Thursday, 29 July 2021

ಹಕ್ಕಿಯೊಂದು ಗೂಡುಕಟ್ಟಿ

 


ಹಕ್ಕಿಯೊಂದು ಗೂಡುಕಟ್ಟಿ

ಹೊಸದು ಮನೆಯ ಕಟ್ಟುವಾಗ
ಬಹಳ ಖುಷಿಯಲಿ
ಇಟ್ಟೆವೊಂದು ರಂಧ್ರಜಾಗ
ಗೋಡೆ ಬದಿಯಲಿ||೧||

ಮನೆಯ ಸುತ್ತ ನೆಟ್ಟ ಗಿಡವು
ಚಿಗುರಿ ಹಬ್ಬಿತು
ಹೂವುಹಣ್ಣು ಮಾಗಿ ತೂಗಿ
ತಂಪು ತಬ್ಬಿತು||೨||

ಸಂದಿಯಲ್ಲಿ ಹಕ್ಕಿಯೊಂದು
ಪುಟ್ಟ ಗೂಡುಕಟ್ಟಿತು
ಹಲವು ಕಡ್ಡಿ ಹೆಕ್ಕಿ ತಂದು
ಮೆತ್ತೆ ಹಾಸಿತು||೩||

ಹಣ್ಣು ತಿಂದು ನಲಿವಿನಿಂದ
ಅಚ್ಚಬಿಳಿಯ ಮೊಟ್ಟೆಯಿಟ್ಟಿತು
ಗೂಡಿನಲ್ಲಿ ಗಂಡುಹಕ್ಕಿ
ಕಾವಲಿದ್ದಿತು||೪||

ಮೊಟ್ಟೆಯೊಡೆದು ಪುಟ್ಟಹಕ್ಕಿ
ಚಿಂವ್ ಚಿಂವ್ ಎಂದಿತು
ಮರಿಯ ಬೆಳೆಸಿ ತಾಯಿ ಹಕ್ಕಿ
ಹರುಷ ತುಂಬಿತು||೫||

ಗಿಡಕೆ ನೀರು ಖಗಕೆ ಕಾಳು
ದಿನವು ಕೊಡುತಲಿ
ಮನೆಯ ಸುತ್ತ ಮುತ್ತ  ನೆರಳು
ಹಸಿರು ಚಿಲಿಪಿಲಿ||೬||

✍️... ಅನಿತಾ ಜಿ.ಕೆ.ಭಟ್.
24-07-2021.

Saturday, 24 July 2021

ಗುರು ನಮನ




🌹ಗುರು ನಮನ🌹
"""'"''""""""""""""""""""""

ದೀನರಾ ಮೊರೆಯ
ಆಲಿಸುವ ಹೊಣೆಯ
ಹೊತ್ತಿರುವೆ ಗುರುವರ್ಯ
ಗುರುಪೀಠಕೆನ್ನ ಸಾಷ್ಟಾಂಗ ನಮನ||

ಕಾರಿರುಳ ಹಾದಿಯಲಿ
ತೋರಿ ಬೆಳಕ ಕಿರಣ
ಕಾದಿರುವೆ ಸಕಲರಲಿ
ತೋರುತಲಿ ಕರುಣ||

ಸಂಸ್ಕೃತಿಯ ನೆನಪು
ಕರುತರುಗಳ ಭವಿತವ್ಯ
ಹರಡಿಸುತ ಜ್ಞಾನದ ಕಂಪು
ಶಿಷ್ಯರ ಪೊರೆವ ಪರಿ ಅನನ್ಯ||

ಸರ್ವರೊಳು ಸಮಭಾವ
ಸಂಘಟನೆಯ ಬಲವೃದ್ಧಿ
ಮರೆಯಾಗಿದೆ ಅಭಾವ
ನಂಬಿಬಂದರೆ ಸಮೃದ್ಧಿ||

ಶ್ರೀರಾಮನ ಪೂಜಿಸುವ
ಚಂದ್ರಮೌಳಿಯ ಆರಾಧಿಸುವ
ಭಕ್ತರ ಕೈಬಿಡದೆ ಸಲಹುವ
ಗುರುಪೀಠಕೆನ್ನ ಸಾಷ್ಟಾಂಗ ನಮನ||

                       🙏

✍️... ಅನಿತಾ ಜಿ.ಕೆ.ಭಟ್.
16-07-2019.

Wednesday, 21 July 2021

ಎಳೆಯ ತರಳೆ- ಸಾಂಪ್ರದಾಯಿಕ ಶೈಲಿಯ ಹಾಡು

 


#ಎಳೆಯ ತರಳೆ

ಮನೆಮನವ ಬೆಳಗಿರುವ ಹೊನ್ನಪ್ರಭೆಯಿವಳು
ರಕ್ಷಿಸಿರಿ ಮಮತೆಯಲಿ ಕುಂದದಂತೆ ನಗೆಮುಗುಳು||ಪ||

ಕಷ್ಟಗಳ ಕಾಣದೆಯೇ ತನ್ನಿಷ್ಟದಂತೆ ಬೆಳೆದಿಹಳು
ಮುಷ್ಟಿನೋವನು ಕೂಡಾ ತಾಳದವಳು
ಹಿರಿಯರಿಗೆ ಕೈಮುಗಿವ ಸಂಸ್ಕಾರ ನಡೆಯವಳು
ಇರಿವ ಮಾತಿಗೆ ಮರುಗಿ ಸೊರಗುವವಳು||೧||

ತಪ್ಪುಮಾಡಿದರಿವಳ ಒಪ್ಪಿ ಮನ್ನಿಸುವ ಮನವು
ಇಪ್ಪುದು ನಿಮ್ಮಲ್ಲಿ ಬಂಧುಜನರೇ
ಇಪ್ಪತ್ತುತುಂಬಲು ಇಹುದು ಇನ್ನೆರಡುವರುಷವು
ಸುಪ್ಪತ್ತಿಗೆಯಿನ್ನು ನಿಮ್ಮ ಪ್ರೀತಿಬೆಸುಗೆಗಳು||೨||

ಮುಡಿಗೆನಿತ್ಯ ಮಲ್ಲಿಗೆಯ ಮುಡಿಸದಿದ್ದರು ಕಾಂತ
ಸಿಡಿಮಿಡಿದು ನೋಯಿಸುತ ನುಡಿಯದಿರಲಿ
ಬಡಿಸುವಳು ಒಡಲಸುಖ ಮಡಿಲತುಂಬುತ್ತ
ಹಡೆದು ಬೆಳೆಸುವಳು ನಿಮ್ಮ ಸತ್ಕುಲವ||೩||

ಅನುಗಾಲ ನಿಮ್ಮವಳು ಅನುಸರಿಸಿ ಬರುವವಳು
ಅನುರೂಪ  ಸಾಂಗತ್ಯದಿ ಪತಿಯನೆರಳೇ
ಅನುದಿನವು ಪಾಲಿಸಿರಿ ಅನುಕ್ಷಣವು ಮೈಮರೆಯದೆಯೆ
ಅನುಪಮ ಕೋಮಲೆಯು ಎಳೆಯತರಳೆ||೪||

ಕರುಳಬಳ್ಳಿಯನಿಮಗೆ ಒಪ್ಪಿಸುವೆವೀ ಸುದಿನ
ತೌರನೆನಪಿನ ಕೊರಗು ಕಾಡದಂತೆ
ಕರಗಳಲಿ ಕರವಿಟ್ಟು ಬೇಡಿಕೊಳ್ಳುವೆವಿಂದು
ಸಿರಿಕುವರಿಯ ಕಾಣಿ ನಿಮ್ಮಮಗಳಂತೆ||೫||

✍️... ಅನಿತಾ ಜಿ.ಕೆ.ಭಟ್.
17-07-2021.

#ಸಾಂಪ್ರದಾಯಿಕ ಶೈಲಿಯ ಮದುವೆಯ ಹಾಡು..
#ಹೆಣ್ಣೊಪ್ಪಿಸಿಕೊಡುವ ಹಾಡು.

Saturday, 17 July 2021

ಅಮ್ಮಾ ನಾನು ದೊಡ್ಡೋನಾಗಿ

 


ಅಮ್ಮಾ ನಾನು ದೊಡ್ಡೋನಾಗಿ...
(ಅಮ್ಮಾ ನಾನು ದೊಡ್ಡೋಳಾಗಿ)

ಅಮ್ಮಾ ನಾನು ದೊಡ್ಡೋನಾಗಿ
ನೌಕರಿ ಮಾಡುವೆ
ಕೈತುಂಬಾ ಸಂಬಳ ಪಡೆದು
ನಿಮ್ಮ ಚೆಂದದಿ ಸಲಹುವೆ||೧||

ಅಮ್ಮಾ ನಾನು ದೊಡ್ಡೋನಾಗಿ
ಬಿಸ್ನೆಸ್ ಮಾಡುವೆ
ಬಡವರನೆಲ್ಲಾ ಕರೆದು
ದಾನ ಧರ್ಮ ಮಾಡುವೆ||೨||

ಅಮ್ಮಾ ನಾನು ದೊಡ್ಡೋನಾಗಿ
ಕೃಷಿಕನಾಗುವೆ
ವಿಷವನುಣಿಸದೆ ಆಹಾರವನು
ಬೆಳೆದು ಮಾರುವೆ||೩||

ಅಮ್ಮಾ ನಾನು ದೊಡ್ಡೋನಾಗಿ
ಪೋಲೀಸಾಗುವೆ
ಕಳ್ಳರನೆಲ್ಲ ಬೇಗನೆ ಹಿಡಿದು
ಜೈಲಿಗಟ್ಟುವೆ||೪||

ಅಮ್ಮಾ ನಾನು ದೊಡ್ಡೋನಾಗಿ
ಸೈನಿಕನಾಗುವೆ
ದೇಶದ್ರೋಹಿಗಳ ಹೆಡೆಮುರಿದು
ಮಾತೆಯ ಸೇವೆ ಮಾಡುವೆ||೫||

ಅಮ್ಮಾ ನಾನು ದೊಡ್ಡೋನಾಗಿ
ರಾಜಕಾರಣಿಯಾಗುವೆ
ಪ್ರಾಮಾಣಿಕವಾಗಿ ದೇಶದ ಜನರ
ಸೇವೆಯ ಮಾಡುವೆ||೬||

(ಇನ್ನು ಮುಂದೆ ಯಾವುದು ಬೇಕೋ ಅದನ್ನು ಸೇರಿಸಿ ಮಕ್ಕಳಿಗೆ ಅಭ್ಯಾಸ ಮಾಡಿಸಬಹುದು)

✍️...ಅನಿತಾ ಜಿ.ಕೆ.ಭಟ್.
15-07-2021.

#momspressoshortstories
#momspresso kannada ದ ಶಿಶುಗೀತೆ ರಚನಾ ಸವಾಲಿಗಾಗಿ ರಚಿಸಿರುವ ಶಿಶುಗೀತೆ.

Friday, 16 July 2021

ಅನುಕರಣಾ ಪದಮಾಲೆ

 



#ಅನುಕರಣಾ ಪದಮಾಲೆ

ಸುತ್ತಲ ಜನಕೆ ಬೆಳಗನು
ಸಾರಿದೆ ಕೊಕ್ಕೊಕ್ಕೋ..ಕೋಳಿ
ಮಾಮರದಲಿ ಕುಹೂ ಕುಹೂ..
ಕೋಗಿಲೆ ರಾಗವ ಕೇಳಿ||೧||

ಢಣಢಣ ಘಂಟಾನಾದವ
ಗೈಯುತ ಸಾಗಿದೆ ದೇವರ ಪೂಜೆ
ಜೈಜೈ ತಾಳವ ತಟ್ಟುತ ಹಾಡುವ
ಅಜ್ಜಿಯ ನಿತ್ಯದ ಭಜನೆ||೨||

ಸುಂಯ್ ಸುಂಯ್ ಬೀಸುವ
ತಣ್ಣನೆಗಾಳಿಗೆ ಧಗೆಯದು ಮಾಯ
ಗುಡುಗುಡು ಗುಡುಗಿ ಫಳಫಳ
ಮಿಂಚುತ ಬರುವನು ಮಳೆರಾಯ||೩||

ಕರಕರ ಎನ್ನುತ ನೀರಲಿ ಹಾರುತ
ಆಡುವ ಕಪ್ಪೆಯ ಕೇಕೆ
ಕಾಗೆಯು ಜೋರಲಿ ಕಾಕಾ ಕೂಗಿ
ಬಳಗವ ಕರೆವುದು ಸಂಗಡಕೆ||೪||

ಮಿಯಾಂವ್ ಮಿಯಾಂವ್ ಎನ್ನುತ
ಹಸಿದಿಹಬೆಕ್ಕು ಸುಳಿವುದು ಕಾಲಿನಸುತ್ತ
ಅಂಬಾ..ಎನ್ನುವ ಕರುವಿನ ಕೂಗಿಗೆ
ಓಗೊಡುತಿದೆ ಹಸು ಅಂಬಾ.. ಎನ್ನುತ್ತಾ||೫||

ಯಾರೇ ಬರಲಿ ಬೌಬೌ ಬೊಗಳುವ
ನನ್ನಯ ಪ್ರೀತಿಯ ಟಾಮಿ
ನನ್ನನು ಕಂಡರೆ ಕುಂಯ್ ಕುಂಯ್ ಎಂದು
ಬಾಲವ ಕುಣಿಸುವ ಆಸಾಮಿ||೬||

ಕಿರ್ ಕಿರ್ ಎನ್ನುವ ರಾಟೆಯ ಬಳಸಿ
ಅಮ್ಮನು ನೀರನು ಸೇದುವಳು
ಕಿಣಿಕಿಣಿ ಕೈ ಬಳೆ, ಘಲ್ ಘಲ್ ಗೆಜ್ಜೆ
ಸದ್ದಲಿ ಬರುವಿಕೆ ಅರಹುವಳು||೭||

ಜಾಳಂ ಬೋಳಂ.. ಕಡೆಗೋಲಲಿ
ಮೊಸರನು ದಿನವೂ ಕಡೆಯುವಳು
ಚುಂಯ್ ಚುಂಯ್ ದೋಸೆಯ ಮೇಲೆ
ಘುಮಘಮ ತುಪ್ಪವ ಸವರುವಳು
ಅಮ್ಮ ಬಿಸಿಬಿಸಿ ದೋಸೆಯ ಬಡಿಸುವಳು||೮||

✍️... ಅನಿತಾ ಜಿ.ಕೆ.ಭಟ್.
16-07-2021.


#momspressoshortstories

#momspressokannada ದ "ಶಿಶುಗೀತೆ" ಸವಾಲಿಗಾಗಿ ಅನುಕರಣಾವ್ಯಯಗಳನ್ನು ಬಳಸಿ ರಚಿಸಿರುವ ಶಿಶುಗೀತೆ.


Thursday, 15 July 2021

ಓ ಮನಸೇ...

 


#ಓ ಮನಸೇ...

ಮರೆಯಹೊರಟ ನೂರು ನೆನಪ
ಮತ್ತೆ ಏಕೆ ಕೆದಕುತಿ
ತೊರೆಯಬಿಡದೆ ಚಿತ್ತ ಮುತ್ತಿ
ಓ ಮನಸೇ.. ಏಕೆ ಕೆಣಕುತಿ?||೧||

ಆಳದಲ್ಲಿ ಬೀಡುಬಿಟ್ಟ ಸವಿಯ
ಮೆಲ್ಲ ಏಕೆ ಮರೆಸುತಿ
ಮಧುರ ಕ್ಷಣದ ಮೆಲುಕನೆಲ್ಲ
ಓ ಮನಸೇ.. ಏಕೆ ದೂರತಳ್ಳುತಿ?||೨||

ದುಗುಡವಿರದ ಬಾಳ ಹಾದಿಯ
ನಿತ್ಯ ಏಕೆ ಬಯಸುತಿ
ಸುಖದ ಮಹಲಿನಲ್ಲಿ ನೋವ
ಓ ಮನಸೇ.. ಏಕೆ ಅರಸುತಿ?||೩||

✍️... ಅನಿತಾ ಜಿ.ಕೆ.ಭಟ್. 15-07-2021.

Tuesday, 13 July 2021

ಪುಟ್ಟನ ಉಗುರು

 


#ಪುಟ್ಟನ ಉಗುರು

ನಮ್ಮನೆ ಪುಟ್ಟಂಗ್ ಉಗುರು ಕಚ್ಚೋ ಕೆಟ್ಟ ಅಭ್ಯಾಸ
ಆಗಾಗ್ ನೋಡಿ ಎಚ್ಚರಿಸ್ತಿದ್ದೆ ಬಹಳಾನೇ ದಿವಸ||೧||

ಉಗುರು ಕಚ್ಚೋದ್ ಒಳ್ಳೇದಲ್ಲ ಪ್ರೀತೀಲಿ ಹೇಳ್ದೆ
ಆರೋಗ್ಯ್ ಹಾಳಾಗುತ್ತೆ ಕಂದಾ ಅಂತಾನೇ ಇದ್ದೆ||೨||

ಏನೋ ಬೇರು ತಂದ್ ಅರ್ದು ಮೆಲ್ಲ ಹಚ್ಬಿಟ್ಟೆ
ಛೀ ಛೀ..ಎನ್ನುತಲೋಡಿ ತೊಳ್ಕೊಂಡೇಬಿಟ್ಟ||೩||

ಅಜ್ಜೀನ್ ಕೇಳಿದ್ರೆ ಹಾಗಲಸೊಪ್ಪ್ ಜಜ್ಜಿ ತಂದ್ಕೊಟ್ರು
ಹಚ್ತಿದ್ಹಂಗೇ ಕಹಿ ಕಹಿ.. ಎನ್ನುತಲೋಡಿ ಸೋಪ್ಹಾಕಿ ತೊಳ್ದ||೪||

ಡಾಕ್ಟ್ರನ್ ಕೇಳಿದ್ರೆ ಕ್ಯಾಲ್ಸಿಯಂ ಕೊರ್ತೆ ಭಾರೀ ಅಂತಂದ್ರು
ತಿಂಗಳಿಗೆಂದು ಮಾತ್ರೆಸಿರಪ್ ಎಲ್ಲಾ ಕೊಟ್ಟ್ಬಿಟ್ಟ್ರು||೫||

ಮದ್ದ್ ಕುಡಿಸೋಕ್ ಹೊರಟಾಗ್ಲಂತೂ ಏನೇನೋ ಕ್ಯಾತೆ
ಅಷ್ಟೂ ಔಷ್ಧಿಕುಡ್ಸಿದಾಗ ನಾ ಹೋದೆ ಸೋತೇ||೬||

ಕಣ್ಣ್ ಕೆಂಪ್ ಮಾಡಿನೋಡಿ ಗದರಿಸ್ತಾ ಇದ್ದೆ
ಏನ್ಮಾಡಿದ್ರೂ ಬಿಡ್ದೇ ಇದ್ದಾಗ್ ಚಿಂತೇಲೀ ಬಿದ್ದೆ||೭||

ಗಿಡ್ಗಳಿಗಂತ ಹಿಂಡಿಸೆಗ್ಣಿ ನೀರಲ್ನೆನ್ಸಿ ಇಟ್ಟಿದ್ದೆ
ಗೊತ್ತಾಗ್ದಂಗೇ ಮೆಲ್ಲಗವ್ನ ಕೈಗೆ ಮುಟ್ಸಿದ್ದೆ||೮||

ಅಬ್ಬಾ ವಾಸ್ನೆ..ವಾಸ್ನೆ.. ಇನ್ನ್ ಹಚ್ಬೇಡ ಜೋರಾಗಿ ಕೂಗ್ದ
ಆಮೇಲಿಂದ ಉಗುರು ಕಚ್ಚೋದ್ ಪೂರ್ತಿ ನಿಲ್ಲಿಸ್ದ||೯||

ಈಗ್ ಉಗುರ್ ಉದ್ದ ಬೆಳೆದ್ ಕೂಡ್ಲೇ ತಪ್ದೇ ಹೇಳ್ತಾನೆ ||
ಉಗುರನ್ನ್ ಹದವಾಗ್ ಕತ್ತರಿಸ್ಕೊಂಡು ಶುಚಿಯಾಗಿಡ್ತಾನೆ||೧೦||


✍️... ಅನಿತಾ ಜಿ.ಕೆ.ಭಟ್.
14-07-2021.

Sunday, 11 July 2021

ನಮ್ಮ ಶಾಲೆ

 



#ನನ್ನ ಶಾಲೆ

ಊರ ನಡುವಿನ ಬೆಟ್ಟದಲ್ಲಿ
ನನ್ನ ಶಾಲೆಯು ನಿಂತಿದೆ
ಹೂವು ಹಣ್ಣಿನ ತೋಟದ
ಮಧ್ಯದಲಿ ತಲೆಯೆತ್ತಿದೆ||೧||

ದೊಡ್ಡ ಬಯಲಿದೆ ಶಾಲೆಯೆದುರಲಿ
ಕೂಡಿ ಆಡಿ ನಲಿಯಲು
ಧ್ವಜಸ್ತಂಭವು ನಮಗೆ ಕಲಿಸಿದೆ
ಭಕ್ತಿಭಾವದಿ ನಮಿಸಲು||೨||

ಕರಿಯ ಹಲಗೆಯ ಮುಂದೆ
ಕುಳಿತು ಓದುಬರಹ ಕಲಿವೆವು
ಸರಿಯ ಮಾರ್ಗದಿ ನಡೆಯೆ ಗುರುಗಳು
ನೀತಿ ಕಥೆಯನು ಪೇಳ್ವರು||೩||

ರಂಗಮಂಟಪ ಸ್ಫೂರ್ತಿಯಾಗಿದೆ
ಪ್ರತಿಭೆಗಳು ಹೊರಹೊಮ್ಮಲು
ಹಲವು ತೆರದಲಿ ಸ್ಪರ್ಧೆಯೊಡ್ಡಿ
ಛಲವ ಮನದಲಿ ಬಿತ್ತಲು||೪||

ಮೇಲುಕೀಳು ಭೇದವಿರದೆ
ಸಮವಸ್ತ್ರವ ತೊಡುವೆವು
ಸಾಲುಕುಳಿತು ಎಲ್ಲರೊಡನೆ
ಬುತ್ತಿಯುಣ್ಣುತ ಹರಟುವೆವು||೫||

ಶಿಸ್ತು ಸಂಯಮ  ಕಾರ್ಯದಕ್ಷತೆ
ಶ್ರೇಷ್ಠ ಗುಣವನು ಬಿತ್ತಿದೆ
ನ್ಯಾಯ ನೀತಿ ಬದುಕ ಪಾಠವು
ಎಳೆಯ ಮನಸಲಿ ಅಚ್ಚೊತ್ತಿದೆ||೬||

ಮುಗ್ಧ ಮಕ್ಕಳು ಕಲಿತು ಬೆರೆಯುವ
ಶಾಲೆ ಶಾರದಾ ಮಂದಿರ
ಮೊಳಕೆಯಲ್ಲಿ ತಿದ್ದಿತೀಡಿ ಬೆಳೆದಿಹ
ಮಕ್ಕಳ ಬಾಳೇ ಸುಂದರ||೭||

✍️... ಅನಿತಾ ಜಿ.ಕೆ.ಭಟ್.

ಚಿತ್ರ ಕೃಪೆ- ಅಂತರ್ಜಾಲ.