Sunday, 14 November 2021

ಹೃದಯದಲ್ಲಿ ಬಚ್ಚಿಟ್ಟ ಕಥೆ

 


#ಹೃದಯದಲ್ಲಿ ಬಚ್ಚಿಟ್ಟ ಕಥೆ

          ಶೋಕೇಸಿನಲ್ಲಿದ್ದ ಫೋಟೋಗಳನ್ನು ಒರೆಸಿ ಇಡುತ್ತಿದ್ದಳು ದೀಪಿಕಾ. ಹಲವು ವರುಷಗಳ ನಂತರ ಇಷ್ಟು ಬಿಡುವಾಗಿದ್ದಳು. ಧೂಳು ತುಂಬಿದ ವಸ್ತುಗಳನ್ನು ಮುಟ್ಟುತ್ತಿದ್ದಂತೆಯೇ "ಆಕ್ಸೀ ಆಕ್ಸೀ.." ಎಂದು ಎಚ್ಚರಿಕೆಯ ಸೂಚನೆಯನ್ನು ದೇಹ ನೀಡಿತ್ತು. ಅದನ್ನು ಗಣನೆಗೆ ತೆಗೆದುಕೊಳ್ಳದೆ ಮುಂದುವರಿಸಿದಳು. ಸೀನು ತನ್ನ ಸಂಗಾತಿ ತಾನೇ. ಒಮ್ಮೆ ಕೋಪಗೊಳ್ಳುತ್ತೆ ಮತ್ತೊಮ್ಮೆ ಶಾಂತವಾಗುತ್ತದೆ ಎಂದುಕೊಳ್ಳುತ್ತಾ, ಮೇಲಿನ ರ‌್ಯಾಕಿನಲ್ಲಿದ್ದ ಪುಸ್ತಕವನ್ನೊಮ್ಮೆ ಎತ್ತಿ ನೋಡಿದಾಗ ಮೈಯಲ್ಲೊಂದು ಸಣ್ಣ ಕಂಪನ ಉಂಟಾಯಿತು. ಕಣ್ಣೆದುರಿಗೆ ಮೂಡಿದ ಆ ಗಂಭೀರವದನವ ನೆನೆದು ಮೈಬೆವರಲು ಆರಂಭವಾಯಿತು. ಪುಸ್ತಕದ ಧೂಳನ್ನು ಮೆದುವಾಗಿ ಒರೆಸಿ ಪುಟಗಳನ್ನು ಬಿಡಿಸಿದಳು. "ಜೀವನವೆಂದರೆ ಹೂವಿನ ಹಾಸಲ್ಲ. ಕಲ್ಲುಮುಳ್ಳುಗಳ ಕಡಿದಾದ ಹಾದಿ. ಹಾರಿ ಹೋಗಲು ಸಾಧ್ಯವಿಲ್ಲ. ಮೆಟ್ಟಿನಡೆದುಕೊಂಡೇ ಸಾಗಬೇಕು. ಅದಕ್ಕಾಗಿ ಗುರಿಯಿಟ್ಟುಕೊಳ್ಳಬೇಕು, ಧೈರ್ಯ ಮತ್ತು ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು." ಎಂಬ ಸಾಲುಗಳು ಕೆಳಗೆ ಕೆಂಪು ಗೆರೆ ಎಳೆದು ಮುಖ್ಯವಾದ ಸಾಲುಗಳೆಂದು ಗುರುತು ಹಾಕಲಾಗಿತ್ತು. 

    ಹೌದು. ಅಪ್ಪನ ಪ್ರಕಾರ ಇದು ನಾನು ಪಾಲಿಸಬೇಕಾಗಿದ್ದ ಶಿಸ್ತಾಗಿತ್ತು. ಆದರೆ ನಾನೆಷ್ಟು ಪಾಲಿಸಿದ್ದೇನೆ ಎಷ್ಟು ಲಘುವಾಗಿ ಪರಿಗಣಿಸಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಹೊರಟವಳಿಗೆ ಅಂದಿನ ಯೋಚನೆಗಳೆಲ್ಲ ಇಂದು ಹುಚ್ಚು ಹುಚ್ಚಾಗಿ ಕಂಡಿತು. ಆ ಸಾಹಸಗಳೆಲ್ಲ ಭಂಡತನದ ಪರಮಾವಧಿಯೆನಿಸಿತು. ಬರೆದಿರುವ ಸಾಲುಗಳ ಅರ್ಥಗ್ರಹಿಸಿ ಅಳವಡಿಸಿಕೊಳ್ಳದೆ ಹೊಸ ಮುನ್ನುಡಿಯ ಬರೆದಳು. 

"ಅಮ್ಮಾ..." ಎಂಬ ವಿಜೇತನ ಕರೆಗೆ ಎಚ್ಚೆತ್ತುಕೊಂಡಳು. "ಕೈಯಲ್ಲಿ ಏನದು ಪುಸ್ತಕ?" ಎಂಬ ಅವನ ಪ್ರಶ್ನೆಗೆ "ಒಂದು ಒಳ್ಳೆಯ ವೈಚಾರಿಕ ಲೇಖನಗಳ ಪುಸ್ತಕ. ನೀನು ಓದಲೇಬೇಕು." ಎಂದು ಅವನಕೈಗಿತ್ತು ನಿರಾಳವಾಗಿ ಉಸಿರೆಳೆದುಕೊಂಡಳು. 

        ತನ್ನ ಮಗಳ ಬದುಕು ಹೀಗೆಯೇ ಸಾಗಲಿ ಎಂದು ಸೂಕ್ತ ಮಾರ್ಗದರ್ಶನ ಮಾಡಿದ್ದರು ಸದಾನಂದರಾಯರು. ಆಗಾಗ ಎಚ್ಚರಿಸುತ್ತಾ, ವಿದ್ಯಾಭ್ಯಾಸದ ಕುರಿತು ಚರ್ಚಿಸುತ್ತಾ ಮುಂದಿನ ಹಾದಿಯನ್ನು ಸ್ಪಷ್ಟವಾಗಿ ಗುರುತಿಸಿ ಕೊಡುತ್ತಿದ್ದರು. ಆದರೆ ದೀಪಿಕಾ ಆ ಹಾದಿಯಲ್ಲಿ ನಡೆದಂತೆ ನಟಿಸಿ ಅಪ್ಪ ಎಂದೂ ಬಗೆಯದ ಹೊಸ ತಿರುವಿನಲ್ಲಿ ಸಾಗಿದ್ದಳು.

                         *********
          "ಪ್ರತಾಪ್... ನಾಳೆ ಬರ್ತೀ ತಾನೇ?"
ಬಟ್ಟಲುಕಂಗಳನ್ನರಳಿಸಿ ಅವಳು ಕೇಳಿದಾಗ ಇಲ್ಲವೆನ್ನಲಾಗದೆ, "ಓಹ್.. ಖಂಡಿತಾ" ಎಂದಿದ್ದ ಪ್ರತಾಪ್.
ಬೆಳ್ಳಂಬೆಳಗ್ಗೆ ಬೈಕ್ ಸ್ಟಾರ್ಟ್ ಮಾಡಿದ ಪ್ರತಾಪನಲ್ಲಿ "ಮಗ.. ಪರೀಕ್ಷೆ ಹತ್ತಿರ ಬರುತ್ತಿದೆ. ತಿರುಗುವುದು ಬಿಟ್ಟು ಓದಿಕೋ" ಎಂದರು ಅಮ್ಮ ಮೋಹಿನಿ.
"ಅಮ್ಮ ಓದೋಕೆ ಲೈಬ್ರರಿಗೆ ಹೋಗುತ್ತಿದ್ದೇನೆ." ಎಂದು ಹೇಳಿದಾಗ ಮರುಮಾತನಾಡದೇ ಒಪ್ಪಿದರು ಮೋಹಿನಿ.

       ಬೈಕ್ ಹಾಸ್ಟೆಲ್ ಕಡೆಗೆ ಬರುವ ಮೊದಲ ತಿರುವಿನಲ್ಲಿ ನಿಂತಿದ್ದಳು ದೀಪಿಕಾ. ಪಿಂಕ್ ಚೂಡಿದಾರ್ ಧರಿಸಿ ಲೈಟಾಗಿ ಮೈಕಪ್ ಮಾಡಿಕೊಂಡವಳು ಅವನ ಕಣ್ಣಿಗೆ ಥೇಟ್ ಅಪ್ಸರೆಯಂತೆ ಕಾಣುತ್ತಿದ್ದಳು. "ಏನೋ ಹಾಗೇ ನೋಡ್ತಾ ನಿಂತಿದ್ದೀಯಾ.. ಛೀ ಕಳ್ಳ..!" ಬೆನ್ನಮೇಲೊಂದು ಗುದ್ದು ನೀಡಿದಳು ಮೆಲುವಾಗಿ. "ಹೂಂ..ಹತ್ತು.." ಎಂದ.
ಹತ್ತಿದ್ದೇ ತಡ ಬೈಕ್ ರಭಸವಾಗಿ ಸಾಗಿತು. ರಸ್ತೆಯ ಉಬ್ಬುತಗ್ಗುಗಳೆಲ್ಲ ಸಮನಾಗಿವೆಯೆಂಬಂತೆ ಗಾಡಿ ಓಡಿಸುತ್ತಿದ್ದ ಪ್ರತಾಪ್ ಬೇರೆಯದ್ದೇ ಲೋಕಕ್ಕೇರಿದ್ದ. 
ದಿನವಿಡೀ ಜೊತೆಗೆ ಸುತ್ತಾಟ ಇಬ್ಬರನ್ನೂ ಮತ್ತಷ್ಟು ಹತ್ತಿರವಾಗಿಸಿತು. ಮಧುರಾನುಭವ ಹೊಸ ಹುರುಪನ್ನು ನೀಡಿತು.

       ಪರೀಕ್ಷೆಗಳು ಮುಗಿದು ಫಲಿತಾಂಶ ಬಂದು ಮುಂದಿನ ಓದಿಗೆ ಸಿದ್ಧರಾದಾಗ ಇಬ್ಬರೂ ಒಂದೇ ಕೋರ್ಸ್ ಒಂದೇ ಯೂನಿವರ್ಸಿಟಿ ಆಯ್ಕೆಮಾಡಿಕೊಂಡು ಮತ್ತಷ್ಟು ಆಪ್ತರಾದರು. ಉದ್ಯೋಗವನ್ನು ಅರಸಿ ಪ್ರತಾಪ್ ದೂರದೂರು ಸೇರಿದ. ದೀಪಿಕಾ ತಂದೆ ತಾಯಿಯ ಜೊತೆಗೆ ಇದ್ದು ಹತ್ತಿರದಲ್ಲೇ ಉದ್ಯೋಗ ಗಿಟ್ಟಿಸಿಕೊಂಡಳು. 

       ಅದೊಂದು ದಿನ ಸದಾನಂದ ರಾಯರಿಗೆ ಶಾಕಿಂಗ್ ನ್ಯೂಸ್ ಕೊಟ್ಟಳು ಮಗಳು. ಅಪ್ಪ ಎಂದೂ ಯೋಚಿಸದ ಹಾದಿಯಲ್ಲಿ ಮಗಳು ಬಹಳ ದೂರ ನಡೆದು ಬಿಟ್ಟಿದ್ದಳು. ನಿಟ್ಟುಸಿರು ಬಿಟ್ಟ ದೀಪಿಕಾಳ ತಂದೆತಾಯಿ ಹಣೆಬರಹ ಎಂದು ನೊಂದುಕೊಂಡರೆ, ಮೋಹಿನಿಯಮ್ಮ "ಏನೋ ಪ್ರತಾಪ.. ಯಾವಳನ್ನೋ ಕಟ್ಟಿಕೊಂಡು ಬಂದರೆ ಮನೆಯೊಳಕ್ಕೆ ಸೇರಿಸುತ್ತೇನೆಂದುಕೊಂಡೆಯಾ?" ಕೆಂಗಣ್ಣು ಮಾಡಿ ದನಿಯೇರಿಸಿದರು. 

      ಇಬ್ಬರೂ ವಿಚಲಿತರಾಗದೆ ತಮ್ಮದೇ ಕಾಲಮೇಲೆ ನಿಂತು ಪ್ರೀತಿಗೊಂದು ಘನತೆ ತಂದುಕೊಟ್ಟರು. ವಿಜೇತನೆಂಬ ಮೊಗ್ಗು ಅರಳಿ ಪ್ರೇಮಸೌಗಂಧವನ್ನು ಬೀರಿತು. ಆ ಸೌಗಂಧದ ಮೋಹಕ್ಕೆ ಎರಡೂ ಕುಟುಂಬಗಳು ಮನಸೋತು ಬಳಿಬಂದವು. 

       ಎಂದೂ ಬರೆಯದ, ಎಲ್ಲೂ ಅಕ್ಷರದಲ್ಲಿ ದಾಖಲಿಸದ ಕಥೆಯೊಂದು ಅವಳ ಹೃದಯದಲ್ಲಿ ಅಚ್ಚೊತ್ತಿ ನಿಂತಿತ್ತು. ಕೊರೋನಾ ಲಾಕ್ ಡೌನ್ ಅವರ ವೇಗದ ಔದ್ಯೋಗಿಕ ಬದುಕಿಗೊಂದು ಬ್ರೇಕ್ ಹಾಕಿ ಕಳೆದ ಮಧುರ ಘಳಿಗೆಗಳನ್ನು ನೆನಪಿಸಿಕೊಳ್ಳುವಂತೆ ಮಾಡಿತು.

✍️... ಅನಿತಾ ಜಿ.ಕೆ.ಭಟ್.
13-11-2021.

ಇದು ಕಾಲ್ಪನಿಕ ಕಥೆಯಾಗಿದೆ.ಯಾರ ಬದುಕಿಗಾದರೂ ಹೋಲಿಕೆಯಾಗುತ್ತಿದ್ದರೆ ಅದು ಕಾಕತಾಳೀಯ ಮಾತ್ರ.

ಪ್ರತಿಲಿಪಿ ಕನ್ನಡ ದೈನಿಕ ವಿಷಯ: ಬರೆಯದ ಕಥೆಯಿದು.














No comments:

Post a Comment