Sunday, 27 June 2021

ನಮ್ಮ ಪುಟ್ಟ- ಕೀಟಲೆ ಕಿಟ್ಟ

 



ಕೀಟಲೆ ಕಿಟ್ಟ


ಕೆನೆಯಹಾಲ ಕೇಳಿ ಕುಡಿವ
ನಮ್ಮ ಪ್ರೀತಿಯ ಪುಟ್ಟ
ಮನೆಯ ಒಳ-ಹೊರ ಆಡಿ ನಲಿವ
ತುಂಟ ಕೀಟಲೆ ಕಿಟ್ಟ||೧||

ಮಳೆ ಬಂದರೆ ನೆನೆಯುತಿರುವ
ಯಾರ ಮಾತನು ಕೇಳನು
ದೋಣಿ ಮಾಡಿ ನೀರೊಳಾಡಿ
ತನ್ನ ತಾನೇ ಮರೆವನು||೨||

ದೀಪ ಬೆಳಗೆ ಸೆರಗ ಹಿಡಿವ
ಬಾಗಿ ಬಿಸಿಯ ಮುಟ್ಟುವ
ಕುಳಿತ ಅಮ್ಮನ  ಜಡೆಯನೆಳೆದು
ತುದಿಯ ನೇಯ್ದು ಕಟ್ಟುವ||೩||

ತೊದಲು ಮಾತಲಿ ಎಲ್ಲರೊಡನೆ
ಬೆರೆತು ಹೊಸತು ಕಲಿಯುವ
ಅಪ್ಪ ಬರಲು ಬೇಗನೋಡುತ
ತಿನಿಸ ಚೀಲದಿ ಹುಡುಕುವ||೪||

ಹಲವು ಮಾದರಿ ಕಾರು ಬೈಕು
ಬೇಕು ಅವನ ಆಟಕೆ
ಕೆಲವು ದಿನದಿ ಗಾಲಿ ಕಳಚೆ
ಸಿದ್ಧ ನವೀನ ಪ್ರಯೋಗಕೆ||೫||

ದಿನವು ಬೇಡುವ ಕನಸು ಕಾಣುತ
ಹೊಸತು ಫಳಫಳ ಫೋನನು
ಲಲ್ಲೆಗರೆದು ಮುದ್ದುಮಾಡಲು
ಹುಸಿಯ ಕೋಪವ ಮರೆವನು||೬||

ಲಾಲಿ ಹಾಡಿ ತೂಗಿ ಮಲಗಿಸಿ
ಅಮ್ಮ ದೃಷ್ಟಿ ತೆಗೆವಳು
ಪುಟ್ಟ ಚಂದಿರ ಎಷ್ಟು ಸುಂದರ
ದೇವನುಡುಗೊರೆ ಎನುವಳು||೭||

✍️... ಅನಿತಾ ಜಿ.ಕೆ.ಭಟ್.
26-06-2021.
ದತ್ತ ವಿಷಯ:ನಮ್ಮ ಪುಟ್ಟ

ಚಿತ್ರ ಕೃಪೆ: ಅಂತರ್ಜಾಲ


Saturday, 19 June 2021

ಹನಿ ಮಳೆ, ಸೋನೆ ಮಳೆ

 



ಅಕ್ಷರದೀಪ- ನ್ಯಾನೋ ಕಥೆ

ವಿಷಯ- ಹನಿ ಮಳೆ

ಶೀರ್ಷಿಕೆ: ಕಾಲ


    ಹನಿಮಳೆ ಕಡಿಮೆಯಾಗಬಹುದೆಂದು ಕಾಯುತ್ತಾ ನಿಂತ ಕೊರಪೋಳುವಿನ ಬಳಿ ಸುಶೀಲಮ್ಮಳ ಮಾತುಕತೆ ಸಾಗಿತ್ತು. ಆಚೆಬದಿ ಏನೋ ಕೆಲಸ ಮಾಡುತ್ತಿದ್ದ ಸುನಯನಾಳ ಬಳೆಯೊಂದು ಒಡೆದಾಗ ಸುಶೀಲಮ್ಮ ದನಿಯೆತ್ತಿ "  ಗಾಜಿನ ಬಳೆಗಳು ಬೇಗನೆ ಒಡೆಯುತ್ತವೆ. ಇವಳಿಗೆಷ್ಟು ಖರ್ಚು. ಇಂತಹಾ ಬಳೆಗಳಾದರೆ ಒಳ್ಳೆಯದು" ಎಂದು ತನ್ನ ಕೈಯ ಒಡೆಯದ ಬಳೆಗಳನ್ನು ತೋರಿಸಿದ್ದರು. ಸುನಯನಾಳ ಕಂಗಳು ನೆನೆದಿದ್ದವು. ಹಲವು ವರ್ಷಗಳ ನಂತರ ಪತಿಯ ಅಗಲಿಕೆಯ ಸಂದರ್ಭದಲ್ಲಿ ತನ್ನ ಗಾಜಿನ ಬಳೆಗಳನ್ನೆಲ್ಲ ಗುಪ್ತವಾಗಿ ಸುನಯನಾಳ ಆಭರಣದ ಪೆಟ್ಟಿಗೆಯ ಬದಿಗಿರಿಸಿ, ಒಡನೆಯೇ ಓಡಿದ್ದಾರೆ ಒಡೆಯದ ಬಳೆಗಳೊಂದಿಗೆ, ಹನಿಮಳೆಗೆ ಅಂಗಳದಲ್ಲಿದ್ದ ಬಟ್ಟೆಗಳು ನೆನೆಯದಂತೆ ಒಳಗಿರಿಸಲು.


✍️... ಅನಿತಾ ಜಿ.ಕೆ.ಭಟ್.

18-06-2021.


ಫಲಿತಾಂಶ: ಪ್ರಥಮ ಸ್ಥಾನ 

        💐💐💐💐💐💐


ದತ್ತ ಪದ: ಸೋನೆ ಮಳೆ (ಭಾವಗೀತೆ)
ಶೀರ್ಷಿಕೆ: ಮಳೆ-ಇಳೆ

ಇಳೆಯೊಲುಮೆ ನಲುಮೆಯಲಿ
ಹರಿಸಿ ಪ್ರೇಮಧಾರೆ ಸೋನೆಮಳೆ
ವಿರಹದುರಿ ತಂಪಾಗಿ ಹಸಿರಸೆರಗ
ಹಾಸಿ ಹನಿಮುತ್ತುಗಳ ಸೆಳೆದವಳೆ||೧||

ಬಾನಂಚಿನ ಮೇಘ ವಿಸ್ಮಯದಿ
ರೌರವಬ್ಬರವು ತಣಿದಿಹುದು
ಭೂರಮೆಯ ಒಡಲು ಮಡಿಲು
ಪುಳಕಗೊಂಡು ಕುಣಿದಿಹುದು||೨||

ಮುಗಿಲಮಾಲೆ ಕರಗಿ ಜಾರಿ
ನದಿತೊರೆಗಳ ಕಂಠಿಹಾರ
ಲಜ್ಜೆಬೆರೆತ ಸಂಭ್ರಮ ಕಾತರ
ಬಂಧಬೆಸೆಯಲಿಂದು ಸಾಗರ||೩||

ಬಿರುಸು ಸರಸ ಮೋದ ಲೀಲೆ
ತೋಯ್ದು ಗೆಲುವ ಧಾರಿಣಿ
ಭದ್ರಭಾವದಿ ಜೀವ ಚಿಗುರಿಸಿ
ಉಸಿರ ಹರಸುವ ಭೂಜನನಿ||೪||

✍️... ಅನಿತಾ ಜಿ.ಕೆ.ಭಟ್.
19-06-2021.
ಫಲಿತಾಂಶ: ಉತ್ತಮ ಸ್ಥಾನ


        💐💐💐💐💐💐💐💐💐


ಚುಟುಕು
ವಿಷಯ:ತ್ಯಾಗ
ಶೀರ್ಷಿಕೆ: ತ್ಯಾಗ

ಇನ್ನಷ್ಟು ಮತ್ತಷ್ಟು ಬೇಕೆನಗೆ ಸಿರಿಯು
ಲೋಭದಿಂದಲೆ ಸಕಲ ರೋಗ
ಇರುವುದನು ತೋಷದಿಂದಲೆ ಹಂಚಿ
ತೃಪ್ತಿಯಿಂದಲೆ ಬದುಕುವುದು ತ್ಯಾಗ||

            💐💐

ರಸ್ತೆಯ ನಿರ್ಮಾಣದಲ್ಲಿ ಇಹುದು
ಜನಸಾಮಾನ್ಯರ ಭೂಮಿ ತ್ಯಾಗ
ಅರಿತು ಸಂಚರಿಸಲು ಬೇಕು ನಿತ್ಯ
ಕಡಿವಾಣ ಹಾಕುತಲಿ ಅತಿವೇಗ||

                💐💐

ಊಟನಿದಿರೆಗಳ ತ್ಯಾಗ ಮಾಡುತಲಿ
ಹೊತ್ತು ಹಡೆದು ಲಾಲಿಹಾಡುವಳಮ್ಮ|
ಮಂದಹಾಸ ವಿಶ್ರಾಂತಿ ಅಡೆತಡೆಗಳ
ಕಷ್ಟಗಳ ಮರೆತು ಬದುಕಕಟ್ಟುವನಪ್ಪ||

✍️... ಅನಿತಾ ಜಿ.ಕೆ.ಭಟ್.
20-06-2021.

               💐💐💐💐💐💐



#ಕೀಟಲೆ ಕಿಟ್ಟ


ಕೆನೆಯಹಾಲ ಕೇಳಿ ಕುಡಿವ
ನಮ್ಮ ಪ್ರೀತಿಯ ಪುಟ್ಟ
ಮನೆಯ ಒಳ-ಹೊರ ಆಡಿ ನಲಿವ
ತುಂಟ ಕೀಟಲೆ ಕಿಟ್ಟ||೧||

ಮಳೆ ಬಂದರೆ ನೆನೆಯುತಿರುವ
ಯಾರ ಮಾತನು ಕೇಳನು
ದೋಣಿ ಮಾಡಿ ನೀರೊಳಾಡಿ
ತನ್ನ ತಾನೇ ಮರೆವನು||೨||

ದೀಪ ಬೆಳಗೆ ಸೆರಗ ಹಿಡಿವ
ಬಾಗಿ ಬಿಸಿಯ ಮುಟ್ಟುವ
ಕುಳಿತ ಅಮ್ಮನ ಬೆನ್ನಿಗೊರಗಿ ಜಡೆಯ
ತುದಿಯ ನೇಯ್ದು ಕಟ್ಟುವ||೩||

ತೊದಲು ಮಾತಲಿ ಎಲ್ಲರೊಡನೆ
ಬೆರೆತು ಹೊಸತು ಕಲಿಯುವ
ಅಪ್ಪ ಬರಲು ಬೇಗನೋಡುತ
ತಿನಿಸ ಚೀಲದಿ ಹುಡುಕುವ||೪||

ಹಲವು ಮಾದರಿ ಕಾರು ಬೈಕು
ಬೇಕು ಅವನ ಆಟಕೆ
ಕೆಲವು ದಿನದಿ ಗಾಲಿ ಕಳಚೆ
ಸಿದ್ಧ ನವೀನ ಪ್ರಯೋಗಕೆ||೫||

ದಿನವು ಬೇಡುವ ಕನಸು ಕಾಣುತ
ಹೊಸತು ಫಳಫಳ ಫೋನನು
ಲಲ್ಲೆಗರೆದು ಮುದ್ದುಮಾಡಲು
ಹುಸಿಯ ಕೋಪವ ಮರೆವನು||೬||

ಲಾಲಿ ಹಾಡಿ ತೂಗಿ ಮಲಗಿಸಿ
ಅಮ್ಮ ದೃಷ್ಟಿ ತೆಗೆವಳು
ಪುಟ್ಟ ಚಂದಿರ ಎಷ್ಟು ಸುಂದರ
ದೇವನುಡುಗೊರೆ ಎನುವಳು||೭||

✍️... ಅನಿತಾ ಜಿ.ಕೆ.ಭಟ್.
26-06-2021.
ದತ್ತ ವಿಷಯ:ನಮ್ಮ ಪುಟ್ಟ

     💐💐💐💐💐💐💐💐💐💐💐💐💐


Friday, 4 June 2021

ಮೋಸದ ಬಲೆ #ತರಂಗ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಕಥೆ






#ಮೋಸದ ಬಲೆ

          ಏಕೋ ಕಣ್ಣು ಮುಚ್ಚಿದರೂ ನಿದ್ದೆ ಬರುತ್ತಿಲ್ಲ. ಮನಸ್ಸು ಸ್ವಲ್ಪ ಭಾರವಾಗಿತ್ತು. ಜೀವನವೇ ಹಾಗೆ ಕೆಲವೊಮ್ಮೆ ಅಪರಿಮಿತ ಆನಂದ ಮಗದೊಮ್ಮೆ ದುಃಖ ದುಮ್ಮಾನ. ಮಗ್ಗುಲು ಬದಲಿಸಿ ಪಕ್ಕಕ್ಕೆ ಹೊರಳಿದೆ. ಪಕ್ಕದಲ್ಲಿ ಖಾಲಿಯೆನಿಸಿತು. ಸುಮ ಇನ್ನೂ ಮಲಗಿಲ್ಲ ಅಂದಹಾಗಾಯಿತು. ಅಡುಗೆ ಮನೆಕೆಲಸ ಮುಗಿದಿಲ್ಲವೇನೋ ಎಂದುಕೊಂಡು ಸುಮ್ಮನಾದೆ. ಹಾಗೇ ಕಣ್ಣುಮುಚ್ಚುವ ಪ್ರಯತ್ನ ಮಾಡಿದೆ. ಅಡುಗೆ ಮನೆಯಲ್ಲಿ ಸದ್ದು ಕೇಳುತ್ತಿಲ್ಲ. ಸುಮ ಬರುವ ಸೂಚನೆಯೂ ಇಲ್ಲ. ಏನು ಮಾಡುತ್ತಿದ್ದಾಳೆ ರಾತ್ರಿ ಹನ್ನೆರಡು ಗಂಟೆಗೆ..? ಎಂದು ತಲೆಯೊಳಗೆ ಹುಳ ಕೆರೆತ. ಸರಿ.. ಮೆಲ್ಲನೆದ್ದು ಹೋಗಿ ನೋಡಿದೆ. ಮೊಬೈಲ್ ಹಿಡಿದು ಏನೋ ಮಾಡುತ್ತಿದ್ದಾಳೆ. ಪೂರ್ತಿ ತಲ್ಲೀನಳಾಗಿದ್ದಾಳೆ. ನಾನು ಬಂದದ್ದು ಆಕೆಗೆ ಅರಿವಾಗಲೇ ಇಲ್ಲ.

          ಇತ್ತೀಚೆಗೆ ಈಕೆ ಹೀಗೇನೇ. ನನ್ನ ಕಂಡರೆ ಅದೇನೋ ಅಸಡ್ಡೆ. ನಾನೇ ಹತ್ತಿರ ಹೋಗಿ ಮಾತನಾಡಿಸಿದರೂ ದೂರಸರಿದು ಬಿಡುತ್ತಾಳೆ. ಮಕ್ಕಳ ಬಗ್ಗೆಯೂ ಕಾಳಜಿಯಿಲ್ಲ. ಮಕ್ಕಳು ನಾನು ಆಫೀಸಿನಿಂದ ಬಂದರೆ ಸಾಕು ನನ್ನ ಹಿಂದೆಯೇ ಅದೂ ಇದೂ ಮಾತಾಡುತ್ತಾ ಹೇಳುತ್ತಾ ಇರುತ್ತಾರೆ. ಏಕೆಂದರೆ ಅಮ್ಮ ಮೊದಲಿನಂತೆ ಮಕ್ಕಳ ಮಾತಿಗೆ ಹೂಂಗುಟ್ಟುತ್ತಿಲ್ಲ. ನನಗೂ ಬೇಸರ ಆವರಿಸಿಕೊಂಡಿತು. ಹಾಲುಜೇನಿನಂತಿದ್ದ ಸಂಸಾರ. ಎಲ್ಲದಕ್ಕೂ ರೀ...ರೀ... ಎಂದು ಬಾಯ್ತುಂಬಾ ಕರೆಯುತ್ತಿದ್ದ ಮುದ್ದಿನ ಮಡದಿ ಸುಮಾ. ನಾನು ಆಫೀಸಿನಿಂದ ಯಾವಾಗಬರುತ್ತೇನೋ ಎಂದು ಕಾದುಕುಳಿತಿರುತ್ತಿದ್ದಳು. ಬಿಸಿ ಬಿಸಿ ಚಹಾ ತಯಾರುಮಾಡಿ ಪ್ರೀತಿಯಿಂದ ಕೊಡುತ್ತಿದ್ದಳು. ಚಹಾಕಿಂತಲೂ ಆಕೆಯ ಕಣ್ಣೋಟಕ್ಕಂತೂ ಸೋತುಬಿಡುತ್ತಿದ್ದೆ. ಇದ್ದಕ್ಕಿದ್ದಂತೆಯೇ ಏಕೆ ಹೀಗೆ ಬದಲಾದಳು..? ಕಾರಣ ಹುಡುಕಲೇಬೇಕೆಂದು ಮನಸ್ಸು ಹಠ ಹಿಡಿದಿದೆ.

       ಹೋಗಿ ಮಲಗಿಕೊಂಡೆ. ನಿದ್ರೆ ಬಂದವನಿಗೆ ಏಕೋ ಬೆಳಗಿನ ಜಾವ ನಾಲ್ಕು ಗಂಟೆಗೆ ಎಚ್ಚರವಾಯಿತು. ಒಮ್ಮೆ ಸುಮಾಳ ಮೊಬೈಲ್ ಮೇಲೆ ಕಣ್ಣಾಡಿಸುವ ಬಯಕೆಯಾಯಿತು. ಮೊಬೈಲ್ ಎಲ್ಲೆಂದು ಯಾವತ್ತಿನ ಜಾಗದಲ್ಲಿ ಹುಡುಕಿದೆ, ಸಿಗಲಿಲ್ಲ. ಆಗ ಬೆಡ್'ನ ಮೇಲೆ ಸಣ್ಣ ಹಸಿರು ಬೆಳಕು ಕಂಡಿತು. ಓಹೋ ಇಲ್ಲೇ ಮಲಗುವಾಗ ಪಕ್ಕದಲ್ಲೇ ಇಟ್ಟುಕೊಂಡಿದ್ದಾಳೆ. ತಿಳಿಯಿತು.. ಇವಳ ಜೀವನದಲ್ಲಿ ನನ್ನ ಸ್ಥಾನವನ್ನು ಮೊಬೈಲ್ ಆವರಿಸಿಕೊಂಡಿದೆಯೆಂದು. ಮೊಬೈಲ್ ನನ್ನ ಸವತಿ.. ಊಹೂಂ.. ಸರಿಯಾದ ಪದ ಸಿಗುತ್ತಿಲ್ಲ.. ಸತಿಯ ಸ್ಥಾನ ಆಕ್ರಮಿಸುವವಳು ಸವತಿ... ಪತಿಯ ಸ್ಥಾನ ಆಕ್ರಮಿಸಿದವನನ್ನು ಪವತಿ ಎನ್ನಲೇ..? ಮೊಬೈಲ್ ಮೇಲೆ ಸಿಟ್ಟು ಉಕ್ಕಿ ಬಂತು. ಸಿಟ್ಟಿನಿಂದ ಕಾರ್ಯಕೆಟ್ಟೀತು ಎಂದು ಬುದ್ಧಿ ಎಚ್ಚರಿಸಿತು. ಮೊಬೈಲ್ ತೆಗೆದುಕೊಂಡು ಕಣ್ಣಾಡಿಸಿದೆ. ವಾಟ್ಸಪ್, ಫೇಸ್ಬುಕ್, ಮೆಸೇಂಜರ್ ಎಲ್ಲ ತಡಕಾಡಿದಾಗ ಕಾರಣ ಕಂಡು ಹಿಡಿಯಲು ಕಷ್ಟವಾಗಲಿಲ್ಲ. ಕೆಲವೇ ಕ್ಷಣ ಸಾಕಾಯಿತು. ಆಕೆಯಿದ್ದ ಫೇಸ್ಬುಕ್ ಗ್ರೂಪ್ ಗಳಿಗೆ ನಾನೂ ಫೇಕ್ ಐಡಿ ಬಳಸಿ ಸದಸ್ಯನಾದೆ. ಗೂಢಚರ್ಯೆ ಆರಂಭಿಸಿದೆ. ಬೆಳಿಗ್ಗೆ ಎಂದಿನಂತೆ ನಮ್ಮ ಕೆಲಸ ಕಾರ್ಯಗಳು ನಡೆಯುತ್ತಿದ್ದರೂ ಮನದೊಳಗೆ ಗುಮ್ಮನೊಂದು ಕುಳಿತುಬಿಟ್ಟಿತ್ತು. ಆಫೀಸಿಗೆ ತಲುಪುತ್ತಿದ್ದಂತೆ ಹಾಳು ತಲೆನೋವೂ ವಕ್ಕರಿಸಿಬಿಟ್ಟಿತು.

           ಗ್ರೂಪಿಗೆ ಸೇರ್ಪಡೆಗೊಳಿಸಿದ ನೋಟಿಫಿಕೇಶನ್ ಕಂಡಿತು. ಗ್ರೂಪ್ ಪೋಸ್ಟ್ ಗಳ ಮೇಲೆ ಕಣ್ಣಾಡಿಸಿದೆ. ಒಂದು ರಸಿಕತೆಯ ಚುಟುಕು ಬಂದಿತ್ತು. ವೈಆರ್ಕೆ ಎಂದು ಕೆಳಗೆ ಬರೆದಿತ್ತು. ಅರ್ಧ ಗಂಟೆಯಲ್ಲಿ ನೂರು ಲೈಕ್ ಬಂದಿತೆಂದು ತೋರಿಸುತ್ತಿತ್ತು. ಕುತೂಹಲದಿಂದ ನಾನೂ ಕಾಮೆಂಟ್ ಓದತೊಡಗಿದೆ. ಓಹೋ.. ಸುಮಾ.. ಬಹಳ ಉತ್ಸಾಹದಿಂದ ಮೂರು ಕಮೆಂಟ್ ಬರೆದಿದ್ದಳು. ಮೊಬೈಲ್ ಆಫ್ ಮಾಡಿ ಕೆಲಸದತ್ತ ಹೊರಳಿದೆ. ಮಧ್ಯಾಹ್ನ ಊಟ ಮಾಡಿ ಮೊಬೈಲ್ ಮೇಲೆ ಕಣ್ಣಾಡಿಸಿದೆ. ಅದೇ ವೈಆರ್ಕೆ ಇನ್ನೊಂದು ಅತಿರಂಜಿತ ಬರಹ ಪ್ರಕಟಿಸಿದ್ದ. ಒಂದು ನಿಮಿಷ ಎಂದು ತೋರಿಸಿತು ಪ್ರಕಟಿಸಿ ಆದ ಸಮಯ.  ಆಗಲೇ ಸುಮಾಳ ಕಾಮೆಂಟ್ ಬಂದೇ ಬಿಟ್ಟಿತು. ಪ್ರತಿಯಾಗಿ ವೈಆರ್ಕೆ ಕಾಮೆಂಟ್ ಮಾಡಿದ. ಹೀಗೆ ಆರು ಕಾಮೆಂಟ್ ಅತ್ತಿಂದಿತ್ತ ಓಡಾಡಿತು. ಹೆಣ್ಣುಮಕ್ಕಳು ನಾ ಮುಂದು ತಾ ಮುಂದು ಎಂದು ಕಾಮೆಂಟ್ ಮಾಡಲು ಆರಂಭಿಸಿದರು. ಹೀಗೇ ದಿನವೂ ಮಾಡುತ್ತಿದ್ದುದರಿಂದಲೇ ಈಕೆಗೆ ನನ್ನನ್ನು ಕಂಡರೆ ಆಗದ್ದು ಎಂದು ನನಗೆ ನನ್ನತನ ಚುಚ್ಚಿನುಡಿಯಿತು. ಮನೆಯಲ್ಲಿ ಪ್ರೀತಿಯಿಂದ ತಿಳಿಹೇಳಿದೆ. ಇಲ್ಲ, ಅವಳು ಕೇಳಿಸಿಕೊಳ್ಳಲೇ ಇಲ್ಲ. ಕಾರಣ ಕೇಳಿದೆ. ಆಕೆಯೇ ಬಾಯ್ಬಿಟ್ಟಳು. ವೈಆರ್ಕೆ ಅನ್ನುವ ಬರಹಗಾರರಿದ್ದಾರೆ. ಎಷ್ಟು ಖುಷಿಯಾಗಿರ್ತಾರೆ ಗೊತ್ತಾ? ನಿಮ್ಮಂತೆ ಅಲ್ಲಪ್ಪಾ ಅವರು. ನೀವೋ.. ನಿಮಗೆ ಏನೂ ತಿಳಿದಿಲ್ಲ. ಸ್ವಲ್ಪ ವೈಆರ್ಕೆಯನ್ನು ನೋಡಿ ಕಲಿಯಿರಿ" ಎಂದು ನನಗೇ ಬೋಧಿಸಿದಳು.

        ರಸಿಕತೆಯ ಅತಿರಂಜಿತ ಬರಹವನ್ನೇ ನಿಜವೆಂದು ನಂಬಿದ ಸುಮಾಳ ಮುಗ್ಧತೆಯನ್ನು ಕಂಡು ಅಯ್ಯೋ ಪಾಪ ಅನಿಸಿತು. ಇನ್ನೇನಾದರೂ ಉಪಾಯ ಹುಡುಕಲೇಬೇಕು ಎಂದು ವೈಆರ್ಕೆಯ ಹಿನ್ನೆಲೆ ಮಾಹಿತಿ ಕಲೆ ಹಾಕತೊಡಗಿದೆ. ಪ್ರೊಫೈಲ್ ಮೇಲೆ ಕಣ್ಣಾಡಿಸಿದೆ. ನನ್ನ ಆತ್ಮೀಯ ಗೆಳೆಯ ಸುರೇಶನ ಊರಿನವನೇ ಎಂದು ತಿಳಿದು ಅವನ ಸಹಾಯ ಪಡೆದೆ. ರೋಚಕ ಘಟನೆಗಳು ಹೊರಬರಲಾರಂಭಿಸಿದವು. ಕಾಲೇಜು ದಿನಗಳಲ್ಲಿ ಹುಡುಗಿಯರನ್ನು ಚೂಡಾಯಿಸಿದ್ದು, ಪ್ರೀತಿಸಿ ಕೈಕೊಟ್ಟಿದ್ದು, ಯುವತಿಯರು ನಂಬಿ ಕೆಟ್ಟದ್ದು, ಮದುವೆಯಾದ ಮೇಲೆಯೂ ಚಾಳಿ ಬಿಡದೇ ಮುಂದುವರಿಸಿದ್ದು.. ಇಷ್ಟೆಲ್ಲಾ ಗೊತ್ತಾದಾಗ ನನಗೂ ಒಮ್ಮೆ ಸುಮಾಳ ಮೇಲೇ ಉರಿದು ಹೋಯಿತು. ಇರುಳು ಕಂಡ ಬಾವಿಗೆ ಹಗಲು ಬೀಳುವುದು ಅಂದರೆ ಹೀಗೇನೇ..! ಅಂತ ಅನ್ನಿಸಿತು. ವೈಆರ್ಕೆಯ ಪತ್ನಿ ಇದೇ ಊರಿನವಳು. ನನ್ನ ಆಫೀಸಿನ ಮುಂದಿನ ರೋಡ್ ನ ಕೊನೆಯಲ್ಲಿರುವ ಎರಡಂತಸ್ತಿನ ಕಟ್ಟಡದಲ್ಲಿರುವ ಲಾಯರ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಳೆಂದು ಗೊತ್ತಾಗಿ ಕೆಲಸ ಇನ್ನು ಸುಲಭ ಎಂದುಕೊಂಡೆ.
ಒಂದು ದಿನ ಆಫೀಸಿಗೆ ರಜೆ ಹಾಕಿ ಅಲ್ಲಿಗೆ ತೆರಳಿದೆ. ಮೊದಲ ಮಹಡಿಯಲ್ಲಿತ್ತು ಲಾಯರ್ ವಾಸುದೇವ ರಾಯರ ಆಫೀಸ್ ಕೊಠಡಿ. ಬಾಗಿಲಲ್ಲಿ ನಿಂತು ಯಾರಿರಬಹುದು ಆಕೆ? ಮೂರು ಹೆಣ್ಣುಮಕ್ಕಳಲ್ಲಿ ಎಂದು ತಲೆಕೆರೆದುಕೊಂಡು, ಅಲ್ಲಿ ಕೂತಿದ್ದ ಒಬ್ಬರಲ್ಲಿ ವೈಆರ್ಕೆಯ ಪತ್ನಿ ಯಾರು? ಎಂದು ಪ್ರಶ್ನಿಸಿದೆ. ಬದಿಯಲ್ಲಿ ತನ್ನ ಕೆಲಸದಲ್ಲಿ ತಲ್ಲೀನಳಾಗಿದ್ದ ಹೆಂಗಸಿನತ್ತ ಬೆರಳು ತೋರಿ, "ಅವರೇ ನೋಡಿ" ಎಂದರು.

         ಅತ್ತ ಕಾಲು ತಿರುಗಿಸಿದೆ. ಎರಡು ಜನ ಅದೇನೋ ಹೇಳುತ್ತಾ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು. ಸ್ವಲ್ಪ ಕಾದೆ. ನನ್ನ ಸರದಿ
ಬಂತು. "ಏನು ಹೇಳಿ ಸಾರ್? " ಅಂದಳು. ನನಗೆ ನಾಲಿಗೆಯೇ ಹೊರಳಲಿಲ್ಲ. "ಅದು..." ಎಂದು ರಾಗ ಎಳೆದೆ. "ಹೇಳಿ ಸಾರ್" ಅಂದಳು.
ವೈಯಕ್ತಿಕ ವಿಷಯ ಅಂದೆ "ಓಹೋ ಡೈವೋರ್ಸ್ ವಿಷಯಾನಾ.. ನಮ್ಮ ಬಾಸ್ ಗೆ ಹೇಳಿ. ಅವರು ಸಲಹೆ ಕೊಡ್ತಾರೆ" ಎಂದಳು.
"ಅಲ್ಲ ಮೇಡಂ. ವೈಆರ್ಕೆ ವಿಷಯದಲ್ಲಿ ಸ್ವಲ್ಪ ಮಾತನಾಡುವುದಿತ್ತು"
ಆಕೆಯ ಮುಖ ಗಂಭೀರವಾಯಿತು. "ನೋಡಿ ಸರ್, ಅವರ ವಿಷಯ ನನ್ನಲ್ಲಿ ಮಾತನಾಡಿ ಪ್ರಯೋಜನವಿಲ್ಲ. ನಾನು ಅವರ ಜೊತೆಯಿಲ್ಲ. ಬಿಟ್ಟು ಬಿಟ್ಟಿದ್ದೇನೆ. ಸರ್"
"ಪ್ಲೀಸ್ ಮೇಡಂ..ಹಾಗನ್ಬೇಡಿ"
"ಈಗ ನನಗೆ ಬಿಡುವಿಲ್ಲ. ನಿಮಗೆ ಮಾತಾಡಲೇ ಬೇಕಾದರೆ ಮಧ್ಯಾಹ್ನ ಒಂದೂವರೆಗೆ ಬನ್ನಿ. ಹ್ಞಾಂ.. ಒಂದು ಮಾತು.. ಅವರಿಂದಾದ ತೊಂದರೆಗೆ ನನ್ನನ್ನು ಹೊಣೆ ಮಾಡಬೇಡಿ" ಎಂದು ನುಡಿದಳು.  ಅಷ್ಟು ಹೊತ್ತು ನಾನಲ್ಲಿ ಏನು ಮಾಡಲಿ? ಕೆಳಗಿಳಿದು ಬಂದೆ. ಪುನಃ ಆಫೀಸಿನ ಕಡೆ ಹೆಜ್ಜೆ ಹಾಕಲು ಮನಸಿಲ್ಲ. ಅಲ್ಲೇ ಕಂಡ ಪೇಪರ್ ಮಾರುವ ಗೂಡಂಗಡಿಗೆ ಹೊಕ್ಕೆ. ಪೇಪರ್ ಓದಲು ತೊಡಗಿದೆ. ಪುಟ್ಟ ಗೂಡಂಗಡಿಯಲ್ಲಿ ಪೇಪರ್ ಮಾರುತ್ತಿದ್ದ ಶಿವರಾಯರು ಮಾತಿಗೆಳೆದರು. ಪೇಪರಿಗಿಂತ ಹೆಚ್ಚು ಸುದ್ದಿ ಅವರ ನೆನಪಿನ ಜೋಳಿಗೆಯಿಂದ ಹೊರತೆಗೆದರು. ಹೊತ್ತು ಹೋದದ್ದೇ ತಿಳಿಯಲಿಲ್ಲ. ವಾಚ್ ನೋಡಿದೆ.. ಒಂದೂಕಾಲು ಗಂಟೆ ಆಯಿತು. ಶಿವರಾಯರು ಅತ್ತ ನೋಡುತ್ತಿದ್ದಾಗ ಶರ್ಟ್ ನ ಬಟನ್ ಬಿಚ್ಚಿ ಎದೆಯನ್ನು ಮುಟ್ಟಿ ಭದ್ರಪಡಿಸಿಕೊಂಡೆ.
ಕಟ್ಟಡತ್ತ ಹೆಜ್ಜೆ ಹಾಕಿದೆ. ಆಕೆ ನನಗಾಗಿ ಆಫೀಸ್ ಕೊಠಡಿಯ ಹೊರಗೆ ಕಾಯುತ್ತಿದ್ದಳು. ಮತ್ತೊಮ್ಮೆ ಎದೆ ಸವರಿ ಖಾತರಿಪಡಿಸಿಕೊಂಡೆ.

         ನನ್ನನ್ನು ಕಂಡೊಡನೆ ಆಕೆ
"ಏನು ಸಾರ್ ವೈಆರ್ಕೆ ನಿಮಗೆ ಹೇಗೆ ಪರಿಚಯ? ಏನಾದರೂ ಅವರಿಂದ ತೊಂದರೆ ಆಯಿತೇ?"
"ಹಾಗೇನಿಲ್ಲಮ್ಮ. ಮುಂದೆ ಆಗಬಹುದಾದ ತೊಂದರೆಗೆ ಈಗಲೇ ಪರಿಹಾರ ಹುಡುಕಲು ಹೊರಟಿದ್ದೇನೆ" ಎಂದೆ. "ಅಯ್ಯೋ.. ಅವನು ಹಾಗೇನೇ ಸರ್. ನಾನು ಅವನನ್ನು ಬಿಟ್ಟು ಬಂದ್ಬಿಟ್ಟಿದ್ದೇನೆ. ಮಕ್ಕಳ ಜೊತೆಗೆ ಇಲ್ಲಿ ಪುಟ್ಟ ಮನೆಮಾಡಿಕೊಂಡು ಉದ್ಯೋಗ ಮಾಡಿ ಜೀವನ ಮಾಡುತ್ತಿದ್ದೇನೆ" ಎಂದಳು. "ಅವನ ಬರಹಗಳು ಭಾರೀ ಫೇಮಸ್ ಮೇಡಂ"
"ಹೀಗೇ..ಬರ್ದೂ ಇನ್ನು ಯಾರನ್ನೆಲ್ಲಾ ಬುಟ್ಟಿಗೆ ಹಾಕ್ಕೊಳ್ತಾನೋ ನನಗಂತೂ ಗೊತ್ತಿಲ್ಲ. ಅವನ ಕೆಟ್ಟ ಚಾಳಿ ಗೊತ್ತಿಲ್ಲದೇ ಅಪ್ಪ ಅಮ್ಮ ನನ್ನ ಮದುವೆ ಮಾಡಿಕೊಟ್ಟರು. ನಂತರ ಒಂದೊಂದಾಗಿ ತಿಳಿಯಿತು. ಮದುವೆ ಆದಮೇಲೆ ಸರಿ ಹೋಗ್ತಾರೆ ಅಂದುಕೊಂಡರೆ, ಮಗ ಹುಟ್ಟಿ ಒಂದು ವರ್ಷಕ್ಕೇ ಒಬ್ಬಳು ತರುಣಿ ಕಣ್ಣೀರಿಟ್ಟುಕೊಂಡು ಬಂದಳು "ನಿನ್ನ ಯಜಮಾನರಿಂದ ನಾನು ಈಗ ಮೂರು ತಿಂಗಳ ಗರ್ಭಿಣಿ..ನ್ಯಾಯ ಕೊಡಿಸು.." ಎಂದು. ಯಾರ್ಯಾರಲ್ಲೋ ಕಾಡಿ ಬೇಡಿ ಅವಳ ಕೈಗೆ ದುಡ್ಡಿಟ್ಟು ಇನ್ನು ಮೇಲೆ ಇಂತಹವರ ಸಹವಾಸ ಮಾಡಬೇಡ ಎಂದು ಬುದ್ಧಿ ಹೇಳಿ ಕಳಿಸಿದೆ.
ಸ್ವಲ್ಪ ಸಮಯದ ನಂತರ ಇನ್ನೊಬ್ಬಳು. ಮದುವೆಗೆ ಮೊದಲು  ಮತ್ತೆ  ಯಾರೋ  ಅಂತೆ. ನನ್ನನ್ನ ಮಾತನಾಡಿಸಲೂ ಸಮಯವಿಲ್ಲದವರು ಕಂಡ ಕಂಡವರ  ಸೆರಗು ಹಿಡಿದರೆ ಹೇಗೆ ಸಹಿಸಲಿ..?
ಹೀಗೇ ಆದರೆ ಊರವರಿಗೆ ಮುಖ ತೋರಿಸಲು ಅಸಹ್ಯ ಎಂದು ನಾನು ತವರಿಗೆ ಬಂದೆ" ಎಂದು ಹೇಳುತ್ತಾ  ಕಣ್ಣೀರು ಸುರಿಸಿದಳು.

"ನಿಮ್ಮನ್ನು ನೋಯಿಸುವ ಉದ್ದೇಶದಿಂದ ನಾನು ಕೇಳಿಲ್ಲ ಮೇಡಂ.. ನಮ್ಮ ಕೆಲವು ಸಹೋದರಿಯರು ಅವರ ಬರಹಕ್ಕೆ ಮಾರುಹೋಗಿ ಅವರ ಫ್ಯಾನ್ ಆಗಿಬಿಟ್ಟಿದ್ದಾರೆ. ಅವರೇ ಆದರ್ಶ ವ್ಯಕ್ತಿ ಅಂದುಕೊಂಡು ಬಿಟ್ಟಿದ್ದಾರೆ. ಅದಕ್ಕೋಸ್ಕರ ನಿಮ್ಮಲ್ಲಿ ಸ್ವಲ್ಪ ಅವರ ವಿಚಾರ ತಿಳಿಯಬೇಕಿತ್ತು . ಇಷ್ಟು ಹೇಳಿದ್ದು ತುಂಬಾ ಉಪಕಾರ ಆಯ್ತು" ಎಂದು ಹೇಳಿ ಆಕೆಗೆ ಕೈಮುಗಿದೆ.
"ಸಾರ್.. ಅವರ ರಸಿಕತೆಯ ಬರಹಗಳಿಗೆ ಮಾರುಹೋಗದಂತೆ ನಿಮ್ಮ ಸಹೋದರಿಯರಿಗೆ ನನ್ನ ಪರವಾಗಿ ಹೇಳಿ.." ಎಂದು ಹೇಳಿ ಕಣ್ಣೀರು ಒರೆಸುತ್ತಾ ನನ್ನ ಉದ್ಯೋಗ, ಕೌಟುಂಬಿಕ ವಿಚಾರಗಳನ್ನು ಆತ್ಮೀಯವಾಗಿ ವಿಚಾರಿಸಿ ನನ್ನನ್ನು ಬೀಳ್ಕೊಟ್ಟಳು.

     ಮನೆಗೆ ತೆರಳಲು ಬಸ್ ಹಿಡಿದೆ. ಬಸ್ ಹತ್ತಿ ಸೀಟು ಹಿಡಿದು ಕುಳಿತ ನನಗೆ ಅವಳ ಮಾತು, ಕಣ್ಣೀರು ಮತ್ತೆ ಮತ್ತೆ ನೆನಪಿಗೆ ಬರುತ್ತಿತ್ತು. ಬಸ್ಸಿನಲ್ಲಿ  ತುಂಬಾ ಜನ ಇರಲಿಲ್ಲ. ಮೆಲ್ಲ ಶರ್ಟಿನ ಎರಡು ಬಟನ್ ಬಿಚ್ಚಿ ಅಲ್ಲಿರಿಸಿದ್ದನ್ನು ಹೊರತೆಗೆದೆ. ಈಯರ್ ಫೋನ್ ಹಾಕಿ ಆಡಿಯೋ ಸರಿ ಬಂದಿದೆಯೇ ಪರೀಕ್ಷಿಸಿದೆ. ಆಕೆಯ ನುಡಿ ಸ್ಪಷ್ಟವಾಗಿ ಕೇಳಿಸುತ್ತಿತ್ತು.. ಅಬ್ಬಾ ಬಚಾವ್..!! ಎಂದು ಸಮಾಧಾನ ಪಟ್ಟುಕೊಂಡೆ .
ಫೇಸ್ಬುಕ್ ಓಪನ್ ಮಾಡಿದೆ. ವೈಆರ್ಕೆಯ ಬರಹಗಳಿಗೆ ಸುಮಾಳ ಕಾಮೆಂಟ್ ಓದಿ ಅಸಹ್ಯ ಅನಿಸಿತು. ಆಕೆಯಂತೇ ಕಾಮೆಂಟ್ ಮಾಡುತ್ತಿರುವ ಇತರರಿಗೂ ಯಾವಾಗ ಬುದ್ಧಿ ಬರುತ್ತೋ ಎಂದುಕೊಂಡಾಗ ನಾನು ಇಳಿಯಬೇಕಾದ ಜಾಗ ಬಂತು. ನಡೆದು ಮನೆ ಸೇರಿದೆ. ಮಕ್ಕಳು ನನ್ನನ್ನು ಸ್ವಾಗತಿಸಿದರು. ಸುಮಾ ಎಂದಿನಂತೆಯೇ ಮುಖ ತಿರುಗಿಸಿದಳು. ಮಕ್ಕಳೊಂದಿಗೆ ಹರಟುತ್ತಾ ನನ್ನ ಕೆಲಸ ಕಾರ್ಯಗಳನ್ನು ಮುಗಿಸಿದೆ. ಮಕ್ಕಳನ್ನು ಪ್ರೀತಿಯಿಂದ ತಬ್ಬಿ ಮಲಗಿಸಿದೆ..

         ನನ್ನ ಮನಸ್ಸೀಗ ಸುಮಾಳತ್ತ. ಅಡುಗೆಮನೆಯತ್ತ ತೆರಳಿದೆ. ಬಾಚಿ ತಬ್ಬಲು ಪ್ರಯತ್ನಿಸಿದೆ. ಕೊಸರಿಕೊಂಡು ಬಿಡಿಸಿಕೊಂಡಳು. ವೈಆರ್ಕೆಯನ್ನು ನೋಡಿ ಸ್ವಲ್ಪ ಕಲೀರಿ ಎಂದು ಬುದ್ಧಿ ಹೇಳಿದಳು. ನಾನು ಆಕೆಯ ಕಡೆ ತಿರುಗಿ ಗಂಭೀರವಾಗಿ ನುಡಿದೆ "ನಾನು ನಿನಗೊಂದು ಆಡಿಯೋ ಕೇಳಿಸುತ್ತೇನೆ.. ಆಮೇಲೆ ನಿನಗೆ ಬೇಕಾದ್ದು ಮಾಡು. ನಿರ್ಧಾರ ನಿನಗೇ ಬಿಟ್ಟಿರುವೆ"  ಎಂದೆ. ಒಪ್ಪಿದಳು ಸುಮಾ. ಆಡಿಯೋ ಆನ್ ಮಾಡಿಟ್ಟೆ. ಆಡಿಯೋ ಕೇಳುತ್ತಿದ್ದ ಸುಮಾಳ ಮುಖ ಚಹರೆಯನ್ನು ಗಮನಿಸುತ್ತಿದ್ದೆ. ಆಶ್ಚರ್ಯ, ವಿಷಾದ ಎದ್ದು ತೋರುತ್ತಿತ್ತು. ಹಾಗೇ ಮೆಲ್ಲಗೆ ನನ್ನ ಹೆಗಲ ಮೇಲೆ ತಲೆಯಿಟ್ಟಳು. ಜಾರುತ್ತಿದ್ದ ಕಣ್ಣೀರ ಹನಿಗಳು ನನ್ನ ಎದೆಯನ್ನು ತೋಯಿಸಿದವು. ಪೂರ್ತಿ ಕೇಳುತ್ತಿದ್ದಂತೆ ಬಿಕ್ಕುತ್ತಾ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಳು..
"ರೀ... ಅವನು ಅಷ್ಟು ದೊಡ್ಡ ಮೋಸಗಾರ ಅಂತ ನನಗೆ ತಿಳಿಯಲೇ ಇಲ್ಲ. ಸರಿಯಾದ ಸಮಯಕ್ಕೆ ನನ್ನನ್ನು ಎಚ್ಚರಿಸಿದಿರಿ. ನೀವು ನನ್ನ ಅಪ್ಪಟ ಬಂಗಾರ. ನಿಮ್ಮನ್ನು ನಾನು ಅರ್ಥಮಾಡಿಕೊಳ್ಳಲೇ ಇಲ್ಲ. ನನ್ನದು ತಪ್ಪಾಯ್ತು" ಎಂದು ಅಳುತ್ತಿದ್ದರೆ ಸಂತೈಸುವ ಸರದಿ ನನ್ನದಾಗಿತ್ತು. ಸಂಸಾರದ ಸರಿಗಮದಲ್ಲಿ ತೇಲಿಹೋದೆವು "ಹಾಡು ಹಳೆಯದಾದರೇನು ಭಾವ ನವನವೀನ" ಜೋಡಿಯಾಗಿ ಹಾಡಿದೆವು. ನನ್ನ ಸಂಸಾರದಲ್ಲಿ ಮತ್ತೆ ನಗುವರಳಿತು. ಸುಮಾ ಮತ್ತೆ ನನ್ನ ಬಾಳಿನಲ್ಲಿ ಕಂಪುಬೀರುವ ಸುಮವಾದಳು.

✍️...ಅನಿತಾ ಜಿ.ಕೆ.ಭಟ್.

ಈ ಕಥೆಯು ಜೂನ್ 3, 2021 ರ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ನನ್ನ ಕಥೆಯನ್ನು ಆಯ್ದು ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು. 🙏