Friday, 29 October 2021

ಮತ್ತೆ ಹುಟ್ಟಿ ಬಾ

 


#ಮತ್ತೆ ಹುಟ್ಟಿ ಬಾ...
(ನುಡಿನಮನ)

ಕನ್ನಡಿಗರ ಹೆಮ್ಮೆಯ
ಚಿತ್ರ ಕಲಾವಿದ
ತೊರೆದು ನಡೆದೆಯಲ್ಲ
ಈ ಮಣ್ಣಿನ ಬಂಧ||

ಮೊಗದಿ ನಗುವ ಚೆಲ್ಲುವ
ಹೃದಯವಂತ ಪುನೀತ
ಅವಸರದಲಿ ಕರೆಸಿಕೊಂಡ
ನೀನೆ ಎಂದು ಲೋಹಿತ||

ಬಾಡಿಮಸಣ ಸೇರಿತೇಕೆ
ಬೇಗ ಬೆಟ್ಟದ ಹೂವು
ಸಹಿಸಲೆಂತು ಭರಿಸಲೆಂತು
ನೀನಗಲಿದ ನೋವು||

ಆಡಿದನುಡಿ ಅಭಿನಯದ
ಸವಿನೆನಪೇ ಶಾಶ್ವತ
ತುಂಬುಬಾಳ ನಡೆಸೆ ಬಾ
ಕರುನಾಡಲ್ಲಿ ಮತ್ತೆ ಹುಟ್ಟುತ||

✍️... ಅನಿತಾ ಜಿ.ಕೆ.ಭಟ್.
29-10-2021.

Wednesday, 27 October 2021

ಒಲಿದ ಹೃದಯಕೆ ಒಲವಿನ ಉಡುಗೊರೆ



#ಒಲಿದ ಹೃದಯಕೆ ಒಲವಿನ ಉಡುಗೊರೆ

        ಬೆಳಿಗ್ಗೆ ಅಲಾರಾಂ ಹೊಡೆದುಕೊಂಡಾಗ "ಯಾಕಾದರೂ ಇದು ಒದರಿಕೊಳ್ಳುತ್ತದೋ. ಹಾಳಾದ್ದು ಸಿಹಿನಿದ್ದೆಯನ್ನೂ ಹಾಳುಮಾಡಿಬಿಡುತ್ತೆ." ಅಂತ ಗೊಣಗಿಕೊಂಡು ಇನ್ನೂ ನಿದ್ದೆಯಲ್ಲಿದ್ದ ಮುದ್ದಿನ ಪತಿ ಅಜಯನ ಮುಖವನ್ನೊಮ್ಮೆ ನೋಡಿ ಹೊದಿಕೆ ಹೊದಿಸಿ ಎದ್ದಳು
ಅವನಿಕಾ. ಪ್ರತಿದಿನ ಇದೇ ದಿನಚರಿ.
ಈಗ ಗಡದ್ದಾಗಿ ನಿದ್ದೆ ಮಾಡುವಂತಿಲ್ಲ. ಉಫ್.. ಎಂದುಕೊಂಡು, ಫ್ರೆಶ್ ಆಗಿ ಅಡುಗೆ ತಯಾರಿಯಲ್ಲಿ ತೊಡಗಿದಳು. ಅತ್ತೆ ಸರೋಜಮ್ಮ ಮೊದಲೇ ಅಡುಗೆ ಮನೆಗೆ ಹಾಜರಾಗಿದ್ದರು. ತರಕಾರಿ ಹೆಚ್ಚಿ, ಬೆಳಗ್ಗಿನ ಉಪಾಹಾರಕ್ಕೆ ಸಿದ್ಧತೆ ಮಾಡುತ್ತಿದ್ದರು. ಅವನಿಕಾಳ ನಡತೆಯನ್ನು ಗಮನಿಸಿದ ಅತ್ತೆಗೆ ಇವಳು ಇಂದು ಯಾವತ್ತಿನಂತಿಲ್ಲ ಎಂದು  ಅರಿವಾಯಿತು.

"ಅವನಿಕಾ... ಏನಾದರೂ ಆರೋಗ್ಯ ಸಮಸ್ಯೆ ಇದೆಯಾ.?" ಕೇಳಿದರು ಅತ್ತೆ ಕಕ್ಕುಲಾತಿಯಿಂದ.
"ಇಲ್ಲ.. " ಎಂದಷ್ಟೇ ಚುಟುಕಾಗಿ ಉತ್ತರಿಸಿ ಸುಮ್ಮನಾದಳು ಅವನಿಕಾ.

      ಅಜಯ್ ಎದ್ದು ಫ್ರೆಶ್ ಆಗಿ ಬಂದ. ಅವನಿಗೆ ಬಿಸಿ ಬಿಸಿ ಕಾಫಿ ಕೊಟ್ಟ ಅವನಿಕಾಳ ಮುಖವೇ ಹೇಳುತ್ತಿತ್ತು ಅವಳ ಮೂಡ್ ಸರಿಯಿಲ್ಲ ಎಂದು.
"ಏನು ಮಹಾರಾಣಿಯವರು.. ಬೆಳಿಗ್ಗೆ ಬೆಳಿಗ್ಗೇನೇ ಮೂಡ್ ಔಟ್ ಆಗಿದ್ದು." ಮೆಲ್ಲನೆ ಅವಳ ಬೆನ್ನ ಹಿಂದೆ ತೋಳನ್ನು ಬಳಸುತ್ತಾ
ಕಿವಿಯ ಬಳಿ ಪಿಸುಗುಟ್ಟಿದ ಅಜಯ್.
ಉತ್ತರಿಸದೆ ಮತ್ತಷ್ಟು ಮುಖ ಸಿಂಡರಿಸಿಕೊಂಡು ಹೊರಟಳು ಅವನಿಕಾ.

       ತಿಂಡಿ ತಿಂದು ಆಫೀಸಿಗೆ ಹೊರಟು ನಿಂತ ಮಗಸೊಸೆಯಲ್ಲಿ ಸರೋಜಮ್ಮ, "ಇವತ್ತು ಸ್ವಲ್ಪ ಬೇಗ ಬನ್ನಿ. ನಾಳೆ ಹಬ್ಬಕ್ಕೆ ಖರೀದಿ ಮಾಡೋದು ಇನ್ನೂ ಆಗಿಲ್ಲ. ಬಸ್ಸಲ್ಲಿ ಹೋಗೋಕೆ ಈಗೀಗ ಬಹಳಾನೇ ಕಷ್ಟವಾಗುತ್ತಿದೆ. ವಿಪರೀತ ಮಂಡಿನೋವು." ಅಂದರು.
"ಸರಿ.. ಅಮ್ಮಾ.. ಬೇಗನೇ ಬರೋದಕ್ಕೆ ಟ್ರೈ ಮಾಡ್ತೀವಿ. ಬಾಯ್ " ಎಂದು ಇಬ್ಬರೂ ಜೊತೆಯಾಗಿ ಹೊರಟರು. ಕಾರಲ್ಲಿ ಕುಳಿತು ಯಾವತ್ತೂ ಪ್ರಯಾಣದುದ್ದಕ್ಕೂ  ಹರಟುತ್ತಿದ್ದ ಅವನಿಕಾ ಇವತ್ತು ಮಾತೇ ಆಡದೆ ಸುಮ್ಮನಿದ್ದಳು. ಕಾರಣ ಕಂಡುಹಿಡಿಯಲು ಅಜಯ್‌ಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಇಬ್ಬರೂ ಆಫೀಸಿಗೆ ಹೋಗಿ ಸಂಜೆ ಬೇಗ ಹೊರಡಲು ಬಾಸ್‌ನ ಒಪ್ಪಿಗೆ ಪಡೆದರು.

          ಇಬ್ಬರೂ ಸಂಜೆ ಬೇಗ ಮನೆಗೆ ಬಂದಾಗ ಅಪ್ಪ ಸದಾನಂದ ರಾಯರು ಅಮ್ಮ ಸರೋಜಮ್ಮ ಹೊರಟು ನಿಂತಿದ್ದರು. ಅಮ್ಮ ಮಾಡಿಟ್ಟಿದ್ದ ಪೂರಿ ಬಾಜಿ ಸೇವಿಸಿ, ಶಾಪಿಂಗಿಗೆ ತೆರಳಿದರು. ಮೊದಲು  ವಸ್ತ್ರದ ಮಳಿಗೆಗೆ ತೆರಳಿದರು. ಅತ್ತೆ ಸೊಸೆ ಇಬ್ಬರಿಗೂ ಚಂದದ ಝರಿಯಂಚಿನ ಸೀರೆ ಆಯ್ಕೆ ಮಾಡಿದರು. ಇನ್ನೊಂದು ಸೀರೆಯನ್ನೂ
"ಇದು ತುಂಬಾ ಚೆನ್ನಾಗಿದೆ. ಇರಲಿ" ಎಂದರು ಸರೋಜಮ್ಮ. "ಯಾಕತ್ತೆ.. ಈ ಹಬ್ಬಕ್ಕೆ ಒಂದು ಸಾಕಲ್ವಾ.! ಮುಂದಿನ ಹಬ್ಬಕ್ಕೆ
ಮತ್ತೊಮ್ಮೆ ಬರೋಣ " ಎಂದಳು.
"ಅದು ಕಲರ್ ತುಂಬಾ ಇಷ್ಟವಾಯ್ತು. ಇರಲಿ."  ಎಂದಾಗ ಸೇಲ್ಸ್ ಗರ್ಲ್ "ಅಮ್ಮನಿಗೆ ಇಷ್ಟವಾದ್ದು ಎರಡೂ ಸೀರೇನೂ ಇರ್ಲಿ.. ಯಾಕೆ ಬೇಡಾಂತೀರಿ? ನಿಮಗೂ ಇನ್ನೊಂದು ಆಯ್ಕೆಮಾಡಿಕೊಳ್ಳಿ. ಈ ಗಿಳಿಹಸಿರು ಬಣ್ಣದ ಕೆಂಪು ಬಾರ್ಡರ್ ಸೀರೆ ನಿಮ್ಮ ಮೈಗೆ ಚೆನ್ನಾಗಿ ಒಪ್ಪುತ್ತದೆ. ಕೊಡಲಾ ಮೇಡಂ..?"
ಎಂದು ಅವನಿಕಾಳಲ್ಲಿ ಕೇಳುತ್ತಿದ್ದಾಗ
"ಓಹ್..ನೋ..! ನಾನು ಸಾರಿ ಉಡೋದೇ ಕಡಿಮೆ. ಬೇಡ." ಅಂದಳು ಅವನಿಕಾ ತುಸು ಗಂಭೀರವಾಗಿ.
"ಅಮ್ಮಾ.. ನಿಮ್ಮ ಮಗಳು ನಿಮಗೆ ಉಳಿತಾಯ ಮಾಡೋಕೆ ಹೇಳಿಕೊಡ್ತಾ ಇದಾಳೆ." ಸೊಸೆಯನ್ನು ಮಗಳು ಅಂದಾಗ ಸರೋಜಮ್ಮ ಖುಷಿಯಿಂದ ನಕ್ಕು ಸೊಸೆಯ ಮುಖ ನೋಡಿದರು. ಅವನಿಕಾಗೆ ಸ್ವಲ್ಪವೂ ನಗೆಬರಲಿಲ್ಲ.

ಸದಾನಂದ ರಾಯರು ಮತ್ತು ಅಜಯ್ ಪಂಚೆ ಶಲ್ಯ ಆಯ್ದುಕೊಂಡರು.  ಪಂಚೆ ಶಲ್ಯವೂ ಒಂದು ಹೆಚ್ಚೇ ಖರೀದಿ
ಮಾಡಿದರು. ಮನೆಗೆ ಬಂದು ಅಜಯ್ ಮಡದಿಯನ್ನು ಸಂತೋಷಗೊಳಿಸುವ ಸಲುವಾಗಿ "ಹೇಗೂ ಹಬ್ಬಕ್ಕೆ ಕಂಪೆನಿ ಕಡೆಯಿಂದ ಮೂರುದಿನ ರಜೆಯಿದೆ. ಅವನಿಕಾ.. ಲಾಂಗ್ ಡ್ರೈವ್ ಹೋಗಿ ಬರೋಣವಾ?'' ಎಂದ. ಅವನಿಕಾಳ ಮುಖದಲ್ಲಿ ಕಿರುನಗೆಯೊಂದು ಫಳಕ್ಕನೆ ಮೂಡಿ ಮರೆಯಾಯಿತು.
ಸದಾನಂದ ರಾಯರು "ಅಬ್ಬಾ.. ಈಗ ನನ್ನ ಸೊಸೆಯ ಮುಖ ಅರಳಿತು" ಎಂದು ಛೇಡಿಸಿದರು..

      "ಹೌದು. ಖುಷಿಯಾಗದೇ ಇರುತ್ತಾ..? ಗಂಡ ಹೊರಗಡೆ ಸುತ್ತೋಕೆ ಕರ್ಕೊಂಡು ಹೋಗ್ತೀನಿ ಅಂದಾಗ. ನೀವಂತೂ ನನ್ನನ್ನು ಔಟಿಂಗ್ ಕರ್ಕೊಂಡು ಹೋಗಿಲ್ಲ. ಮಗ ಸೊಸೆಯಾದ್ರೂ ಹೋಗಿ ಬರ್ಲೀ. ಯಾವತ್ತೂ ಆಫೀಸ್ ಆಫೀಸ್ ಅಂತ ಒದ್ದಾಡ್ತಿರೋ ಅವರಿಗೂ ರಿಲಾಕ್ಸ್ ಆಗುತ್ತೆ."  ಎಂದರು ಸರೋಜಮ್ಮ. ಅತ್ತೆ ಮಾವ ಇಬ್ಬರೂ ಸಪೋರ್ಟ್ ಮಾಡಿದ್ದನ್ನು ಕಂಡು ಅವನಿಕಾಗೆ ಸಂತಸವಾಯಿತು. ಹೋಗೋದಕ್ಕೆ ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿದಳು.

       ಸರೋಜಮ್ಮ ತಾವೂ ಒಂದು ಬ್ಯಾಗಿನಲ್ಲಿ ಏನೋ ತುಂಬಿ ಅಜಯನ ಕೈಗಿತ್ತರು. ಇಬ್ಬರೂ ಹೊರಟರು. ಲಾಂಗ್ ಡ್ರೈವ್ ಎಂದರೆ ಅವನಿಕಾಗೆ ಬಲು ಇಷ್ಟ. ಅದರಲ್ಲೂ ತನ್ನ ಪ್ರೀತಿಯ ಪತಿ ಜೊತೆ ಹೋಗೋದೆಂದರೆ, ಸುಮ್ಮನೇನಾ!! ತನ್ನ ಬೇಸರವನ್ನೆಲ್ಲ ಬದಿಗೆ ಸರಿಸಿ ಏನೋ ಹಾಡು ಗುನುಗಲು ಆರಂಭಿಸಿದಳು.
"ಅಮ್ಮಾವ್ರು ಸ್ವಲ್ಪ ಜೋರಾಗಿ ಹೇಳಿ. ನಂಗೂ ಡ್ರೈವಿಂಗ್ ಮಾಡುವಾಗ ರೊಮ್ಯಾಂಟಿಕ್
ಹಾಡು ಕೇಳೋದು ತುಂಬಾ ಇಷ್ಟ" ಕೀಟಲೆ ಮಾಡಿದ ಅಜಯ್.
"ನಿಮಗೆ ರೊಮ್ಯಾನ್ಸ್ ಮಾತ್ರ ಗೊತ್ತು. ನನ್ನ ನೋವು ನಿಮಗೆಲ್ಲಿ ಅರ್ಥವಾಗುತ್ತೆ." ಎಂದು ಸಪ್ಪೆಮುಖ ಮಾಡಿಕೊಂಡಳು. ಛೇ! ನನ್ನಿಂದಾಗಿ ಇವಳ ಮೂಡ್ ಪುನಃ ಹಾಳಾಯಿತಲ್ಲ ಎಂದು ಬೇಸರಪಟ್ಟುಕೊಂಡ ಅಜಯ್. ಅವಳ ತಲೆ ಬೇರೆಯದೇ ಯೋಚನೆಮಾಡುತ್ತಿತ್ತು.

         ಅವನಿಕಾ ತಾನು ಕೆಲಸ ಮಾಡುತ್ತಿದ್ದ
ಕಂಪೆನಿಯಲ್ಲಿ ಸಹೋದ್ಯೋಗಿಯಾಗಿದ್ದ ಅಜಯನನ್ನು ಪ್ರೀತಿಸಿ ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಳು. ಪ್ರೀತಿಸುವ ಗಂಡ, ಅತ್ತೆ, ಮಾವ, ಕೈತುಂಬಾ ಸಂಬಳ ಪಡೆಯುವ ಉದ್ಯೋಗ, ಮನೆ ಎಲ್ಲಾ ಇದ್ದರೂ ಅವಳಿಗೆ ಹೆತ್ತವರ ಸಂಪರ್ಕವಿಲ್ಲದೆ ಮನಸ್ಸು ಚಡಪಡಿಸುತ್ತಿತ್ತು.
ಆಫೀಸಿನಲ್ಲಿ ಗೆಳತಿಯರೆಲ್ಲ ದೀಪಾವಳಿಯ ಹಬ್ಬಕ್ಕೆ ತಮ್ಮೂರಿಗೆ ತೆರಳುವ ಸಂಭ್ರಮದಲ್ಲಿದ್ದರು. ಅವರೆಲ್ಲ ತಂದೆತಾಯಿಯ ಸುದ್ದಿ ಹೇಳುವುದನ್ನು ಕೇಳಿದ ಅವನಿಕಾಳ ಮನಸ್ಸು ಮೂಕವಾಗಿ ರೋದಿಸುತ್ತಿತ್ತು.

        ಯೋಚಿಸುತ್ತಾ ಅವನಿಕಾ ನಿದ್ರೆಗೆ ಶರಣಾದಳು. ಒಮ್ಮೆಲೇ ಎಚ್ಚರವಾದಾಗ ಪತಿ ಎತ್ತಕಡೆ ಕರೆದುಕೊಂಡು ಬಂದಿದ್ದಾರೆ ನೋಡಿದ ಪರಿಸರದಂತಿದೆ. ಎಂದು ನಿದ್ದೆಗಣ್ಣು ಸರಿಯಾಗಿ ಬಿಡಿಸಿದಳು.
ಆಗ " ಮಗಳೇ ಅವನಿಕಾ.. ಅಳಿಯಂದ್ರೇ ಚೆನ್ನಾಗಿದ್ದೀರಾ.." ಎನ್ನುವ ಅಪ್ಪನ ಧ್ವನಿ ಕೇಳಿಸಿತು. ಕನಸೋ ನನಸೋ ಎಂದು ನೋಡುತ್ತಿದ್ದಂತೇ ಅಮ್ಮನ ದನಿಯೂ ತೂರಿಬಂತು. ಅವಳು ತವರುಮನೆಯ
ಅಂಗಳದಲ್ಲಿದ್ದಳು.

"ಅಜಯ್... ಏನಿದು..! ನೀವು ಹೇಳಲೇಯಿಲ್ಲ."

"ನಿನಗೆ ಸರ್ಪ್ರೈಸ್ ಕೊಡೋಣ ಅಂತ ಹೇಳಿಲ್ಲ..."
ಎನ್ನುತ್ತಾ ಮಂದಹಾಸದ ನೋಟ ಬೀರಿದ ಅಜಯ್.

"ಹೌದಮ್ಮಾ, ಅವನಿ.. ಅಳಿಯಂದ್ರು ಫೋನ್ ಮಾಡಿ ನಿನ್ನ ಬಗ್ಗೆ ಹೇಳಿದ್ರು. ನೀನು ನಮ್ಮನ್ನು ಕಾಣದೆ ಮಂಕಾಗಿದ್ದೀಯಾ ಅಂತ. ಎಷ್ಟಾದರೂ ಹೆತ್ತ ಕರುಳಲ್ಲವೇ. ನೀನು ಅಳಿಯಂದ್ರು ಹೊಂದಿಕೊಂಡು ಸಂಸಾರ
ಮಾಡುತ್ತಿರುವಾಗ ಈ ಕೋಪ ಎಲ್ಲ ಯಾಕೆ.? ಈ ದೀಪಾವಳಿಗೆ ಅವನಿಯನ್ನು ಕರ್ಕೊಂಡು ಬನ್ನಿ. ಅಳಿಯಂದ್ರೇ.. ಅಂದ್ಬಿಟ್ಟೆ ಮಗಳೇ.." ಎಂದರು.

       ಅವನಿಕಾಗೆ ಸಂತಸವುಕ್ಕಿ ಬಂತು. "ನನ್ನನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಅಜಯ್. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಅಜಯ್." ಅನ್ನುತ್ತಾ ಅಜಯನನ್ನು ಹದವಾಗಿ ಆಲಂಗಿಸಿದಳು.
ಮಡದಿಯ ಗಲ್ಲವನ್ನೆತ್ತಿ ಹಿಡಿದು,
"ಇದೆಲ್ಲ ನನ್ನ ಅಮ್ಮನ ಯೋಜನೆ. ಸೊಸೆಯ ಮನಸ್ಸನ್ನು ನನಗಿಂತ ಚೆನ್ನಾಗಿ ಅವಳು ಅರ್ಥಮಾಡಿಕೊಂಡು ವ್ಯವಸ್ಥೆ ಮಾಡಿದ್ದು." ಎಂದಾಗ ಅತ್ತೆಯ ಬಗ್ಗೆ ಹೆಮ್ಮೆಯೆನಿಸಿತು ಅವನಿಕಾಗೆ.
ಅಪ್ಪ ಅಮ್ಮ ಇಬ್ಬರೂ ಅಳಿಯ ಮಗಳನ್ನು ಬರಮಾಡಿಕೊಂಡರು. ಅಜಯ್ ಬ್ಯಾಗಿನಲ್ಲಿ ತಂದಿದ್ದ ಸೀರೆ ಪಂಚೆ ಅವನಿಕಾಳ ಕೈಗೆ ಕೊಟ್ಟು "ಇದು ಅತ್ತೆಮಾವನಿಗೆಂದು ಖರೀದಿಸಿದ್ದು.

ಅವರಿಗೆ ಕೊಟ್ಟು ನಮಸ್ಕರಿಸೋಣ." ಎಂದ.
ಇಬ್ಬರೂ ಬಟ್ಟೆಯನ್ನು ಹಿರಿಯರಿಗೆ ಕೊಟ್ಟು "ನಮ್ಮನ್ನು ಕ್ಷಮಿಸಿಬಿಡಿ " ಎಂದು ಹೇಳಿ ನಮಸ್ಕರಿಸಿದರು.
"ನಿಮಗೆ ಮೊದಲ ದೀಪಾವಳಿಗೆ ನಾವೇ ಉಡುಗೊರೆ ಕೊಡಬೇಕು. ನಮಗೆ ಇದೆಲ್ಲ ಬೇಡವಿತ್ತು ಅಳಿಯಂದ್ರೆ.." ಎಂದು ಸಂಕೋಚ ಪಟ್ಟುಕೊಂಡರು ಅವನಿಯ ಅಪ್ಪ.
ಅವನಿಕಾ ಅಮ್ಮನ ಅಪ್ಪುಗೆಯಲ್ಲಿ ಬಂಧಿಯಾದಳು. ಇಬ್ಬರ ಕಣ್ಣುಗಳಲ್ಲೂ ಆನಂದಭಾಷ್ಪ ಚಿಮ್ಮಿತು.

         ಅಜಯ್ ಹಾಗೂ ಮನೆಯವರು ಅವನಿಕಾಗೆ ಮೊದಲ ದೀಪಾವಳಿಗೆ ಬೆಲೆಕಟ್ಟಲಾಗದ ಉಡುಗೊರೆಯನ್ನು ಕೊಟ್ಟಿದ್ದರು. ಸಂತಸದ ಬೆಳಕಿನ ಪ್ರಭೆ ಮನೆಮನದಲ್ಲಿ ತುಂಬಿತು.

✍️... ಅನಿತಾ ಜಿ.ಕೆ.ಭಟ್.
23-10-2019.      
       


Wednesday, 20 October 2021

ಕಾಲಚಕ್ರ

 


#ಕಥೆ: ಕಾಲಚಕ್ರ

         ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಮೈಮುರಿದು ದುಡಿದು ದಣಿದಿದ್ದ ಮನೆಯವರು ಊಟ ಮಾಡಿ, ಸ್ವಲ್ಪ ಹೊತ್ತು ಕಣ್ಣಡ್ಡಾಗಿ ಎದ್ದು ತಮ್ಮ ತಮ್ಮ ಕೆಲಸಗಳತ್ತ ನಿಧಾನವಾಗಿ ಗಮನಹರಿಸತೊಡಗಿದರು. ಮಧ್ಯಾಹ್ನದ ಬಿರುಬಿಸಿಲಿಗೆ ಬಾಡಿಹೋದ ಪುಟ್ಟ ಗಿಡಗಳೆಲ್ಲ ತೆಂಗು, ಹಲಸು, ಮಾವು, ಕಂಗಿನ ಮರಗಳ ಎಡೆಯಿಂದ ಬೀಸುವ ತಂಗಾಳಿಗೆ ಮೈಯೊಡ್ಡಿ ಚೇತರಿಸಿಕೊಳ್ಳುತ್ತಿದ್ದವು. ವಿಶಾಲವಾದ ಹೆಂಚಿನ ಮನೆಯ ಮುಂದಿನ ಚಾವಡಿಯ ಜಗಲಿಯಲ್ಲಿ ಕುಳಿತು "ಪರಮ ಸಂತೋಷದಲಿ ಪತಿಯ ಪಾದಕ್ಕೆರಗಿ ವರದ ಗಣಪತಿಗೆ ವಂದನೆಯ ಮಾಡಿ|| ಹರನರಸಿ ಮಂಗಳಾಗೌರಿ ದೇವಿಯ ಕಥೆಯನೊರೆವೆ ಬಲ್ಲಂಥ ಸಜ್ಜನರು ಕೇಳಿ||" ಎಂದು ಗುನುಗುತ್ತಾ ಬರೆಯುತ್ತಿದ್ದಳು ವರದೆ. ಒಳಗಿನಿಂದ ಸವಿತಾ "ಹೀಗೆ ಬರೆಯುತ್ತಾ ಕುಳಿತರೆ ಮನೆಯ ಕೆಲಸವೆಲ್ಲ ನಾನೊಬ್ಬಳೇ ಮಾಡಬೇಕಾ? ಮಕ್ಕಳು ಶಾಲೆಯಿಂದ ಬರುವ ಹೊತ್ತಾಯಿತು" ಎಂದು ಗೊಣಗುತ್ತಿದ್ದಳು. ಬರೆಯುವುದನ್ನು ಅರ್ಧಗಂಟೆಗೇ ಸೀಮಿತಗೊಳಿಸಿ ಒಳಬಂದು ಕೆಲಸಗಳಲ್ಲಿ ಕೈಜೋಡಿಸಿದಳು ವರದೆ. ಮಕ್ಕಳು ಅಂಗಳದ ತುದಿಯಲ್ಲಿದ್ದಾಗಲೇ "ಚಿಕ್ಕಮ್ಮಾ... ಚಿಕ್ಕಮ್ಮಾ..." ಎಂದು ಕೂಗುತ್ತಲೇ ಬಂದವರು ಶಾಲೆಯ ಸುದ್ದಿಯನ್ನೆಲ್ಲ ಅವಳಿಗೊಪ್ಪಿಸಿ ನಂತರ ತಿಂಡಿತಿನ್ನಲು ಕುಳಿತರು. ವರದೆಗೂ ಮಕ್ಕಳ ಬಾಯಿಂದ ಬರುವ ಸ್ವಾರಸ್ಯಕರ ಸಂಗತಿಗಳೆಂದರೆ ಕೇಳುವ ಕುತೂಹಲ. ಮಕ್ಕಳೊಂದಿಗೆ ತಾನೂ ಬೆರೆಯುತ್ತಾ ನಗೆಚಟಾಕಿಗಳನ್ನು ಹಾರಿಸುತ್ತಾ ಇದ್ದರೆ ಹೊತ್ತು ಸಾಗಿದ್ದೇ ತಿಳಿಯುತ್ತಿರಲಿಲ್ಲ.

         ದಿನವೂ ಸಂಜೆ ಸ್ವಲ್ಪ ದೇವರ ಹಳೆಯ ಹಾಡುಗಳು, ಆರತಿ ಹಾಡುಗಳು, ತೀರ್ಥಪ್ರಸಾದ ಸ್ವೀಕರಿಸುವ ಹಾಡುಗಳನ್ನು ಬರೆಯುತ್ತಾ, ಅಂದು ಮಂಗಳಗೌರಿಯ ಹಾಡನ್ನು ಬರೆದು ಮುಗಿಸಿ ಮಂಗಳ ಹಾಡಿದ್ದಳು. ಗೆಳತಿಯ ಬಳಿ ಕೇಳಿ ತಂದಿದ್ದ ಪುಸ್ತಕದಲ್ಲಿದ್ದ ಎಲ್ಲಾ ಹಾಡುಗಳನ್ನೂ ಬರೆದುಕೊಂಡಾಗ ಅವಳಿಗೆ ಅಪರಿಮಿತ ಆನಂದವಾಗಿತ್ತು.

      ಬರೆದ ಪುಸ್ತಕವನ್ನು, ಗೆಳತಿಯ ಪುಸ್ತಕವನ್ನೂ ಜೊತೆಯಲ್ಲಿ ಒಂದರಮೇಲೆ ಒಂದರಂತೆ ದೇವರಕೋಣೆಯ ಒಂದು ಬದಿಯ ಗೋಡೆಗೆ ತುಸು ಎತ್ತರದಲ್ಲಿ ತಗುಲಿಸಿದ್ದ ಹಲಗೆಯಲ್ಲಿ ಇರಿಸಿದ್ದಳು. ಇನ್ನು ನಾಳೆಯಿಂದ ದಿನವೂ ಸ್ವಲ್ಪ ಹೊತ್ತು ದೇವರಹಾಡುಗಳನ್ನು ಓದುತ್ತಾ ಆ ಹಾಡುಗಳನ್ನು ಕಂಠಸ್ಥ ಹೃದಯಸ್ಥ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಲೇ ನಿದ್ರಿಸಿದವಳು ವರದೆ.

       ಮರುದಿನ ಮನೆಯ ಕೆಲಸಗಳನ್ನು ಬೇಗನೆ ಮುಗಿಸಿ ಸ್ನಾನ ಮಾಡಿ ಬಂದು ಇನ್ನು ದೇವರ ಮನೆಯಲ್ಲಿ ಹಾಡುಗಳನ್ನು ಓದುತ್ತೇನೆ ಅಂದುಕೊಂಡವಳಿಗೆ ಪುಸ್ತಕ ಕಾಣಿಸದಿದ್ದಾಗ ಆತಂಕವಾಯಿತು. ಎಲ್ಲರಲ್ಲೂ ಕೇಳಿದಳು. ಯಾರೂ ತೆಗೆದಿಲ್ಲ ಎಂದರು. ಅಕ್ಕನಲ್ಲಿ ಸಂಶಯಪಟ್ಟಾಗ ಆಕೆ ದೊಡ್ಡ ಧ್ವನಿಯಲ್ಲಿ ಗದರಿ "ನೀನೇ ಬೇರೆಲ್ಲೋ ಇಟ್ಟು ಮರೆತು ನನ್ನ ಮೇಲೆ ಗೂಬೆ ಕೂರಿಸುತ್ತೀಯಾ" ಎಂದು ಹಾರಾಡಿದಳು. ಮತ್ತೆ ಮತ್ತೆ ನೆನಪು ಮಾಡಿದಾಗಲೂ ಅಲ್ಲೇ ಇಟ್ಟಿದ್ದೆ ಎಂದೇ ಸಾರುತ್ತಿತ್ತು ಅವಳ ಮನ. ಇಡುವಾಗ  ಕೈ  ಹಲಗೆಗೆ ತಾಗಿ ಸಣ್ಣದಾಗಿ ಗೀರಿತ್ತು. ಆ ಗಾಯವೂ ಸಾಕ್ಷಿಯಾಗಿ ನಿಂತಿತ್ತು. ಒಂದು ದಿನ, ವಾರ, ತಿಂಗಳು ಹುಡುಕಿದರೂ ಹಾಡಿನ ಪುಸ್ತಕದ ಪತ್ತೆಯಿಲ್ಲ. "ನನ್ನ ಪುಸ್ತಕ ಆದರೂ ಹಾಗಿರಲಿ.. ನನ್ನ ಗೆಳತಿಗೇನು ಹೇಳಲಿ? ಬಹಳ ಜತನದಿಂದ ತನ್ನ ತಾಯಿ, ಅಜ್ಜಿ ಮತ್ತು ಮುತ್ತಜ್ಜಿ ಹೇಳುತ್ತಿದ್ದ ಹಾಡುಗಳನ್ನು ಸಂಗ್ರಹಿಸಿದ್ದಳು." ಎಂದು ನೊಂದುಕೊಂಡಿದ್ದಳು ವರದೆ. ಪ್ರತಿದಿನವೂ ದೇವರ ಮುಂದೆ "ದೇವರೇ.. ನೀನೇಕೆ ಹೀಗೆ ಮಾಡಿದೆ? ನಿನಗೆ ನನ್ನ ಬಾಯಿಂದ ನಿನ್ನ ನಾಮಸ್ಮರಣೆ ಕೇಳುವ ಆಸೆಯಿಲ್ಲವೇ?  ಏಕೆ ಕಣ್ಣಿಗೆ ಕಾಣಿಸದಂತೆ ಅಡಗಿಸಿದೆ?" ಎಂದು ದೇವರಲ್ಲಿ ತನ್ನ ಮನದ ಅಳಲನ್ನು ಮೌನವಾಗಿಯೇ ತೋಡಿಕೊಂಡು ಕಂಬನಿ ಸುರಿಸುತ್ತಿದ್ದಳು.

       ಈ ಘಟನೆಯಿಂದ ಬೇಸರಗೊಂಡ ವರದೆ ಹಾಡು ಹೇಳುವ ಹವ್ಯಾಸದಿಂದಲೇ ವಿಮುಖಳಾದಳು. ಪುಸ್ತಕ ಕೊಟ್ಟರೆ ಹಿಂದಿರುಗಿಸದವಳು ಎಂಬ ಹೆಸರು ಬಂದಾಗ ಬಲು ನೊಂದಳು. ಅಸಹಾಯಕ ಪರಿಸ್ಥಿತಿಯಲ್ಲಿ ನಿಂತಿದ್ದಳು. ಮದುವೆಯಾಗಿ ವರುಷಗಳು ನಾಲ್ಕು ಕಳೆದರೂ ಮಡಿಲು ತುಂಬದ ಅವಳಿಗೆ  ಈ ಹವ್ಯಾಸ ಮನಸೋಲ್ಲಾಸ ನೀಡುತ್ತಿತ್ತು. ಈಗ ಅದನ್ನೂ ನಿಲ್ಲಿಸಿದವಳು ಮಾನಸಿಕವಾಗಿ ಕುಗ್ಗಿ ಹೋದಳು.

        ಕೆಲವು ವರ್ಷಗಳ ಕೂಡು ಕುಟುಂಬದ ಜೀವನದುದ್ದಕ್ಕೂ ಸಂಶಯ, ಅವಮಾನ ಮತ್ತು ಬಿರುನುಡಿಗಳ ಸುಳಿಯಲ್ಲಿ ಬೆಂದು ವರದೆ ಮತ್ತು ಆಕೆಯ ಪತಿ ನರಸಿಂಹ ಪ್ರತ್ಯೇಕವಾಗಿ ವಾಸಿಸತೊಡಗಿದರು. ಮರು ವರುಷವೇ ಮುದ್ದಾದ ಹೆಣ್ಣುಮಗಳಿಗೆ ಜನ್ಮನೀಡಿದರು. ಸಂತಸವು ಮನೆಮನದಲ್ಲಿ ತುಂಬಿತ್ತು.

                   *******

        "ಸವಿತಾ ನಾನೊಮ್ಮೆ ಮಗಳ ಜಾತಕ ಶಾಸ್ತ್ರಿಗಳಲ್ಲಿ ತೋರಿಸಿ ಬರುತ್ತೇನೆ." ಎಂದರು ಜಗನ್ನಾಥ ರಾಯರು.
"ಹೂಂ.. ಆಗಲಿ" ಎಂದು ಪತಿಯಲ್ಲಿ ಹೇಳಿದ ಸವಿತಾ ಮನಸಿನಲ್ಲಿ
"ನಿಮ್ಮ ತಮ್ಮನ ಮಗಳು ನಮ್ಮ ಮಗಳಿಗಿಂತ ವಯಸ್ಸಿನಲ್ಲಿ ಎಂಟು ವರ್ಷ ಸಣ್ಣವಳಾದರೂ ಮದುವೆಯಾಗಿ ಗಂಡನ ಮನೆಯಲ್ಲಿ ಹಾಯಾಗಿದ್ದಾಳೆ. ನಮ್ಮ ಮಗಳು ಮಾತ್ರ ವಯಸ್ಸು ಮೀರುತ್ತಿದ್ದರೂ ಮದುವೆಯಾಗದೆ ಜಾಬ್, ಪ್ರಾಜೆಕ್ಟ್ ಎಂದು ಹಗಲಿರುಳೂ ದುಡಿಯುತ್ತಿದ್ದಾಳೆ. ಪಿಜಿಯಲ್ಲಿ ವಾಸಿಸುತ್ತಿರುವವಳು ರಜೆಯಿದ್ದರೂ ಹಬ್ಬಹರಿದಿನಗಳಲ್ಲಿ ಮನೆಕಡೆಗೆ ತಲೆಯೂ ಹಾಕುವುದಿಲ್ಲ. ವಾರಾಂತ್ಯದಲ್ಲಿ ನಿಮ್ಮ ಮಗಳನ್ನು ಯಾರೋ ಒಬ್ಬ ಹುಡುಗನ ಜೊತೆ ಬೈಕಿನಲ್ಲಿ  ನಂದಿಬೆಟ್ಟದಲ್ಲಿ ಕಂಡೆ ಎಂದಾಗ ನನ್ನ ಎದೆ ಧಸಕ್ಕೆಂದಿತ್ತು. ನಾನು ಬುದ್ಧಿ ಹೇಳಿದರೆ ಅವಳು ಕೇಳುವವಳಲ್ಲ. ನೀವು ಹೇಳುವ ಗೋಜಿಗೇ ಹೋಗುವುದಿಲ್ಲ. ಒಳ್ಳೆಯ ಜೋಯಿಸರಲ್ಲಿ ಮಗಳ ಜಾತಕ ತೋರಿಸಿ ಕಂಕಣಬಲ ಯಾವಾಗ ಕೂಡಿಬರುತ್ತದೆ? ಕೇಳಿ ಎಂದರೆ, ನನ್ನ ಮಾತು ನಿಮಗೆ ತಾತ್ಸಾರ. ಈಗಲಾದರೂ ಒಳ್ಳೆ ಆಲೋಚನೆ ಮೂಡಿತಲ್ಲ..!!" ಎಂದು ಗೊಣಗಿಕೊಂಡಳು.

       ಜಗನ್ನಾಥ ರಾಯರು ಶಾಸ್ತ್ರಿಗಳಲ್ಲಿ ಮಗಳ ಕುಂಡಲಿಯನ್ನು ತೋರಿಸಿ ಬಂದವರೇ.. "ಸವಿತಾ.. ಮಗಳಿಗೆ ಬಹಳಷ್ಟು ಕಂಟಕಗಳೆಲ್ಲ ಇವೆಯಂತೆ. ಅದಕ್ಕಾಗಿ ವಿವಾಹ ವಿಳಂಬವಾಗುತ್ತಿದೆ. ಶಾಸ್ತ್ರಿಗಳು ಮಂಗಳಗೌರಿಯ ವ್ರತ ಕಥೆಯ ಹಾಡನ್ನು ಓದಲು ಹೇಳಿದ್ದಾರೆ.."
"ನೀವು ಆ ಹಾಡನ್ನು ಶಾಸ್ತ್ರಿಗಳಲ್ಲಿ ಕೇಳಿ ತರಬೇಕಿತ್ತು."
"ನಾನು ಪುಸ್ತಕದ ಅಂಗಡಿಯಲ್ಲಿ ಅರಸಿದೆ. ಅದು ಸಿಕ್ಕಿಲ್ಲ.." ಎಂದ ಪತಿಯಲ್ಲಿ "ನೀವು ಗಂಡಸರು ಹೀಗೇನೇ.. ಅದು ಓದಿ, ಇದು ಮಾಡಿ ಅಂತೀರಿ. ಅದಕ್ಕೆ ಬೇಕಾದ್ದನ್ನು ತಂದೇ ಕೊಡಲ್ಲ..!" ಎಂದು ಮೂತಿಯುಬ್ಬಿಸಿದಳು.

         ಸವಿತಾಳಿಗೆ ಥಟ್ಟನೆ ಏನೋ ಹೊಳೆಯಿತು. ಗಂಡ ಹೊರಗೆ ಹೋಗುತ್ತಲೇ ಅಟ್ಟಕ್ಕೆ ಓಡಿದಳು. ತನ್ನ ಹಳೆಯ ಸೀರೆಯನ್ನು ಸಂಗ್ರಹಿಸಿಡುತ್ತಿದ್ದ ಹಳೆಯ ಕಾಲದ ಮಣ್ಣಿನ ಮಂಡಗೆಯ  ಒಳಗೆ ಕೈ ಹಾಕಿ ಒಂದೊಂದೇ ಬಟ್ಟೆಯನ್ನು ಹೊರತೆಗೆದಳು. ಮಕ್ಕಳು ಚಿಕ್ಕಂದಿನಲ್ಲಿ ಧರಿಸುತ್ತಿದ್ದ ಬಟ್ಟೆಗಳು, ಅತ್ತೆಯ ಮಗ್ಗದ ಸೀರೆ, ಮಾವನ ಪಂಚೆ ಶಾಲು, ವರದೆಯ ತವರಿನಿಂದ ಕೊಟ್ಟ ವಾಯಿಲ್ ಸೀರೆ ಎಲ್ಲವೂ ಸಿಕ್ಕವು. ಕೊನೆಗೆ ಅಡಿಯಲ್ಲಿ ಸಿಕ್ಕಿದ ಪುಸ್ತಕವನ್ನು ಬಹಳ ಜೋಪಾನವಾಗಿ ಕೆಳಗೆ ತಂದಳು. ಸ್ನಾನ ಮಾಡಿ ದೇವರ ಮುಂದೆ ಹಾಡಿನ ಪುಸ್ತಕವನ್ನು ಬಿಡಿಸಿದಾಗ ಪುಟ ಪುಟದಲ್ಲೂ ವರದೆಯ ಮುಖವೇ ಕಾಣುತ್ತಿತ್ತು. ಕಣ್ಣುಗಳು ಮಂಜಾದವು.

         ನನ್ನ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸಿ ಮಂಗಳಗೌರಿಯ  ವ್ರತದ ಹಾಡನ್ನು ಓದಲೇಬೇಕಾದ ಪರಿಸ್ಥಿತಿ ಬಂದಿತು. ದೇವಿ, ತನ್ನನ್ನು ಮನಸಾರೆ ಭಜಿಸಬೇಕು ಎಂದುಕೊಂಡವಳನ್ನು ಭಜಿಸದಿದ್ದರೂ ಅವಳದಲ್ಲದ ತಪ್ಪಿಗೆ ಕ್ಷಮಿಸಿ ಹರಸಿದ್ದಳು. ತಪ್ಪು ಮಾಡಿಯೂ ಒಪ್ಪಿಕೊಳ್ಳದೆ ಇರುವ ನನಗೆ ತಕ್ಕ ಪಾಠವನ್ನೇ ಕಲಿಸಿದಳು. ಎಂದುಕೊಂಡು ಓದುತ್ತಿದ್ದವಳಿಗೆ ಜಗನ್ನಾಥ ರಾಯರು ಬಂದದ್ದು ಅರಿವಾಗಲಿಲ್ಲ.

          ಮದುವೆಯಾಗಿ ಮೂರು ದಶಕ ಸಂದರೂ ಒಂದು ದಿನವೂ ಇಷ್ಟು ಭಯ ಭಕ್ತಿಯಿಂದ ದೇವರ ಮುಂದೆ ಕುಳಿತು ಭಜಿಸಿದ್ದನ್ನು ಕಂಡಿಲ್ಲ ನಾನು. ಇವತ್ತೇನು ದಿಢೀರಾಗಿ ಭಕ್ತಿ ಮೂಡಿದೆ ಎಂದು ಕುತೂಹಲದಿಂದ ರಾಯರು ಬಗ್ಗಿದರು. ಹಿಡಿದುಕೊಂಡಿದ್ದ ಪುಸ್ತಕದೆಡೆಗೆ ದೃಷ್ಟಿಹಾಯಿಸಿದರು.   "ಅರೇ.. ಮಂಗಳಗೌರಿಯ ವ್ರತಕಥೆಯ ಹಾಡು..!! ಈಗ ಹೇಗೆ ಸಿಕ್ಕಿದವು ಈ ಎರಡೂ ಪುಸ್ತಕಗಳು? "
ಮಾತನಾಡಿದರೆ ಪರಿಸ್ಥಿತಿ ಕೈಮೀರಿ ಹೋದೀತೆಂದು ಮೌನವಾಗಿಯೇ ಇದ್ದಳು ಸವಿತಾ.
"ಅಂದು ಈ ಪುಸ್ತಕ ಕಾಣದೇ ಬಹಳವೇ ದುಃಖತಪ್ತಳಾಗಿದ್ದಳು ತಮ್ಮನ ಮಡದಿ. ನೀನು ಇಂತಹಾ ಕಳ್ಳ ಕೆಲಸ ಮಾಡುವಿ ಎಂದುಕೊಂಡಿರಲಿಲ್ಲ" ಎಂದಬ್ಬರಿಸಿದವರೇ "ನಡೆ.. ಹೋಗೋಣ ನರಸಿಂಹನ ಮನೆಗೆ ಈ ಪುಸ್ತಕದೊಂದಿಗೆ" ಎಂದು ಹೇಳಿದಾಗ ಸುಮ್ಮನಿದ್ದ ಸವಿತಾಳ ರಟ್ಟೆ ಹಿಡಿದು ಮುಂದೆ ನೂಕಿ "ಹ್ಞೂಂ.. ಏನು ಇನ್ನೂ ನೋಡುತ್ತಾ ನಿಂತಿದ್ದೀ.. ಕಳ್ಳಿ" ಎಂದ ಪತಿಯ ಆ ಕೆಂಡಕಾರುವ ನೋಟವನ್ನು ಸಹಿಸಲಾಗದೆ ಉಪಾಯವಿಲ್ಲದೆ ಪತಿಯೊಡನೆ ಭಾರವಾದ ಹೆಜ್ಜೆ ಹಾಕುತ್ತಾ ಸಾಗಿದಳು ಸವಿತಾ.

✍️... ಅನಿತಾ ಜಿ.ಕೆ.ಭಟ್.
27-09-2021.
#ಸೌಹಾರ್ದ ಬಳಗ
#ಕಥೆ_ಕಥೆ_ತೋರಣ_ಸಂಚಿಕೆ_೩೨
#ದತ್ತಸಾಲು_ಪುಸ್ತಕ_ಬಿಡಿಸಿದರೆ_ಪುಟ_ಪುಟದಲ್ಲೂ_ಆ_ಮುಖವೇ_ಕಾಣುತ್ತಿತ್ತು.
#ಮೆಚ್ಚುಗೆ ಪಡೆದ ಕಥೆ.



Saturday, 16 October 2021

ಜನುಮದಿನದ ಶುಭಾಶಯಗಳು

 


#ಜನುಮದಿನದ ಶುಭಾಶಯಗಳು

ಜನುಮ ದಿನದ ಶುಭಾಶಯವು ಮುದ್ದು ಕಂದಗೆ
ಒಲವಿನೊಸಗೆ ತಂದಂಥ ಹೂಬಳ್ಳಿಗೆ||೧||

ನಿನ್ನ ನಗುವ ಬೆಳದಿಂಗಳ ತಂಪಿನಲ್ಲಿ
ಉರುಳಿಹವು ವರುಷಗಳು ಹರುಷದಲ್ಲಿ||೨||

ಸತ್ಯಪಥವು ನಿನ್ನದಿರಲಿ ಕಷ್ಟದಲ್ಲೂ ಕಂದ
ಗಮ್ಯದೆಡೆಗೆ ಚಿತ್ತವಿಟ್ಟು ಸಾಗುತಿರು ಚಂದ||೩||

ಸಂಸ್ಕಾರದ ಅಡಿಪಾಯದಿ ಸಾಧನೆಯ ಗೈದು
ಬೆಳೆದು ಹೊಳೆಯಬೇಕು ಸತ್ಕೀರ್ತಿಯ ತಂದು||೪||

ದೇವರಕ್ಷೆ ಇರಲಿ ಸದಾ ನಿನ್ನ ಬಾಳಿಗೆ
ಹರಸುತಿಹೆವು ಹಿರಿಯರೆಲ್ಲ ನಿತ್ಯ ಗೆಲುವಿಗೆ||೫||

✍️... ಅನಿತಾ ಜಿ.ಕೆ.ಭಟ್.

ಚಿತ್ರ ಕೃಪೆ: ಅಂತರ್ಜಾಲ

Monday, 11 October 2021

ಮಂಗಳಾಪುರನಿಲಯೇ ಶ್ರೀಮಂಗಳಾದೇವಿ

 


#ಮಂಗಳಾಪುರನಿಲಯೇ ಶ್ರೀ ಮಂಗಳಾದೇವಿ

ಮಂಗಳಾಪುರ ನಿಲಯೇ ಶ್ರೀ ಮಂಗಳಾದೇವಿ
ಕೈಬಿಡದೆ ಕಾಪಾಡಮ್ಮಾ
ಬಂದೊದಗುವ ದುರಿತಕ್ಲೇಶಗಳ ಕಳೆಯುತಲಿ
ಮುನ್ನಡೆಸುವ ಶಕ್ತಿ ನೀನಮ್ಮಾ||೧||

ಕರದೊಳು ಅಭಯವರದ ಮುದ್ರೆ, ಕಷ್ಟ
ನಷ್ಟ ಅರಿಷ್ಟಗಳ ನಿವಾರಿಸುವ ಮಾತೆ
ಪಾಪ ಕಳೆವ ಶಿವಶಕ್ತಿ ಸ್ವರೂಪಿಣಿ 
ಸ್ವರ್ಣಾಭರಣಭೂಷಿತೆ ಸನ್ಮಂಗಲದಾತೆ||೨||

ಹೂವುಹಣ್ಣುಗಳ ತಂದಿರುವೆ ಭಕುತಿಯಲಿ
ತಿಂಗಳವದನೆ ಸ್ವೀಕರಿಸಮ್ಮಾ
ಹೆಚ್ಚಿಗೆ ಬೇಡೆನು ನಿನ್ನ ಸೇವೆಯ ಮನವ
ಅನವರತವು ನೀ ನೀಡಮ್ಮಾ||೩||

ನವರಾತ್ರಿಯಲಿ ನವವಿಧ ಅಲಂಕಾರದಿ
ಕಂಗೊಳಿಸುವ ಮಂಗಳೆ ನೀನಮ್ಮಾ
ಆವಪದಗಳಲಿ ಬಣ್ಣಿಸಲಿ ಚೆಲುವನು
ಸಿಂಗರದೊಡತಿಯೆ ಹೇಳಮ್ಮಾ||೪||

ಅಕ್ಷರರಕ್ಷೆಯ ನೀಡುವ ಮಹಾಸರಸ್ವತಿ
ಸವಿನುಡಿಯಲು ಕಲಿಸು ವಾಗ್ದೇವಿ
ಅಡವಿಯ ನಡುವೆ ಪರಶುರಾಮನಿಗೊಲಿದ
ಲಿಂಗರೂಪಿ ಪಾರ್ವತಿ ಶಾಂಭವಿ||೫||

✍️... ಅನಿತಾ ಜಿ.ಕೆ.ಭಟ್.
12-10-2021.

Wednesday, 6 October 2021

ಹರಸು ತಾಯೇ ಮಹಿಷಮರ್ದಿನಿ





#ಹರಸು ತಾಯೇ

ಹರಸು ತಾಯೇ ಹರಸಿ ಕಾಯೇ ಮಹಿಷಮರ್ದಿನಿ
ಉಸಿರುಉಸಿರಲಿ ನಿನ್ನ ಹೆಸರನು ಸ್ತುತಿಪೆ ಹೇ ಜನನಿ||೧||

ಪುಂಚದಲ್ಲಿ ಮೂಡಿಬಂದಿಹೆ ಪರಮಪಾವನಿ
ಕೊಂಚಕರುಣೆ ತೋರಿ ಸಲಹು ಸಿಂಹವಾಹಿನಿ||೨||

ಹಸಿರುಕಂಗಿನ ತೋಪನಡುವೆ ನಿನ್ನ ಸನ್ನಿಧಿ
ಮಡಿಲಕಂದರಿಗೆಲ್ಲ ನೀಡೆ ಅಭಯ ನೆಮ್ಮದಿ||೩||

ತುಪ್ಪದೀಪ ಪುಷ್ಪಮಧುವು ನಿನಗೆ ಅರ್ಪಣೆ
ತಪ್ಪನೆಸಗುವ ಮೂಢರನ್ನು ಮನ್ನಿಸುವ ಸುಗುಣೆ||೪||

ಶರನ್ನವರಾತ್ರಿ ವೈಭವದಿ ಪೂಜೆ ಕುಂಕುಮಾರ್ಚನೆ
ಶರಣು ಬಂದರೆ ಉಣಿಸಿ ತಣಿಸುವ ಅನ್ನಪೂರ್ಣೆ||೫||

✍️... ಅನಿತಾ ಜಿ.ಕೆ.ಭಟ್.
07-10-2021.

ಶ್ರೀ ಮಹಿಷಮರ್ದಿನಿ ದೇವಸ್ಥಾನ, ಪುಣಚ.





Saturday, 2 October 2021

ಗಾಂಧಿತಾತ

 


#ಗಾಂಧಿತಾತ

ಶಾಂತಿಮಂತ್ರವ ಪಠಿಸುತಿದ್ದರು
ಗಾಂಧಿಯೆಂಬ ಮಹಿಮರು
ಚರಕದಿಂದ ನೂಲುತೆಗೆದು
ಖಾದಿಯುಟ್ಟು ಮೆರೆದರು||೧||

ಕೋಲುಹಿಡಿದು ದೇಶಸುತ್ತಿ
ಸತ್ಯ ಅಹಿಂಸೆಯ ಬೋಧಿಸಿ
ಜಾತಿಪಂಥದ ಭೇದವಿರದ
ಐಕ್ಯಮಂತ್ರವ ಹಾಡಿಸಿ||೨||

ತಪ್ಪನೆಲ್ಲ ತಿದ್ದಿನಡೆಯುತ
ಕ್ರಾಂತಿಗೈದ ಪುರುಷರು
ಉಪ್ಪಿಗೆಂದು ಯಾತ್ರೆಗೈದು
ಸತ್ಯಾಗ್ರಹವನೆ ಸಾರಿದರು||೩||

ಪರಂಗಿ ಜನರ ಕುಟಿಲತೆಗೆ
ಬರಿಗೈಯ ಸಮರ ಹೂಡುತ
ಫಿರಂಗಿಬಳಸದೆ ಗೆಲ್ಲಹೊರಟ
ಗಾಂಧಿಯಾದರು ಮಹಾತ್ಮ||೪||

ಗಾಂಧಿತತ್ವವ ಮನದಿ ಜಪಿಸಿ
ನಮಿಸೋಣ ಹಿರಿನೇತಾರಗೆ
ಸ್ವಾತಂತ್ರ್ಯಕ್ಕಾಗಿ ಬದುಕು
ಸವೆಸಿದ ನಮ್ಮ ಶಾಂತಿದೂತಗೆ||೫||

✍️... ಅನಿತಾ ಜಿ.ಕೆ.ಭಟ್.
02-10-2021.


Friday, 1 October 2021

ಚಿಕ್ಕಮೇಳ ಯಕ್ಷಗಾನ ಪ್ರದರ್ಶನ

 


 


#ಚಿಕ್ಕಮೇಳ

     ಕರಾವಳಿಯ ಪ್ರಸಿದ್ಧ ಕಲಾಪ್ರಕಾರ ಯಕ್ಷಗಾನ ಬಯಲಾಟ. ಯಕ್ಷಗಾನ ಬಯಲಾಟ ಪ್ರದರ್ಶನಗಳು ಮಳೆಗಾಲದಲ್ಲಿ ನಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಯಕ್ಷಕಲಾವಿದರು ಚಿಕ್ಕ ತಂಡಗಳನ್ನು ಕಟ್ಟಿಕೊಂಡು ಮನೆಮನೆಗಳಿಗೆ ತೆರಳಿ ಯಕ್ಷಗಾನದ ತುಣುಕೊಂದನ್ನು ಆಡಿ ತೋರಿಸುತ್ತಾರೆ.

     

ಸಾಮಾನ್ಯವಾಗಿ ಪ್ರದರ್ಶನಕ್ಕೆ ಬರುವ ಎರಡು ಮೂರು ದಿನಗಳ ಮೊದಲೇ ಚಿಕ್ಕಮೇಳದ ಸಂಚಾಲಕರು ಬಂದು ಕರಪತ್ರ ಹಂಚಿ ತಾವು ಬರುವ ದಿನ, ಉದ್ದೇಶ ತಿಳಿಸಿ ಮನೆಯವರ ಒಪ್ಪಿಗೆಯನ್ನು ಪಡೆದು ತೆರಳುತ್ತಾರೆ.ಸಂಜೆ ಆರರಿಂದ ರಾತ್ರಿ ಹನ್ನೊಂದರವರೆಗೂ ಪ್ರದರ್ಶನ ನೀಡುತ್ತಾರೆ . ಒಂದು ಮನೆಯಲ್ಲಿ ಸುಮಾರು ಐದರಿಂದ ಹತ್ತುನಿಮಿಷಗಳ ಕಾಲ ಯಕ್ಷಗಾನದ ವೈಭವವನ್ನು ಉಣಬಡಿಸುತ್ತಾರೆ.


ಸ್ತ್ರೀ ಹಾಗೂ ಪುರುಷ ಪಾತ್ರಧಾರಿಗಳು, ಯಕ್ಷಗಾನ ಪದ ಹಾಡಲು ಭಾಗವತರು, ಮದ್ದಲೆಗಾರ, ಸಂಚಾಲಕರು.. ಹೀಗೇ ಐದಾರು ಮಂದಿಯ ಒಂದು ತಂಡ ಗೆಜ್ಜೆಯ ಘಲ್ ಘಲ್ ನಿನಾದದೊಂದಿಗೆ ಮನೆಯೊಳಗೆ ಪ್ರವೇಶಿಸಿದರೆ ಮೈಮನ ರೋಮಾಂಚನಗೊಳ್ಳುತ್ತದೆ. ತಾವು ತಂದ ದೇವರ ವಿಗ್ರಹವನ್ನು ಸ್ಥಾಪಿಸಿ ದೀಪ ಬೆಳಗಿಸಿ ಯಕ್ಷಪ್ರದರ್ಶನಕ್ಕೆ ಅಣಿಯಾಗುತ್ತಾರೆ. ಭಾಗವತರ ಹಾಡುಗಾರಿಕೆ ಅದಕ್ಕೆ ತಕ್ಕಂತೆ ಮದ್ದಲೆಯ ಸ್ವರ ವೈಭವ ತಾಳಕ್ಕೆ ಸರಿಯಾಗಿ ಯಕ್ಷನೃತ್ಯಗೈಯುತ್ತಾ ಸಂಭಾಷಣೆ ಪ್ರಾರಂಭಿಸುವ ಪಾತ್ರಧಾರಿಗಳು.. ಅಬ್ಬಬ್ಬಾ..!!ಎನ್ನುವಂತೆ ಮನೆಯ ಚಾವಡಿಯಲ್ಲಿ ಒಂದು ಸುಂದರ ಯಕ್ಷಗಾನ ಬಯಲಾಟ ಮನಸೂರೆಗೊಳ್ಳುತ್ತದೆ. ಮುಗಿದದ್ದೇ ತಿಳಿಯದು. ಕಣ್ಣಲ್ಲಿ ಕಣ್ಣಿಟ್ಟು ವೀಕ್ಷಿಸುವ ಧೈರ್ಯವಂತ ಪುಟ್ಟ ಮಕ್ಕಳು.

      ನೈವೇದ್ಯ ಮಾಡಿ, ನಂತರ ಆರತಿ ಬೆಳಗಿ  ಮನೆಮಂದಿಗೆ ನೀಡಿ ಪುಟ್ಟ ಫಲಾಹಾರ ಸೇವಿಸಿ ಕೊಟ್ಟ ಕಾಣಿಕೆಯನ್ನು ಪಡೆದು ತೆರಳುವರು. ಮರೆಯಾಗುತ್ತಿರುವ ಕಲೆಯನ್ನು ಮನೆಯ ಚಾವಡಿಯಲ್ಲೇ ಕುಳಿತು ವೀಕ್ಷಿಸುವ ಸೌಭಾಗ್ಯ ನಮ್ಮದು. ನಮ್ಮ ಮನೆಯಲ್ಲಿ ಅನಾವರಣಗೊಂಡ ಪುಟ್ಟ ಯಕ್ಷಕೂಟದ ಸಿಂಚನ ನಿಮಗಾಗಿ..                     


✍️... ಅನಿತಾ ಜಿ.ಕೆ.ಭಟ್.

 ಕೆಳಗಿನ ಲಿಂಕ್ ಬಳಸಿ ಯೂಟ್ಯೂಬ್‌ನಲ್ಲಿ ನೋಡಿ 👇

https://youtu.be/5MMXOklkDAA