Thursday, 6 May 2021

ಪದುಮಳ ಸ್ಥಾನದಲ್ಲಿ ನಿಂತಾಗ

 


#ಕಿರುಗಥೆ- ಪದುಮಳ ಸ್ಥಾನದಲ್ಲಿ ನಿಂತಾಗ



        ಪದ್ದು ಆ ಮನೆಯ ಎಲ್ಲರಿಗೂ ಬೇಕಾದವಳು. ತಮ್ಮ ಅಗತ್ಯಗಳಿಗೆಲ್ಲಾ ಅವಳನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದರು. ಅವಳ ಪ್ರಾಮಾಣಿಕತೆಯಿಂದಾಗಿ ಅವಳಲ್ಲಿ ಕೆಲಸವನ್ನು ವಹಿಸಿ ನಿರಾಳವಾಗುತ್ತಿದ್ದರು ಮನೆಮಂದಿ.

"ಪದ್ದಿ.. ನನಗೆ ಚುನಾವಣಾ ಕರ್ತವ್ಯದ ಕರೆ ಬಂದಿದೆ. ನಾನು ಹೋಗಲೇಬೇಕು. ಮಗಳ ಹೆಣ್ಣುನೋಡುವ ಶಾಸ್ತ್ರಕ್ಕೆಂದು ಬೀಗರು ಮರುದಿನವೇ ಬರುತ್ತೇವೆ ಎಂದಿದ್ದಾರೆ. ಇಂತಹ ಸಮಯದಲ್ಲಿ ಮನೆಕಡೆಗೆ ನೀನೇ ಗಮನಕೊಡಬೇಕು.."


"ಆಗಲಿ ಅಕ್ಕಾ.. ಅದಕ್ಕೇನಂತೆ. .ನಾನೇನು ಬೇರೆಯವಳಾ.. ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿ.. ನಮ್ಮ ಮನೆ ಕೆಲಸ ಮುಗಿಸಿ ನಿಮ್ಮ ಮನೆ ಕಡೆ ಬಂದು ನೋಡಿಕೊಳ್ಳುತ್ತೇನೆ"

ಎಂದು ಪದುಮಳ ಬಾಯಿಯಿಂದ ಬಂದದ್ದು ಕೇಳಿ ನಿಟ್ಟುಸಿರು ಬಿಟ್ಟರು ಜಯಲಕ್ಷ್ಮಿ.


       ಪದುಮ ಕೊಟ್ಟ ಮಾತಿನಂತೆ ಬೆಳಗ್ಗೆ ಬೇಗನೆದ್ದು ತನ್ನ ಮನೆಕೆಲಸ ಮುಗಿಸಿ ಗಡಿಬಿಡಿಯಿಂದಲೇ ಭಾವನವರ ಮನೆಗೆ ತೆರಳಿದ್ದಳು. ಕೆಲಸಕ್ಕೆಂದು ಒಂದಿಬ್ಬರು ಬಂದಿದ್ದವರಿಗೆ, ಸಿಹಿತಿನಿಸು ಮಾಡಲೆಂದು ಬಂದ ಅಡುಗೆಯವರಿಗೆ ಮನೆಯ ಹೆಣ್ಣುಮಗಳಂತೆಯೇ ನಿಂತು ನಿರ್ದೇಶನ ನೀಡಿದಳು. ಹತ್ತು ಹಲವು ಕೆಲಸಗಳನ್ನು ತಾನೇ ಮುತುವರ್ಜಿಯಿಂದ ಮಾಡಿದಳು. ಸಂಜೆಯಾಗುತ್ತಿದ್ದಂತೆ ಗೆಳತಿಯ ಮನೆಗೆ ತೆರಳಿದ್ದ ಸೌಮ್ಯ ಆಗಮಿಸಿ "ಪೆದ್ದಮ್ಮ.. ತಿನ್ನೋದಕ್ಕೆ ತಿಂಡಿ ಮಾಡಿಟ್ಟಿದ್ದೀಯಾ?"

"ಇಲ್ಲ.. ಇನ್ನು ಮಾಡಬೇಕು.. ಇರು ಐದು ನಿಮಿಷದಲ್ಲಿ ಅವಲಕ್ಕಿ ಉಪ್ಕರಿ ಬೆರೆಸಿ ಕೊಡುತ್ತೇನೆ" ಎಂದಳು ನೋಯುತ್ತಿದ್ದ ತನ್ನ ಮೊಣಕಾಲನ್ನು ನೀವುತ್ತಾ..

"ನಾಳೆ ನನ್ನನ್ನು ನೋಡಲು ಬಂದವರಿಗೆ ನಿನ್ನನ್ನು ಇವಳು ನಮ್ಮನೆಯ ಪೆದ್ದಮ್ಮ ಎಂದು ಪರಿಚಯಿಸುತ್ತೇನೆ.. ಹ್ಞಾಂ.. ಎಂದಿನಂತೆ ಹಳೇ ಸೀರೆ ಉಟ್ಟು ಬರಬೇಡ ಮತ್ತೆ"

 ಸೌಮ್ಯಳ ಮಾತನ್ನು ಕೇಳಿದ ಪದುಮಳು ವಿಷಾದದ ನಗೆಯೊಂದಿಗೆ "ಕಾಲ ಯಾವತ್ತೂ ಇದೇ ತರಹ ಇರಲ್ಲ ಸೌಮ್ಯ" ಅಂದುಬಿಟ್ಟಳು.. ಇದುವರೆಗೂ ಸೌಮ್ಯ ಏನೇ ಲೇವಡಿ ಮಾಡಿದರೂ ತಲೆಕೆಡಿಸಿಕೊಳ್ಳದೇ, ಅದು ತನಗೆ ಅರ್ಥವೇ ಆಗಿಲ್ಲವೆಂಬಂತೆ ನಡೆಯುತ್ತಿದ್ದ ಪದುಮಳ ಬಾಯಿಯಿಂದ ಇಂತಹಾ ಮಾರುತ್ತರ ಬಂದದ್ದು ಇದೇ ಮೊದಲು.


        ಮರುದಿನ ಬೆಳಿಗ್ಗೆ ಎದ್ದು ಎಲ್ಲರೂ ಗಡಿಬಿಡಿಯಿಂದ ತಯಾರಾಗುತ್ತಿದ್ದರು. ಜಯಲಕ್ಷ್ಮಿ ಬೀಗರನ್ನು ಸ್ವಾಗತಿಸುವ, ಉಪಚರಿಸುವ ರೀತಿಯನ್ನು ಪತಿ ಮಧುಸೂದನ ರಾಯರಲ್ಲಿ ಚರ್ಚಿಸುತ್ತಿದ್ದರು. ಜಯಲಕ್ಷ್ಮಿಯ ಸೋದರ ಮುನ್ನಾ ದಿನವೇ ಆಗಮಿಸಿದ್ದರು. ಸೌಮ್ಯ ಬೆಳಗಿನಿಂದಲೇ ಸಿಂಗರಿಸಿಕೊಳ್ಳಲಾರಂಭಿಸಿದ್ದಳು. ಗಂಟೆ ಏಳಾಗುತ್ತಲೇ " ಬೆಳಿಗ್ಗೆ ಬೇಗ ಬರ್ತೇನೆ ಅಕ್ಕಾ ಅಂದಿದ್ದ ಪೆದ್ದಿ ಇನ್ನೂ ಬಂದಿಲ್ಲ.. ಸರಿಯಾದ ಸಮಯಕ್ಕೇ ಕೈ ಕೊಟ್ಟಿದ್ದಾಳೆ" ಎಂದು ಗೊಣಗಿದರು ಜಯಲಕ್ಷ್ಮಿ.

"ಬರ್ಲೀ..ಬರ್ಲೀ.. ಇವಳೇ ಪೆದ್ದಮ್ಮ ಅಂತ ನಾನಂತೂ ನನ್ನ ವುಡ್ ಬಿಗೆ ಪರಿಚಯ ಮಾಡ್ಸೋದೇ" ಸೌಮ್ಯ ಅಂದಾಗ ಎಲ್ಲರೂ ಗೊಳ್ಳೆಂದು ನಕ್ಕರು.


        ಪದುಮಳಾಗಲಿ, ಆಕೆಯ ಪತಿ ಗೋವರ್ಧನ ರಾಯರಾಗಲಿ ಗಂಟೆ ಒಂಭತ್ತಾದರೂ ಆಗಮಿಸದಿದ್ದಾಗ ಜಯಲಕ್ಷ್ಮಿಗೆ ಕೈ ಕಾಲು ಉಡುಗಿತ್ತು. ಇಂತಹ ಸಮಯದಲ್ಲಿ ಆವರಿಬ್ಬರಿದ್ದರೆ ಕೆಲಸವೆಲ್ಲ ಹೂವೆತ್ತಿದಂತೆ ಸಲೀಸಾಗಿ ಮುಂದುವರಿಯುತ್ತಿತ್ತು. ಮಗ ಸೂರಜ್ ನನ್ನು ಕಳುಹಿಸಿ "ನೋಡಿ ಬಾ" ಎಂದರು.

"ಮನೆಗೆ ಬೀಗ ಹಾಕಿದ್ದಾರಮ್ಮ" ಎಂದ..

ಹೋಗಿ ಹೋಗಿ ಇಂದೇ ಇವರ ಮೊಂಡು ತೋರಿಸಬೇಕಿತ್ತಾ..ಒಂದು ಮಾತೂ ಹೇಳಿಲ್ಲ.. ಪೆದ್ದಿ.. ಎಂದು ತಮ್ಮಷ್ಟಕ್ಕೇ ಗೊಣಗಿಕೊಂಡರು.


       

        ಬೀಗರು ಬಂದು ಹೆಣ್ಣು ನೋಡುವ ಶಾಸ್ತ್ರ ಮಾಡಿದರು. ಒಪ್ಪಿಗೆಯನ್ನು ಸೂಚಿಸಿ, ವಾಲಗ ಊದುವ ಬಗ್ಗೆ ಚರ್ಚಿಸಿ, ಆದರಾತಿಥ್ಯ ಸ್ವೀಕರಿಸಿ ತೆರಳಿದರು.


       ಎರಡು ದಿನವಾದರೂ ಗೋವರ್ಧನ ರಾಯರ ಕುಟುಂಬ ಕಾಣದಿದ್ದಾಗ "ಸೊಕ್ಕು ಇಳಿದಾಗ ಬಂದಾರು.." ಎಂದು ಕನಿಷ್ಟಪಕ್ಷ ವಿಚಾರಿಸಿಕೊಳ್ಳುವ ಗೋಜಿಗೂ ಹೋಗಲಿಲ್ಲ. ಮೂರನೇ ದಿನ ಬಂದ ಗೋವರ್ಧನ ರಾಯರು ಅಣ್ಣನ ಮನೆಯನ್ನು ಪ್ರವೇಶಿಸಿದರೆ ಎಂದಿನಂತಹ ಸ್ವಾಗತವಿಲ್ಲ.. ಮಡದಿಯ ತವರಿಗೆ ತೆರಳಿದ್ದು, ಮಡದಿಯ ತಾಯಿಯ ಅಗಲಿಕೆ, ಶುಭಸಮಾರಂಭದ ತಯಾರಿಯಲ್ಲಿದ್ದ ತಮಗೆ ಸಾವಿನ ವಿಚಾರ ತಿಳಿಸುವುದು ಬೇಡವೆಂದು ಒಂದು ಮಾತೂ ಹೇಳದೆ ಹೋದದ್ದು.. ಎಲ್ಲವನ್ನೂ ಹೇಳಿಕೊಂಡರು. "ಹಾಗೋ ಸಮಾಚಾರ" ಎಂದು ಮಧುಸೂದನ ರಾಯರು ತಮ್ಮನನ್ನು ವಿಚಾರಿಸಿಕೊಂಡರು. ಜಯಲಕ್ಷ್ಮಿ ಮನಸಿನಲ್ಲೇ ಗೊಣಗಿಕೊಂಡು ಮಾತಿನಲ್ಲಿ ಸಂತಾಪ ಸೂಚಿಸಿದರು.


     ಮಧುಸೂದನ ಮತ್ತು ಗೋವರ್ಧನ ರಾಯರು ಅಣ್ಣತಮ್ಮಂದಿರು. ಅಣ್ಣನನ್ನು ಓದಿಸಿದ ಹೆತ್ತವರು ತಮ್ಮ ಓದಿನಲ್ಲಿ ಸಾಧಾರಣ, ಪರಂಪರೆಯಿಂದ ಬಂದ ಕೃಷಿ ನೋಡಿಕೊಂಡಿರಲಿ ಎಂದು ವಿದ್ಯಾಭ್ಯಾಸ ವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದರು. ಮಧುಸೂದನ ರಾಯರು ಬಿಎಸ್ಸೆನ್ನೆಲ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಸರ್ಕಾರಿ ಶಾಲೆಯ ಶಿಕ್ಷಕಿ ಜಯಲಕ್ಷ್ಮಿಯನ್ನು ಮದುವೆಯಾಗಿ ಸೌಮ್ಯ, ಸೂರಜ್ ಇಬ್ಬರು ಮಕ್ಕಳೊಂದಿಗೆ ಹಳ್ಳಿಯ ಮನೆಯಲ್ಲಿಯೇ ವಾಸಿಸುತ್ತಿದ್ದರು. ಗೋವರ್ಧನ ರಾಯರಿಗೆ ಬಡವರ ಮನೆಯ ಹೆಣ್ಣು ಪದ್ಮಲತಾ ಸಂಗಾತಿಯಾದಳು. ಸಾಧು ಸ್ವಭಾವದ ಆಕೆ ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕುವವಳು. ಅವಳ ಈ ಸಾಧು ಸ್ವಭಾವ ಎಲ್ಲರಿಗೂ ಗೇಲಿ ಮಾಡಲು ಅನುಕೂಲಮಾಡಿಕೊಟ್ಟಿತು. ಮದುವೆಯಾಗಿ ವರುಷ ಕಳೆದಾಗ ಅತ್ತೆಯವರು ಅಗಲಿದಾಗ ಸೌಮ್ಯ ಸೂರಜ್ ಇಬ್ಬರನ್ನೂ ಚಿಕ್ಕಮ್ಮನೇ ಆರೈಕೆ ಮಾಡುವುದು, ಶಾಲೆಯಿಂದ ಬಂದಾಗ ತಿಂಡಿ ಕೊಡುವುದು.. ಮಾಡುತ್ತಾ ಅಕ್ಕರೆಯಿಂದ ಸಲಹುತ್ತಿದ್ದರು. ಪದುಮಳಿಗೂ ಭವ್ಯ, ಭುವನ್ ಎಂಬ ಇಬ್ಬರು ಮಕ್ಕಳು.

ಕೆಲವು ವರ್ಷಗಳ ನಂತರ ಹೆಣ್ಣುಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿದಾಗ ಎಲ್ಲರೂ ಪಾಲು ಮಾಡಿಕೊಂಡು ಗೋವರ್ಧನ ರಾಯರು ಹತ್ತಿರದಲ್ಲೇ ಪುಟ್ಟ ಮನೆ ಕಟ್ಟಿ ತನಗೆ ಸಿಕ್ಕ ಜಮೀನಿನಲ್ಲಿ ಕೃಷಿ ಮಾಡುತ್ತಾ, ಮೇಲು ಖರ್ಚಿಗೆಂದು ಸಣ್ಣಪುಟ್ಟ ಪೌರೋಹಿತ್ಯ ಮಾಡುತ್ತಾ ಜೀವನ ನಡೆಸುತ್ತಿದ್ದರು.


       ಬೆಳೆಯುತ್ತಿರುವ ಸೌಮ್ಯ, ಸೂರಜ್ ಇಬ್ಬರಿಗೂ ಸದಾ ಎಲ್ಲರನ್ನೂ ನಕ್ಕುನಗಿಸುವ ಗುಣ. ಅದಕ್ಕಾಗಿ ಅವರು ಬಹಳಷ್ಟು ಬಾರಿ ಕಾಲೆಳೆಯುತ್ತಿದ್ದುದು ಚಿಕ್ಕಮ್ಮನನ್ನು. ಏಕೆಂದರೆ ಏನು ತಮಾಷೆ ಮಾಡಿದರೂ ಅರ್ಥವಾಗದವಳು, ನೊಂದುಕೊಳ್ಳದವಳು ಅವಳು.. ಅದಕ್ಕಾಗಿ ಚಿಕ್ಕಮ್ಮ ಎನ್ನುವ ಬದಲು ಪೆದ್ದಮ್ಮ ಎಂದೇ ಹೇಳುತ್ತಾ ಸಣ್ಣಪುಟ್ಟ ವಿಚಾರಕ್ಕೂ ನಗುತ್ತಿದ್ದರು. ಅವಳ ನಡೆ ನುಡಿಯನ್ನು ಅಣಕಿಸುತ್ತಿದ್ದರು. ಇದು ಹಾಸ್ಯವೋ ಅಪಹಾಸ್ಯವೋ ಎಂಬ ಅರಿವು ಎಳೆಯ ಮಕ್ಕಳಿಗೆ ಇರಲಿಲ್ಲ. ಎಚ್ಚರಿಸಬೇಕಾದ ಹಿರಿಯರಿಗೂ ಅಂತಹಾ ಅಗತ್ಯ ಕಾಣಲಿಲ್ಲ.


ಭವ್ಯ, ಭುವನ್ ಬೆಳೆಯುತ್ತಿದ್ದಂತೆ ಅವರಿಗೆ ತಮ್ಮ ಅಮ್ಮನನ್ನು ಈ ರೀತಿ ಗೇಲಿ ಮಾಡುವುದು ಸರಿ ಕಾಣುತ್ತಿರಲಿಲ್ಲ. "ಅಮ್ಮಾ ನೀನು ಅಂತಹದ್ದಕ್ಕೆ ಯಾಕೆ ಅವಕಾಶ ಮಾಡಿಕೊಡುತ್ತೀ? ಗೇಲಿ ಮಾಡಿದಾಗ ಸುಮ್ಮನಿರುವುದೇಕೆ? " ಎಂದಾಗ "ಅನ್ನಲಿ ಬಿಡಿ.. ಆ ತಪ್ಪು ನನ್ನದಲ್ಲ" ಎಂದು ತಣ್ಣಗೆ ಉತ್ತರಿಸುತ್ತಿದ್ದರು.


      

         ಸೌಮ್ಯಳ ವಿವಾಹ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರಿನ ಸಿರಿವಂತ ಕುಟುಂಬದ ಸೊಸೆಯಾದಳು ಸೌಮ್ಯ. ವರುಷಗಳು ಉರುಳಿದವು. ಮಡಿಲು ತುಂಬಲಿಲ್ಲ. ಅದೇ ಮಧುಸೂದನ ರಾಯರ ಕುಟುಂಬಕ್ಕೆ ಬಹಳ ನೋವಿನ ವಿಷಯವಾಗಿತ್ತು.


        ಭವ್ಯ ಇಂಜಿನಿಯರಿಂಗ್ ಓದು ಮುಗಿಸಿದಾಗ ಅದೇ ಊರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸುಹಾಸನ ಕುಟುಂಬ ಅವಳನ್ನು ಮೆಚ್ಚಿ ಸೊಸೆಯಾಗಿ ಸ್ವೀಕರಿಸಿದರು. ಮದುವೆಯಾಗಿ ವರುಷದೊಳಗೆ ಪುಟ್ಟ ಕಂದನ ಆಗಮನವಾಯಿತು. ಪದುಮಮ್ಮನಿಗೆ ಗೋವರ್ಧನ ರಾಯರಿಗೆ ಮಗಳ ಬಾಣಂತನದ ಸಂಭ್ರಮ. ಪಕ್ಕದಲ್ಲೇ ಇದ್ದಂತಹ ಮಧುಸೂದನ ರಾಯರು, ಜಯಲಕ್ಷ್ಮಿ ಈಗ ನಿವೃತ್ತರಾಗಿದ್ದರೂ, ಸಹಾಯಹಸ್ತ ಚಾಚುವ ಗೊಡವೆಗೆ ಹೋಗಲಿಲ್ಲ. 


      ಭವ್ಯಾಳ ಮಗು ದಿನದಿಂದ ದಿನಕ್ಕೆ ಆರೋಗ್ಯದಿಂದ ಬೆಳೆಯುತ್ತಿತ್ತು. ಮಗುವಿಗೆ ಒಂದೂವರೆ ವರ್ಷ ದಾಟುತ್ತಿದ್ದಂತೆ ಸೂರಜ್ ಗೆ ವಿವಾಹ ನಿಗದಿಯಾಗಿತ್ತು. ಭವ್ಯಾ ಕುಟುಂಬದೊಂದಿಗೆ ಆಗಮಿಸಿದ್ದಳು. ಅಕ್ಕ ಸೌಮ್ಯ ಮಗುವನ್ನು ಎತ್ತಿಕೊಳ್ಳಲು ಬಂದಾಗ ಭವ್ಯಾ "ಇವರು ದೊಡ್ಡಮ್ಮ.." ಎಂದು ಕಂದನಲ್ಲಿ ಅಂದಾಗ "ಪೆ..ಡ್ಡ..ಮ್ಮ.." ಅಂದಿತು ತೊದಲು ನುಡಿಯಲ್ಲಿ.. ಸುತ್ತಲಿದ್ದವರೆಲ್ಲ ಗೊಳ್ಳೆಂದು ನಕ್ಕರು. 

"ದೊ..ಡ್ಡ...ಮ್ಮ...ಅನ್ನು" ಎಂದು ತಿದ್ದಹೋದಳು ಭವ್ಯಾ. ಮಗು "ಪೆಡ್ಡಮ್ಮ.." ಅಂತಲೇ ಇತ್ತು.  

 

       ತನ್ನ ಪತ್ನಿಯನ್ನು ರೇಗಿಸಲು ಕಾಯುತ್ತಿದ್ದ ಸೌಮ್ಯಳ ಪತಿ "ಇವಳು ಪೆಡ್ಡಮ್ಮ..ಅಲ್ಲ ಪೆದ್ದಮ್ಮ.." ಅಂದರು.. 

ಮಗು ಅದನ್ನೇ ಗಟ್ಟಿಮಾಡಿಕೊಂಡು ಪೆದ್ದಮ್ಮ ಅಂತಲೇ ಬೀಗರೆದುರು, ನೆಂಟರಿಷ್ಟರೆದುರು ಕೂಗುವಾಗ ಸೌಮ್ಯಳ ಕಣ್ಣಾಲಿಗಳು ತುಂಬಿ ಬಂದವು.. 

"ನಾನು ಮಾಡಿದ ತಪ್ಪು ತಿರುಗಿ ನನ್ನ ಪಾಲಿಗೇ ಬಂದಿದೆ.. ಪೆದ್ದಮ್ಮ ಅನ್ನುತ್ತಿದ್ದಾಗ ಚಿಕ್ಕಮ್ಮ ಅದೆಷ್ಟು ನೊಂದುಕೊಳ್ಳುತ್ತಿದ್ದರೋ ಏನೋ" ಸೌಮ್ಯಾಳ ಕಂಗಳಿಂದ ಕಂಬನಿ ಕೆಳಗುರುಳಿತು..


"ಇಲ್ಲ ಮಗಳೇ.. ಇದು ನನ್ನದೇ ತಪ್ಪು.. ನನಗೆ ಎಲ್ಲದಕ್ಕೂ ಸಹಕರಿಸುತ್ತಿದ್ದ ಓರಗಿತ್ತಿಯನ್ನು ನನ್ನ ಎದುರೇ ಮಕ್ಕಳು ಅಪಹಾಸ್ಯ ಮಾಡುತ್ತಿದ್ದರೂ ತಿದ್ದುವ ಗೋಜಿಗೇ ಹೋಗಲಿಲ್ಲ.. ನಾನೂ ಪೆದ್ದಿ, ಪದ್ದಿ, ಪದ್ದು, ಪದುಮ, ಪೆದ್ದು ಅಂತಲೇ ತಾತ್ಸಾರ ಮಾಡುತ್ತಿದ್ದೆ " ಎಂದು ತಾವೂ ಹನಿಗಣ್ಣಾದರು ಜಯಲಕ್ಷ್ಮಿ...



✍️... ಅನಿತಾ ಜಿ.ಕೆ.ಭಟ್.

06-05-2021.

#momspressokannada

#ದಿನಕ್ಕೊಂದು ಬ್ಲಾಗ್

#ಆ ತಪ್ಪು ನನ್ನದಲ್ಲ

2 comments: