ಸಹಜ ಸೌಂದರ್ಯವತಿ ಸ್ಮಿತಾ ದಂತದ ಬೊಂಬೆಯಂತೆ ಶೋಭಿಸುತ್ತಿದ್ದಳು. ಅವಳ ನೀಳ ದಟ್ಟವಾದ ಕಪ್ಪನೆಯ ಕೂದಲಿಗೆ ಮಲ್ಲಿಗೆಯನ್ನು ಸುಂದರವಾಗಿ ಮುಡಿಸಿದ್ದರು. ಮದುಮಗಳ ಅಲಂಕಾರ ಮಾಡಲು ಇಬ್ಬರು ಸೋದರತ್ತೆಯರದೂ ಎತ್ತಿದ ಕೈ ಎಂದ ಮೇಲೆ ಕೇಳಬೇಕೇ? ಸಾಂಪ್ರದಾಯಿಕವಾಗಿ ಮಂಗಳೂರು ಮಲ್ಲಿಗೆಯ ಚೆಂಡನ್ನು ಮುಡಿಸಿ ಅಲ್ಲಲ್ಲಿ ಕೆಂಗುಲಾಬಿಯ ಪಕಳೆಗಳನ್ನು ಮುತ್ತಿನೊಂದಿಗೆ ಜೋಡಿಸಿ ಕುತ್ತಿದ್ದರು. "ಮುಖದ ಮೇಕಪ್ ಮಾತ್ರ ನಾವೇ ಮಾಡುವುದು" ಎಂದು ಸ್ಮಿತಾಳ ಗೆಳತಿಯರೆಲ್ಲ ಮುಂದೆ ಬಂದಿದ್ದರು. ಮೊದಲಾಗಿ ಸ್ಮಿತಾಳೇ ಅವರಿಗೆ ಬರಹೇಳಿದ್ದಳು.
"ನಿಂಗೆ ಮುಖಕ್ಕೆ ಕ್ರೀಂ ಬೇಡಮ್ಮಾ.. ನೀನೇ ಬೆಣ್ಣೆ ಹುಡುಗಿ ತರಹ ಇದ್ದೀ.."
"ಬಿಡಲ್ಲ ಕಣೇ.. ಹಚ್ಚಿ ಬಿಡ್ತೀವಿ.. ಅರ್ಧ ಇಂಚು ದಪ್ಪಕ್ಕೆ..."
"ಲಿಪ್ ಸ್ಟಿಕ್ ಹಚ್ತೀವಿ.. ಅದನ್ನೂ ತಿಂದು ಬಿಡಬೇಡ.. ತಿಂಡಿ ತಿನ್ನೋ ಭರದಲ್ಲಿ.."
"ಗೌರಮ್ಮನ ತರಹ ಬಿಂದಿ ಇಡಲೇನೇ..?"
"ದೃಷ್ಟಿ ಬೊಟ್ಟು ಎಲ್ಲರಿಗೂ ಕಾಣುವಂತೇ ಇಟ್ಟು ಬಿಡ್ತೀನಿ.. ನೋಡು.."
ಏನೇನೋ ರೇಗಿಸುವಿಕೆ ಗೆಳತಿಯರ ಗುಂಪಲ್ಲಿ ನಡೆಯುತ್ತಲೇ ಮೇಕಪ್ ಸಾಗಿತ್ತು.
ಅಲ್ಲಿಗೆ ಸ್ಮಿತಾಳ ಅಜ್ಜಿ ಸೌಭದ್ರಮ್ಮ ಆಗಮಿಸಿದರು. ಮೊಮ್ಮಗಳ ಅಲಂಕಾರ ಎಲ್ಲಿಯವರೆಗೆ ಮುಟ್ಟಿತು ಎಂದು ನೋಡಿ ಕಣ್ತುಂಬಿಸಿಕೊಳ್ಳುವ ತವಕ ಅಜ್ಜಿಗೆ.
"ಪೇಂಟ್ ಮೆತ್ತಿದಾಂಗೆ ಮೆತ್ತಿದ್ದು ಕಾಣ್ತಿದೆ. ಸಿಂಧೂರ ಕಾಣುವುದೇ ಇಲ್ಲ ಹಣೆಯಲ್ಲಿ.." ಅಜ್ಜಿಯ ಕಣ್ಣುಗಳು ಸೂಕ್ಷ್ಮವಾಗಿ ಮೊಮ್ಮಗಳನ್ನು ಸ್ಕ್ಯಾನ್ ಮಾಡಿದವು
"ಇದೆ ಅಜ್ಜಿ.. ನೋಡಿ ಇಲ್ಲಿ.. ಫ್ಯಾನ್ಸಿ ಸ್ಟಿಕ್ಕರ್ ಹಾಗಾಗಿ ಮಿನುಗುತ್ತೆ. ನಿಮಗೆ ಬೇಗ ಕಾಣಿಸಿಲ್ಲ." ಎಂದಳು ಮದುಮಗಳು ಸ್ಮಿತಾ.
"ಅಲ್ವೇ.. ಅದೆಂತ.. ನುಸಿ ಪಿಟ್ಟೆಯಂತೆ.. ಸ್ವಲ್ಪ ದೊಡ್ಡದಾಗಿ ಕಾಣುವಂತೆ ಹಾಕಬೇಕು." ಎಂದು ಅಸಮಾಧಾನ ವ್ಯಕ್ತಪಡಿಸಿದರು ಅಜ್ಜಿ.
"ಅಜ್ಜೀ.. ಅದೆಲ್ಲ ಈಗಿನ ಕಾಲದ ಫ್ಯಾಷನ್.. ನಿಮಗೆ ಗೊತ್ತಾಗಲ್ಲ.."
"ಎಂತ ಪೇಷನೋ ಎಂತದೋ.. ಹ್ಞಾಂ.. ಕುತ್ತಿಗೆಗೆ ಆಭರಣ ಇನ್ನೂ ತೊಡಿಸಿಯೇ ಆಗಿಲ್ಲ.. ಏ.. ಶ್ಯಾಮಲಾ..ಎಲ್ಲಿದ್ದೀ..?" ಎಂದು ಮಗಳನ್ನು ಕೂಗಿದರು.. ತಮ್ಮ ಕುತ್ತಿಗೆಯಲ್ಲಿದ್ದ ಮೂರು ತಲೆಮಾರುಗಳ ಹಿಂದಿನ ಹನ್ನೆರಡು ಪವನಿನ ಪವನದ ಸರವನ್ನು ಮದುಮಗಳಿಗೆ ತೊಡಿಸಲೆಂದು ತೆಗೆದು ಶ್ಯಾಮಲಾರ ಕೈಗಿತ್ತರು.
"ಅಮ್ಮಾ.. ಇದೆಂತ.. ಆಂಟಿಕ್ ಪೀಸ್ ತರಹ ಇದೆ.. ನನಗಿದು ಸೂಟ್ ಆಗಲ್ಲಮ್ಮ.. ಪ್ಲೀಸ್.."
"ನೋಡು ಮಗಳೇ.. ಹಾಗೆ ಹಿರಿಯರು ಮದುಮಗಳಿಗೆಂದು ಕೈಯೆತ್ತಿ ಕೊಟ್ಟದ್ದನ್ನು ಬೇಡವೆನ್ನಬಾರದು. ಅದು ಅವರ ಆಶೀರ್ವಾದ ಎಂದು ತಿಳಿದುಕೋ. ಹೂಂ.." ಎನ್ನುತ್ತಾ ಹೂವಿನ ಜಡೆಯನ್ನು ಸ್ವಲ್ಪ ಮೇಲೆತ್ತಿ ಸರವನ್ನು ತೊಡಿಸಿದರು.
"ಅಲಂಕಾರ ಮುಗೀತಾ.. ವಧುವನ್ನು ಕರೆದುಕೊಂಡು ಬರಲಿ ಸೋದರಮಾವ.." ಹೇಳಿದರು ಪುರೋಹಿತರು. "ಇನ್ನೊಂದು ಐದೇ ನಿಮಿಷದಲ್ಲಿ ರೆಡಿ" ಎಂಬ ಉತ್ತರ ಬಂತು ಡ್ರೆಸ್ಸಿಂಗ್ ರೂಮಿನಿಂದ.
ಮಂಟಪಕ್ಕೆ ಸಾಲಂಕೃತಳಾದ ವಧುವನ್ನು ಕರೆದುಕೊಂಡು ಬಂದರು. 'ಸುಮುಹೂರ್ತೇ ಸಾವಧಾನೌ ಸುಲಗ್ನೇ ಸಾವಧಾನೌ..' ಋತ್ವಿಜರ ವೇದಘೋಷ ಸುತ್ತಲೂ ಧನಾತ್ಮಕ ಕಂಪನವನ್ನು ಉಂಟುಮಾಡಿತ್ತು. ವಧೂವರರು ಪರಸ್ಪರ ಹೂ ಮಾಲೆಯನ್ನ ಬದಲಾಯಿಸಿಕೊಂಡರು.
ಧಾರೆಯ ಕಾರ್ಯಕ್ರಮ ನಡೆಯುತ್ತಲಿತ್ತು.
ವಿಡಿಯೋ ಗ್ರಾಫರ್ ಮತ್ತು ಫೊಟೋ ಗ್ರಾಫರ್ ಪರಸ್ಪರ ಪ್ರಶ್ನಾರ್ಥಕವಾಗಿ ಮುಖ ಮುಖ ನೋಡಿಕೊಂಡರು. ವಧುವಿನ ಹಿಂದೆ ಕುಳಿತಿದ್ದ ಸೋದರತ್ತೆಯ ಸಮೀಪ ಬಂದು ಏನೋ ಹೇಳಿದ ಫೊಟೋಗ್ರಾಫರ್. "ಹ್ಞಾಂ.. ಹೌದಾ?" ಎಂಬಂತೆ ಆಶ್ಚರ್ಯದಿಂದ ಮದುಮಗಳ ಹತ್ತಿರ ಬಂದು ಬಾಗಿ ನೋಡಿ "ಓಹ್.." ಎಂದು ಹಣೆಗೆ ಕೈಯಿಟ್ಟುಕೊಂಡರು. ಮದುಮಗ ಕಣ್ಸನ್ನೆಯಲ್ಲೇ ಮದುಮಗಳಿಗೆ ಪರಿಸ್ಥಿತಿಯ ಸಂದೇಶ ರವಾನಿಸಿದ. ಸ್ಮಿತಾ ಒಮ್ಮೆಲೇ ಬೆವರತೊಡಗಿದಳು. ತನ್ನ ಟವೆಲಿನಿಂದ ಹಣೆಯಿಂದ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡಳು. ಗೌರವರ್ಣದ ಮುಖ ಗಾಬರಿಯಿಂದ ಕೆಂಪಡರಿತು.
ಒಂದಿಬ್ಬರು ಹೆಣ್ಣುಮಕ್ಕಳು ಡ್ರೆಸ್ಸಿಂಗ್ ರೂಮಿನವರೆಗೆ ಹೋಗಿ ಬೀಗ ಹಾಕಿದೆ ಎಂದು ವಾಪಸಾದರು. ಈಗ ಬೀಗದ ಕೈ ಹಿಡಿದುಕೊಂಡಿದ್ದ ಮದುಮಗಳ ಚಿಕ್ಕಪ್ಪನ ಹುಡುಕಲು ತೆರಳಿದರು ಕೆಲವರು. ಯಾರದ್ದಾದರೂ ಬ್ಯಾಗಿನಲ್ಲಿ ಬಿಂದಿ ಇದೆಯಾ ಪರಸ್ಪರ ಹೆಂಗಳೆಯರು ಪ್ರಶ್ನಿಸಿಕೊಂಡರು. ಪುರೋಹಿತರು ತಮ್ಮ ಹಿಂದೆ ಇಟ್ಟಿದ್ದ ವೈದಿಕ ಕ್ರಿಯಾಭಾಗಗಳ ಸಲಕರಣೆಗಳ ಮಧ್ಯದಲ್ಲಿದ್ದ ಕುಂಕುಮದ ಕರಡಿಗೆಯನ್ನು ಮುಂದೆ ಹಿಡಿದು ಕನ್ನಡಿಯನ್ನೂ ಮದುಮಗಳಿಗೆ ನೀಡಿದರು. ಸ್ಮಿತಾ ಸ್ವಲ್ಪ ಹಿಂದೆ ಮುಂದೆ ನೋಡಿದಳು.
"ಏ.. ಮಿಸ್ ಇಂಡಿಯಾ.. ಹಾಕ್ಕೊಳ್ಳೇ ಶುದ್ಧ ಕುಂಕುಮ.."
ಅಲ್ಲೇ ನಿಂತಿದ್ದ ಮದುಮಗಳ ತಮ್ಮ ಹೇಳುತ್ತಿದ್ದಂತೆ ನಗುವಿನ ಅಲೆಯೊಂದು ಎದ್ದಿತು. ಫ್ಯಾಷನ್ ಪ್ರಿಯೆ
ಅಕ್ಕನನ್ನು ಆಗಾಗ ಮಿಸ್ ಇಂಡಿಯಾ ಎಂದು ರೇಗಿಸುವುದು ತಮ್ಮ ಸುಧಾಂಶುವಿನ ಪ್ರೀತಿಯ ಅಭ್ಯಾಸಗಳಲ್ಲೊಂದು. ತಮ್ಮನ ಮಾತಿಗೆ ಯಾವತ್ತೂ 'ಮಾಡ್ತೀನಿ ಇರು ನಿಂಗೆ' ಎಂದು ಮತ್ತೆ ಕೆಣಕಲು ಹೋಗುತ್ತಿದ್ದ ಸ್ಮಿತಾ ಇಂದು ಮಾತ್ರ ಕಣ್ತುಂಬಿಸಿಕೊಂಡಿದ್ದಳು.
ಬೆರಳುಗಳನ್ನು ಕುಂಕುಮದ ಕರಡಿಗೆಗೆ ಅದ್ದಿ ಹಣೆಗೆ ಬೊಟ್ಟನಿಟ್ಟಳು. ಹಣೆಯಲ್ಲಿ ಹೆಣ್ಣಿನ ಸೌಂದರ್ಯ ಪ್ರತೀಕವಾದ ಸಿಂಧೂರ ಎದ್ದುಕಾಣುತ್ತಿತ್ತು. ಫ್ಯಾನ್ಸಿ ಸ್ಟಿಕ್ಕರ್ ಉದುರಿ ಬೋಳಾಗಿದ್ದ ಹಣೆಗೆ ಕಳೆ ಬಂದಿತು. "ಸ್ಟಿಕ್ಕರ್ ಹೋಗಿ ಸಿಂಧೂರ ಬಂತು.. ಢುಂ.. ಢುಂ.. ಢುಂ" ಎಂದ ಸುಧಾಂಶು. ಮತ್ತೊಮ್ಮೆ ಸಭಾಮಂಟಪ ಗೊಳ್ಳೆಂದು ನಗೆಗಡಲಲ್ಲಿ ತೇಲಿತು. ಸ್ಟಿಕ್ಕರ್ ತರಲೆಂದು ಹೋಗಿದ್ದವರು ಸ್ಟಿಕ್ಕರ್ ಪ್ಯಾಕೆಟ್ ಹಿಡಿದು ಬಂದು ತಾವೂ ನಗುವಿನ ಅಲೆಯಲ್ಲಿ ಕಳೆದುಹೋದರು. ಧಾರೆಯ ಕಾರ್ಯಕ್ರಮವನ್ನು ವೀಕ್ಷಿಸಲು ಮಂಟಪದ ಸಮೀಪದಲ್ಲಿ ಕುರ್ಚಿಯನ್ನಿರಿಸಿ ಕುಳಿತುಕೊಂಡಿದ್ದ ಸೌಭದ್ರಮ್ಮನವರಿಗೆ ಮೊಮ್ಮಗಳ ಹಣೆಯಲ್ಲಿ ಸಿಂಧೂರ ಎದ್ದು ಕಂಡಿತು. "ಈಗ ಮೊಮ್ಮಗಳ ಅಲಂಕಾರ ಪರಿಪೂರ್ಣವಾಯಿತು.." ಎಂದರು.
ವರುಷಗಳು ಹಲವು ಉರುಳಿದರೂ ಈಗಲೂ ಅಕ್ಕನನ್ನು ಕಂಡಾಗ ಅಪರೂಪಕ್ಕಾದರೂ "ಸ್ಟಿಕ್ಕರ್ ಹೋಗಿ ಸಿಂಧೂರ ಬಂತು.. ಢುಂ.. ಢುಂ.. ಢುಂ.." ಎಂದು ಆ ಘಟನೆಯನ್ನು ನೆನಪಿಸಿ ಛೇಡಿಸುತ್ತಾನೆ ತಮ್ಮ ಸುಧಾಂಶು.
✍️... ಅನಿತಾ ಜಿ.ಕೆ.ಭಟ್.
28-12-2021.
#ಮಾಮ್ಸ್‌ಪ್ರೆಸೊ ಕನ್ನಡದ ವಾರದ ಸವಾಲು 'ಮದುವೆ ಮನೆಯ ಅವಾಂತರ'ಕ್ಕಾಗಿ ಬರೆದಿರುವುದು.
No comments:
Post a Comment