#ಒಂಟಿ ಕುರ್ಚಿಯ ಕೋಣೆಯೊಳಗೆ
ರಾತ್ರಿಯಿಡೀ ನಿದ್ದೆಯಿಲ್ಲದೆ ಕಳೆದಿದ್ದಾಯಿತು. ಇನ್ನು ಇವತ್ತು ಹಗಲು ಹೇಗೋ ಏನೋ? ಎಂದು ಯೋಚಿಸಿಕೊಂಡು ಎದ್ದವಳನ್ನು ಅವಳೆದುರಿನ ಗೋಡೆಯ ಶೆಲ್ಫ್‌ನಲ್ಲಿದ್ದ ಬಾಟಲಿಯು ನಾನಿದ್ದೇನಲ್ಲ ಎಂದು ಅಣಕಿಸಿದಂತೆ ಭಾಸವಾಯಿತು. ಹೂಂ.. ಎರಡೆರಡು ಬಾರಿ ನಿನ್ನನ್ನೇ ನಂಬಿದೆ. ಮೊದಲಬಾರಿ ನೀನು ಸೈ ಎಂದು ತೋರಿಸಿಕೊಟ್ಟು ಬೀಗಿದರೂ ಮತ್ತೆರಡು ದಿನದಲ್ಲೇ ಮತ್ತೆ ನಿನ್ನನ್ನೇ ತರಬೇಕಾದ ಅನಿವಾರ್ಯತೆ ತಂದೊಡ್ಡಿದೆ.. ಈಗಲೂ ನಿನ್ನನ್ನೇ ನಂಬಿ ಕುಳಿತಿರುವೆ.. ನೋಡೋಣ ನಿನ್ನ ಶಕ್ತಿ.. ಎಂದು ತನ್ನೊಳಗೇ ಆಡಿಕೊಳ್ಳುತ್ತಾ ಶ್ರೀ ರಾಮಚಂದ್ರ ಪ್ರಭೋ.. ಎಂದು ದೊಡ್ಡದಾಗಿ ಹೇಳಿ ದೀರ್ಘವಾಗಿ ಉಸಿರೆಳೆದುಕೊಂಡಳು ಮಾಲಿನಿ.
ಉಪಾಹಾರವನ್ನು ತಯಾರಿಸಿ ಯಾಂತ್ರಿಕವಾಗಿ ಎಲ್ಲರಿಗೂ ಬಡಿಸಿದವಳಿಗೆ ತಾನು ತಿನ್ನುವ ಮೊದಲೇ ನೆನಪಾಗಿ, ಸೀದಾ ಎದ್ದವಳೇ ಕೈಯಲ್ಲಿ ಬಾಟಲಿಗಳನ್ನು ಹಿಡಿದು ಚಾವಡಿಗೆ ಬಂದಳು. ಮಗನ ಪತ್ತೆಯಿಲ್ಲ. ಜೊತೆಗೆ ಮಾವನವರೂ ಕೂಡಾ. ಪತಿ ಮನ್ಮಥನಲ್ಲಿ ಅಜ್ಜ ಮೊಮ್ಮಗನನ್ನು ಕೇಳಿದಳು. ''ರಾತ್ರಿಯಿಡೀ ನಿದ್ದೆ ಮಾಡದೆ ಅಳುತ್ತಿದ್ದ ಸಮರ್ಥನನ್ನು ಅಪ್ಪ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಿರಬಹುದು.. ಈಗ ಬರಬಹುದು.. ನೀನು ತಿಂಡಿ ತಿನ್ನು.." ಎಂದ. ಶಾರೀರಿಕ ಆಯಾಸದಿಂದ ತಿಂಡಿಯೂ ಸರಿ ತಿನ್ನಲು ರುಚಿಸದೆ ಅಲ್ಪ ಸ್ವಲ್ಪ ತಿಂದು ಎದ್ದಳು. ಅಡುಗೆ ಮನೆಯನ್ನು ಅಚ್ಚುಕಟ್ಟು ಮಾಡುವ ಕೆಲಸವೆಲ್ಲ ಮುಗಿದರೂ ಅಜ್ಜ ಮೊಮ್ಮಗನ ಪತ್ತೆಯೇ ಇಲ್ಲ..
ಶಿವರಾಯರು ಮೊಮ್ಮಗನನ್ನು ಎತ್ತಿಕೊಂಡು ಆ ದೊಡ್ಡ ಮನೆಯಂಗಳಕ್ಕೆ ತಲುಪಿದರು. ವಿಶಾಲವಾದ ಆ ಮನೆಯಲ್ಲಿ ಒಂದು ಮೂಲೆಯಿಂದ ಸದ್ದಾದರೆ ಇನ್ನೊಂದು ಮೂಲೆಗೆ ಕೇಳಿಸದು. ಹಾಗೆ ತಾನು ಬಂದದ್ದರ ಅರಿವು ಯಾರಿಗೂ ಆಗಿರಲಾರದು ಎಂದುಕೊಂಡು ಶಿವರಾಯರು ಎದುರಿದ್ದ ಕೋಣೆಯೊಳಗೆ ಇಣುಕಿದರು. ಮಂದ ಬೆಳಕಿನ ದೊಡ್ಡ ಕೋಣೆ. ಇರುವುದು ಒಂದು ಮರದ ಸಣ್ಣ ಕಿಟಕಿ. ಕಿಟಕಿಯ ಮೇಲ್ಭಾಗದ ಅರ್ಧಾಂಶಕ್ಕೆ ಗಾಜು ಜೋಡಿಸಲಾಗಿತ್ತು. ಧೂಳು ತುಂಬಿದ್ದ ಗಾಜಿನ ನಡುವೆ ಮಂದ ಬೆಳಕು ಕೋಣೆಯೊಳಗೆ ಹರಿದು ಬರುತ್ತಿತ್ತು. ಅದಕ್ಕೆ ಎದುರಾಗಿ ಕೋಣೆಯ ಬದಿಯಲ್ಲೊಂದು ಮರದ ಕುರ್ಚಿ. ಕುರ್ಚಿಯು ಬಣ್ಣ ಮಾಸಿತ್ತು. ಕೆಳಭಾಗದಲ್ಲಿ ಜೇಡರಬಲೆ ತುಂಬಿಕೊಂಡಿತ್ತು. ಅದರ ಎದುರಿಗೆ ಮೇಜೊಂದನ್ನು ಇರಿಸಲಾಗಿತ್ತು. ಮೇಜಿನ ಮೇಲೆ ಒಂದಿನಿತೂ ಜಾಗವಿರದಂತೆ ಪುಸ್ತಕಗಳನ್ನು, ಚೀಟಿಯನ್ನು ಕೊಡವಿ ಹಾಕಲಾಗಿತ್ತು. ಪುಸ್ತಕದ ಅಟ್ಟಿಯ ಮೇಲೆ ದಪ್ಪ ಕಪ್ಪಗಿನ ಫ್ರೇಮ್ ಇರುವ ಕನ್ನಡಕವನ್ನು ಇಡಲಾಗಿತ್ತು.
"ಮಾವಾ.." ಕರೆದರು ಶಿವರಾಯರು. ಒಳಗಿನಿಂದ ಉತ್ತರವಿಲ್ಲ.
ಎರಡನೆಯ ಬಾರಿ ಕೂಗಿದರು. ಊಹೂಂ ಯಾರೂ ಇದ್ದಂತಿಲ್ಲ.
ಮನೆಯ ಇನ್ನೊಂದು ಬದಿಗೆ ಹೋಗಬೇಕೆಂಬ ನಿರ್ಧಾರ ಮಾಡಿದರು. ನಾಲ್ಕು ಹೆಜ್ಜೆ ಮುಂದಿಟ್ಟಾಗ ನಾಯಿ ಬೊಗಳುವುದು ಕೇಳಿ ಮನೆಯಾಕೆ ಹೊರಬಂದು ಏನೆಂದು ವಿಚಾರಿಸಿದರು.
"ವೈದ್ಯಮಾವನ ಭೇಟಿಯಾಗಬೇಕಿತ್ತು."
"ಜಗಲಿಯಲ್ಲಿ ಕುಳಿತುಕೊಳ್ಳಿ.. ಪೂಜೆಯಲ್ಲಿ ದ್ದಾರೆ.. ನಂತರ ತಿಂಡಿ ಸೇವನೆ.. ಅಂತೂ ಬರುವಾಗ ಮುಕ್ಕಾಲು ಗಂಟೆ ಆದೀತು.."
"ಸರಿ.." ಎಂದ ಶಿವರಾಯರನ್ನು
"ನಿಮಗೇನೂ ಕಾಯುವುದಕ್ಕೆ ತೊಂದರೆಯಿಲ್ಲ ತಾನೇ?" ಎಂದು ಪುನಃ ಕೇಳಿ ಖಚಿತಪಡಿಸಿಕೊಂಡರು.
ಜಗಲಿಯಲ್ಲಿ ಕುಳಿತುಕೊಂಡು ಮೊಮ್ಮಗನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡರು. ಮೊದಲೆಲ್ಲ ವೈದ್ಯರ ಭೇಟಿಗೆ ಬಂದವರಿಗೆ ಕುಳಿತುಕೊಳ್ಳಲು ಆಚೆ ಈಚೆ ಬದಿಗೆ ಎರಡು ಬೆಂಚುಗಳಿದ್ದವು. ಬಹುಶಃ ಈಗ ಬರುವವರ ಸಂಖ್ಯೆ ಕಡಿಮೆಯಾಗಿರಬಹುದು. ಹಳೆಯ ಬೆಂಚು ಮುರಿದುಕೊಂಡು ಮೂಲೆ ಸೇರಿರಬಹುದು. ಎಂದು ಯೋಚಿಸುತ್ತಿದ್ದರು ಶಿವರಾಯರು.
ಮನ್ಮಥ ಚಿಕ್ಕವನಿದ್ದಾಗ ಆಗಾಗ ಬರುತ್ತಿದ್ದೆ. ಶೀತ, ಜ್ವರ, ತಲೆನೋವೆಂದರೆ ದೂರದ ಸಂಬಂಧದಲ್ಲಿ ಮಾವನಾಗಿದ್ದ ಶ್ಯಾಮ ಸುಂದರರಾಯರದೇ ಔಷಧ. ಅವರು ಕೊಡುವ ಸಿಹಿ ಗುಳಿಗೆಗಳನ್ನು ತಿನ್ನಲು ಮಕ್ಕಳು ಹಠ ಹಿಡಿದದ್ದೇ ಇಲ್ಲ. ಮಕ್ಕಳು ದೊಡವರಾಗುವವರೆಗೆ ಬೇರೆ ವೈದ್ಯರ ಅಗತ್ಯವೇ ಬಂದಿರಲಿಲ್ಲ. ಈಗ ಮೊಮ್ಮಗನಿಗೆ ಸಣ್ಣಪುಟ್ಟದಕ್ಕೂ ಮಕ್ಕಳ ತಜ್ಞರ ತಪಾಸಣೆ. ಬಣ್ಣ ಬಣ್ಣದ ಸಿರಪ್‌ಗಳು. ಅದನ್ನು ಕುಡಿಸಬೇಕಿದ್ದರೆ ಅದೇನು ರಂಪಾಟ..! ಮನೆಯ ಸೂರೇ ಹಾರಿ ಹೋಗುವಂತೆ..! ಅದಕ್ಕೆ ಸರಿಯಾಗಿ ನಡೆದುಕೊಳ್ಳುವ ಸೊಸೆ ಮಾಲಿನಿ. ಮಗ ಸ್ವಲ್ಪ ಹುಷಾರು ತಪ್ಪಿದರೆ ಸಾಕು ಸೀದಾ ಪೀಡಿಯಾಟ್ರಿಷನ್ ಬಳಿ ಹೋಗಿ ಸರತಿಯಲ್ಲಿ ನಿಂತು ಕಾದು ಆಂಟಿಬಯೋಟಿಕ್ ಸಿರಪ್, ಮಾತ್ರೆ, ಡ್ರಾಪ್ಸ್, ಸ್ಯಾಚೆಟ್‌ಗಳನ್ನು ತಂದು ಒಮ್ಮೆ ಗುಣವಾದರೆ ಸಾಕಪ್ಪಾ ಎಂದು ದಿನಕ್ಕೆ ಹತ್ತು ಬಾರಿ ಮಗುವಿನ ಮುಂದೆಯೇ ಹೇಳುವವಳು. ಇದನ್ನು ಕೇಳಿಸಿಕೊಂಡ ಮಗುವಿಗೆ ತನ್ನ ಅನಾರೋಗ್ಯವನ್ನು
ಹೊಗಳುತ್ತಿದ್ದಾರೋ ಎಂಬ ಭಾವ ಮೂಡದಿರದು.
ಶ್ಯಾಮಸುಂದರ ಮಾವನನ್ನು ಭೇಟಿಯಾಗಿ ಔಷಧೋಪಚಾರದ ಬಗ್ಗೆ ಚರ್ಚಿಸಿ ಎಂದರೆ ಮಗಸೊಸೆ ಇಬ್ಬರಿಗೂ ಅಸಡ್ಡೆ. ಅವರ ಹೋಮಿಯೋಪತಿ ಸಿಹಿಗುಳಿಗೆಗೆ ಈಗಿನ ಖಾಯಿಲೆಗಳು ಎಲ್ಲಿ ಬಗ್ಗುತ್ತವೆ ಎಂಬ ಉಡಾಫೆ!.
ಇನ್ನು ಅವರನ್ನು ಕಾದರಾಗದು. ಮಗುವಿನ ದೇಹ ಈಗಾಗಲೇ ಸಾಕಷ್ಟು ಆಂಟಿಬಯೋಟಿಕ್ ಔಷಧಗಳನ್ನು ಸೇವಿಸಿ ಸಣ್ಣಪುಟ್ಟದಕ್ಕೂ ಅದನ್ನೇ ಬೇಡುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ ಎಂದು ನನಗಿನಿಸುತ್ತಿಲ್ಲ.. ಅದಕ್ಕೆ ಇವತ್ತು ಮಗಸೊಸೆ ಇಬ್ಬರಿಗೂ ಹೇಳದೆ ಮೊಮ್ಮಗನನ್ನು ಎತ್ತಿಕೊಂಡು ಅರ್ಧ ಮೈಲು ನಡೆದು ಬಂದು ಬಿಟ್ಟಿದ್ದೇನೆ.. ಎಂದು ಯೋಚಿಸುತ್ತಿರುವಾಗಲೇ ಕ್ಷೀಣದನಿಯೊಂದು ಕೋಣೆಯೊಳಗಿನಿಂದ ಕೇಳಿಸಿತು. ತಿರುಗಿ ನೋಡಿದರು ಶಿವರಾಯರು.
"ಮಾವಾ.. ಹೇಗಿದ್ದೀರಿ ಈಗ..?"
"ಹೀಗಿದ್ದೇನೆ ನೋಡು.. ಅಂದ ಹಾಗೆ ನೀನು ಯಾರು..? ಗೊತ್ತಾಗಲಿಲ್ಲ" ಎಂದರು ಸಣ್ಣ ದನಿಯಲ್ಲಿ.
ಶಿವರಾಯರು ತನ್ನ ಪರಿಚಯ ಹೇಳುವುದನ್ನು ಕೇಳಿಸಿಕೊಳ್ಳುತ್ತಾ ಮರದ ಕುರ್ಚಿಯ ಮೇಲೆ ಕುಳಿತರು ಶ್ಯಾಮಸುಂದರ ರಾಯರು. ಕುರ್ಚಿ ಡರ್.. ಎಂದು ಸದ್ದು ಮಾಡಿ ತನಗೂ ವಯಸ್ಸಾಯಿತು ಎಂದು ಸಾರಿ ಹೇಳಿತು. ಕನ್ನಡಕವನ್ನು ಕಣ್ಣಿಗೇರಿಸಿಕೊಂಡ ವೈದ್ಯರು "ಓಹ್.. ನೀನಾ.. ಸೋಗೆಮನೆ ಶಿವ.. ಮೊದಲು ಆಗಾಗ ಬರುತ್ತಿದ್ದೆ.. ಈಗ ಅಪರೂಪ.. ನಂಗೂ ವಯಸ್ಸಾಯಿತು. ಈಗ ಕಣ್ಣು ಮಂಜಾಗಿ ಬಿಟ್ಟಿದೆ. ಕಿವಿ ಸೂಕ್ಷ್ಮ ಇಲ್ಲ.. ಔಷಧಿ ಕೊಡುವುದೂ ಸ್ವಲ್ಪ ಕಷ್ಟವೇ ಆಗುತ್ತಿದೆ.. ಹೌದು ಏನು ಬಂದದ್ದು..?"
"ಇವ ನನ್ನ ಮಗ ಮನ್ಮಥನ ಮಗ.."
"ಓಹ್ ಮೊಮ್ಮಗ.."
"ಹೌದು ಮಾವಾ.. ಒಂದು ವಾರದಿಂದ ಕಿವಿನೋವು ಅನ್ನುತ್ತಿದ್ದಾನೆ. ಒಮ್ಮೆ ಮಕ್ಕಳ ತಜ್ಞರಲ್ಲಿ ಚೆಕಪ್ ಮಾಡಿಸಿ ಔಷಧಿ ತಂದು ಗುಣವಾಯಿತು ಅನ್ನುವಷ್ಟರಲ್ಲಿ ಪುನಃ ಕಾಣಿಸಿಕೊಂಡಿದೆ.. ಮತ್ತೆ ಪುನಃ ಔಷಧ ತಂದು ಕುಡಿಸುತ್ತಿದ್ದರೂ ಕಿವಿನೋವು ಕಡಿಮೆಯಾಗಿಲ್ಲ.."
"ಕಿವಿ ನೋವಿದೆಯಾ ಮಗು..?"
"ಹೂಂ.. ಮಾತೆ ಬೇಡ.. ಸಿಪ್ ಬೇಡ.. ಡಾಪ್ ಬೇಡ.." ಅಂದ ತನ್ನ ತೊದಲು ನುಡಿಯಲ್ಲಿ..
"ಇಲ್ಲಪ್ಪಾ..ನನ್ನಲ್ಲಿ ಅದೆಲ್ಲ ಇಲ್ಲವೇ ಇಲ್ಲ.. ಬರೀ ಪೆಪ್ಪರಮೆಂಟು ಮಾತ್ರ ಇರುವುದು.. ಬಾ ನೋಡೋಣ ಎಷ್ಟು ದೊಡ್ಡವನಾಗಿದ್ದಿ ಎಂದು.."
ಅವರ ಮಾತಿಗೆ ಮೆಲ್ಲ ಬಳಿಬಂದ..
ವೈದ್ಯರು ಕನ್ನಡಕವನ್ನು ಪುನಃ ಸರಿಪಡಿಸಿಕೊಂಡರು. ಹಳೆಯ ಟಾರ್ಚ್ ಒಂದನ್ನು ಕುಟ್ಟಿ ಉರಿಸಿದರು. ಮೆಲ್ಲನೆ ಕುರ್ಚಿಯಿಂದೆದ್ದು ಹಿಂದೆ ತಳ್ಳಿದಾಗ ಡರ್ರ್..ಎಂಬ ಸದ್ದಿನೊಂದಿಗೆ ಹಿಂಬದಿಗೆ ಎರಗುವ ಭಾಗ ಅಲುಗಾಡಿ ಸರಿನಿಂತಿತು.
"ಪುಟ್ಟಾ.. ಕೈತೋರಿಸು.."
ಮುದ್ದಾದ ಅಂಗೈಯನ್ನು ತೋರಿಸಿದ..
"ಆಹಾ ಪುಟ್ಟ ಬೆರಳುಗಳು ಚಂದ.."
"ಉಗುರು ತೋರಿಸು.."
ಅಂಗೈಯನ್ನು ತಿರುಗಿಸಿ ಉಗುರನ್ನು ಮುಂಚಾಚಿದ.
"ಉಗುರನ್ನು ಕತ್ತರಿಸಿ ಶುಚಿಯಾಗಿ ಇಟ್ಟುಕೊಂಡಿದ್ದೀ.. ಭೇಷ್"
ಎನ್ನುತ್ತಾ.. ನಾಲಿಗೆ, ಕಣ್ಣು, ಕಿವಿ ಎಲ್ಲವನ್ನು ಜಾಣತನದಿಂದ ಪರೀಕ್ಷಿಸಿದರು.
"ಗುಡ್ ಬೋಯ್(boy).. ಈಗ ನಿಂಗೆ ಪೆಪ್ಪರಮೆಂಟ್ ಕೊಡ್ತೀನಿ ಆಯ್ತಾ.."
"ಹೂಂ..ನಂಗೆ ತುಂಬಾ ಬೇಕು" ಅಂದ.. ಎರಡು ಅಂಗೈಗಳನ್ನು ಜೋಡಿಸಿ ಬೊಗಸೆ ಮಾಡಿ ತೋರಿಸುತ್ತಾ..
ವೈದ್ಯರು ಒಳಗೆ ಹೋಗಿ ಐದು ನಿಮಿಷದಲ್ಲಿ ಬಂದರು. ಮಗು ಪೆಪ್ಪರಮೆಂಟಿಗೆ ಕಾದು ಕುಳಿತಿತ್ತು. ಕುರ್ಚಿಯನ್ನೆಳೆದು ಕುಳಿತುಕೊಂಡು "ನೋಡು ಶಿವ.. ಇದು ಬೆಳಗ್ಗೆ ಮತ್ತು ರಾತ್ರಿ... ಇದು ಮಧ್ಯಾಹ್ನ.. ಈ ಹುಡಿಯ ಪ್ಯಾಕೆಟ್ ದಿನಾ ರಾತ್ರಿ ಆರು ದಿನ.."
ಎನ್ನುತ್ತಾ ಎರಡು ಬಾಟಲಿಗಳಲ್ಲಿ ತುಂಬಿದ್ದ ಬಿಳಿಯ ಸಿಹಿ ಹರಳುಗಳನ್ನು ಪುಡಿ ಔಷಧದ ಕಟ್ಟನ್ನು ನೀಡಿದರು.. ಮಗು ಪೆಪ್ಪರಮೆಂಟ್ ಎಲ್ಲಿ ಎಂದು ನೋಡುತ್ತಲೇ ಇತ್ತು.. ಇನ್ನೊಂದು ಕಾಗದದ ಕಟ್ಟಿನಲ್ಲಿದ್ದ ಔಷಧ ಬೆರೆಸಿದ ಹುಡಿಯನ್ನು ಅವನ ಬಾಯಿಗೆ ಹಾಕಿದರು..
"ಗೂಕೋಸ್.. ಗೂಕೋಸ್..ಚೀಪೆ" ಅಂದಿತು ಮಗು.. ಔಷಧಿ ಬೆರೆಸದ ನಾಲ್ಕಾರು ಹರಳುಗಳನ್ನು ಅವನ ಕೈಗುದರಿಸಿದರು.. ತುಂಬಾ ಖುಷಿಯಿಂದ ಬಾಯಿ ಚಪ್ಪರಿಸಿದ.
ಮನೆಗೆ ಮರಳಿದಾಗ ಮಾಲಿನಿಯ ಮುಖದಲ್ಲಿ ಅಸಹನೆ ತಾಂಡವವಾಡುತ್ತಿತ್ತು. "ಹುಷಾರಿಲ್ಲದ ಮಗುವನ್ನು ಎತ್ತಿಕೊಂಡು ಎತ್ತ ಹೋದಿರಿ..?" ಧ್ವನಿ ಎತ್ತರದಲ್ಲೇ ಇತ್ತು. ಅಜ್ಜನ ಉತ್ತರಕ್ಕೂ ಕಾಯದೆ ಮಗು "ಪೆಪ್ಪರಮೆಂಟ್ ಕೊಡಿಸಿದರು ಅಜ್ಜ.. ಇನ್ನೊಂದು ಅಜ್ಜ ಕೊಟ್ರು.." ಎಂದಾಗ ಅವಳ ಮುಖ ಸಿಟ್ಟಿನಿಂದ ಧುಮಿಧುಮಿ ಎಂದಿತು.
"ಮಾಲಿನಿ... ಮನ್ಮಥ ಚಿಕ್ಕವನಿದ್ದಾಗ ಔಷಧಿ ಕೊಡುತ್ತಿದ್ದ ಹೋಮಿಯೋಪತಿ ವೈದ್ಯಮಾವನಲ್ಲಿ ಹೋಗಿದ್ದೆ.. ನೋಡೋಣ ಈ ಔಷಧವನ್ನು ಕೆಲವು ದಿನ ಕೊಟ್ಟು.."
"ಮಾವಾ.. ಎಂತದು ನಿಮ್ಮದು.. ನಮ್ಮಲ್ಲೊಂದು ಮಾತೂ ಕೇಳದೆ.."
"ಮಾಲಿನಿ.. ರಾತ್ರಿ ಅವನು ಪಡುತ್ತಿದ್ದ ಸಂಕಟ ನೋಡಲಾಗುತ್ತಿರಲಿಲ್ಲಮ್ಮ.. ಔಷಧ ಕುಡಿಸುವ ಹರಸಾಹಸ ಕಂಡು ರೋಸಿ ಹೋಗಿತ್ತು ನನಗೆ.. ಹಾಗಾಗಿ ಒಂದು ಪ್ರಯತ್ನ ಮಾಡಿದೆ.."
ಮಾಲಿನಿ ತನ್ನ ಕೈಯಲ್ಲಿದ್ದ ಔಷಧಿಯ ಬಾಟಲನ್ನು ಅಲ್ಲೇ ಕುಕ್ಕಿ ನಡೆದಳು.
"ಅಜ್ಜ.. ನಂಗೊಂದು ಪಾಕೆಟ್ ಗೂಕೋಸ್ ಕೊಡು.." ಮಗು ಅಜ್ಜನನ್ನು ಕೇಳುತ್ತಿತ್ತು..
ಸಂಜೆ ಮನ್ಮಥ ಮನೆಗೆ ಬಂದಾಗ ಎಲ್ಲವನ್ನೂ ಹೇಳಿ ಅಲವತ್ತುಕೊಂಡಳು ಮಾಲಿನಿ.. ಅತ್ತ ತಂದೆಯನ್ನು ವಿರೋಧಿಸಲಾಗದೇ ಇತ್ತ ಮಡದಿಯ ಮಾತನ್ನು ಪುರಸ್ಕರಿಸಲಾಗದೆ ಇಕ್ಕಟ್ಟಗೆ ಸಿಲುಕಿದ ಮನ್ಮಥ.
ಮಾಲಿನಿ ಮನ್ಮಥರಿಗೆ ಔಷಧಿ ಕುಡಿಸುವ ಕಷ್ಟ ಕಡಿಮೆಯಾಯಿತು. "ಅಜ್ಜಾ.. ಪೆಪ್ಪರಮೆಂಟು ಕೊಡು, ಗುಕೋಸು ಕೊಡು" ಎಂದು ಒತ್ತಾಯಿಸಿ ಔಷಧ ಸೇವಿಸುತ್ತಿದ್ದ ಮಗ ಸಮರ್ಥ.. ಒಂದು ವಾರಕ್ಕೆ ಗ್ಲೂಕೋಸ್ ಪೆಪ್ಪರಮೆಂಟ್ ಖಾಲಿ ಆಗಿದ್ದು ಮೊದಲಾ, ಕಿವಿನೋವು ಓಡಿಹೋಗಿದ್ದು ಮೊದಲಾ ಗೊತ್ತೇ ಆಗಲಿಲ್ಲ..!! ಮಗು ಮಾತ್ರ ಪೆಪ್ಪರಮೆಂಟು ಕೊಡುವ ಅಜ್ಜನಲ್ಲಿ ಹೋಗೋಣ ಎಂದು ತನ್ನಜ್ಜನನ್ನು ಪದೇ ಪದೇ ಪೀಡಿಸುತ್ತಿತ್ತು..
✍️... ಅನಿತಾ ಜಿ.ಕೆ.ಭಟ್.
22-11-2021.
#ಪ್ರತಿಲಿಪಿಕನ್ನಡ ದೈನಿಕ ಕಥೆ
#ವಿಷಯ- ಒಂಟಿ ಕುರ್ಚಿಯ ಕೊಠಡಿ
No comments:
Post a Comment