Friday, 16 April 2021

ಮಗುವಿನ ಸ್ನಾನದ ಕೈ ಬದಲಾಯಿಸುವ ಮುನ್ನ ಎಚ್ಚರವಿರಲಿ



ಮಗುವಿನ ಸ್ನಾನದ ಕೈ ಬದಲಾಯಿಸುವ ಮುನ್ನ ಎಚ್ಚರವಿರಲಿ

        ಎಳೆಯ ಮಕ್ಕಳ ಜಳಕದಲ್ಲಿದೆ ಹೆಣ್ಮಕ್ಕಳ ಕೈಚಳಕ. ಕೆಲವು ಹೆಣ್ಮಕ್ಕಳು ಹಸುಗೂಸನ್ನು ಸ್ನಾನಕ್ಕೆಂದು ಎತ್ತಿಕೊಂಡು ಹೋಗುವಾಗಲೇ ಮಗು ಅಳು ಪ್ರಾರಂಭಿಸಿ, ಸ್ನಾನ ಮಾಡಿ ನಿದ್ದೆಗೆ ಜಾರುವಾಗಲೇ ಅಳು ನಿಲ್ಲುವುದು. ಇನ್ನು ಕೆಲವರ ಕೈಯಲ್ಲಿ ಮಕ್ಕಳು ಸ್ನಾನವನ್ನು ಆನಂದಿಸುತ್ತಾರೆ. ಕೈ ಕಾಲು ಬಡಿದು ಊ..ಆ.. ಎನ್ನುತ್ತಾ ಸ್ವರ ಹೊರಡಿಸಿ ಆಟವಾಡುತ್ತಾರೆ.

        ಬಾಣಂತಿಯಾಗಿದ್ದಾಗ ಮಗುವನ್ನು ಅಜ್ಜಿ ಅಥವಾ ಅನುಭವಸ್ಥ ಹಿರಿಯರು ಬಹಳ ಜಾಗರೂಕತೆಯಿಂದ ಸ್ನಾನ ಮಾಡಿಸುತ್ತಾರೆ. ಅವರು ಅನುಸರಿಸುವ ವಿಧಾನವನ್ನು ಗಮನಿಸಿಕೊಂಡು ತಾಯಿಯಾದವಳು ತಾನೂ ಅಭ್ಯಾಸ ಮಾಡಿಕೊಳ್ಳುವುದು ಸೂಕ್ತ. ಇಲ್ಲದಿದ್ದರೆ ಮುಂದೆ ಕಷ್ಟಪಡಬೇಕಾದೀತು.

     ಬೆಚ್ಚಗೆ ಬಟ್ಟೆ ಧರಿಸಿ ಹೊದ್ದು ಮಲಗಿದ್ದ ಮಕ್ಕಳನ್ನು ಸ್ನಾನಕ್ಕೆ ಸೀದಾ ಕರೆದೊಯ್ಯದೆ, ನಿಧಾನವಾಗಿ ಬಟ್ಟೆ ಸರಿಸಿ, ಮೆಲುವಾಗಿ ಹಾಡನ್ನು ಗುನುಗುತ್ತಾ ಎಣ್ಣೆ ಮಸಾಜ್ ಮಾಡಬೇಕು. ಕೈ ಕಾಲುಗಳ ಚಲನೆಯ  ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡಿಸಬೇಕು. ಎಣ್ಣೆ ಹಚ್ಚುವಾಗ ಹೇಳುವಂತಹ ಹಲವಾರು ಹಾಡುಗಳು ಜನಪದದಲ್ಲಿ ಖ್ಯಾತವಾಗಿವೆ. ಅರ್ಧದಿಂದ ಒಂದು ಗಂಟೆಯವರೆಗೆ ಹಾಗೇ ಬಿಡುವುದು ಒಳಿತು. ಸ್ನಾನ ಮಾಡಿಸಲು, ಸ್ನಾನದ ನಂತರ ಬಳಸಲು ಬೇಕಾಗುವ ಸಾಮಗ್ರಿಗಳು, ಮಲಗಿಸಲು ತಯಾರಿ ಮಾಡಿಟ್ಟುಕೊಳ್ಳಬೇಕು. ನಂತರ ಸ್ನಾನಕ್ಕೆ ಕರೆದೊಯ್ಯಬೇಕು. ಆಗ ಆ ವಾತಾವರಣಕ್ಕೆ ಮಗು ಮೊದಲೇ ಹೊಂದಿಕೊಂಡಿರುವುದರಿಂದ ಅಳುವುದು ಕಡಿಮೆ.

           ರಮಾಗೆ ಸಿಸೇರಿಯನ್ ಹೆರಿಗೆಯಾಗಿತ್ತು. ಮಗುವನ್ನು ಮೂರು ತಿಂಗಳುವರೆಗೆ ರಮಾಳ ಅಮ್ಮ ಸ್ನಾನ ಮಾಡಿಸುತ್ತಿದ್ದರು.ರಮಾ ಸ್ನಾನ ಮಾಡಿಸಲು ನಾಳೆ ಕಲಿಯೋಣ.. ನಾಳೆ ಕಲಿಯೋಣ ಎಂದು ಮುಂದೂಡುತ್ತಲೇ ಇದ್ದಳು. ಒಂದು ದಿನ ಸ್ನಾನ ಮಾಡಿಸಿದಾಗ ಸಿಸೇರಿಯನ್ ಆದ ಗಾಯದ ನೋವು ತಾಳಲಾರದೆ ಮತ್ತೆ ಅಮ್ಮನಿಗೇ ವಹಿಸಿದಳು. ಅನಿರೀಕ್ಷಿತವಾಗಿ ಪತಿಯ ಮನೆಗೆ ಹೋಗುವ ದಿನ ನಿಗದಿಯಾಯಿತು. ಮಗುವನ್ನು ಸ್ನಾನ ಮಾಡಿಸಲು ಕಲಿತುಕೊಳ್ಳಲು ಸಮಯವಿರಲಿಲ್ಲ. ಗಾಯದ ನೋವೆದ್ದರೆ ಪ್ರಯಾಣಕ್ಕೆ ಕಷ್ಟ ಎಂಬ ಚಿಂತೆ. ಗಂಡನ ಮನೆಯಲ್ಲಿ ಹಿರಿಯರಿದ್ದಾರಲ್ಲ ಎಂದು ಸಮಾಧಾನಿಸಿದರು ರಮಾಳ ಅಮ್ಮ. ಗಂಡನ ಮನೆಗೆ ತೆರಳಿ ಮಗುವಿನ ಸ್ನಾನಮಾಡಿಸಬೇಕಾದಾಗ ಹಿರಿಯರು "ನನಗೆ ಮಂಡಿನೋವು. ಪುಟ್ಟ ಮಗುವನ್ನು ಜಾಗ್ರತೆಯಿಂದ ಹಿಡಿದುಕೊಂಡು ಸ್ನಾನ ಮಾಡಿಸಲು ನನ್ನ ಕೈಗಳೂ ಸಹಾ ನಡುಗುತ್ತಿವೆ. ನಾನು ನಿನಗೆ ಸಹಾಯ ಮಾಡುವೆ" ಎಂದು ಅವಳಿಗೆ ಸಹಕರಿಸಿದರು. ರಮಾ ಮಗುವನ್ನು ಸ್ನಾನ ಮಾಡಿಸಲು ಕರೆದೊಯ್ದಾಗ ಅಳಲು ಶುರುಮಾಡಿದ ಮಗು ಒಂದು ಗಂಟೆಯಾದರೂ ನಿಲ್ಲಿಸಲಿಲ್ಲ. ಮತ್ತೆ ಸುಸ್ತಾಗಿ ನಿದ್ರೆಗೆ ಜಾರಿತು. ಅರ್ಧವೇ ಗಂಟೆ ನಿದ್ರಿಸಿ ಮತ್ತೆ ಪುನಃ ಅಳಲು ಆರಂಭಿಸಿತು.

        ಅತ್ತೂ ಅತ್ತೂ ಸುಸ್ತಾದಾಗ ಗಾಬರಿಗೊಂಡ ಮನೆಯವರು ಹತ್ತಿರದಲ್ಲಿದ್ದ ವೈದ್ಯರಲ್ಲಿಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯೆ "ಸ್ನಾನ ಮಾಡಿಸುವಾಗ ಮಗುವಿನ ಕಿವಿಗೆ ನೀರು
ಹೊಕ್ಕಿದೆ." ಎಂದು ಕಿವಿಯಿಂದ ತೇವಾಂಶವನ್ನು ತೆಗೆದಾಗ ಮಗು ಅಳು ನಿಲ್ಲಿಸಿತು. ಸ್ನಾನ ಮಾಡಿಸುವಾಗ ಜಾಗರೂಕತೆ ವಹಿಸಬೇಕು ಎಂದು ಎಚ್ಚರಿಸಿದರು. "ಆಕೆಗೆ ಸ್ನಾನ ಮಾಡಿಸಲು ಅಭ್ಯಾಸವಿಲ್ಲ" ಎಂದು ಹಿರಿಯರು ಮಾತು ಮುಂದುವರಿಸಿದರು. "ಏನಮ್ಮಾ.. ನಿನ್ನ ಮಗುವನ್ನು ಸ್ನಾನ ಮಾಡಿಸಲು ನೀನು ಕಲಿತಿಲ್ವಾ..." ಎಂದು ಪ್ರಶ್ನಿಸಿದಾಗ ರಮಾ ತಲೆತಗ್ಗಿಸಬೇಕಾಯಿತು. ನೋವನ್ನು ಲೆಕ್ಕಿಸದೆ  ಅಮ್ಮನ ಬಳಿ ಕಲಿತುಕೊಂಡಿದ್ದರೆ ಈಗ ಇಂತಹ ನುಡಿ ಕೇಳುವ ಸಂದರ್ಭ ಬರುತ್ತಿರಲಿಲ್ಲ ಎಂದಿತ್ತು ಅವಳ ಒಳಮನಸ್ಸು.

          ಶಾಂತಾ ಸಹಜ ಹೆರಿಗೆಯಾಗಿ ಎರಡು ತಿಂಗಳ ಬಾಣಂತನ ಮುಗಿಸಿದಾಗ ಅಮ್ಮನ ಮಾರ್ಗದರ್ಶನದಂತೆ ಮಗುವನ್ನು ಸ್ನಾನ ಮಾಡಿಸಲು ಕಲಿತುಕೊಂಡಳು. ಒಂದು ತಿಂಗಳು ಹೀಗೇ ಮುಂದುವರಿದಾಗ ಪತಿಯ ಮನೆಗೆ ಹೋಗುವ ದಿನ ಬಂದೇ ಬಿಟ್ಟಿತು. ಪತಿಯ ಮನೆಯಲ್ಲಿನ ಹಿರಿಯರಿಗೆ ಮಗುವನ್ನು ತಾನೇ ಸ್ನಾನ ಮಾಡಿಸಿದೆ ಎಂದು ಹೇಳಿಕೊಳ್ಳುವ ಬಯಕೆ. ಏಕೆಂದರೆ ಅವರ ಮಕ್ಕಳನ್ನು ತವರಿನಲ್ಲಿ ತಾಯಿಯೂ, ಪತಿ ಮನೆಯಲ್ಲಿ ಅತ್ತೆಯೂ ಸ್ನಾನ ಮಾಡಿಸುತ್ತಿದ್ದುದರಿಂದ ಎಳೆಯ ಮಕ್ಕಳನ್ನು ಸ್ನಾನ ಮಾಡಿಸಲು ತಿಳಿದಿರಲಿಲ್ಲ. ಹೇಗೋ ಏನೋ ಎಂಬ ಆತಂಕವಿತ್ತು. ಇದನ್ನೇ ಮುಂದಿಟ್ಟುಕೊಂಡು ಓರಗಿತ್ತಿ, ನಾದಿನಿ, ನೆರೆಹೊರೆಯವರು ನೀನು ಮಗುವನ್ನು ಹೇಗೆ ಜಳಕ ಮಾಡಿಸುತ್ತಿ? ಎಂದು ರೇಗಿಸುತ್ತಿದ್ದರು. ಹಿರಿಯರು "ಮಗುವಿಗೆ ಎಣ್ಣೆ ಹಚ್ಚಿದ ನಂತರ ನೀನು ಮನೆಕೆಲಸ ಮಾಡು, ನಾನು ಜಳಕ ಮಾಡಿಸುತ್ತೇನೆ" ಎಂದು ಆಜ್ಞಾಪಿಸಿದಾಗ ಸೊಲ್ಲೆತ್ತದ ಶಾಂತಾ ನೀರು ಹದ ಮಾಡಿ ಕೆಲಸದತ್ತ ಹೊರಳಿದಳು.

        ಮಗುವನ್ನು ಬಚ್ಚಲು ಮನೆಗೆ ಕರೆದೊಯ್ದು ಸ್ನಾನ ಮಾಡಿಸುತ್ತಿದ್ದಂತೆ ಒಂದೇ ಸಮನೆ ಮಗು ಅಳಲಾರಂಭಿಸಿತು. ಶಾಂತಾಗೆ ಮಗುವಿಗೆ ಏನಾಯಿತೋ ಏನೋ.. ಎಂಬ ಆತಂಕ. "ಶಾಂತಾ ಶಾಂತಾ.."  ಎಂದು ಕೂಗಿದಾಗ ವೇಗವಾಗಿ ಧಾವಿಸಿದಳು. "ಮಗುವನ್ನು ಕವಚಿ ಹಾಕಿ ಸ್ನಾನ ಮಾಡಿಸಿದ್ದೇನೆ. ತಿರುಗಿಸಿ ಮಲಗಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ತೈಲದ ಜಿಡ್ಡಿನಿಂದ ಕೈಗಳು ಜಾರುತ್ತಿವೆ. ಮಗುವೂ ಕೊಸರಿಕೊಳ್ಳುತ್ತಿದೆ. ನೀನೇ ಬಾ.." ಎಂದಾಗ ಮಗುವನ್ನು ನೇರ ಮಲಗಿಸಿದಳು. ಮಗು ಏದುಸಿರು ಬಿಡುತ್ತಿತ್ತು. ಅವಳ ಕರುಳು ಚುರುಕ್ ಎಂದಿತು. ಹಿರಿಯರು ಮಗುವನ್ನು ಸ್ನಾನ ಮಾಡಿಸಿಯೇ ಶಾಂತಾಳ ಕೈಗೆ ಕೊಟ್ಟರು. ದಿನವೂ ಸ್ನಾನವನ್ನು ಆನಂದಿಸುತ್ತಿದ್ದ ಮಗು ಇಂದು ಅತ್ತದ್ದು ಶಾಂತಾಳಿಗೆ ಮನಕಲಕಿತ್ತು. ಪ್ರಯಾಸಪಟ್ಟು ಮಗುವನ್ನು ಮಲಗಿಸಿದಳು. ಸಂಜೆಯ ಹೊತ್ತಿಗೆ "ಮಗುವನ್ನು ನಾನೇ ಸ್ನಾನ ಮಾಡಿಸಿದ್ದು" ಎಂದು ಹಿರಿಯರು ಹಲವರಲ್ಲಿ ಹೇಳಿಕೊಂಡಾಗ ಶಾಂತಾ ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟಳು.

    ಹಿರಿಯರ ದೃಷ್ಟಿಯಲ್ಲಿ ಮಾತಿಗೆ ಬೆಲೆಕೊಡದವಳು ಎಂಬ ಪಟ್ಟ ಸಿಕ್ಕರೂ ಸರಿ. ನನ್ನ ಮಗುವನ್ನು ಜಳಕಮಾಡಿಸಲು ತಿಳಿಯದಿದ್ದವರ ಕೈಗೆ ಕೊಡಲಾರೆ. ಮಗುವಿನ ಲಾಲನೆ ಪಾಲನೆ ನನ್ನ ಜವಾಬ್ದಾರಿ ಎಂದು ದೃಢ ಮನಸ್ಸು ಮಾಡಿದಳು. ಮರುದಿನವೂ ಹಿಂದಿನ ದಿನದಂತೆಯೇ ಹಿರಿಯರು ಆಜ್ಞಾಪಿಸಿದರೂ ಕಿವಿಗೆ ಹಾಕಿಕೊಳ್ಳದೆ ತಾನೇ ಜಳಕ ಮಾಡಿಸಿದಳು. ಮಗು ಕೈ ಕಾಲು ಬಡಿದು ಸ್ನಾನದ ಸುಖವನ್ನು ಅನುಭವಿಸಿತು. ಸ್ನಾನ ಮಾಡಿ ಬಂದು ಸುಖನಿದ್ರೆಗೆ ಜಾರಿತು.

      ಮಗುವಿಗೆ ಸ್ನಾನಮಾಡಿಸಲು ಆರಂಭದಲ್ಲಿ ಅನುಸರಿಸಿದ ವಿಧಾನವನ್ನೇ ಐದಾರು ತಿಂಗಳವರೆಗೆ ಅನುಸರಿಸಿದರೆ ಒಳ್ಳೆಯದು. ಒಮ್ಮಿಂದೊಮ್ಮೆಲೇ ಬದಲಾವಣೆಯಾದಾಗ ಅತಿಯಾದ ಅಳು, ಸರಿಯಾಗಿ ನಿದ್ರೆ ಮಾಡದಿರುವುದು, ಕಿವಿಗೆ ನೀರು ಸೇರಿಕೊಳ್ಳುವುದು, ಕಣ್ಣಿಗೆ ಸಾಬೂನಿನ ನೊರೆ ಸೇರಿಕೊಳ್ಳುವುದು, ಶೀತವಾಗುವುದು.. ಇತ್ಯಾದಿ ತೊಂದರೆಗಳಾಗಬಹುದು. ಆದ್ದರಿಂದ ಸ್ನಾನದ ಕೈ ಬದಲಾವಣೆಗೂ ಮುನ್ನ ಸರಿಯಾಗಿ ಆಲೋಚಿಸಿ. ಅಮ್ಮಂದಿರು ಬಾಣಂತನ ಮುಗಿದಾಗ ಮಗುವನ್ನು ಸ್ನಾನಮಾಡಿಸಲು ಕಲಿತುಕೊಂಡರೆ ಮುಂದೆ ಹೆಚ್ಚು ತಲೆಕೆಡಿಸಿಕೊಳ್ಳುವ ಸಂದರ್ಭ ಬರಲಾರದು.

        ಸ್ನಾನವೆಂಬುದು ತಾಯಿ ಮಗುವಿನ ಬಾಂಧವ್ಯವನ್ನು ಬಲಗೊಳಿಸುತ್ತದೆ. ಮಗುವಿನ ಆರೋಗ್ಯದ, ಅಭಿರುಚಿಯ ಸೂಕ್ಷ್ಮ ಅಂಶಗಳನ್ನು ತಿಳಿದಿರುವವಳು ಅಮ್ಮ. ಅದಕ್ಕೆ ತಕ್ಕಂತೆ ಮಗುವಿಗೆ ನೀರು ಎಷ್ಟು ಬಿಸಿ ಬೇಕು, ತಲೆಗೆ ಸ್ನಾನ ಮಾಡಿಸಬೇಕಾ ಬೇಡವಾ, ಸ್ನಾನವಾದ ತಕ್ಷಣ ತಲೆ ಒರೆಸುವುದು, ಮಗುವಿನ ಮೈಯನ್ನು ಒರೆಸಿ ಬಟ್ಟೆಯಿಂದ ಸುತ್ತಿ ಬೆಚ್ಚಗಿರಿಸುವುದು.. ಇದನ್ನೆಲ್ಲ ಕಾಳಜಿವಹಿಸಿ ಮಾಡಲು ಅಮ್ಮನೇ ಸೈ. ಕೆಲವರು "ನಾನು ಮಗುವನ್ನು ಸ್ನಾನ ಮಾಡಿಸಿಲ್ಲ. ಮನೆಕೆಲಸದಾಕೆಯೇ ಸ್ನಾನ ಮಾಡಿಸುವುದು" ಎಂದು ಹೇಳುತ್ತಾ ಬೀಗುತ್ತಾರೆ. ಎಳೆಯ ಮಕ್ಕಳನ್ನು ಸ್ನಾನ ಮಾಡಿಸುವುದೂ ಒಂದು ಕಲೆ , ಕೌಶಲ್ಯ. ಮಕ್ಕಳು ದೊಡ್ಡವರಾದ ಮೇಲೆ "ಛೇ..!! ಮಗುವನ್ನು ಸ್ನಾನ ಮಾಡಿಸಲು ನಾನು ಕಲಿಯಲೇಯಿಲ್ಲ" ಎಂದು ಕೊರಗಿದರೆ ಆ ದಿನಗಳು ಮತ್ತೆ ಮರಳಲಾರವು. ಗೃಹಿಣಿಯೊಬ್ಬಳು ಅಡುಗೆ, ಮನೆಕೆಲಸದಲ್ಲಿ ಹಿಡಿತ ಸಾಧಿಸುವಂತೆ ತನ್ನ ಮಗುವಿನ ಸ್ನಾನದ ವಿಷಯದಲ್ಲೂ ಪರಿಣಿತಳಾಗಬೇಕು.

✍️... ಅನಿತಾ ಜಿ.ಕೆ.ಭಟ್.
02-11-2020.




No comments:

Post a Comment