#ಜೀವದೊಲವಿನ_ಬೆಸುಗೆ
ಹೇ ಇನಿಯ...
ಮದರಂಗಿ ರಂಗೇರಿ
ಕರಗಳಲಿ ಚೆಲ್ವಚಿತ್ತಾರ
ಅಂದಿಹರು ನಿನ್ನವನು ರಸಿಕರಾಜ||
ಕನಸುಗಳ ಬೆನ್ನೇರಿ
ಎದೆಯಂಗಳದಿ ಹೂ ಮಳೆಯೆ
ಸುರಿದಿಹುದು ಕಾತರದಿ ನಿತ್ಯಸಹಜ||೧||
ನೆತ್ತಿ ಮೇಲಣ ಬೊಟ್ಟು
ಕಣ್ಣಂಚಿನ ಕಾಡಿಗೆಯು
ಕೆಂಪು ಕೈಬಳೆ ಹಣೆಯ ಸಿಂಧೂರ||
ರೇಶಿಮೆಯ ಸೀರೆಯನುಟ್ಟು
ಸವಿಕ್ಷೀರ ಬಿಂದಿಗೆಯು
ಅಮಲೇರಿಸಿದ ಕ್ಷಣವು ಮಧುರ||೨||
ಜೀವದೊಲವಿನ ಬೆಸುಗೆ
ಮೃದುಭಾವ ಚೆಲುಕದನ
ರಾಗರತಿಯ ಪಿಸುದನಿಯ ಗಾನ||
ಕತ್ತಲೆಯ ರಸಮೈತ್ರಿ ಮತ್ತೇರಿ
ಬಿಸಿಯುಸಿರು ಒಳಸೇರಿ
ನೀನೇ ನಾನಾಗಿಸಿದ ಹೂಬಾಣ||೩||
ಅಧರ ಮಧುವನು ಹೀರಿ
ಕೆನ್ನೆಗಳು ಕೆಂಪಡರಿ
ಒತ್ತಿಕೊಂಡಿಹ ಮುದ್ರಿಕೆಯು ಮರೆಯಲ್ಲಿ||
ಗರಿಗರಿಯ ಚಾದರವು
ಸರಿದು ಮುದುರಿದ ಜಾಡು
ಚೆಲ್ಲಿರುವ ಮಲ್ಲಿಗೆಯ ಸಾಕ್ಷಿಯಲ್ಲಿ ||೪||
ತೃಷೆ ಹಿಂಗಿದಾನಂದ
ತೋಳ ಗೆಲುವಿನ ಹೆಮ್ಮೆ
ನಸುನಗೆಯು ನಿನ್ನ ಹುರಿಮೀಸೆ ಕೆಳಗೆ||
ದೇಹಕಾವಿನ ನೋವು
ತವರನಗಲುವ ವ್ಯಥೆಯು
ಸುಡುತಿಹುದು ನನ್ನ ಒಡಲ ಬೇಗೆ||೫||
ನನ್ನೊಲವಿನಾ ನಲ್ಲೆ...
ತಳಮಳವೇಕೆ ಮೊಗದಲ್ಲಿ
ನೆಲೆಸಿರುವೆ ನೀಯೆನ್ನ ಹೃದಯದಲ್ಲಿ||
ಪ್ರತಿಘಳಿಗೆ ಪ್ರತಿಹೆಜ್ಜೆ
ಜೊತೆಯಾಗಿ ನಾ ಬರುವೆ
ಅನುದಿನವು ಮೈಮರೆಯೋಣ ಸರಸದಲ್ಲಿ||೬||
✍️... ಅನಿತಾ ಜಿ.ಕೆ.ಭಟ್.
06-02-2021.
ದತ್ತ ಸಾಲು:-ಚೆಲ್ಲಿರುವ ಮಲ್ಲಿಗೆಯು ಸಾಕ್ಷಿ ನುಡಿದಿತ್ತು...
No comments:
Post a Comment