Tuesday, 30 August 2022

ಜೋ ಜೋ ಗಣಪ




ಜೋಜೋ ಗಣಪ ಜೋಜೋ ಬೆನಕ

ಜೋಜೋ ಗೌರೀಸುತ ಜೋಜೋ ಸುಮುಖ||ಪ||

ಚೌತಿಯು ಬಂದಿದೆ ಸಂಭ್ರಮ ತುಂಬಿದೆ
ನಾಳೆಯ ದಿನ ಭೂಲೋಕದಲಿ
ಹೊರಡುವ ಮೊದಲೇ ಕಣ್ಣತುಂಬಾ ನಿದ್ದೆಯ ಮಾಡು ಚಂದದಲಿ||೧||

ದೂರದ ದಾರಿ ಪುಟ್ಟದು ವಾಹನ
ಕಷ್ಟವು ಡೊಳ್ಹೊಟ್ಟೆ ಸವಾರಿ
ಭಕ್ತರನೆಲ್ಲ ಅನುಗ್ರಹಿಸುವ ನೆಪದಲಿ
ಬೇಗನೆ ಮಲಗು ಚಿನ್ನಾರಿ||೨||

ಬಾಲಗಣಪನ ಲೀಲೆಯ ಮೆಚ್ಚುತ
ಶಿವೆಯು ಲಾಲಿಯ ಹಾಡಿಹಳು
ತಪ್ಪಿಗೆ ಮರುಗಿದ ಹರನೂ ಕೂಡಾ
ಸುತನನು ಹರಸಿಹನು||೩||

ಉಮಾಶಿವರೀರ್ವರ ಕರಗಳೆ ತೊಟ್ಟಿಲು
ಪುಟ್ಟ ಗಜಾನನ ವಿನಾಯಕಗೆ
ಮೂಷಿಕವಾಹನ ಕಾಯುತಲಿಹನು
ಭೂಲೋಕದ ಸವಾರಿಗೆ||೪||

ಉಂಡೆಚಕ್ಕುಲಿ ಮೋದಕ ಕಡುಬು
ಪಂಚಕಜ್ಜಾಯ ಲಾಡು
ಮಾಡುತಲಿಹರು ಕಾಯುತ ನಿನ್ನ
ಸುಖನಿದ್ದೆಯನು ಮಾಡು||೫||

ನಾಳೆಯ ದಿನವು ಬೇಗನೇ ಎದ್ದು
ಭಕುತರ ಹರಸಪ್ಪಾ
ಇಳೆಯೊಳು ಸಕಲರು ಸೌಖ್ಯದಲಿರಲು
ವಿಘ್ನಗಳೆಲ್ಲವ ಕಳೆಯಪ್ಪಾ||೬||

ಜೋಜೋ ಗಣಪ ಜೋಜೋ ಬೆನಕ
ಜೋಜೋ ಗೌರೀಸುತ ಜೋಜೋ ಸುಮುಖ||

✍️... ಅನಿತಾ ಜಿ.ಕೆ.ಭಟ್
30-08-2022.

ನಮಿಪೆ ಗೌರಿ





#ನಮಿಪೆ ಗೌರಿ

ನಮಿಪೆನು ಗೌರಿ ಹರನ ಸಿಂಗಾರಿ
ಸುಮನಸೆ ಶಂಕರಿ ಗಿರಿಜೆ ಮನೋಹರಿ||ಪ||

ಸಕಲಾಭರಣೆ ಚಂದಿರವದನಳ
ಕಲಶಕನ್ನಡಿ ಪಿಡಿದು ಎದುರುಗೊಳ್ಳುತ||೧||

ಪರಾಶಕ್ತಿರೂಪಿಣಿ ರಜತಗಿರಿವಾಸಳ
ಮಂಗಳದ್ರವ್ಯಗಳಿಂದ ಅಲಂಕರಿಸುತ||೨||

ಮಂದಹಾಸಿನಿ ಮಂಗಳಮಯಳ
ಸಿಂಧೂರ ಸುಮಗಳಿಂದ ಅರ್ಚಿಸುತ||೩||

ಇಂದುಧರನರಸಿ ನಿತ್ಯಸಂತುಷ್ಟೆಯ
ಫಲತಾಂಬೂಲ ನೈವೇದ್ಯಗಳ ಅರ್ಪಿಸುತ||೪||

ಜಯ ಸಿರಿಗೌರಿ ಜಯ ಸ್ವರ್ಣಗೌರಿ
ಒಳಿತನುಬೇಡುವೆ ಮಂಗಳಾರತಿ ಬೆಳಗುತ||೫||

✍️... ಅನಿತಾ ಜಿ.ಕೆ. ಭಟ್
30-08-2022.
#ಗೌರಿಹಬ್ಬದ ಹಾರ್ದಿಕ ಶುಭಾಶಯಗಳು. 💐
#ದೈನಿಕವಿಷಯ- ತಾಯಿ ಸಿರಿಗೌರಿ



Friday, 13 May 2022

ಹರಿದ ಪ್ಯಾಂಟ್- ಫ್ಯಾಷನ್ ಮತ್ತು ಅನಿರೀಕ್ಷಿತ ಬೆಳವಣಿಗೆ



       ಕೆಲವು ವಿಚಾರಗಳು ಮನದೊಳಗೆ ಸದಾ ಚಿಂತನ- ಮಂಥನವನ್ನು ಹುಟ್ಟು ಹಾಕುತ್ತಲೇ ಇರುತ್ತವೆ. ನಿರ್ದಿಷ್ಟವಾದ ಉತ್ತರವನ್ನು ಹುಡುಕುವಲ್ಲಿ ಸಫಲರಾಗುವುದಿಲ್ಲ, ಅಥವಾ ದೊರೆತ ಉತ್ತರದಿಂದ ತೃಪ್ತರಾಗುವುದಿಲ್ಲ. ಇಂದು ಮಕ್ಕಳ ಬಟ್ಟೆಗಳನ್ನಿಡುವ ವಾರ್ಡ್‌ರೋಬ್ ಶುಚಿಗೊಳಿಸುವಾಗ ಕಂಡ ಬಟ್ಟೆಯೊಂದು ನೆನಪಿನ ಎಳೆಯೊಂದನ್ನು ಬಿಚ್ಚಿಟ್ಟಿದೆ. ಮುಂದಿನ ಶೈಕ್ಷಣಿಕ ವರ್ಷದ ಯೂನಿಫಾರಂ ಬಟ್ಟೆಗಳನ್ನು ಜೋಡಿಸಲು ಹಳೆಯ ಬಟ್ಟೆಗಳ ವಿಲೇವಾರಿ ಆಗಲೇಬೇಕು. ಮುಂದಿನ ವರ್ಷ ಉಪಯೋಗ ಆಗಬಲ್ಲ ಮತ್ತು ಆಗದಂತಹ ಬಟ್ಟೆಗಳ ವಿಂಗಡನೆ ಮಾಡಿ,  ಸಮರ್ಪಕವಾದ ಜಾಗದಲ್ಲಿ ಮರುಜೋಡಿಸಬೇಕು. ಇಂತಹ ಸಂದರ್ಭದಲ್ಲಿ ನನಗೆ ಕಂಡಿದ್ದೇ ಆ ಹರಿದ ಪ್ಯಾಂಟ್.

    ಒಂದು ದಿನ ಸಂಜೆ ದೊಡ್ಡ ಮಗ ಮನೆಗೆ ಬರುವಾಗ ದೂರದಿಂದಲೇ ಗಮನಿಸುತ್ತಿದ್ದೆ. ಟವೆಲ್ ನಿಂದ ತೊಡೆಯ ಭಾಗ ಮುಚ್ಚಿಕೊಂಡು ಬರುತ್ತಿರುವಂತೆ ತೋರಿತು. ಸುಮ್ಮನೇ ಟವೆಲ್ ಕೈಯಲ್ಲಿ ಹಿಡಿದು ಏನೋ ಆಟವಾಡುತ್ತಾ  ಬರುವುದು ಆಗಿರಬಹುದೆಂದು ಭಾವಿಸಿದೆ. ಗೇಟ್ ತೆಗೆದು ಒಳಬರುತ್ತಿದ್ದಂತೆ ನಿಜವಾಗಿಯೂ ಮುಚ್ಚಿಕೊಂಡು ಬರುತ್ತಿರುವುದು ಎಂದರಿವಾಗಿ ಕುತೂಹಲ ಹೆಚ್ಚಾಯಿತು. ಬಂದವನೇ ಜಗಲಿಯಲ್ಲಿ ಪೆಚ್ಚಾಗಿ ಕುಳಿತು, "ಅಮ್ಮಾ ನನ್ನ ಪ್ಯಾಂಟ್ ಹರಿದಿದೆ.." ಅಂದ. "ಈ ವರ್ಷ ಹೊಲಿಸಿದ ಪ್ಯಾಂಟ್.. ಇಷ್ಟು ಬೇಗ ಹರಿಯುವುದಾದರೂ ಹೇಗೆ..?"ಎಂದು ನಾನೂ ಆಶ್ಚರ್ಯದಿಂದಲೇ ಕೇಳಿದೆ. ಸಣ್ಣಮಗ,  "ಅದಕ್ಕೆ ನಿಂಗೆ ನಾಚಿಕೆಯಾಯಿತಾ... ಮುಚ್ಚಿಕೊಂಡು ಬಂದಿರುವುದು ಕಂಡಿತು" ಎಂದು ರೇಗಿಸಲಾರಂಭಿಸಿದ. "ತೊಡೆಯ ಭಾಗ ಸುಮಾರು ಮೂರೂವರೆ ಇಂಚಿನಷ್ಟು ಹರಿದು ಬಲು ಮುಜುಗರವಾಯಿತು. ಸೇಫ್ಟಿ ಪಿನ್ ಇರಲೂ ಇಲ್ಲ.." ಎಂದು ಅಲವತ್ತುಕೊಂಡ. ತಕ್ಷಣವೇ.. ಸಣ್ಣ ಮಗ "ಹರಿದ ಪ್ಯಾಂಟ್ ಈಗ ಫ್ಯಾಷನ್..! ನಿಂಗೆ ಗೊತ್ತಿಲ್ವಾ..? ಹರಿದ ಪ್ಯಾಂಟ್ ಹಾಕಿಕೊಂಡು ಸ್ಟೈಲಾಗಿ ಎದೆಯೆತ್ತಿ ನಡೆಯಬೇಕು" ಎಂದು ಕ್ಯಾಟ್ ವಾಕ್ ಮಾಡಿ ತೋರಿಸಿದಾಗ,  ನನಗೆ ನಗೆ ಬಂದರೂ ತೋರಿಸುವಂತಿರಲಿಲ್ಲ. ನಕ್ಕರೆ ದೊಡ್ಡವನಿಗೆ ಮತ್ತಷ್ಟು ಬೇಸರವಾದೀತೆಂದು ಗಂಭೀರವಾಗಿಯೇ ಇದ್ದೆ.

       ಸಣ್ಣವನ ಮಾತೂ ನಿಜ. ಇಂದಿನ ಯುವಜನತೆ ಫ್ಯಾಷನ್ ಹೆಸರಿನಲ್ಲಿ ಹರಿದ ಜೀನ್ಸ್ ಪ್ಯಾಂಟ್ ಧರಿಸುವುದು ಸಾಮಾನ್ಯ. ಹಳೆಯ ಜೀನ್ಸ್ ಪ್ಯಾಂಟ್ ಗಳನ್ನು ಅವರವರ ಸ್ಟೈಲ್ ಸ್ಟೇಟ್‌ಮೆಂಟ್ ಗೆ ತಕ್ಕಂತೆ ಕತ್ತರಿಸಿ ತೊಟ್ಟು, ಸ್ವಲ್ಪವೂ ಮುಜುಗರ, ನಾಚಿಕೆ ಪಡದೆ ಓಡಾಡಿದರೆ ಇಂದು ಬೋಲ್ಡ್, ಧೈರ್ಯ ಶಾಲಿ ಎಂದೇ ಲೆಕ್ಕ. ರಿಪ್ಡ್ ಜೀನ್ಸ್ ಎಂಬ ಹೆಸರಿನಿಂದ ಕರೆಯಲ್ಪಡುವ ಇಂತಹಾ ಉಡುಗೆಗಳನ್ನು ತೊಡುವವರಿಗೆ ಆತ್ಮವಿಶ್ವಾಸ ಹೆಚ್ಚು ಎಂದು ಯುವಜನತೆಯ ಅಭಿಪ್ರಾಯ. ಸುತ್ತುಮುತ್ತಲಿನ ಜನರ ಗಮನಸೆಳೆಯುವ ಇಂತಹ ಉಡುಪುಗಳನ್ನು ಧರಿಸಿದವರು, ಯಾರು ನೋಡಲಿ ಬಿಡಲಿ ನನಗೇನು? ನಾನು, ನನ್ನಿಷ್ಟ, ನನ್ನಿಚ್ಛೆಯಂತಹ ಬಟ್ಟೆ ತೊಡುವ ಸ್ವಾತಂತ್ರ್ಯ ನನಗಿದೆ ಎಂದು ನಿರ್ಭಿಡೆಯಿಂದ ಹೆಜ್ಜೆ ಹಾಕುತ್ತಾರೆ. ಕೈಯಲ್ಲೊಂದು ಮೊಬೈಲ್ ಹಿಡಿದು ಸುತ್ತಲಿನವರ ನೋಟಕ್ಕೆ ಗಮನ ಕೊಡುವ ಗೋಜಿಗೇ ಹೋಗುವುದಿಲ್ಲ.

      ಮೊದಲೆಲ್ಲಾ ಮೈ ಮುಚ್ಚುವಂತಹ ಬಟ್ಟೆ, ಹೊಸ ಬಟ್ಟೆ  ಧರಿಸಿದರೆ ಸಿರಿವಂತರು ಎಂದು ಲೆಕ್ಕ. ಈಗ ಹಳೆಯ ಪ್ಯಾಂಟ್‌ನ್ನು ಹರಿದು  ಅಥವಾ ಅಲ್ಲಲ್ಲಿ ಹರಿಯಲ್ಪಟ್ಟ ಡಿಸೈನ್ ನ ಪ್ಯಾಂಟ್ ಖರೀದಿಸಿ, ಅದನ್ನು ತೊಟ್ಟು ಅರೆಬರೆ ಮೈ ಪ್ರದರ್ಶನ ಮಾಡಿದರೆ ಅದು ಸಿರಿವಂತಿಕೆಯ ದ್ಯೋತಕ. ಯುವಜನತೆಯ ಟ್ರೆಂಡ್ ಫ್ಯಾಷನ್ ಇದು. ತಪ್ಪೆಂದೇ ಹೇಳಲೂ ಸಾಧ್ಯವಿಲ್ಲ. ನೋಡುವವರ ದೃಷ್ಟಿಕೋನ ಸರಿಯಿದ್ದರೆ ಯಾವುದೇ ತಾಪತ್ರಯಗಳು ಇರಲಾರವು.

      ಆದರೆ ಫ್ಯಾಷನ್ ಎಂದು ಧರಿಸಿಕೊಂಡಾಗ ಸಮಾಜವನ್ನು ಎದುರಿಸುವುದಕ್ಕೂ, ಮೈ ಮುಚ್ಚುವಂತೆ ಬಟ್ಟೆ ತೊಡಬೇಕೆಂದು ಬಯಸುವವರ ಪ್ಯಾಂಟ್ ಅಕಸ್ಮಾತ್ ಹರಿದಾಗ, ಅದೇ ಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆಯ ಮೂಲಕ ಮನೆಗೆ ತಲುಪಬೇಕಾದಾಗ ಆಗುವ ಸಂಕೋಚಕ್ಕೂ ವ್ಯತ್ಯಾಸವಿದೆ. ಮಗನಿಗೆ ಎದುರಾದದ್ದು ಎರಡನೆಯ ಪರಿಸ್ಥಿತಿ.

     ಶಾಲೆಯಲ್ಲಿ ಗಮನವಿಟ್ಟು ಪಾಠ ಕೇಳುವವರೊಂದಿಗೆ, ಪಾಠ ಕೇಳಲು ಇಷ್ಟವಿಲ್ಲದೆ, ಕೇಳಿಸಿಕೊಳ್ಳುತ್ತಿರುವಂತೆ ನಟಿಸಿ, ಕೈಯಲ್ಲಿ ಬೇರೆಯೇ ಕೆಲಸ ಮಾಡುವವರಿರುತ್ತಾರೆ. ಆಗ ತರಗತಿ ನಡೆಯುತ್ತಿತ್ತು. ತರಗತಿಯಲ್ಲಿ ಸುಮ್ಮನೆ ಕುಳಿತು ಕೇಳಲು ಬೋರು ಬೋರು.. ಎನ್ನುವ ತಂಟೆ ಹುಡುಗನೊಬ್ಬ ಪಕ್ಕವೇ ಕುಳಿತಿದ್ದ. ಕ್ರಾಫ್ಟ್  ಮಾಡಲೆಂದು ಕಟ್ ಬ್ಲೇಡ್ ಶಾಲೆಗೆ ತಂದಿದ್ದ. ಅದನ್ನು ಕೈಯಲ್ಲಿ ಹಿಡಿದು ಡೆಸ್ಕಿನೊಳಗೆ ಅಲ್ಲಿ ಇಲ್ಲಿ ಕೊಯ್ಯುತ್ತಿದ್ದ. ಒಂದೆರಡು ಬಾರಿ ತನ್ನದೇ ಪ್ಯಾಂಟಿಗೆ ತೊಡೆಯ ಭಾಗಕ್ಕೆ ಗೀರಿದ. ಏನೂ ಆಗಲಿಲ್ಲ. ಏನೂ ಆಗುವುದಿಲ್ಲ ನೋಡು ಎಂದು ಪಾಠ ಕೇಳುತ್ತಿದ್ದವನ ಗಮನ ಸೆಳೆದು, ಬೇಡಬೇಡವೆಂದು ಪಿಸುಗುಟ್ಟಿದರೂ ಕೇಳದೆ ಗೀರಿದ. ಪ್ಯಾಂಟ್ ಹರಿಯಿತು..!! ಅಷ್ಟೇ ಆಗಿದ್ದು.. ದೇವರ ದಯೆಯಿಂದ ಚರ್ಮ ಹರಿಯಲಿಲ್ಲ. ಆಮೇಲೆ ನಿನ್ನ ಪ್ಯಾಂಟ್ ಮೆಟೀರಿಯಲ್ ಒಳ್ಳೆಯದಿರಲಿಲ್ಲ ಎಂಬ ಸಮಜಾಯಿಷಿ..!
ಇತ್ತ ಅಧ್ಯಾಪಕರಲ್ಲೂ ಹೇಳಲಾಗದೆ, ಹಾಗೆಯೂ ಇರಲಾಗದೇ ಟವೆಲ್ ಮುಚ್ಚಿಕೊಂಡು ಆಟದ ಅವಧಿಯಲ್ಲಿ ಆಟವಾಡಲೂ ಆಗದೇ ಚಡಪಡಿಸಿದ.  ಸಹಪಾಠಿ ಹುಡುಗಿಯರ ಬಳಿ ಸೇಫ್ಟಿ ಪಿನ್ ಕೇಳಬಹುದಿತ್ತಲ್ಲಾ.. ಎಂದರೆ ಅದಕ್ಕೂ ಸಂಕೋಚವೆಂಬ ಅಡ್ಡಗೋಡೆ. ಅಂತೂ ಟವೆಲ್ ಮುಚ್ಚಿಕೊಂಡು ಮನೆಗೆ ತಲುಪಿದ.

     ಫ್ಯಾಷನ್ ಸ್ಟೇಟ್ ‌ಮೆಂಟ್‌ಗೆ ಒಡ್ಡಿಕೊಂಡು ಹರಿದ ಪ್ಯಾಂಟನ್ನು ಆಯ್ದು ಧರಿಸುವುದಕ್ಕೆ ಮನಸ್ಸು ಮೊದಲೇ ಸಿದ್ಧಗೊಂಡಿರುತ್ತದೆ. ಅನಿರೀಕ್ಷಿತವಾಗಿ ಹರಿದು ಹೋಗುವಾಗ  ಕಸಿವಿಸಿಯ ಅನುಭವ. ಸಾಮಾಜಿಕ ಶಿಸ್ತಿಗೆ ಅನುಗುಣವಾಗಿ ನಮ್ಮ ಉಡುಗೆ ತೊಡುಗೆ ಇರಬೇಕೆಂದು ಬಯಸುವವರು, ಎಳವೆಯಿಂದಲೇ ಫ್ಯಾಷನನ್ನು ಸ್ವಲ್ಪ ಪಕ್ಕಕ್ಕಿಟ್ಟು ಗೌರವಯುತವಾದ ಉಡುಪುಗಳನ್ನು ಧರಿಸುವ ಅಭ್ಯಾಸದಲ್ಲೇ ಬೆಳೆದು ಬಂದವರಿಗೆ ಇಂತಹಾ ಸಂದರ್ಭದಲ್ಲಿ ಮುಜುಗರವಾಗುವುದು ಸಹಜ. ಯಾರೇನೇ ಅನ್ನಲಿ, ತಮಾಷೆ ಮಾಡಲಿ ನಾನು ಎದೆಯೆತ್ತಿ ನಡೆಯುತ್ತೇನೆ ಎಂಬ ಸ್ಪಷ್ಟ ನಿಲುವಿನ ನಿರ್ಭಿಡೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಅಷ್ಟೇನೂ ಸುಲಭವಲ್ಲ.

     ಈ ಘಟನೆಯಿಂದಾಗಿ ನಾನು ಇಬ್ಬರು ಮಕ್ಕಳ ಬ್ಯಾಗಿನಲ್ಲೂ ಸೇಫ್ಟಿ ಪಿನ್ ಇರಿಸುವ ಅಭ್ಯಾಸ ರೂಢಿಸಿಬಿಟ್ಟಿದ್ದೇನೆ. ಅನಿವಾರ್ಯತೆ ಎದುರಾದಾಗ ಉಪಯೋಗಕ್ಕಿರಲಿ ಎಂದು. ಸಣ್ಣ ಮಗ ಒಮ್ಮೆ ಕುಳಿತಲ್ಲಿಂದ ಏಳುವಾಗ ಡೆಸ್ಕ್ ನ ಆಣಿ (ನೈಲ್)ಸಿಕ್ಕಿ ಅಂಗಿ ಹರಿದಾಗ, ಸೇಫ್ಟಿ ಪಿನ್ ಹಾಕಿ ಸಂಕೋಚವಿಲ್ಲದೆ ಮನೆ ತಲುಪಿದ್ದ.

     ನಮ್ಮ ಬಾಲ್ಯದ ದಿನಗಳಲ್ಲಿ ಮನೆಯ ಹತ್ತಿರದಲ್ಲೇ ಇರುವ ಶಾಲೆಗಳಿಗೆ ಹೋಗುವ ಕ್ರಮವಿದ್ದುದು. ಹಳ್ಳಿಯ ಗದ್ದೆಯ ಬದು, ಗುಡ್ಡದ ದಾರಿಯಲ್ಲಿ ನಡೆದೇ ಹೋಗುವ ಸಂದರ್ಭದಲ್ಲಿ ಉಡುಗೆ ಹರಿದರೆ ಗಮನಿಸುವವರು ಯಾರೂ ಇರಲಿಲ್ಲ. ಆದರೆ ಈಗ ಹಾಗಲ್ಲ.. ದೂರದ ಶಾಲೆಗಳಿಗೆ ಹೋಗುವ ಮಕ್ಕಳು. ಶಾಲಾವಾಹನಗಳು ಮನೆಯ ಸಮೀಪದ ವರೆಗೆ ಬಂದರೆ ಅನುಕೂಲ. ಇಲ್ಲವೆಂದರೆ ಹತ್ತಾರು ಜನರ ನಡುವೆ ಸಾಗಬೇಕು. ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ ವಿದ್ಯಾರ್ಥಿಗಳಿಗೆ ಇಂತಹಾ ಸನ್ನಿವೇಶಗಳು ಬಹಳ ಪೇಚಾಟಕ್ಕೆ ಸಿಲುಕಿಸಬಲ್ಲವು. ಆದ್ದರಿಂದ ಮಾಸ್ಕ್, ಟವೆಲ್‌ನಂತೆ ಸೇಫ್ಟಿ ಪಿನ್‌ಗಳೂ ಸಹಾ ವಿದ್ಯಾರ್ಥಿಗಳ ಶಾಲಾ ಬ್ಯಾಗಿನಲ್ಲಿದ್ದರೆ ಉಪಯೋಗ ಆಗಬಲ್ಲದು.

     ಹರಿದ, ಹಳೆಯ ಪ್ಯಾಂಟುಗಳು, ಅಂಗಿಗಳು ತಮ್ಮ ಡ್ಯೂಟಿ ಮುಗಿಸಿ, ಗೋಣಿ ಚೀಲದೊಳಗೆ ಸೇರಿಕೊಂಡವು. ಹ್ಯಾಂಗರುಗಳು ಹೊಸ ಯೂನಿಫಾರಂಗಾಗಿ ಕಾಯುತ್ತಾ ಕುಳಿತಿವೆ.

✍️... ಅನಿತಾ ಜಿ.ಕೆ.ಭಟ್.
18-04-2022.
#ಪ್ರತಿಲಿಪಿ ಕನ್ನಡದ "ಡೈರಿ- 2022" ಏಪ್ರಿಲ್ ತಿಂಗಳ ಸ್ಪರ್ಧಾ ಬರಹ.

#ಈ ಡೈರಿಯ ಪುಟವನ್ನು ಪ್ರಥಮ ಬಹುಮಾನಕ್ಕೆ ಪರಿಗಣಿಸಿದ ಪ್ರತಿಲಿಪಿ ಕನ್ನಡದ ನಿರ್ವಾಹಕರಿಗೆ ಹಾಗೂ ನಿರ್ಣಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏






Sunday, 27 March 2022

ಗಾಂಧಾರಿ ಮೆಣಸು

 




#ಗಾಂಧಾರಿ ಮೆಣಸು

ತರತರದ ಮೆಣಸುಗಳ ಮೆಚ್ಚುತಲಿ
ಸವಿಯುತಲಿ ನನ್ನನೆಂದೂ ಮರೆಯದಿರಿ
ಖಾರದಿ ಸುಂಯ್ಯೆನುತ ಪರಿಮಳದಿ ಘಮ್ಮೆನಲು
ಯಾವಡುಗೆಗೂ ಸೈ ನಾನೇ ಗಾಂಧಾರಿ||೧||

ಕರಾವಳಿಯ ತೀರ ಮಲೆನಾಡ ಮಣ್ಣಿನಲಿ
ನಾನಿದ್ದರೇ ರುಚಿಯು ಗೊಜ್ಜುಸಾರು
ಜೀರಿಗೆ ಮೆಣಸು ಸೂಜಿ ಮೆಣಸು ಕಕ್ಕೆ
ಮುನ್ಚಿ ಹೀಗೆನಗಿಹುದು ಹಲವು ಹೆಸರು||೨||

ವಿಷವನುಣ್ಣುತ ಬೆಳೆದ ಹಲವು ತಳಿಗಳ
ಮೆಣಸು ಕಣ್ಣಿಗಷ್ಟೇ ಬರಿ ಅಂದ ಚಂದ
ಔಷಧಿಯೆ ಆಗುವೆನು ಎಲ್ಲೆಲ್ಲೂ ಬೆಳೆಯುವೆನು
ಸಣ್ಣಗಾತ್ರದಿ ಹೊಳೆವೆ ಪಚ್ಚೆಕೆಂಪಿನಿಂದ||೩||

ನಾಲಿಗೆಗೆ ಕಟುವಾದ ರುಚಿಯನ್ನು ತೋರುವೆ
ಉದರದೊಳಗಿಳಿಯುತಲಿ ಗುಣವು ತಂಪು
ಚಿಲಿಪಿಲಿ ಗುಬ್ಬಕ್ಕ ಕಾಗಕ್ಕನಿಗೆ ಪ್ರಿಯವು
ಗಿಳಿಗಳಿಗೆ ಆಗಾಗ ನನ್ನದೇ ನೆಂಪು||೪||

ಬೇಡದೆಯೆ ಏನನೂ ಹಿತ್ತಲಲಿ ಬೆಳೆಯುವೆ
ಮಾರುಕಟ್ಟೆಯಲೀಗ ಬೆಲೆಯುಳ್ಳ ಮೆಣಸು
ನೋಡದೆಯೆ ಕಣ್ಣೆತ್ತಿ ಕಿತ್ತೆಸೆಯದಿರಿ, ಗುಣವ
ಅರಿಯುತ ಬರಲಿ ಬಳಸುವ ಮನಸು||೫||

✍️... ಅನಿತಾ ಜಿ.ಕೆ.ಭಟ್.
28-03-2022.

Wednesday, 23 March 2022

ಅಂದು- ಇಂದು




#ಅಂದು- ಇಂದು
------------------

ಅಂದು ನಾನಾಗಿದ್ದೆ
ಬಲು  ಚೂಟಿ ತುಂಟಿ
ಇಂದು ಕಂಡೊಡನೆಯೇ
ಕರೆಯುವರೆನ್ನ ಆಂಟಿ!!೧||

ಅಂದು ಬಲು ಪ್ರಿಯವಾಗುತಿತ್ತು
ಎಥ್ನಿಕ್ ಡೇ, ಸಾರಿ ಡೇ
ಇಂದು ನಾ ಹಠಹಿಡಿಯಬೇಕಾಗಿದೆ
ಚೂಡಿ, ಕುರ್ತಾ ತೊಡುವುದ ಬಿಡೆ!!೨||

ಅಂದು ಶಾಲಾಕಾಲೇಜಿಗೆ ಪಯಣ
ನಡೆಯುತಲಿ ದಿನಕೊಂದು ಮೈಲಿ
ಇಂದು ರೋಗ ರುಜಿನ ಬರದಂತೆ
ನಡೆಯುವುದು ಜೀವನಶೈಲಿ!!೩||

ಅಂದು ಖರೀದಿ ಸಮಯದಿ
ಹಾಕುತಿದ್ದೆ ಪೈಸೆಗೆ ಪೈಸೆ ಲೆಕ್ಕ
ಇಂದು ರಶೀದಿ ಕಂಡರೆ ಬರುವರು
ಎಟಿಎಂ ಕಾರ್ಡ್ ಹಿಡಿದು ಪಕ್ಕ!!೪||

ಅಂದು ಅಳೆಯುತಿದ್ದರು ನೋಡಿ
ಪರೀಕ್ಷಾ ಗ್ರೇಡ್ ಮಾರ್ಕ್
ಇಂದು ದಿಟ್ಟಿಸುತ ಬೆಳ್ಳಿಕೇಶ 
ಮುಖದ ಮೇಲಿನ ಸುಕ್ಕು!!೫||

ಅಂದು ಅರ್ಧ ಗಂಟೆಯಲಿ ಅಡುಗೆಯ
ಕೆಲಸ ಹಿಡಿಯುತಿತ್ತು ಬೋರು
ಇಂದು ನಾವೇ ಇರಲಿ, ನೆಂಟರೆ ಬರಲಿ
ಅಡುಗೆಮನೆಯಲೇ ಕಾರುಬಾರು!!೬||

ಅಂದು ಹಳ್ಳಿಯ ಹಸಿರ ಪರಿಸರದಿ
ಸ್ವಚ್ಛ ಶುದ್ಧ ಉಸಿರು
ಇಂದು ನಗರದ ಕಾಂಕ್ರೀಟು ಕಾಡೊಳಗೆ
ಗೃಹಿಣಿಯೆಂಬ ಹೆಸರು!!೭||

ಅಂದು ಗುನುಗುತಲಿದ್ದೆ ಆಗಾಗ
ಪ್ರೇಮ ಚಿತ್ರದ ಗೀತೆಯನು
ಇಂದು ಕಲಿತಿಹೆ ಲಾಲಿ, ಜೋಗುಳವ
ಮಲಗಿಸಲೆಂದು ಮಕ್ಕಳನು!!೮||

ಅಂದು ಆಗಾಗ ಒರೆಸಲು
ತಪ್ಪದು ಕೈಲೊಂದು ಟವೆಲು
ಈಗಲೂ ಕ್ಷಣಕೊಮ್ಮೆ ನೇವರಿಸಲು
ಬೇಕೇಬೇಕು ಕೈಲಿ ಮೊಬೈಲು!!೯||

ಅಂದು ಓದಿ ಬರೆಯಲು
ಆಗ್ರಹಿಸುತಿದ್ದರು ಅಮ್ಮ
ಇಂದು ಅದೇ ಆದೇಶ ಮಕ್ಕಳಿಗೆ
ನಾನಾಗಿ ಶಿಸ್ತಿನ ಅಮ್ಮ!!೧೦||

ಅಂದು ಹೊಟ್ಟೆ ತುಂಬಲು
ಸೇವಿಸುತಿದ್ದೆ ಆಹಾರ
ಇಂದು ಹೊಟ್ಟೆ ಬೆಳೆಯದಂತೆ
ಶರೀರವಾಗದಂತೆ ವಿಕಾರ!!೧೧||

ಅಂದು ಎಲ್ಲರ ನಗುಮುಖವೂ
ಕೊಡುತಿತ್ತು ಮುಗ್ಧ ಖುಷಿ
ಇಂದು ತಿಳಿಯುತಿದೆ ಮತಿಗೆ
ನಗುವಿನ ಮುಖವಾಡ ಹುಸಿ!!೧೨||

ಅಂದು ಕನ್ನಡಿ, ಪೌಡರ್, ಬಿಂದಿ, ಬಟ್ಟೆಗೆ
ಸೆಳೆಯುವ ಮೋಹದ ಚಿಟ್ಟೆ
ಇಂದು ಬೆಣ್ಣೆಯ ಮಾತು, ಬಣ್ಣದ ಥಳಕಿಗೂ
ಬಗ್ಗದೆ ಮಾನಿನಿ ದಿಟ್ಟೆ!!೧೩||


✍️... ಅನಿತಾ ಜಿ.ಕೆ.ಭಟ್.
23-03-2022.

#ಫೇಸ್ಬುಕ್ ಬರಹ ವೇದಿಕೆಯೊಂದರಲ್ಲಿ "ಮದುವೆಯ ಮೊದಲು ಮತ್ತು ಮದುವೆಯ ನಂತರ ನಿಮ್ಮಲ್ಲಾದ ಬದಲಾವಣೆ" ಎಂಬ ಥೀಂ ಕಂಡಾಗ ಬರೆಯಬೇಕೆನಿಸಿದ ಸಾಲುಗಳು.. 






Monday, 21 March 2022

ಗುಲಾಬಿ

 


#ಚೆಂಗುಲಾಬಿ

ಬಣ್ಣಗಳು ಹಲವಾರು ಪರಿಮಳ ಬಗೆಬಗೆ
ಹೆಸರೊಂದೇ ಚೆಂಗುಲಾಬಿ
ಹಸಿರನಡುವಲಿ ಅರಳಿ ನಸುನಗೆಯ ಬೀರಿ
ಕಳೆಯುವೆ ಮನದ ಬೇಗುದಿ||೧||

ನೇಸರನ ಎದುರುಗೊಂಬುವೆ ಮುಗುಳಾಗಿ
ಮುತ್ತಿನ ಮಣಿಮಾಲೆ ತೊಟ್ಟು
ಸುಪ್ರಭಾತವ ಕೋರುವ ದುಂಬಿಯನೂಡುವೆ
ಸವಿಯಾದ ಮಕರಂದವನಿಟ್ಟು||೨||

ಮೃದುವಾದ ಪಕಳೆಯ ಕೋಮಲೆ ನಿಂದಿಹೆ
ಮೈತುಂಬಾ ಮುಳ್ಳನು ಸಹಿಸಿ
ಬದುಕಿನ ಕಠಿಣತೆ ಒಡಲೊಳಗೆ ಅಡಗಿಸುತ
ಚಿಗುರಿರಿ ಏಳಿಗೆಯ ಬಯಸಿ||೩||

ಸೌಗಂಧಸೂಸಿ ಕಣ್ಮನಸೆಳೆವ ಕ್ಷಣವದು ಕ್ಷಣಿಕ
ಬಲುದಿನದ ಶ್ರಮವಿರಲಿ ಹಿಂದೆ
ಮೊಗ್ಗನು ಕೊರೆವ ಹೂವನು ತಿನುವ ಕಟುಕ
ಕೀಟಗಳನೆದುರಿಸಿ ಸಾಗುತಿರಿ ಮುಂದೆ||೪||

✍️... ಅನಿತಾ ಜಿ.ಕೆ.ಭಟ್.
21-03-2022.
#ವಿಶ್ವ ಕಾವ್ಯದಿನದ ಶುಭಾಶಯಗಳು. 💐




Thursday, 17 March 2022

ಮಕ್ಕಳಲ್ಲಿನ ಮುಗ್ಧತೆ

 

           ಮುಗ್ಧತೆ ಎಂಬ ವಿಷಯ ಬಂದಾಗ ಮೊದಲು ನೆನಪಾಗುವುದು ಮಕ್ಕಳು. ಅವರ ಮುಗ್ಧ ನಡತೆ, ತುಂಟತನ, ಮಾತುಗಳು ಎಲ್ಲವನ್ನೂ  ಮೆಲುಕು ಹಾಕುವಾಗ ಏನೋ ಖುಷಿ, ಆನಂದ. ಬೆಳೆದಂತೆ ಅವರ ಮುಗ್ಧತೆ ಮಾಯವಾಗಿ ಬಿಡುವಾಗ ಮನದೊಳಗೆ ಸಣ್ಣ ತಲ್ಲಣ.       

         ನಾವು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ. ದೇವರ ಪೂಜೆಗೆ ಹೂವು ಬೇಕೆಂದು ನಾನು ಕುಂಡಗಳಲ್ಲಿ ಗೌರಿ ಹೂವಿನ ಬೀಜಗಳನ್ನು ಹಾಕಿದ್ದೆ. ಅದು ಬೆಳೆದು ಹೂಬಿಡಲು ಆರಂಭವಾಗಿತ್ತು. ತುಳಸಿ ತುಂಬೆ ಗಿಡಗಳೂ ಸಹಾ ಇದ್ದವು. ಬೆಳಗ್ಗೆ ಪತಿ ಸ್ನಾನ ಮಾಡಿ ಹೂಗಳನ್ನು ಕೊಯ್ದು ತಂದಿದ್ದರು. ನಂತರ ಜಪ ತಪ ಬೆಳಗಿನ ಪೂಜೆಯಲ್ಲಿ ನಿರತರಾಗಿದ್ದರು. ಸಣ್ಣ ಮಗ ಎದ್ದು ಅತ್ತಿತ್ತ ಪೋಕರಿ ಮಾಡುವುದರಲ್ಲಿ ನಿರತನಾಗಿದ್ದ. ದೀಪ ಬೆಳಗಿದ್ದು ಕಂಡರೆ ಸೀದಾ ಬಂದು ಕೈಹಾಕಿ ಸುಟ್ಟುಕೊಳ್ಳುತ್ತಿದ್ದ. ಪದೇ ಪದೇ ಇದೇ ಪುನರಾವರ್ತನೆ ಆದಾಗ ಸ್ವಲ್ಪ ಸಮಯ ದೀಪ ಬೆಳಗಿ ಕೂಡಲೆ ಆರಿಸಿ ಬಿಡುವುದನ್ನು ರೂಢಿಸಿಕೊಂಡಿದ್ದೆ. ಹೀಗಾಗಿ ಅವನಿಗೆ ದೇವರ ಪೂಜೆಯಲ್ಲಿ ವಿಶೇಷ ಆಕರ್ಷಣೆ(ತಂಟೆ ಮಾಡಲು)ಏನೂ ಉಳಿದಿರಲಿಲ್ಲ. ಆದರೂ ಆ ದಿನ ಅಪ್ಪ ಪೂಜೆ ಮಾಡುವುದನ್ನು ನೋಡುತ್ತಾ ಪಕ್ಕದಲ್ಲೇ ಕುಳಿತಿದ್ದ.

       ಊರಿನಿಂದ ಹಲಸಿನ ಮರದ ಒಂದು ಮಣೆ ಮಾಡಿಸಿ ತಂದಿದ್ದೆವು. ಅದರಲ್ಲಿ ದೇವರ ಫೊಟೋ ಇಟ್ಟು ಹೂವು ಇಡುತ್ತಿದ್ದೆವು. ಅಪ್ಪ ಹೂವು ಇಡುವುದನ್ನು ನೋಡುತ್ತಿದ್ದ ಪೋರ ಒಮ್ಮೆಲೇ ಬಾಗಿ ಒಂದು ಗೌರಿ ಹೂವನ್ನು ಮಣೆಯಿಂದ ತೆಗೆದು ಕೆಳಗಿಟ್ಟ. ಪುನಃ ಮತ್ತೊಂದು ಕೆಳಗಿಟ್ಟ, ಅಪ್ಪನ ಮುಖ ನೋಡಿದ. ಊಹೂಂ ಏನೂ ಬದಲಾವಣೆ ಕಾಣಲಿಲ್ಲ ಅನಿಸುತ್ತದೆ ಅವನಿಗೆ. ಮುಂದುವರಿಸಿದ. ಬೇಗ ಬೇಗ ಅಪ್ಪ ಇಟ್ಟ ಹೂವನ್ನೆಲ್ಲ ಕೆಳಗಿಟ್ಟ. ಈಗಲೂ ಅಪ್ಪನದು ಅದೇ ನಿರ್ಲಿಪ್ತತೆ. ದೇವರ ಫೊಟೋವನ್ನೂ ಕೆಳಗಿಟ್ಟ. ಮತ್ತೆ ತಾನೇ ಮಣೆ ಏರಿ ಕುಳಿತುಕೊಂಡ. ದೇವರಿಗಿಡಲು ಒಂದೇ ಒಂದು ಗೌರಿ ಹೂ ಬಾಕಿಯಿತ್ತು. ಅದನ್ನು ಅವನ ತಲೆಯಲ್ಲಿ ಇಟ್ಟು ಬಿಟ್ಟರು. ಈಗ ಪೂಜೆ ಮಾಡುತ್ತಿದ್ದ ಪತಿಗೂ ನಗು. ಹಿಂದೆ ನಿಂತು ಇದನ್ನೆಲ್ಲ ಗಮನಿಸುತ್ತಿದ್ದ ನನಗೂ ನಗು.. ನಮ್ಮಿಬ್ಬರ ನಗುವನ್ನು ಕಂಡ ಅವನು ಅದೇನೋ ಸಾಧಿಸಿದೆನೆಂಬಂತೆ ಖುಷಿಯಿಂದ "ಪೀಪಿ ಪೀಪಿ"(ಹೂವು) ಎನ್ನುತ್ತಾ ತನ್ನ ತಲೆ ಮೇಲಿನ ಹೂವನ್ನು ಮುಟ್ಟುಕೊಂಡು ಬೀಗುತ್ತಿದ್ದ.

                **********

        ನಮ್ಮ ಸಣ್ಣ ಮಗನಿಗಾಗ ಮೂರೂವರೆ ವರ್ಷ. ಹೊಸ ಸೈಟ್ ತೆಗೆದುಕೊಂಡು ಮನೆ ಕಟ್ಟಿ ಗೃಹಪ್ರವೇಶಕ್ಕೆ ಎಲ್ಲರನ್ನೂ ಆಮಂತ್ರಿಸುತ್ತಿದ್ದೆವು. ಇಲ್ಲಿ ಹೋಮ, ಪೂಜಾ ಕಾರ್ಯಕ್ರಮ ಮಾಡಿ, ಎಲ್ಲರನ್ನೂ ಆಮಂತ್ರಿಸಿ, ಊಟ ಬಡಿಸುವುದಿದೆ. ನಂತರ ನಾವು ಇಲ್ಲೇ ಇರುವುದು ಎಂದು ನಮ್ಮ ಮಕ್ಕಳಿಗೆ ಹೇಳಿದ್ದೆವು. ಹಲವರ ಮನೆಗೆ ತೆರಳಿ "ಮನೆ ಒಕ್ಕಲಿಗೆ ಬನ್ನಿ" ಎಂದು ಕರೆಯುವುದನ್ನು ಸಣ್ಣ ಮಗ ಕೇಳಿಸಿಕೊಂಡಿದ್ದ.  ಇವನಿಗೂ ಸಮಾರಂಭಗಳಿಗೆ ಅಥವಾ ಎಲ್ಲಿಗೇ ಆದರೂ ಹೋಗುವುದೆಂದರೆ ಪಂಚಪ್ರಾಣ. ಆದರೆ ಇನ್ನೂ ಮನೆ ಒಕ್ಕಲಿಗೆ ಹೊರಡುವ ಲಕ್ಷಣ ಕಾಣುತ್ತಿಲ್ಲ.  ಎಂದು ಅನಿಸಿತ್ತೋ ಏನೋ.. ಮನೆ ಒಕ್ಕಲಿಗೆ ಇನ್ನು ವಾರವೋ, ಮೂರ್ನಾಲ್ಕು ದಿನವೋ ಇರುವಾಗ, ಒಂದು ದಿನ ಇದ್ದಕ್ಕಿದ್ದಂತೆ ಅವನ ಸಂಶಯ ಹೊರ ಹಾಕಿದ್ದ. "ಅಪ್ಪಾ.. ಮನೆ ಒಕ್ಕಲು.. ಬನ್ನಿ ಹೇಳಿದ್ದಲ್ಲಾ.. ಎಲ್ಲಿ ಅಪ್ಪಾ ಮನೆ ಒಕ್ಕಲು.. ನಾವೂ ಹೋಪನಾ..?" ಎಂದು ಮುಗ್ಧವಾಗಿ ಕೇಳಿದ. ನಮಗೆ ನಗು ಬಂದಿತ್ತು.. ನಂತರ ಅವನಿಗೆ ಪುನಃ ವಿವರಿಸಿ ಹೇಳಿದಾಗ ಒಪ್ಪಿಕೊಂಡಿದ್ದ.

                 *******

       ಒಬ್ಬರು ಹಿರಿಯರು ನಮ್ಮ ದೊಡ್ಡ ಮಗನನ್ನು ಕಂಡಾಗ "ಇವನು ಗಿಡ್ಡ" ಎನ್ನುತ್ತಿದ್ದರು. ಆಗ ನಾನು "ಕೆಲವರು ಎಳೆಯ ಪ್ರಾಯದಲ್ಲಿ ಬೇಗ ಬೆಳವಣಿಗೆ ಹೊಂದಿ, ನಂತರ ಹದಿಹರೆಯದಲ್ಲಿ ಸ್ವಲ್ಪ ನಿಧಾನವಾಗಿ ಬೆಳೆಯುತ್ತಾರೆ. ಮತ್ತೆ ಕೆಲವರು ಎಳವೆಯಲ್ಲಿ ನಿಧಾನವಾಗಿ ಬೆಳವಣಿಗೆ ಹೊಂದುತ್ತಾ, ಹದಿಹರೆಯಕ್ಕೆ ಕಾಲಿಟ್ಟಾಗ ಒಮ್ಮಿಂದೊಮ್ಮೆಲೇ ಬೆಳವಣಿಗೆ ಹೊಂದುತ್ತಾರೆ. ಎರಡು ಮೂರು ವರ್ಷದಲ್ಲಿ ಅವರ ಚಹರೆಯೇ ಬದಲಾಗುತ್ತದೆ" ಎಂದು ಉತ್ತರಿಸಿದ್ದೆ. ಇದನ್ನು ನಾನು ನನ್ನ ಪ್ರೌಢಶಾಲೆ ದಿನಗಳಲ್ಲಿ ಗಮನಿಸಿದ್ದೆ. ಕೆಲವರು ಪ್ರೌಢಶಾಲೆಗೆ ಸೇರುವಾಗ ಉದ್ದವಿದ್ದವರು ನಂತರ ವಿಶೇಷವಾಗಿ ಎತ್ತರದಲ್ಲಿ ಬದಲಾವಣೆ ಆಗದವರೂ ಇದ್ದರು. ಕೆಲವರು ಎಂಟನೇ ತರಗತಿಯಲ್ಲಿ ಪುಟ್ಟ ಮಕ್ಕಳಂತೆ ಕಾಣುತ್ತಿದ್ದವರು ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಬರೋಬ್ಬರಿ ಉದ್ದ, ದಪ್ಪ ಆದವರೂ ಇದ್ದರು. ಒಬ್ಬೊಬ್ಬರ ಶಾರೀರಿಕ ಬೆಳವಣಿಗೆ ಒಂದೊಂದು ರೀತಿ ಎಂದು ಅರಿವಾಗಿತ್ತು.

       ಆ ಹಿರಿಯರು ಕೆಲವು ಬಾರಿ ಅದೇ ರೀತಿ ಹೇಳಿದ್ದಿದೆ. ನಾನು ನಕ್ಕು ಸುಮ್ಮನಾಗುತ್ತಿದ್ದೆ. ಮತ್ತೆಲ್ಲೂ ಚರ್ಚಿಸುವುದಾಗಲೀ, ತಲೆ ಕೆಡಿಸಿಕೊಳ್ಳುವುದಾಗಲೀ ಮಾಡಲಿಲ್ಲ. ಇತ್ತೀಚೆಗೆ ಕೊರೋನಾ ದೆಸೆಯಿಂದ ಮೂರು ವರ್ಷಗಳಿಂದ ಅವರನ್ನು ಭೇಟಿಯಾಗಲಿಲ್ಲ. ಇತ್ತೀಚೆಗೆ ಭೇಟಿಯಾದಾಗ, ಅವರನ್ನು ಕಂಡವನೇ ಹತ್ತಿರ ಹೋಗಿ "ಈಗ ನಾನು ಉದ್ದವಾ.. ನೀವಾ..?" ಎಂದಿದ್ದ ಮುಗ್ಧವಾಗಿ ನಗುತ್ತಾ ದೊಡ್ಡ ಮಗ.
"ನೀನೇ ಉದ್ದ ಕಣೋ.. ಎಷ್ಟೆತ್ತರ ಬೆಳೆದಿದ್ದೀ.. ಗುರುತೇ ಸಿಗಲಿಲ್ಲ ನನಗೆ" ಎಂದರು. ಮೂರು ವರ್ಷಗಳಲ್ಲಿ ಎರಡು ಫೀಟ್ ಎತ್ತರ ಬೆಳೆದಿದ್ದ.
ಮಕ್ಕಳು ತಾವು ಕೇಳಿಸಿಕೊಂಡದ್ದನ್ನು  ಕೆಲವನ್ನೆಲ್ಲಾ ಬಹಳ ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾರೆ.

✍️... ಅನಿತಾ ಜಿ.ಕೆ.ಭಟ್.
18-03-2022.

#ಪ್ರತಿಲಿಪಿಕನ್ನಡ ದೈನಿಕವಿಷಯಾಧಾರಿತ
#ವಿಷಯ ಮುಗ್ಧತೆ #ಚಿತ್ರ ಕೃಪೆ- ಅಂತರ್ಜಾಲ