ಮುಗ್ಧತೆ ಎಂಬ ವಿಷಯ ಬಂದಾಗ ಮೊದಲು ನೆನಪಾಗುವುದು ಮಕ್ಕಳು. ಅವರ ಮುಗ್ಧ ನಡತೆ, ತುಂಟತನ, ಮಾತುಗಳು ಎಲ್ಲವನ್ನೂ ಮೆಲುಕು ಹಾಕುವಾಗ ಏನೋ ಖುಷಿ, ಆನಂದ. ಬೆಳೆದಂತೆ ಅವರ ಮುಗ್ಧತೆ ಮಾಯವಾಗಿ ಬಿಡುವಾಗ ಮನದೊಳಗೆ ಸಣ್ಣ ತಲ್ಲಣ.
ನಾವು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ. ದೇವರ ಪೂಜೆಗೆ ಹೂವು ಬೇಕೆಂದು ನಾನು ಕುಂಡಗಳಲ್ಲಿ ಗೌರಿ ಹೂವಿನ ಬೀಜಗಳನ್ನು ಹಾಕಿದ್ದೆ. ಅದು ಬೆಳೆದು ಹೂಬಿಡಲು ಆರಂಭವಾಗಿತ್ತು. ತುಳಸಿ ತುಂಬೆ ಗಿಡಗಳೂ ಸಹಾ ಇದ್ದವು. ಬೆಳಗ್ಗೆ ಪತಿ ಸ್ನಾನ ಮಾಡಿ ಹೂಗಳನ್ನು ಕೊಯ್ದು ತಂದಿದ್ದರು. ನಂತರ ಜಪ ತಪ ಬೆಳಗಿನ ಪೂಜೆಯಲ್ಲಿ ನಿರತರಾಗಿದ್ದರು. ಸಣ್ಣ ಮಗ ಎದ್ದು ಅತ್ತಿತ್ತ ಪೋಕರಿ ಮಾಡುವುದರಲ್ಲಿ ನಿರತನಾಗಿದ್ದ. ದೀಪ ಬೆಳಗಿದ್ದು ಕಂಡರೆ ಸೀದಾ ಬಂದು ಕೈಹಾಕಿ ಸುಟ್ಟುಕೊಳ್ಳುತ್ತಿದ್ದ. ಪದೇ ಪದೇ ಇದೇ ಪುನರಾವರ್ತನೆ ಆದಾಗ ಸ್ವಲ್ಪ ಸಮಯ ದೀಪ ಬೆಳಗಿ ಕೂಡಲೆ ಆರಿಸಿ ಬಿಡುವುದನ್ನು ರೂಢಿಸಿಕೊಂಡಿದ್ದೆ. ಹೀಗಾಗಿ ಅವನಿಗೆ ದೇವರ ಪೂಜೆಯಲ್ಲಿ ವಿಶೇಷ ಆಕರ್ಷಣೆ(ತಂಟೆ ಮಾಡಲು)ಏನೂ ಉಳಿದಿರಲಿಲ್ಲ. ಆದರೂ ಆ ದಿನ ಅಪ್ಪ ಪೂಜೆ ಮಾಡುವುದನ್ನು ನೋಡುತ್ತಾ ಪಕ್ಕದಲ್ಲೇ ಕುಳಿತಿದ್ದ.
ಊರಿನಿಂದ ಹಲಸಿನ ಮರದ ಒಂದು ಮಣೆ ಮಾಡಿಸಿ ತಂದಿದ್ದೆವು. ಅದರಲ್ಲಿ ದೇವರ ಫೊಟೋ ಇಟ್ಟು ಹೂವು ಇಡುತ್ತಿದ್ದೆವು. ಅಪ್ಪ ಹೂವು ಇಡುವುದನ್ನು ನೋಡುತ್ತಿದ್ದ ಪೋರ ಒಮ್ಮೆಲೇ ಬಾಗಿ ಒಂದು ಗೌರಿ ಹೂವನ್ನು ಮಣೆಯಿಂದ ತೆಗೆದು ಕೆಳಗಿಟ್ಟ. ಪುನಃ ಮತ್ತೊಂದು ಕೆಳಗಿಟ್ಟ, ಅಪ್ಪನ ಮುಖ ನೋಡಿದ. ಊಹೂಂ ಏನೂ ಬದಲಾವಣೆ ಕಾಣಲಿಲ್ಲ ಅನಿಸುತ್ತದೆ ಅವನಿಗೆ. ಮುಂದುವರಿಸಿದ. ಬೇಗ ಬೇಗ ಅಪ್ಪ ಇಟ್ಟ ಹೂವನ್ನೆಲ್ಲ ಕೆಳಗಿಟ್ಟ. ಈಗಲೂ ಅಪ್ಪನದು ಅದೇ ನಿರ್ಲಿಪ್ತತೆ. ದೇವರ ಫೊಟೋವನ್ನೂ ಕೆಳಗಿಟ್ಟ. ಮತ್ತೆ ತಾನೇ ಮಣೆ ಏರಿ ಕುಳಿತುಕೊಂಡ. ದೇವರಿಗಿಡಲು ಒಂದೇ ಒಂದು ಗೌರಿ ಹೂ ಬಾಕಿಯಿತ್ತು. ಅದನ್ನು ಅವನ ತಲೆಯಲ್ಲಿ ಇಟ್ಟು ಬಿಟ್ಟರು. ಈಗ ಪೂಜೆ ಮಾಡುತ್ತಿದ್ದ ಪತಿಗೂ ನಗು. ಹಿಂದೆ ನಿಂತು ಇದನ್ನೆಲ್ಲ ಗಮನಿಸುತ್ತಿದ್ದ ನನಗೂ ನಗು.. ನಮ್ಮಿಬ್ಬರ ನಗುವನ್ನು ಕಂಡ ಅವನು ಅದೇನೋ ಸಾಧಿಸಿದೆನೆಂಬಂತೆ ಖುಷಿಯಿಂದ "ಪೀಪಿ ಪೀಪಿ"(ಹೂವು) ಎನ್ನುತ್ತಾ ತನ್ನ ತಲೆ ಮೇಲಿನ ಹೂವನ್ನು ಮುಟ್ಟುಕೊಂಡು ಬೀಗುತ್ತಿದ್ದ.
**********
ನಮ್ಮ ಸಣ್ಣ ಮಗನಿಗಾಗ ಮೂರೂವರೆ ವರ್ಷ. ಹೊಸ ಸೈಟ್ ತೆಗೆದುಕೊಂಡು ಮನೆ ಕಟ್ಟಿ ಗೃಹಪ್ರವೇಶಕ್ಕೆ ಎಲ್ಲರನ್ನೂ ಆಮಂತ್ರಿಸುತ್ತಿದ್ದೆವು. ಇಲ್ಲಿ ಹೋಮ, ಪೂಜಾ ಕಾರ್ಯಕ್ರಮ ಮಾಡಿ, ಎಲ್ಲರನ್ನೂ ಆಮಂತ್ರಿಸಿ, ಊಟ ಬಡಿಸುವುದಿದೆ. ನಂತರ ನಾವು ಇಲ್ಲೇ ಇರುವುದು ಎಂದು ನಮ್ಮ ಮಕ್ಕಳಿಗೆ ಹೇಳಿದ್ದೆವು. ಹಲವರ ಮನೆಗೆ ತೆರಳಿ "ಮನೆ ಒಕ್ಕಲಿಗೆ ಬನ್ನಿ" ಎಂದು ಕರೆಯುವುದನ್ನು ಸಣ್ಣ ಮಗ ಕೇಳಿಸಿಕೊಂಡಿದ್ದ. ಇವನಿಗೂ ಸಮಾರಂಭಗಳಿಗೆ ಅಥವಾ ಎಲ್ಲಿಗೇ ಆದರೂ ಹೋಗುವುದೆಂದರೆ ಪಂಚಪ್ರಾಣ. ಆದರೆ ಇನ್ನೂ ಮನೆ ಒಕ್ಕಲಿಗೆ ಹೊರಡುವ ಲಕ್ಷಣ ಕಾಣುತ್ತಿಲ್ಲ. ಎಂದು ಅನಿಸಿತ್ತೋ ಏನೋ.. ಮನೆ ಒಕ್ಕಲಿಗೆ ಇನ್ನು ವಾರವೋ, ಮೂರ್ನಾಲ್ಕು ದಿನವೋ ಇರುವಾಗ, ಒಂದು ದಿನ ಇದ್ದಕ್ಕಿದ್ದಂತೆ ಅವನ ಸಂಶಯ ಹೊರ ಹಾಕಿದ್ದ. "ಅಪ್ಪಾ.. ಮನೆ ಒಕ್ಕಲು.. ಬನ್ನಿ ಹೇಳಿದ್ದಲ್ಲಾ.. ಎಲ್ಲಿ ಅಪ್ಪಾ ಮನೆ ಒಕ್ಕಲು.. ನಾವೂ ಹೋಪನಾ..?" ಎಂದು ಮುಗ್ಧವಾಗಿ ಕೇಳಿದ. ನಮಗೆ ನಗು ಬಂದಿತ್ತು.. ನಂತರ ಅವನಿಗೆ ಪುನಃ ವಿವರಿಸಿ ಹೇಳಿದಾಗ ಒಪ್ಪಿಕೊಂಡಿದ್ದ.
*******
ಒಬ್ಬರು ಹಿರಿಯರು ನಮ್ಮ ದೊಡ್ಡ ಮಗನನ್ನು ಕಂಡಾಗ "ಇವನು ಗಿಡ್ಡ" ಎನ್ನುತ್ತಿದ್ದರು. ಆಗ ನಾನು "ಕೆಲವರು ಎಳೆಯ ಪ್ರಾಯದಲ್ಲಿ ಬೇಗ ಬೆಳವಣಿಗೆ ಹೊಂದಿ, ನಂತರ ಹದಿಹರೆಯದಲ್ಲಿ ಸ್ವಲ್ಪ ನಿಧಾನವಾಗಿ ಬೆಳೆಯುತ್ತಾರೆ. ಮತ್ತೆ ಕೆಲವರು ಎಳವೆಯಲ್ಲಿ ನಿಧಾನವಾಗಿ ಬೆಳವಣಿಗೆ ಹೊಂದುತ್ತಾ, ಹದಿಹರೆಯಕ್ಕೆ ಕಾಲಿಟ್ಟಾಗ ಒಮ್ಮಿಂದೊಮ್ಮೆಲೇ ಬೆಳವಣಿಗೆ ಹೊಂದುತ್ತಾರೆ. ಎರಡು ಮೂರು ವರ್ಷದಲ್ಲಿ ಅವರ ಚಹರೆಯೇ ಬದಲಾಗುತ್ತದೆ" ಎಂದು ಉತ್ತರಿಸಿದ್ದೆ. ಇದನ್ನು ನಾನು ನನ್ನ ಪ್ರೌಢಶಾಲೆ ದಿನಗಳಲ್ಲಿ ಗಮನಿಸಿದ್ದೆ. ಕೆಲವರು ಪ್ರೌಢಶಾಲೆಗೆ ಸೇರುವಾಗ ಉದ್ದವಿದ್ದವರು ನಂತರ ವಿಶೇಷವಾಗಿ ಎತ್ತರದಲ್ಲಿ ಬದಲಾವಣೆ ಆಗದವರೂ ಇದ್ದರು. ಕೆಲವರು ಎಂಟನೇ ತರಗತಿಯಲ್ಲಿ ಪುಟ್ಟ ಮಕ್ಕಳಂತೆ ಕಾಣುತ್ತಿದ್ದವರು ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಬರೋಬ್ಬರಿ ಉದ್ದ, ದಪ್ಪ ಆದವರೂ ಇದ್ದರು. ಒಬ್ಬೊಬ್ಬರ ಶಾರೀರಿಕ ಬೆಳವಣಿಗೆ ಒಂದೊಂದು ರೀತಿ ಎಂದು ಅರಿವಾಗಿತ್ತು.
ಆ ಹಿರಿಯರು ಕೆಲವು ಬಾರಿ ಅದೇ ರೀತಿ ಹೇಳಿದ್ದಿದೆ. ನಾನು ನಕ್ಕು ಸುಮ್ಮನಾಗುತ್ತಿದ್ದೆ. ಮತ್ತೆಲ್ಲೂ ಚರ್ಚಿಸುವುದಾಗಲೀ, ತಲೆ ಕೆಡಿಸಿಕೊಳ್ಳುವುದಾಗಲೀ ಮಾಡಲಿಲ್ಲ. ಇತ್ತೀಚೆಗೆ ಕೊರೋನಾ ದೆಸೆಯಿಂದ ಮೂರು ವರ್ಷಗಳಿಂದ ಅವರನ್ನು ಭೇಟಿಯಾಗಲಿಲ್ಲ. ಇತ್ತೀಚೆಗೆ ಭೇಟಿಯಾದಾಗ, ಅವರನ್ನು ಕಂಡವನೇ ಹತ್ತಿರ ಹೋಗಿ "ಈಗ ನಾನು ಉದ್ದವಾ.. ನೀವಾ..?" ಎಂದಿದ್ದ ಮುಗ್ಧವಾಗಿ ನಗುತ್ತಾ ದೊಡ್ಡ ಮಗ.
"ನೀನೇ ಉದ್ದ ಕಣೋ.. ಎಷ್ಟೆತ್ತರ ಬೆಳೆದಿದ್ದೀ.. ಗುರುತೇ ಸಿಗಲಿಲ್ಲ ನನಗೆ" ಎಂದರು. ಮೂರು ವರ್ಷಗಳಲ್ಲಿ ಎರಡು ಫೀಟ್ ಎತ್ತರ ಬೆಳೆದಿದ್ದ.
ಮಕ್ಕಳು ತಾವು ಕೇಳಿಸಿಕೊಂಡದ್ದನ್ನು ಕೆಲವನ್ನೆಲ್ಲಾ ಬಹಳ ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾರೆ.
✍️... ಅನಿತಾ ಜಿ.ಕೆ.ಭಟ್.
18-03-2022.
#ಪ್ರತಿಲಿಪಿಕನ್ನಡ ದೈನಿಕವಿಷಯಾಧಾರಿತ
#ವಿಷಯ ಮುಗ್ಧತೆ #ಚಿತ್ರ ಕೃಪೆ- ಅಂತರ್ಜಾಲ
Chennagide 👌👌
ReplyDeleteಧನ್ಯವಾದಗಳು 🙏💐
Delete