Monday, 31 May 2021

ತಲ್ಲಣಿಸದಿರು ಕಂಡ್ಯ ತಾಳು ಮನವೇ

     


      ಕೊರೋನಾ ಕಾರಣದಿಂದ ಲಾಕ್ ಡೌನ್ ಮಾಡಿದ್ದರೂ ಪ್ರಕೃತಿ ಲಾಕ್ ಆಗಿರಲಿಲ್ಲವಲ್ಲ!  ಎಂದಿನಿಂದಲೂ ಹೆಚ್ಚು ಕಲರವ ಪ್ರಕೃತಿಯ ಮಡಿಲಲ್ಲಿತ್ತು. ಮುಂಜಾನೆಯ ಹಕ್ಕಿಗಳ ಚಿಲಿಪಿಲಿ, ಜಗಕೆ ಚೈತನ್ಯ ತುಂಬುತ್ತಾ,  ಕತ್ತಲೆಯ ಮುಸುಕನು ಸರಿಸಿ ಹೊಂಬಣ್ಣದಿಂದ ಮೇಲೆದ್ದು ಬರುವ ರವಿಯ ತೇಜಸ್ಸನ್ನು ಬೆರಗುಗಣ್ಣಿನಿಂದ ದಿಟ್ಟಿಸುತ್ತಾ ನನ್ನ ದಿನಚರಿ ಆರಂಭವಾಗುತ್ತಿತ್ತು. ದಿನದ ಕೆಲಸ ಕಾರ್ಯಗಳಲ್ಲಿ ಮುಳುಗಿ, ಎಲ್ಲರ ಬೇಕು ಬೇಡಗಳ ಬಗ್ಗೆ ಗಮನ ಕೊಡುತ್ತಾ, ಮಕ್ಕಳೊಂದಿಗೆ ಮಗುವಾಗುತ್ತಾ ಸಂಜೆಯಾದದ್ದೇ ತಿಳಿಯುತ್ತಿರಲಿಲ್ಲ. ಸಂಜೆಯ ತಂಗಾಳಿ ಸವಿಯುತ್ತಾ ಬಾನಂಚಿನ ತುಂಬಾ ಹಿಂಡು ಹಿಂಡಾಗಿ ಹಾರುವ ಪಕ್ಷಿಗಳು, ಮನೆಯ ಮುಂದಿನ ಗದ್ದೆಯಲ್ಲಿ ನೆಲವ ಕುಕ್ಕಿ ಕುಕ್ಕಿ ಅರಸುವ ನವಿಲುಗಳು ಕಣ್ಣಿಗೆ ಮುದನೀಡುತ್ತಿದ್ದವು. 


    ಇಂತಹಾ ಸಮಯದಲ್ಲಿ ಕಾಣಿಸಿಕೊಂಡಿತ್ತು ಶೀತ ಮತ್ತು ಜ್ವರ. ತಡಮಾಡದೆ ವೈದ್ಯರನ್ನು ಸಂಪರ್ಕಿಸಿದಾಗ ಸಾಮಾನ್ಯ ಫ್ಲೂ ಜ್ವರವೆಂದು ಔಷಧ ನೀಡಿದರು. ಇದರ ಬೆನ್ನಲ್ಲೇ ಪತಿ ಮಕ್ಕಳಿಗೂ ಜ್ವರ ಕಾಣಿಸಿಕೊಂಡಿತು. ಅವರಿಗೂ ಚಿಕಿತ್ಸೆ ನೀಡಿದ ವೈದ್ಯರು "ಇದು ವೈರಲ್ ಫ್ಲೂ.. ಪ್ರೀ ಮಾನ್ಸೂನ್ ನಿಂದಾಗಿ ಈಗ ಹಲವರಲ್ಲಿ  ಕಾಣಿಸಿಕೊಳ್ಳುತ್ತಿದೆ. ಹೆದರುವ ಅವಶ್ಯಕತೆ ಇಲ್ಲ. ಐದು ದಿನವಾದರೂ ಗುಣವಾಗದಿದ್ದರೆ ಕೋವಿಡ್ ಟೆಸ್ಟ್ ಮಾಡಿಸಿ"  ಎಂದರು. ಅವರು ಹೇಳಿದಂತೆಯೇ ಚಿಕಿತ್ಸೆ ಪಡೆದುಕೊಂಡೆವು. ಈ ಸಮಯದಲ್ಲಿ ನಾವು ನೆರೆಹೊರೆಯ ಯಾರೊಂದಿಗೂ ಉದ್ದೇಶಪೂರ್ವಕವಾಗಿಯೇ ಬೆರೆಯಲಿಲ್ಲ. ವೈದ್ಯರ ಭೇಟಿ, ನಿತ್ಯದ ಅಗತ್ಯ ವಸ್ತುಗಳ ಖರೀದಿಯ ಸಂದರ್ಭದಲ್ಲಿ ಅತೀವ ಜಾಗರೂಕತೆ ವಹಿಸಿದೆವು.


     ವೈದ್ಯರ ಔಷಧದೊಂದಿಗೆ ನಮ್ಮ ಮನೆಮದ್ದಿನ ಕಷಾಯದ ಉಪಚಾರವೂ ನಡೆಯಿತು. ಐದು ದಿನಗಳಲ್ಲಿ ಎಲ್ಲರೂ ಗುಣಮುಖರಾದೆವು. ಆದರೂ ಸುಸ್ತು ಕಡಿಮೆಯಾಗಿರಲಿಲ್ಲ. ಅಡುಗೆ ರುಚಿಸುತ್ತಿರಲಿಲ್ಲ. ಮಲ್ಲಿಗೆಯ ಮಾಲೆಯ ಕಂಪನ್ನೂ ನಾಸಿಕವು ಗ್ರಹಿಸುತ್ತಿರಲಿಲ್ಲ. ಈಗ ಕೋವಿಡ್ ಟೆಸ್ಟ್ ಮಾಡಿಸಬೇಕೋ ಬೇಡವೋ ಎಂಬ ಸಂದೇಹ ನಮ್ಮನ್ನು ಕಾಡಿತು. ಆಗ ನೆನಪಾದವರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ನಿವೃತ್ತ ಶುಶ್ರೂಷಕಿ ಮುದ್ರಜೆ ಪಾರ್ವತಿ ಅಕ್ಕ. ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದೆ. "ಅಗತ್ಯವಾಗಿ ಟೆಸ್ಟ್ ಮಾಡಿಸಿ" ಎನ್ನುತ್ತಾ... ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಸಲಹೆಗಳನ್ನು ನೀಡಿದರು.


      ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆರ್ ಟಿ ಪಿಸಿ ಆರ್ ಟೆಸ್ಟ್ ಮಾಡಿಸಿಕೊಂಡೆವು. ಅಲ್ಲೇ ಇದ್ದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡೆವು. ಅನಾರೋಗ್ಯದ ಲಕ್ಷಣಗಳನ್ನು ಕೇಳಿ ಬರೆದುಕೊಂಡು ನಾಲ್ಕು ಪ್ಯಾರಾಸಿಟಮಾಲ್ ಮಾತ್ರೆ, ಹತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ನನಗೆ ನೀಡಿದರು. ಪತಿಗೆ ಪ್ಯಾರಾಸಿಟಮಾಲ್ ಮಾತ್ರೆ ಮತ್ತು ಹತ್ತು ಜಿಂಕ್, ವಿಟಮಿನ್ ಸಿ ಇರುವ ಮಾತ್ರೆ ನೀಡಿ, ಆಗಾಗ ಬಿಸಿಬಿಸಿ ನೀರು ಕುಡಿಯುತ್ತಿರಿ ಎಂದರು.


    ಮರುದಿನ ಮಧ್ಯಾಹ್ನ ಕೋವಿಡ್ ಪಾಸಿಟಿವ್ ಎಂಬ ರಿಪೋರ್ಟಿನ  ಮೆಸೇಜ್ ಬಂತು.  ಹೋಂ ಕ್ವಾರೆಂಟೈನ್ ಗೆ ಸಜ್ಜಾದೆವು. ನೆರೆಮನೆಯವರು ಅಗತ್ಯವಸ್ತುಗಳನ್ನು ತಂದುಕೊಡಲು ಒಪ್ಪಿಕೊಂಡರು. ಪಾರ್ವತಿ ಅಕ್ಕನಿಗೂ ಕರೆ ಮಾಡಿ ವಿಷಯ ತಿಳಿಸಿದೆ. ಧೈರ್ಯ ಹೇಳಿ ಒಂದಷ್ಟು ಆರೋಗ್ಯದ ಸಲಹೆಗಳನ್ನು ನೀಡಿದರು. ಅಷ್ಟು ದಿನ ಯಾರೊಡನೆಯೂ ಜ್ವರ ಬಂದ ವಿಷಯ ಹಂಚಿಕೊಳ್ಳದಿದ್ದರೂ ಆ ದಿನ ಅಮ್ಮನಿಗೆ ಕರೆಮಾಡಿ ಜ್ವರ ಬಂದು ಗುಣವಾಗಿರುವುದು, ಕೊರೋನಾ ಪಾಸಿಟಿವ್ ಬಂದಿರುವುದನ್ನು ತಿಳಿಸಿದೆ. 


      ಮಕ್ಕಳು ಬೇಗನೆ ಗುಣಮುಖರಾಗುತ್ತಿದ್ದುದರಿಂದ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡೆವು. ಪತಿಗೆ ಆಗಾಗ ಸ್ವಲ್ಪ ಒಣ ಕೆಮ್ಮು ಕಾಡುತ್ತಿತ್ತು. ಒಂದೆರಡು ದಿನ ತಲೆನೋವು ಕೂಡಾ ಕಾಣಿಸಿಕೊಂಡಿತ್ತು. ಬೇಕೆಂದಾಗ ಅಲೋಪತಿ ಔಷಧಿ ಮತ್ತು ಮನೆಮದ್ದು ಸೇವಿಸುತ್ತಿದ್ದರು. ನನಗೆ ಸುಸ್ತಾಗುವುದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನೀಡಿದ ಕ್ಯಾಲ್ಸಿಯಂ ಮಾತ್ರೆ ಸೇವಿಸಿ ಬಿಸಿಬಿಸಿ ನೀರು ಆಗಾಗ ಕುಡಿಯುತ್ತಿದ್ದೆ.


     ಎರಡು ದಿನಗಳ ಬಳಿಕ ನನಗೆ ಇದ್ದಕ್ಕಿದ್ದಂತೆ ಬೆಳಗ್ಗೆ ಏಳುತ್ತಲೇ ತಲೆಸುತ್ತು ಆರಂಭವಾಯಿತು. ನಿಂತಲ್ಲೇ ಕುಸಿಯುವಂತಾಗಿ, ಐದು ನಿಮಿಷ ಅಲ್ಲೇ ಕೆಳಗೆ ಕುಳಿತುಬಿಟ್ಟೆ. ಅದಕ್ಕೆ ಸೂಕ್ತವಾದ ಮುದ್ರೆ ಮಾಡಿದೆ. ಆಗ ಸರಿಹೋಯಿತು. ದ್ರವಾಹಾರ ಸೇವಿಸಿ ದೈನಂದಿನ ಕೆಲಸಗಳನ್ನೆಲ್ಲ ಮಾಡಿದೆ. ತಿಂಡಿ ಸೇವಿಸಲು ಕುಳಿತಾಗ ಪುನಃ ತಲೆಸುತ್ತಿ ಅಲ್ಲೇ ಕುಸಿದ ನನ್ನನ್ನು ಪತಿ ರೂಮಿಗೆ ಕರೆದೊಯ್ದು ಮಲಗಿಸಿದರು. ಶರಬತ್ತು, ನೀರು ಕುಡಿದು ವಿಶ್ರಾಂತಿ ಪಡೆದುಕೊಂಡಾಗ ಸ್ವಲ್ಪ ಸರಿಹೋದಂತೆ ಅನಿಸುತ್ತಿತ್ತು.


  ಮುಂದೆ ಹೀಗೆ ಪ್ರತಿಬಾರಿ ಕುಸಿಯುವಂತಾದಾಗಲೂ ನಾನು ಯಾರನ್ನೂ ಸಹಾಯಕ್ಕಾಗಿ ಕೂಗಿ ಕರೆಯುತ್ತಿರಲಿಲ್ಲ. ಆ ಕ್ಷಣದಲ್ಲಿ ಅದಕ್ಕೆ ಸೂಕ್ತವಾದ ಮುದ್ರೆಯನ್ನೂ ಮಾಡುತ್ತಿದ್ದೆ. ಒಂದೆರಡು ನಿಮಿಷ ಅದೇ ಸ್ಥಳದಲ್ಲಿ ವಿರಮಿಸಿ, ನನ್ನ ಅಂತಃಶಕ್ತಿಯನ್ನು ಬಡಿದೆಬ್ಬಿಸುತ್ತಿದ್ದೆ.  "ಅನಿತಾ..ನಿನ್ನಿಂದ ಆಗುತ್ತೆ.. ಇದಕ್ಕಿಂತ ಕ್ಲಿಷ್ಟ ಸನ್ನಿವೇಶಗಳನ್ನು ಎದುರಿಸಿ ಬಂದವಳು ನೀನು. ಒಂದು ಕ್ಷಣ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಮೇಲೇಳುವ ಪ್ರಯತ್ನ ಮಾಡು." ಎಂದುಕೊಳ್ಳುತ್ತಿದ್ದರೆ ಸ್ವಲ್ಪ ಹೊತ್ತಿನಲ್ಲಿ ಏಳುವಷ್ಟು ಶಕ್ತಿ ತುಂಬುತ್ತಿತ್ತು. ಬೇಕಾದ ನೀರು, ಶರಬತ್ತು ಮಾಡಿ ಕುಡಿದು ಕೋಣೆಗೆ ತೆರಳಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದೆ. ದೃಶ್ಯ ಮಾಧ್ಯಮದಲ್ಲಿ ಜನ ಎಲ್ಲೆಂದರಲ್ಲಿ ಕುಸಿದು ಬೀಳುವುದನ್ನು ಕಂಡಾಗ ಆದಷ್ಟು ಭಯ, ಸ್ವತಃ ನಾನೇ ಕುಸಿದಾಗ ಆಗುತ್ತಿರಲಿಲ್ಲ. ಬದಲಾಗಿ ಅದರಿಂದ ಪಾರಾಗಲು ನನ್ನ ಅಂತಃಶಕ್ತಿಯನ್ನು ಪ್ರಚೋದಿಸುವತ್ತ ಗಮನಹರಿಸುತ್ತಿದ್ದೆ. 'ಈ ಕ್ಷಣ ಶಾಶ್ವತವಲ್ಲ. ಈ ಯಾತನೆ ಬಲು ಬೇಗನೆ ಕೊನೆಗೊಳ್ಳುತ್ತದೆ. ಸುಂದರ ನಾಳೆಗಳಿಗಾಗಿ ಇಂದಿನ ಆಪತ್ತನ್ನು ಎದುರಿಸಲೇಬೇಕು' ಎಂದು ನನಗೆ ನಾನೇ ಆಗಾಗ ಹೇಳಿಕೊಳ್ಳುತ್ತಿದ್ದೆ.


     ಎಷ್ಟು ನೀರು ಕುಡಿದರೂ ದಣಿಯದ ದಾಹ, ಫೋನಿನಲ್ಲಿ ಎರಡೇ ನಿಮಿಷ ಮಾತನಾಡಿದರೂ ಒಣಗುವ ಗಂಟಲು, ಬಿರಿವ ತುಟಿ, ಸುತ್ತುವ ತಲೆ.. ಅಮ್ಮ ಆರೋಗ್ಯ ವಿಚಾರಿಸಲು ಕರೆ ಮಾಡಿದರೂ ಸಹ "ಅಮ್ಮಾ.. ಎರಡೇ ನಿಮಿಷ ಮಾತನಾಡುವುದು.. " ಎಂದು ಹೇಳಿಯೇ ಮಾತು ಆರಂಭಿಸುತ್ತಿದ್ದೆ. ಅಮ್ಮನೂ ಅಷ್ಟೇ ಬಹಳ ಚುಟುಕಾಗಿ ವಿಚಾರಿಸಿಕೊಂಡು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಜೀವನದಲ್ಲಿ ಇದೇ ಮೊದಲ ಬಾರಿಗೆ ಅಮ್ಮ-ಮಗಳ ಸಂಭಾಷಣೆ ಇಷ್ಟು ಚಿಕ್ಕಚೊಕ್ಕದಾಗಿ ನಡೆದಿರುವುದು ಎಂದರೂ ತಪ್ಪಿಲ್ಲ! ಕೆಲವು ದಿನ ಕರೆ ಸ್ವೀಕರಿಸಲೂ ಸಾಧ್ಯವಾಗದೆ, ಪತಿ ಅಥವಾ ಮಗನಿಗೆ ವಹಿಸಿಬಿಡುತ್ತಿದ್ದೆ. 


     ಹೀಗೆಯೇ ಮೂರು ನಾಲ್ಕು ದಿನವಾದಾಗ ಸ್ವಲ್ಪ ಉಸಿರಾಟದ ಸಮಸ್ಯೆ ಆರಂಭವಾಯಿತು. ಗಂಟಲುನೋವು, ಶೀತ, ಕಫ.. ಇತ್ಯಾದಿ ಯಾವ ಸಮಸ್ಯೆಯೂ ಇರಲಿಲ್ಲ. ಆದರೂ ಏದುಸಿರು ಬರುತ್ತಿತ್ತು. ಒಬ್ಬ ಫಿಸೀಶಿಷಯನ್ ಗೆ ಕರೆ ಮಾಡಿ ಆರೋಗ್ಯ ಸ್ಥಿತಿಯನ್ನು ವಿವರಿಸಿದೆ. "ರಿಸ್ಕ್ ತೆಗೆದುಕೊಳ್ಳುವುದು ಬೇಡ. ಆಸ್ಪತ್ರೆಗೆ ದಾಖಲಾಗಿ" ಎಂದರು. ನನಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದೆಂಬ ಭಾವನೆ. ಆರೋಗ್ಯದ ಬಗ್ಗೆ ಮತ್ತಷ್ಟು ವಿಚಾರಿಸಿಕೊಂಡ ವೈದ್ಯರು "ಯಾವುದಕ್ಕೂ ಸಂಜೆ ಹೇಳುತ್ತೇನೆ. ಹಿಂದಿನ  ಪ್ರಿಸ್ಕ್ರಿಪ್ಷನ್ ಕಳುಹಿಸಿ ಕೊಡಿ" ಎಂದರು.


   ಇಂತಹ ಸಮಯದಲ್ಲಿ ಪ್ರೋನಿಂಗ್ ಎಕ್ಸೆರ್ಸೈಸ್ ತುಂಬಾ ಸಹಾಯ ಆಯ್ತು. ರಾತ್ರಿ ಫಿಸಿಶಿಯನ್  ಔಷಧೋಪಚಾರದ ಪ್ರಿಸ್ಕ್ರಿಪ್ಷನ್ ಕಳುಹಿಸಿದರು. ಕೋವಿಡ್ ಸೋಂಕು ತಗಲಿದವರಿಗೆ ಕೊಡುವಂತಹ ಔಷಧಗಳು ಮತ್ತು ಸಿಂಪ್ಟಮ್ಯಾಟಿಕ್ ಔಷಧಿಗಳು ಅದರಲ್ಲಿದ್ದವು. ಮೊದಲ ಡೋಸ್ ಸೇವಿಸಿ ಒಂದು ಗಂಟೆಗೇ ಸ್ವಲ್ಪ ಸರಿಹೋದಂತೆ ಅನ್ನಿಸಿ, ಮನೆಯಲ್ಲಿ ಚಿಕಿತ್ಸೆ ಪಡೆದು ಗುಣವಾಗಬಹುದೆಂಬ ವಿಶ್ವಾಸ ಮೂಡಿತು. ಕೆಲವು ದಿನಗಳ ಚಿಕಿತ್ಸೆ ಪಡೆದು ತಲೆಸುತ್ತು, ನಿತ್ರಾಣ ಶಮನವಾಗಿ ಶರೀರವು ಸಹಜ ಆರೋಗ್ಯದತ್ತ ಮರಳಿತು.

      ಈಗ ಎಲ್ಲರೂ ಗುಣಮುಖರಾಗಿದ್ದೇವೆ. ಕೊರೋನಾ ಸೋಂಕಿನಿಂದ ಮುಕ್ತರಾಗಿದ್ದೇವೆ. ಹೋಂ ಕ್ವಾರೆಂಟೈನ್ ಅವಧಿಯೂ ಪೂರ್ಣಗೊಂಡಿದ್ದು,  ಜೀವನವು ಮತ್ತೆ ಯಥಾಸ್ಥಿತಿಯಲ್ಲಿ ಸಾಗುತ್ತಿದೆ. 


       ನಮ್ಮ ಜೀವನದಲ್ಲಿ ಹಲವಾರು ಸಲ ಅನಾರೋಗ್ಯ,  ಜ್ವರದಿಂದ ಬಳಲಿದ್ದೇವೆ. ಇದಕ್ಕಿಂತಲೂ ಹೆಚ್ಚು ಯಾತನೆ ಅನುಭವಿಸಿದ್ದೂ ಇದೆ. ಆದರೆ ಇದು ಹೊಸ ಸೋಂಕು ಹಾಗೂ ವರುಷದಿಂದೀಚೆಗೆ ವಿಶ್ವದಾದ್ಯಂತ ಹಬ್ಬಿ  ಜನರನ್ನು ಕಂಗೆಡಿಸಿರುವುದರಿಂದ ಸ್ವಲ್ಪ ಹೆಚ್ಚೇ ಎಚ್ಚರವಹಿಸಿದ್ದೆವು.  ನಿರ್ಲಕ್ಷ್ಯ ತೋರಿದರೆ ಪ್ರಾಣಾಪಾಯ ತಂದೊಡ್ಡುವ ಸೋಂಕು ಇದಾಗಿದ್ದರೂ 'ಕೊರೋನಾ ರುದ್ರನರ್ತನ', 'ಕೊರೋನಾ ರಣಕೇಕೆ', 'ಅಟ್ಟಹಾಸಗೈಯುತ್ತಿರುವ ಕೊರೋನಾ',  'ಸಿಕ್ಕಸಿಕ್ಕವರನ್ನು ಬಲಿಪಡೆಯುತ್ತಿರುವ ಕೋವಿಡ್ ಮಹಾಮಾರಿ' ಎಂಬ ಬ್ರೇಕಿಂಗ್ ನ್ಯೂಸಿನ ಹೆಡ್ ಲೈನ್ ಗಳು ಹುಟ್ಟಿಸಿದಷ್ಟು ಭಯ ಸ್ವತಃ ಅನುಭವಿಸುವಾಗ ಆಗಲಿಲ್ಲ.


     ಈ ಸಮಯದಲ್ಲಿ ನಾವು ನಮ್ಮ ಆತ್ಮವಿಶ್ವಾಸವನ್ನು ಬಲಗೊಳಿಸುತ್ತಲೇ ಇದ್ದೆವು.  ಆಗಾಗ ನಗೆಚಟಾಕಿಗಳನ್ನೂ ಹಾರಿಸುತ್ತಿದ್ದೆವು. ನಾನು ಆಯಾಯ ಸಂದರ್ಭದ ಅನಾರೋಗ್ಯಕ್ಕೆ ತಕ್ಕಂತೆ ಪರಿಹಾರಕ್ಕಾಗಿ ಮುದ್ರೆಗಳನ್ನೂ ಮಾಡುತ್ತಿದ್ದೆ. ದೈನಂದಿನ ಕೆಲಸಕಾರ್ಯಗಳ ಕಡೆಗೂ ಮನಸು ಕೇಂದ್ರೀಕರಿಸಿದೆವು. ಸಂಗೀತ, ಕೊಳಲುವಾದನಗಳನ್ನು ಆಲಿಸುತ್ತಿದ್ದೆವು. ಬಸಳೆ, ಹರಿವೆ, ಕುಂಬಳಕಾಯಿ, ಸೌತೆಕಾಯಿಗಳನ್ನು ಬಳಸಿದ್ದೆವು. ಬಿಸಿನೀರು, ಶರಬತ್ತು, ರಾಗಿ ಗಂಜಿ, ಕೊತ್ತಂಬರಿ-ಜೀರಿಗೆ ಕಷಾಯಗಳನ್ನು ಹೆಚ್ಚು ಸೇವಿಸುತ್ತಿದ್ದೆವು. ತಲೆಸುತ್ತಿದಾಗ ಚಿಟಿಕೆ ಉಪ್ಪು ಬೆರೆಸಿದ ನಿಂಬೆಹುಳಿ ಶರಬತ್ತು, ಪುನರ್ಪುಳಿ ಶರಬತ್ತು ಶರೀರಕ್ಕೆ ಬಲಕೊಡುತ್ತಿತ್ತು. ಪ್ರತಿದಿನ ಊಟದ ಜೊತೆ ಎಂದಿನಂತೆ ಸಾಂಬಾರು(ಅಥವಾ ಕಾಯಿಹುಳಿ)ಮಾಡುತ್ತಿದ್ದರೂ, ಆರೋಗ್ಯಕರವಾದ ಸಾರು ಅಥವಾ ತಂಬುಳಿ ನಿತ್ಯವೂ ಮಾಡುತ್ತಿದ್ದೆವು. ಕುಚ್ಚಿಲಕ್ಕಿ ಗಂಜಿಯೂಟದ ಜೊತೆಗೆ ನಿಂಬೆಹುಳಿ ಉಪ್ಪಿನಕಾಯಿ ಶರೀರಕ್ಕೂ ನಾಲಿಗೆಗೂ ಬಲು ಹಿತವಾಗುತ್ತಿತ್ತು. ಅಡುಗೆಯಲ್ಲಿ, ಮನೆ ನಿರ್ವಹಣೆಯಲ್ಲಿ ಪತಿ ಮಕ್ಕಳೂ ಸಹಕರಿಸುತ್ತಿದ್ದರು. 


      ಸೋಂಕಿನಿಂದ ಹೊರಬರಲು ನಾನಾ ವಿಧದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಎಲ್ಲರೂ ಸದಾ ಸ್ಮರಣೀಯರು. ಅವರೆಲ್ಲರ ಪ್ರೀತಿ, ಕಾಳಜಿಯನ್ನು ವರ್ಣಿಸಲು ಪದಗಳಿಲ್ಲ. ಜಗತ್ತನ್ನು ಕೋವಿಡ್ ಮುಕ್ತಗೊಳಿಸಲು  ಸೇವೆಗೈಯುತ್ತಿರುವ ಎಲ್ಲಾ ವೈದ್ಯರು, ದಾದಿಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಗೌರವದ ನಮನಗಳು. 


    ಕೊರೋನಾದಿಂದ ಚೇತರಿಸಿಕೊಂಡ ನಂತರ ಪೌಷ್ಟಿಕಾಂಶಯುಕ್ತ, ಬಿಸಿಯಾದ ಆಹಾರ ಸೇವನೆಯು ಬಲು ಅವಶ್ಯಕ.  ಒಣಹಣ್ಣುಗಳು, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸುತ್ತಿರಬೇಕು. ಸೊಪ್ಪು ತರಕಾರಿಗಳನ್ನು ಹೆಚ್ಚು ಬಳಸಬೇಕು. ಮೊಳಕೆ ಕಾಳುಗಳು, ಪ್ರೋಟೀನ್ ಭರಿತ ಬೇಳೆಗಳು ನಿತ್ಯ ಬಳಸುವುದು ಪುಷ್ಟಿದಾಯಕ. ಯೋಗಾಸನ, ಪ್ರಾಣಾಯಾಮ ಧ್ಯಾನ, ಮುದ್ರೆಗಳು ಮನೋದೈಹಿಕ ಉಲ್ಲಾಸವನ್ನು ತುಂಬುತ್ತವೆ. ಸದಾ ಧನಾತ್ಮಕ ಚಿಂತನೆ ಮತ್ತು ಖುಷಿಯಾಗಿರುವುದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ.


      ಕೊರೋನಾ ಬಂದರೆ ಹೇಗಪ್ಪಾ?, ಏನು ಮಾಡುವುದು? ಎಂಬ ಆತಂಕ ಬೇಡ. ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಟೆಸ್ಟ್ ಮಾಡಿಸಿ, ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ಆದಷ್ಟು ಇತರರಿಗೆ ಹರಡದಂತೆ ಎಚ್ಚರವಹಿಸಿ. ಸೂಕ್ತ ಔಷಧೋಪಚಾರಗಳನ್ನು ಮಾಡುತ್ತಾ, 'ನಾನು ಕೋವಿಡ್ ವಿರುದ್ಧ ಹೋರಾಡಿ ಜಯಗಳಿಸಬಲ್ಲೆ' ಎಂಬ ಆತ್ಮವಿಶ್ವಾಸ ಮೂಡಿಸಿಕೊಳ್ಳಿ. ಸರಕಾರದ ನಿಯಮಗಳನ್ನು ಪಾಲಿಸಿ. ನಮ್ಮನ್ನೂ ನಮ್ಮ ಸಮಾಜವನ್ನೂ ಸೋಂಕು ಮುಕ್ತಗೊಳಿಸುವ ಜವಾಬ್ದಾರಿಯ ಅರಿವು ಪ್ರತಿಯೊಬ್ಬರಿಗೂ ಬರಲಿ.


#ಲೋಕಾ ಸಮಸ್ತಾ ಸುಖಿನೋ ಭವಂತು #ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ #ಸುರಕ್ಷಿತವಾಗಿರಿ.


✍️... ಅನಿತಾ ಜಿ.ಕೆ.ಭಟ್.

31-05-2021.




2 comments: