Saturday, 8 May 2021

ಏಕಾಂತದ ಸವಿಘಳಿಗೆ

 


ಏಕಾಂತದ ಸವಿಘಳಿಗೆ

      ವಂಶಿ ಒಮ್ಮೆಲೇ ಬ್ರೇಕ್ ಹಾಕಿ ತನ್ನ ಬೈಕ್ ನಿಲ್ಲಿಸಿದ. ತಲೆಯಲ್ಲಿ ಬೇರೆಯೇ ಆಲೋಚನೆ ಮೂಡಿ ಬೈಕ್ ತಿರುಗಿಸಿ ಹಿಂದಕ್ಕೆ ಸಾಗಿದ. ವಾಯುವೇಗದಲ್ಲಿ ಗಾಡಿ ಓಡಿಸಿದವನ ಗ್ರಹಿಕೆ ನಿಜವಾಗಿತ್ತು. ಅದೇ ಜಾಗದಲ್ಲಿ ಅವಳು ಹೃತಿಕ್ ರೋಶನ್ ನ ಚಿತ್ರವಿದ್ದ ನೋಟ್ ಬುಕ್ಕನ್ನು ಎದೆಗವಚಿ ಹಿಡಿದು ಬಸ್ಸಿಗೆ ಕಾದಿದ್ದಳು. ಇವಳು ನಿಜಕ್ಕೂ ಓದಿನ ಹುಚ್ಚಿ. ಇವತ್ತು ಬಸ್ ಸ್ಟ್ರೈಕ್ ಇದೆ ಎಂದು ಗೊತ್ತಿದ್ದೂ ಕಾಲೇಜಿಗೆ ಹೊರಟಿದ್ದಾಳಲ್ಲ..! ನಾನಾದರೆ ಹಾಗೇ ಮನೆಯಲ್ಲೇ ಇದ್ದು  ಹಿಂದಿ, ಇಂಗ್ಲಿಷ್  ಫಿಲ್ಮ್ ನೋಡುತ್ತಿದೆ.

"ಇವತ್ತು ಬಸ್ ಇಲ್ಲ..  "
"ರಿಕ್ಷಾ ಸಿಕ್ಕರೆ ಬರ್ತೀನಿ.."
"ಅದೆಲ್ಲಾ ಯಾಕೆ..? ಹತ್ತು ಗಾಡಿ.."
"ಊಹೂಂ.. ಹಾಗೆಲ್ಲ ಬರುವವಳು ನಾನಲ್ಲ.."
"ನೀನು ಹೀಗೆ ಕಾಯ್ತಾ ಇರ್ತಿ ಅಂತ ಗೊತ್ತಿದ್ದೇ ಬಂದಿದೀನಿ.. ಹತ್ತೋದಷ್ಟೇ ಕೆಲ್ಸ.. "
ಅವನ ಮಾತಿನ ಧಿಮಾಕು ಇಷ್ಟವಾಗಲಿಲ್ಲ ಅವಳಿಗೆ.
"ಬಸ್ ಆಟೋ ಎರಡೂ ಸಿಗದಿದ್ದರೆ ಮನೆಗೆ ವಾಪಾಸು ಹೋಗ್ತೀನಿ.." ಎಂದಳು ತಲೆತಗ್ಗಿಸಿ..

"ಏನ್ ಗಾಂಧೀ ವಂಶದೋಳಾ ಹೇಗೇ..?" ಮಾತಿನಲ್ಲಿ ರೇಗಿ‌ಸಿದ...
ಹಿಂದಿನಿಂದ ಬಂದ ಗುಜರಿ ಆಟೋವನ್ನು ಏರಿ ಆಕೆ ಆತನನ್ನು ನೋಡದೆಯೆ ಸಾಗಿದಳು..
"ನಿಂಗೇ ಇಷ್ಟು ಕೊಬ್ಬಿದ್ರೆ..ನಂಗೆ ಎಷ್ಟಿರಬೇಡ..? ನೋಡ್ತಾಯಿರು ಹೇಗೆ ವಶಪಡಿಸಿಕೊಳ್ತೀನಿ ಅಂತ.."

               ******

     ರಮ್ಯ  ಖಾಸಗಿ ಶಾಲೆಯೊಂದರಲ್ಲಿ ಗುಮಾಸ್ತೆಯಾಗಿದ್ದ ಶೈಲಜಾಳ ಮಗಳು. ರಸ್ತೆ ಅಪಘಾತವೊಂದರಲ್ಲಿ ತಂದೆಯನ್ನು ಕಳೆದುಕೊಂಡಿದ್ದಳು. ಒಂದು ಪುಟ್ಟ ಮನೆಯೇ ಅವರ ಪಾಲಿಗಿರುವ ಆಸ್ತಿ. ಮಗಳನ್ನು ಓದಿಸಿ ಅವಳ ಕಾಲ ಮೇಲೆ ನಿಲ್ಲುವಂತೆ ಮಾಡಬೇಕೆಂದು ಶೈಲಜಾರ ಆಸೆ. ಮಗಳು ರಮ್ಯಾ ಕೂಡ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದು ಅಮ್ಮನ ಆಸೆಯನ್ನು ಪೂರೈಸುವತ್ತ ಗಮನಹರಿಸಿದ್ದಳು.
ಅಪೂರ್ವ ಸುಂದರಿಯಾದ ರಮ್ಯ ಶ್ರೀಮಂತ ಉದ್ಯಮಿ ನಂದಕುಮಾರ್ ಅವರ ಪುತ್ರ ವಂಶಿಯ ಮನಗೆದ್ದಿದ್ದಳು. ಅವನದು ಹುಡುಗಾಟಿಕೆಯ, ಪುಂಡಾಟಿಕೆಯ ವ್ಯಕ್ತಿತ್ವ. ಇವಳೋ ಕ್ಯಾಂಪಸಿನಲ್ಲಿ ಹುಡುಗರನ್ನು ಕಂಡರೆ ತಲೆಯಗ್ಗಿಸಿ ನಡೆಯುವವಳು.

       ವಂಶಿ ಎಷ್ಟು ಪ್ರಯತ್ನಿಸಿದರೂ ರಮ್ಯಾಳಿಗೆ ಬಲೆಬೀಸಲು ಸಾಧ್ಯವಾಗಲಿಲ್ಲ. ಬಸ್ ಸ್ಟ್ರೈಕ್ ಇದ್ದರೆ, ಜೋರು ಮಳೆ ಇದ್ದರೆ ಅದೇ ನೆಪದಿಂದ ರಮ್ಯಾಳನ್ನು ಡ್ರಾಪ್ ಮಾಡುತ್ತೇನೆಂದರೂ ತಿರಸ್ಕರಿಸುವುದು ಅವಳ ಜಾಯಮಾನವಾಗಿತ್ತು. ಅವನ ಯೋಜನೆಗಳೆಲ್ಲಾ ತಲೆಕೆಳಗಾಗುತ್ತಿದ್ದವು.

ಪದವಿ ಕೊನೆಯ ವರ್ಷವೆಂದು ರಮ್ಯಾ ಸದಾ ಓದಿನಲ್ಲಿಯೇ ಮುಳುಗಿದ್ದಳು. ಪರೀಕ್ಷಾ ಫಲಿತಾಂಶ ಬಂದಾಗ ಯುನಿವರ್ಸಿಟಿ ಗೆ ಆರನೇ ರ್ಯಾಂಕ್ ಪಡೆದಿದ್ದಳು. ಮುಂದಿನ ಓದು ಅಮ್ಮನಿಗೆ ಹೊರೆಯಾಗಬಾರದೆಂದು ರಜಾಕಾಲದಲ್ಲಿ ಆಫೀಸೊಂದರಲ್ಲಿ ಕೆಲಸವೂ ಮಾಡಿದಳು. ಆದರೂ ಅಮ್ಮ ಪಿಜಿ ಕೋರ್ಸಿಗೆ ದುಡ್ಡು ಹೊಂದಿಸಲು ಪಡುವ ಕಷ್ಟ ಕಂಡು ಅವಳಿಗೆ ಹೊಟ್ಟೆ ಬೇಯುತ್ತಿತ್ತು.

       ಯುನಿವರ್ಸಿಟಿ ಯಲ್ಲಿ ಪಿಜಿ ಕೋರ್ಸಿಗೆ ಸೇರುವ ದಿನ ಬಂದೇಬಿಟ್ಟಿತು. ಅಮ್ಮ ಫೀಸು ನಿರಾಂತಕವಾಗಿ ತುಂಬಿದಳು. ರಮ್ಯಾಗೆ ಅಚ್ಚರಿಯಾದರೂ ಅಮ್ಮನನ್ನು ಪ್ರಶ್ನಿಸಿ ಮತ್ತೆ ಅದನ್ನೇ ಕೆದಕುವ ಗೋಜಿಗೆ ಹೋಗಲಿಲ್ಲ. ಎರಡು ವರ್ಷ ಓದುವಾಗಲೂ ಸ್ವಲ್ಪವೂ ಹಣದ ಅಡಚಣೆಯನ್ನು ಹೇಳಿಕೊಳ್ಳಲಿಲ್ಲ ಅಮ್ಮ ಎಂಬುದು ಅವಳಿಗೂ ಆಶ್ಚರ್ಯ ತಂದಿತ್ತು.

      ಯುನಿವರ್ಸಿಟಿಗೆ ಎರಡನೆಯವಳಾಗಿ ಹೊರಹೊಮ್ಮಿ  ಪದಕ ಗೆದ್ದಾಗ ಅಮ್ಮನ ಕಣ್ಣಾಲಿಗಳು ತುಂಬಿ ಬಂದವು. "ಮಗಳೇ .. ಇದೇ ಖುಷಿಯಲ್ಲಿ ನನ್ನದೊಂದು ಮಾತು ನಡೆಸಿಕೊಡುತ್ತೀಯಾ..?" ಎಂದರು..
"ಹೇಳಿ ಅಮ್ಮಾ.. ನಿಮ್ಮ ಮಾತಿಗೆ ಯಾವತ್ತಾದರೂ ಬೆಲೆ ಕೊಡದೆ ನಡೆದುಕೊಂಡದ್ದು ಇದೆಯಾ..?"

"ನಿನ್ನ ಪದವಿ ವಿದ್ಯಾಭ್ಯಾಸ ಮುಗಿದಾಗ ಮುಂದೆ ಓದಿಸುವ ಚಿಂತೆ ನನ್ನನ್ನು ಕಾಡುತ್ತಿತ್ತು. ಆಗ ನೆರವಿಗೆ ಬಂದವರು ಉದ್ಯಮಿ ನಂದಕುಮಾರ್. ಎರಡು ವರ್ಷಗಳ ಕಾಲ ನಿನ್ನ ಓದಿಗೆ ನಿರಂತರವಾಗಿ ಧನಸಹಾಯ ಮಾಡಿದರು. ಈಗ ನಿನಗೆ ಎರಡನೇ ರ್ಯಾಂಕ್ ದೊರೆತಿರುವ ಖುಷಿಯಲ್ಲಿ ಅವರೊಂದು ಪ್ರಸ್ತಾಪವನ್ನಿಟ್ಟಿದ್ದಾರೆ.."
"ಏನಂತೆ ಅಮ್ಮಾ..? ಉದ್ಯೋಗ ನೀಡುತ್ತಾರಂತಾ..?"

"ಮಗಳೇ ಅದಕ್ಕಿಂತಲೂ ಉತ್ತಮವಾದ ಅವಕಾಶವನ್ನೇ ಕೊಡುವುದಾಗಿ ತಿಳಿಸಿದ್ದಾರೆ.."
"ಅದಕ್ಕಿಂತ ಉತ್ತಮವಾದುದು ಇನ್ನೇನಿದೆ..?"

"ನಿನ್ನನ್ನು ಅವರ ಮಗನಿಗೆ ತಂದುಕೊಳ್ಳಬೇಕೆಂದಿದ್ದಾರೆ.. ಅವರ ಮನೆ ಬೆಳಗುವ ಭಾಗ್ಯಲಕ್ಷ್ಮಿ ನೀನಾಗಬೇಕಂತೆ.."
ಒಮ್ಮೆಲೇ ರಮ್ಯಾಳ ಮುಖ ಕಪ್ಪಿಟ್ಟಿತು..
"ನಾನಿನ್ನೂ ಮದುವೆಯ ಬಗ್ಗೆ ಯೋಚಿಸಿಲ್ಲ.. ಈಗಲೇ.."
"ಜೀವನ ನಾವು ಅಂದುಕೊಂಡಂತೆಯೇ ನಡೆಯುವುದಿಲ್ಲ. ಅದಕ್ಕೆ ಬೇಕಾದಂತೆ ತಿರುವು ಪಡೆದುಕೊಳ್ಳುತ್ತದೆ. ಆಗ ನಾವು ಸಹಕರಿಸುತ್ತಾ ಸಾಗಿದರೆ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ.."
ಎಂದ ಅಮ್ಮನ ಮಾತಿಗೆ ರಮ್ಯಾ ಸೋಲಲೇ ಬೇಕಾಯಿತು. ಬದುಕಿನ ಬವಣೆಯಲ್ಲಿ ನೊಂದುಬೆಂದ ಅಮ್ಮನ ನಿರ್ಧಾರಕ್ಕೆ ಎದುರಾಡಲಾಗಲಿಲ್ಲ ರಮ್ಯಳಿಗೆ. ಅಮ್ಮನ ಖುಷಿಯೇ ನನ್ನ ಖುಷಿ ಎಂದು ಸಮಾಧಾನ ಮಾಡಿಕೊಂಡಳು.

                   *******

      ಅಂದು ಉದ್ಯಮಿ ನಂದಕುಮಾರ್ ಅವರ ಮೂರಂತಸ್ತಿನ ಮನೆ ನಂದನವನದಲ್ಲಿ ವಿಶಾಲವಾದ ಚಪ್ಪರ ಹಾಕಲಾಗಿತ್ತು. ಮನೆಯಿಡೀ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿತ್ತು. ರಮ್ಯಾಳನ್ನು ಹೆಂಗಳೆಯರು ಸಿಂಗರಿಸಿ ಮದುವೆ ಮಂಟಪಕ್ಕೆ ಕರೆತಂದಿದ್ದರು. ಮದುಮಗಳು ದೇವಲೋಕದಿಂದಿಳಿದು ಬಂದ ಅಪ್ಸರೆಯಂತೆ ಕಾಣುತ್ತಿದ್ದಳು. ವಂಶಿಯ ಕಣ್ಣುಗಳು ತನ್ನರಸಿಯಾಗುವವಳನ್ನೇ ದಿಟ್ಟಿಸುತ್ತಿದ್ದವು. ಅವಳು ಅವನತವದನಳಾಗಿದ್ದಳು. ಕನಸುಗಳೆಲ್ಲ ನುಚ್ಚುನೂರಾದ ಖೇದ ಅವಳ ಮನದೊಳಗೆ ಅಡಗಿತ್ತು.

       ಋತ್ವಿಜರ "ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನಾ..." ವೇದಘೋಷದೊಂದಿಗೆ ವಂಶಿ ರಮ್ಯಾಳಿಗೆ ಮಾಂಗಲ್ಯಧಾರಣೆಯನ್ನು ಮಾಡಿದ. ಅವಳ ಕಣ್ಣಲ್ಲಿ ಕಣ್ಣಿಟ್ಟರೆ ತುಸುಲಜ್ಜೆಯೂ ಬೆರೆಯದೆ ನಿರ್ಲಿಪ್ತವಾಗಿ ಕಂಡಿತು ವಂಶಿಗೆ. ಗೆಳೆಯರೆಲ್ಲ "ಅಂತೂ ನಿನ್ನ ಪ್ರೀತಿಯನ್ನು ಗೆದ್ದೇ ಬಿಟ್ಟೆ ವಂಶಿ" ಎಂದು ಅವನನ್ನು ರೇಗಿಸುತ್ತಿದ್ದರು. ವಂಶಿಗೋ ಇವಳ ಮನಸ್ಸನ್ನು ಗೆಲ್ಲುವುದು ಹೇಗೋ ಎಂಬ ತಳಮಳ ಶುರುವಾಗಿತ್ತು.

       ಮನೆಯ ಮೂರನೇ ಅಂತಸ್ತಿನ ವಿಶಾಲವಾದ ಕೋಣೆಯಲ್ಲಿ ಮಧುಮಂಚ ವಧೂವರರ ಆಗಮನಕ್ಕೆ ಸಜ್ಜಾಗಿತ್ತು. ರಮ್ಯಾ ಕೈಯಲ್ಲಿ ಕ್ಷೀರದ ಬಿಂದಿಗೆ ಹಿಡಿದು ಬರುತ್ತಲೇ ವಂಶಿಯ ದೇಹದ ಕಣಕಣವೆಲ್ಲಾ ಹುಚ್ಚೆದ್ದು ಕುಣಿದಿದ್ದವು. ಅವಳ ಗಂಭೀರ ವದನ ಅವನನ್ನು ಸ್ವಲ್ಪ ಹಿಂಜರಿಯುವಂತೆ ಮಾಡಿತು.

      ಬೆದರಿದ ಹರಿಣಿಯಂತಿದ್ದ ಅವಳ ಮನಸನು ತುಸುತುಸುವೇ ಗೆದ್ದು ಬೀಗಿದ. ಆ ಕಾರಿರುಳ ಏಕಾಂತದಲಿ ಚಂದಿರ ಕಿಟಕಿಯಂಚಿನಲ್ಲಿ ಇಣುಕಿ ನಸುನಗುತ್ತಿದ್ದ. ತಂಪಾದ ಗಾಳಿ ಚಾಮರವ ಬೀಸಿತ್ತು. ತಾರೆಗಳ ತೋಟ ನಸುಬೆಳಕನು ಬಾಡಿಗೆಗೆ ನೀಡಿತು. ತಂಗಾಳಿಯಲ್ಲಿ ಅವಳ ಮುಡಿಯ ಮಲ್ಲಿಗೆಯ ಸೌಗಂಧ ಕೋಣೆಯಿಡೀ ಪಸರಿಸಿತ್ತು.

    ಅವನ ತುಂಟತನಕ್ಕೆ ಅವಳೇ ಸೋತುಹೋಗಿದ್ದಳು. ದೂರ ಸರಿಸಬೇಕೆಂದುಕೊಂಡರೂ ಗಾಳಿಯಾಡಲೂ ಅಂತರವಿರದಂತೆ ಅಂಟಿಕೊಂಡಿದ್ದವನನ್ನು ಕೊಡವಲು ಹೃದಯ ಒಪ್ಪಲಿಲ್ಲ. ಹೃದಯ ಅವನ ಲೀಲೆಗೆ ಕರಗಿ ಬೆಸೆದುಕೊಂಡಿತು. 

      ಬಡವರ ಮನೆ ಹೆಣ್ಣುಮಕ್ಕಳ ಪಾಡೇ ಹೀಗೆ. ಅಮ್ಮನೂ ಕಷ್ಟವನ್ನೇ ಕಂಡವಳು. ತನ್ನ ಕನಸನ್ನೆಲ್ಲ ಬದಿಗೊತ್ತಿ ಬದುಕಿದವಳು. ಇಂದು ನನ್ನ ಬದುಕನ್ನೂ ಅದೇ ಸಿದ್ಧಾಂತದಲ್ಲೇ ಮುಂದುವರಿಯುವಂತೆ ಮಾಡಿದಳು. ಅವಳಿಗಾದರೂ ಏನೆಲ್ಲ ಮಾನಸಿಕ ಒತ್ತಡವಿತ್ತೋ ಏನೋ? ಹೀಗೆ ನಿರ್ಧಾರಕ್ಕೆ ಬರಲು..
 
    "ಪಾಲಿಗೆ ಬಂದದ್ದು ಪಂಚಾಮೃತ" ಎನ್ನುವಂತೆ ನಾನು ಬಂದದ್ದನ್ನು ಎದುರಿಸಿ ಬದುಕಿಗೆ ಮುಂದಡಿಯಿಡಬೇಕು. ನನ್ನ ಕನಸುಗಳು ನನಸಾಗಬಲ್ಲವೇ ಎಂದು ಚಿಂತಿಸುವ ಬದಲು ಕಾಲಕ್ಕೆ ತಕ್ಕಂತೆ ಹೊಸಕನಸುಗಳ ಕಾಣುತ್ತಾ ಬದುಕಿನ ಪ್ರತಿ ಕ್ಷಣವನ್ನೂ ಕುಟುಂಬಕ್ಕೆ ಸಮರ್ಪಿಸುತ್ತಾ ಬಾಳಬೇಕು. ಎಂದುಕೊಂಡ ರಮ್ಯಾ ಹೊಸ ಬದಲಾವಣೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಳು. ಇನ್ನು ಬದುಕು ನನ್ನಿಷ್ಟವೇ ಅಲ್ಲ. ನಮ್ಮಿಬ್ಬರ ಇಷ್ಟಕಷ್ಟಗಳು.. ನೋವು ನಲಿವುಗಳು.. ಏಳುಬೀಳುಗಳು.. ಎಂಬ ಚಿಂತನೆಯೊಂದಿಗೆ ಎದ್ದು ಕೋಣೆಯಿಂದ ಹೊರಬಂದಳು.

✍️... ಅನಿತಾ ಜಿ.ಕೆ.ಭಟ್.
08-05-2021.


#ಪ್ರತಿಲಿಪಿಕನ್ನಡ #ದೈನಿಕವಿಷಯಾಧಾರಿತಕಥೆ

#ಆ ಕಾರಿರುಳ ಏಕಾಂತದಲಿ ಚಂದಿರ ನಗುತಿದ್ದ

No comments:

Post a Comment