Wednesday, 9 October 2019

ಮಂಗಳೂರು ದಸರಾ ವೈಭವ

ನವರಾತ್ರಿ ಉತ್ಸವ ಎಂದರೆ ನಮ್ಮಲ್ಲಿ ಹಬ್ಬಗಳಲ್ಲೇ ಅತ್ಯಂತ ವೈಭವೋಪೇತವಾಗಿ ಒಂಭತ್ತು ದಿನಗಳ ಪರ್ಯಂತ ನಡೆಯುವ ಹಬ್ಬ.ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಸಂಭ್ರಮ,ಸಡಗರ.ಅಶ್ವಯುಜ ಮಾಸದ ಪ್ರಾರಂಭದ ಒಂಭತ್ತು  ರಾತ್ರಿಗಳನ್ನು ನವರಾತ್ರಿ ಹಬ್ಬವೆಂದು ಆಚರಿಸಲಾಗುವುದು.ಆಶ್ವಯುಜ, ಕಾರ್ತಿಕ ಮಾಸಗಳು ಶರತ್ಕಾಲದಲ್ಲಿ ಬರುವುದರಿಂದ ಶರನ್ನವರಾತ್ರಿ ಎಂದೂ ಕರೆಯುವ ರೂಢಿಯಿದೆ.


ನಮ್ಮ ಕರಾವಳಿಯಲ್ಲಿ ನವರಾತ್ರಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.ಮನೆಗಳಲ್ಲಿ ಹಬ್ಬದ ಆಚರಣೆ ಒಂದು ರೀತಿಯಿದ್ದರೆ ..ಸಾರ್ವಜನಿಕವಾಗಿ ಇನ್ನೂ ವಿಶೇಷವಾಗಿ ಆಚರಿಸಲ್ಪಡುತ್ತದೆ.

ಮಂಗಳೂರು ದಸರಾ:-

'ಮಂಗಳೂರು ದಸರಾ' ಎಂದರೆ ರಾಜ್ಯದಲ್ಲಿ ಎರಡನೇ ಅತಿದೊಡ್ಡ ದಸರಾ ಮಹೋತ್ಸವ.ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಮುಂಭಾಗದಲ್ಲಿ ಇರುವ ದರ್ಬಾರು ಮಂಟಪದಲ್ಲಿ ಮಹಾಗಣಪತಿ,ಶಾರದೆ ಹಾಗು ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮ ಚಾರಿಣಿ,ಚಂದ್ರಘಂಟಾ,ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯಿನಿ,ಕಾಲರಾತ್ರಿ,ಮಹಾಗೌರಿ ಹಾಗೂ ಸಿದ್ಧಿದಾತ್ರಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.ವೀಣೆನುಡಿಸುತ್ತಿರುವ ಶಾರದಾಮಾತೆಯ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸುತ್ತಾರೆ.ಇದು ಸುಮಾರು ಇಪ್ಪತ್ತೇಳು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಒಂಬತ್ತು ದಿನಗಳು ಕೂಡಾ ಅನ್ನಸಂತರ್ಪಣೆ ನಡೆಯುತ್ತದೆ.ದಸರಾದ ಅಂಗವಾಗಿ 'ಗಂಗಾವತರಣ'ಕೂಡ ವ್ಯವಸ್ಥೆ ಮಾಡಲಾಗುವುದು.ಇದರಲ್ಲಿ 13 ಅಡಿ ಎತ್ತರದ ಶಿವನ ನಾಲ್ಕು ವರ್ಣರಂಜಿತ ವಿಗ್ರಹಗಳಿರುತ್ತವೆ ..ಕಾರಂಜಿಯು ಬಣ್ಣಬಣ್ಣದ ದೀಪಾಲಂಕಾರದಿಂದ ಮನಸೆಳೆಯುತ್ತದೆ . ಮಕ್ಕಳು ಬಹಳ ಇಷ್ಟಪಡುತ್ತಾರೆ.ಸಾಂಸ್ಕೃತಿಕ, ಕಲಾಪ್ರದರ್ಶನಕ್ಕೆ ಭವ್ಯವೇದಿಕೆಯನ್ನು ಕಲ್ಪಿಸುತ್ತಾರೆ.ದೇಶವಿದೇಶಗಳ ಭಕ್ತರು ಆಗಮಿಸುತ್ತಾರೆ.

ದೇವಾಲಯದ ಮುಖ್ಯ ದ್ವಾರದಿಂದಲೇ ವರ್ಣರಂಜಿತ ಅಲಂಕಾರ,ವಿದ್ಯುದ್ದೀಪಗಳು ಮನಸೂರೆಗೊಳ್ಳುತ್ತವೆ.ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ.ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುದ್ದೀಪಗಳ ಅಲಂಕಾರ ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ.. ಇಡೀ ನಗರವೇ ಹಬ್ಬದ ವಾತಾವರಣವನ್ನು ಬಿಂಬಿಸುತ್ತದೆ.

ಒಂಬತ್ತು ದಿನಗಳ ಪೂಜೆಯ ನಂತರ ವಿಜಯದಶಮಿಯಂದು ಸಂಜೆ ನಾಲ್ಕು ಗಂಟೆಗೆ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಮುಂಭಾಗದಿಂದ ಮೆರವಣಿಗೆ ಆರಂಭವಾಗುತ್ತದೆ.ನವದುರ್ಗೆ, ಮಹಾಗಣಪತಿ ಹಾಗೂ ಶಾರದಾ ದೇವಿಯ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ . ವಿಗ್ರಹಗಳು ಹೂವು,ಛತ್ರಿಗಳಿಂದ ಅಲಂಕಾರಗೊಂಡು ಕಣ್ಮನ ಸೆಳೆಯುತ್ತವೆ.ಮೆರವಣಿಗೆಯಲ್ಲಿ ಡೋಲು,ಚೆಂಡೆ,ಯಕ್ರಗಾನದ ಪಾತ್ರಗಳು,ಜಾನಪದ ನೃತ್ಯಗಳು,ಹುಲಿವೇಷದ ತಂಡಗಳು,ನಾನಾ ಟ್ಯಾಬ್ಲೋಗಳು ಭಾಗವಹಿಸಿ ಧಾರ್ಮಿಕ, ಸಾಂಸ್ಕೃತಿಕ ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ.

ಮೆರವಣಿಗೆ ಕುದ್ರೋಳಿ,ಮಣ್ಣಗುಡ್ಡ, ಲೇಡಿ ಹಿಲ್, ಲಾಲ್ಬಾಗ್,ಕೆ.ಎಸ್ . ರಾವ್.ರಸ್ತೆ, ಹಂಪನಕಟ್ಟೆ,ಕಾರ್ ಸ್ಟ್ರೀಟ್ ಮೂಲಕ ಮರುದಿನ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಪುಷ್ಕರಿಣಿಯಲ್ಲಿ ವಿಗ್ರಹಗಳ ವಿಸರ್ಜನೆಯಲ್ಲಿ ಕೊನೆಗೊಳ್ಳುತ್ತದೆ.ಇದರಲ್ಲಿ ವಿಶೇಷತೆ ಎಂದರೆ ಮೆರವಣಿಗೆಯಲ್ಲಿ ಸರ್ವಧರ್ಮೀಯರೂ ಪಾಲ್ಗೊಳ್ಳುತ್ತಾರೆ.

ಮಂಗಳಾದೇವಿ ದೇವಸ್ಥಾನ:-

ಮಂಗಳೂರಿನ ಪ್ರಮುಖ ದೇವಸ್ಥಾನ ಮಂಗಳಾದೇವಿ ದೇವಸ್ಥಾನ.ಇಲ್ಲಿ ಒಂಭತ್ತು ದಿನ ನವವಿಧದಲ್ಲಿ ದೇವಿಯನ್ನು ಅಲಂಕರಿಸುತ್ತಾರೆ .ಮಹಾನವಮಿಯಂದು ಆಯುಧಪೂಜೆ ಮಾಡಲಾಗುತ್ತದೆ.ದೇವಿ ಹಾಗೂ ರಾಕ್ಷಸರ ಮಧ್ಯೆ ಯುದ್ಧವಾಗಿ ,ದೇವಿ ಜಯಿಸಿದ ಸಂಕೇತವಾಗಿ ಈ ಪೂಜೆಯನ್ನು ಮಾಡುತ್ತಾರೆ.ಹತ್ತನೇ ದಿನ ಮಹಾರಥೋತ್ಸವ ನಡೆಯುತ್ತದೆ.ಸಹಸ್ರಾರು ಭಕ್ತರು ಆಗಮಿಸಿ ದೇವರ ಸರ್ವಾಂಲಂಕೃತವಾದ ಬಲಿಮೂರ್ತಿಯನ್ನು ರಥದ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುವುದು.. ಇದು ಪರಂಪರೆಯಿಂದಲೇ ಬಂದಿರುವ ಮಂಗಳೂರಿನ ನವರಾತ್ರಿಯ ಆಚರಣೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ:-

ನಗರದ ಹೊರವಲಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೂಡಾ ವಿಜೃಂಭಣೆಯಿಂದ ನವರಾತ್ರಿ ಮಹೋತ್ಸವ ಆಚರಿಸಲಾಗುತ್ತದೆ.ಲಕ್ಷೋಪಲಕ್ಷ ಜನ ದೇವಿಯ ದರುಶನ ಪಡೆದು ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥರಾಗುತ್ತಾರೆ.ನವರಾತ್ರಿಯ  ಲಲಿತಾಪಂಚಮಿ ದಿನ ದೇವಿಯ ಶೇಷವಸ್ತ್ರ ಪ್ರಸಾದ  ಮಹಿಳಾ ಭಕ್ತರಿಗೆ ನೀಡಲಾಗುವುದು.ಸುಮಾರು ಹದಿನೆಂಟರಿಂದ ಇಪ್ಪತ್ತು ಸಾವಿರ ಹೆಣ್ಮಕ್ಕಳು ಶೇಷವಸ್ತ್ರ ಪ್ರಸಾದ ಸ್ವೀಕರಿಸುತ್ತಾರೆ.

ನಮ್ಮ ಮನೆಯ ಆಚರಣೆ:-

ನವರಾತ್ರಿಯ ದಿನಗಳಲ್ಲಿ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ ಸೇವೆ, ದುರ್ಗಾ ಸೂಕ್ತ ಪಠಣ ನಡೆಸುತ್ತೇವೆ.ಸಪ್ತಮಿಯಂದು ಪವಿತ್ರ ಗ್ರಂಥಗಳನ್ನು ದೇವರ ಮುಂದೆ ಇರಿಸಿ ಪೂಜೆ ಸಲ್ಲಿಸುತ್ತೇವೆ.ನಾವು ಚಿಕ್ಕವರಿದ್ದಾಗ ನಮ್ಮ ಶಾಲಾ ಪಠ್ಯ ಪುಸ್ತಕಗಳನ್ನು ಕೂಡ ಇರಿಸಿ ಉತ್ತಮ ಅಂಕಗಳು ದೊರಕಲೆಂದು ಪ್ರಾರ್ಥಿಸುತ್ತಿದ್ದೆವು . ಈಗ ನಮ್ಮ ಮಕ್ಕಳಿಗೆ ಅದೇ ರೀತಿಯ ಉತ್ಸಾಹ.ಮೂರು ದಿನಗಳ ಕಾಲ ಪುಸ್ತಕಪೂಜೆ ಮಾಡಿ ವಿಜಯ ದಶಮಿಯಂದು ಪೂಜೆ ನೆರವೇರಿಸಿ ತೆಗೆಯುವುದು.. ಪ್ರತಿಯೊಬ್ಬರೂ ಪುಸ್ತಕದ ಒಂದು ಪುಟವನ್ನಾದರೂ ಆ ದಿನ ಓದಲೇಬೇಕೆಂಬ ನಿಯಮ.. ದೇವಿಗೆ ನಾನಾ ರೀತಿಯ ಭಕ್ಷ್ಯಭೋಜ್ಯಗಳ ಅರ್ಪಣೆ.ನವಮಿಯಂದು ಆಯುಧಪೂಜೆ..ನಮ್ಮ ಮನೆಯಲ್ಲಿರುವ ಕಬ್ಬಿಣದ ಸಲಕರಣೆಗಳನ್ನು, ವಾಹನಗಳನ್ನು ಚೆನ್ನಾಗಿ ತೊಳೆದು ಸರಳವಾಗಿ ಅಲಂಕರಿಸಿ, ಭಕ್ತಿಯಿಂದ ಪೂಜಿಸುತ್ತೇವೆ..

ಮಕ್ಕಳಿಗೆ ದಸರಾ ರಜೆಯಿರುವುದು ಈ ನವರಾತ್ರಿ ಹಬ್ಬಕ್ಕೆ ಇನ್ನಷ್ಟು ಮೆರುಗು ಕೊಡುತ್ತದೆ.  ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಕುಟುಂಬ ಸಮೇತರಾಗಿ ದೂರದೂರಿನಲ್ಲಿರುವ ನೆಂಟರಿಷ್ಟರು ಬರುವುದು, ಎಲ್ಲರೊಂದಿಗೆ ಬೆರೆಯುವ ಸುವರ್ಣಾವಕಾಶವನ್ನು ನವರಾತ್ರಿ ಹಬ್ಬ ಒದಗಿಸಿಕೊಡುತ್ತದೆ..

ಶಂಕರಾಚಾರ್ಯ ವಿರಚಿತ ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ ದ ಕೊನೆಯ ಎರಡು ಶ್ಲೋಕಗಳು..

ಜಗದಂಬ ವಿಚಿತ್ರಮತ್ರಕಿಂ
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ|
ಅಪರಾಧ ಪರಂಪರಾವೃತಂ ನಾ ಹಿ
ಮಾತಾ ಸಮುಪೇಕ್ಷತೇ ಸುತಂ||

ಮತ್ಸಮಃ ಪಾತಕೀ ನಾಸ್ತಿ
ಪಾಪಘ್ನೀ ತ್ವತ್ಸಮಾ ನ ಹಿ |
ಏವಂ ಜ್ಞಾತ್ವಾ ಮಹಾದೇವಿ
ಯಥಾ ಯೋಗ್ಯಂ ತಥಾ ಕುರು||

ಕರುಣಾಮಯಿ ಮಾತೆಯೇ ..ನಿನ್ನ ಕಂದನ ತಪ್ಪನ್ನು ಕ್ಷಮಿಸುವ ತಾಯೇ..ನನ್ನಂತಹ ಪಾತಕಿಗಳಿಲ್ಲ..ನಿನ್ನಂತಹ ಕ್ಷಮಯಾಧರಿತ್ರಿ ಇನ್ನೊಬ್ಬರಿಲ್ಲ. ತಾಯೇ ನಿನಗೆ ಹೇಗೆ ಸರಿ ಎನಿಸುವುದೋ ಆ ದಾರಿಯಲ್ಲಿ ನನ್ನನ್ನು ಮುನ್ನಡೆಸು..

ಎಂದು ಆ ದುರ್ಗಾ ಮಾತೆಯಲ್ಲಿ ಬೇಡುತ್ತಾ ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ..🙏

✍️... ಅನಿತಾ ಜಿ.ಕೆ.ಭಟ್.
09-10-2019.




2 comments: