Thursday, 25 November 2021

ಮಾಸಿದ ಬೆಳಕು

 



#ಮಾಸಿದ ಬೆಳಕು


      ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಹಬೆಯಾಡುವ ಬಿಸಿನೀರಿನಿಂದ ಸ್ನಾನ ಮಾಡಿಸಿ ಎತ್ತಿಕೊಂಡು ಮಲಗುವ ಕೋಣೆಗೆ ಬಂದಳು ವಸುಧಾ. ಆಗ ಒಂದೇ ಸಮನೆ ಫೋನ್ ರಿಂಗುಣಿಸತೊಡಗಿತು. ಮಗುವಿಗೆ ಹಣೆಗೆ ಕಾಡಿಗೆ ಬೊಟ್ಟನಿಟ್ಟು ಹಾಲುಣಿಸಿ ತೊಟ್ಟಿಲಲ್ಲಿ ಮಲಗಿಸಿ ಜೋಗುಳವ ಹಾಡಿದಳು. ಮಗು ನಿದ್ದೆಗೆ ಶರಣಾದಾಗ ಫೋನ್ ಕರೆ ಯಾರದ್ದೆಂದು ನೋಡಿದಳು. ಓಹ್, ಅಮ್ಮ ಕರೆ ಮಾಡಿದ್ದಾರೆ. ಒಂದೈದು ನಿಮಿಷ ಮಾತನಾಡಿಯೇ ಅರ್ಧಂಬರ್ಧ ಉಳಿದಿದ್ದ ಕೆಲಸಗಳನ್ನು ಪೂರ್ತಿ ಮಾಡೋಣವೆಂದು  ಮೊದಲು ತಾಯಿಗೆ ಕರೆ ಮಾಡಿದಳು. ರಾಜಮ್ಮ ಕರೆ ಸ್ವೀಕರಿಸಿ ಮಗಳೊಡನೆ ಸುಖ ದುಃಖ ಹಂಚಿಕೊಂಡರು. ಮಾತನಾಡುತ್ತಾ ತನ್ನಣ್ಣನ ಮಗಳು ಮಾನಸಾಳ ವಿಚಾರ ಪ್ರಸ್ತಾಪಿಸಿದರು.
''ಮಾನಸತ್ತಿಗೆಗೆ ಗಂಡು ಮಗು ಹುಟ್ಟಿದ್ದು.. ನಿನ್ನಲ್ಲಿ ನಾ ಹೇಳಲಿಲ್ಲ ವಸುಧಾ. ನಿನಗೆ ಹೆಣ್ಣುಮಗುವೆಂದು ನೊಂದುಕೊಳ್ಳುವೆಯೆಂದು"

"ಛೇ.. ಎಂತಹಾ ಮಾತನಾಡುತ್ತಿರುವೆ ಅಮ್ಮಾ. ನನಗೆ ಮಗಳೆಂದು ನಾನು ಬೇಸರಿಸುತ್ತಿರುವೆನೇ? ಖಂಡಿತಾ ಇಲ್ಲ. ಈಗ ಹೆಣ್ಣು ಗಂಡೆಂಬ ತಾರತಮ್ಯ ಇಲ್ಲಮ್ಮಾ.. ಮಗು ಆರೋಗ್ಯವಾಗಿ ಇದ್ದರೆ, ಸನ್ಮಾರ್ಗದಲ್ಲಿ ನಡೆದರೆ ಸಾಕು"
"ಹೌದು ಮಗಳೇ. ನೀನು ಹೇಳಿದ್ದು ಸತ್ಯ. ಅಂದ ಹಾಗೆ ಈಗ ಮಾನಸಾಳ ಮಗನಿಗೆ ಆರು ತಿಂಗಳಾಯಿತು. ಮಾನಸಾ ಪುನಃ ವೃತ್ತಿ ಆರಂಭಿಸಿದ್ದಾಳಂತೆ"
"ಆಗಲಿ ಅಮ್ಮಾ.. ಒಳ್ಳೆಯದು." ಎಂದಳು ವಸುಧಾ.
ರಾಜಮ್ಮ ಮಾತು ಮುಂದುವರಿಸುತ್ತಾ " ಮಾನಸಾಳ ಮಗ ತಾಯಿ ಹೊರಡುವಾಗ ವಿಪರೀತ ಅತ್ತು ಕರೆದು ರಂಪ ಮಾಡುತ್ತಾನಂತೆ. ಅವಳ ತಾಯಿ ರಾಧತ್ತೆ ಮೊನ್ನೆ ಕರೆ ಮಾಡಿ ಮಾತನಾಡಿದರು. ಮಗಳನ್ನು ಇಷ್ಟು ಓದಿಸಿದ್ದೇ ತಪ್ಪಾಯಿತೇನೋ ಅನ್ನಿಸುತ್ತಿದೆ ಮೊಮ್ಮಗನ ಆರ್ಭಟ ಕೇಳಿ."
"ಹಾಗೇಕೆ ಅಮ್ಮಾ.. ಕೆಲವು ದಿನಗಳಲ್ಲಿ ಮಗು ಹೊಂದಿಕೊಳ್ಳುತ್ತದೆ. ಆಗ ಎಲ್ಲಾ ಸರಿ ಹೋಗುತ್ತದೆ."
"ಎಲ್ಲಾ ತಾಯಂದಿರಂತಲ್ಲ ಆಕೆ. ಆಕೆ ಮಕ್ಕಳ ತಜ್ಞೆ ಬೇರೆ. ಆಕೆಗೆ ಮಕ್ಕಳನ್ನು ಹೇಗೆ ಪ್ರೀತಿಯಿಂದ ಕಾಳಜಿಯಿಂದ ಬೆಳೆಸಬೇಕೆಂಬುದು ತಿಳಿದಿದೆ. ಬಹುಶಃ ಆ ಆಪ್ತತೆಯಿಂದ, ಪ್ರೀತಿಯಿಂದ ಇರಬಹುದು ಮಗು ಅಮ್ಮನನ್ನು ಬಿಟ್ಟು ಇರಲು ಬಹಳ ಹಠ ಮಾಡುತ್ತಿರುವುದು."
"ಇರಬಹುದು ಅಮ್ಮಾ.." ಎನ್ನುತ್ತಾ ಮತ್ತೊಂದಿಷ್ಟು ಹರಟಿ ಫೋನಿಟ್ಟಳು ವಸುಧಾ. ಮಕ್ಕಳ ತಜ್ಞೆಗೆ ಮಗುವಿನ ಶಾರೀರಿಕ ಬೌದ್ಧಿಕ ವಿಕಾಸಕ್ಕೆ ಸಂಬಂಧಿಸಿದ ವಿಚಾರಗಳು ತಿಳಿದಿರುತ್ತವೆ. ಅದಕ್ಕಾಗಿ ಆಕೆ ಒಬ್ಬ ಉತ್ತಮ ತಾಯಿಯಾಗಿರಬಹುದು. ಮಗು ತಾಯಿಯ ನಡುವೆ ಬಿಟ್ಟಿರಲಾರದಂತಹ ಅನುಬಂಧ ಗಾಢವಾಗಿ ಬೆಸೆದಿರಬಹುದು ಎಂದು ತನ್ನ ತಾಯಿಯಾಡಿದ ಮಾತುಗಳನ್ನು ಮೆಲುಕು ಹಾಕುತ್ತಾ ಮನೆಗೆಲಸದಲ್ಲಿ ನಿರತಳಾದಳು.

                          ******

         ವಸುಧಾಳ ಅಜ್ಜಿ ಮನೆಯಲ್ಲಿ ಮದುವೆಯ ಸಮಾರಂಭ. ವಸುಧಾಳ ಮಡಿಲಲ್ಲಿ ಈಗ ಒಂದು ವರ್ಷ ಎರಡು ತಿಂಗಳಿನ ಪುಟ್ಟ ಮಗ, ನಾಲ್ಕೂವರೆ ವರುಷದ ಮಗಳು ಇದ್ದಾರೆ. ನೋಡುಗರ ಕಣ್ಣಿಗೆ ಫರ್ಫೆಕ್ಟ್ ಫ್ಯಾಮಿಲಿ ಅನ್ನುವ ತರಹ. ಮೊದಲು ಉದ್ಯೋಗದಲ್ಲಿದ್ದ ವಸುಧಾ ತನ್ನ ಮಕ್ಕಳಿಗೋಸ್ಕರ ಉದ್ಯೋಗವನ್ನು ತ್ಯಜಿಸಿ ಪೂರ್ಣಪ್ರಮಾಣದಲ್ಲಿ ತಾಯ್ತನದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾಳೆ. ಸಮಾರಂಭಕ್ಕೆ ಪುಟ್ಟ ಮಗುವಿನೊಂದಿಗೆ ಬಂದರೆ ಸ್ವಲ್ಪ ಕಷ್ಟ ಎಂಬುದು ಅವಳ ನಿರ್ಧಾರ. ರಾಜಮ್ಮನದು ಮಗಳು ಕುಟುಂಬ ಸಮೇತ ಬರಬೇಕೆಂಬ ಒತ್ತಾಯ. ಅಮ್ಮನ ಒತ್ತಾಯಕ್ಕೆ ಮಣಿದು ಮುನ್ನಾದಿನ ರಾತ್ರಿಯೇ ತನ್ನ ಕುಟುಂಬದೊಂದಿಗೆ ಹಾಜರಾದಳು ವಸುಧಾ.

        ವಸುಧಾಳ ಮಗ  ವರ್ಧನ ನೋಡಲು ಮುದ್ದಾಗಿದ್ದ. ಬೆಳ್ಳಗೆ ಗುಂಡು ಗುಂಡಗಿದ್ದ ನಗುನಗುವ ಚುರುಕಿನಿಂದ ಅತ್ತಿತ್ತ ಓಡಾಡುವ ಮಗುವನ್ನು ಎತ್ತಿಕೊಳ್ಳಲು ಅಲ್ಲಿಗೆ ಆಗಮಿಸಿದ್ದ ಪುಟ್ಟ ಮಕ್ಕಳಿಗೆಲ್ಲ ಆತುರ, ಆಸಕ್ತಿ. ವಸುಧಾ ಮಗನೊಂದಿಗೆ ಮನೆಯ ಚಾವಡಿಯಲ್ಲಿದ್ದಳು. ಸುತ್ತಲೂ ಒಂದಷ್ಟು ಮಕ್ಕಳೂ ಸಹಾ. ಒಮ್ಮಿಂದೊಮ್ಮೆಲೇ ವರ್ಧನನನ್ನು ಯಾರೋ ಹಿಂದಿನಿಂದ ತಳ್ಳಿದಂತಾಯ್ತು. ವಸುಧಾ ಹಿಡಿದುಕೊಳ್ಳುವಷ್ಟರಲ್ಲಿ ಕೆಳಗೆ ಬಿದ್ದಾಗಿತ್ತು ವರ್ಧನ. ತಲೆ ಬಲವಾಗಿ ಮಾರ್ಬಲ್ ನೆಲಕ್ಕೆ ಬಡಿಯಿತು. "ಅಮ್ಮಾ.. ಅಮ್ಮಾ.." ಎಂದು ಒಂದೇ ಸಮನೆ ಅಳುತ್ತಾ ಮುಖ ಕೆಂಪೇರಿತ್ತು. ತಲೆಗೆ ಐಡೆಕ್ಸ್ ಹಚ್ಚಿ, ಐಸ್ ಕ್ಯೂಬ್ ಇಟ್ಟು ಸಮಾಧಾನಪಡಿಸಲು ಒಂದು ಗಂಟೆ ಬೇಕಾಯಿತು.
ಬಲವಾಗಿ ತಳ್ಳಿದ ಆ ಮಗು ಯಾರದೆಂದು ವಿಚಾರಿಸಲಾಗಿ ಅದು ಮಾನಸಾಳ ಮಗ ಆದರ್ಶ ಎಂಬುದು ತಿಳಿಯಿತು. ವಸುಧಾಳ ಸೋದರಮಾವನ ಮಗಳೇ ಮಾನಸಾ. ಅವಳ ತವರಿನಲ್ಲೇ ಮದುವೆ. ಏನೋ ಆಟವಾಡುವಾಗ ಹಾಗಾಗಿರಬಹುದೆಂದು ಸುಮ್ಮನಾದಳು ವಸುಧಾ.

         ರಾತ್ರಿ ಊಟವಾದ ಬಳಿಕ ಕೈತೊಳೆಯಲು ಹೋಗುವಾಗ ವರ್ಧನನನ್ನು ಅಮ್ಮನ ಬಳಿ ಬಿಟ್ಟು ಹೋಗಿದ್ದಳು ವಸುಧಾ. ಅಜ್ಜಿಯ ಟವೆಲ್ ಹಿಡಿದು ಕೂಕಿ ಕಂಡಿತು ಎಂದು ನೋವು ಮರೆತು ಆಡಲು ಶುರುಮಾಡಿದ್ದ. ಸುತ್ತಲೂ ಮಕ್ಕಳು ಸುತ್ತುಗಟ್ಟಿದರು. ಹಿಂದಿನಿಂದ ಬಂದ ಆದರ್ಶ ಮುಷ್ಟಿ ಹಿಡಿದು ಬೆನ್ನನ್ನು ಬಲವಾಗಿ ನೂಕಿದ. ವರ್ಧನ ನೆಲಕ್ಕುರುಳಿ ರೋದಿಸಲು ಆರಂಭಿಸಿದ. ಈಗ ಅವನ ಸ್ವರ ಕ್ಷೀಣವಾಗಿತ್ತು. ವಸುಧಾಳಿಗೆ ಭಯವುಂಟಾಯಿತು. ಮಾನಸಾ ಮಗನನ್ನು ತರಾಟೆಗೆ ತೆಗೆದುಕೊಂಡು "ಏನು ಮಾಡುತ್ತಿದ್ದೀಯಾ ನೀನು ಆ ಪುಟ್ಟ ಮಗುವನ್ನು?" ಎಂದು ಗದರಿದಳು.

       ಕಾರ್ಯಕ್ರಮಕ್ಕೆ ಆಗಮಿಸಿದ್ದ ಭುಜಂಗ ರಾಯರು "ಅದು ಸಾಮಾನ್ಯ ಮಗುವಲ್ಲ.. ಜೂನಿಯರ್ ಪೀಡಿಯಾಟ್ರಿಷನ್.. ಅದಕ್ಕೆ ಹಾಗೆ..." ಎಂದು ವ್ಯಂಗ್ಯವಾಗಿ ನಕ್ಕರು.
ಇನ್ನು ಕೆಲವರು "ಮಾನಸಾ.. ನಿನ್ನ ಮಗನಿಗೆ ಸಿಟ್ಟು ಭಯಂಕರ ಇದೆ" ಅಂದಾಗ,
"ಹೌದು ಹಠ ಜಾಸ್ತಿ.. ಈಗ ಅವನ ತಂದೆಯೂ ಒಂದು ತಿಂಗಳ ಮಟ್ಟಿಗೆ ವಿದೇಶಕ್ಕೆ ಹೋಗಿದ್ದಾರೆ.. ತಂದೆಯನ್ನು ಕಾಣದೆ ಮನಸ್ಸು ಸ್ವಲ್ಪ ವ್ಯಗ್ರವಾಗಿದೆ.. ನಾನು ಬುದ್ಧಿ ಹೇಳಿದರೂ ಕೇಳಲ್ಲ.." ಎಂದಳು ಮಾನಸಾ..

        ವಸುಧಾಳ ಪತಿ "ನಾವು ನಾಳೆ ಬೆಳಗ್ಗೆಯೇ ಹೊರಡೋಣ" ಎಂದರು. ಮದುವೆಗಿಂತ ಮಗುವಿನ ಆರೋಗ್ಯ ಮುಖ್ಯ ಎಂದು. ರಾಜಮ್ಮ ಮಾತ್ರ  ಹೋಗಲು ಬಿಡಲೇ ಇಲ್ಲ. ತನ್ನ ತವರಿನ ನೆಂಟರೆದುರು ಮಗಳ ಕುಟುಂಬವನ್ನು ಪರಿಚಯಿಸಬೇಕೆಂಬುದು ಅವರ ಆಸೆ. ಅಮ್ಮನ ಆಸೆಗೆ ತಣ್ಣೀರೆರಚಲೂ ಆಗದೆ, ಮಗುವಿನ ರಕ್ಷಣೆಯ ಕಡೆಗೆ ನಿರ್ಲಕ್ಷ್ಯವನ್ನೂ ತೋರಲಾಗದೆ ಚಡಪಡಿಸಿದಳು ವಸುಧಾ.

     "ವಸುಧಾ.. ನಿಲ್ಲುತ್ತೇನೆ ಎಂದು ಹೇಳಿದರೆ ಸಾಲದು. ಮಗುವಿನ ಮೇಲೆ ಕಣ್ಣಿಟ್ಟು ಕಾಯಬೇಕು. ಆದರ್ಶನೇನೋ ಈ ಮಗುವಿನ ಮೇಲೆ ಸೇಡು ತೀರಿಸುವಂತೆ ವರ್ತಿಸುತ್ತಿದ್ದಾನೆ." ಎಂದರು ವಸುಧಾಳ ಪತಿ ರಘು.

"ಏನೋ  ಅವನೂ ನಾಲ್ಕು ವರ್ಷ ದ ಮಗು. ಪುಂಡಾಟಿಕೆಯಲ್ಲಿ ಮಾಡುತ್ತಿದ್ದಾನೆ." ಎಂದಳು.

"ನೋಡು ನಿನ್ನ ಈ ಉಡಾಫೆಯ ವರ್ತನೆ ನಮ್ಮ ಮಗುವಿನ ಭವಿಷ್ಯಕ್ಕೆ ಕುತ್ತು ತಂದೀತು ಜೋಕೆ."
ಎಂದು ರಘು ಹೇಳಿದಾಗ ಇಕ್ಕಟ್ಟಿನಲ್ಲಿ ಸಿಕ್ಕಿ ಚಡಪಡಿಸಿದಳು ವಸುಧಾ.

      ಬೆಳಗ್ಗೆ ಎಲ್ಲರೂ ಆಗಮಿಸುತ್ತಿದ್ದರು. ವಸುಧಾಳ ಗಮನ ತನ್ನ ಮಗನ ಮೇಲೆಯೇ ಇತ್ತು. ಜೊತೆಗೆ ಮಗಳನ್ನು ಕೂಡಾ "ಇವತ್ತು ನಮ್ಮ ತಮ್ಮನನ್ನು ಯಾರೂ ದೂಡಿ ಹಾಕದಂತೆ ನೋಡಿಕೊಳ್ಳೋಣ ಆಯ್ತಾ " ಎಂದು ಪುಸಲಾಯಿಸಿ ಅವಳೂ ತಮ್ಮನ ಹಿತ ಕಾಪಾಡುವಂತೆ ಮನವೊಲಿಸಿದ್ದಳು. ರಘು ಕೂಡಾ ಮಗನ ಮೇಲೆ ಒಂದು ಕಣ್ಣು ಇಟ್ಟಿದ್ದ.

      ವರ್ಧನ ನಡೆಯಲು ಆರಂಭಿಸಿ ಎರಡು ತಿಂಗಳಾಗಿತ್ತು. ಅವನಿಗೆ ಈಗ ನಡೆಯುವುದಕ್ಕಿಂತ ಓಡುವುದು ಬಲು ವಿಶೇಷ. ಅಮ್ಮ ಎತ್ತಿಕೊಂಡಿದ್ದರೆ ಮೆಲ್ಲನೆ ಕೊಸರಿಕೊಂಡು ಇಳಿದು ಓಡುತ್ತಿದ್ದ. ಅವನನ್ನು ಹಿಂಬಾಲಿಸಿ ಹೋಗುವುದೆಂದರೆ ಬಹಳ ಕಷ್ಟ. ಆದರೂ ವಸುಧಾ ಮಗನ ಜೊತೆಗಿದ್ದಳು. ವಧೂವರರನ್ನು ಮಂಟಪಕ್ಕೆ ಕರೆತರಲಾಗಿತ್ತು. ವಿಡಿಯೋದವರು, ಕ್ಯಾಮೆರಾ ಮೆನ್ ಸುತ್ತುವರಿದಿದ್ದರು. ಅವರನ್ನು ನೋಡುವ ಕುತೂಹಲದಿಂದ ಸರಸರನೆ ಓಡಿ ಅವರ ಮಧ್ಯದಲ್ಲಿ ನಿಂತಿದ್ದ ವರ್ಧನ. ಅವರ ನಡುವೆ ಹೋಗಲಾಗದ ವಸುಧಾ ಮಗಳನ್ನು ಕಳುಹಿಸಿದ್ದಳು. "ತಮ್ಮನನ್ನು ಕರೆದುಕೊಂಡು ಬಾ" ಎಂದು.  ಅವಳು ತಮ್ಮನನ್ನು "ಬಾ.." ಎಂದರೂ ಅವನು ಬರಲೊಲ್ಲ. ಪಾಪ.. ಅಕ್ಕ. ಆದರೂ ತಮ್ಮೊಡನೆ ತಾನೂ ನಿಂತಳು. ಎಲ್ಲರ ಗಮನ ಮಂಟಪದಲ್ಲಿತ್ತು. "ಸುಮುಹೂರ್ತೇ ಸಾವಧಾನೌ| ಸುಲಗ್ನೇ ಸಾವಧಾನೌ|" ಪುರೋಹಿತರು ಏರು ಕಂಠದಲ್ಲಿ ಉಚ್ಛರಿಸುತ್ತಿದ್ದರು. "ಅಮ್ಮಾ.." ಎಂದು ತೂರಿ ಬಂದ ಧ್ವನಿಗೆ ರಘು ತಾನು ಕುಳಿತಲ್ಲಿಂದ ಎದ್ದು ಹೋಗಿ ವರ್ಧನನನ್ನು ಎತ್ತಿ ಆದರ್ಶನ ಕಡೆಗೆ ಕೆಂಗಣ್ಣು ಬೀರಿದ್ದ.
ಏಕೋ ನಿನ್ನೆಯಷ್ಟು ಅಳಲಿಲ್ಲ ಮಗು. ಮಂಕಾಗಿಬಿಟ್ಟಿತ್ತು. ಸ್ವಲ್ಪ ವಾಂತಿ ಮಾಡಿತು. ಆದರ್ಶನ ತಾಯಿಯಲ್ಲೇ ಕೇಳಿದಳು ವಸುಧಾ "ಮಗುವಿನ ತಲೆಗೆ ಏಟಾಗಿರಬಹುದಾ? ವಾಂತಿ ಮಾಡಿಕೊಳ್ಳುತ್ತಿದೆ."
"ಹನ್ನೆರಡು ಗಂಟೆ ಮಗುವಿನ ಮೇಲೆ ನಿಗಾ ಇಡಿ. ಆರೋಗ್ಯದಲ್ಲಿ ಏರುಪೇರು ಕಂಡರೆ ಚೆಕಪ್ ಮಾಡಿಸಿ." ಎಂದರು.

ನಿನ್ನೆಯೇ ಎಚ್ಚರಿಸಿದ್ದ ರಘುವಿನ ಮುಖನೋಡುವ ಧೈರ್ಯ ವಸುಧಾಳಿಗಿರಲಿಲ್ಲ. ಆದರ್ಶನನ್ನು ಗದರುವ ಮನಸ್ಥಿತಿಯೂ ಅವಳದಲ್ಲ. ಇನ್ನೊಬ್ಬರ ಮಗುವನ್ನು ನಾನು ಗದರುವುದು ತರವಲ್ಲ ಎಂಬುದು ಅವಳ ಅನಿಸಿಕೆ. "ಅತಿಯಾದ ಒಳ್ಳೆಯತನ, ಇನ್ನೊಬ್ಬರ ಮಾತಿಗೇ ಬೆಲೆಕೊಡುವುದು ಒಳ್ಳೆಯದಲ್ಲ ವಸುಧಾ.." ಎಂದರು ರಘು.

   ನೆರೆದವರೆಲ್ಲ ನೋಡುತ್ತಾ ಆಡಿಕೊಳ್ಳುತ್ತಿದ್ದರೇ ವಿನಃ ಆದರ್ಶನನ್ನು ಕರೆದು "ನೀನು ಆ ರೀತಿ ವರ್ತಿಸಬಾರದು" ಎಂದವರಿಲ್ಲ. ಅಮ್ಮ ಮಾನಸಾ ಕೆಲವು ಬಾರಿ ಹೇಳಿದರೂ ಪ್ರಯೋಜನವಾಗಲಿಲ್ಲ. ಮಾನಸಾಳನ್ನು ಕಂಡವರೆಲ್ಲ ನನಗೆ ಆ ಸಮಸ್ಯೆಯಿದೆ ಏನು ಮಾಡಬೇಕು ಹೇಳು.. ನಮ್ಮ ಮಗು ಹೀಗೆ ಮಾಡುತ್ತಿದ್ದೆ. ಔಷಧಿ ಬರೆದುಕೊಡು ಎಂದು ಆಕೆಯಲ್ಲಿ ಎಲ್ಲರೂ ವೈದ್ಯಕೀಯ ಸಮಾಲೋಚನೆ ಮಾಡುವವರೇ.. ಇದರ ಮಧ್ಯೆ ಆಕೆಗೆ ತನ್ನ ಮಗನ ಕಡೆಗೆ ಹೆಚ್ಚು ಗಮನಕೊಡಲು ಬಹುಶಃ ಸಾಧ್ಯವಾಗಿರಲಾರದು. ಜೊತೆಗೆ ತನ್ನ ಚಿಕ್ಕಪ್ಪನ ಮಗಳು ತಂಗಿಯ ಮದುವೆಯಾದ್ದರಿಂದ
ಕೆಲವು ಶಾಸ್ತ್ರಗಳಲ್ಲೂ ಆಕೆ ಅಕ್ಕನಾಗಿ ಭಾಗಿಯಾಗಬೇಕಿತ್ತು. 

      ಎಲ್ಲಾ ಮಕ್ಕಳೂ ದೊಡ್ಡವರೂ ವರ್ಧನನನ್ನು ಮುದ್ದಿಸಿದಾಗ ಆದರ್ಶನಿಗೇನೋ ರೋಷವುಕ್ಕಿದಂತೆ ಅವನ ಮುಖಭಾವದಲ್ಲಿ ತೋರುತ್ತಿತ್ತು. ಮುಷ್ಟಿ ಹಿಡಿದು ಸೇಡುತೀರಿಸಲು ಕಾಯುತ್ತಿರುವವನಂತೆ ಕಾಣುತ್ತಿತ್ತು. ನಾಲ್ಕು
ವರುಷದ ಈ ಮಗುವಿನ ಮುಗ್ಧತೆ ಮಾಯವಾದದ್ದು ಹೇಗೆ ರೋಷ, ಹಠ, ಕ್ರೌರ್ಯ ತುಂಬಿದ್ದು ಹೇಗೆ ವಸುಧಾಳಲ್ಲಿ ಪ್ರಶ್ನೆ ಮೂಡಿತ್ತು.

       ಕಾರ್ಯಕ್ರಮದಿಂದ ಹೊರಡುವ ಮುನ್ನ ಮತ್ತೆರಡು ಬಾರಿ ದೂಡಿ ಹಾಕಿ ತನ್ನ ಕೋಪ ತೀರಿಸಿಕೊಂಡಿದ್ದ ಆದರ್ಶ. ಕೊನೆಯ ಬಾರಿ ಬಿದ್ದಾಗ ಇಲ್ಲ.. ನಾನಿನ್ನು ಇವನನ್ನೆತ್ತಿಕೊಂಡು ಇಲ್ಲಿರಲಾರೆ. ಯಾರು ಏನೆಂದರೂ ಸರಿ.. ನಮ್ಮ ಮಗುವಿನ ಜವಾಬ್ದಾರಿ ನಮ್ಮದು. ಎಂದು ಮಗುವನ್ನೆತ್ತಿಕೊಂಡು ಬ್ಯಾಗುಹಿಡಿದು ಕಾರನ್ನು ಹತ್ತಿದಳು ವಸುಧಾ.

          ಮಗು ಆ ನೋವಿನಿಂದ ಚೇತರಿಸಲು ಹದಿನೈದು ಇಪ್ಪತ್ತು ದಿನಗಳೇ ಹಿಡಿದವು. ತೊದಲು ಮಾತಿನಲ್ಲಿ ಅಮ್ಮ, ಅಪ್ಪ, ಅಜ್ಜಿ, ಅಜ್ಜ, ಅಕ್ಕ... ಎನ್ನುತ್ತಿದ್ದ ಮಗು ಮೂಕವಾಗಿತ್ತು. ಮತ್ತೆ ಮಾತು ಆರಂಭಿಸಿದ್ದು ಎರಡು ತಿಂಗಳ ಬಳಿಕ. ಛೇ.. ನಾನು ಸುಮ್ಮನೇ ಅಮ್ಮನ ಮಾತಿಗೆ ಒಪ್ಪಿದೆ.. ಹಿರಿಯರ ಮಾತಿಗೆ ಇಲ್ಲವೆನ್ನಲಾಗದ ತನ್ನ ಸಂಕೋಚದ ಬುದ್ಧಿಯನ್ನೇ ಹಳಿದುಕೊಂಡಳು ವಸುಧಾ. ಜೊತೆಗೆ ರಘುವಿನ ಗದರುವಿಕೆ ಕೂಡಾ ಕೇಳಿದಳು.

                       *******

"ಕಿರಣ್.. ನನಗೆ ಹದಿನೈದು ದಿನದೊಳಗೆ ಡ್ಯೂಟಿಗೆ ಸೇರಿಕೊಳ್ಳಲು ಆದೇಶ ಬಂದಿದೆ."
"ಆಗಲಿ ಮಾನಸಾ. ಆದರ್ಶವಿಗೆ ಆರು ತಿಂಗಳಾಯಿತು. ಇನ್ನು ಒಬ್ಬಳು ಆಯಾಳನ್ನು ಮಗನನ್ನು ನೋಡಿಕೊಳ್ಳಲು, ಮತ್ತೊಬ್ಬರನ್ನು ಮನೆಕೆಲಸಕ್ಕೆ ಇಟ್ಟು ಡ್ಯೂಟಿಗೆ ರಿಪೋರ್ಟ್ ಮಾಡು."

"ಕಿರಣ್ .. ಹೇಳಿದಷ್ಟು ಸುಲಭವಿದೆಯೇ..? ಈಗ ದಿನದಲ್ಲಿ ಆಗಾಗ ಹಾಲೂಡಿಸುತ್ತಿದ್ದೇನೆ. ಅದನ್ನು  ಡ್ಯೂಟಿ ಟೈಂಗೆ ಸರಿಹೊಂದುವಂತೆ  ಮಿತಿಗೊಳಿಸಸೇಕು. ಸರಿಯಾದ ಆಯಾ ಸಿಕ್ಕಿ ಆಕೆಗೆ ಮಗುವಿನ ಜವಾಬ್ದಾರಿ ನಿಭಾಯಿಸಲು ಕಲಿಸಬೇಕು."

"ಸರಿ ಮಾನಸಾ.. ಇವತ್ತೇ 'ಕೇರ್ ಟೇಕರ್' ಅಸೋಸಿಯೇಷನ್‌ಗೆ ಫೋನ್ ಮಾಡಿ ಆಯಾಳನ್ನು ಬುಕ್ ಮಾಡಿ ಅಡ್ರೆಸ್ ಕೊಡು. ನಾಳೆಯಿಂದಲೇ ಕಳುಹಿಸಲು ಹೇಳು."
ಎಂದು ಹೇಳಿ ಕಿರಣ್  "ನನಗೆ ಈಗ ಒಂದು ಸಿಸೇರಿಯನ್ ಕೇಸ್ ಇದೆ. ಅಟೆಂಡ್ ಮಾಡಬೇಕು" ಎಂದು ಹೊರಟರು.

      ಮಾರನೇ ದಿನದಿಂದಲೇ ದಿನಚರಿಯಲ್ಲಿ ಬದಲಾವಣೆ ಶುರು ಮಾಡಿಯಾಯಿತು. ಉದ್ಯೋಗದ ಸಮಯಕ್ಕೆ ತಕ್ಕಂತೆ ಹಾಲೂಡಿಸುವ ಕೆಲಸ. ತನಗೆ ಬೇಕೆಂದಾಗ ಎದೆಹಾಲು ಸಿಗದಾಗ ಆದರ್ಶನ ಕೂಗುವಿಕೆ. ಆಯಾ ಸ್ನಾನ ಮಾಡಿಸುವಾಗ ಆರ್ಭಟ.. ಆಯಾ ಮಣ್ಣಿ ತಿನಿಸಿದರೆ ಅಳುವುದರ ಜೊತೆಗೆ ಉಗಿವ ಹಠ.. ಎಲ್ಲವೂ ಮಾನಸಾಳಿಗೆ ತಲೆಚಿಟ್ಟು ಹಿಡಿಸಿತ್ತು. ಆದರೂ ತಾನಿಷ್ಟಪಟ್ಟು, ಶ್ರಮಪಟ್ಟು ಗಳಿಸಿದ ವಿದ್ಯೆಯಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬುದು ಅವಳ ಧ್ಯೇಯ. ಆದ್ದರಿಂದ ತನ್ನ ಓದು ಮುಗಿದಾಗಲೇ ನಗರದ ಮೆಡಿಕಲ್ ಕಾಲೇಜೊಂದರಲ್ಲಿ ಪ್ರಾದ್ಯಾಪಕಿಯಾಗಿ ವೃತ್ತಿ ಆರಂಭಿಸಿದ್ದಳು.

     ಅಂದು ಬೆಳಿಗ್ಗೆ ಮಾನಸಾ ಸೀರೆಯುಟ್ಟು ಹೊರಟಳು. ಆ ದಿನ ಪಿಜಿ ವಿದ್ಯಾರ್ಥಿಗಳಿಗೆ ಹಾಗೂ ಬ್ಯಾಚುಲರ್ ವಿದ್ಯಾರ್ಥಿಗಳಿಗೆ ತಲಾ ಒಂದೊಂದು ತರಗತಿ ನಡೆಸಬೇಕಿತ್ತು. ಸಂಜೆ ಬ್ಯಾಚುಲರ್‌ಗಳಿಗೆ ಪ್ರಾಕ್ಟಿಕಲ್ ಇತ್ತು. ಎಲ್ಲದಕ್ಕೂ ಒಮ್ಮೆ ಮೇಲಿಂದ ಮೇಲೆ ಸಿದ್ಧತೆ ಮಾಡಿಕೊಳ್ಳಬೇಕೆನ್ನುವಾಗ ಆದರ್ಶ ಅಮ್ಮನ ಮೈಮೇಲೆ ಬಂದು ಸೀರೆಯೆಳೆದು ಹಠ ಮಾಡಿದ. ಬೆಳಗ್ಗೆ ಕಕ್ಕವೂ ಆಗಿರಲಿಲ್ಲ ಅವನಿಗೆ. ಅದೂ ಅಮ್ಮನ ಸೀರೆಯ ಮೇಲೆ ಬಂತು. ಒಮ್ಮೆಲೆ ರೋಷವುಕ್ಕಿ ಬೆನ್ನಿಗೆರಡು ಗುದ್ದಿದಳು ಮಾನಸಾ. "ಛೀ.. ಇನ್ನು ಪುನಃ ಸೀರೆಯುಟ್ಟು ಹೊರಡಬೇಕು ನಾನು..
ರೋಸಿ ಅಕ್ಕಾ.. ಎಲ್ಲಿದ್ದೀರಿ ನೀವು..?"
"ನಾನು ನೋಡಿಕೊಳ್ಳುತ್ತಲೇ ಇದ್ದೆ ಡಾಕ್ಟರಮ್ಮಾ.. ಅವನು ಸೀದಾ ನಿಮ್ಮತ್ತಲೇ ಬಂದ.. ನಾನೇನು ಮಾಡಲಿ..? "
ಥೂ..ಮೊದಲ ದಿನವೇ ಮೂಡ್ ಹಾಳು ಮಾಡಿಬಿಟ್ಟ.. ಈಗ ಪುನಃ ಸೀರೆಯುಡಲು, ತಿಂಡಿ ತಿನ್ನಲು ಟೈಂ ಇಲ್ಲ..
"ಮಾನಸಾ ಸೀರೆ ಬದಲಿಸು.. ತಿಂಡಿ ಕ್ಯಾಂಟೀನ್‌ನಲ್ಲಿ ಮಾಡು." ಸಲಹೆ ಕೊಟ್ಟ ಕಿರಣ್.
ಹೊರಡುವಾಗ ಆದರ್ಶನ ಕಿರುಚಾಟ ಕೇಳಿ ಕರುಳು ಕಿತ್ತು ಬರುತ್ತಿತ್ತು. ಆದರೂ ಮನಸ್ಸು ಗಟ್ಟಿ ಮಾಡಿಕೊಂಡಳು.

     ಕೆಲವು ತಿಂಗಳುಗಳು ಉರುಳಿದವು. "ರೋಸಿ.. ನೀನು ಮಗುವಿಗೆ ಹಗಲಿಡೀ ಡೈಪರ್ ಹಾಕುತ್ತೀಯಾ?"
"ಇಲ್ಲಮ್ಮಾ.. ನಾನು ಅಂಗಿ ಚಡ್ಡಿ  ಬಿಟ್ಟರೆ ಏನೂ ಹಾಕಿಸೋಲ್ಲ.."
"ಆದರೆ ಮಗುವಿನ ಗುಪ್ತಾಂಗದಲ್ಲಿ ದದ್ದು ಮೂಡಿದೆಯಲ್ಲ.."
"ಇಲ್ಲ ಅಮ್ಮಾ.. ಏನೋ ರಾತ್ರಿ ನೀವು ಸೊಳ್ಳೆ ಪರದೆ ಉಪಯೋಗಿಸಲ್ಲ ನೋಡಿ.. ಅದಕ್ಕೇ ಸೊಳ್ಳೆ ಕಚ್ಚಿರಬೇಕು..''

ಮಾನಸಾ ಖಡಕ್ಕಾಗಿ ಹೇಳಿದಳು. "ಮಗುವಿಗೆ ಹಗಲು ಹೊತ್ತಿನಲ್ಲಿ ಡೈಪರ್ ಹಾಕಿಸಬೇಡ. ಹಾಕಿಸುವುದಿದ್ದರೆ ಎರಡು ಗಂಟೆಗೊಮ್ಮೆ ಬದಲಾಯಿಸಬೇಕು. ಅದು ಮುಗುವಿಗೇನಾದರೂ ಲೂಸ್ ಮೋಷನ್‌ನಂತಹ ಸಮಸ್ಯೆಯಿದ್ದಾಗ ಮಾತ್ರ ಸಾಕು.."
"ಹೂಂ " ಎಂದಳು ರೋಸಿ.. ಹೀಗೆ ತನಗೆ ಬೇಕಾದಂತೆ ಮಗುವನ್ನು ಸಲಹಲು ಆಸ್ಪದ ನೀಡದಿದ್ದಾಗ..
ಕೆಲವು ದಿನಗಳ ಬಳಿಕ "ಡಾಕ್ಟ್ರಮ್ಮಾ.. ನಾನು ಕೆಲಸ ಬಿಡುತ್ತೇನೆ. ನೀವು ಬೇರೆ ಯಾರನ್ನಾದರೂ ಹೇಳಿ." ಎಂದಳು. ಮಾನಸಾಳಿಗೂ ಅವಳಿಗೆ ತಿಳಿ ಹೇಳಿ ಸಾಕಾಗಿತ್ತು. ಬೇರೆಯವರನ್ನು ಹುಡುಕುವ ಕೆಲಸ ಶುರುಮಾಡಿದ್ದರು.

       ಹೀಗೆ ಸಿಕ್ಕಿದವಳು ಆಶಾ. ಮದುವೆಯಾಗದ ಹುಡುಗಿ. ಎರಡು ದಿನ ತಾವೇ ರಜೆ ಹಾಕಿ ಕುಳಿತು ಕೆಲಸ ಕಾರ್ಯಗಳ ರೂಪುರೇಷೆಯನ್ನು ತಿಳಿಸಿಕೊಟ್ಟರು ಮಾನಸಾ. "ನೋಡು ಹಗಲು ಜಾಸ್ತಿ ನಿದ್ದೆ ಮಾಡಿಸಬೇಡ.. ಆಟವಾಡಿಸುತ್ತಾ ಇರು... ಇಲ್ಲದಿದ್ದರೆ ರಾತ್ರಿ ನಿದ್ದೆ ಮಾಡಲ್ಲ.. ಎದೆಹಾಲು ಕುಡಿಯುತ್ತಲೇ ಇದ್ದರೆ ನಂಗೆ ಓರೆ ಮಲಗಿ ಬೆನ್ನುನೋವು, ಸೊಂಟನೋವು ವಕ್ಕರಿಸಿ ಬಿಡುತ್ತದೆ." ಎಲ್ಲದಕ್ಕೂ "ಆಯ್ತಮ್ಮಾ.."  ಎಂದು ಗೋಣಾಡಿಸುತ್ತಿದ್ದಳು ಆಶಾ.

       ಮಾನಸಾ ಡ್ಯೂಟಿಗೆ ಹೊರಟಾಗ "ಆಶಾ ಬೇಡ.. ಅಮ್ಮ ಬೇಕು.." ಆದರ್ಶನ ಚೀರಾಟ. ಅಕ್ಕಪಕ್ಕದವರಲ್ಲಿ ಕೆಲವರು ತಾಯಂದಿರು "ತಾಯಿ ಉದ್ಯೋಗಕ್ಕೆ ಹೋಗುವುದೆಂದರೆ ಎಂಥಾ ಸವಾಲು ನೋಡಿ" ಎನ್ನುತ್ತಿದ್ದರೆ ಇನ್ನು ಕೆಲವರು "ನಮ್ಮ ಪರಿಚಯದವರ ಮಕ್ಕಳೆಲ್ಲ ಅಮ್ಮ ಬಿಟ್ಟು ಹೋಗುವಾಗ ಇಷ್ಟೆಲ್ಲ ಅಳುತ್ತಿರಲಿಲ್ಲಪ್ಪಾ" ಎನ್ನುತ್ತಿದ್ದರು. ಹೀಗೆ ಒಮ್ಮೊಮ್ಮೆ ಅಳುತ್ತಿದ್ದಾಗ  ಬಟ್ಟೆಯನ್ನು ಹಿಡಿದೆಳೆದರೆ ಮಾನಸಾ ಕೈ ಮೇಲೆತ್ತಿ ನಾಲ್ಕೇಟು ರಪರಪನೆ ಕೊಡುತ್ತಿದ್ದುದೂ ಇದೆ.

         ಆಶಾ ಮಗುವನ್ನು ಆಟವಾಡಿಸುವ ನೆಪದಲ್ಲಿ ಮನೆಯಲ್ಲಿ ಟೀವಿ ನೋಡುತ್ತಾ ಕಾಲಕಳೆಯುತ್ತಾಳಾ ಎಂಬ ಸಂಶಯ ಮಾನಸಾಗೆ ನೆರೆಹೊರೆಯವರ ಮಾತಿನಿಂದ ಮೂಡಿತು.. ಒಂದು ದಿನ  ಸಮಯ ಬದಲಿಸಿ ಮನೆಗೆ ಬಂದಾಗ ಮಗು ಹಾಲ್‌ನಲ್ಲಿ ಆಟಿಕೆಗಳ  ಮಧ್ಯದಲ್ಲಿ ಬರಿ ನೆಲದಲ್ಲಿ ನಿದ್ದೆಹೋಗಿತ್ತು. ಆಶಾ ಸೋಫಾದಲ್ಲಿ ಓರೆ ಮಲಗಿ ಟೀವಿಯಲ್ಲಿ ಸಿನೆಮಾ ನೋಡುವುದರಲ್ಲಿ ಮಗ್ನಳಾಗಿದ್ದಳು. ಕಾಲಿಂಗ್ ಬೆಲ್ ಆದಾಗ ದಡಬಡಾಯಿಸಿದಳು. ಖಡಕ್ ಎಚ್ಚರಿಕೆ ನೀಡಿದರು ಡಾಕ್ಟರ್ ಮಾನಸಾ.
"ಸಾರಿ ಅಮ್ಮಾ.. ಇನ್ನೊಮ್ಮೆ ಇಂತಹಾ ತಪ್ಪಾಗಲ್ಲ.." ಅಂದು ಕೈಮುಗಿದಳು.
ಕೆಲವು ಸಮಯ ಎಲ್ಲವೂ ಸರಿಯಾಗಿತ್ತು.

ತಿಂಗಳ ಸಂಬಳ ಕೊಟ್ಟ ದಿನ ನೆರೆಹೊರೆಯವರಿಂದ ಫೋನ್.. "ಡಾಕ್ಟ್ರಮ್ಮಾ ಮಗು ಆಗಿಂದ ಅಳ್ತಿದೆ.. ಆಶಾ ಇಲ್ಲವಾ ಮನೆಯಲ್ಲಿ..?"
"ಇದ್ದಳಲ್ಲ.. ಬೆಳಗ್ಗೆ ನಾನು ಹೊರಡುವಾಗ.."
ಆಶಾಳಿಗೆ ಕರೆ ಮಾಡಿದರೆ ಫೋನ್ ಸ್ವಿಚ್ಡ್ ಆಫ್..
ಮನೆಕೆಲಸದ ನಿಂಗಮ್ಮ ಪಾತ್ರೆ ಬಟ್ಟೆ ನೆಲ ಶುಚಿಗೊಳಿಸಲೆಂದು ಬಂದಾಗ ಮನೆಯ ಚಿಲಕ ಹಾಕಿರಲಿಲ್ಲ.  ಮಗು ಬೆಡ್ ಮೇಲೆ ಬಾಯಿಗೆ ಬೆರಳು ಹಾಕಿ ಚೀಪುತ್ತಾ ಉಸಿರೆಳೆದು ಎಳೆದು ದುಃಖಿಸುತ್ತಾ ಮಲಗಿತ್ತು. ಅದನ್ನು ನೋಡಿದವರೇ, ಮಗುವನ್ನೆತ್ತಿ  ನೀರು ಕುಡಿಸಿ, ಮುಖ ತೊಳೆದು ಒರೆಸಿ, ಮುದ್ದು ಮಾಡಿ ಪಕ್ಕದ ಮನೆಗೆ ತೆರಳಿ ಡಾಕ್ಟ್ರಮ್ಮನಿಗೆ ಫೋನ್ ಮಾಡಲು ಹೇಳಿ ವಿಷಯ ತಿಳಿಸಿದರು. ಮಾನಸಾ ರಜೆ ಹಾಕಿ ಮನೆಗೆ ದೌಡಾಯಿಸಿದಳು. ಅತ್ತು ಅತ್ತು ನಿಸ್ತೇಜವಾಗಿದ್ದ ಮಗನ ಮುಖವನ್ನು ಕಂಡವಳಿಗೆ ದುಃಖ ಉಮ್ಮಳಿಸಿ ಬಂತು. ಮಗು ದೊಡ್ಡವನಾಗುವವರೆಗೆ ವೃತ್ತಿಯಿಂದ ವಿಮುಖಳಾಗುತ್ತೇನೆ. ಎಂದುಕೊಂಡಳು.

       ಕಿರಣ್ ಮಡದಿಯ ಮನವೊಲಿಸಿ  ಬೇರೆ ಆಯಾ ಸಿಗಬಹುದಾ ಎಂದು ಪ್ರಯತ್ನಿಸಿದರು. ಹೀಗೆ ಸಿಕ್ಕವರೇ ಸವಿತಾ. ಮಧ್ಯವಯಸ್ಸಿನವರು. ಮಾನಸಾ ಮಗನನ್ನು ಅವರ ಜವಾಬ್ದಾರಿಗೆ ಬಿಟ್ಟು ಹೋಗತೊಡಗಿದರು. ಆರಂಭದಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ವಿಶ್ವಾಸ ಮೂಡಿತ್ತು ಮನೆಯವರಿಗೆ. ಒಂದು ದಿನ ಮನೆಯಲ್ಲಿ ಮಗು ಎಲ್ಲದಕ್ಕೂ ಹೊಡೆಯುತ್ತಾ ಏನೇನೋ ಬೈಯುತ್ತಿದ್ದರೆ ಏಕೆ ಈ ತರಹ ಆಡುತ್ತಿದ್ದಾನೆ ಆದರ್ಶ? ಎಂದು ಚಿಂತಿಸಿದರು. ಸಣ್ಣದೊಂದು ಬೊಂಬೆಯನ್ನು ಹೊಡೆಯುತ್ತಾ ಅವನು ಹೇಳುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡವಳ ಮನಸು ಬೇಸರಗೊಂಡಿತು. "ಹೂಂ..ಅಮ್ಮ ಬಿತ್ತು ಓಗಿದ್ದಕ್ಕೆ  ಅತ್ತೀಯಾ.. ಹೂಂ..ಅಳು.. ಎಟ್ಟು ಅತ್ತೀಯಾ ಅಂತ ನೊತೀನಿ.. ಹಸಿವಾಗುವಲೆಗೆ ಅಳು.. 
ಹೂಂ.. ಏನು..ತಿನಲವಾ ನೀನು.. ನಿನಗೆ ಮೆಚಲವಾ....ದಿನಾನೂ ಹೊಟೇಲಿಂದು ಬೇಕಾ..
ಹಾಲು ಕುಡಿಯಲ್ಲ ಅಂತೀಯಾ..ಬೇಡ ಬಿಡು..ನಾನೇ ಕುದೀತಿನಿ.. "
(..ಅಮ್ಮ ಬಿಟ್ಟು ಹೋಗಿದ್ದಕ್ಕೆ  ಅಳುತ್ತೀಯಾ.. ಹೂಂ..ಅಳು.. ಎಷ್ಟು ಅಳುತ್ತೀಯಾ ಅಂತ ನೊಡ್ತೀನಿ.. ಹಸಿವಾಗುವವರೆಗೆ ಅಳು.. 
ಹೂಂ.. ಏನು..ತಿನ್ನಲವಾ ನೀನು.. ನಿನಗೆ ಮೆಚ್ಚಲ್ಲವಾ....ದಿನಾನೂ ಹೊಟೇಲಿಂದು ಬೇಕಾ..
ಹಾಲು ಕುಡಿಯಲ್ಲ ಅಂತೀಯಾ..ಬೇಡ ಬಿಡು..ನಾನೇ ಕುಡೀತಿನಿ.. ")

        ಸವಿತಾಳ ಮೇಲೆ ಸಂಶಯ ಬರತೊಡಗಿತು. ನಮ್ಮೆದುರಿಗೆ ಇಷ್ಟೆಲ್ಲಾ ಚೆನ್ನಾಗಿ ನೋಡಿಕೊಳ್ಳುವವಳು ಹಿಂದೆ ಹೀಗೆ ಮಾಡಿಯಾಳೇ.. ಕೊನೆಗೊಮ್ಮೆ ಮಗುವಿನ ಮೈಮೇಲೆ ಕೆಂಪನೆ ಬರೆ ಕಂಡಾಗ ಸಾಬೀತಾಗಿತ್ತು. ತಿಳಿಹೇಳಿದರೆ ತಾನು ಮಾಡಿದ್ದನ್ನು ಒಪ್ಪಿಕೊಳ್ಳದ ಅವಳನ್ನು ತಾವೇ ಕೆಲಸದಿಂದ ಬಿಡಿಸಿದರು.

       ಮೆಡಿಕಲ್ ಕಾಲೇಜಿನಲ್ಲಿ ಎಕ್ಸಾಂ ಮುಗಿದು ಒಂದು ತಿಂಗಳು ರಜೆಯಿದ್ದಾಗ ತಾನೇ ಮಗುವಿನ ದೇಖಿರೇಖಿಯನ್ನು ನೋಡಿದಳು ಮಾನಸಾ. ರಜೆ ಮುಗಿವಾಗ ಯಾರಾದರೂ ಪುನಃ ಬೇಕಿತ್ತು.  ಆಗ ಸಿಕ್ಕವಳು ಮೂವತ್ತರ ಆಸುಪಾಸಿನ ಮೂರು ಮಕ್ಕಳ ತಾಯಿ ರೇಖಾ.
ಆಕೆ ಆಯಾ ಅಲ್ಲದಿದ್ದರೂ ತನ್ನ ಮಕ್ಕಳನ್ನು ಬೆಳೆಸಿ ಗೊತ್ತಿದ್ದವಳು. ಉತ್ತರ ಕರ್ನಾಟಕದ ಕಡೆಯಿಂದ ಉದ್ಯೋಗವನ್ನರಸಿ ಪತಿ ಜೊತೆಗೆ ಈ ಊರಿಗೆ ಬಂದವಳು. ಆದರ್ಶನಿಗೆ ಆಗ ಎರಡು ವರ್ಷ ಆಗುತ್ತಾ ಬಂದಿತ್ತು. ಇನ್ನಾರು ತಿಂಗಳು ಕಳೆದರೆ ಮಾಂಟೆಸರಿಗೆ ಸೇರಿಸಬೇಕು ಎಂಬ ಪ್ಲಾನ್ ಮಾಡಿದ್ದ ವೈದ್ಯದಂಪತಿ ಅದಕ್ಕಾಗಿ ಶಿಸ್ತು ರೂಢಿಸುವ ಪ್ರಯತ್ನದಲ್ಲಿದ್ದರು. ಬೆಳಗ್ಗೆ ಇಷ್ಟು ಹೊತ್ತಿಗೆ ಏಳಲೇ ಬೇಕು. ತಿಂಡಿ ತಿಂದು ಒಂಭತ್ತು ಗಂಟೆಗೆ ಟಾಯ್ಲೆಟ್‌ಗೆ ಹೋಗಲೇಬೇಕು. ಟಾಯ್ಲೆಟ್ ಟ್ರೈನಿಂಗ್ ಕೊಡಬೇಕು. ತನ್ನ ಅಂಗಿ ಚಡ್ಡಿ ತಾನೇ ಹಾಕಿಕೊಳ್ಳಬೇಕು. ತಾನೇ ಊಟ ಮಾಡಬೇಕು. ಇದನ್ನೆಲ್ಲ ಕೇಳಿಸಿಕೊಂಡ ರೇಖಾಗೆ ಇದು ಸವಾಲಿನ ಕೆಲಸವೆನಿಸಿದರೂ ಸಿಗುವ ಸಂಬಳದ ಆಸೆಯಿಂದ ಒಪ್ಪಿಕೊಂಡಳು.

     ತಿಂಡಿ ಮಗುವೇ ತಿನ್ನದಿದ್ದರೆ ಆಟವಾಡಿಸುತ್ತಾ ಬಾಯಿಗೆ ಕೊಟ್ಟೇ ಬಿಡೋಣ ಅನಿಸಿ ತಿನಿಸುತ್ತಿದ್ದಳು. ಸಮಯಕ್ಕೆ ಸರಿಯಾಗಿ ಟಾಯ್ಲೆಟ್‌ಗೆ ಕರೆದುಕೊಂಡು ಹೋದಾಗ "ಊಂ..ಊಂ.. ಎಷ್ಟು ಶಕ್ತಿ ಹಾಕಿದರೂ ಬರೋದಿಲ್ಲ" ಎಂದು ಮಗು ಬೊಬ್ಬೆ ಹೊಡೆದಾಗ.. "ಮಗು ಪಾಪ ಅಲ್ವಾ.." ಬಂದಾಗ ಮಾಡುತ್ತೆ ಅಂತ ಅಂದುಕೊಂಡು "ಆಯ್ತು ಬಾ'' ಎಂದು ಕರೆದು ಚಡ್ಡಿ ಹಾಕಿಸಿ ಬಿಡೋಳು. ಊಟ ತಟ್ಟೆಯಲ್ಲಿ ಹಾಕಿಕೊಟ್ಟದ್ದನ್ನು ಆಚೀಚೆ ಬಿಕ್ಕಿ ಸರಿಯಾಗಿ ಹೊಟ್ಟೆ ತುಂಬದಿದ್ದಾಗ "ಪಾಪ ಮಗುವಿಗೆ ಹೊಟ್ಟೆ ತುಂಬಿಲ್ಲ.. ಒಂದು ನಾಲ್ಕೈದು ಕೈ ತುತ್ತಾದರೂ ಉಣಿಸುತ್ತೇನೆ.. ಮಗುವನ್ನು ಅರೆಹೊಟ್ಟೆಯಲ್ಲಿರಿಸಿ ನಾನು ಹೊಟ್ಟೆ ತುಂಬಾ ಉಂಡರೆ ಶಿವ ಮೆಚ್ಚಲಾರ" ಎಂದು ತನ್ನ ಕುಪ್ಪಸದಲ್ಲಿದ್ದ ಶಿವಲಿಂಗವನ್ನು ಮುಟ್ಟಿ ಶಿವ ಶಿವಾ ಅನ್ನೋಳು. ಮಗು ಬಹಳ ಬೇಗ ರೇಖಾಳನ್ನು ಹಚ್ಚಿಕೊಂಡಿತು. ರಾತ್ರಿ ಅಮ್ಮ ತಟ್ಟೆಗೆ ಬಡಿಸಿ "ಊಟ ಮಾಡು" ಅಂದರೆ "ರೇಖಾ ಆಂಟಿ ತಿನ್ನಿಸಬೇಕು"  ಅನ್ನುವುದು, ನಿದ್ದೆ ಮಾಡಬೇಕಾದರೆ "ನನಗೆ ರೇಖಾ ಆಂಟಿಯ ತರಹ ಜೋಲಿಯಲ್ಲಿ ಹಾಕಿ ಪದ್ಯ ಹೇಳಿ ತೂಗಬೇಕು" ಅನ್ನುವುದು, ಎಲ್ಲವೂ ತಾನು ಮಗುವಿಗೆ ರೂಢಿಸಬೇಕೆಂದಿದ್ದ ಶಿಸ್ತಿನ ನಿಯಮಗಳಿಗೆ ವಿರುದ್ಧವಾಗಿ ಕಂಡಿತು ಮಾನಸಾಗೆ.
ಆಗಾಗ ಎಚ್ಚರಿಸುತ್ತಿದ್ದಳು "ರೇಖಾ ಅತಿ ಮುದ್ದು ಮಾಡಬೇಡ ಮಗುವನ್ನು.."
"ನಂಗೆ ನನ್ನ್ ಮಕ್ಳು ಬೇರೆ ಅಲ್ರೀ.. ನಿಮ್ಮ್ ಮಗು ಬೇರೆ ಅಲ್ರೀ.. ನಮ್ ಮಗು ಹಠ ಮಾಡಿದ್ರ ನಾವು ಹಠ ಮಾಡ್ಬಾರ್ದ್ ರಿ.. ಮಕ್ಳು ದೇವರ್ ಸಮಾರೀ.... ಉಣ್ಣ್‌ಲಿಲ್ಲಾ ಅಂದ್ರ ಉಣಿಸ್‌ಬೇಕ್ರೀ.. ನಿದ್ದಿ ಮಾಡಿಲ್ಲ ಅಂದ್ರಾ ಜೋಲಿಯೊಳಗ ಹಾಕಿ ಲಾಲಿ ಹಾಡಬೇಕ್ರೀ.. ಅಮ್ಮಾರೇ.. ನಾನ್ ನಿಮ್ಮಷ್ಟೆಲ್ಲಾ.. ಓದ್ದೋಳಲ್ರೀ..ಆದರಾ ನಾವು ಎಲ್ಲಾದಕ್ಕೂ ಗದರೋದಾ ಅಭ್ಯಾಸ ಮಾಡಿದ್ರಾ.. ಅವರೂ ದೊಡ್ಡೋರಾದ ಮ್ಯಾಕೆ ಬರೀ ಸಿಡುಕು ಸ್ವಭಾವದವ್ರೇ ಆಗ್ತಾರ್ರೀ.." ಅಂದಳು ರೇಖಾ.

ಆವಳು ಹೇಳುವುದೇನೋ ಸರಿ.. ಆದರೆ ಮಗು ತನ್ನ ಕೆಲಸಗಳನ್ನು ಮಾಡಲು ಎರಡು ವರ್ಷದಿಂದಲೇ ಕಲಿಯುತ್ತೆ... ಕಲಿಸಬೇಕು.. ಎಲ್ಲವನ್ನೂ ನಾವೇ ಮಾಡಿಕೊಡಬಾರದು ಎಂಬುದು ಮಕ್ಕಳತಜ್ಞೆಯಾದ ಮಾನಸಾಳ ವಾದ. ಆದರೆ ರೇಖಾಗೆ ಕರುಣೆ ಜಾಸ್ತಿ. ಹಠಮಾರಿಯಾದ ಆದರ್ಶನಲ್ಲಿ ಬಹಳವೇ ಜಾಣ್ಮೆಯಿಂದ ವರ್ತಿಸಬೇಕಾಗುತ್ತಿತ್ತು.

ಡಾಕ್ಟ್ರಮ್ಮನ ಶಿಸ್ತು, ಆದರ್ಶನ ಹಠ ಎರಡರಿಂದಲೂ ಬೇಸತ್ತು "ಮುಂದಿನ ತಿಂಗಳಿಂದ ನಾನು ಬರಲ್ಲಮ್ಮಾ..ಊರ ಕಡೆಗೆ ಹೋಗ್ತೀನಿ" ಎಂದಳು. ರೇಖಾ ಬರುವುದನ್ನು ನಿಲ್ಲಿಸಿದಾಗ ಬಹಳವೇ ಬೇಸರಗೊಂಡಿದ್ದ ಆದರ್ಶ ಸಹಜಸ್ಥಿತಿಗೆ ಬರಲು ತಿಂಗಳೇ ಬೇಕಾಗಿತ್ತು. ಅವಳ ಪ್ರೀತಿಯನ್ನು ಬಹಳವೇ ಹಚ್ಚಿಕೊಂಡಿದ್ದ ಆದರ್ಶ.

        ಹೀಗೆ ವರ್ಷ ನಾಲ್ಕು ಕಳೆವಾಗ ಆತ ಹತ್ತಾರು ಆಯಾಗಳ ಕೈಯಲ್ಲಿ ಬೆಳೆದಿದ್ದ. ಎಳೆಯ ಮಕ್ಕಳನ್ನು ಯಾರಾದರೂ ಮುದ್ದು ಮಾಡುವುದನ್ನು ಕಂಡರೆ ರೋಷವುಕ್ಕುತ್ತಿತ್ತು ಅವನಲ್ಲಿ. ನನಗೆ ಸಿಕ್ಕಿಲ್ಲ ಇಂತಹಾ ಮುದ್ದು, ಪ್ರೀತಿ ಎಂಬ ಸಣ್ಣ ಅಸೂಯೆ. ಜೊತೆಗೆ ಕೆಲವು ಆಯಾಗಳಿಂದ ಅವನ ಹಠ, ಅಳುವಿಗೆ ಪ್ರತಿಯಾಗಿ ಸಿಗುತ್ತಿದ್ದ ಏಟುಗಳು ಆವನ ಮುಗ್ಧತೆಯನ್ನೇ ಕಸಿದಿದ್ದವು. ಪರಿಣಾಮವಾಗಿ ವರ್ಧನನನ್ನು ಎಲ್ಲಾ ಮಕ್ಕಳು ಮುದ್ದು ಮಾಡುತ್ತಿದ್ದರೆ, ಆದರ್ಶ ಮಾತ್ರ ಮುಷ್ಟಿ ಹಿಡಿದು ಗುದ್ದಿ ದೂಡಿ ಹಾಕಿ ಖುಷಿಪಡುತ್ತಿದ್ದ. ಆಗಷ್ಟೇ ನಡೆಯಲು ಕಲಿತಿದ್ದ ಚುರುಕಿನಿಂದ ಓಡಾಡುತ್ತಿದ್ದ ವರ್ಧನನಿಗೆ ಅದರ ಪರಿವೆಯೇ ಇರಲಿಲ್ಲ.

                         *******

       ಈಗ ವರ್ಧನನಿಗೆ ಹನ್ನೊಂದನೇ ವರ್ಷ. "ಅಮ್ಮಾ ಅಕ್ಕನಂತೆ ನನಗೆ ಸರಾಗವಾಗಿ ಓದಲಾಗುತ್ತಿಲ್ಲ, ಶಬ್ದಗಳನ್ನು ಗುರುತಿಸಿದರೂ ಓದಲು ನಾಲಿಗೆ ಬೇಕಾದಂತೆ ತಿರುಗುತ್ತಿಲ್ಲ.. ಅಮ್ಮಾ.. ಶಾಲೆಯಲ್ಲಿ ಎಲ್ಲರೂ ನನ್ನನ್ನು ಅಪಹಾಸ್ಯ ಮಾಡುತ್ತಿದ್ದಾರೆ..
ಅಮ್ಮಾ.. ಮಿಸ್ ಹೇಳಿದ್ದಾರೆ.. ಬಾದಾಮಿ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ತಿಂದರೆ ನೆನಪು ಶಕ್ತಿ ಹೆಚ್ಚುತ್ತಂತೆ, ಅಜ್ಜಿ ಹೇಳಿದಂತೆ ಬಜೆ ಬೇರನ್ನು ಅರೆದು ಕೊಡಮ್ಮಾ.. ನಾಲಿಗೆ ತಿರುಚಲು. ನನ್ನನ್ನು ಸ್ಪೀಚ್ ಆಂಡ್ ಹಿಯರಿಂಗ್ ತಜ್ಞರು ನಡೆಸುವ ಕ್ಲಾಸಿಗೆ ಕರೆದೊಯ್ಯಮ್ಮಾ.. ನಾನು ಎಲ್ಲರಂತೆಯೇ ಪಟಪಟನೆ ಮಾತನಾಡಬೇಕು.. ಪ್ಲೀಸ್ ಏನಾದರೂ ಮಾಡು.." ಎಂದು ಗೋಗರೆವಾಗ..
ಛೇ.. ಅಂದು ಆ ಕಾರ್ಯಕ್ರಮಕ್ಕೆ ಗೈರುಹಾಜರಾದರೂ ಏನೂ ನಷ್ಟವಾಗುತ್ತಿರಲಿಲ್ಲ.. ಎಂದು ಹನಿಗಣ್ಣಾಗುತ್ತಾಳೆ ವಸುಧಾ.

✍️... ಅನಿತಾ ಜಿ.ಕೆ.ಭಟ್.
26-11-2021.

#ಸ್ವಸ್ಥಬಾಲ್ಯ- ಪ್ರತಿಲಿಪಿ ಕನ್ನಡವು 2021ರ ನವೆಂಬರ್ ತಿಂಗಳಲ್ಲಿ ಏರ್ಪಡಿಸಿದ  ಸ್ಪರ್ಧೆಗಾಗಿ..

No comments:

Post a Comment