Wednesday, 21 July 2021

ಎಳೆಯ ತರಳೆ- ಸಾಂಪ್ರದಾಯಿಕ ಶೈಲಿಯ ಹಾಡು

 


#ಎಳೆಯ ತರಳೆ

ಮನೆಮನವ ಬೆಳಗಿರುವ ಹೊನ್ನಪ್ರಭೆಯಿವಳು
ರಕ್ಷಿಸಿರಿ ಮಮತೆಯಲಿ ಕುಂದದಂತೆ ನಗೆಮುಗುಳು||ಪ||

ಕಷ್ಟಗಳ ಕಾಣದೆಯೇ ತನ್ನಿಷ್ಟದಂತೆ ಬೆಳೆದಿಹಳು
ಮುಷ್ಟಿನೋವನು ಕೂಡಾ ತಾಳದವಳು
ಹಿರಿಯರಿಗೆ ಕೈಮುಗಿವ ಸಂಸ್ಕಾರ ನಡೆಯವಳು
ಇರಿವ ಮಾತಿಗೆ ಮರುಗಿ ಸೊರಗುವವಳು||೧||

ತಪ್ಪುಮಾಡಿದರಿವಳ ಒಪ್ಪಿ ಮನ್ನಿಸುವ ಮನವು
ಇಪ್ಪುದು ನಿಮ್ಮಲ್ಲಿ ಬಂಧುಜನರೇ
ಇಪ್ಪತ್ತುತುಂಬಲು ಇಹುದು ಇನ್ನೆರಡುವರುಷವು
ಸುಪ್ಪತ್ತಿಗೆಯಿನ್ನು ನಿಮ್ಮ ಪ್ರೀತಿಬೆಸುಗೆಗಳು||೨||

ಮುಡಿಗೆನಿತ್ಯ ಮಲ್ಲಿಗೆಯ ಮುಡಿಸದಿದ್ದರು ಕಾಂತ
ಸಿಡಿಮಿಡಿದು ನೋಯಿಸುತ ನುಡಿಯದಿರಲಿ
ಬಡಿಸುವಳು ಒಡಲಸುಖ ಮಡಿಲತುಂಬುತ್ತ
ಹಡೆದು ಬೆಳೆಸುವಳು ನಿಮ್ಮ ಸತ್ಕುಲವ||೩||

ಅನುಗಾಲ ನಿಮ್ಮವಳು ಅನುಸರಿಸಿ ಬರುವವಳು
ಅನುರೂಪ  ಸಾಂಗತ್ಯದಿ ಪತಿಯನೆರಳೇ
ಅನುದಿನವು ಪಾಲಿಸಿರಿ ಅನುಕ್ಷಣವು ಮೈಮರೆಯದೆಯೆ
ಅನುಪಮ ಕೋಮಲೆಯು ಎಳೆಯತರಳೆ||೪||

ಕರುಳಬಳ್ಳಿಯನಿಮಗೆ ಒಪ್ಪಿಸುವೆವೀ ಸುದಿನ
ತೌರನೆನಪಿನ ಕೊರಗು ಕಾಡದಂತೆ
ಕರಗಳಲಿ ಕರವಿಟ್ಟು ಬೇಡಿಕೊಳ್ಳುವೆವಿಂದು
ಸಿರಿಕುವರಿಯ ಕಾಣಿ ನಿಮ್ಮಮಗಳಂತೆ||೫||

✍️... ಅನಿತಾ ಜಿ.ಕೆ.ಭಟ್.
17-07-2021.

#ಸಾಂಪ್ರದಾಯಿಕ ಶೈಲಿಯ ಮದುವೆಯ ಹಾಡು..
#ಹೆಣ್ಣೊಪ್ಪಿಸಿಕೊಡುವ ಹಾಡು.

2 comments: