ಬೆಳಿಗ್ಗೆ ಅಲಾರಾಂ ಹೊಡೆದುಕೊಂಡಾಗ ಯಾಕಾದರೂ ಇದು ಒದರಿಕೊಳ್ಳುತ್ತದೋ.. ಹಾಳಾದ್ದು ಸಿಹಿನಿದ್ದೆಯನ್ನೂ ಹಾಳುಮಾಡಿಬಿಡುತ್ತೆ..ಅಂತ ಗೊಣಗಿಕೊಂಡು ಇನ್ನೂ ನಿದ್ದೆಯಲ್ಲಿದ್ದ ಮುದ್ದಿನ ಪತಿ ಅಜಯನ ಮುಖವನ್ನೊಮ್ಮೆ ನೋಡಿ ಹೊದಿಕೆ ಹೊದಿಸಿ ಎದ್ದಳು ಅವನಿಕಾ... ಫ್ರೆಶ್ ಆಗಿ ಅಡುಗೆ ತಯಾರಿಯಲ್ಲಿ ತೊಡಗಿದಳು.ಅತ್ತೆ ಸರೋಜಮ್ಮ ಮೊದಲೇ ಹಾಜರಾಗಿದ್ದರು.ಅವನಿಕಾ ಇಂದು ಯಾವತ್ತಿನಂತಿಲ್ಲ ಎಂದು ಅತ್ತೆಗೆ ಅರಿವಾಯಿತು.
"ಅವನಿಕಾ... ಏನಾದರೂ ಆರೋಗ್ಯ ಸಮಸ್ಯೆ ಇದೆಯಾ.".ಕೇಳಿದರು...
"ಇಲ್ಲ.. "ಎಂದಷ್ಟೇ ಚುಟುಕಾಗಿ ಉತ್ತರಿಸಿದ ಅವನಿಕಾ...
ಅಜಯ್ ಎದ್ದು ಫ್ರೆಶ್ ಆಗಿ ಬಂದ.ಅವನಿಗೆ ಬಿಸಿ ಬಿಸಿ ಕಾಫಿ ಕೊಟ್ಟಳು..ಅವನಿಕಾಳ ಮುಖವೇ ಹೇಳುತ್ತಿತ್ತು ಅವಳ ಮೂಡ್ ಸರಿಯಿಲ್ಲ ಎಂದು..
"ಏನು ಮಹಾರಾಣಿಯವರು.. ಬೆಳಿಗ್ಗೆ ಬೆಳಿಗ್ಗೇನೇ ಮೂಡ್ ಔಟ್ ಆಗಿದ್ದು..."
ಉತ್ತರಿಸದೆ ಮತ್ತಷ್ಟು ಮುಖ ಸಿಂಡರಿಸಿಕೊಂಡು ಹೊರಟಳು ಅವನಿಕಾ...
ಆಫೀಸ್ ಗೆ ಹೊರಟು ನಿಂತ ಅವನಿಕಾ ಅಜಯ್ ನಲ್ಲಿ ಸರೋಜಮ್ಮ ..."ಇವತ್ತು ಸ್ವಲ್ಪ ಬೇಗ ಬನ್ನಿ..ನಾಳೆ ಹಬ್ಬಕ್ಕೆ ಖರೀದಿ ಮಾಡೋದು ಇನ್ನೂ ಆಗಿಲ್ಲ..ಬಸ್ಸಲ್ಲಿ ಹೋಗೋಕೆ ಆಗಲ್ಲ.. ಮಂಡಿನೋವು..."
"ಸರಿ .. ಬಾಯ್ "ಎಂದು ಇಬ್ಬರೂ ಜೊತೆಯಾಗಿ ಹೊರಟರು..ಕಾರಲ್ಲಿ ಯಾವತ್ತೂ ಹರಟುತ್ತಿದ್ದ ಅವನಿಕಾ ಇವತ್ತು ಮಾತೇ ಆಡದೆ ಸುಮ್ಮನಿದ್ದಳು..ಕಾರಣ ಕಂಡುಹಿಡಿಯಲು ಅಜಯ್ ಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ.ಇಬ್ಬರೂ ಆಫೀಸಿಗೆ ಹೋಗಿ ಸಂಜೆ ಬೇಗ ಹೊರಡಲು ಬಾಸ್ ನ ಒಪ್ಪಿಗೆ ಪಡೆದರು.
ಇಬ್ಬರೂ ಸಂಜೆ ಬೇಗ ಮನೆಗೆ ಬಂದಾಗ ಅಪ್ಪ ಸದಾನಂದ ರಾಯರು ಅಮ್ಮ ಸರೋಜಮ್ಮ ಹೊರಟು ನಿಂತಿದ್ದರು.ಶಾಪಿಂಗಿಗೆ ತೆರಳಿದರು.ಮೊದಲು ವಸ್ತ್ರದ ಮಳಿಗೆಗೆ ತೆರಳಿದರು.ಇಬ್ಬರಿಗೂ ಚಂದದ ಝರಿಯಂಚಿನ ಸೀರೆ ಆಯ್ಕೆ ಮಾಡಿದರು.ಇನ್ನೊಂದು ಸೀರೆಯನ್ನು ಇರಲಿ ಎಂದರು ಸರೋಜಮ್ಮ.."ಯಾಕತ್ತೆ..ಈ ಹಬ್ಬಕ್ಕೆ ಒಂದು ಸಾಕಲ್ವಾ..ಮುಂದಿನ ಹಬ್ಬಕ್ಕೆ ಮತ್ತೊಮ್ಮೆ ಬರೋಣ "ಎಂದಳು..
"ಅದೂ ಚೆನ್ನಾಗಿದೆ.. ಇರಲಿ.." ಎಂದಾಗ ಸೇಲ್ಸ್ ಗರ್ಲ್ "ಅಮ್ಮನಿಗೆ ಇಷ್ಟವಾದ್ದು ಎರಡೂ ಇರ್ಲಿ.. ಯಾಕೆ ಬೇಡಾಂತೀರಿ.". ...
ಎಂದು ಅವನಿಕಾಳಲ್ಲಿ ಹೇಳುತ್ತಾ "ಅಮ್ಮಾ..ನಿಮ್ಮ ಮಗಳು ನಿಮಗೆ ಉಳಿತಾಯ ಮಾಡೋಕೆ ಹೇಳಿಕೊಡ್ತಾ ಇದಾಳೆ..."ಅಂದಾಗ ಸರೋಜಮ್ಮ ಸುಮ್ಮನೆ ನಕ್ಕು ಸೊಸೆಯ ಮುಖ ನೋಡಿದರು..
ಅವನಿಕಾಗೆ ಸ್ವಲ್ಪವೂ ನಗೆಬರಲಿಲ್ಲ . .ಪಂಚೆಯೂ ಒಂದು ಹೆಚ್ಚೇ ಖರೀದಿ ಮಾಡಿದರು .ಮನೆಗೆ ಬಂದು ಅಜಯ್ ಮಡದಿಯನ್ನು ಸಂತೋಷಗೊಳಿಸುವ ಸಲುವಾಗಿ "ಹೇಗೂ ಹಬ್ಬಕ್ಕೆ ಮೂರುದಿನ ರಜೆಯಿದೆ..ಅವನಿಕಾ ಲಾಂಗ್ ಡ್ರೈವ್ ಹೋಗಿ ಬರೋಣವಾ ಎಂದ.."
ಸದಾನಂದ ರಾಯರು"ಅಬ್ಬಾ...ಈಗ ನನ್ನ ಸೊಸೆಯ ಮುಖ ಅರಳಿತು"ಎಂದು ಛೇಡಿಸಿದರು..
"ಹೌದು...ಖುಷಿಯಾಗದೇ ಇರುತ್ತಾ...ಗಂಡ ಹೊರಗಡೆ ಸುತ್ತೋಕೆ ಕರ್ಕೊಂಡು ಹೋಗ್ತೀನಿ..ಅಂದಾಗ...ನೀವಂತೂ ನನ್ನನ್ನು ಔಟಿಂಗ್ ಕರ್ಕೊಂಡು ಹೋಗಿಲ್ಲ...ಮಗ ಸೊಸೆಯಾದ್ರೂ ಹೋಗಿ ಬರ್ಲೀ... ಯಾವತ್ತೂ ಆಫೀಸ್ ಆಫೀಸ್ ಅಂತ ಒದ್ದಾಡ್ತಿರೋ ಅವರಿಗೂ ರಿಲಾಕ್ಸ್ ಆಗುತ್ತೆ..." ಎಂದ ಸರೋಜಮ್ಮ..
ಅತ್ತೆ ಮಾವ ಇಬ್ಬರೂ ಸಪೋರ್ಟ್ ಮಾಡಿದ್ದನ್ನು ಕಂಡು ಅವನಿಕಾಗೆ ಸಂತಸವಾಯಿತು.ಹೋಗೋದಕ್ಕೆ ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿದಳು..
ಸರೋಜಮ್ಮ ತಾವೂ ಒಂದು ಬ್ಯಾಗ್ ನಲ್ಲಿ ಏನೋ ತುಂಬಿ ಅಜಯ್ ನ ಕೈಗಿತ್ತರು... ಇಬ್ಬರೂ ಹೊರಟರು.. ಲಾಂಗ್ ಡ್ರೈವ್ ಎಂದರೇ ಅವನಿಕಾಗೆ ಬಲು ಇಷ್ಟ..ಅದರಲ್ಲೂ ತನ್ನ ಪ್ರೀತಿಯ ಪತಿ ಜೊತೆ ಹೋಗೋದೆಂದರೆ ..ಸುಮ್ಮನೇನಾ...ತನ್ನ ಬೇಸರವನ್ನೆಲ್ಲ ಬದಿಗೆ ಸರಿಸಿ ಏನೋ ಗುನುಗಲು ಆರಂಭಿಸಿದಳು...
"ಅಮ್ಮಾವ್ರು... ಸ್ವಲ್ಪ ಜೋರಾಗಿ ಹೇಳಿ...ನಂಗೂ ಈ ಮಳೇಲಿ ರೊಮ್ಯಾಂಟಿಕ್ ಹಾಡು ಕೇಳೋದು ತುಂಬಾ ಇಷ್ಟ"ಕೀಟಲೆ ಮಾಡಿದ ಅಜಯ್..
"ನಿಮಗೆ ರೊಮ್ಯಾಂಟಿಕ್ ಮಾತ್ರ ಗೊತ್ತು...ನನ್ನ ನೋವು ನಿಮಗೆಲ್ಲಿ ಅರ್ಥವಾಗುತ್ತೆ..." ಎಂದು ಸಪ್ಪೆಮುಖ ಮಾಡಿಕೊಂಡಳು..ಅವಳ ತಲೆ ಬೇರೆಯದೇ ಯೋಚನೆಮಾಡುತ್ತಿತ್ತು.
ಅವನಿಕಾ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಸಹೋದ್ಯೋಗಿಯಾಗಿದ್ದ ಅಜಯ್ ನನ್ನು ಪ್ರೀತಿಸಿ ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಳು.ಪ್ರೀತಿಸುವ ಗಂಡ, ಅತ್ತೆ ,ಮಾವ ಕೈತುಂಬಾ ಸಂಬಳ ಪಡೆಯುವ ಉದ್ಯೋಗ ಮನೆ ಎಲ್ಲಾ ಇದ್ದರೂ ಅವಳಿಗೆ ಹೆತ್ತವರ ಸಂಪರ್ಕವಿಲ್ಲದೆ ಮನಸ್ಸು ಚಡಪಡಿಸುತ್ತಿತ್ತು.ಆಫೀಸಿನಲ್ಲಿ ಗೆಳತಿಯರೆಲ್ಲ ದೀಪಾವಳಿಯ ಹಬ್ಬಕ್ಕೆ ತಮ್ಮೂರಿಗೆ ತೆರಳುವ ಸಂಭ್ರಮದಲ್ಲಿದ್ದರು.. ಅವರೆಲ್ಲ ತಂದೆತಾಯಿಯ ಸುದ್ದಿ ಹೇಳುವುದನ್ನು ಕೇಳಿದ ಅವನಿಕಾಳ ಮನಸ್ಸು ಮೂಕವಾಗಿ ರೋದಿಸುತ್ತಿತ್ತು.
ಯೋಚಿಸುತ್ತಾ ಅವನಿಕಾ ನಿದ್ರೆಗೆ ಶರಣಾದಳು.ಒಮ್ಮೆಲೇ ಎಚ್ಚರವಾದಾಗ ಪತಿ ಎತ್ತಕಡೆ ಕರೆದುಕೊಂಡು ಬಂದಿದ್ದಾರೆ ನೋಡಿದ ಪರಿಸರದಂತಿದೆ... ಎಂದು ನಿದ್ದೆಗಣ್ಣು ಸರಿಯಾಗಿ ಬಿಡಿಸಿದಳು....
ಆಗ ಅಪ್ಪ...." ಮಗಳೇ ಅವನಿಕಾ. ...ಅಳಿಯಂದ್ರೇ ಚೆನ್ನಾಗಿದ್ದೀರಾ.." ಎನ್ನುವ ಧ್ವನಿ ಕೇಳಿಸಿತು...ಕನಸೋ ನನಸೋ ಎಂದು ನೋಡುತ್ತಿದ್ದಂತೇ ಅಮ್ಮನ ದನಿಯೂ ತೂರಿಬಂತು... ಅವಳು ತವರುಮನೆಯ ಅಂಗಳದಲ್ಲಿದ್ದಳು..
"ಅಜಯ್... ಏನಿದು .. ನೀವು ಹೇಳಲೇಯಿಲ್ಲ..."
"ನಿನಗೆ ಸರ್ಪ್ರೈಸ್ ಕೊಡೋಣ ಅಂತ ಹೇಳಿಲ್ಲ..."
"ಹೌದಮ್ಮಾ...ಅವನಿ...ಅಳಿಯಂದ್ರು ಫೋನ್ ಮಾಡಿ ನಿನ್ನ ಬಗ್ಗೆ ಹೇಳಿದ್ರೂ... ನಿನಗೆ ನಮ್ಮನ್ನು ನೋಡುವ ತವಕದಿಂದ ಮಂಕಾಗಿದ್ದೀಯಾ ಅಂತ ಎಷ್ಟಾದರೂ ಹೆತ್ತ ಕರುಳಲ್ಲವೇ... ನೀನು ಅಳಿಯಂದ್ರು ಹೊಂದಿಕೊಂಡು ಸಂಸಾರ ಮಾಡುತ್ತಿರುವಾಗ ಈ ಕೋಪ ಎಲ್ಲ ಯಾಕೆ...ಈ ದೀಪಾವಳಿಗೆ ಅವನಿಯನ್ನು ಕರ್ಕೊಂಡು ಬನ್ನಿ..ಅಳಿಯಂದ್ರೇ....ಅಂದ್ಬಿಟ್ಟೆ...ಮಗಳೇ..".ಎಂದರು...
ಅವನಿಕಾಗೆ ಸಂತಸವುಕ್ಕಿ ಬಂತು.."ನನ್ನನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಅಜಯ್...ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಅಜಯ್..."ಅನ್ನುತ್ತಾ ಅಜಯ್ ನನ್ನು ಆಲಂಗಿಸಿದಳು..
"ಇದೆಲ್ಲ ನನ್ನ ಅಮ್ಮನ ಯೋಜನೆ...ಸೊಸೆಯ ಮನಸ್ಸು ನನಗಿಂತ ಚೆನ್ನಾಗಿ ಅವಳು ಅರ್ಥಮಾಡಿಕೊಂಡು ವ್ಯವಸ್ಥೆ ಮಾಡಿದ್ದು..."ಎಂದಾಗ ಅತ್ತೆಯ ಬಗ್ಗೆ ಹೆಮ್ಮೆಯೆನಿಸಿತು ಅವನಿಕಾಗೆ...
ಅಪ್ಪ ಅಮ್ಮ ಇಬ್ಬರೂ ಅಳಿಯ ಮಗಳನ್ನು ಬರಮಾಡಿಕೊಂಡರು.ಅಜಯ್ ಬ್ಯಾಗ್ ನಲ್ಲಿ ತಂದಿದ್ದ ಸೀರೆ ಪಂಚೆ ಅವನಿಕಾಳ ಕೈಗೆ ಕೊಟ್ಟು "ಇದು ಅತ್ತೆಮಾವನಿಗೆಂದು ಖರೀದಿಸಿದ್ದು...ಅವರಿಗೆ ಕೊಟ್ಟು ನಮಸ್ಕರಿಸೋಣ ..."ಎಂದ.
ಇಬ್ಬರೂ ಬಟ್ಟೆಯನ್ನು ಹಿರಿಯರಿಗೆ ಕೊಟ್ಟು"ನಮ್ಮನ್ನು ಕ್ಷಮಿಸಿಬಿಡಿ "ಎಂದು ಹೇಳಿ ನಮಸ್ಕರಿಸಿದರು...
"ನಿಮಗೆ ನಾವೇ ಉಡುಗೊರೆ ಕೊಡಬೇಕು..ನಮಗೆ ಇದೆಲ್ಲ ಬೇಡವಿತ್ತು ಅಳಿಯಂದ್ರೆ.."ಎಂದು ಸಂಕೋಚ ಪಟ್ಟುಕೊಂಡರು ಅವನಿಯ ಅಪ್ಪ..
ಅವನಿಕಾ ಅಮ್ಮನ ಅಪ್ಪುಗೆಯಲ್ಲಿ ಬಂಧಿಯಾದಳು.ಇಬ್ಬರ ಕಣ್ಣುಗಳಲ್ಲೂ ಆನಂದಭಾಷ್ಪ ಚಿಮ್ಮಿತು.
ಅಜಯ್ ಹಾಗೂ ಮನೆಯವರು ಅವನಿಕಾಗೆ ಮೊದಲ ದೀಪಾವಳಿಗೆ ಬೆಲೆಕಟ್ಟಲಾಗದ ಉಡುಗೊರೆಯನ್ನು ಕೊಟ್ಟಿದ್ದರು....
✍️... ಅನಿತಾ ಜಿ.ಕೆ.ಭಟ್.
30-10-2019.
ಚೆನ್ನಾಗಿದೆ
ReplyDeleteಥ್ಯಾಂಕ್ಯೂ 💐🙏
ReplyDelete