ಹಸಿರ ವೈಭವ
ಕೈಯಾರೆ ನೀರ ಹೀರುವ ನೀರೆ ನೀ ಯಾರೆ...?
ಬಾಯಾರೆ ನೀರೆ ಕರವೊಡ್ಡಿ ಸೇವಿಪುದು ನೀರೇ..
ಹರಿವ ನೀರನು ಶುದ್ಧಿಗೊಳಿಪುದು ಮರದ ಬೇರು
ನೀರ ಶುದ್ಧತೆಯ ಅಳೆಯಬೇಕಿಲ್ಲ ಇಲ್ಲಿ ಯಾರೂ ....||
ಹಸಿರು ತರುಗಳೆಡೆಯಿಂದ ಹರಿದು ಬರುವ ನೀರಿದು
ಒಸರು ಉಕ್ಕಿ ಹರಿಯಲದುವೆ ಪಥವ ಹಿಡಿವುದು
ಸ್ಪಟಿಕದಂತೆ ಶುಭ್ರವು; ವನಸ್ಪತಿಗಳ ಅಂಶವು
ಹಸಿರಿನಂತೆ ತಂಪಿದು; ರೋಗ-ರುಜಿನ ತಾರದು||
ಕಾಡುಮೇಡು ಅಲೆದು ಬಂದು
ಪ್ರಾಣಿಗಳು ಹಿಂಡುಹಿಂಡಾಗಿ ಕಂಡು
ನಲಿನಲಿದು ಹಾಡುತಿಹ ಪಕ್ಷಿಗಳ ಹಿಂಡು
ಸೃಷ್ಟಿಯ ಶೃಂಗಾರವ ಕಣ್ತುಂಬಿ ನಿಂದು||
ಹರಿಯುವ ಸಲಿಲವಿದು ಪಾಚಿಗಟ್ಟದು ಝುಳುಝುಳು ನಿನಾದ ಮನಕೆ ಇಂಪದು
ನಿಂತ ನೀರಲಿ ಪಾಚಿ ಸೊಳ್ಳೆಗಳು ತುಂಬುವುದು
ನಿರಂತರ ಹರಿವು ಚೈತನ್ಯವುಕ್ಕಿಸುವುದು||
ಚಾರಣಕ್ಕೆ ತೆರಳುವ ಗೆಳೆಯ ಗೆಳತಿಯರೇ...
ಸುಂದರ ಪರಿಸರವ ಶುದ್ಧ ನೀರಚಿಲುಮೆಯ
ಮಲಿನಗೊಳಿಸದಿರಿ; ಪ್ಲಾಸ್ಟಿಕ್ ಎಸೆಯುವಿರಾ..??
ಬೇಡ ಕಲ್ಪಿಸಿಕೊಳ್ಳಿ... ಮುಂದಿನ ಪೀಳಿಗೆಯ ...||
ಹಸಿರ ವೈಭವ ಕುಂದದಿರಲಿ
ಜಲಲ ಹರಿವು ಆರದಿರಲಿ
ಪ್ರಾಕೃತಿಕ ಸಂಪತ್ತನ್ನು ನಾವು ಉಳಿಸೋಣ ಅರಿವು ಮೂಡಿಸಿ ಮಾದರಿಯಾಗೋಣ...||
🌲🌲
✍️... ಅನಿತಾ ಜಿ.ಕೆ.ಭಟ್.
03-08-2019
ಚಿತ್ರ ಕೃಪೆ- ಹವಿಸವಿ ಬಳಗ
No comments:
Post a Comment