Saturday, 19 June 2021

ಹನಿ ಮಳೆ, ಸೋನೆ ಮಳೆ

 



ಅಕ್ಷರದೀಪ- ನ್ಯಾನೋ ಕಥೆ

ವಿಷಯ- ಹನಿ ಮಳೆ

ಶೀರ್ಷಿಕೆ: ಕಾಲ


    ಹನಿಮಳೆ ಕಡಿಮೆಯಾಗಬಹುದೆಂದು ಕಾಯುತ್ತಾ ನಿಂತ ಕೊರಪೋಳುವಿನ ಬಳಿ ಸುಶೀಲಮ್ಮಳ ಮಾತುಕತೆ ಸಾಗಿತ್ತು. ಆಚೆಬದಿ ಏನೋ ಕೆಲಸ ಮಾಡುತ್ತಿದ್ದ ಸುನಯನಾಳ ಬಳೆಯೊಂದು ಒಡೆದಾಗ ಸುಶೀಲಮ್ಮ ದನಿಯೆತ್ತಿ "  ಗಾಜಿನ ಬಳೆಗಳು ಬೇಗನೆ ಒಡೆಯುತ್ತವೆ. ಇವಳಿಗೆಷ್ಟು ಖರ್ಚು. ಇಂತಹಾ ಬಳೆಗಳಾದರೆ ಒಳ್ಳೆಯದು" ಎಂದು ತನ್ನ ಕೈಯ ಒಡೆಯದ ಬಳೆಗಳನ್ನು ತೋರಿಸಿದ್ದರು. ಸುನಯನಾಳ ಕಂಗಳು ನೆನೆದಿದ್ದವು. ಹಲವು ವರ್ಷಗಳ ನಂತರ ಪತಿಯ ಅಗಲಿಕೆಯ ಸಂದರ್ಭದಲ್ಲಿ ತನ್ನ ಗಾಜಿನ ಬಳೆಗಳನ್ನೆಲ್ಲ ಗುಪ್ತವಾಗಿ ಸುನಯನಾಳ ಆಭರಣದ ಪೆಟ್ಟಿಗೆಯ ಬದಿಗಿರಿಸಿ, ಒಡನೆಯೇ ಓಡಿದ್ದಾರೆ ಒಡೆಯದ ಬಳೆಗಳೊಂದಿಗೆ, ಹನಿಮಳೆಗೆ ಅಂಗಳದಲ್ಲಿದ್ದ ಬಟ್ಟೆಗಳು ನೆನೆಯದಂತೆ ಒಳಗಿರಿಸಲು.


✍️... ಅನಿತಾ ಜಿ.ಕೆ.ಭಟ್.

18-06-2021.


ಫಲಿತಾಂಶ: ಪ್ರಥಮ ಸ್ಥಾನ 

        💐💐💐💐💐💐


ದತ್ತ ಪದ: ಸೋನೆ ಮಳೆ (ಭಾವಗೀತೆ)
ಶೀರ್ಷಿಕೆ: ಮಳೆ-ಇಳೆ

ಇಳೆಯೊಲುಮೆ ನಲುಮೆಯಲಿ
ಹರಿಸಿ ಪ್ರೇಮಧಾರೆ ಸೋನೆಮಳೆ
ವಿರಹದುರಿ ತಂಪಾಗಿ ಹಸಿರಸೆರಗ
ಹಾಸಿ ಹನಿಮುತ್ತುಗಳ ಸೆಳೆದವಳೆ||೧||

ಬಾನಂಚಿನ ಮೇಘ ವಿಸ್ಮಯದಿ
ರೌರವಬ್ಬರವು ತಣಿದಿಹುದು
ಭೂರಮೆಯ ಒಡಲು ಮಡಿಲು
ಪುಳಕಗೊಂಡು ಕುಣಿದಿಹುದು||೨||

ಮುಗಿಲಮಾಲೆ ಕರಗಿ ಜಾರಿ
ನದಿತೊರೆಗಳ ಕಂಠಿಹಾರ
ಲಜ್ಜೆಬೆರೆತ ಸಂಭ್ರಮ ಕಾತರ
ಬಂಧಬೆಸೆಯಲಿಂದು ಸಾಗರ||೩||

ಬಿರುಸು ಸರಸ ಮೋದ ಲೀಲೆ
ತೋಯ್ದು ಗೆಲುವ ಧಾರಿಣಿ
ಭದ್ರಭಾವದಿ ಜೀವ ಚಿಗುರಿಸಿ
ಉಸಿರ ಹರಸುವ ಭೂಜನನಿ||೪||

✍️... ಅನಿತಾ ಜಿ.ಕೆ.ಭಟ್.
19-06-2021.
ಫಲಿತಾಂಶ: ಉತ್ತಮ ಸ್ಥಾನ


        💐💐💐💐💐💐💐💐💐


ಚುಟುಕು
ವಿಷಯ:ತ್ಯಾಗ
ಶೀರ್ಷಿಕೆ: ತ್ಯಾಗ

ಇನ್ನಷ್ಟು ಮತ್ತಷ್ಟು ಬೇಕೆನಗೆ ಸಿರಿಯು
ಲೋಭದಿಂದಲೆ ಸಕಲ ರೋಗ
ಇರುವುದನು ತೋಷದಿಂದಲೆ ಹಂಚಿ
ತೃಪ್ತಿಯಿಂದಲೆ ಬದುಕುವುದು ತ್ಯಾಗ||

            💐💐

ರಸ್ತೆಯ ನಿರ್ಮಾಣದಲ್ಲಿ ಇಹುದು
ಜನಸಾಮಾನ್ಯರ ಭೂಮಿ ತ್ಯಾಗ
ಅರಿತು ಸಂಚರಿಸಲು ಬೇಕು ನಿತ್ಯ
ಕಡಿವಾಣ ಹಾಕುತಲಿ ಅತಿವೇಗ||

                💐💐

ಊಟನಿದಿರೆಗಳ ತ್ಯಾಗ ಮಾಡುತಲಿ
ಹೊತ್ತು ಹಡೆದು ಲಾಲಿಹಾಡುವಳಮ್ಮ|
ಮಂದಹಾಸ ವಿಶ್ರಾಂತಿ ಅಡೆತಡೆಗಳ
ಕಷ್ಟಗಳ ಮರೆತು ಬದುಕಕಟ್ಟುವನಪ್ಪ||

✍️... ಅನಿತಾ ಜಿ.ಕೆ.ಭಟ್.
20-06-2021.

               💐💐💐💐💐💐



#ಕೀಟಲೆ ಕಿಟ್ಟ


ಕೆನೆಯಹಾಲ ಕೇಳಿ ಕುಡಿವ
ನಮ್ಮ ಪ್ರೀತಿಯ ಪುಟ್ಟ
ಮನೆಯ ಒಳ-ಹೊರ ಆಡಿ ನಲಿವ
ತುಂಟ ಕೀಟಲೆ ಕಿಟ್ಟ||೧||

ಮಳೆ ಬಂದರೆ ನೆನೆಯುತಿರುವ
ಯಾರ ಮಾತನು ಕೇಳನು
ದೋಣಿ ಮಾಡಿ ನೀರೊಳಾಡಿ
ತನ್ನ ತಾನೇ ಮರೆವನು||೨||

ದೀಪ ಬೆಳಗೆ ಸೆರಗ ಹಿಡಿವ
ಬಾಗಿ ಬಿಸಿಯ ಮುಟ್ಟುವ
ಕುಳಿತ ಅಮ್ಮನ ಬೆನ್ನಿಗೊರಗಿ ಜಡೆಯ
ತುದಿಯ ನೇಯ್ದು ಕಟ್ಟುವ||೩||

ತೊದಲು ಮಾತಲಿ ಎಲ್ಲರೊಡನೆ
ಬೆರೆತು ಹೊಸತು ಕಲಿಯುವ
ಅಪ್ಪ ಬರಲು ಬೇಗನೋಡುತ
ತಿನಿಸ ಚೀಲದಿ ಹುಡುಕುವ||೪||

ಹಲವು ಮಾದರಿ ಕಾರು ಬೈಕು
ಬೇಕು ಅವನ ಆಟಕೆ
ಕೆಲವು ದಿನದಿ ಗಾಲಿ ಕಳಚೆ
ಸಿದ್ಧ ನವೀನ ಪ್ರಯೋಗಕೆ||೫||

ದಿನವು ಬೇಡುವ ಕನಸು ಕಾಣುತ
ಹೊಸತು ಫಳಫಳ ಫೋನನು
ಲಲ್ಲೆಗರೆದು ಮುದ್ದುಮಾಡಲು
ಹುಸಿಯ ಕೋಪವ ಮರೆವನು||೬||

ಲಾಲಿ ಹಾಡಿ ತೂಗಿ ಮಲಗಿಸಿ
ಅಮ್ಮ ದೃಷ್ಟಿ ತೆಗೆವಳು
ಪುಟ್ಟ ಚಂದಿರ ಎಷ್ಟು ಸುಂದರ
ದೇವನುಡುಗೊರೆ ಎನುವಳು||೭||

✍️... ಅನಿತಾ ಜಿ.ಕೆ.ಭಟ್.
26-06-2021.
ದತ್ತ ವಿಷಯ:ನಮ್ಮ ಪುಟ್ಟ

     💐💐💐💐💐💐💐💐💐💐💐💐💐


No comments:

Post a Comment