿಲ್ಲ...ಮಗ ಸೊಸೆಯಾದ್ರೂ ಹೋಗಿ ಬರ್ಲೀ... ಯಾವತ್ತೂ ಆಫೀಸ್ ಆಫೀಸ್ ಅಂತ ಒದ್ದಾಡ್ತಿರೋ ಅವರಿಗೂ ರಿಲಾಕ್ಸ್ ಆಗುತ್ತೆ..." ಎಂದ ಸರೋಜಮ್ಮ..

        ಅತ್ತೆ ಮಾವ ಇಬ್ಬರೂ ಸಪೋರ್ಟ್ ಮಾಡಿದ್ದನ್ನು ಕಂಡು ಅವನಿಕಾಗೆ ಸಂತಸವಾಯಿತು.ಹೋಗೋದಕ್ಕೆ ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿದಳು..

      ಸರೋಜಮ್ಮ ತಾವೂ ಒಂದು ಬ್ಯಾಗ್ ನಲ್ಲಿ ಏನೋ ತುಂಬಿ ಅಜಯ್ ನ ಕೈಗಿತ್ತರು... ಇಬ್ಬರೂ ಹೊರಟರು.. ಲಾಂಗ್ ಡ್ರೈವ್ ಎಂದರೇ ಅವನಿಕಾಗೆ ಬಲು ಇಷ್ಟ..ಅದರಲ್ಲೂ ತನ್ನ ಪ್ರೀತಿಯ ಪತಿ ಜೊತೆ ಹೋಗೋದೆಂದರೆ ..ಸುಮ್ಮನೇನಾ...ತನ್ನ ಬೇಸರವನ್ನೆಲ್ಲ ಬದಿಗೆ ಸರಿಸಿ ಏನೋ ಗುನುಗಲು ಆರಂಭಿಸಿದಳು...
"ಅಮ್ಮಾವ್ರು... ಸ್ವಲ್ಪ ಜೋರಾಗಿ ಹೇಳಿ...ನಂಗೂ ಈ ಮಳೇಲಿ ರೊಮ್ಯಾಂಟಿಕ್ ಹಾಡು ಕೇಳೋದು ತುಂಬಾ ಇಷ್ಟ"ಕೀಟಲೆ ಮಾಡಿದ ಅಜಯ್..

"ನಿಮಗೆ ರೊಮ್ಯಾಂಟಿಕ್ ಮಾತ್ರ ಗೊತ್ತು...ನನ್ನ ನೋವು ನಿಮಗೆಲ್ಲಿ ಅರ್ಥವಾಗುತ್ತೆ..." ಎಂದು ಸಪ್ಪೆಮುಖ ಮಾಡಿಕೊಂಡಳು..ಅವಳ ತಲೆ ಬೇರೆಯದೇ ಯೋಚನೆಮಾಡುತ್ತಿತ್ತು.

        ಅವನಿಕಾ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಸಹೋದ್ಯೋಗಿಯಾಗಿದ್ದ ಅಜಯ್ ನನ್ನು ಪ್ರೀತಿಸಿ ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಳು.ಪ್ರೀತಿಸುವ ಗಂಡ, ಅತ್ತೆ ,ಮಾವ ಕೈತುಂಬಾ ಸಂಬಳ ಪಡೆಯುವ ಉದ್ಯೋಗ ಮನೆ ಎಲ್ಲಾ ಇದ್ದರೂ ಅವಳಿಗೆ ಹೆತ್ತವರ ಸಂಪರ್ಕವಿಲ್ಲದೆ ಮನಸ್ಸು ಚಡಪಡಿಸುತ್ತಿತ್ತು.ಆಫೀಸಿನಲ್ಲಿ ಗೆಳತಿಯರೆಲ್ಲ ದೀಪಾವಳಿಯ ಹಬ್ಬಕ್ಕೆ ತಮ್ಮೂರಿಗೆ ತೆರಳುವ ಸಂಭ್ರಮದಲ್ಲಿದ್ದರು.. ಅವರೆಲ್ಲ ತಂದೆತಾಯಿಯ ಸುದ್ದಿ ಹೇಳುವುದನ್ನು ಕೇಳಿದ ಅವನಿಕಾಳ ಮನಸ್ಸು ಮೂಕವಾಗಿ ರೋದಿಸುತ್ತಿತ್ತು.

       ಯೋಚಿಸುತ್ತಾ ಅವನಿಕಾ ನಿದ್ರೆಗೆ ಶರಣಾದಳು.ಒಮ್ಮೆಲೇ ಎಚ್ಚರವಾದಾಗ ಪತಿ ಎತ್ತಕಡೆ ಕರೆದುಕೊಂಡು ಬಂದಿದ್ದಾರೆ ನೋಡಿದ ಪರಿಸರದಂತಿದೆ... ಎಂದು ನಿದ್ದೆಗಣ್ಣು ಸರಿಯಾಗಿ ಬಿಡಿಸಿದಳು....

ಆಗ ಅಪ್ಪ...." ಮಗಳೇ ಅವನಿಕಾ. ...ಅಳಿಯಂದ್ರೇ ಚೆನ್ನಾಗಿದ್ದೀರಾ.." ಎನ್ನುವ ಧ್ವನಿ ಕೇಳಿಸಿತು...ಕನಸೋ ನನಸೋ ಎಂದು ನೋಡುತ್ತಿದ್ದಂತೇ ಅಮ್ಮನ ದನಿಯೂ ತೂರಿಬಂತು... ಅವಳು ತವರುಮನೆಯ ಅಂಗಳದಲ್ಲಿದ್ದಳು..

"ಅಜಯ್... ಏನಿದು .. ನೀವು ಹೇಳಲೇಯಿಲ್ಲ..."

"ನಿನಗೆ ಸರ್ಪ್ರೈಸ್ ಕೊಡೋಣ ಅಂತ ಹೇಳಿಲ್ಲ..."

"ಹೌದಮ್ಮಾ...ಅವನಿ...ಅಳಿಯಂದ್ರು ಫೋನ್ ಮಾಡಿ ನಿನ್ನ ಬಗ್ಗೆ ಹೇಳಿದ್ರೂ... ನಿನಗೆ ನಮ್ಮನ್ನು ನೋಡುವ ತವಕದಿಂದ ಮಂಕಾಗಿದ್ದೀಯಾ ಅಂತ ಎಷ್ಟಾದರೂ ಹೆತ್ತ ಕರುಳಲ್ಲವೇ... ನೀನು ಅಳಿಯಂದ್ರು ಹೊಂದಿಕೊಂಡು ಸಂಸಾರ ಮಾಡುತ್ತಿರುವಾಗ ಈ ಕೋಪ ಎಲ್ಲ ಯಾಕೆ...ಈ ದೀಪಾವಳಿಗೆ ಅವನಿಯನ್ನು ಕರ್ಕೊಂಡು ಬನ್ನಿ..ಅಳಿಯಂದ್ರೇ....ಅಂದ್ಬಿಟ್ಟೆ...ಮಗಳೇ..".ಎಂದರು...

ಅವನಿಕಾಗೆ ಸಂತಸವುಕ್ಕಿ ಬಂತು.."ನನ್ನನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಅಜಯ್...ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಅಜಯ್..."ಅನ್ನುತ್ತಾ ಅಜಯ್ ನನ್ನು ಆಲಂಗಿಸಿದಳು..

"ಇದೆಲ್ಲ ನನ್ನ ಅಮ್ಮನ ಯೋಜನೆ...ಸೊಸೆಯ ಮನಸ್ಸು ನನಗಿಂತ ಚೆನ್ನಾಗಿ ಅವಳು ಅರ್ಥಮಾಡಿಕೊಂಡು ವ್ಯವಸ್ಥೆ ಮಾಡಿದ್ದು..."ಎಂದಾಗ ಅತ್ತೆಯ ಬಗ್ಗೆ ಹೆಮ್ಮೆಯೆನಿಸಿತು ಅವನಿಕಾಗೆ...

          ಅಪ್ಪ ಅಮ್ಮ ಇಬ್ಬರೂ ಅಳಿಯ ಮಗಳನ್ನು ಬರಮಾಡಿಕೊಂಡರು.ಅಜಯ್ ಬ್ಯಾಗ್ ನಲ್ಲಿ ತಂದಿದ್ದ ಸೀರೆ ಪಂಚೆ ಅವನಿಕಾಳ ಕೈಗೆ ಕೊಟ್ಟು "ಇದು ಅತ್ತೆಮಾವನಿಗೆಂದು ಖರೀದಿಸಿದ್ದು...ಅವರಿಗೆ ಕೊಟ್ಟು ನಮಸ್ಕರಿಸೋಣ ..."ಎಂದ.

        ಇಬ್ಬರೂ ಬಟ್ಟೆಯನ್ನು ಹಿರಿಯರಿಗೆ ಕೊಟ್ಟು"ನಮ್ಮನ್ನು ಕ್ಷಮಿಸಿಬಿಡಿ "ಎಂದು ಹೇಳಿ ನಮಸ್ಕರಿಸಿದರು...
"ನಿಮಗೆ ನಾವೇ ಉಡುಗೊರೆ ಕೊಡಬೇಕು..ನಮಗೆ ಇದೆಲ್ಲ ಬೇಡವಿತ್ತು ಅಳಿಯಂದ್ರೆ.."ಎಂದು ಸಂಕೋಚ ಪಟ್ಟುಕೊಂಡರು ಅವನಿಯ ಅಪ್ಪ..

     ಅವನಿಕಾ ಅಮ್ಮನ ಅಪ್ಪುಗೆಯಲ್ಲಿ ಬಂಧಿಯಾದಳು.ಇಬ್ಬರ ಕಣ್ಣುಗಳಲ್ಲೂ ಆನಂದಭಾಷ್ಪ ಚಿಮ್ಮಿತು.

       ಅಜಯ್ ಹಾಗೂ ಮನೆಯವರು ಅವನಿಕಾಗೆ ಮೊದಲ ದೀಪಾವಳಿಗೆ ಬೆಲೆಕಟ್ಟಲಾಗದ ಉಡುಗೊರೆಯನ್ನು ಕೊಟ್ಟಿದ್ದರು....


✍️... ಅನಿತಾ ಜಿ.ಕೆ.ಭಟ್.
30-10-2019.

Wednesday, 9 October 2019

ಮಂಗಳೂರು ದಸರಾ ವೈಭವ

ನವರಾತ್ರಿ ಉತ್ಸವ ಎಂದರೆ ನಮ್ಮಲ್ಲಿ ಹಬ್ಬಗಳಲ್ಲೇ ಅತ್ಯಂತ ವೈಭವೋಪೇತವಾಗಿ ಒಂಭತ್ತು ದಿನಗಳ ಪರ್ಯಂತ ನಡೆಯುವ ಹಬ್ಬ.ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಸಂಭ್ರಮ,ಸಡಗರ.ಅಶ್ವಯುಜ ಮಾಸದ ಪ್ರಾರಂಭದ ಒಂಭತ್ತು  ರಾತ್ರಿಗಳನ್ನು ನವರಾತ್ರಿ ಹಬ್ಬವೆಂದು ಆಚರಿಸಲಾಗುವುದು.ಆಶ್ವಯುಜ, ಕಾರ್ತಿಕ ಮಾಸಗಳು ಶರತ್ಕಾಲದಲ್ಲಿ ಬರುವುದರಿಂದ ಶರನ್ನವರಾತ್ರಿ ಎಂದೂ ಕರೆಯುವ ರೂಢಿಯಿದೆ.


ನಮ್ಮ ಕರಾವಳಿಯಲ್ಲಿ ನವರಾತ್ರಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.ಮನೆಗಳಲ್ಲಿ ಹಬ್ಬದ ಆಚರಣೆ ಒಂದು ರೀತಿಯಿದ್ದರೆ ..ಸಾರ್ವಜನಿಕವಾಗಿ ಇನ್ನೂ ವಿಶೇಷವಾಗಿ ಆಚರಿಸಲ್ಪಡುತ್ತದೆ.

ಮಂಗಳೂರು ದಸರಾ:-

'ಮಂಗಳೂರು ದಸರಾ' ಎಂದರೆ ರಾಜ್ಯದಲ್ಲಿ ಎರಡನೇ ಅತಿದೊಡ್ಡ ದಸರಾ ಮಹೋತ್ಸವ.ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಮುಂಭಾಗದಲ್ಲಿ ಇರುವ ದರ್ಬಾರು ಮಂಟಪದಲ್ಲಿ ಮಹಾಗಣಪತಿ,ಶಾರದೆ ಹಾಗು ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮ ಚಾರಿಣಿ,ಚಂದ್ರಘಂಟಾ,ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯಿನಿ,ಕಾಲರಾತ್ರಿ,ಮಹಾಗೌರಿ ಹಾಗೂ ಸಿದ್ಧಿದಾತ್ರಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.ವೀಣೆನುಡಿಸುತ್ತಿರುವ ಶಾರದಾಮಾತೆಯ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸುತ್ತಾರೆ.ಇದು ಸುಮಾರು ಇಪ್ಪತ್ತೇಳು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಒಂಬತ್ತು ದಿನಗಳು ಕೂಡಾ ಅನ್ನಸಂತರ್ಪಣೆ ನಡೆಯುತ್ತದೆ.ದಸರಾದ ಅಂಗವಾಗಿ 'ಗಂಗಾವತರಣ'ಕೂಡ ವ್ಯವಸ್ಥೆ ಮಾಡಲಾಗುವುದು.ಇದರಲ್ಲಿ 13 ಅಡಿ ಎತ್ತರದ ಶಿವನ ನಾಲ್ಕು ವರ್ಣರಂಜಿತ ವಿಗ್ರಹಗಳಿರುತ್ತವೆ ..ಕಾರಂಜಿಯು ಬಣ್ಣಬಣ್ಣದ ದೀಪಾಲಂಕಾರದಿಂದ ಮನಸೆಳೆಯುತ್ತದೆ . ಮಕ್ಕಳು ಬಹಳ ಇಷ್ಟಪಡುತ್ತಾರೆ.ಸಾಂಸ್ಕೃತಿಕ, ಕಲಾಪ್ರದರ್ಶನಕ್ಕೆ ಭವ್ಯವೇದಿಕೆಯನ್ನು ಕಲ್ಪಿಸುತ್ತಾರೆ.ದೇಶವಿದೇಶಗಳ ಭಕ್ತರು ಆಗಮಿಸುತ್ತಾರೆ.

ದೇವಾಲಯದ ಮುಖ್ಯ ದ್ವಾರದಿಂದಲೇ ವರ್ಣರಂಜಿತ ಅಲಂಕಾರ,ವಿದ್ಯುದ್ದೀಪಗಳು ಮನಸೂರೆಗೊಳ್ಳುತ್ತವೆ.ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ.ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುದ್ದೀಪಗಳ ಅಲಂಕಾರ ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ.. ಇಡೀ ನಗರವೇ ಹಬ್ಬದ ವಾತಾವರಣವನ್ನು ಬಿಂಬಿಸುತ್ತದೆ.

ಒಂಬತ್ತು ದಿನಗಳ ಪೂಜೆಯ ನಂತರ ವಿಜಯದಶಮಿಯಂದು ಸಂಜೆ ನಾಲ್ಕು ಗಂಟೆಗೆ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಮುಂಭಾಗದಿಂದ ಮೆರವಣಿಗೆ ಆರಂಭವಾಗುತ್ತದೆ.ನವದುರ್ಗೆ, ಮಹಾಗಣಪತಿ ಹಾಗೂ ಶಾರದಾ ದೇವಿಯ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ . ವಿಗ್ರಹಗಳು ಹೂವು,ಛತ್ರಿಗಳಿಂದ ಅಲಂಕಾರಗೊಂಡು ಕಣ್ಮನ ಸೆಳೆಯುತ್ತವೆ.ಮೆರವಣಿಗೆಯಲ್ಲಿ ಡೋಲು,ಚೆಂಡೆ,ಯಕ್ರಗಾನದ ಪಾತ್ರಗಳು,ಜಾನಪದ ನೃತ್ಯಗಳು,ಹುಲಿವೇಷದ ತಂಡಗಳು,ನಾನಾ ಟ್ಯಾಬ್ಲೋಗಳು ಭಾಗವಹಿಸಿ ಧಾರ್ಮಿಕ, ಸಾಂಸ್ಕೃತಿಕ ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ.

ಮೆರವಣಿಗೆ ಕುದ್ರೋಳಿ,ಮಣ್ಣಗುಡ್ಡ, ಲೇಡಿ ಹಿಲ್, ಲಾಲ್ಬಾಗ್,ಕೆ.ಎಸ್ . ರಾವ್.ರಸ್ತೆ, ಹಂಪನಕಟ್ಟೆ,ಕಾರ್ ಸ್ಟ್ರೀಟ್ ಮೂಲಕ ಮರುದಿನ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಪುಷ್ಕರಿಣಿಯಲ್ಲಿ ವಿಗ್ರಹಗಳ ವಿಸರ್ಜನೆಯಲ್ಲಿ ಕೊನೆಗೊಳ್ಳುತ್ತದೆ.ಇದರಲ್ಲಿ ವಿಶೇಷತೆ ಎಂದರೆ ಮೆರವಣಿಗೆಯಲ್ಲಿ ಸರ್ವಧರ್ಮೀಯರೂ ಪಾಲ್ಗೊಳ್ಳುತ್ತಾರೆ.

ಮಂಗಳಾದೇವಿ ದೇವಸ್ಥಾನ:-

ಮಂಗಳೂರಿನ ಪ್ರಮುಖ ದೇವಸ್ಥಾನ ಮಂಗಳಾದೇವಿ ದೇವಸ್ಥಾನ.ಇಲ್ಲಿ ಒಂಭತ್ತು ದಿನ ನವವಿಧದಲ್ಲಿ ದೇವಿಯನ್ನು ಅಲಂಕರಿಸುತ್ತಾರೆ .ಮಹಾನವಮಿಯಂದು ಆಯುಧಪೂಜೆ ಮಾಡಲಾಗುತ್ತದೆ.ದೇವಿ ಹಾಗೂ ರಾಕ್ಷಸರ ಮಧ್ಯೆ ಯುದ್ಧವಾಗಿ ,ದೇವಿ ಜಯಿಸಿದ ಸಂಕೇತವಾಗಿ ಈ ಪೂಜೆಯನ್ನು ಮಾಡುತ್ತಾರೆ.ಹತ್ತನೇ ದಿನ ಮಹಾರಥೋತ್ಸವ ನಡೆಯುತ್ತದೆ.ಸಹಸ್ರಾರು ಭಕ್ತರು ಆಗಮಿಸಿ ದೇವರ ಸರ್ವಾಂಲಂಕೃತವಾದ ಬಲಿಮೂರ್ತಿಯನ್ನು ರಥದ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುವುದು.. ಇದು ಪರಂಪರೆಯಿಂದಲೇ ಬಂದಿರುವ ಮಂಗಳೂರಿನ ನವರಾತ್ರಿಯ ಆಚರಣೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ:-

ನಗರದ ಹೊರವಲಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೂಡಾ ವಿಜೃಂಭಣೆಯಿಂದ ನವರಾತ್ರಿ ಮಹೋತ್ಸವ ಆಚರಿಸಲಾಗುತ್ತದೆ.ಲಕ್ಷೋಪಲಕ್ಷ ಜನ ದೇವಿಯ ದರುಶನ ಪಡೆದು ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥರಾಗುತ್ತಾರೆ.ನವರಾತ್ರಿಯ  ಲಲಿತಾಪಂಚಮಿ ದಿನ ದೇವಿಯ ಶೇಷವಸ್ತ್ರ ಪ್ರಸಾದ  ಮಹಿಳಾ ಭಕ್ತರಿಗೆ ನೀಡಲಾಗುವುದು.ಸುಮಾರು ಹದಿನೆಂಟರಿಂದ ಇಪ್ಪತ್ತು ಸಾವಿರ ಹೆಣ್ಮಕ್ಕಳು ಶೇಷವಸ್ತ್ರ ಪ್ರಸಾದ ಸ್ವೀಕರಿಸುತ್ತಾರೆ.

ನಮ್ಮ ಮನೆಯ ಆಚರಣೆ:-

ನವರಾತ್ರಿಯ ದಿನಗಳಲ್ಲಿ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ ಸೇವೆ, ದುರ್ಗಾ ಸೂಕ್ತ ಪಠಣ ನಡೆಸುತ್ತೇವೆ.ಸಪ್ತಮಿಯಂದು ಪವಿತ್ರ ಗ್ರಂಥಗಳನ್ನು ದೇವರ ಮುಂದೆ ಇರಿಸಿ ಪೂಜೆ ಸಲ್ಲಿಸುತ್ತೇವೆ.ನಾವು ಚಿಕ್ಕವರಿದ್ದಾಗ ನಮ್ಮ ಶಾಲಾ ಪಠ್ಯ ಪುಸ್ತಕಗಳನ್ನು ಕೂಡ ಇರಿಸಿ ಉತ್ತಮ ಅಂಕಗಳು ದೊರಕಲೆಂದು ಪ್ರಾರ್ಥಿಸುತ್ತಿದ್ದೆವು . ಈಗ ನಮ್ಮ ಮಕ್ಕಳಿಗೆ ಅದೇ ರೀತಿಯ ಉತ್ಸಾಹ.ಮೂರು ದಿನಗಳ ಕಾಲ ಪುಸ್ತಕಪೂಜೆ ಮಾಡಿ ವಿಜಯ ದಶಮಿಯಂದು ಪೂಜೆ ನೆರವೇರಿಸಿ ತೆಗೆಯುವುದು.. ಪ್ರತಿಯೊಬ್ಬರೂ ಪುಸ್ತಕದ ಒಂದು ಪುಟವನ್ನಾದರೂ ಆ ದಿನ ಓದಲೇಬೇಕೆಂಬ ನಿಯಮ.. ದೇವಿಗೆ ನಾನಾ ರೀತಿಯ ಭಕ್ಷ್ಯಭೋಜ್ಯಗಳ ಅರ್ಪಣೆ.ನವಮಿಯಂದು ಆಯುಧಪೂಜೆ..ನಮ್ಮ ಮನೆಯಲ್ಲಿರುವ ಕಬ್ಬಿಣದ ಸಲಕರಣೆಗಳನ್ನು, ವಾಹನಗಳನ್ನು ಚೆನ್ನಾಗಿ ತೊಳೆದು ಸರಳವಾಗಿ ಅಲಂಕರಿಸಿ, ಭಕ್ತಿಯಿಂದ ಪೂಜಿಸುತ್ತೇವೆ..

ಮಕ್ಕಳಿಗೆ ದಸರಾ ರಜೆಯಿರುವುದು ಈ ನವರಾತ್ರಿ ಹಬ್ಬಕ್ಕೆ ಇನ್ನಷ್ಟು ಮೆರುಗು ಕೊಡುತ್ತದೆ.  ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಕುಟುಂಬ ಸಮೇತರಾಗಿ ದೂರದೂರಿನಲ್ಲಿರುವ ನೆಂಟರಿಷ್ಟರು ಬರುವುದು, ಎಲ್ಲರೊಂದಿಗೆ ಬೆರೆಯುವ ಸುವರ್ಣಾವಕಾಶವನ್ನು ನವರಾತ್ರಿ ಹಬ್ಬ ಒದಗಿಸಿಕೊಡುತ್ತದೆ..

ಶಂಕರಾಚಾರ್ಯ ವಿರಚಿತ ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ ದ ಕೊನೆಯ ಎರಡು ಶ್ಲೋಕಗಳು..

ಜಗದಂಬ ವಿಚಿತ್ರಮತ್ರಕಿಂ
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ|
ಅಪರಾಧ ಪರಂಪರಾವೃತಂ ನಾ ಹಿ
ಮಾತಾ ಸಮುಪೇಕ್ಷತೇ ಸುತಂ||

ಮತ್ಸಮಃ ಪಾತಕೀ ನಾಸ್ತಿ
ಪಾಪಘ್ನೀ ತ್ವತ್ಸಮಾ ನ ಹಿ |
ಏವಂ ಜ್ಞಾತ್ವಾ ಮಹಾದೇವಿ
ಯಥಾ ಯೋಗ್ಯಂ ತಥಾ ಕುರು||

ಕರುಣಾಮಯಿ ಮಾತೆಯೇ ..ನಿನ್ನ ಕಂದನ ತಪ್ಪನ್ನು ಕ್ಷಮಿಸುವ ತಾಯೇ..ನನ್ನಂತಹ ಪಾತಕಿಗಳಿಲ್ಲ..ನಿನ್ನಂತಹ ಕ್ಷಮಯಾಧರಿತ್ರಿ ಇನ್ನೊಬ್ಬರಿಲ್ಲ. ತಾಯೇ ನಿನಗೆ ಹೇಗೆ ಸರಿ ಎನಿಸುವುದೋ ಆ ದಾರಿಯಲ್ಲಿ ನನ್ನನ್ನು ಮುನ್ನಡೆಸು..

ಎಂದು ಆ ದುರ್ಗಾ ಮಾತೆಯಲ್ಲಿ ಬೇಡುತ್ತಾ ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ..🙏

✍️... ಅನಿತಾ ಜಿ.ಕೆ.ಭಟ್.
09-10-2019.