Wednesday, 20 October 2021

ಕಾಲಚಕ್ರ

 


#ಕಥೆ: ಕಾಲಚಕ್ರ

         ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಮೈಮುರಿದು ದುಡಿದು ದಣಿದಿದ್ದ ಮನೆಯವರು ಊಟ ಮಾಡಿ, ಸ್ವಲ್ಪ ಹೊತ್ತು ಕಣ್ಣಡ್ಡಾಗಿ ಎದ್ದು ತಮ್ಮ ತಮ್ಮ ಕೆಲಸಗಳತ್ತ ನಿಧಾನವಾಗಿ ಗಮನಹರಿಸತೊಡಗಿದರು. ಮಧ್ಯಾಹ್ನದ ಬಿರುಬಿಸಿಲಿಗೆ ಬಾಡಿಹೋದ ಪುಟ್ಟ ಗಿಡಗಳೆಲ್ಲ ತೆಂಗು, ಹಲಸು, ಮಾವು, ಕಂಗಿನ ಮರಗಳ ಎಡೆಯಿಂದ ಬೀಸುವ ತಂಗಾಳಿಗೆ ಮೈಯೊಡ್ಡಿ ಚೇತರಿಸಿಕೊಳ್ಳುತ್ತಿದ್ದವು. ವಿಶಾಲವಾದ ಹೆಂಚಿನ ಮನೆಯ ಮುಂದಿನ ಚಾವಡಿಯ ಜಗಲಿಯಲ್ಲಿ ಕುಳಿತು "ಪರಮ ಸಂತೋಷದಲಿ ಪತಿಯ ಪಾದಕ್ಕೆರಗಿ ವರದ ಗಣಪತಿಗೆ ವಂದನೆಯ ಮಾಡಿ|| ಹರನರಸಿ ಮಂಗಳಾಗೌರಿ ದೇವಿಯ ಕಥೆಯನೊರೆವೆ ಬಲ್ಲಂಥ ಸಜ್ಜನರು ಕೇಳಿ||" ಎಂದು ಗುನುಗುತ್ತಾ ಬರೆಯುತ್ತಿದ್ದಳು ವರದೆ. ಒಳಗಿನಿಂದ ಸವಿತಾ "ಹೀಗೆ ಬರೆಯುತ್ತಾ ಕುಳಿತರೆ ಮನೆಯ ಕೆಲಸವೆಲ್ಲ ನಾನೊಬ್ಬಳೇ ಮಾಡಬೇಕಾ? ಮಕ್ಕಳು ಶಾಲೆಯಿಂದ ಬರುವ ಹೊತ್ತಾಯಿತು" ಎಂದು ಗೊಣಗುತ್ತಿದ್ದಳು. ಬರೆಯುವುದನ್ನು ಅರ್ಧಗಂಟೆಗೇ ಸೀಮಿತಗೊಳಿಸಿ ಒಳಬಂದು ಕೆಲಸಗಳಲ್ಲಿ ಕೈಜೋಡಿಸಿದಳು ವರದೆ. ಮಕ್ಕಳು ಅಂಗಳದ ತುದಿಯಲ್ಲಿದ್ದಾಗಲೇ "ಚಿಕ್ಕಮ್ಮಾ... ಚಿಕ್ಕಮ್ಮಾ..." ಎಂದು ಕೂಗುತ್ತಲೇ ಬಂದವರು ಶಾಲೆಯ ಸುದ್ದಿಯನ್ನೆಲ್ಲ ಅವಳಿಗೊಪ್ಪಿಸಿ ನಂತರ ತಿಂಡಿತಿನ್ನಲು ಕುಳಿತರು. ವರದೆಗೂ ಮಕ್ಕಳ ಬಾಯಿಂದ ಬರುವ ಸ್ವಾರಸ್ಯಕರ ಸಂಗತಿಗಳೆಂದರೆ ಕೇಳುವ ಕುತೂಹಲ. ಮಕ್ಕಳೊಂದಿಗೆ ತಾನೂ ಬೆರೆಯುತ್ತಾ ನಗೆಚಟಾಕಿಗಳನ್ನು ಹಾರಿಸುತ್ತಾ ಇದ್ದರೆ ಹೊತ್ತು ಸಾಗಿದ್ದೇ ತಿಳಿಯುತ್ತಿರಲಿಲ್ಲ.

         ದಿನವೂ ಸಂಜೆ ಸ್ವಲ್ಪ ದೇವರ ಹಳೆಯ ಹಾಡುಗಳು, ಆರತಿ ಹಾಡುಗಳು, ತೀರ್ಥಪ್ರಸಾದ ಸ್ವೀಕರಿಸುವ ಹಾಡುಗಳನ್ನು ಬರೆಯುತ್ತಾ, ಅಂದು ಮಂಗಳಗೌರಿಯ ಹಾಡನ್ನು ಬರೆದು ಮುಗಿಸಿ ಮಂಗಳ ಹಾಡಿದ್ದಳು. ಗೆಳತಿಯ ಬಳಿ ಕೇಳಿ ತಂದಿದ್ದ ಪುಸ್ತಕದಲ್ಲಿದ್ದ ಎಲ್ಲಾ ಹಾಡುಗಳನ್ನೂ ಬರೆದುಕೊಂಡಾಗ ಅವಳಿಗೆ ಅಪರಿಮಿತ ಆನಂದವಾಗಿತ್ತು.

      ಬರೆದ ಪುಸ್ತಕವನ್ನು, ಗೆಳತಿಯ ಪುಸ್ತಕವನ್ನೂ ಜೊತೆಯಲ್ಲಿ ಒಂದರಮೇಲೆ ಒಂದರಂತೆ ದೇವರಕೋಣೆಯ ಒಂದು ಬದಿಯ ಗೋಡೆಗೆ ತುಸು ಎತ್ತರದಲ್ಲಿ ತಗುಲಿಸಿದ್ದ ಹಲಗೆಯಲ್ಲಿ ಇರಿಸಿದ್ದಳು. ಇನ್ನು ನಾಳೆಯಿಂದ ದಿನವೂ ಸ್ವಲ್ಪ ಹೊತ್ತು ದೇವರಹಾಡುಗಳನ್ನು ಓದುತ್ತಾ ಆ ಹಾಡುಗಳನ್ನು ಕಂಠಸ್ಥ ಹೃದಯಸ್ಥ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಲೇ ನಿದ್ರಿಸಿದವಳು ವರದೆ.

       ಮರುದಿನ ಮನೆಯ ಕೆಲಸಗಳನ್ನು ಬೇಗನೆ ಮುಗಿಸಿ ಸ್ನಾನ ಮಾಡಿ ಬಂದು ಇನ್ನು ದೇವರ ಮನೆಯಲ್ಲಿ ಹಾಡುಗಳನ್ನು ಓದುತ್ತೇನೆ ಅಂದುಕೊಂಡವಳಿಗೆ ಪುಸ್ತಕ ಕಾಣಿಸದಿದ್ದಾಗ ಆತಂಕವಾಯಿತು. ಎಲ್ಲರಲ್ಲೂ ಕೇಳಿದಳು. ಯಾರೂ ತೆಗೆದಿಲ್ಲ ಎಂದರು. ಅಕ್ಕನಲ್ಲಿ ಸಂಶಯಪಟ್ಟಾಗ ಆಕೆ ದೊಡ್ಡ ಧ್ವನಿಯಲ್ಲಿ ಗದರಿ "ನೀನೇ ಬೇರೆಲ್ಲೋ ಇಟ್ಟು ಮರೆತು ನನ್ನ ಮೇಲೆ ಗೂಬೆ ಕೂರಿಸುತ್ತೀಯಾ" ಎಂದು ಹಾರಾಡಿದಳು. ಮತ್ತೆ ಮತ್ತೆ ನೆನಪು ಮಾಡಿದಾಗಲೂ ಅಲ್ಲೇ ಇಟ್ಟಿದ್ದೆ ಎಂದೇ ಸಾರುತ್ತಿತ್ತು ಅವಳ ಮನ. ಇಡುವಾಗ  ಕೈ  ಹಲಗೆಗೆ ತಾಗಿ ಸಣ್ಣದಾಗಿ ಗೀರಿತ್ತು. ಆ ಗಾಯವೂ ಸಾಕ್ಷಿಯಾಗಿ ನಿಂತಿತ್ತು. ಒಂದು ದಿನ, ವಾರ, ತಿಂಗಳು ಹುಡುಕಿದರೂ ಹಾಡಿನ ಪುಸ್ತಕದ ಪತ್ತೆಯಿಲ್ಲ. "ನನ್ನ ಪುಸ್ತಕ ಆದರೂ ಹಾಗಿರಲಿ.. ನನ್ನ ಗೆಳತಿಗೇನು ಹೇಳಲಿ? ಬಹಳ ಜತನದಿಂದ ತನ್ನ ತಾಯಿ, ಅಜ್ಜಿ ಮತ್ತು ಮುತ್ತಜ್ಜಿ ಹೇಳುತ್ತಿದ್ದ ಹಾಡುಗಳನ್ನು ಸಂಗ್ರಹಿಸಿದ್ದಳು." ಎಂದು ನೊಂದುಕೊಂಡಿದ್ದಳು ವರದೆ. ಪ್ರತಿದಿನವೂ ದೇವರ ಮುಂದೆ "ದೇವರೇ.. ನೀನೇಕೆ ಹೀಗೆ ಮಾಡಿದೆ? ನಿನಗೆ ನನ್ನ ಬಾಯಿಂದ ನಿನ್ನ ನಾಮಸ್ಮರಣೆ ಕೇಳುವ ಆಸೆಯಿಲ್ಲವೇ?  ಏಕೆ ಕಣ್ಣಿಗೆ ಕಾಣಿಸದಂತೆ ಅಡಗಿಸಿದೆ?" ಎಂದು ದೇವರಲ್ಲಿ ತನ್ನ ಮನದ ಅಳಲನ್ನು ಮೌನವಾಗಿಯೇ ತೋಡಿಕೊಂಡು ಕಂಬನಿ ಸುರಿಸುತ್ತಿದ್ದಳು.

       ಈ ಘಟನೆಯಿಂದ ಬೇಸರಗೊಂಡ ವರದೆ ಹಾಡು ಹೇಳುವ ಹವ್ಯಾಸದಿಂದಲೇ ವಿಮುಖಳಾದಳು. ಪುಸ್ತಕ ಕೊಟ್ಟರೆ ಹಿಂದಿರುಗಿಸದವಳು ಎಂಬ ಹೆಸರು ಬಂದಾಗ ಬಲು ನೊಂದಳು. ಅಸಹಾಯಕ ಪರಿಸ್ಥಿತಿಯಲ್ಲಿ ನಿಂತಿದ್ದಳು. ಮದುವೆಯಾಗಿ ವರುಷಗಳು ನಾಲ್ಕು ಕಳೆದರೂ ಮಡಿಲು ತುಂಬದ ಅವಳಿಗೆ  ಈ ಹವ್ಯಾಸ ಮನಸೋಲ್ಲಾಸ ನೀಡುತ್ತಿತ್ತು. ಈಗ ಅದನ್ನೂ ನಿಲ್ಲಿಸಿದವಳು ಮಾನಸಿಕವಾಗಿ ಕುಗ್ಗಿ ಹೋದಳು.

        ಕೆಲವು ವರ್ಷಗಳ ಕೂಡು ಕುಟುಂಬದ ಜೀವನದುದ್ದಕ್ಕೂ ಸಂಶಯ, ಅವಮಾನ ಮತ್ತು ಬಿರುನುಡಿಗಳ ಸುಳಿಯಲ್ಲಿ ಬೆಂದು ವರದೆ ಮತ್ತು ಆಕೆಯ ಪತಿ ನರಸಿಂಹ ಪ್ರತ್ಯೇಕವಾಗಿ ವಾಸಿಸತೊಡಗಿದರು. ಮರು ವರುಷವೇ ಮುದ್ದಾದ ಹೆಣ್ಣುಮಗಳಿಗೆ ಜನ್ಮನೀಡಿದರು. ಸಂತಸವು ಮನೆಮನದಲ್ಲಿ ತುಂಬಿತ್ತು.

                   *******

        "ಸವಿತಾ ನಾನೊಮ್ಮೆ ಮಗಳ ಜಾತಕ ಶಾಸ್ತ್ರಿಗಳಲ್ಲಿ ತೋರಿಸಿ ಬರುತ್ತೇನೆ." ಎಂದರು ಜಗನ್ನಾಥ ರಾಯರು.
"ಹೂಂ.. ಆಗಲಿ" ಎಂದು ಪತಿಯಲ್ಲಿ ಹೇಳಿದ ಸವಿತಾ ಮನಸಿನಲ್ಲಿ
"ನಿಮ್ಮ ತಮ್ಮನ ಮಗಳು ನಮ್ಮ ಮಗಳಿಗಿಂತ ವಯಸ್ಸಿನಲ್ಲಿ ಎಂಟು ವರ್ಷ ಸಣ್ಣವಳಾದರೂ ಮದುವೆಯಾಗಿ ಗಂಡನ ಮನೆಯಲ್ಲಿ ಹಾಯಾಗಿದ್ದಾಳೆ. ನಮ್ಮ ಮಗಳು ಮಾತ್ರ ವಯಸ್ಸು ಮೀರುತ್ತಿದ್ದರೂ ಮದುವೆಯಾಗದೆ ಜಾಬ್, ಪ್ರಾಜೆಕ್ಟ್ ಎಂದು ಹಗಲಿರುಳೂ ದುಡಿಯುತ್ತಿದ್ದಾಳೆ. ಪಿಜಿಯಲ್ಲಿ ವಾಸಿಸುತ್ತಿರುವವಳು ರಜೆಯಿದ್ದರೂ ಹಬ್ಬಹರಿದಿನಗಳಲ್ಲಿ ಮನೆಕಡೆಗೆ ತಲೆಯೂ ಹಾಕುವುದಿಲ್ಲ. ವಾರಾಂತ್ಯದಲ್ಲಿ ನಿಮ್ಮ ಮಗಳನ್ನು ಯಾರೋ ಒಬ್ಬ ಹುಡುಗನ ಜೊತೆ ಬೈಕಿನಲ್ಲಿ  ನಂದಿಬೆಟ್ಟದಲ್ಲಿ ಕಂಡೆ ಎಂದಾಗ ನನ್ನ ಎದೆ ಧಸಕ್ಕೆಂದಿತ್ತು. ನಾನು ಬುದ್ಧಿ ಹೇಳಿದರೆ ಅವಳು ಕೇಳುವವಳಲ್ಲ. ನೀವು ಹೇಳುವ ಗೋಜಿಗೇ ಹೋಗುವುದಿಲ್ಲ. ಒಳ್ಳೆಯ ಜೋಯಿಸರಲ್ಲಿ ಮಗಳ ಜಾತಕ ತೋರಿಸಿ ಕಂಕಣಬಲ ಯಾವಾಗ ಕೂಡಿಬರುತ್ತದೆ? ಕೇಳಿ ಎಂದರೆ, ನನ್ನ ಮಾತು ನಿಮಗೆ ತಾತ್ಸಾರ. ಈಗಲಾದರೂ ಒಳ್ಳೆ ಆಲೋಚನೆ ಮೂಡಿತಲ್ಲ..!!" ಎಂದು ಗೊಣಗಿಕೊಂಡಳು.

       ಜಗನ್ನಾಥ ರಾಯರು ಶಾಸ್ತ್ರಿಗಳಲ್ಲಿ ಮಗಳ ಕುಂಡಲಿಯನ್ನು ತೋರಿಸಿ ಬಂದವರೇ.. "ಸವಿತಾ.. ಮಗಳಿಗೆ ಬಹಳಷ್ಟು ಕಂಟಕಗಳೆಲ್ಲ ಇವೆಯಂತೆ. ಅದಕ್ಕಾಗಿ ವಿವಾಹ ವಿಳಂಬವಾಗುತ್ತಿದೆ. ಶಾಸ್ತ್ರಿಗಳು ಮಂಗಳಗೌರಿಯ ವ್ರತ ಕಥೆಯ ಹಾಡನ್ನು ಓದಲು ಹೇಳಿದ್ದಾರೆ.."
"ನೀವು ಆ ಹಾಡನ್ನು ಶಾಸ್ತ್ರಿಗಳಲ್ಲಿ ಕೇಳಿ ತರಬೇಕಿತ್ತು."
"ನಾನು ಪುಸ್ತಕದ ಅಂಗಡಿಯಲ್ಲಿ ಅರಸಿದೆ. ಅದು ಸಿಕ್ಕಿಲ್ಲ.." ಎಂದ ಪತಿಯಲ್ಲಿ "ನೀವು ಗಂಡಸರು ಹೀಗೇನೇ.. ಅದು ಓದಿ, ಇದು ಮಾಡಿ ಅಂತೀರಿ. ಅದಕ್ಕೆ ಬೇಕಾದ್ದನ್ನು ತಂದೇ ಕೊಡಲ್ಲ..!" ಎಂದು ಮೂತಿಯುಬ್ಬಿಸಿದಳು.

         ಸವಿತಾಳಿಗೆ ಥಟ್ಟನೆ ಏನೋ ಹೊಳೆಯಿತು. ಗಂಡ ಹೊರಗೆ ಹೋಗುತ್ತಲೇ ಅಟ್ಟಕ್ಕೆ ಓಡಿದಳು. ತನ್ನ ಹಳೆಯ ಸೀರೆಯನ್ನು ಸಂಗ್ರಹಿಸಿಡುತ್ತಿದ್ದ ಹಳೆಯ ಕಾಲದ ಮಣ್ಣಿನ ಮಂಡಗೆಯ  ಒಳಗೆ ಕೈ ಹಾಕಿ ಒಂದೊಂದೇ ಬಟ್ಟೆಯನ್ನು ಹೊರತೆಗೆದಳು. ಮಕ್ಕಳು ಚಿಕ್ಕಂದಿನಲ್ಲಿ ಧರಿಸುತ್ತಿದ್ದ ಬಟ್ಟೆಗಳು, ಅತ್ತೆಯ ಮಗ್ಗದ ಸೀರೆ, ಮಾವನ ಪಂಚೆ ಶಾಲು, ವರದೆಯ ತವರಿನಿಂದ ಕೊಟ್ಟ ವಾಯಿಲ್ ಸೀರೆ ಎಲ್ಲವೂ ಸಿಕ್ಕವು. ಕೊನೆಗೆ ಅಡಿಯಲ್ಲಿ ಸಿಕ್ಕಿದ ಪುಸ್ತಕವನ್ನು ಬಹಳ ಜೋಪಾನವಾಗಿ ಕೆಳಗೆ ತಂದಳು. ಸ್ನಾನ ಮಾಡಿ ದೇವರ ಮುಂದೆ ಹಾಡಿನ ಪುಸ್ತಕವನ್ನು ಬಿಡಿಸಿದಾಗ ಪುಟ ಪುಟದಲ್ಲೂ ವರದೆಯ ಮುಖವೇ ಕಾಣುತ್ತಿತ್ತು. ಕಣ್ಣುಗಳು ಮಂಜಾದವು.

         ನನ್ನ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸಿ ಮಂಗಳಗೌರಿಯ  ವ್ರತದ ಹಾಡನ್ನು ಓದಲೇಬೇಕಾದ ಪರಿಸ್ಥಿತಿ ಬಂದಿತು. ದೇವಿ, ತನ್ನನ್ನು ಮನಸಾರೆ ಭಜಿಸಬೇಕು ಎಂದುಕೊಂಡವಳನ್ನು ಭಜಿಸದಿದ್ದರೂ ಅವಳದಲ್ಲದ ತಪ್ಪಿಗೆ ಕ್ಷಮಿಸಿ ಹರಸಿದ್ದಳು. ತಪ್ಪು ಮಾಡಿಯೂ ಒಪ್ಪಿಕೊಳ್ಳದೆ ಇರುವ ನನಗೆ ತಕ್ಕ ಪಾಠವನ್ನೇ ಕಲಿಸಿದಳು. ಎಂದುಕೊಂಡು ಓದುತ್ತಿದ್ದವಳಿಗೆ ಜಗನ್ನಾಥ ರಾಯರು ಬಂದದ್ದು ಅರಿವಾಗಲಿಲ್ಲ.

          ಮದುವೆಯಾಗಿ ಮೂರು ದಶಕ ಸಂದರೂ ಒಂದು ದಿನವೂ ಇಷ್ಟು ಭಯ ಭಕ್ತಿಯಿಂದ ದೇವರ ಮುಂದೆ ಕುಳಿತು ಭಜಿಸಿದ್ದನ್ನು ಕಂಡಿಲ್ಲ ನಾನು. ಇವತ್ತೇನು ದಿಢೀರಾಗಿ ಭಕ್ತಿ ಮೂಡಿದೆ ಎಂದು ಕುತೂಹಲದಿಂದ ರಾಯರು ಬಗ್ಗಿದರು. ಹಿಡಿದುಕೊಂಡಿದ್ದ ಪುಸ್ತಕದೆಡೆಗೆ ದೃಷ್ಟಿಹಾಯಿಸಿದರು.   "ಅರೇ.. ಮಂಗಳಗೌರಿಯ ವ್ರತಕಥೆಯ ಹಾಡು..!! ಈಗ ಹೇಗೆ ಸಿಕ್ಕಿದವು ಈ ಎರಡೂ ಪುಸ್ತಕಗಳು? "
ಮಾತನಾಡಿದರೆ ಪರಿಸ್ಥಿತಿ ಕೈಮೀರಿ ಹೋದೀತೆಂದು ಮೌನವಾಗಿಯೇ ಇದ್ದಳು ಸವಿತಾ.
"ಅಂದು ಈ ಪುಸ್ತಕ ಕಾಣದೇ ಬಹಳವೇ ದುಃಖತಪ್ತಳಾಗಿದ್ದಳು ತಮ್ಮನ ಮಡದಿ. ನೀನು ಇಂತಹಾ ಕಳ್ಳ ಕೆಲಸ ಮಾಡುವಿ ಎಂದುಕೊಂಡಿರಲಿಲ್ಲ" ಎಂದಬ್ಬರಿಸಿದವರೇ "ನಡೆ.. ಹೋಗೋಣ ನರಸಿಂಹನ ಮನೆಗೆ ಈ ಪುಸ್ತಕದೊಂದಿಗೆ" ಎಂದು ಹೇಳಿದಾಗ ಸುಮ್ಮನಿದ್ದ ಸವಿತಾಳ ರಟ್ಟೆ ಹಿಡಿದು ಮುಂದೆ ನೂಕಿ "ಹ್ಞೂಂ.. ಏನು ಇನ್ನೂ ನೋಡುತ್ತಾ ನಿಂತಿದ್ದೀ.. ಕಳ್ಳಿ" ಎಂದ ಪತಿಯ ಆ ಕೆಂಡಕಾರುವ ನೋಟವನ್ನು ಸಹಿಸಲಾಗದೆ ಉಪಾಯವಿಲ್ಲದೆ ಪತಿಯೊಡನೆ ಭಾರವಾದ ಹೆಜ್ಜೆ ಹಾಕುತ್ತಾ ಸಾಗಿದಳು ಸವಿತಾ.

✍️... ಅನಿತಾ ಜಿ.ಕೆ.ಭಟ್.
27-09-2021.
#ಸೌಹಾರ್ದ ಬಳಗ
#ಕಥೆ_ಕಥೆ_ತೋರಣ_ಸಂಚಿಕೆ_೩೨
#ದತ್ತಸಾಲು_ಪುಸ್ತಕ_ಬಿಡಿಸಿದರೆ_ಪುಟ_ಪುಟದಲ್ಲೂ_ಆ_ಮುಖವೇ_ಕಾಣುತ್ತಿತ್ತು.
#ಮೆಚ್ಚುಗೆ ಪಡೆದ ಕಥೆ.



No comments:

Post a Comment