Thursday, 24 December 2020

ಪ್ರೇಮ ಸಿಂಚನ

 




ಪ್ರೇಮ ಸಿಂಚನ

ಮಂದ ಪವನ ಬೀಸಿಬಂದು
ನಾಲ್ಕು ಹನಿಯ ಉದುರಿಸಿ
ನೀ ಬರುವ ಹಾದಿಯಲ್ಲಿ
ನಗುವ ಹಸಿರು ಗರಿಕೆ ಚಿಗುರಿಸಿ||೧||

ಬಾನ ತುಂಬಾ ಸದ್ದು ಮಾಡಿ
ಮೋಡ ಓಡಿ ಹೋಗಿದೆ
ಹಿಡಿಯದಾದೆ ನಿನ್ನ ಕೂಡ
ಭುವಿಯಂತೆ ದುಗುಡ ನನಗಿದೆ||೨||

ಮಧುರ ಮಾತು ಒಲವ ಗೀತೆ
ಕರ್ಣದೊಳಗೆ ರಿಂಗಣ
ಅಧರಕಧರ ಬೆಸೆಯದಿರಲು
ಹುಸಿ ಮುನಿಸಿನ ಕಾರಣ||೩||

ಎಲ್ಲೆ ಮೀರಿ ನಡೆಯೆನೆಂದ
ನಲ್ಲ ನುಡಿಯ ಮರೆತೆಯಾ
ಕಲ್ಲು ಹೃದಯವ ಹೂವಾಗಿಸಿ
ಬಲ್ಲ ಸವಿಯ ಉಣಿಸೆಯಾ||೪||

ನಾನು ನೀನು ಬೆರೆಯಲಿಂದು
ಪರಿಶುದ್ಧ ಪ್ರೇಮ ಒರತೆಯು
ನೀನು ನನ್ನ ಮರೆತರಂತೂ
ನಯನ ದುಃಖ ಜಲಭರಿತವು||೫||

ಗರಿಕೆ ನಗುವ ಮರೆವ ಮುನ್ನ
ವಿರಹ ಅಳಿಸಿ ಬಂಧನ
ಅರಿಕೆ ನನ್ನದು, ಕೈ ಹಿಡಿದು ನನ್ನ
ಭರಿಸು ಪ್ರೇಮ ಸಿಂಚನ||೬||

✍️... ಅನಿತಾ ಜಿ.ಕೆ.ಭಟ್.
25-12-2020.

ಸಿಗ್ನೇಚರ್ ಲೈನ್- ಸೌಹಾರ್ದ ಬಳಗ- ನೀನು ಬರುವ ಹಾದಿಯಲ್ಲಿ ಗರಿಕೆ ಚಿಗುರಿ ನಗುತಿದೆ-

ಚಿತ್ರ ಕೃಪೆ:- ಅಂತರ್ಜಾಲ.

ಜೆಂಬ್ರದ ಗೌಜಿ #ಹವ್ಯಕ ಭಾಷಾ ಕವನ

 


ಜೆಂಬ್ರದ ಗೌಜಿ

ಒಪ್ಪನ ಜಾಲಿಲಿ ಚಪ್ಪರ ಎದ್ದಿದು
ಇಪ್ಪದು ಮಗಳ ಮದುವೆಯಡ
ಕೊಪ್ಪರಿಗೆ ಅಶನವ ಬೇಶುಲಿದ್ದಡ
ತಪ್ಪುಸುಲೆಡಿಯಡ ಹೇಳಿದ್ದ°..||೧||

ಮೇಲಾರಕ್ಕೊರವಲೆ ಜನ ನೂರಕ್ಕು
ಬಲರಾಮಣ್ಣನ ಅಡಿಗೆಯಡ
ಕೆಲಸಲ್ಲಿಪ್ಪ ಭರ್ಜರಿ ಕುಳವಡ
ಕೆಲವರುಷಂದಲೆ ಪೇಟೆಲಿದ್ದದಡ...||೨||

ಸುದರಿಕೆ ಮಾಡುವ ನೆಂಟ್ರೇಯಿಲ್ಲೆ
ಬದಲಿಂಗೆ ಶಂಭಣ್ಣನ ಟೀಮಿದ್ದು
ವಿಧವಿಧ ಪಾಕವ ಪ್ರೀತಿಲಿ ಬಳುಸಿ
ಒದಗುವ ಜನ ಅವ ಮೋಸಯಿಲ್ಲೆ....||೩||

ಅಬ್ಬರಲಿತ್ತದ ವಾಲಗಸೆಟ್ಟು
ದಿಬ್ಬಣಬಪ್ಪಗ ಮಂಗಳವಾದ್ಯ
ಒಬ್ಬನ ಮಾತುದೆ ಕೇಳಲೆ ಕೇಳ
ಬೊಬ್ಬೆಹೊಡದು ಹರ್ದೋತುಗೆಂಟ್ಲು...||೪||

ಕೂಸೂಮಾಣಿಯು ಒಳ್ಳೆಯ ಜೋಡಿ
ಲೇಸಾದ ಕೂಟವ ಒಪ್ಪನೆ ನೋಡಿ
ಒಸಗೆಗೂ ಮೊದಲೇ ಬಫೆಗೆ ನಿಂದವು
ಕಸವುಡುಗುವ ಮೊದಲೇ ಹಂತಿಗೆಸಾಲು...||೫||

ತಡವಲೆಡಿಯದ್ದ ಸೆಕೆಯಿದ್ದಪ್ಪಾ
ಉಂಡಪ್ಪಗ ಮೈ ಚೆಂಡ್ಯಾವುತ್ತು
ಕಂಡಾಬಟ್ಟೆ ಬಗೆಯ ಹೊಸ ಪಾಕಂಗ
ಬಿಡ್ಲೆ ಮನಸಾಗದ್ದ ರುಚಿಯಡಿಗೆ..||೬||

ಇಂದಿರುಳಿಂಗೆ ತ್ರಿಕಾಲ ಪೂಜೆ
ನಾಂದೀಯಿದ್ದಡ ನಾಳೆ ಶಂಭುವಲ್ಲಿ
ಚೆಂದಲ್ಲಿ ಹೆರಟು ಹೋಪದೆ ಕೆಲಸ
ಬಂಧುಗಳ ಗಳಸಿರೆ ಸಂಬಂಧ ಒಳಿಗು..||೭||

ಹಳೆಹೊಸ ಕ್ರಮದ ಹೂರಣಬೇಕು
ಕಳವಲೆ ಸುಖಸಂತೋಷದ ಬದುಕು
ಬಳುವಳಿಯಾದ ಸಂಸ್ಕಾರವ ಒಳಿಶಿ
ಕಳಕಳಿಲಿ  ಜೆಂಬ್ರವ ಗೌಜಿಲಿ ನಡೆಶಿ...||೮||

✍️... ಅನಿತಾ ಜಿ.ಕೆ.ಭಟ್.,ಮಂಗಳೂರು.

27-04-2020.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ ವಿಷು ವಿಶೇಷ ಕವನ ಸ್ಪರ್ಧೆಗಾಗಿ ಬರೆದ ಕವನ.
ದತ್ತ ವಿಷಯ:- ಜೆಂಬ್ರದ ಗೌಜಿ.

ಚಿತ್ರ ಕೃಪೆ:- ಅಂತರ್ಜಾಲ

  

Wednesday, 2 December 2020

ಈ ಅಗಲಿಕೆ ಅನಿರೀಕ್ಷಿತ

 


ಅಗಲಿದ ಮಾವನವರಿಗೆ ಭಾವಪೂರ್ಣ ಶ್ರದ್ಧಾಂಜಲಿ 💐

         ಅಳುತ್ತಾ ಭೂಮಿಗೆ ಬಂದ ಜೀವ, ಮತ್ತೆ ಭುವಿಯನ್ನಗಲುವಾಗ ತಾನು ಮೊದಲು ಸ್ತಬ್ಧವಾಗಿ ನಂತರ ತನ್ನವರನ್ನು ಅಳಿಸುತ್ತದೆ. ವ್ಯಕ್ತಿ ಎಷ್ಟು ವರ್ಷ ಬದುಕಿದ್ದರು ಅನ್ನುವುದಕ್ಕಿಂದ ಹೇಗೆ ಬದುಕಿಬಾಳಿದ್ದರು ಅನ್ನುವುದು ಮುಖ್ಯ. ದೇವರು ಕೊಡುವ ಆಯುಷ್ಯದಲ್ಲಿ  ಎಲ್ಲರ ಒಳಿತನ್ನು ಬಯಸುತ್ತಾ, ನಗುನಗುತ್ತಾ ಬಾಳಿ, ಕಾಲನ ಕರೆಬಂದಾಗ  ಸೀದಾ ಎದ್ದು ಹೊರಟಂತೆ ಬದುಕಿಗೆ ವಿದಾಯ ಹೇಳಿದರೆ ಆ ವ್ಯಕ್ತಿಗೆ ಸುಖಮರಣ ಅನ್ನುತ್ತಾರೆ, ಆದರೆ ಕುಟುಂಬದವರಿಗೆ ಆ ಅನಿರೀಕ್ಷಿತ ಅಗಲಿಕೆಯ ವಿಷಯವನ್ನು ಅರಗಿಸಿಕೊಳ್ಳಲು, ಉಂಟಾಗುವ ಆಘಾತವನ್ನು ಸಹಿಸಿಕೊಳ್ಳಲು ಬಹಳ ಸಮಯ ಬೇಕು.

            ಹೌದು ಬಂಧುಗಳೇ..  ನವೆಂಬರ್ 11,12 ರಂದು ನಮ್ಮ ಕುಟುಂಬ ಅನುಭವಿಸಿದ ಸಂಕಟವಿದು. ನನ್ನ ಮಾವನವರಾದ ಸುಬ್ರಹ್ಮಣ್ಯ ಭಟ್, ನೆಲ್ಲಿಕ್ಕಳಯ ಇವರು ನವೆಂಬರ್ 11 ರಂದು ಬೆಳಿಗ್ಗೆ ಕಾಫಿ ತಿಂಡಿಯ ನಂತರ ತೋಟಕ್ಕೆ ಹೋಗಿ ತನ್ನ ದೈನಂದಿನ ಕೆಲಸಕಾರ್ಯಗಳಲ್ಲಿ ತೊಡಗಿದ್ದವರು, ಸೀದಾ ಮನೆಗೆ ಬಂದರು. ತಲೆಸುತ್ತುತ್ತಿದೆ ಎನ್ನುತ್ತಾ ವಾಂತಿ ಮಾಡಿದರು. ಏನೋ ಅಜೀರ್ಣ ಆಗಿರಬೇಕು ಅಂದುಕೊಳ್ಳುತ್ತಿದ್ದಂತೆ ವಾಂತಿ ತೀವ್ರವಾಯಿತು.
ಮನೆಯಲ್ಲಿ ಅತ್ತೆ ಮಾವ ಇಬ್ಬರೇ ಇರುವುದು. ಅತ್ತೆ ನೆರೆಮನೆಯ ಬಾಲಣ್ಣನನ್ನು (ಬಾಲಚಂದ್ರ ಭಟ್ ಪೆರ್ವ- ಇವರು ಮಾವನವರ ಅಣ್ಣನ ಮಗಳ ಪತಿ) ಕರೆದರು. ಪರಿಸ್ಥಿತಿಯ ಗಂಭೀರತೆಯನ್ನರಿತು ಬಾಲಣ್ಣ ಆಸ್ಪತ್ರೆಗೆ ಕರೆದೊಯ್ಯುವ ಯೋಚನೆ ಮಾಡಿ, ತನ್ನ ಪರಿಚಯದ ಆಟೋವನ್ನು ಕರೆಸಿದರು.

      ನಮ್ಮ ಮನೆ ಇರುವುದು ಸ್ವಲ್ಪ ಹೊಂಡದಲ್ಲಿ ಅನ್ನಬಹುದು. ಪರಿಚಯದ ಒಂದೆರಡು ಆಟೋ ಬರುವುದು ಬಿಟ್ಟರೆ,.. ಜೀಪು, ಓಮ್ನಿಯಂತಹ ವಾಹನಗಳು ಮಾತ್ರ ಸರಾಗವಾಗಿ ಚಲಿಸಬಹುದಾದ ಮಾರ್ಗ. ಅಸ್ವಸ್ಥರಾದರೂ ಪಂಚೆ ಉಟ್ಟು, ದುಡ್ಡು ಎಣಿಸಿ ಕಿಸೆಗೆ ತುಂಬಿಸಿಕೊಂಡಿದ್ದರು. ಆಟೋ ಬರುವಷ್ಟರಲ್ಲಿ ಅವರಿಗೆ ಎದ್ದು ನಡೆಯುವುದಕ್ಕೂ ಕಷ್ಟವಾಗಿತ್ತು. ಆಟೋ ಡ್ರೈವರ್ ಮೈಯೆಲ್ಲಾ ತಣ್ಣಗಾದಂತಿದೆ, ಆಟೋದಲ್ಲಿ ಕರೆದುಕೊಂಡು ಹೋಗಲು ಕಷ್ಟವಾಗಬಹುದು, ಬೇರೇನಾದರೂ ವಾಹನ ವ್ಯವಸ್ಥೆ ಮಾಡೋಣ ಅಂದರು.. ಅಷ್ಟು ಬೇಗ ಬೇರೆ ವಾಹನವನ್ನು ಕರೆಸುವುದು ಸುಲಭವಲ್ಲ..ಕುಡಿಯೋದಕ್ಕೆ ಬೊಂಡ ಇದ್ದರೆ ಕೊಡಿ ಅವರಿಗೆ ಅಂದರು. ಮಾವ ನೆಟ್ಟ ಮರಗಳೆಲ್ಲ ಎತ್ತರಕ್ಕೆ ಬೆಳೆದಿದ್ದವು. ಅತ್ತೆಗೆ ಕೊಕ್ಕೆಯಲ್ಲಾದರೂ ಎಳನೀರು ಕೊಯ್ಯೋಣ ಅಂದರೆ ಯಾವ ಮರದಲ್ಲೂ ಕೊಕ್ಕೆಗೆ ಎಟಕುವಂತೆ ಎಳನೀರು ಇರಲಿಲ್ಲ. ಸ್ವಲ್ಪ ಜ್ಯೂಸ್ ಮಾಡಿ ಕೊಟ್ಟರು.

       ಬಾಲಣ್ಣ, ಆಟೋ ಡ್ರೈವರ್ ಇಬ್ಬರೂ ಸೇರಿ ಆಟೋದಲ್ಲಿ ಕುಳ್ಳಿರಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯೆ ಡ್ರೈವರ್ ಹಿಂದೆ ಆಗಾಗ ತಿರುಗಿ ನೋಡುತ್ತಾ ಸೀರಿಯಸ್ ಇದ್ದಂತಿದೆ, ಬೇರೆ ವಾಹನ ಮಾಡೋಣವಾ... ಎಂದು ಆತಂಕದಿಂದಲೇ ವಾಹನ ಚಲಾಯಿಸುತ್ತಿದ್ದರು. ಅಲ್ಪ ಸ್ವಲ್ಪ ಮಾತನಾಡುತ್ತಿದ್ದ ಮಾವ ಒಂದೆರಡು ಸಲ ಸ್ವಲ್ಪ ನೀರು ಕೇಳಿ ಕುಡಿದಿದ್ದರು ‌. ನಂತರ "ಬಾಲ.. ನಾನು ಸ್ವಲ್ಪ ಮಲಗುತ್ತೇನೆ.." ಎಂದು ಮಲಗಿದರು. ಮುಳ್ಳೇರಿಯಾದಲ್ಲಿ ಪರೀಕ್ಷಿಸಿದ ವೈದ್ಯರು ಏನಾಗಿದೆ ಎಂದು ತಿಳಿಯುತ್ತಿಲ್ಲ, ಕಾಸರಗೋಡಿಗೆ ಕರೆದೊಯ್ಯಿರಿ ಎಂದು ಸೂಚಿಸಿದರು.

       ಆಗ ಹನ್ನೊಂದು ಗಂಟೆಯ ಸಮಯ. ನನ್ನ ಪತಿ ಡಾ|| ಗೋಪಾಲಕೃಷ್ಣ ಭಟ್ ಡ್ಯೂಟಿಗೆ ಹೊರಡಲು ಸಿದ್ಧವಾಗಿದ್ದರು. ಇಂಜಿನಿಯರಿಂಗ್ ಅಂತಿಮ  ಪದವಿಯ ಪರೀಕ್ಷೆಗಳು ಜರುಗುತ್ತಿದ್ದವು. ಮಂಗಳೂರಿನಲ್ಲೇ ಇರುವ ಬೇರೊಂದು ಕಾಲೇಜಿನಲ್ಲಿ ಡೆಪ್ಯುಟಿ ಚೀಫ್ ಎಕ್ಸಾಮಿನರ್ ಆಗಿ ಪತಿ ನಿಯೋಜನೆಗೊಂಡಿದ್ದರು. ಪರೀಕ್ಷೆ ಅಪರಾಹ್ನ ಇದ್ದುದರಿಂದ ಸ್ವಲ್ಪ ಸಮಾಧಾನದಿಂದಲೇ ಹೊರಟು ನಿಂತಿದ್ದರು. ಆಗ ಕರೆಯೊಂದು ಬಂದಿತು. "ಭಾವ.." ಅನ್ನುತ್ತಾ ಮಾತನಾಡುತ್ತಿದ್ದಂತೆ ಮಾವನವರ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂದು ಅರಿತೆ. ವೈದ್ಯರಲ್ಲಿ ಮಾತನಾಡಿದರು. "ನಾನು ಪರೀಕ್ಷಾ ಕರ್ತವ್ಯವನ್ನು ಬೇರೆಯವರಿಗೆ ವರ್ಗಾಯಿಸಿ ಬರಲು ಪ್ರಯತ್ನ ಮಾಡುತ್ತೇನೆ. ಆರೋಗ್ಯ ಹೇಗಿದೆ..ಗಾಬರಿ ಆಗುವಂತಿದೆಯ" ಎಂದೆಲ್ಲ ಕೇಳಿದಾಗ,
"ಏನೆಂದು ತಿಳಿಯುತ್ತಿಲ್ಲ ಕಾಸರಗೋಡಿಗೆ ಕರೆದೊಯ್ಯಿರಿ" ಎಂದರು ವೈದ್ಯರು. "ಸರಿ..ಕರೆದೊಯ್ಯಲು ವ್ಯವಸ್ಥೆ ಮಾಡುತ್ತೇನೆ" ಎಂದುಹೇಳಿದರು. "ಭಾವ.. ನೀವು ಕರೆದೊಯ್ಯಿರಿ.. ನಾನೀಗ ಬರುತ್ತೇನೆ" ಎಂದರು.
ಸಹೋದ್ಯೋಗಿ ಡಾ|| ಸೂರ್ಯನಾರಾಯಣ ಭಟ್ ಅವರಲ್ಲಿ ವಿಷಯ ತಿಳಿಸಿದಾಗ ಪರೀಕ್ಷಾ ಜವಾಬ್ದಾರಿ ನಿಭಾಯಿಸಲು ಮುಂದೆ ಬಂದರು. ವಿಟಿಯು ಮೈಸೂರು ವಿಭಾಗಕ್ಕೆ ನೇಮಿಸಿದ್ದ  ವಿಶೇಷ ಆಫೀಸರ್'ಗೆ ವಿಷಯ ತಿಳಿಸಿದಾಗ ಅವರೂ ಕೂಡ ಸಮ್ಮತಿಸಿದರು. ನಿಯೋಜನೆಗೊಂಡಿದ್ದ ಕಾಲೇಜಿಗೆ ಕರೆ ಮಾಡಿ "ನನ್ನ ತಂದೆಯವರು ಅಸ್ವಸ್ಥರಾಗಿದ್ದಾರೆ.. ನಾನೊಬ್ಬನೇ ಮಗ ಇರುವುದು. ನಂಗೆ ಅಕ್ಕ ತಂಗಿ ಕೂಡಾ ಇಲ್ಲ.. ಪ್ಲೀಸ್.. ಈಗ ನಾನು ಹೋಗಲೇಬೇಕು.. ದಯವಿಟ್ಟು ಅವಕಾಶ ಕೊಡಿ. " ಎಂದು ಪರಿಪರಿಯಾಗಿ ವಿನಂತಿಸಿದರು. ಆ ಕಾಲೇಜಿನ ಕಡೆಯಿಂದ ಒಪ್ಪಿಗೆ ದೊರೆಯಲಿಲ್ಲ. ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಡೌನ್ಲೋಡ್ ಮಾಡಲು ಬೇಕಾದ ಮಾಹಿತಿಗಳು ಬರುವುದು ಇವರ ಮೊಬೈಲಿಗೆ. ಏಕಾಏಕಿ ಮೊಬೈಲ್ ನಂಬರ್ ಬದಲಾವಣೆ ಮಾಡಿ ಪರೀಕ್ಷೆಗೆ ಏನಾದರೂ ತೊಂದರೆ ಆದರೆ.. ಎಂದು ಕಾಲೇಜಿನವರ ಮುಂಜಾಗ್ರತೆ.. ಒಂದು ಕಡೆ ನೂರಾರು ವಿದ್ಯಾರ್ಥಿಗಳ ಭವಿಷ್ಯ, ಇನ್ನೊಂದು ಕಡೆ ಕ್ಷಣದಿಂದ ಕ್ಷಣಕ್ಕೆ ತಿವ್ರವಾಗಿ ಅಸ್ವಸ್ಥರಾಗುತ್ತಿರುವ ತಂದೆಯವರು.. ಬಾಲಣ್ಣನ ಜೊತೆ ತನ್ನ ಮಾವನ ಮಗ, ಭಾವ ಗಣೇಶ್'ನನ್ನೂ ಕೂಡಾ ತಂದೆಯವರ ಜೊತೆ ಕಾಸರಗೋಡಿಗೆ ಹೋಗಲು ತಿಳಿಸಿ, ನಾನು ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾದ ಮೇಲೆ ಬರುತ್ತೇನೆ. ಎಂದು ಕಾಲೇಜಿಗೆ ತೆರಳಿ, ಸಹಿ ಹಾಕಿ, ಪ್ರಶ್ನೆ ಪತ್ರಿಕೆ ಡೌನ್ಲೋಡ್ ಮಾಡಿ ಕೊಟ್ಟು, ಪರೀಕ್ಷೆ ಸುಗಮವಾಗಿ ಸಾಗುವಂತೆ ನೋಡಿಕೊಂಡ ನಂತರ... ತನ್ನ ಜವಾಬ್ದಾರಿಗಳನ್ನು ಸಹೋದ್ಯೋಗಿ ಮಿತ್ರರಾದ ಡಾ|| ಸೂರ್ಯನಾರಾಯಣ ಭಟ್ ಅವರಿಗೆ ಹಸ್ತಾಂತರಿಸಿ ಮನೆಗೆ ಮರಳಿದರು. ಪತಿ ಆಸ್ಪತ್ರೆಯಲ್ಲಿ ನಿಲ್ಲಬೇಕಾದರೆ  ಅಗತ್ಯವಾದದ್ದನ್ನೆಲ್ಲ ಬ್ಯಾಗಿಗೆ ತುಂಬಿಸಿ ಇಟ್ಟಿದ್ದೆ. ಮನೆಗೆ ಬಂದು ಒಂದು ಗುಟುಕು ನೀರು ಕುಡಿದು ಬ್ಯಾಗ್ ಹೆಗಲಿಗೇರಿಸಿ ಹೊರಗಡಿ ಇಡುತ್ತಿದ್ದಂತೆ ಭಾವ ಗಣೇಶನ ಕರೆ ಬಂದಿತು. "ಮಾವನಿಗೆ ಬ್ರೈನ್ ಹೆಮರೇಜ್ ಆಗಿದೆ. ಇನ್ನು ಬದುಕುಳಿಯುವ ಸಾಧ್ಯತೆಗಳು ಕಡಿಮೆ.." ಎಂದು. ಶಾಕ್ ಆದರೂ ಸಹ ತಡೆದುಕೊಂಡು, ಅಪ್ಪ ನನಗೆ ಬೇಕಾದ್ದೆಲ್ಲವನ್ನೂ ಮಾಡಿ ಬೆಂಬಲವಾಗಿ ನಿಂತವರು. ಈಗ ನಾನವರಿಗೆ ಮಾಡಬೇಕಾದ್ದನ್ನು ಮಾಡಲೇಬೇಕು. ಬೇಸರಿಸಿಕೊಂಡು ಒಂದು ಕ್ಷಣವೂ ತಡಮಾಡಬಾರದು... ಎನ್ನುತ್ತಲೇ ಕಾಸರಗೋಡಿನತ್ತ ವಾಹನ ಚಲಾಯಿಸಿದರು.

        ಆಸ್ಪತ್ರೆಯಲ್ಲಿ ಕಣ್ಣುಮುಚ್ಚಿ ಮಲಗಿದ ಅಪ್ಪನನ್ನು ಕಂಡು ಮೊದಲು ಮೈ ಮುಟ್ಟಿ ನೋಡಿದರು, ಬೆಚ್ಚಗಿತ್ತು. ಉಸಿರಾಟ ಇದೆ  ಎಂದಾದಾಗ ಕೂಡಲೇ ಮಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಫಲಕಾರಿ ಆದೀತಾ ಎಂದು ಪ್ರಯತ್ನಿಸುತ್ತೇನೆ ಎಂದು ಅಲ್ಲಿನ ವೈದ್ಯರಲ್ಲಿ ತಿಳಿಸಿದರು. ಅವರು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಶಿಫಾರಸು ಮಾಡಿದರು. ಮಾವನವರನ್ನು ಮಂಗಳೂರಿಗೆ ಕರೆತಂದರು. ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಬ್ರೈನ್ ಸ್ಕ್ಯಾನಿಂಗ್ ಮಾಡಿದ ವೈದ್ಯರು "ಮೆದುಳಿನ ಮಧ್ಯಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೆವಿಸ್ಟ್ರೋಕ್ ಆಗಿ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಬದುಕುಳಿಯುವ ಸಾಧ್ಯತೆ ಕೇವಲ ಹತ್ತು ಪರ್ಸೆಂಟ್ ಮಾತ್ರ ಇದೆ. ವಾಂತಿ ಆರಂಭವಾಗಿ ಎರಡು ಗಂಟೆಯೊಳಗೆ ತಲುಪುತ್ತಿದ್ದರೆ ಚಿಕಿತ್ಸೆ ಫಲಕಾರಿಯಾಗುವ ಸಾಧ್ಯತೆಯಿದೆ. ಆದರೂ ಪ್ರಯತ್ನ ಮಾಡುತ್ತೇವೆ.. ಹತ್ತಿರದ ಬಂಧುಗಳಿಗೆ ವಿಚಾರ ತಿಳಿಸಬಹುದು.." ಎಂದರು. ಕೊರೋನಾದ ಕಾರಣದಿಂದ ಆಸ್ಪತ್ರೆಯಲ್ಲಿ ಯಾರೂ ನಿಲ್ಲುವಂತೆ ಇರಲಿಲ್ಲ. ಪತಿ ಭಾರವಾದ ಹೃದಯದಿಂದ ಮನೆಗೆ ಮರಳಿದರು.

       ಊಟ ಬಡಿಸಿದರೆ, ಅಪ್ಪನನ್ನು ಈ ಸ್ಥಿತಿಯಲ್ಲಿ ಕಂಡು ಊಟಮಾಡಲೂ ಮನಸ್ಸಿರಲಿಲ್ಲ. ಊರಲ್ಲಿ ಒಬ್ಬರೇ ಇರುವ ಅಬ್ಬೆಗೆ ಅಪ್ಪನ ವಿಚಾರ ತಿಳಿಸುವುದು ಹೇಗೆ ಎಂಬ ಪ್ರಶ್ನೆ. ಬಾಲಣ್ಣ ಮನೆಗೆ ತೆರಳಿ ಅತ್ತೆಯವರಲ್ಲಿ, ಚಿಕಿತ್ಸೆಯ ವಿಚಾರಗಳನ್ನು, ಮಗ ಬಂದು ಮಂಗಳೂರಿಗೆ ಕರೆದೊಯ್ದ ವಿಚಾರಗಳನ್ನು ಸೂಕ್ಷ್ಮವಾಗಿ ತಿಳಿಸಿದರು. ನಂತರ ತಾಯಿಗೆ ಕರೆಮಾಡಿ " ಅಬ್ಬೆ.. ಅಪ್ಪ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆಯಂತೆ. ಸರಿಪಡಿಸಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಇಂಜೆಕ್ಷನ್ ಕೊಟ್ಟಿದ್ದಾರೆ. ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ವೈದ್ಯರನ್ನು ಭೇಟಿಯಾದಾಗ ಹೇಗಿದೆ.. ಚಿಕಿತ್ಸೆಗೆ ಸ್ಪಂದಿಸುತ್ತಾರಾ ಎಂದು ತಿಳಿಯಬಹುದು. ನಾನು ನಾಳೆ ಕರೆ ಮಾಡುತ್ತೇನೆ.. ನೀವು ಧೈರ್ಯದಿಂದ ಇರಿ.." ಎಂದು ಹೇಳಿದರು.

        ಯಾವ ಹೊತ್ತಿಗಾದರೂ ಮನೆಗೆ ಹೋಗಬೇಕಾಗಿ ಬರಬಹುದು. ಮುಂದಿನ ಹಲವು ದಿನಗಳಿಗೆ ಬೇಕಾದ ಬಟ್ಟೆಬರೆಗಳನ್ನು, ಅಗತ್ಯವಸ್ತಗಳನ್ನು ತುಂಬಿಸಿ, ತಯಾರಾಗಿರು ಎಂದು ನನ್ನಲ್ಲಿ ಹೇಳಿ ಭಾವುಕರಾದರು. ಮರುದಿನ ಬೆಳಿಗ್ಗೆ ಅತ್ತೆಗೆ ಕರೆಮಾಡಿ "ಅಬ್ಬೆ.. ತಿಂಡಿ ತಿಂದೆಯಾ.. ಹೆದರಬೇಡ.. ನಾನು ವೈದ್ಯರನ್ನು ಭೇಟಿ ಮಾಡಿ ಮಾತನಾಡಿ.. ರಾತ್ರಿ ಕರೆಮಾಡುತ್ತೇನೆ" ಎಂದು ಸಮಾಧಾನದಿಂದ ಮಾತನಾಡುತ್ತಿದ್ದಂತೆಯೇ ಆಸ್ಪತ್ರೆಯಿಂದ ಕರೆ ಬರುತ್ತಿತ್ತು. ಮನೆಯಲ್ಲಿ ಬಳಸುವ ಮೂರು ನಾಲ್ಕು ನಂಬರ್ ಗಳನ್ನು ಆಸ್ಪತ್ರೆಯಲ್ಲಿ  ಕೊಟ್ಟಿದ್ದರು. ಆದ್ದರಿಂದ ನನ್ನ ಮೊಬೈಲ್ ಗೆ ಕರೆ ಬಂತು.. ಫಸ್ಟ್ ನ್ಯೂರೋ ದಿಂದ.. "ಪೇಷೆಂಟ್ ಸುಬ್ರಹ್ಮಣ್ಯ ಪಾರ್ಟಿ.." ಅಂದರು..
"ಹೌದು.." ಅಂದೆ..
"ಅವರು ಕಾಲ್ ರಿಸೀವ್ ಮಾಡುತ್ತಿಲ್ಲ.. ಎಲ್ಲಿದ್ದಾರೆ?" ಅಂದರು..
"ಇಲ್ಲಿದ್ದಾರೆ..ಕೊಡ್ತೇನೆ ಅಂದೆ.." ಪತಿಗೆ ನೀಡಿದೆ..
"ಸುಬ್ರಹ್ಮಣ್ಯ ಅವರ ಹಾರ್ಟ್ ಬೀಟ್ ಲೋ ಆಗ್ತಾ ಇದೆ.. ಕೂಡಲೇ ಬನ್ನಿ.. ಎಲ್ಲಿದ್ದೀರಿ ಈಗ.. ಆಸ್ಪತ್ರೆಗೆ ತಲುಪಲು ಎಷ್ಟು ಹೊತ್ತು ಬೇಕು.." ಎಂದು ಕೇಳಿ ಫೋನಿಟ್ಟರು. "ಇಪ್ಪತ್ತು ನಿಮಿಷಗಳು ಬೇಕು" ಎಂದಿದ್ದರು ಪತಿ..

"ಅನಿತಾ... ನೀನೂ ಮಕ್ಕಳೂ ಹೊರಟು ನಿಲ್ಲಿ.. ಇಲ್ಲಿನ ಎಲ್ಲಾ ಜವಾಬ್ದಾರಿಯನ್ನು ನೀನು ನಿಭಾಯಿಸು.. ನಾನು ಅಪ್ಪನ ಮುಂದಿನ ತಯಾರಿಯತ್ತ ಗಮನಹರಿಸುತ್ತೇನೆ.." ಎಂದವರೇ.. ಅರ್ಧಂಬರ್ಧ ಅಂಗಿ ತೂರಿಸಿಕೊಂಡು, ಬ್ಯಾಗನ್ನೆತ್ತಿ ಹೊರಟೇಬಿಟ್ಟರು. ಸುಮಾರು ಇಪ್ಪತ್ತು ನಿಮಿಷ ಕಳೆದಿರಬಹುದು. ಪುನಃ ನನಗೆ ಆಸ್ಪತ್ರೆಯಿಂದ ಕರೆ ಬಂತು. "ಪೇಷೆಂಟ್ ಸುಬ್ರಹ್ಮಣ್ಯ ಪಾರ್ಟಿ ಹೊರಟಿದ್ದಾರಾ.. ಎಷ್ಟು ಹೊತ್ತಾಯ್ತು ಹೊರಟು... ಆಸ್ಪತ್ರೆಗೆ ತಲುಪಿಲ್ಲ.."

"ಹೊರಟು ಇಪ್ಪತ್ತು ನಿಮಿಷ ಆಯ್ತು. ಟ್ರಾಫಿಕ್ ಇದ್ದಿರಬಹುದು. ಇನ್ನು ಸ್ವಲ್ಪ ಹೊತ್ತಿನಲ್ಲೇ ತಲುಪಬಹುದು.." ಎಂದೆ..

"ಅವರಲ್ಲಿ ಇರುವ ಮೊಬೈಲ್ ನಂಬರ್ ಯಾವುದು ಎಂದು ಕೇಳಿದರು.." ಹೇಳಿದೆ..
"ಅದು ಎಂಗೇಜ್ ಬರುತ್ತಿದೆ" ಅಂದರು..ಫೋನಿಟ್ಟರು..

        ಪತಿಗೆ ಆಗಾಗ ಬಂಧುಗಳ ಕರೆ ಬರುತ್ತಿತ್ತು. ಪಂಪ್'ವೆಲ್ ವೃತ್ತದಲ್ಲಿ ಟ್ರಾಫಿಕ್'ನಲ್ಲಿ ಸಿಲುಕಿಕೊಂಡಿರುವ ಹೊತ್ತಿಗೆ ಆಸ್ಪತ್ರೆಯಿಂದ ಬಂದ ಕರೆ ತಂದೆಯವರ ಮರಣದ ಸುದ್ದಿಯನ್ನು ತಿಳಿಸಿತ್ತು. ಆಸ್ಪತ್ರೆಗೆ ತೆರಳಿ ಮುಂದಿನ ಪ್ರಕ್ರಿಯೆ ಗಳನ್ನು ಮುಗಿಸಿ, ತನ್ನ ಸಮೀಪದ ಬಂಧುಗಳಿಗೆ ವಿಚಾರ ಮುಟ್ಟಿಸಿದರು.

       ಊರಲ್ಲಿ ಒಬ್ಬರೇ ಇರುವ ಅತ್ತೆಗೆ ಸುದ್ದಿ ಮುಟ್ಟಿಸುವ ಕಾರ್ಯ ಮಾಡಲೇಬೇಕಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆಗೆ ತಿಳಿಸುವುದು ಸುಲಭದ ವಿಷಯವಲ್ಲ. ಬಾಲಣ್ಣ ಮತ್ತು ಅವರ ಪತ್ನಿ ಶ್ರೀದೇವಿ ಅವರಿಗೆ, ಹೇಳಿದಾಗ ಏನಾದರೂ ಹೆಚ್ಚು ಕಡಿಮೆಯಾದರೆ ನಾವಿಬ್ಬರೇ ಏನು ಮಾಡೋದು ಅನ್ನುವ ಭಯ. ಅತ್ತೆಯ ತವರಿನವರಲ್ಲಿ "ಅಬ್ಬೆಗೆ ವಿಷಯ ತಿಳಿಸಿ, ಸಮಾಧಾನ ಹೇಳಿ" ಎಂದು ಕೋರಿಕೊಂಡರು ಪತಿ.
ಅತ್ತೆಯ ಇಬ್ಬರು ಅಣ್ಣಂದಿರು ತಮ್ಮ ಮಗನ ಜೊತೆ ಮನೆಗೆ ಆಗಮಿಸಿದರು.

     ಮಗ ರಾತ್ರಿ ಕರೆಮಾಡುತ್ತೇನೆ ಎಂದಿದ್ದಾನೆ. ಅಪ್ಪ ಮಾತನಾಡುತ್ತಾರೆ. ಕಣ್ಣೊಡೆದು ನನ್ನನ್ನು ನೋಡಿದ್ದಾರೆ.. ಎಂದೇನಾದರೂ ಖಂಡಿತ ಹೇಳಿಯಾನು ನನ್ನ ಮಗ.. ಎಂದು ನಂಬಿದ್ದ ಅತ್ತೆ ತನ್ನ ದೈನಂದಿನ ಕಾರ್ಯದಲ್ಲಿ ತೊಡಗಿದ್ದರು. ಕಾರಿನ ಶಬ್ದ ಕೇಳಿದಾಗ, ಎದುರು ಬಂದವರೇ.. ನನ್ನ ಪತಿ ಆಸ್ಪತ್ರೆಯಲ್ಲಿ ಇದ್ದಾರೆಂದು ತಿಳಿದು ನನ್ನನ್ನು ವಿಚಾರಿಸಲು ಅಣ್ಣಂದಿರು ಬಂದಿದ್ದಾರೆ ಎಂದುಕೊಂಡರು. ಮಾತನಾಡುತ್ತಿದ್ದಂತೆಯೇ ಮಾರ್ಗದಲ್ಲಿ ಯಾರೋ ಒಂದಿಬ್ಬರು ಬಿಳಿ ಬಟ್ಟೆ ಧರಿಸಿದವರು ಬಂದಿರುವುದು, ಬಾಲಣ್ಣನ ಮನೆ ಸಮೀಪದಲ್ಲೇ ನಿಂತು ಅವರ ಜೊತೆ ಹರಟುತ್ತಿರುವುದನ್ನು ಗಮನಿಸಿ, ಯಾರೋ ಅವರ ಪರಿಚಯದವರಾಗಿರಬಹುದು.. ಎಂದುಕೊಂಡರು.. ಒಬ್ಬರು ಮನೆಯ ಸಮೀಪ ಬಂದಾಗ, ಸರಿಯಾಗಿ ಪರಿಚಯ ಸಿಗದೇ ವಿಚಾರಿಸಿಕೊಂಡರು ಅತ್ತೆ.. ಇವರೇಕೆ ಬಂದರು.. ಎಂದು ಯೋಚಿಸುತ್ತಾ ಇದ್ದಂತೆ ಬಂದ ಬಾಲಣ್ಣನಲ್ಲಿ... ತವರಿನಿಂದ ಅಣ್ಣಂದಿರು ಬಂದಿದ್ದಾರೆ.. ಅನ್ನ ಮಾಡ್ತೀಯಾ.. ಅಂತ ಕೇಳಿದರು ಮುಗ್ಧವಾಗಿ.. ಇಲ್ಲ.. ಅನ್ನಕ್ಕಿಡಬೇಡಿ ನೀವೀಗ..ಅಂತ ಹೇಳಿ ಅಂಗಳದಿಂದ ಕೆಳಗಿಳಿದು ಬಾಲಣ್ಣ ತನ್ನ ಮನೆಯತ್ತ ಧಾವಿಸಿದರೂ ಅತ್ತೆಗೆ ಅವರ ಮಾತು ಅರ್ಥವಾಗಲೇಯಿಲ್ಲ.

     ವಯಸ್ಸಾದ ಅಣ್ಣಂದಿರು ಕೂಡಾ ತಂಗಿಯಲ್ಲಿ ವಿಚಾರ ತಿಳಿಸಲು ಹರಸಾಹಸ ಪಡುತ್ತಿದ್ದರು. ಕೊನೆಗೆ ತಂಗೀ.. ತಂಗೀ.. ಅನ್ನುತ್ತಲೇ ವಿಚಾರ ತಿಳಿಸಿದಾಗ.. ತಡೆದುಕೊಳ್ಳಲು ಸಾಧ್ಯವಾಗದೆ ಕುಸಿದು ಹೋದರು. ಅತ್ತೆಗೆ ವಿಚಾರ ತಿಳಿಸುವುದನ್ನೇ ಕಾಯುತ್ತಿದ್ದ ಬಾಲಣ್ಣ ಮುಂದಿನ ತಯಾರಿ ನಡೆಸಿದರು. ಮಾರ್ಗದಲ್ಲಿ ಅಡ್ಡಾಡುತ್ತಿದ್ದ ಬಂಧುಗಳು ಆಗಮಿಸಿ ಸಹಕರಿಸಿದರು. ಮತ್ತೆ ಅರ್ಧವೇ ಗಂಟೆಯಲ್ಲಿ ಮನೆ ತಲುಪಿದ ಮಗನನ್ನು ಕಂಡಾಗ ಅತ್ತು ಕರೆದ ತಾಯಿ ಕೇಳಿದ ಪ್ರಶ್ನೆ.. "ನೀನೂ ಯಾಕೆ ನನ್ನಿಂದ ಮುಚ್ಚಿಟ್ಟೆ ಮಗ..?" ತಾಯಿಯನ್ನು ಸಂತೈಸಿ, ಅನಾರೋಗ್ಯಕ್ಕೆ ಔಷಧ ನೀಡಿ, ಒಂದೆರಡು ಗುಟುಕು ಪಾನೀಯ ಕುಡಿಸಿದ ನಂತರವೇ.. ಮೃತದೇಹವನ್ನು ಆಂಬುಲೆನ್ಸ್ ನಿಂದ ಮನೆಗೆ ತಂದರು.

       ಮುಂದಿನ ಎಲ್ಲಾ ವ್ಯವಸ್ಥೆ ಗೆ ಬಂಧುಗಳು ಸಹಕರಿಸಿದರು. ಒತ್ತಡ ತಾಳಲಾರದೆ ಆಗಾಗ ಔಷಧಿ ಸೇವಿಸುತ್ತಿದ್ದ ಅತ್ತೆಗೆ ಕಿತ್ತಳೆ ಹಣ್ಣನ್ನು ಸುಲಿದು, ತಿನ್ನಲು ಕೊಟ್ಟರೆ.. " ನಂಗೆ ಯಾಕೆ ಅನಿತಾ.. ಮಾವ ಏನೂ ತಿನ್ನದೇ ಮಲಗಿದ್ದಾಗ ನಾನು ಹೇಗೆ ತಿನ್ನಲಿ..? ಬೇಡ ನಂಗೆ.. " ಎಂದು ನಿರಾಕರಿಸುತ್ತಿದ್ದರೂ ಸಮಾಧಾನಪಡಿಸಿ ತಿನ್ನಲು ಕೊಟ್ಟೆ. ಎಲ್ಲರೂ ಸಾಂತ್ವಾನ ಹೇಳಿ, ಧೈರ್ಯ ತುಂಬುತ್ತಿದ್ದರು. ಕುಲ ಪುರೋಹಿತರಾದ ಪಳ್ಳತ್ತಡ್ಕ ಶಿವ ಭಟ್ಟರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಂಜೆ ಸುಮಾರು ಐದು ಗಂಟೆಯ ವೇಳೆಗೆ  ಮಾವನವರು ತನ್ನ ಕರ್ಮಭೂಮಿಯಲ್ಲಿ  ಪಂಚಭೂತಗಳಲ್ಲಿ ಲೀನರಾದರು.

      ಭಾರವಾದ ಹೃದಯ.. ಮನೆಯಲ್ಲಿ ನೀರವ ಮೌನ. ಯಾರು ಎಷ್ಟೇ ಸಾಂತ್ವನ ಹೇಳಿದರೂ ಅರಗಿಸಿಕೊಳ್ಳಲಾಗದ ಅಗಲಿಕೆ.. ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮಗಳಲ್ಲಿ ಬಾಲಣ್ಣ ಹಾಗೂ ನೆರೆಹೊರೆಯವರು ನಮಗೆ  ಬೆಂಬಲವನ್ನು ನೀಡಿದ್ದರು. ಬಾಲಣ್ಣನಲ್ಲಿ ಮಾತನಾಡುತ್ತಾ.. " ಅಪ್ಪ.. ನನ್ನನ್ನು ಓದಿಸಿದರು, ಉದ್ಯೋಗದಲ್ಲಿ ಇರುವುದನ್ನು ಕಂಡು ಹೆಮ್ಮೆ ಪಟ್ಟುಕೊಂಡರು, ಕಷ್ಟದಲ್ಲಿದ್ದಾಗ  ಸದಾ ಬೆಂಬಲವನ್ನು ನೀಡಿದರು, ನನಗೆ ಎಲ್ಲವನ್ನೂ ಮಾಡಿಕೊಟ್ಟ ತಂದೆಯವರ ಅನಾರೋಗ್ಯದ ಸಂದರ್ಭದಲ್ಲಿ ನಾನು ಮಾಡಲಾಗದ ಜವಾಬ್ದಾರಿ ಗಳನ್ನು ನೀವು ಮಾಡಿದ್ದೀರಿ ಭಾವ.. " ಎನ್ನುತ್ತಾ ಇವರು ಗದ್ಗದಿತರಾದಾಗ..
" ನಾನು ನನ್ನ ತಂದೆ ಅಂತಲೇ ಭಾವಿಸಿ ಮಾಡಿದ್ದೇನೆ.. ಆ ಪ್ರೀತಿ ನನ್ನಲ್ಲಿತ್ತು. ನಮ್ಮ ಕೊನೆಯ ದಿನ ಹೇಗೆ? ಎಲ್ಲಿ? ಎಂದು ನಮಗೂ ಗೊತ್ತಿಲ್ಲ.. ಇರುವಷ್ಟು ದಿನ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಹೇಳಿದಾಗ ಕಣ್ಣಾಲಿಗಳನ್ನು ತುಂಬಿಸಿಕೊಂಡು
" ಹಿರಿಯಣ್ಣನಂತೆ ನೀವು.."  ಎನ್ನುತ್ತಾ ನಮಸ್ಕರಿಸಿದರು. ಒಂದು ಕ್ಷಣ ಎಲ್ಲರೂ ಭಾವುಕರಾಗಿದ್ದೆವು. ಅವರ ಋಣ ತೀರಿಸಲು ಸಾಧ್ಯವಿಲ್ಲ.

       ಬ್ರೈನ್ ಹೆಮರೇಜ್ ಆಗುವ ಮೊದಲೇ ಅದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಾವನವರಿಗೂ ಕೆಲವು ಲಕ್ಷಣಗಳು ಕಂಡಿದ್ದವು.

* ಹದಿನೈದು ದಿನಗಳ ಮೊದಲು ವಾಂತಿ ಮಾಡಿಕೊಂಡಿದ್ದರು. ವಾಂತಿ ಮಾಡಿದಾಗ ಏನೋ ತಿಂದು ಅಜೀರ್ಣವಾಗಿದೆ ಅಂತ ಅತ್ತೆ ಮನೆಮದ್ದು ಮಾಡಿದ್ದರು. ಅಲ್ಲಿಗೆ ವಾಂತಿ ನಿಂತಿತ್ತು.

*ಒಂದೆರಡು ದಿನಗಳ ಮೊದಲು ಎರಡೂ ಕಾಲುಗಳ , ಕುತ್ತಿಗೆಯ ಸ್ನಾಯುಗಳ ಸೆಳೆತ ಆರಂಭವಾಗಿತ್ತು. ಕೆಲಸ ಮಾಡಿದ್ದು ಜಾಸ್ತಿ ಆಗಿರಬೇಕು ಎಂದುಕೊಂಡು ಮಂಡಿನೋವಿಗೆಂದು ವೈದ್ಯರು ನೀಡಿದ್ದ ನೋವುನಿವಾರಕ (painkiller ) ಸುಧಾರಿಸಿಕೊಂಡಿದ್ದರು.

*ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಆಗಿತ್ತು. ಅತ್ತೆ ದೋಸೆ ಬಡಿಸುತ್ತಿದ್ದರೆ ಹೊಟ್ಟೆ ತುಂಬುವಷ್ಟು ಬಡಿಸಿದಾಗಲೂ ಸಾಕು ಎನ್ನದೆ, ಎತ್ತಲೋ ನೋಡಿ ನಸುನಗುತ್ತಿದ್ದಂತೆ ಭಾಸವಾಗುತ್ತಿತ್ತು. ನಂತರ ಕರೆದಾಗ ಹೂಂ.. ಅನ್ನುತ್ತಾ ಎದ್ದೇಳುತ್ತಿದ್ದರು.. ಯಾಕೆ ಹೀಗೆ ಮಾಡುತ್ತಿದ್ದಾರೆ.. ಎಂದು ಅತ್ತೆಗೆ ಸಂಶಯ ಬಂದಿತ್ತು.

*ಬೆಳಿಗ್ಗೆ ದಿನವೂ ಐದು ಗಂಟೆಗೆ ಎದ್ದು ಅತ್ತೆಗೆ ಕೆಲಸಗಳಿಗೆ ಸಹಕರಿಸುತ್ತಿದ್ದ ಮಾವ, ಅಂದು ಆರು ಗಂಟೆಯಾದರೂ ಎದ್ದಿರಲಿಲ್ಲ. ಎಬ್ಬಿಸಲು ಹೋದಾಗ.. ಮೈ ಕುಲುಕಿಸಿದಾಗ ಶರೀರ ನಿಶ್ಚಲವಾದಂತೆ ಕಂಡು ಒಮ್ಮೆ ಬೆಚ್ಚಿಬಿದ್ದಿದ್ದರು ಅತ್ತೆ.  ಮರುಕ್ಷಣ ಮಾವ ಥಟ್ಟನೇ ಎಂದು ಕುಳಿತಿದ್ದರಂತೆ.. ಮತ್ತೆ ಎಂದಿನಂತೆ ತಮ್ಮ ದಿನಚರಿ ಮಾಡಿದ್ದರು.

        ಇದ್ಯಾವುದನ್ನೂ ಯಾರ ಜೊತೆಯೂ ಅವರು ಹಂಚಿಕೊಂಡಿರಲಿಲ್ಲ. ಇಂತಹ ಸಣ್ಣಪುಟ್ಟ ಬದಲಾವಣೆಗಳು ಬದುಕಿನಲ್ಲಿ ಸಾಮಾನ್ಯ ಎಂದುಕೊಂಡಿದ್ದರು. ಮಧುಮೇಹ, ರಕ್ತದೊತ್ತಡ, ಹೃದಯದ ಸಮಸ್ಯೆಗಳು.. ಯಾವುದೂ ಇಲ್ಲದಿದ್ದವರಿಗೆ ಈ ಲಕ್ಷಣಗಳು ಕಂಡಾಗಲೇ ನಮ್ಮ ಗಮನಕ್ಕೆ ತರುತ್ತಿದ್ದರೆ ಚಿಕಿತ್ಸೆ ಕೊಡಿಸಬಹುದಿತ್ತೇನೋ ಎಂದು ಆಗಾಗ ಅನಿಸುತ್ತದೆ. ಸಣ್ಣಪುಟ್ಟ ಅನಾರೋಗ್ಯದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ ಎಂಬುದು ನಮ್ಮ ಕಿವಿಮಾತು..

         ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆಗೆ ಈಗ ನೋವು ತಡೆಯಲಾಗುತ್ತಿಲ್ಲ. ಬದುಕಿ ಬಾಳಿದ ಮನೆ, ಫಲಭರಿತ ಕೃಷಿ ಭೂಮಿಯನ್ನು ಬಿಟ್ಟು ಮಗನ ಜೊತೆ ನಗರಕ್ಕೆ ಬರಲು ಮನಸ್ಸು ಒಪ್ಪಲಿಲ್ಲ. ಆದರೂ ಒಪ್ಪಿಸಿ ಕರೆದುಕೊಂಡು ಬಂದಿದ್ದೇವೆ. ಈಗ ನನಗೆ ಅತ್ತೆಯನ್ನು ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ದಾರಿ ಇದೆ. ಉದ್ಯೋಗದೊಂದಿಗೆ ಕೃಷಿ ಮಾಡುತ್ತೇನೆ, ಅಪ್ಪನ ಕನಸುಗಳನ್ನು ನಾನು ಪೂರೈಸುತ್ತೇನೆ ಎನ್ನುವ ಪತಿಗೆ ನನ್ನ ಬೆಂಬಲ ಬೇಕು.. ಇನ್ನು ಸಮಯ ಸಿಕ್ಕರೆ ಮಾತ್ರ ಬರವಣಿಗೆಯ ಹವ್ಯಾಸ... ಕುಟುಂಬದತ್ತ ಮೊದಲ ಗಮನ..

        ಬದುಕಿದ್ದಷ್ಟೂ ದಿನ ಮಾವ ತನ್ನ ಕೆಲಸಕಾರ್ಯಗಳಲ್ಲೇ ತೃಪ್ತಿ ಕಂಡವರು. ಸ್ನೇಹಜೀವಿ. ಯಾರನ್ನು ಕಂಡರೂ ನಗುಮೊಗದಿಂದ ಮಾತನಾಡಿಸುತ್ತಿದ್ದರು. ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದವರು.. ತನ್ನ ಕರ್ತವ್ಯಗಳೆಲ್ಲ ಮುಗಿದವು ಎಂದು ಇತ್ತೀಚೆಗೆ ಹೇಳುತ್ತಿದ್ದರು. ಮೊಮ್ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳ ಜೊತೆಗೆ ತಾವೂ ಮಗುವಾಗುತ್ತಿದ್ದರು.  ಕೊರೋನಾದಿಂದಾಗಿ ರಜೆಯಲ್ಲಿ  ಮೊಮ್ಮಕ್ಕಳನ್ನು ಕಾಣಲಾಗದೆ ಪರಿತಪಿಸುತ್ತಿದ್ದರು. ಇತ್ತೀಚೆಗೆ  ಹೋದಾಗ ಬಹಳ ಲವಲವಿಕೆಯಿಂದ ಮೊಮ್ಮಕ್ಕಳ ಜೊತೆ ಆಡಿದ್ದರು, ಖುಷಿಪಟ್ಟಿದ್ದರು. ಅವರೊಂದಿಗೆ ಕಳೆದ ನಮ್ಮ ಸವಿನೆನಪುಗಳು ಅಮರ.

✍️... ಅನಿತಾ ಜಿ.ಕೆ.ಭಟ್.
03-12-2020.