Friday, 26 February 2021

ವರದಕ್ಷಿಣೆ

 


#ವರದಕ್ಷಿಣೆ

ಲಾಭವ ಲೆಕ್ಕಿಸಿ ವಿವಾಹ
ನಡೆವುದು ವರದಕ್ಷಿಣೆಯ ಪಿಡುಗಿನಲಿ
ಬಂದುದ ಎದುರಿಸಿ ಬದುಕುವರು
ಬರೆದುದು ಇಷ್ಟೇ ಹಣೆಯಲ್ಲಿ..

ನಲ್ನುಡಿ ಬಿರುನುಡಿ ಕೆಡುನುಡಿ
ಸರಿಸಮ ಬಾಳಿನ ತಕ್ಕಡಿಗೆ
ಇರುಳಿನ ತಂಪೂ ಹಗಲಿನ ಶಾಖವೂ
ಭೇದವಿರದು ಕ್ರೂರತೆಗೆ..

ಸಿರಿಯ ಮೋಹದಲಿ ಮೈಮರೆತು
ಸಂಸ್ಕೃತಿ ವಿಕೃತಿಯಾಗುತಿದೆ
ಬಣ್ಣದ ಮುಸುಕನು ಹೊದ್ದು
ದಾಂಪತ್ಯವು ಒಳಗೆ ನಲುಗುತಿದೆ..

ಬಂಧನ ಛೇದನ ಮಾಡುತ
ನಡೆದರೆ ದಾರಿಯು ಬಲುಕಷ್ಟ
ಹಠಸಾಧನೆಯೇ ಆದ್ಯತೆಯಾದರೆ
ಹೃದಯಗಳೆರಡಕೂ ನಷ್ಟ...

✍️.. ಅನಿತಾ ಜಿ.ಕೆ.ಭಟ್.
26-02-2021.
ಸವಾಲು# ಆದಿ-ಅಂತ್ಯ ವಿರೋಧ ಪದ

ಚಿತ್ರ ಕೃಪೆ:- ಅಂತರ್ಜಾಲ

Friday, 19 February 2021

ಜೀವನೋತ್ಸಾಹದ ಸಮ್ಮಿಲನ

 


#ಜೀವನೋತ್ಸಾಹದ_ಸಮ್ಮಿಲನ

ನಿಶೆಯು ಸೆರಗನು ಹಾಸಿ
ನಶೆಯ ಜಾಡನು ಬಿತ್ತಿ
ಖುಷಿಯಿಂದ ಕಣಕಣವು ಉದ್ದೀಪನ||
ಹಸಿಮೈಗೆ ನರನಾಡಿಯ
ವಶವಾಗುವ ಹುಂಬತನ
ತೃಷೆ ಹಿಂಗಿಸೋ ತವಕದಲಿ ರೋಮಾಂಚನ||೧||

ಬನದ ಸಮ ದುಂಬಿಯೊಳು
ಕನವರಿಸಿ ಕಲೆತು
ಜೇನುಣಿಸಿ ನಡುಬಳಸಿ ಬೀಜಾಂಕುರ||
ಬಾನಬಯಲಿನ ಮೋಡ
ಮನಸೋತು ಕರಗಿ
ತನ್ಮಯದಿ ಭುವಿಗಿಳಿದು ಹಾಸಿಹಸಿರ||೨||

ಮೆಲ್ಲುಸಿರ ಕಂಪನ
ಕಾಲ್ಗೆಜ್ಜೆ ವೈಯಾರ
ಮೈಲಜ್ಜೆ ಬೆರೆತ ಮಧುಸಮರ ಹರುಷ||
ಪಲ್ಲಂಗ ಬಿಸಿಯಾಗಿ
ಪಲ್ಲವಿತ ಶೃಂಗಾರ ಭಾವಸೆಲೆ
ಝಲ್ಲೆಂದು ಮರುಳಾದ ರಸನಿಮಿಷ||೩||

ಎರಡು ನಯನವೊಂದಾಗಿ
ಬರಡೆದೆಯು ಮುದದಿ ತಂಪಾಗಿ
ಗರಿಗೆದರಿ ನೆನಪಸುಳಿ ಉಷೆಯಲ್ಲಿ||
ಸರಸದುಲಿ ಬಾಹುಬಂಧನಕೆ
ಹೆರಳಲುಗಿ ಚೆಲ್ಲಿರುವ
ಸುರಚೆಲ್ವಿ ಮಲ್ಲಿಗೆಯೆ ಸಾಕ್ಷಿಯಿಲ್ಲಿ||೪||

ಸುತ್ತಲಿನ ಜಗಮರೆತು
ಕತ್ತಿನಲಿ ಮುದ್ರಿಕೆಯು
ಮುತ್ತಿಕೊಂಡಿದೆಯೆರಡು ಕೆನ್ನೆಕೆಂಪು||
ಇತ್ತಿಹ ಪ್ರೇಮಸಿಂಧೂರ
ಮತ್ತೇರಿಸೋ ನೆರಿಗೆಯಂಚಿನ ದಾರಿ
ಪ್ರೀತಿಯ ಪರಿಣಯದ ಹೊಸಕಂಪು||೫||

ಭವದ ಯಾತ್ರೆಯಲಿ
ಭಾವನೆಗಳ ಭದ್ರಗೊಳಿಸುತ ನಿತ್ಯ
ಜೀವಗಳೆರಡರ ಬೆಸೆವ ಶುಭಮಿಲನ||
ಕಾವಲಿಹ ಚಂದಿರನ ನೋಟ
ನವ್ಯತೆಯ ಚುಂಬನಪ್ಪುಗೆಯ ಸೆಳೆತ
ಭವಿಷ್ಯದ ಜೀವನೋತ್ಸಾಹದ ಸಮ್ಮಿಲನ||೬||

✍️... ಅನಿತಾ ಜಿ.ಕೆ.ಭಟ್.
06-02-2021.
ದತ್ತ ಸಾಲು:- ಚೆಲ್ಲಿರುವ ಮಲ್ಲಿಗೆಯು ಸಾಕ್ಷಿ ನುಡಿದಿತ್ತು...






ಜೀವದೊಲವಿನ ಬೆಸುಗೆ

 



#ಜೀವದೊಲವಿನ_ಬೆಸುಗೆ


ಹೇ ಇನಿಯ...
ಮದರಂಗಿ ರಂಗೇರಿ
ಕರಗಳಲಿ ಚೆಲ್ವಚಿತ್ತಾರ
ಅಂದಿಹರು ನಿನ್ನವನು ರಸಿಕರಾಜ||
ಕನಸುಗಳ ಬೆನ್ನೇರಿ
ಎದೆಯಂಗಳದಿ ಹೂ ಮಳೆಯೆ
ಸುರಿದಿಹುದು ಕಾತರದಿ ನಿತ್ಯಸಹಜ||೧||

ನೆತ್ತಿ ಮೇಲಣ ಬೊಟ್ಟು
ಕಣ್ಣಂಚಿನ ಕಾಡಿಗೆಯು
ಕೆಂಪು ಕೈಬಳೆ ಹಣೆಯ ಸಿಂಧೂರ||
ರೇಶಿಮೆಯ ಸೀರೆಯನುಟ್ಟು
ಸವಿಕ್ಷೀರ ಬಿಂದಿಗೆಯು
ಅಮಲೇರಿಸಿದ ಕ್ಷಣವು ಮಧುರ||೨||

ಜೀವದೊಲವಿನ ಬೆಸುಗೆ
ಮೃದುಭಾವ ಚೆಲುಕದನ
ರಾಗರತಿಯ ಪಿಸುದನಿಯ ಗಾನ||
ಕತ್ತಲೆಯ ರಸಮೈತ್ರಿ ಮತ್ತೇರಿ
ಬಿಸಿಯುಸಿರು ಒಳಸೇರಿ
ನೀನೇ ನಾನಾಗಿಸಿದ ಹೂಬಾಣ||೩||

ಅಧರ ಮಧುವನು ಹೀರಿ
ಕೆನ್ನೆಗಳು ಕೆಂಪಡರಿ
ಒತ್ತಿಕೊಂಡಿಹ ಮುದ್ರಿಕೆಯು ಮರೆಯಲ್ಲಿ||
ಗರಿಗರಿಯ ಚಾದರವು
ಸರಿದು ಮುದುರಿದ ಜಾಡು
ಚೆಲ್ಲಿರುವ ಮಲ್ಲಿಗೆಯ ಸಾಕ್ಷಿಯಲ್ಲಿ ||೪||

ತೃಷೆ ಹಿಂಗಿದಾನಂದ
ತೋಳ ಗೆಲುವಿನ ಹೆಮ್ಮೆ
ನಸುನಗೆಯು ನಿನ್ನ ಹುರಿಮೀಸೆ ಕೆಳಗೆ||
ದೇಹಕಾವಿನ ನೋವು
ತವರನಗಲುವ ವ್ಯಥೆಯು
ಸುಡುತಿಹುದು ನನ್ನ ಒಡಲ ಬೇಗೆ||೫||

ನನ್ನೊಲವಿನಾ ನಲ್ಲೆ...
ತಳಮಳವೇಕೆ ಮೊಗದಲ್ಲಿ
ನೆಲೆಸಿರುವೆ ನೀಯೆನ್ನ ಹೃದಯದಲ್ಲಿ||
ಪ್ರತಿಘಳಿಗೆ ಪ್ರತಿಹೆಜ್ಜೆ
ಜೊತೆಯಾಗಿ ನಾ ಬರುವೆ
ಅನುದಿನವು ಮೈಮರೆಯೋಣ ಸರಸದಲ್ಲಿ||೬||

✍️... ಅನಿತಾ ಜಿ.ಕೆ.ಭಟ್.
06-02-2021.

ದತ್ತ ಸಾಲು:-ಚೆಲ್ಲಿರುವ ಮಲ್ಲಿಗೆಯು ಸಾಕ್ಷಿ ನುಡಿದಿತ್ತು...




Saturday, 13 February 2021

ಹಸಿರ ವೈಭವ

 


ಹಸಿರ ವೈಭವ

ಕೈಯಾರೆ ನೀರ ಹೀರುವ ನೀರೆ ನೀ ಯಾರೆ...?
ಬಾಯಾರೆ ನೀರೆ ಕರವೊಡ್ಡಿ ಸೇವಿಪುದು ನೀರೇ..
ಹರಿವ ನೀರನು ಶುದ್ಧಿಗೊಳಿಪುದು ಮರದ ಬೇರು
ನೀರ ಶುದ್ಧತೆಯ ಅಳೆಯಬೇಕಿಲ್ಲ ಇಲ್ಲಿ ಯಾರೂ ....||

ಹಸಿರು ತರುಗಳೆಡೆಯಿಂದ ಹರಿದು ಬರುವ ನೀರಿದು
ಒಸರು ಉಕ್ಕಿ  ಹರಿಯಲದುವೆ ಪಥವ ಹಿಡಿವುದು
ಸ್ಪಟಿಕದಂತೆ ಶುಭ್ರವು; ವನಸ್ಪತಿಗಳ ಅಂಶವು
ಹಸಿರಿನಂತೆ ತಂಪಿದು; ರೋಗ-ರುಜಿನ ತಾರದು||

ಕಾಡುಮೇಡು ಅಲೆದು ಬಂದು
ಪ್ರಾಣಿಗಳು ಹಿಂಡುಹಿಂಡಾಗಿ ಕಂಡು
ನಲಿನಲಿದು ಹಾಡುತಿಹ ಪಕ್ಷಿಗಳ ಹಿಂಡು
ಸೃಷ್ಟಿಯ ಶೃಂಗಾರವ ಕಣ್ತುಂಬಿ ನಿಂದು||

ಹರಿಯುವ ಸಲಿಲವಿದು ಪಾಚಿಗಟ್ಟದು ಝುಳುಝುಳು ನಿನಾದ ಮನಕೆ ಇಂಪದು
ನಿಂತ ನೀರಲಿ ಪಾಚಿ ಸೊಳ್ಳೆಗಳು ತುಂಬುವುದು
ನಿರಂತರ ಹರಿವು ಚೈತನ್ಯವುಕ್ಕಿಸುವುದು||

ಚಾರಣಕ್ಕೆ ತೆರಳುವ ಗೆಳೆಯ ಗೆಳತಿಯರೇ...
ಸುಂದರ ಪರಿಸರವ ಶುದ್ಧ ನೀರಚಿಲುಮೆಯ
ಮಲಿನಗೊಳಿಸದಿರಿ; ಪ್ಲಾಸ್ಟಿಕ್ ಎಸೆಯುವಿರಾ..??
ಬೇಡ ಕಲ್ಪಿಸಿಕೊಳ್ಳಿ... ಮುಂದಿನ ಪೀಳಿಗೆಯ ...||

ಹಸಿರ ವೈಭವ ಕುಂದದಿರಲಿ
ಜಲಲ ಹರಿವು ಆರದಿರಲಿ
ಪ್ರಾಕೃತಿಕ ಸಂಪತ್ತನ್ನು ನಾವು ಉಳಿಸೋಣ ಅರಿವು ಮೂಡಿಸಿ ಮಾದರಿಯಾಗೋಣ...||

                          🌲🌲

✍️... ಅನಿತಾ ಜಿ.ಕೆ.ಭಟ್.
03-08-2019

ಚಿತ್ರ ಕೃಪೆ- ಹವಿಸವಿ ಬಳಗ