Monday, 31 May 2021

ತಲ್ಲಣಿಸದಿರು ಕಂಡ್ಯ ತಾಳು ಮನವೇ

     


      ಕೊರೋನಾ ಕಾರಣದಿಂದ ಲಾಕ್ ಡೌನ್ ಮಾಡಿದ್ದರೂ ಪ್ರಕೃತಿ ಲಾಕ್ ಆಗಿರಲಿಲ್ಲವಲ್ಲ!  ಎಂದಿನಿಂದಲೂ ಹೆಚ್ಚು ಕಲರವ ಪ್ರಕೃತಿಯ ಮಡಿಲಲ್ಲಿತ್ತು. ಮುಂಜಾನೆಯ ಹಕ್ಕಿಗಳ ಚಿಲಿಪಿಲಿ, ಜಗಕೆ ಚೈತನ್ಯ ತುಂಬುತ್ತಾ,  ಕತ್ತಲೆಯ ಮುಸುಕನು ಸರಿಸಿ ಹೊಂಬಣ್ಣದಿಂದ ಮೇಲೆದ್ದು ಬರುವ ರವಿಯ ತೇಜಸ್ಸನ್ನು ಬೆರಗುಗಣ್ಣಿನಿಂದ ದಿಟ್ಟಿಸುತ್ತಾ ನನ್ನ ದಿನಚರಿ ಆರಂಭವಾಗುತ್ತಿತ್ತು. ದಿನದ ಕೆಲಸ ಕಾರ್ಯಗಳಲ್ಲಿ ಮುಳುಗಿ, ಎಲ್ಲರ ಬೇಕು ಬೇಡಗಳ ಬಗ್ಗೆ ಗಮನ ಕೊಡುತ್ತಾ, ಮಕ್ಕಳೊಂದಿಗೆ ಮಗುವಾಗುತ್ತಾ ಸಂಜೆಯಾದದ್ದೇ ತಿಳಿಯುತ್ತಿರಲಿಲ್ಲ. ಸಂಜೆಯ ತಂಗಾಳಿ ಸವಿಯುತ್ತಾ ಬಾನಂಚಿನ ತುಂಬಾ ಹಿಂಡು ಹಿಂಡಾಗಿ ಹಾರುವ ಪಕ್ಷಿಗಳು, ಮನೆಯ ಮುಂದಿನ ಗದ್ದೆಯಲ್ಲಿ ನೆಲವ ಕುಕ್ಕಿ ಕುಕ್ಕಿ ಅರಸುವ ನವಿಲುಗಳು ಕಣ್ಣಿಗೆ ಮುದನೀಡುತ್ತಿದ್ದವು. 


    ಇಂತಹಾ ಸಮಯದಲ್ಲಿ ಕಾಣಿಸಿಕೊಂಡಿತ್ತು ಶೀತ ಮತ್ತು ಜ್ವರ. ತಡಮಾಡದೆ ವೈದ್ಯರನ್ನು ಸಂಪರ್ಕಿಸಿದಾಗ ಸಾಮಾನ್ಯ ಫ್ಲೂ ಜ್ವರವೆಂದು ಔಷಧ ನೀಡಿದರು. ಇದರ ಬೆನ್ನಲ್ಲೇ ಪತಿ ಮಕ್ಕಳಿಗೂ ಜ್ವರ ಕಾಣಿಸಿಕೊಂಡಿತು. ಅವರಿಗೂ ಚಿಕಿತ್ಸೆ ನೀಡಿದ ವೈದ್ಯರು "ಇದು ವೈರಲ್ ಫ್ಲೂ.. ಪ್ರೀ ಮಾನ್ಸೂನ್ ನಿಂದಾಗಿ ಈಗ ಹಲವರಲ್ಲಿ  ಕಾಣಿಸಿಕೊಳ್ಳುತ್ತಿದೆ. ಹೆದರುವ ಅವಶ್ಯಕತೆ ಇಲ್ಲ. ಐದು ದಿನವಾದರೂ ಗುಣವಾಗದಿದ್ದರೆ ಕೋವಿಡ್ ಟೆಸ್ಟ್ ಮಾಡಿಸಿ"  ಎಂದರು. ಅವರು ಹೇಳಿದಂತೆಯೇ ಚಿಕಿತ್ಸೆ ಪಡೆದುಕೊಂಡೆವು. ಈ ಸಮಯದಲ್ಲಿ ನಾವು ನೆರೆಹೊರೆಯ ಯಾರೊಂದಿಗೂ ಉದ್ದೇಶಪೂರ್ವಕವಾಗಿಯೇ ಬೆರೆಯಲಿಲ್ಲ. ವೈದ್ಯರ ಭೇಟಿ, ನಿತ್ಯದ ಅಗತ್ಯ ವಸ್ತುಗಳ ಖರೀದಿಯ ಸಂದರ್ಭದಲ್ಲಿ ಅತೀವ ಜಾಗರೂಕತೆ ವಹಿಸಿದೆವು.


     ವೈದ್ಯರ ಔಷಧದೊಂದಿಗೆ ನಮ್ಮ ಮನೆಮದ್ದಿನ ಕಷಾಯದ ಉಪಚಾರವೂ ನಡೆಯಿತು. ಐದು ದಿನಗಳಲ್ಲಿ ಎಲ್ಲರೂ ಗುಣಮುಖರಾದೆವು. ಆದರೂ ಸುಸ್ತು ಕಡಿಮೆಯಾಗಿರಲಿಲ್ಲ. ಅಡುಗೆ ರುಚಿಸುತ್ತಿರಲಿಲ್ಲ. ಮಲ್ಲಿಗೆಯ ಮಾಲೆಯ ಕಂಪನ್ನೂ ನಾಸಿಕವು ಗ್ರಹಿಸುತ್ತಿರಲಿಲ್ಲ. ಈಗ ಕೋವಿಡ್ ಟೆಸ್ಟ್ ಮಾಡಿಸಬೇಕೋ ಬೇಡವೋ ಎಂಬ ಸಂದೇಹ ನಮ್ಮನ್ನು ಕಾಡಿತು. ಆಗ ನೆನಪಾದವರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ನಿವೃತ್ತ ಶುಶ್ರೂಷಕಿ ಮುದ್ರಜೆ ಪಾರ್ವತಿ ಅಕ್ಕ. ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದೆ. "ಅಗತ್ಯವಾಗಿ ಟೆಸ್ಟ್ ಮಾಡಿಸಿ" ಎನ್ನುತ್ತಾ... ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಸಲಹೆಗಳನ್ನು ನೀಡಿದರು.


      ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆರ್ ಟಿ ಪಿಸಿ ಆರ್ ಟೆಸ್ಟ್ ಮಾಡಿಸಿಕೊಂಡೆವು. ಅಲ್ಲೇ ಇದ್ದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡೆವು. ಅನಾರೋಗ್ಯದ ಲಕ್ಷಣಗಳನ್ನು ಕೇಳಿ ಬರೆದುಕೊಂಡು ನಾಲ್ಕು ಪ್ಯಾರಾಸಿಟಮಾಲ್ ಮಾತ್ರೆ, ಹತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ನನಗೆ ನೀಡಿದರು. ಪತಿಗೆ ಪ್ಯಾರಾಸಿಟಮಾಲ್ ಮಾತ್ರೆ ಮತ್ತು ಹತ್ತು ಜಿಂಕ್, ವಿಟಮಿನ್ ಸಿ ಇರುವ ಮಾತ್ರೆ ನೀಡಿ, ಆಗಾಗ ಬಿಸಿಬಿಸಿ ನೀರು ಕುಡಿಯುತ್ತಿರಿ ಎಂದರು.


    ಮರುದಿನ ಮಧ್ಯಾಹ್ನ ಕೋವಿಡ್ ಪಾಸಿಟಿವ್ ಎಂಬ ರಿಪೋರ್ಟಿನ  ಮೆಸೇಜ್ ಬಂತು.  ಹೋಂ ಕ್ವಾರೆಂಟೈನ್ ಗೆ ಸಜ್ಜಾದೆವು. ನೆರೆಮನೆಯವರು ಅಗತ್ಯವಸ್ತುಗಳನ್ನು ತಂದುಕೊಡಲು ಒಪ್ಪಿಕೊಂಡರು. ಪಾರ್ವತಿ ಅಕ್ಕನಿಗೂ ಕರೆ ಮಾಡಿ ವಿಷಯ ತಿಳಿಸಿದೆ. ಧೈರ್ಯ ಹೇಳಿ ಒಂದಷ್ಟು ಆರೋಗ್ಯದ ಸಲಹೆಗಳನ್ನು ನೀಡಿದರು. ಅಷ್ಟು ದಿನ ಯಾರೊಡನೆಯೂ ಜ್ವರ ಬಂದ ವಿಷಯ ಹಂಚಿಕೊಳ್ಳದಿದ್ದರೂ ಆ ದಿನ ಅಮ್ಮನಿಗೆ ಕರೆಮಾಡಿ ಜ್ವರ ಬಂದು ಗುಣವಾಗಿರುವುದು, ಕೊರೋನಾ ಪಾಸಿಟಿವ್ ಬಂದಿರುವುದನ್ನು ತಿಳಿಸಿದೆ. 


      ಮಕ್ಕಳು ಬೇಗನೆ ಗುಣಮುಖರಾಗುತ್ತಿದ್ದುದರಿಂದ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡೆವು. ಪತಿಗೆ ಆಗಾಗ ಸ್ವಲ್ಪ ಒಣ ಕೆಮ್ಮು ಕಾಡುತ್ತಿತ್ತು. ಒಂದೆರಡು ದಿನ ತಲೆನೋವು ಕೂಡಾ ಕಾಣಿಸಿಕೊಂಡಿತ್ತು. ಬೇಕೆಂದಾಗ ಅಲೋಪತಿ ಔಷಧಿ ಮತ್ತು ಮನೆಮದ್ದು ಸೇವಿಸುತ್ತಿದ್ದರು. ನನಗೆ ಸುಸ್ತಾಗುವುದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನೀಡಿದ ಕ್ಯಾಲ್ಸಿಯಂ ಮಾತ್ರೆ ಸೇವಿಸಿ ಬಿಸಿಬಿಸಿ ನೀರು ಆಗಾಗ ಕುಡಿಯುತ್ತಿದ್ದೆ.


     ಎರಡು ದಿನಗಳ ಬಳಿಕ ನನಗೆ ಇದ್ದಕ್ಕಿದ್ದಂತೆ ಬೆಳಗ್ಗೆ ಏಳುತ್ತಲೇ ತಲೆಸುತ್ತು ಆರಂಭವಾಯಿತು. ನಿಂತಲ್ಲೇ ಕುಸಿಯುವಂತಾಗಿ, ಐದು ನಿಮಿಷ ಅಲ್ಲೇ ಕೆಳಗೆ ಕುಳಿತುಬಿಟ್ಟೆ. ಅದಕ್ಕೆ ಸೂಕ್ತವಾದ ಮುದ್ರೆ ಮಾಡಿದೆ. ಆಗ ಸರಿಹೋಯಿತು. ದ್ರವಾಹಾರ ಸೇವಿಸಿ ದೈನಂದಿನ ಕೆಲಸಗಳನ್ನೆಲ್ಲ ಮಾಡಿದೆ. ತಿಂಡಿ ಸೇವಿಸಲು ಕುಳಿತಾಗ ಪುನಃ ತಲೆಸುತ್ತಿ ಅಲ್ಲೇ ಕುಸಿದ ನನ್ನನ್ನು ಪತಿ ರೂಮಿಗೆ ಕರೆದೊಯ್ದು ಮಲಗಿಸಿದರು. ಶರಬತ್ತು, ನೀರು ಕುಡಿದು ವಿಶ್ರಾಂತಿ ಪಡೆದುಕೊಂಡಾಗ ಸ್ವಲ್ಪ ಸರಿಹೋದಂತೆ ಅನಿಸುತ್ತಿತ್ತು.


  ಮುಂದೆ ಹೀಗೆ ಪ್ರತಿಬಾರಿ ಕುಸಿಯುವಂತಾದಾಗಲೂ ನಾನು ಯಾರನ್ನೂ ಸಹಾಯಕ್ಕಾಗಿ ಕೂಗಿ ಕರೆಯುತ್ತಿರಲಿಲ್ಲ. ಆ ಕ್ಷಣದಲ್ಲಿ ಅದಕ್ಕೆ ಸೂಕ್ತವಾದ ಮುದ್ರೆಯನ್ನೂ ಮಾಡುತ್ತಿದ್ದೆ. ಒಂದೆರಡು ನಿಮಿಷ ಅದೇ ಸ್ಥಳದಲ್ಲಿ ವಿರಮಿಸಿ, ನನ್ನ ಅಂತಃಶಕ್ತಿಯನ್ನು ಬಡಿದೆಬ್ಬಿಸುತ್ತಿದ್ದೆ.  "ಅನಿತಾ..ನಿನ್ನಿಂದ ಆಗುತ್ತೆ.. ಇದಕ್ಕಿಂತ ಕ್ಲಿಷ್ಟ ಸನ್ನಿವೇಶಗಳನ್ನು ಎದುರಿಸಿ ಬಂದವಳು ನೀನು. ಒಂದು ಕ್ಷಣ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಮೇಲೇಳುವ ಪ್ರಯತ್ನ ಮಾಡು." ಎಂದುಕೊಳ್ಳುತ್ತಿದ್ದರೆ ಸ್ವಲ್ಪ ಹೊತ್ತಿನಲ್ಲಿ ಏಳುವಷ್ಟು ಶಕ್ತಿ ತುಂಬುತ್ತಿತ್ತು. ಬೇಕಾದ ನೀರು, ಶರಬತ್ತು ಮಾಡಿ ಕುಡಿದು ಕೋಣೆಗೆ ತೆರಳಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದೆ. ದೃಶ್ಯ ಮಾಧ್ಯಮದಲ್ಲಿ ಜನ ಎಲ್ಲೆಂದರಲ್ಲಿ ಕುಸಿದು ಬೀಳುವುದನ್ನು ಕಂಡಾಗ ಆದಷ್ಟು ಭಯ, ಸ್ವತಃ ನಾನೇ ಕುಸಿದಾಗ ಆಗುತ್ತಿರಲಿಲ್ಲ. ಬದಲಾಗಿ ಅದರಿಂದ ಪಾರಾಗಲು ನನ್ನ ಅಂತಃಶಕ್ತಿಯನ್ನು ಪ್ರಚೋದಿಸುವತ್ತ ಗಮನಹರಿಸುತ್ತಿದ್ದೆ. 'ಈ ಕ್ಷಣ ಶಾಶ್ವತವಲ್ಲ. ಈ ಯಾತನೆ ಬಲು ಬೇಗನೆ ಕೊನೆಗೊಳ್ಳುತ್ತದೆ. ಸುಂದರ ನಾಳೆಗಳಿಗಾಗಿ ಇಂದಿನ ಆಪತ್ತನ್ನು ಎದುರಿಸಲೇಬೇಕು' ಎಂದು ನನಗೆ ನಾನೇ ಆಗಾಗ ಹೇಳಿಕೊಳ್ಳುತ್ತಿದ್ದೆ.


     ಎಷ್ಟು ನೀರು ಕುಡಿದರೂ ದಣಿಯದ ದಾಹ, ಫೋನಿನಲ್ಲಿ ಎರಡೇ ನಿಮಿಷ ಮಾತನಾಡಿದರೂ ಒಣಗುವ ಗಂಟಲು, ಬಿರಿವ ತುಟಿ, ಸುತ್ತುವ ತಲೆ.. ಅಮ್ಮ ಆರೋಗ್ಯ ವಿಚಾರಿಸಲು ಕರೆ ಮಾಡಿದರೂ ಸಹ "ಅಮ್ಮಾ.. ಎರಡೇ ನಿಮಿಷ ಮಾತನಾಡುವುದು.. " ಎಂದು ಹೇಳಿಯೇ ಮಾತು ಆರಂಭಿಸುತ್ತಿದ್ದೆ. ಅಮ್ಮನೂ ಅಷ್ಟೇ ಬಹಳ ಚುಟುಕಾಗಿ ವಿಚಾರಿಸಿಕೊಂಡು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಜೀವನದಲ್ಲಿ ಇದೇ ಮೊದಲ ಬಾರಿಗೆ ಅಮ್ಮ-ಮಗಳ ಸಂಭಾಷಣೆ ಇಷ್ಟು ಚಿಕ್ಕಚೊಕ್ಕದಾಗಿ ನಡೆದಿರುವುದು ಎಂದರೂ ತಪ್ಪಿಲ್ಲ! ಕೆಲವು ದಿನ ಕರೆ ಸ್ವೀಕರಿಸಲೂ ಸಾಧ್ಯವಾಗದೆ, ಪತಿ ಅಥವಾ ಮಗನಿಗೆ ವಹಿಸಿಬಿಡುತ್ತಿದ್ದೆ. 


     ಹೀಗೆಯೇ ಮೂರು ನಾಲ್ಕು ದಿನವಾದಾಗ ಸ್ವಲ್ಪ ಉಸಿರಾಟದ ಸಮಸ್ಯೆ ಆರಂಭವಾಯಿತು. ಗಂಟಲುನೋವು, ಶೀತ, ಕಫ.. ಇತ್ಯಾದಿ ಯಾವ ಸಮಸ್ಯೆಯೂ ಇರಲಿಲ್ಲ. ಆದರೂ ಏದುಸಿರು ಬರುತ್ತಿತ್ತು. ಒಬ್ಬ ಫಿಸೀಶಿಷಯನ್ ಗೆ ಕರೆ ಮಾಡಿ ಆರೋಗ್ಯ ಸ್ಥಿತಿಯನ್ನು ವಿವರಿಸಿದೆ. "ರಿಸ್ಕ್ ತೆಗೆದುಕೊಳ್ಳುವುದು ಬೇಡ. ಆಸ್ಪತ್ರೆಗೆ ದಾಖಲಾಗಿ" ಎಂದರು. ನನಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದೆಂಬ ಭಾವನೆ. ಆರೋಗ್ಯದ ಬಗ್ಗೆ ಮತ್ತಷ್ಟು ವಿಚಾರಿಸಿಕೊಂಡ ವೈದ್ಯರು "ಯಾವುದಕ್ಕೂ ಸಂಜೆ ಹೇಳುತ್ತೇನೆ. ಹಿಂದಿನ  ಪ್ರಿಸ್ಕ್ರಿಪ್ಷನ್ ಕಳುಹಿಸಿ ಕೊಡಿ" ಎಂದರು.


   ಇಂತಹ ಸಮಯದಲ್ಲಿ ಪ್ರೋನಿಂಗ್ ಎಕ್ಸೆರ್ಸೈಸ್ ತುಂಬಾ ಸಹಾಯ ಆಯ್ತು. ರಾತ್ರಿ ಫಿಸಿಶಿಯನ್  ಔಷಧೋಪಚಾರದ ಪ್ರಿಸ್ಕ್ರಿಪ್ಷನ್ ಕಳುಹಿಸಿದರು. ಕೋವಿಡ್ ಸೋಂಕು ತಗಲಿದವರಿಗೆ ಕೊಡುವಂತಹ ಔಷಧಗಳು ಮತ್ತು ಸಿಂಪ್ಟಮ್ಯಾಟಿಕ್ ಔಷಧಿಗಳು ಅದರಲ್ಲಿದ್ದವು. ಮೊದಲ ಡೋಸ್ ಸೇವಿಸಿ ಒಂದು ಗಂಟೆಗೇ ಸ್ವಲ್ಪ ಸರಿಹೋದಂತೆ ಅನ್ನಿಸಿ, ಮನೆಯಲ್ಲಿ ಚಿಕಿತ್ಸೆ ಪಡೆದು ಗುಣವಾಗಬಹುದೆಂಬ ವಿಶ್ವಾಸ ಮೂಡಿತು. ಕೆಲವು ದಿನಗಳ ಚಿಕಿತ್ಸೆ ಪಡೆದು ತಲೆಸುತ್ತು, ನಿತ್ರಾಣ ಶಮನವಾಗಿ ಶರೀರವು ಸಹಜ ಆರೋಗ್ಯದತ್ತ ಮರಳಿತು.

      ಈಗ ಎಲ್ಲರೂ ಗುಣಮುಖರಾಗಿದ್ದೇವೆ. ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದೇವೆ. ಹೋಂ ಕ್ವಾರೆಂಟೈನ್ ಅವಧಿಯೂ ಪೂರ್ಣಗೊಂಡಿದ್ದು,  ಜೀವನವು ಮತ್ತೆ ಯಥಾಸ್ಥಿತಿಯಲ್ಲಿ ಸಾಗುತ್ತಿದೆ. 


       ನಮ್ಮ ಜೀವನದಲ್ಲಿ ಹಲವಾರು ಸಲ ಅನಾರೋಗ್ಯ,  ಜ್ವರದಿಂದ ಬಳಲಿದ್ದೇವೆ. ಇದಕ್ಕಿಂತಲೂ ಹೆಚ್ಚು ಯಾತನೆ ಅನುಭವಿಸಿದ್ದೂ ಇದೆ. ಆದರೆ ಇದು ಹೊಸ ಸೋಂಕು ಹಾಗೂ ವರುಷದಿಂದೀಚೆಗೆ ವಿಶ್ವದಾದ್ಯಂತ ಹಬ್ಬಿ  ಜನರನ್ನು ಕಂಗೆಡಿಸಿರುವುದರಿಂದ ಸ್ವಲ್ಪ ಹೆಚ್ಚೇ ಎಚ್ಚರವಹಿಸಿದ್ದೆವು.  ನಿರ್ಲಕ್ಷ್ಯ ತೋರಿದರೆ ಪ್ರಾಣಾಪಾಯ ತಂದೊಡ್ಡುವ ಸೋಂಕು ಇದಾಗಿದ್ದರೂ 'ಕೊರೋನಾ ರುದ್ರನರ್ತನ', 'ಕೊರೋನಾ ರಣಕೇಕೆ', 'ಅಟ್ಟಹಾಸಗೈಯುತ್ತಿರುವ ಕೊರೋನಾ',  'ಸಿಕ್ಕಸಿಕ್ಕವರನ್ನು ಬಲಿಪಡೆಯುತ್ತಿರುವ ಕೋವಿಡ್ ಮಹಾಮಾರಿ' ಎಂಬ ಬ್ರೇಕಿಂಗ್ ನ್ಯೂಸಿನ ಹೆಡ್ ಲೈನ್ ಗಳು ಹುಟ್ಟಿಸಿದಷ್ಟು ಭಯ ಸ್ವತಃ ಅನುಭವಿಸುವಾಗ ಆಗಲಿಲ್ಲ.


     ಈ ಸಮಯದಲ್ಲಿ ನಾವು ನಮ್ಮ ಆತ್ಮವಿಶ್ವಾಸವನ್ನು ಬಲಗೊಳಿಸುತ್ತಲೇ ಇದ್ದೆವು.  ಆಗಾಗ ನಗೆಚಟಾಕಿಗಳನ್ನೂ ಹಾರಿಸುತ್ತಿದ್ದೆವು. ನಾನು ಆಯಾಯ ಸಂದರ್ಭದ ಅನಾರೋಗ್ಯಕ್ಕೆ ತಕ್ಕಂತೆ ಪರಿಹಾರಕ್ಕಾಗಿ ಮುದ್ರೆಗಳನ್ನೂ ಮಾಡುತ್ತಿದ್ದೆ. ದೈನಂದಿನ ಕೆಲಸಕಾರ್ಯಗಳ ಕಡೆಗೂ ಮನಸು ಕೇಂದ್ರೀಕರಿಸಿದೆವು. ಸಂಗೀತ, ಕೊಳಲುವಾದನಗಳನ್ನು ಆಲಿಸುತ್ತಿದ್ದೆವು. ಬಸಳೆ, ಹರಿವೆ, ಕುಂಬಳಕಾಯಿ, ಸೌತೆಕಾಯಿಗಳನ್ನು ಬಳಸಿದ್ದೆವು. ಬಿಸಿನೀರು, ಶರಬತ್ತು, ರಾಗಿ ಗಂಜಿ, ಕೊತ್ತಂಬರಿ-ಜೀರಿಗೆ ಕಷಾಯಗಳನ್ನು ಹೆಚ್ಚು ಸೇವಿಸುತ್ತಿದ್ದೆವು. ತಲೆಸುತ್ತಿದಾಗ ಚಿಟಿಕೆ ಉಪ್ಪು ಬೆರೆಸಿದ ನಿಂಬೆಹುಳಿ ಶರಬತ್ತು, ಪುನರ್ಪುಳಿ ಶರಬತ್ತು ಶರೀರಕ್ಕೆ ಬಲಕೊಡುತ್ತಿತ್ತು. ಪ್ರತಿದಿನ ಊಟದ ಜೊತೆ ಎಂದಿನಂತೆ ಸಾಂಬಾರು(ಅಥವಾ ಕಾಯಿಹುಳಿ)ಮಾಡುತ್ತಿದ್ದರೂ, ಆರೋಗ್ಯಕರವಾದ ಸಾರು ಅಥವಾ ತಂಬುಳಿ ನಿತ್ಯವೂ ಮಾಡುತ್ತಿದ್ದೆವು. ಕುಚ್ಚಿಲಕ್ಕಿ ಗಂಜಿಯೂಟದ ಜೊತೆಗೆ ನಿಂಬೆಹುಳಿ ಉಪ್ಪಿನಕಾಯಿ ಶರೀರಕ್ಕೂ ನಾಲಿಗೆಗೂ ಬಲು ಹಿತವಾಗುತ್ತಿತ್ತು. ಅಡುಗೆಯಲ್ಲಿ, ಮನೆ ನಿರ್ವಹಣೆಯಲ್ಲಿ ಪತಿ ಮಕ್ಕಳೂ ಸಹಕರಿಸುತ್ತಿದ್ದರು. 


      ಸೋಂಕಿನಿಂದ ಹೊರಬರಲು ನಾನಾ ವಿಧದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಎಲ್ಲರೂ ಸದಾ ಸ್ಮರಣೀಯರು. ಅವರೆಲ್ಲರ ಪ್ರೀತಿ, ಕಾಳಜಿಯನ್ನು ವರ್ಣಿಸಲು ಪದಗಳಿಲ್ಲ. ಜಗತ್ತನ್ನು ಕೋವಿಡ್ ಮುಕ್ತಗೊಳಿಸಲು  ಸೇವೆಗೈಯುತ್ತಿರುವ ಎಲ್ಲಾ ವೈದ್ಯರು, ದಾದಿಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಗೌರವದ ನಮನಗಳು. 


    ಕೊರೋನಾದಿಂದ ಚೇತರಿಸಿಕೊಂಡ ನಂತರ ಪೌಷ್ಟಿಕಾಂಶಯುಕ್ತ, ಬಿಸಿಯಾದ ಆಹಾರ ಸೇವನೆಯು ಬಲು ಅವಶ್ಯಕ.  ಒಣಹಣ್ಣುಗಳು, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸುತ್ತಿರಬೇಕು. ಸೊಪ್ಪು ತರಕಾರಿಗಳನ್ನು ಹೆಚ್ಚು ಬಳಸಬೇಕು. ಮೊಳಕೆ ಕಾಳುಗಳು, ಪ್ರೋಟೀನ್ ಭರಿತ ಬೇಳೆಗಳು ನಿತ್ಯ ಬಳಸುವುದು ಪುಷ್ಟಿದಾಯಕ. ಯೋಗಾಸನ, ಪ್ರಾಣಾಯಾಮ ಧ್ಯಾನ, ಮುದ್ರೆಗಳು ಮನೋದೈಹಿಕ ಉಲ್ಲಾಸವನ್ನು ತುಂಬುತ್ತವೆ. ಸದಾ ಧನಾತ್ಮಕ ಚಿಂತನೆ ಮತ್ತು ಖುಷಿಯಾಗಿರುವುದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ.


      ಕೊರೋನಾ ಬಂದರೆ ಹೇಗಪ್ಪಾ?, ಏನು ಮಾಡುವುದು? ಎಂಬ ಆತಂಕ ಬೇಡ. ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಟೆಸ್ಟ್ ಮಾಡಿಸಿ, ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ಆದಷ್ಟು ಇತರರಿಗೆ ಹರಡದಂತೆ ಎಚ್ಚರವಹಿಸಿ. ಸೂಕ್ತ ಔಷಧೋಪಚಾರಗಳನ್ನು ಮಾಡುತ್ತಾ, 'ನಾನು ಕೋವಿಡ್ ವಿರುದ್ಧ ಹೋರಾಡಿ ಜಯಗಳಿಸಬಲ್ಲೆ' ಎಂಬ ಆತ್ಮವಿಶ್ವಾಸ ಮೂಡಿಸಿಕೊಳ್ಳಿ. ಸರಕಾರದ ನಿಯಮಗಳನ್ನು ಪಾಲಿಸಿ. ನಮ್ಮನ್ನೂ ನಮ್ಮ ಸಮಾಜವನ್ನೂ ಸೋಂಕು ಮುಕ್ತಗೊಳಿಸುವ ಜವಾಬ್ದಾರಿಯ ಅರಿವು ಪ್ರತಿಯೊಬ್ಬರಿಗೂ ಬರಲಿ.


#ಲೋಕಾ ಸಮಸ್ತಾ ಸುಖಿನೋ ಭವಂತು #ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ #ಸುರಕ್ಷಿತವಾಗಿರಿ.


✍️... ಅನಿತಾ ಜಿ.ಕೆ.ಭಟ್.

31-05-2021.




Saturday, 8 May 2021

ಏಕಾಂತದ ಸವಿಘಳಿಗೆ

 


ಏಕಾಂತದ ಸವಿಘಳಿಗೆ

      ವಂಶಿ ಒಮ್ಮೆಲೇ ಬ್ರೇಕ್ ಹಾಕಿ ತನ್ನ ಬೈಕ್ ನಿಲ್ಲಿಸಿದ. ತಲೆಯಲ್ಲಿ ಬೇರೆಯೇ ಆಲೋಚನೆ ಮೂಡಿ ಬೈಕ್ ತಿರುಗಿಸಿ ಹಿಂದಕ್ಕೆ ಸಾಗಿದ. ವಾಯುವೇಗದಲ್ಲಿ ಗಾಡಿ ಓಡಿಸಿದವನ ಗ್ರಹಿಕೆ ನಿಜವಾಗಿತ್ತು. ಅದೇ ಜಾಗದಲ್ಲಿ ಅವಳು ಹೃತಿಕ್ ರೋಶನ್ ನ ಚಿತ್ರವಿದ್ದ ನೋಟ್ ಬುಕ್ಕನ್ನು ಎದೆಗವಚಿ ಹಿಡಿದು ಬಸ್ಸಿಗೆ ಕಾದಿದ್ದಳು. ಇವಳು ನಿಜಕ್ಕೂ ಓದಿನ ಹುಚ್ಚಿ. ಇವತ್ತು ಬಸ್ ಸ್ಟ್ರೈಕ್ ಇದೆ ಎಂದು ಗೊತ್ತಿದ್ದೂ ಕಾಲೇಜಿಗೆ ಹೊರಟಿದ್ದಾಳಲ್ಲ..! ನಾನಾದರೆ ಹಾಗೇ ಮನೆಯಲ್ಲೇ ಇದ್ದು  ಹಿಂದಿ, ಇಂಗ್ಲಿಷ್  ಫಿಲ್ಮ್ ನೋಡುತ್ತಿದೆ.

"ಇವತ್ತು ಬಸ್ ಇಲ್ಲ..  "
"ರಿಕ್ಷಾ ಸಿಕ್ಕರೆ ಬರ್ತೀನಿ.."
"ಅದೆಲ್ಲಾ ಯಾಕೆ..? ಹತ್ತು ಗಾಡಿ.."
"ಊಹೂಂ.. ಹಾಗೆಲ್ಲ ಬರುವವಳು ನಾನಲ್ಲ.."
"ನೀನು ಹೀಗೆ ಕಾಯ್ತಾ ಇರ್ತಿ ಅಂತ ಗೊತ್ತಿದ್ದೇ ಬಂದಿದೀನಿ.. ಹತ್ತೋದಷ್ಟೇ ಕೆಲ್ಸ.. "
ಅವನ ಮಾತಿನ ಧಿಮಾಕು ಇಷ್ಟವಾಗಲಿಲ್ಲ ಅವಳಿಗೆ.
"ಬಸ್ ಆಟೋ ಎರಡೂ ಸಿಗದಿದ್ದರೆ ಮನೆಗೆ ವಾಪಾಸು ಹೋಗ್ತೀನಿ.." ಎಂದಳು ತಲೆತಗ್ಗಿಸಿ..

"ಏನ್ ಗಾಂಧೀ ವಂಶದೋಳಾ ಹೇಗೇ..?" ಮಾತಿನಲ್ಲಿ ರೇಗಿ‌ಸಿದ...
ಹಿಂದಿನಿಂದ ಬಂದ ಗುಜರಿ ಆಟೋವನ್ನು ಏರಿ ಆಕೆ ಆತನನ್ನು ನೋಡದೆಯೆ ಸಾಗಿದಳು..
"ನಿಂಗೇ ಇಷ್ಟು ಕೊಬ್ಬಿದ್ರೆ..ನಂಗೆ ಎಷ್ಟಿರಬೇಡ..? ನೋಡ್ತಾಯಿರು ಹೇಗೆ ವಶಪಡಿಸಿಕೊಳ್ತೀನಿ ಅಂತ.."

               ******

     ರಮ್ಯ  ಖಾಸಗಿ ಶಾಲೆಯೊಂದರಲ್ಲಿ ಗುಮಾಸ್ತೆಯಾಗಿದ್ದ ಶೈಲಜಾಳ ಮಗಳು. ರಸ್ತೆ ಅಪಘಾತವೊಂದರಲ್ಲಿ ತಂದೆಯನ್ನು ಕಳೆದುಕೊಂಡಿದ್ದಳು. ಒಂದು ಪುಟ್ಟ ಮನೆಯೇ ಅವರ ಪಾಲಿಗಿರುವ ಆಸ್ತಿ. ಮಗಳನ್ನು ಓದಿಸಿ ಅವಳ ಕಾಲ ಮೇಲೆ ನಿಲ್ಲುವಂತೆ ಮಾಡಬೇಕೆಂದು ಶೈಲಜಾರ ಆಸೆ. ಮಗಳು ರಮ್ಯಾ ಕೂಡ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದು ಅಮ್ಮನ ಆಸೆಯನ್ನು ಪೂರೈಸುವತ್ತ ಗಮನಹರಿಸಿದ್ದಳು.
ಅಪೂರ್ವ ಸುಂದರಿಯಾದ ರಮ್ಯ ಶ್ರೀಮಂತ ಉದ್ಯಮಿ ನಂದಕುಮಾರ್ ಅವರ ಪುತ್ರ ವಂಶಿಯ ಮನಗೆದ್ದಿದ್ದಳು. ಅವನದು ಹುಡುಗಾಟಿಕೆಯ, ಪುಂಡಾಟಿಕೆಯ ವ್ಯಕ್ತಿತ್ವ. ಇವಳೋ ಕ್ಯಾಂಪಸಿನಲ್ಲಿ ಹುಡುಗರನ್ನು ಕಂಡರೆ ತಲೆಯಗ್ಗಿಸಿ ನಡೆಯುವವಳು.

       ವಂಶಿ ಎಷ್ಟು ಪ್ರಯತ್ನಿಸಿದರೂ ರಮ್ಯಾಳಿಗೆ ಬಲೆಬೀಸಲು ಸಾಧ್ಯವಾಗಲಿಲ್ಲ. ಬಸ್ ಸ್ಟ್ರೈಕ್ ಇದ್ದರೆ, ಜೋರು ಮಳೆ ಇದ್ದರೆ ಅದೇ ನೆಪದಿಂದ ರಮ್ಯಾಳನ್ನು ಡ್ರಾಪ್ ಮಾಡುತ್ತೇನೆಂದರೂ ತಿರಸ್ಕರಿಸುವುದು ಅವಳ ಜಾಯಮಾನವಾಗಿತ್ತು. ಅವನ ಯೋಜನೆಗಳೆಲ್ಲಾ ತಲೆಕೆಳಗಾಗುತ್ತಿದ್ದವು.

ಪದವಿ ಕೊನೆಯ ವರ್ಷವೆಂದು ರಮ್ಯಾ ಸದಾ ಓದಿನಲ್ಲಿಯೇ ಮುಳುಗಿದ್ದಳು. ಪರೀಕ್ಷಾ ಫಲಿತಾಂಶ ಬಂದಾಗ ಯುನಿವರ್ಸಿಟಿ ಗೆ ಆರನೇ ರ್ಯಾಂಕ್ ಪಡೆದಿದ್ದಳು. ಮುಂದಿನ ಓದು ಅಮ್ಮನಿಗೆ ಹೊರೆಯಾಗಬಾರದೆಂದು ರಜಾಕಾಲದಲ್ಲಿ ಆಫೀಸೊಂದರಲ್ಲಿ ಕೆಲಸವೂ ಮಾಡಿದಳು. ಆದರೂ ಅಮ್ಮ ಪಿಜಿ ಕೋರ್ಸಿಗೆ ದುಡ್ಡು ಹೊಂದಿಸಲು ಪಡುವ ಕಷ್ಟ ಕಂಡು ಅವಳಿಗೆ ಹೊಟ್ಟೆ ಬೇಯುತ್ತಿತ್ತು.

       ಯುನಿವರ್ಸಿಟಿ ಯಲ್ಲಿ ಪಿಜಿ ಕೋರ್ಸಿಗೆ ಸೇರುವ ದಿನ ಬಂದೇಬಿಟ್ಟಿತು. ಅಮ್ಮ ಫೀಸು ನಿರಾಂತಕವಾಗಿ ತುಂಬಿದಳು. ರಮ್ಯಾಗೆ ಅಚ್ಚರಿಯಾದರೂ ಅಮ್ಮನನ್ನು ಪ್ರಶ್ನಿಸಿ ಮತ್ತೆ ಅದನ್ನೇ ಕೆದಕುವ ಗೋಜಿಗೆ ಹೋಗಲಿಲ್ಲ. ಎರಡು ವರ್ಷ ಓದುವಾಗಲೂ ಸ್ವಲ್ಪವೂ ಹಣದ ಅಡಚಣೆಯನ್ನು ಹೇಳಿಕೊಳ್ಳಲಿಲ್ಲ ಅಮ್ಮ ಎಂಬುದು ಅವಳಿಗೂ ಆಶ್ಚರ್ಯ ತಂದಿತ್ತು.

      ಯುನಿವರ್ಸಿಟಿಗೆ ಎರಡನೆಯವಳಾಗಿ ಹೊರಹೊಮ್ಮಿ  ಪದಕ ಗೆದ್ದಾಗ ಅಮ್ಮನ ಕಣ್ಣಾಲಿಗಳು ತುಂಬಿ ಬಂದವು. "ಮಗಳೇ .. ಇದೇ ಖುಷಿಯಲ್ಲಿ ನನ್ನದೊಂದು ಮಾತು ನಡೆಸಿಕೊಡುತ್ತೀಯಾ..?" ಎಂದರು..
"ಹೇಳಿ ಅಮ್ಮಾ.. ನಿಮ್ಮ ಮಾತಿಗೆ ಯಾವತ್ತಾದರೂ ಬೆಲೆ ಕೊಡದೆ ನಡೆದುಕೊಂಡದ್ದು ಇದೆಯಾ..?"

"ನಿನ್ನ ಪದವಿ ವಿದ್ಯಾಭ್ಯಾಸ ಮುಗಿದಾಗ ಮುಂದೆ ಓದಿಸುವ ಚಿಂತೆ ನನ್ನನ್ನು ಕಾಡುತ್ತಿತ್ತು. ಆಗ ನೆರವಿಗೆ ಬಂದವರು ಉದ್ಯಮಿ ನಂದಕುಮಾರ್. ಎರಡು ವರ್ಷಗಳ ಕಾಲ ನಿನ್ನ ಓದಿಗೆ ನಿರಂತರವಾಗಿ ಧನಸಹಾಯ ಮಾಡಿದರು. ಈಗ ನಿನಗೆ ಎರಡನೇ ರ್ಯಾಂಕ್ ದೊರೆತಿರುವ ಖುಷಿಯಲ್ಲಿ ಅವರೊಂದು ಪ್ರಸ್ತಾಪವನ್ನಿಟ್ಟಿದ್ದಾರೆ.."
"ಏನಂತೆ ಅಮ್ಮಾ..? ಉದ್ಯೋಗ ನೀಡುತ್ತಾರಂತಾ..?"

"ಮಗಳೇ ಅದಕ್ಕಿಂತಲೂ ಉತ್ತಮವಾದ ಅವಕಾಶವನ್ನೇ ಕೊಡುವುದಾಗಿ ತಿಳಿಸಿದ್ದಾರೆ.."
"ಅದಕ್ಕಿಂತ ಉತ್ತಮವಾದುದು ಇನ್ನೇನಿದೆ..?"

"ನಿನ್ನನ್ನು ಅವರ ಮಗನಿಗೆ ತಂದುಕೊಳ್ಳಬೇಕೆಂದಿದ್ದಾರೆ.. ಅವರ ಮನೆ ಬೆಳಗುವ ಭಾಗ್ಯಲಕ್ಷ್ಮಿ ನೀನಾಗಬೇಕಂತೆ.."
ಒಮ್ಮೆಲೇ ರಮ್ಯಾಳ ಮುಖ ಕಪ್ಪಿಟ್ಟಿತು..
"ನಾನಿನ್ನೂ ಮದುವೆಯ ಬಗ್ಗೆ ಯೋಚಿಸಿಲ್ಲ.. ಈಗಲೇ.."
"ಜೀವನ ನಾವು ಅಂದುಕೊಂಡಂತೆಯೇ ನಡೆಯುವುದಿಲ್ಲ. ಅದಕ್ಕೆ ಬೇಕಾದಂತೆ ತಿರುವು ಪಡೆದುಕೊಳ್ಳುತ್ತದೆ. ಆಗ ನಾವು ಸಹಕರಿಸುತ್ತಾ ಸಾಗಿದರೆ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ.."
ಎಂದ ಅಮ್ಮನ ಮಾತಿಗೆ ರಮ್ಯಾ ಸೋಲಲೇ ಬೇಕಾಯಿತು. ಬದುಕಿನ ಬವಣೆಯಲ್ಲಿ ನೊಂದುಬೆಂದ ಅಮ್ಮನ ನಿರ್ಧಾರಕ್ಕೆ ಎದುರಾಡಲಾಗಲಿಲ್ಲ ರಮ್ಯಳಿಗೆ. ಅಮ್ಮನ ಖುಷಿಯೇ ನನ್ನ ಖುಷಿ ಎಂದು ಸಮಾಧಾನ ಮಾಡಿಕೊಂಡಳು.

                   *******

      ಅಂದು ಉದ್ಯಮಿ ನಂದಕುಮಾರ್ ಅವರ ಮೂರಂತಸ್ತಿನ ಮನೆ ನಂದನವನದಲ್ಲಿ ವಿಶಾಲವಾದ ಚಪ್ಪರ ಹಾಕಲಾಗಿತ್ತು. ಮನೆಯಿಡೀ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿತ್ತು. ರಮ್ಯಾಳನ್ನು ಹೆಂಗಳೆಯರು ಸಿಂಗರಿಸಿ ಮದುವೆ ಮಂಟಪಕ್ಕೆ ಕರೆತಂದಿದ್ದರು. ಮದುಮಗಳು ದೇವಲೋಕದಿಂದಿಳಿದು ಬಂದ ಅಪ್ಸರೆಯಂತೆ ಕಾಣುತ್ತಿದ್ದಳು. ವಂಶಿಯ ಕಣ್ಣುಗಳು ತನ್ನರಸಿಯಾಗುವವಳನ್ನೇ ದಿಟ್ಟಿಸುತ್ತಿದ್ದವು. ಅವಳು ಅವನತವದನಳಾಗಿದ್ದಳು. ಕನಸುಗಳೆಲ್ಲ ನುಚ್ಚುನೂರಾದ ಖೇದ ಅವಳ ಮನದೊಳಗೆ ಅಡಗಿತ್ತು.

       ಋತ್ವಿಜರ "ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನಾ..." ವೇದಘೋಷದೊಂದಿಗೆ ವಂಶಿ ರಮ್ಯಾಳಿಗೆ ಮಾಂಗಲ್ಯಧಾರಣೆಯನ್ನು ಮಾಡಿದ. ಅವಳ ಕಣ್ಣಲ್ಲಿ ಕಣ್ಣಿಟ್ಟರೆ ತುಸುಲಜ್ಜೆಯೂ ಬೆರೆಯದೆ ನಿರ್ಲಿಪ್ತವಾಗಿ ಕಂಡಿತು ವಂಶಿಗೆ. ಗೆಳೆಯರೆಲ್ಲ "ಅಂತೂ ನಿನ್ನ ಪ್ರೀತಿಯನ್ನು ಗೆದ್ದೇ ಬಿಟ್ಟೆ ವಂಶಿ" ಎಂದು ಅವನನ್ನು ರೇಗಿಸುತ್ತಿದ್ದರು. ವಂಶಿಗೋ ಇವಳ ಮನಸ್ಸನ್ನು ಗೆಲ್ಲುವುದು ಹೇಗೋ ಎಂಬ ತಳಮಳ ಶುರುವಾಗಿತ್ತು.

       ಮನೆಯ ಮೂರನೇ ಅಂತಸ್ತಿನ ವಿಶಾಲವಾದ ಕೋಣೆಯಲ್ಲಿ ಮಧುಮಂಚ ವಧೂವರರ ಆಗಮನಕ್ಕೆ ಸಜ್ಜಾಗಿತ್ತು. ರಮ್ಯಾ ಕೈಯಲ್ಲಿ ಕ್ಷೀರದ ಬಿಂದಿಗೆ ಹಿಡಿದು ಬರುತ್ತಲೇ ವಂಶಿಯ ದೇಹದ ಕಣಕಣವೆಲ್ಲಾ ಹುಚ್ಚೆದ್ದು ಕುಣಿದಿದ್ದವು. ಅವಳ ಗಂಭೀರ ವದನ ಅವನನ್ನು ಸ್ವಲ್ಪ ಹಿಂಜರಿಯುವಂತೆ ಮಾಡಿತು.

      ಬೆದರಿದ ಹರಿಣಿಯಂತಿದ್ದ ಅವಳ ಮನಸನು ತುಸುತುಸುವೇ ಗೆದ್ದು ಬೀಗಿದ. ಆ ಕಾರಿರುಳ ಏಕಾಂತದಲಿ ಚಂದಿರ ಕಿಟಕಿಯಂಚಿನಲ್ಲಿ ಇಣುಕಿ ನಸುನಗುತ್ತಿದ್ದ. ತಂಪಾದ ಗಾಳಿ ಚಾಮರವ ಬೀಸಿತ್ತು. ತಾರೆಗಳ ತೋಟ ನಸುಬೆಳಕನು ಬಾಡಿಗೆಗೆ ನೀಡಿತು. ತಂಗಾಳಿಯಲ್ಲಿ ಅವಳ ಮುಡಿಯ ಮಲ್ಲಿಗೆಯ ಸೌಗಂಧ ಕೋಣೆಯಿಡೀ ಪಸರಿಸಿತ್ತು.

    ಅವನ ತುಂಟತನಕ್ಕೆ ಅವಳೇ ಸೋತುಹೋಗಿದ್ದಳು. ದೂರ ಸರಿಸಬೇಕೆಂದುಕೊಂಡರೂ ಗಾಳಿಯಾಡಲೂ ಅಂತರವಿರದಂತೆ ಅಂಟಿಕೊಂಡಿದ್ದವನನ್ನು ಕೊಡವಲು ಹೃದಯ ಒಪ್ಪಲಿಲ್ಲ. ಹೃದಯ ಅವನ ಲೀಲೆಗೆ ಕರಗಿ ಬೆಸೆದುಕೊಂಡಿತು. 

      ಬಡವರ ಮನೆ ಹೆಣ್ಣುಮಕ್ಕಳ ಪಾಡೇ ಹೀಗೆ. ಅಮ್ಮನೂ ಕಷ್ಟವನ್ನೇ ಕಂಡವಳು. ತನ್ನ ಕನಸನ್ನೆಲ್ಲ ಬದಿಗೊತ್ತಿ ಬದುಕಿದವಳು. ಇಂದು ನನ್ನ ಬದುಕನ್ನೂ ಅದೇ ಸಿದ್ಧಾಂತದಲ್ಲೇ ಮುಂದುವರಿಯುವಂತೆ ಮಾಡಿದಳು. ಅವಳಿಗಾದರೂ ಏನೆಲ್ಲ ಮಾನಸಿಕ ಒತ್ತಡವಿತ್ತೋ ಏನೋ? ಹೀಗೆ ನಿರ್ಧಾರಕ್ಕೆ ಬರಲು..
 
    "ಪಾಲಿಗೆ ಬಂದದ್ದು ಪಂಚಾಮೃತ" ಎನ್ನುವಂತೆ ನಾನು ಬಂದದ್ದನ್ನು ಎದುರಿಸಿ ಬದುಕಿಗೆ ಮುಂದಡಿಯಿಡಬೇಕು. ನನ್ನ ಕನಸುಗಳು ನನಸಾಗಬಲ್ಲವೇ ಎಂದು ಚಿಂತಿಸುವ ಬದಲು ಕಾಲಕ್ಕೆ ತಕ್ಕಂತೆ ಹೊಸಕನಸುಗಳ ಕಾಣುತ್ತಾ ಬದುಕಿನ ಪ್ರತಿ ಕ್ಷಣವನ್ನೂ ಕುಟುಂಬಕ್ಕೆ ಸಮರ್ಪಿಸುತ್ತಾ ಬಾಳಬೇಕು. ಎಂದುಕೊಂಡ ರಮ್ಯಾ ಹೊಸ ಬದಲಾವಣೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಳು. ಇನ್ನು ಬದುಕು ನನ್ನಿಷ್ಟವೇ ಅಲ್ಲ. ನಮ್ಮಿಬ್ಬರ ಇಷ್ಟಕಷ್ಟಗಳು.. ನೋವು ನಲಿವುಗಳು.. ಏಳುಬೀಳುಗಳು.. ಎಂಬ ಚಿಂತನೆಯೊಂದಿಗೆ ಎದ್ದು ಕೋಣೆಯಿಂದ ಹೊರಬಂದಳು.

✍️... ಅನಿತಾ ಜಿ.ಕೆ.ಭಟ್.
08-05-2021.


#ಪ್ರತಿಲಿಪಿಕನ್ನಡ #ದೈನಿಕವಿಷಯಾಧಾರಿತಕಥೆ

#ಆ ಕಾರಿರುಳ ಏಕಾಂತದಲಿ ಚಂದಿರ ನಗುತಿದ್ದ

Thursday, 6 May 2021

ಪದುಮಳ ಸ್ಥಾನದಲ್ಲಿ ನಿಂತಾಗ

 


#ಕಿರುಗಥೆ- ಪದುಮಳ ಸ್ಥಾನದಲ್ಲಿ ನಿಂತಾಗ



        ಪದ್ದು ಆ ಮನೆಯ ಎಲ್ಲರಿಗೂ ಬೇಕಾದವಳು. ತಮ್ಮ ಅಗತ್ಯಗಳಿಗೆಲ್ಲಾ ಅವಳನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದರು. ಅವಳ ಪ್ರಾಮಾಣಿಕತೆಯಿಂದಾಗಿ ಅವಳಲ್ಲಿ ಕೆಲಸವನ್ನು ವಹಿಸಿ ನಿರಾಳವಾಗುತ್ತಿದ್ದರು ಮನೆಮಂದಿ.

"ಪದ್ದಿ.. ನನಗೆ ಚುನಾವಣಾ ಕರ್ತವ್ಯದ ಕರೆ ಬಂದಿದೆ. ನಾನು ಹೋಗಲೇಬೇಕು. ಮಗಳ ಹೆಣ್ಣುನೋಡುವ ಶಾಸ್ತ್ರಕ್ಕೆಂದು ಬೀಗರು ಮರುದಿನವೇ ಬರುತ್ತೇವೆ ಎಂದಿದ್ದಾರೆ. ಇಂತಹ ಸಮಯದಲ್ಲಿ ಮನೆಕಡೆಗೆ ನೀನೇ ಗಮನಕೊಡಬೇಕು.."


"ಆಗಲಿ ಅಕ್ಕಾ.. ಅದಕ್ಕೇನಂತೆ. .ನಾನೇನು ಬೇರೆಯವಳಾ.. ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿ.. ನಮ್ಮ ಮನೆ ಕೆಲಸ ಮುಗಿಸಿ ನಿಮ್ಮ ಮನೆ ಕಡೆ ಬಂದು ನೋಡಿಕೊಳ್ಳುತ್ತೇನೆ"

ಎಂದು ಪದುಮಳ ಬಾಯಿಯಿಂದ ಬಂದದ್ದು ಕೇಳಿ ನಿಟ್ಟುಸಿರು ಬಿಟ್ಟರು ಜಯಲಕ್ಷ್ಮಿ.


       ಪದುಮ ಕೊಟ್ಟ ಮಾತಿನಂತೆ ಬೆಳಗ್ಗೆ ಬೇಗನೆದ್ದು ತನ್ನ ಮನೆಕೆಲಸ ಮುಗಿಸಿ ಗಡಿಬಿಡಿಯಿಂದಲೇ ಭಾವನವರ ಮನೆಗೆ ತೆರಳಿದ್ದಳು. ಕೆಲಸಕ್ಕೆಂದು ಒಂದಿಬ್ಬರು ಬಂದಿದ್ದವರಿಗೆ, ಸಿಹಿತಿನಿಸು ಮಾಡಲೆಂದು ಬಂದ ಅಡುಗೆಯವರಿಗೆ ಮನೆಯ ಹೆಣ್ಣುಮಗಳಂತೆಯೇ ನಿಂತು ನಿರ್ದೇಶನ ನೀಡಿದಳು. ಹತ್ತು ಹಲವು ಕೆಲಸಗಳನ್ನು ತಾನೇ ಮುತುವರ್ಜಿಯಿಂದ ಮಾಡಿದಳು. ಸಂಜೆಯಾಗುತ್ತಿದ್ದಂತೆ ಗೆಳತಿಯ ಮನೆಗೆ ತೆರಳಿದ್ದ ಸೌಮ್ಯ ಆಗಮಿಸಿ "ಪೆದ್ದಮ್ಮ.. ತಿನ್ನೋದಕ್ಕೆ ತಿಂಡಿ ಮಾಡಿಟ್ಟಿದ್ದೀಯಾ?"

"ಇಲ್ಲ.. ಇನ್ನು ಮಾಡಬೇಕು.. ಇರು ಐದು ನಿಮಿಷದಲ್ಲಿ ಅವಲಕ್ಕಿ ಉಪ್ಕರಿ ಬೆರೆಸಿ ಕೊಡುತ್ತೇನೆ" ಎಂದಳು ನೋಯುತ್ತಿದ್ದ ತನ್ನ ಮೊಣಕಾಲನ್ನು ನೀವುತ್ತಾ..

"ನಾಳೆ ನನ್ನನ್ನು ನೋಡಲು ಬಂದವರಿಗೆ ನಿನ್ನನ್ನು ಇವಳು ನಮ್ಮನೆಯ ಪೆದ್ದಮ್ಮ ಎಂದು ಪರಿಚಯಿಸುತ್ತೇನೆ.. ಹ್ಞಾಂ.. ಎಂದಿನಂತೆ ಹಳೇ ಸೀರೆ ಉಟ್ಟು ಬರಬೇಡ ಮತ್ತೆ"

 ಸೌಮ್ಯಳ ಮಾತನ್ನು ಕೇಳಿದ ಪದುಮಳು ವಿಷಾದದ ನಗೆಯೊಂದಿಗೆ "ಕಾಲ ಯಾವತ್ತೂ ಇದೇ ತರಹ ಇರಲ್ಲ ಸೌಮ್ಯ" ಅಂದುಬಿಟ್ಟಳು.. ಇದುವರೆಗೂ ಸೌಮ್ಯ ಏನೇ ಲೇವಡಿ ಮಾಡಿದರೂ ತಲೆಕೆಡಿಸಿಕೊಳ್ಳದೇ, ಅದು ತನಗೆ ಅರ್ಥವೇ ಆಗಿಲ್ಲವೆಂಬಂತೆ ನಡೆಯುತ್ತಿದ್ದ ಪದುಮಳ ಬಾಯಿಯಿಂದ ಇಂತಹಾ ಮಾರುತ್ತರ ಬಂದದ್ದು ಇದೇ ಮೊದಲು.


        ಮರುದಿನ ಬೆಳಿಗ್ಗೆ ಎದ್ದು ಎಲ್ಲರೂ ಗಡಿಬಿಡಿಯಿಂದ ತಯಾರಾಗುತ್ತಿದ್ದರು. ಜಯಲಕ್ಷ್ಮಿ ಬೀಗರನ್ನು ಸ್ವಾಗತಿಸುವ, ಉಪಚರಿಸುವ ರೀತಿಯನ್ನು ಪತಿ ಮಧುಸೂದನ ರಾಯರಲ್ಲಿ ಚರ್ಚಿಸುತ್ತಿದ್ದರು. ಜಯಲಕ್ಷ್ಮಿಯ ಸೋದರ ಮುನ್ನಾ ದಿನವೇ ಆಗಮಿಸಿದ್ದರು. ಸೌಮ್ಯ ಬೆಳಗಿನಿಂದಲೇ ಸಿಂಗರಿಸಿಕೊಳ್ಳಲಾರಂಭಿಸಿದ್ದಳು. ಗಂಟೆ ಏಳಾಗುತ್ತಲೇ " ಬೆಳಿಗ್ಗೆ ಬೇಗ ಬರ್ತೇನೆ ಅಕ್ಕಾ ಅಂದಿದ್ದ ಪೆದ್ದಿ ಇನ್ನೂ ಬಂದಿಲ್ಲ.. ಸರಿಯಾದ ಸಮಯಕ್ಕೇ ಕೈ ಕೊಟ್ಟಿದ್ದಾಳೆ" ಎಂದು ಗೊಣಗಿದರು ಜಯಲಕ್ಷ್ಮಿ.

"ಬರ್ಲೀ..ಬರ್ಲೀ.. ಇವಳೇ ಪೆದ್ದಮ್ಮ ಅಂತ ನಾನಂತೂ ನನ್ನ ವುಡ್ ಬಿಗೆ ಪರಿಚಯ ಮಾಡ್ಸೋದೇ" ಸೌಮ್ಯ ಅಂದಾಗ ಎಲ್ಲರೂ ಗೊಳ್ಳೆಂದು ನಕ್ಕರು.


        ಪದುಮಳಾಗಲಿ, ಆಕೆಯ ಪತಿ ಗೋವರ್ಧನ ರಾಯರಾಗಲಿ ಗಂಟೆ ಒಂಭತ್ತಾದರೂ ಆಗಮಿಸದಿದ್ದಾಗ ಜಯಲಕ್ಷ್ಮಿಗೆ ಕೈ ಕಾಲು ಉಡುಗಿತ್ತು. ಇಂತಹ ಸಮಯದಲ್ಲಿ ಆವರಿಬ್ಬರಿದ್ದರೆ ಕೆಲಸವೆಲ್ಲ ಹೂವೆತ್ತಿದಂತೆ ಸಲೀಸಾಗಿ ಮುಂದುವರಿಯುತ್ತಿತ್ತು. ಮಗ ಸೂರಜ್ ನನ್ನು ಕಳುಹಿಸಿ "ನೋಡಿ ಬಾ" ಎಂದರು.

"ಮನೆಗೆ ಬೀಗ ಹಾಕಿದ್ದಾರಮ್ಮ" ಎಂದ..

ಹೋಗಿ ಹೋಗಿ ಇಂದೇ ಇವರ ಮೊಂಡು ತೋರಿಸಬೇಕಿತ್ತಾ..ಒಂದು ಮಾತೂ ಹೇಳಿಲ್ಲ.. ಪೆದ್ದಿ.. ಎಂದು ತಮ್ಮಷ್ಟಕ್ಕೇ ಗೊಣಗಿಕೊಂಡರು.


       

        ಬೀಗರು ಬಂದು ಹೆಣ್ಣು ನೋಡುವ ಶಾಸ್ತ್ರ ಮಾಡಿದರು. ಒಪ್ಪಿಗೆಯನ್ನು ಸೂಚಿಸಿ, ವಾಲಗ ಊದುವ ಬಗ್ಗೆ ಚರ್ಚಿಸಿ, ಆದರಾತಿಥ್ಯ ಸ್ವೀಕರಿಸಿ ತೆರಳಿದರು.


       ಎರಡು ದಿನವಾದರೂ ಗೋವರ್ಧನ ರಾಯರ ಕುಟುಂಬ ಕಾಣದಿದ್ದಾಗ "ಸೊಕ್ಕು ಇಳಿದಾಗ ಬಂದಾರು.." ಎಂದು ಕನಿಷ್ಟಪಕ್ಷ ವಿಚಾರಿಸಿಕೊಳ್ಳುವ ಗೋಜಿಗೂ ಹೋಗಲಿಲ್ಲ. ಮೂರನೇ ದಿನ ಬಂದ ಗೋವರ್ಧನ ರಾಯರು ಅಣ್ಣನ ಮನೆಯನ್ನು ಪ್ರವೇಶಿಸಿದರೆ ಎಂದಿನಂತಹ ಸ್ವಾಗತವಿಲ್ಲ.. ಮಡದಿಯ ತವರಿಗೆ ತೆರಳಿದ್ದು, ಮಡದಿಯ ತಾಯಿಯ ಅಗಲಿಕೆ, ಶುಭಸಮಾರಂಭದ ತಯಾರಿಯಲ್ಲಿದ್ದ ತಮಗೆ ಸಾವಿನ ವಿಚಾರ ತಿಳಿಸುವುದು ಬೇಡವೆಂದು ಒಂದು ಮಾತೂ ಹೇಳದೆ ಹೋದದ್ದು.. ಎಲ್ಲವನ್ನೂ ಹೇಳಿಕೊಂಡರು. "ಹಾಗೋ ಸಮಾಚಾರ" ಎಂದು ಮಧುಸೂದನ ರಾಯರು ತಮ್ಮನನ್ನು ವಿಚಾರಿಸಿಕೊಂಡರು. ಜಯಲಕ್ಷ್ಮಿ ಮನಸಿನಲ್ಲೇ ಗೊಣಗಿಕೊಂಡು ಮಾತಿನಲ್ಲಿ ಸಂತಾಪ ಸೂಚಿಸಿದರು.


     ಮಧುಸೂದನ ಮತ್ತು ಗೋವರ್ಧನ ರಾಯರು ಅಣ್ಣತಮ್ಮಂದಿರು. ಅಣ್ಣನನ್ನು ಓದಿಸಿದ ಹೆತ್ತವರು ತಮ್ಮ ಓದಿನಲ್ಲಿ ಸಾಧಾರಣ, ಪರಂಪರೆಯಿಂದ ಬಂದ ಕೃಷಿ ನೋಡಿಕೊಂಡಿರಲಿ ಎಂದು ವಿದ್ಯಾಭ್ಯಾಸ ವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದರು. ಮಧುಸೂದನ ರಾಯರು ಬಿಎಸ್ಸೆನ್ನೆಲ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಸರ್ಕಾರಿ ಶಾಲೆಯ ಶಿಕ್ಷಕಿ ಜಯಲಕ್ಷ್ಮಿಯನ್ನು ಮದುವೆಯಾಗಿ ಸೌಮ್ಯ, ಸೂರಜ್ ಇಬ್ಬರು ಮಕ್ಕಳೊಂದಿಗೆ ಹಳ್ಳಿಯ ಮನೆಯಲ್ಲಿಯೇ ವಾಸಿಸುತ್ತಿದ್ದರು. ಗೋವರ್ಧನ ರಾಯರಿಗೆ ಬಡವರ ಮನೆಯ ಹೆಣ್ಣು ಪದ್ಮಲತಾ ಸಂಗಾತಿಯಾದಳು. ಸಾಧು ಸ್ವಭಾವದ ಆಕೆ ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕುವವಳು. ಅವಳ ಈ ಸಾಧು ಸ್ವಭಾವ ಎಲ್ಲರಿಗೂ ಗೇಲಿ ಮಾಡಲು ಅನುಕೂಲಮಾಡಿಕೊಟ್ಟಿತು. ಮದುವೆಯಾಗಿ ವರುಷ ಕಳೆದಾಗ ಅತ್ತೆಯವರು ಅಗಲಿದಾಗ ಸೌಮ್ಯ ಸೂರಜ್ ಇಬ್ಬರನ್ನೂ ಚಿಕ್ಕಮ್ಮನೇ ಆರೈಕೆ ಮಾಡುವುದು, ಶಾಲೆಯಿಂದ ಬಂದಾಗ ತಿಂಡಿ ಕೊಡುವುದು.. ಮಾಡುತ್ತಾ ಅಕ್ಕರೆಯಿಂದ ಸಲಹುತ್ತಿದ್ದರು. ಪದುಮಳಿಗೂ ಭವ್ಯ, ಭುವನ್ ಎಂಬ ಇಬ್ಬರು ಮಕ್ಕಳು.

ಕೆಲವು ವರ್ಷಗಳ ನಂತರ ಹೆಣ್ಣುಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿದಾಗ ಎಲ್ಲರೂ ಪಾಲು ಮಾಡಿಕೊಂಡು ಗೋವರ್ಧನ ರಾಯರು ಹತ್ತಿರದಲ್ಲೇ ಪುಟ್ಟ ಮನೆ ಕಟ್ಟಿ ತನಗೆ ಸಿಕ್ಕ ಜಮೀನಿನಲ್ಲಿ ಕೃಷಿ ಮಾಡುತ್ತಾ, ಮೇಲು ಖರ್ಚಿಗೆಂದು ಸಣ್ಣಪುಟ್ಟ ಪೌರೋಹಿತ್ಯ ಮಾಡುತ್ತಾ ಜೀವನ ನಡೆಸುತ್ತಿದ್ದರು.


       ಬೆಳೆಯುತ್ತಿರುವ ಸೌಮ್ಯ, ಸೂರಜ್ ಇಬ್ಬರಿಗೂ ಸದಾ ಎಲ್ಲರನ್ನೂ ನಕ್ಕುನಗಿಸುವ ಗುಣ. ಅದಕ್ಕಾಗಿ ಅವರು ಬಹಳಷ್ಟು ಬಾರಿ ಕಾಲೆಳೆಯುತ್ತಿದ್ದುದು ಚಿಕ್ಕಮ್ಮನನ್ನು. ಏಕೆಂದರೆ ಏನು ತಮಾಷೆ ಮಾಡಿದರೂ ಅರ್ಥವಾಗದವಳು, ನೊಂದುಕೊಳ್ಳದವಳು ಅವಳು.. ಅದಕ್ಕಾಗಿ ಚಿಕ್ಕಮ್ಮ ಎನ್ನುವ ಬದಲು ಪೆದ್ದಮ್ಮ ಎಂದೇ ಹೇಳುತ್ತಾ ಸಣ್ಣಪುಟ್ಟ ವಿಚಾರಕ್ಕೂ ನಗುತ್ತಿದ್ದರು. ಅವಳ ನಡೆ ನುಡಿಯನ್ನು ಅಣಕಿಸುತ್ತಿದ್ದರು. ಇದು ಹಾಸ್ಯವೋ ಅಪಹಾಸ್ಯವೋ ಎಂಬ ಅರಿವು ಎಳೆಯ ಮಕ್ಕಳಿಗೆ ಇರಲಿಲ್ಲ. ಎಚ್ಚರಿಸಬೇಕಾದ ಹಿರಿಯರಿಗೂ ಅಂತಹಾ ಅಗತ್ಯ ಕಾಣಲಿಲ್ಲ.


ಭವ್ಯ, ಭುವನ್ ಬೆಳೆಯುತ್ತಿದ್ದಂತೆ ಅವರಿಗೆ ತಮ್ಮ ಅಮ್ಮನನ್ನು ಈ ರೀತಿ ಗೇಲಿ ಮಾಡುವುದು ಸರಿ ಕಾಣುತ್ತಿರಲಿಲ್ಲ. "ಅಮ್ಮಾ ನೀನು ಅಂತಹದ್ದಕ್ಕೆ ಯಾಕೆ ಅವಕಾಶ ಮಾಡಿಕೊಡುತ್ತೀ? ಗೇಲಿ ಮಾಡಿದಾಗ ಸುಮ್ಮನಿರುವುದೇಕೆ? " ಎಂದಾಗ "ಅನ್ನಲಿ ಬಿಡಿ.. ಆ ತಪ್ಪು ನನ್ನದಲ್ಲ" ಎಂದು ತಣ್ಣಗೆ ಉತ್ತರಿಸುತ್ತಿದ್ದರು.


      

         ಸೌಮ್ಯಳ ವಿವಾಹ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರಿನ ಸಿರಿವಂತ ಕುಟುಂಬದ ಸೊಸೆಯಾದಳು ಸೌಮ್ಯ. ವರುಷಗಳು ಉರುಳಿದವು. ಮಡಿಲು ತುಂಬಲಿಲ್ಲ. ಅದೇ ಮಧುಸೂದನ ರಾಯರ ಕುಟುಂಬಕ್ಕೆ ಬಹಳ ನೋವಿನ ವಿಷಯವಾಗಿತ್ತು.


        ಭವ್ಯ ಇಂಜಿನಿಯರಿಂಗ್ ಓದು ಮುಗಿಸಿದಾಗ ಅದೇ ಊರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸುಹಾಸನ ಕುಟುಂಬ ಅವಳನ್ನು ಮೆಚ್ಚಿ ಸೊಸೆಯಾಗಿ ಸ್ವೀಕರಿಸಿದರು. ಮದುವೆಯಾಗಿ ವರುಷದೊಳಗೆ ಪುಟ್ಟ ಕಂದನ ಆಗಮನವಾಯಿತು. ಪದುಮಮ್ಮನಿಗೆ ಗೋವರ್ಧನ ರಾಯರಿಗೆ ಮಗಳ ಬಾಣಂತನದ ಸಂಭ್ರಮ. ಪಕ್ಕದಲ್ಲೇ ಇದ್ದಂತಹ ಮಧುಸೂದನ ರಾಯರು, ಜಯಲಕ್ಷ್ಮಿ ಈಗ ನಿವೃತ್ತರಾಗಿದ್ದರೂ, ಸಹಾಯಹಸ್ತ ಚಾಚುವ ಗೊಡವೆಗೆ ಹೋಗಲಿಲ್ಲ. 


      ಭವ್ಯಾಳ ಮಗು ದಿನದಿಂದ ದಿನಕ್ಕೆ ಆರೋಗ್ಯದಿಂದ ಬೆಳೆಯುತ್ತಿತ್ತು. ಮಗುವಿಗೆ ಒಂದೂವರೆ ವರ್ಷ ದಾಟುತ್ತಿದ್ದಂತೆ ಸೂರಜ್ ಗೆ ವಿವಾಹ ನಿಗದಿಯಾಗಿತ್ತು. ಭವ್ಯಾ ಕುಟುಂಬದೊಂದಿಗೆ ಆಗಮಿಸಿದ್ದಳು. ಅಕ್ಕ ಸೌಮ್ಯ ಮಗುವನ್ನು ಎತ್ತಿಕೊಳ್ಳಲು ಬಂದಾಗ ಭವ್ಯಾ "ಇವರು ದೊಡ್ಡಮ್ಮ.." ಎಂದು ಕಂದನಲ್ಲಿ ಅಂದಾಗ "ಪೆ..ಡ್ಡ..ಮ್ಮ.." ಅಂದಿತು ತೊದಲು ನುಡಿಯಲ್ಲಿ.. ಸುತ್ತಲಿದ್ದವರೆಲ್ಲ ಗೊಳ್ಳೆಂದು ನಕ್ಕರು. 

"ದೊ..ಡ್ಡ...ಮ್ಮ...ಅನ್ನು" ಎಂದು ತಿದ್ದಹೋದಳು ಭವ್ಯಾ. ಮಗು "ಪೆಡ್ಡಮ್ಮ.." ಅಂತಲೇ ಇತ್ತು.  

 

       ತನ್ನ ಪತ್ನಿಯನ್ನು ರೇಗಿಸಲು ಕಾಯುತ್ತಿದ್ದ ಸೌಮ್ಯಳ ಪತಿ "ಇವಳು ಪೆಡ್ಡಮ್ಮ..ಅಲ್ಲ ಪೆದ್ದಮ್ಮ.." ಅಂದರು.. 

ಮಗು ಅದನ್ನೇ ಗಟ್ಟಿಮಾಡಿಕೊಂಡು ಪೆದ್ದಮ್ಮ ಅಂತಲೇ ಬೀಗರೆದುರು, ನೆಂಟರಿಷ್ಟರೆದುರು ಕೂಗುವಾಗ ಸೌಮ್ಯಳ ಕಣ್ಣಾಲಿಗಳು ತುಂಬಿ ಬಂದವು.. 

"ನಾನು ಮಾಡಿದ ತಪ್ಪು ತಿರುಗಿ ನನ್ನ ಪಾಲಿಗೇ ಬಂದಿದೆ.. ಪೆದ್ದಮ್ಮ ಅನ್ನುತ್ತಿದ್ದಾಗ ಚಿಕ್ಕಮ್ಮ ಅದೆಷ್ಟು ನೊಂದುಕೊಳ್ಳುತ್ತಿದ್ದರೋ ಏನೋ" ಸೌಮ್ಯಾಳ ಕಂಗಳಿಂದ ಕಂಬನಿ ಕೆಳಗುರುಳಿತು..


"ಇಲ್ಲ ಮಗಳೇ.. ಇದು ನನ್ನದೇ ತಪ್ಪು.. ನನಗೆ ಎಲ್ಲದಕ್ಕೂ ಸಹಕರಿಸುತ್ತಿದ್ದ ಓರಗಿತ್ತಿಯನ್ನು ನನ್ನ ಎದುರೇ ಮಕ್ಕಳು ಅಪಹಾಸ್ಯ ಮಾಡುತ್ತಿದ್ದರೂ ತಿದ್ದುವ ಗೋಜಿಗೇ ಹೋಗಲಿಲ್ಲ.. ನಾನೂ ಪೆದ್ದಿ, ಪದ್ದಿ, ಪದ್ದು, ಪದುಮ, ಪೆದ್ದು ಅಂತಲೇ ತಾತ್ಸಾರ ಮಾಡುತ್ತಿದ್ದೆ " ಎಂದು ತಾವೂ ಹನಿಗಣ್ಣಾದರು ಜಯಲಕ್ಷ್ಮಿ...



✍️... ಅನಿತಾ ಜಿ.ಕೆ.ಭಟ್.

06-05-2021.

#momspressokannada

#ದಿನಕ್ಕೊಂದು ಬ್ಲಾಗ್

#ಆ ತಪ್ಪು ನನ್ನದಲ್ಲ

Monday, 3 May 2021

ಬಾಳ ದಿವ್ಯಮಂತ್ರ

 


#ಬಾಳ ದಿವ್ಯಮಂತ್ರ

ಎದೆಯೊಳಗಿನ ನೋವಪರದೆಯ
ಸರಿಸುವಂತಹ ಕೈಗಳು||ಪ||
ಎಲ್ಲಿಹುದು ಅರಸದೆಯೆ ಛಲದಿ
ನಿನ್ನನೇ ನಂಬಿ ಬಾಳು||ಅ.ಪ.||

ಕನಸುಗಳ ಹೊಸೆಹೊಸೆದು ಶ್ರಮಬೆವರಬೆಸೆದು
ತೂಗುವ ಫಲವದುವೆ ಸುಗ್ಗಿ
ಮನಸು ದೇವನಲಿರಿಸಿ ಅರ್ಪಣೆಯ ಸಲಿಸಿ
ಬದುಕುತಿರು ದಿನವೂ ಹಿಗ್ಗಿ||೧||

ಖುಷಿಯಕಡಲೆಲ್ಲಿಹುದು? ಹೊಡೆತಸಹಿಸುವುದು ಭೋರ್ಗರೆವ ಶರಧಿಗೂ ತಪ್ಪ
ನಶಿಸುತಿಹ ಕ್ಷಣಕ್ಷಣಕೂ ಕರ್ಮಲೇಪನವಿರಲು
ಕಳೆಗಟ್ಟಿ ಬದುಕು ಒಪ್ಪ||೨||

ನಿಗಿನಿಗಿಸುಡುಕೆಂಡ ಜಲಸೋಕಿದಕೂಡೆ
ತಣಿದು ಮಸಿಯೆನಿಪಸೂತ್ರ
ನಸುನಗುವ ವದನದಲಿ ಸವಿಮಾತ ಒನಪಿನಲಿ
ಅಡಗಿಹುದು ಬಾಳದಿವ್ಯಮಂತ್ರ||೩||

✍️... ಅನಿತಾ ಜಿ.ಕೆ.ಭಟ್.
04-05-2021.


ಮಗು ನನ್ನದೆಂದ ಮೇಲೆ ನಿರ್ಧಾರವೂ ನನ್ನದೇ

 


#momspressokannada
#momspressoshortstories
#ಥೀಂ_ನನ್ನಮಗುನನ್ನನಿರ್ಧಾರ

     ಮೇ ೧ರಂದು ಮಾವನವರ ಪಿತೃಕಾರ್ಯವಿದೆಯೆಂದು ಕಳೆದವಾರ ಊರಿಗೆ ತೆರಳಿದ್ದೆವು. ಕಾರ್ಯಕ್ರಮದ ಮುನ್ನಾದಿನ ಪತಿ ಅಗತ್ಯವಸ್ತುಗಳ ತರಲು ಪೇಟೆಗೆಹೋಗಿದ್ದರು. ಮಕ್ಕಳು ಅಂಗಳದಲ್ಲಿ ಫುಟ್ಬಾಲ್ ಆಡುತ್ತಿದ್ದರು. ಬಾಲ್ ಕೆಳಗೆತೋಡಿನ ಬರೆಯಲ್ಲಿ ಸಿಲುಕಿದಾಗ ಮಕ್ಕಳಿಬ್ಬರೂ ತೆಗೆಯುವ ಪ್ರಯತ್ನದಲ್ಲಿದ್ದರು. ಮಕ್ಕಳಜ್ಜಿಯೂ ಸಹಕರಿಸಲು ತೆರಳಿ ಅಡಿಕೆಸಲಾಕೆಯಿಂದ ಬಾಲ್ ಕೆಳಗೆ ಹಾಕಲು ಪ್ರಯತ್ನಿಸಿದರು. ಸಾಧ್ಯವಾಗದಿದ್ದಾಗ ಮಕ್ಕಳಿಗೆ ಕೆಳಗಡೆಯಿಂದ ಬಾಲ್ ತೆಗೆಯಲು ಸಲಾಕೆಯನ್ನು ಕೆಳಗೆ ಹಾಕಿದಾಗ ಅದು ಶ್ರೀದನ ಮುಖಕ್ಕೆ ಚುಚ್ಚಿಕೊಂಡಿತು.
  
      ಒಳಗಿದ್ದ ನಾನು ಗದ್ದಲ ಕೇಳಿ ಹೊರಬಂದಾಗ ಮಕ್ಕಳಜ್ಜಿ ಆಳವಾಗಿದ್ದ ಗಾಯಕ್ಕೆ ಪಾಂಡ್ಸ್ ಪೌಡರ್ ತುಂಬುತ್ತಾ "ಮಕ್ಕಳು ಆಡುವಾಗ ಜಗಳ ಮಾಡಿಕೊಂಡು ಬಾಲ್ ಹೆಕ್ಕುವಾಗ ಗಾಯಮಾಡಿಕೊಂಡಿದ್ದಾರೆ. ಹೆಚ್ಚೇನೂ ಆಗಿಲ್ಲ"ಎಂದರು. ಸಣ್ಣ ಮಗ ಶ್ರೀಶ "ಸುಳ್ಳು ಯಾಕೆ ಹೇಳ್ತೀರಿ ಅಜ್ಜಿ. ನಾವೇನು ಜಗಳ ಮಾಡಿಲ್ಲ. ಬಾಲ್ ತೆಗೆಯುವುದು ಹೇಗೆ ಎಂದು discuss ಮಾಡುತ್ತಿದ್ದೆವು. ಆಗ ನೀವು help ಮಾಡಲು ಬಂದು ಅಣ್ಣನ ಮುಖಕ್ಕೆ ಕೋಲು ಬಿಸಾಡಿ ತಾಗಿಸಿದಿರಿ. ನೀವು ಮಾಡಿದ್ದನ್ನು ನಾವು ಮಾಡಿದ್ದು ಅಂತ ಯಾಕೆ ಹೇಳೋದು" ಅಂದ. ಮಕ್ಕಳಜ್ಜಿ ಮಾತು ಬೇರೆಡೆಗೆ ಹೊರಳಿಸಿದರು. "ಏನೂ ಆಗಿಲ್ಲ. ಹೋಗಿ ಮಲಗಿಕೋ" ಎಂದರು.

      ಗಾಯದ ಸುತ್ತ ಊದುವ ಲಕ್ಷಣಗಳು ಕಂಡವು. ಮಗ "ಅಮ್ಮಾ ನನಗೆ ಹಲ್ಲಿನ ವಸಡು ನೋವು ಬರುತ್ತಿದೆ" ಎಂದಾಗ.. ಹೆತ್ತ ಕರುಳು ಸುಮ್ಮನಿದ್ದೀತೇ?

ಪತಿಗೆ ತಿಳಿಸುವುದು ಬೇಡವೆಂದು ಒತ್ತಡವಿದ್ದರೂ ನನ್ನ ಮಗು ನನ್ನ ನಿರ್ಧಾರವೆಂದು ಬಗೆದು ತಿಳಿಸಿದೆ. ಪೇಟೆಯಿಂದ ಹಿಂದಿರುಗಿದ ಪತಿ ಮಗನನ್ನು ಚಿಕಿತ್ಸೆಗೆ ಕರೆದೊಯ್ದಾಗ ವೈದ್ಯರು " ಆಳವಾಗಿ ಗಾಯವಾಗಿದೆ. ಗಾಯ ಗುಣವಾಗಲು ಮೂರು ವಾರ ಬೇಕು. ಮುಖದಲ್ಲಿ ಕಲೆ ಉಳಿದೀತು" ಎಂದರು. ಆದರೂ ತನ್ನಿಂದ ಅಚಾತುರ್ಯ ನಡೆದುಹೋಯಿತು ಎಂಬ ಪ್ರಾಮಾಣಿಕವಾದ ಒಂದು ಮಾತೂ ಇಲ್ಲ. ಮಾತೆಲ್ಲ ಈ ಘಟನೆಯನ್ನು ಮರೆಮಾಚಲೆಂದು ಬೇರೆ ಕಾರುಬಾರುಗಳ ಸುತ್ತವೇ..
ಕೊನೆಗೆ, ಮಲಗುವ ಸಮಯದಲ್ಲಿ, ದಿನವಿಡೀ ದುಡಿದು ದಣಿದು ಹೈರಾಣವಾಗಿದ್ದ, ಮಗನ ಗಾಯದಿಂದ ಒತ್ತಡಕ್ಕೆ ಸಿಲುಕಿದ್ದ ಪತಿ "ಅಬ್ಬೆ.. ಇದೆಲ್ಲಾ ಹೇಗಾಯ್ತು?" ಎಂದು ಪ್ರಶ್ನಿಸಿದಾಗ ನಿಜ ನುಡಿದರು. ತಮ್ಮ ಅಜಾಗರೂಕ ನಡೆಯನ್ನು ಒಪ್ಪಿಕೊಂಡರು.

ಮರುದಿನ ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲ "ಶ್ರೀದನ ಮುಖಕ್ಕೆ ಏನಾಗಿದೆ?" ಎಂದಾಗ ತನ್ನ ಅಚಾತುರ್ಯದಿಂದಾದರೂ ಮಕ್ಕಳಜ್ಜಿ "ಮಕ್ಕಳಿಬ್ಬರೂ ಆಡುವಾಗ ತಾಗಿಸಿಕೊಂಡಿದ್ದಾರೆ" ಎಂದುತ್ತರಿಸುತ್ತಿದ್ದರು.

ಇಂತಹಾ ಘಟನೆಗಳು ನಡೆದಾಗ "ನನ್ನ ಮಗು ನನ್ನ ನಿರ್ಧಾರ" ಎಂದು ಮಾತೃಹೃದಯ ದೃಢವಾಗಿ ನಿಲ್ಲುತ್ತದೆ.

ಪ್ರತಿಬಾರಿ ಮಗನ ಬ್ಯಾಂಡೇಜ್ ಹಚ್ಚಿದ ಮುಖ ಕಂಡಾಗ, ಆರೈಕೆ ಮಾಡುವಾಗ ಈ ಮಾತೃ ಹೃದಯ ದೇವರಲ್ಲಿ ಬೇಡಿಕೊಳ್ಳುವುದೊಂದೇ "ದೇವರೇ ಬೇಗನೆ ಗುಣವಾಗುವಂತೆ ಮಾಡು. ಗಾಯದ ಕಲೆ ಉಳಿಯದಂತೆ ನೋಡಿಕೋ. ತಮ್ಮ ಪಾಡಿಗೆ ತಾವು ಆಡುತ್ತಿರುವ ಮಕ್ಕಳ ರಕ್ಷಣೆಯ ಮಾಡುವವನು ನೀನೇ. ಯಾರಿಗೂ ಇಂತಹಾ ಸ್ಥಿತಿಯನ್ನು ಕೊಡಬೇಡ"

ಪೋಷಕರಿಗೆ ಕಿವಿಮಾತು: ಮಕ್ಕಳ ವಿಚಾರದಲ್ಲಿ ಮಾತ್ರ ಯಾರನ್ನೂ ಸಂಪೂರ್ಣವಾಗಿ ನಂಬದಿರಿ.  ಸಾಂದರ್ಭಿಕ  ಸ್ವಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ತಪ್ಪು ತನ್ನದಾದರೂ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇರುವುದು ಅಪರೂಪ.

✍️... ಅನಿತಾ ಜಿ.ಕೆ.ಭಟ್./ 03-05-2021.

#ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ