ಜೀವನ ಮೈತ್ರಿ ಭಾಗ ೯೭
ಬೆಂಗಳೂರಿನಿಂದ ಶಂಕರ ಶಾಸ್ತ್ರಿಗಳು ಕರೆ ಮಾಡಿದರು.ಅಮ್ಮನೊಡನೆ ಮಾತನಾಡಿ ಅಪ್ಪನನ್ನೂ ಕೂಡಾ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಒತ್ತಾಯಿಸಿದರು..
"ಮಗ..ಅವರು ಹಾಗೆಲ್ಲ ಬರಲು ಒಪ್ಪಲಾರರು.." ಎಂದರು ಮಹಾಲಕ್ಷ್ಮಿ ಅಮ್ಮ..
"ಅಪ್ಪನಲ್ಲೇ ಮಾತನಾಡುತ್ತೇನೆ . ಒಮ್ಮೆ ಕೊಡಮ್ಮ ಅಪ್ಪನಿಗೆ ಫೋನ್..''
"ಆಯ್ತು."ಎಂದ ಮಹಾಲಕ್ಷ್ಮಿ ಅಮ್ಮ ಪತಿಯನ್ನು ಕರೆದರು.
ಶಂಕರ ಶಾಸ್ತ್ರಿಗಳು ಅಪ್ಪನನ್ನು ಬರುವಂತೆ ಒತ್ತಾಯಿಸಿದಾಗ ಮೊದಲು ನಿರಾಕರಿಸಿದರೂ ಕೊನೆಗೆ ಒಪ್ಪಿಕೊಂಡರು..
ಶಂಕರ ಶಾಸ್ತ್ರಿಗಳು ಮುಂದುವರಿಸುತ್ತಾ ...
"ಅಪ್ಪಾ.. ನೀವು ಮೂವರು ಬಸ್ ನಲ್ಲಿ ಬರುವುದಕ್ಕಿಂತ ಕಾರು ಮಾಡಿಕೊಂಡು ಬನ್ನಿ.. ನಾನು ಚಕ್ಕೆಮೂಲೆ ಕಾರಂತಣ್ಣನ ಕಾರು ಬಾಡಿಗೆಗೆ ಬುಕ್ ಮಾಡುತ್ತೇನೆ.. ಬಾಡಿಗೆ ವಿಷಯ ನಾನೇ ನೋಡಿಕೊಳ್ಳುವೆ.ನೀವು ಬನ್ನಿ.."ಎಂದರು.
ಮಗ ಇಷ್ಟೆಲ್ಲಾ ವ್ಯವಸ್ಥೆ ಮಾಡಿದಾಗ ಶ್ಯಾಮ ಶಾಸ್ತ್ರಿಗಳು ಖುಷಿಯಿಂದ ಒಪ್ಪಿದರು.ಫೋನಿಟ್ಟಾಗ ಮಹಾಲಕ್ಷ್ಮಿ ಅಮ್ಮ ಗಂಡನಲ್ಲಿ
"ಮೂರು ಜನ ಆಗಿ ಹೋಗಬಾರದು.." ಎಂದು ತಗಾದೆ ತೆಗೆದರು.
ಮಂಗಳಮ್ಮ "ಮೂರು ಜನ ಹೇಗಾಗುತ್ತೆ..? ಡ್ರೈವರ್ ಕಾರಂತಣ್ಣ ಸೇರಿ ನಾಲ್ಕು ಜನ" ಎಂದರು.. ಮಹಾಲಕ್ಷ್ಮಿ ಅಮ್ಮ ನಿಗೆ ಸಮಾಧಾನವಿಲ್ಲ.ಕೊನೆಗೆ ಇಷ್ಟೆಲ್ಲಾ ವ್ಯವಸ್ಥೆ ಇರುವಾಗ ನಾನೊಮ್ಮೆ ತಮ್ಮನ ಮನೆಗೆ,ಮಗಳ ಮನೆಗೆ ಹೋದರೆ ಹೇಗೆ ? ಎಂಬ ಯೋಚನೆ ಬಂತು ಭಾಸ್ಕರ ಶಾಸ್ತ್ರಿಗಳಿಗೆ .
"ಹಾಗಾದರೆ ನಾನೂ ಬರುತ್ತೇನೆ..ಜನರ ಸಂಖ್ಯೆ ಸರಿಯಾಗುತ್ತದೆ ಅಮ್ಮ "ಎಂದರು..ಮಂಗಳಮ್ಮ ಕಿವಿ ನೆಟ್ಟಗೆ ಮಾಡಿಕೊಂಡರು.. ಇವರೆಲ್ಲರೂ ಹೋದಾಗ ಕೆಲವು ದಿನದ ಮಟ್ಟಿಗಾದರೂ ಗಂಡನ ಜೊತೆ ಹಾಯಾಗಿದಬಹುದು ಎಂದು ಲೆಕ್ಕ ಹಾಕಿದರೆ..ಇವರೂ ಹೊರಡುವುದಾ?..ಈ ಗಂಡನಿಗೆ ಪತ್ನಿಯ ಜೊತೆ ಒಂದು ವಾರವಾದರೂ ಏಕಾಂತದಲ್ಲಿ ಕಳೆಯಬೇಕು ಎಂದು ಅನಿಸುವುದೇ ಇಲ್ಲವೇ..? ಇಂತಹ ಅವಕಾಶ ಸಿಗುವುದು ಬಹಳ ಅಪರೂಪ.. ಎಂದು ಯೋಚಿಸುತ್ತಾ ಮುಖ ಸಣ್ಣದು ಮಾಡಿಕೊಂಡರು.
*****
ಮಮತಮ್ಮ ಬೆಂಗಳೂರಿನಲ್ಲಿ ಮಗನ ಮನೆಯಲ್ಲಿದ್ದಾಗ ತನ್ನ ಬಾಲ್ಯದ ಗೆಳತಿ ಗಿರಿಜೆಯನ್ನು ಫೋನ್ ಮಾಡಿ ಮನೆಗೇ ಬರಲು ಹೇಳಿ ಭೇಟಿಯಾದರು.ತುಂಬಾ ವರುಷಗಳ ನಂತರ ಆದ ಭೇಟಿ .. ಇಬ್ಬರೂ ತಮ್ಮ ಜೀವನದ ಕಷ್ಟ ಸುಖ ಹಂಚಿಕೊಂಡರು.ಆಕೆ ಮದುವೆಯಾಗಿ ಬೆಂಗಳೂರಿಗೆ ಬಂದವಳು.ಮಕ್ಕಳು ಶಾಲೆಗೆ ಹೋಗಲು ಆರಕಭಿಸುತ್ತಿದಂತೆ ನೌಕರಿಗೆ ಸೇರಿಕೊಂಡವಳು.ಈಗ ಮಕ್ಕಳಿಗೆ ಮದುವೆಯಾಗಿ ಅವರವರ ಜೀವನವನ್ನು ಕಟ್ಟಿಕೊಂಡಿದ್ದಾರೆ.ಇವರು ಉದ್ಯೋಗ ಬಿಟ್ಟು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ..ಗಂಡ ಹೆಂಡತಿ ಇಬ್ಬರೇ ಇದ್ದು ಬೇಸರವಾಗುತ್ತಿದ್ದಾಗ ಒಮ್ಮೆ ಗೆಳತಿ ಮಾತಿಗೆ ಸಿಕ್ಕಿದ್ದು ಅವರಿಗೂ ಒಂದು ಬದಲಾವಣೆ..
ಹಳ್ಳಿಯಿಂದ ಬರುವಾಗ ತಂದಿದ್ದ ತರಕಾರಿ ಮಾವಿನ ಹಣ್ಣು,ಹಪ್ಪಳ,ಎಲ್ಲ ಕಂಡ ಗಿರಿಜೆಗೆ ನಾಲಿಗೆ ನೀರೂರಿತು.. "ಇಲ್ಲಿ ಎಲ್ಲವನ್ನೂ ಕೊಂಡುಕೊಳ್ಳಬಹುದು .ಆದರೆ ತಾಜಾತನವಿರುವುದಿಲ್ಲ.. ಹಳ್ಳಿಯೇ ವಾಸಕ್ಕೆ ಯೋಗ್ಯ.ಪಟ್ಟಣ ಉದ್ಯೋಗಕ್ಕೆ ಸೂಕ್ತ.."ಎಂದು ಹೇಳಿಕೊಂಡರು.ಮಗಸೊಸೆಯ ವಿಚಾರ ಕೇಳುತ್ತಾ "ಯಾವುದಕ್ಕೂ ಅತಿಸಲಿಗೆ ಕೊಡಬೇಡ.ಮತ್ತೆ ಮಗ ನಿನ್ನ ಮಾತನ್ನೆಲ್ಲಿ ಕೇಳುತ್ತಾನೆ.ಮಡದಿಯ ಮಾತಿಗೇ ಬೆಲೆ.ನಮ್ಮ ಮಗನೂ ಹಾಗೆ..ಸೊಸೆಯ ದೌರ್ಬಲ್ಯಗಳನ್ನು ಹೇಳಿದರೂ ಕ್ಯಾರೇ ಮಾಡುವುದಿಲ್ಲ.."
ಆದರೆ ಅದಕ್ಕೆ ಮಾತ್ರ ಒಪ್ಪದ ಮಮತಮ್ಮ.."ಹಾಗಲ್ಲ ಗಿರಿಜೆ.. ನಾವು ಮಗ ಸೊಸೆಯೆಂದು ಭೇದ ಮಾಡದೆ ಇಬ್ಬರನ್ನು ಮಕ್ಕಳಂತೇ ಕಾಣಬೇಕು.ನಮ್ಮ ಪ್ರೀತಿಯ ವರ್ತುಲದಲ್ಲಿ ಬದುಕಿದ ಮಗ ಸೊಸೆ ನಮ್ಮ ಮಾತಿಗೆ ಬೆಲೆ ಕೊಡುತ್ತಾರೆ.."
"ಎಲ್ಲ ಹೇಳೋದಕ್ಕೆ ,ಕೇಳೋದಕ್ಕೆ ಮಾತ್ರ ಚಂದ ಮಮತಾ..ಅವರವರ ಕಾಲಬುಡಕ್ಕೆ ಬಂದಾಗಲೇ ಅರಿವಾಗುವುದು.."
"ಗಿರಿಜೆ..ನಾನಂತೂ ಹಾಗೇ ಭಾವಿಸುವುದಿಲ್ಲ.ನನಗೂ ಇಬ್ಬರು ಮಗಳಂದಿರಿದ್ದಾರೆ.ಅವರಿಗೂ ನಾನು ಹೇಳುವುದು ಇದನ್ನೇ..ನಿಮ್ಮ ಅತ್ತೆ, ಮಾವ, ಕುಟುಂಬದವರನ್ನು ಪ್ರೀತಿಯಿಂದ ಕಾಣಿ. ಅವರನ್ನು ಗೌರವಿಸಿ .. ಕೋಪದಲ್ಲಿ ಎರಡು ಮಾತು ಬಂದರೆ ಆದಷ್ಟು ಬೇಗ ಮರೆತು ಬಿಡಿ.ಅದನ್ನೇ ಮುಂದೆ ಇಟ್ಟುಕೊಂಡು ವೈಮನಸ್ಸು ಬೆಳೆಸಬೇಡಿ ಎಂದು..ಮಗನನ್ನೂ ಅದೇ ರೀತಿ ಬೆಳೆಸಿದ್ದೇವೆ..ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡುವವನಲ್ಲ.ನಮ್ಮ ಈ ರೀತಿಯ ನಡವಳಿಕೆಯ ವಾತಾವರಣದಲ್ಲಿ ಬಾಳುವ ಸೊಸೆಯೂ ಕ್ರಮೇಣ ಅದೇ ಅಭ್ಯಾಸ ವನ್ನು ರೂಢಿಸಿಕೊಳ್ಳುತ್ತಾಳೆ ಎಂಬುದು ನನ್ನ ಭಾವನೆ.. ಅವಳೂ ಸುಸಂಸ್ಕೃತ ಮನೆತನದಲ್ಲಿಯೇ ಬೆಳೆದವಳು.
ಅಕಸ್ಮಾತ್ ಸ್ವಲ್ಪ ಮಟ್ಟಿಗೆ ನಿರಾಸೆ ಹುಟ್ಟಿಸಿದರೂ .. ಸಂಪೂರ್ಣ ಸುಳ್ಳಾಗಲಾರದು ಎಂದು ನನ್ನ ಅಭಿಪ್ರಾಯ..ಸೊಸೆಗೂ ಕುಟುಂಬ ವರ್ಗ ಇರುತ್ತದೆ.ಕಷ್ಟ ಸುಖದ ಅರಿವಿರುತ್ತದೆ..."ಎಂದು ಮಮತಮ್ಮ ಹೇಳುತ್ತಿದ್ದರೆ..ಗಿರಿಜೆಗೆ ಮಾತ್ರ ಅವಳ ಮಾತಿನಲ್ಲಿ ನಂಬಿಕೆ ಬರಲಿಲ್ಲ.
"ನಿಜವಾಗಿಯೂ ನಿನ್ನ ಮಗಳಂದಿರಿಬ್ಬರೂ ಅತ್ತೆ ಮಾವನ ಜೊತೆಗೆ ವಾಸಿಸುತ್ತಿದ್ದಾರಾ..?" ಎಂದು ಪುನಃ ಪ್ರಶ್ನಿಸಿದಳು..
ಹೌದೆಂದ.. ಮಮತಾ ಮಗಳಂದಿರ ಕುಟುಂಬದ ಫೊಟೋ ತೋರಿಸಿದಳು..
"ಇದೆಲ್ಲ ಹಳ್ಳಿಯಲ್ಲಿ ಆಗುತ್ತೆ ಅನಿಸುತ್ತದೆ. ನಂಗಂತೂ ಈ ಪೇಟೆಯಲ್ಲಿ ಈ ತರಹ ಒಟ್ಟಿಗೆ ಇರುವ ಕುಟುಂಬ ಯಾವುದೂ ಕಂಡಿಲ್ಲ ಮಮತಾ.."ಎಂದಳು..
ಮಾತಿನ ಓಟ ಸಾಗಿತು.ಸಂಜೆ ಮನೆಗೆ ತೆರಳಿದ ಗಿರಿಜೆಗೆ ಮಮತಳ ಮಾತು ತಲೆಯೊಳಗೆ ಕೊರೆಯುತ್ತಿತ್ತು.ತಾನು ಮಗನಿಗೆ ಮದುವೆಯಾದ ಆರಂಭದಲ್ಲೇ ಸೊಸೆಯ ಮೇಲೆ ಅಧಿಕಾರ ಚಲಾಯಿಸಿದ್ದು,ನನ್ನ ಮಾತೇ ನಡೆಯಬೇಕೆಂದು ಹಠ ಸಾಧಿಸಿದ್ದನ್ನು ನೆನಪಿಸಿಕೊಂಡು ನನ್ನ ಈ ಗುಣದಿಂದಲೇ ಮಗ ಹೆಂಡತಿಯ ಜೊತೆ ಬೇರೆ ಮನೆಯಲ್ಲಿ ವಾಸಿಸಲು ಆರಂಭಿಸಿದರೋ ಏನೋ ..ಮಗ ಹೇಳಿದ್ದು ಅದೇ ತಾನೇ ನಮ್ಮಿಂದಾಗಿ ಈ ಮನೆ ರಣಾಂಗಣ ವಾಗುವುದು ಬೇಡ ಎಂದು.. ನಾನು ಆ ತಪ್ಪನ್ನು ಮಾಡದೇ ಇದ್ದಿದ್ದರೆ , ಪ್ರೀತಿಯಿಂದ ಕಾಣುತ್ತಿದ್ದರೆ ಇವತ್ತು ಕೂಡ ಮಗ-ಸೊಸೆಯೊಂದಿಗೆ ಇದೇ ಮನೆಯಲ್ಲಿ ಬಾಳಬಹುದಿತ್ತು. ಮಮತಾಗೆ ಇದ್ದ ಬುದ್ಧಿ ನನಗೆ ಇರಲಿಲ್ಲವಲ್ಲ...ಎಂದು ಯೋಚಿಸತೊಡಗಿದಳು.
********
ಶಶಿ ತನ್ನದೇ ಆದ ಧಾಟಿಯಲ್ಲಿ ಯೋಚಿಸುತ್ತಿದ್ದಳು. ಸೊಸೆಯಾಗಿ ಬರುವ ಮಹತಿ ಮೊದಲೇ ನಾನು ಹಳ್ಳಿಗೆ ಹೊಂದಿಕೊಳ್ಳುವುದಿಲ್ಲ ಎಂಬ ಸೂಚನೆಯನ್ನು ನೀಡಿದ್ದಾಳೆ. ಆದರೂ ಅಪರೂಪಕ್ಕೆ ಸಿಕ್ಕ ಈ ಸಂಬಂಧವನ್ನು ಬೇಡ ಎನ್ನುವಂತೆಯೂ ಇಲ್ಲ.ಈಗ ನಿಶ್ಚಿತಾರ್ಥಕ್ಕೆ ಅಮ್ಮನನ್ನು ಕರೆದುಕೊಂಡು ಹೋದರೆ "ನಿನಗೆ ಆ ಕೆಲಸ ಬರುತ್ತಾ ..? ಈ ಕೆಲಸ ಬರುತ್ತಾ ..?"ಎಂದೆಲ್ಲ ಅಮ್ಮ ಕೇಳದೆ ಇರಲಾರರು. ಎಷ್ಟಾದರೂ ಹಿರಿಯವರು ..ಅವರ ಬುದ್ಧಿ ಅವರು ಬಿಡುವುದುಂಟೆ. ಇದರಿಂದ ನೇರನುಡಿಯ ಹೆಣ್ಣಿನ ಕಡೆಯವರಿಗೆ ನೋವಾಗಿ ಎಲ್ಲಿಯಾದರೂ ಸಂಬಂಧ ಮುರಿದರೆ.. ಹೌದು ಅದಕ್ಕಾಗಿ ಅಮ್ಮನನ್ನು ನೆಪಹೇಳಿ ಬಾರದಂತೆ ಮಾಡಿರುವ ನನ್ನ ನಡೆ ಸರಿಯಾಗಿದೆ. ಎಂದು ತನ್ನ ನಡೆತೆಯನ್ನು ಸರಿಯೆಂದು ತರ್ಕಿಸಿದಳು.
*****
ಬೆಂಗಳೂರಿನ ಸತ್ಯನಾರಾಯಣ ರಾಯರ ಮನೆ ನಿಶ್ಚಿತಾರ್ಥಕ್ಕೆ ತಯಾರಾಗಿತ್ತು . ಮಗಳು ಮಹತಿ ಅಂದವಾಗಿ ಅಲಂಕಾರ ಮಾಡಿಕೊಂಡು ತಯಾರಾಗಿದ್ದಳು. ವರ ಮುರಳಿ ಕಡೆಯವರು ಕೆಲವೇ ಕೆಲವು ಆಪ್ತ ಬಂಧುಗಳೊಂದಿಗೆ ಆಗಮಿಸಿದರು. ನಿಶ್ಚಿತಾರ್ಥವು ಯಾವುದೇ ಅಡೆತಡೆಯಿಲ್ಲದೆ ಸಾಂಗವಾಗಿ ನೆರವೇರಿತು. ನೆಂಟರಿಷ್ಟರ ಮಾತುಗಳಿಗೆಲ್ಲ ಮಹತಿಯ ಉತ್ತರ ಬಹಳ ನೇರವಾಗಿತ್ತು. ಚಿಕ್ಕಂದಿನಿಂದಲೇ ಮುಕ್ತವಾಗಿ ಬೆಳೆದವಳು ಮಹತಿ. ಒಂದು ತಿಂಗಳಲ್ಲಿ ಮುರಳಿ ಮದುವೆ ನಡೆಯುವುದು ನಿಶ್ಚಯವಾಯಿತು. ಶಶಿ ಬಹಳ ಖುಷಿಯಿಂದ ಇದ್ದಳು.ತಮ್ಮನ ಮಗಳಿಗಿಂತ ರೂಪಸಿ ,ಉನ್ನತ ಹುದ್ದೆಯಲ್ಲಿರುವ ಯುವತಿ ತನಗೆ ಸೊಸೆಯಾಗಿ ಬರುತ್ತಿದ್ದಾಳೆ ಎಂಬುದು ಅವಳಿಗೆ ಮತ್ತಷ್ಟು ಆನಂದ.ಮುರಳಿ ತನ್ನ ಮಡದಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ಅವಳನ್ನು ಸ್ವಲ್ಪವೂ ನೋಯಿಸದಂತೆ ಬದುಕಬೇಕು ಎಂದೆಲ್ಲ ಕನಸು ಕಂಡಿದ್ದ.
ಮಹತಿ ಮುರಲಿಯ ಜೊತೆಗೆ ಸ್ವಲ್ಪ ಅತಿಯೆನಿಸುವಷ್ಟು ಹತ್ತಿರವಿದ್ದಳು.ತುಂಟಾಟ ನೋಡುತ್ತಿದ್ದರೆ ಹಳೆಯ ಜೋಡಿಗಳಿಗೂ ಕಚಗುಳಿಯಿಡುವಂತಿತ್ತು.ಶಶಿಗೆ ಇದು ಅಸಮಾಧಾನವನ್ನು ಉಂಟುಮಾಡಿತು.ಮಹತಿಗೆ ಅಂತೂ ಅದೇ ಅಭ್ಯಾಸ ಆಗಿರಬಹುದು.. ಆದರೆ ಮುರಲಿ..?? ಇವನಾದರೂ ಸಭ್ಯತೆಯಿಂದ ವರ್ತಿಸಬಾರದೇ ಎಂದು ಅವಳ ಒಳಮನಸ್ಸು ಹೇಳುತ್ತಿತ್ತು.ಮುಂದೆ ಸರಿಯಾದಾರು ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡಳು..ವಿವಾಹವಾದ ನಂತರವೂ ಇಂತಹ ಅತಿರೇಕದ ನಡತೆ ಪ್ರದರ್ಶಿಸಿದರೆ ಹೇಳದೆ ಬಾಯಿಮುಚ್ಚಿ ನಾನು ಸುಮ್ಮನಿರಲಾರೆ ಎಂದಿತ್ತು ಅವಳೊಳಗಿನ ಅತ್ತೆತನ.
*******
ಸೌಜನ್ಯಳಿಗೆ ತಾನು ಪತಿಯ ಗೆಳೆಯರ ಮನೆಯಲ್ಲಿ,ಒಂದೇ ಕೋಣೆಯಲ್ಲಿ ಬದುಕುತ್ತಿದ್ದಾಗ ಎಷ್ಟು ಬಾರಿ ಅಮ್ಮನಲ್ಲಿ ಸಾರಿ ಕೇಳಿ ತವರಿಗೆ ಹೋಗೋಣವೆ ಎಂದು ಅನಿಸುತ್ತಿತ್ತು. ಇದೇ ವಿಷಯದಲ್ಲಿ ಪತಿಯೊಂದಿಗೆ ಆಗಾಗ ಸಣ್ಣ ಮಟ್ಟಿನ ಜಗಳವಾಗುತ್ತಿತ್ತು.ಜಗಳ ಆದರೂ ಕೂಡ ಸ್ವಲ್ಪವೇ ಹೊತ್ತಿನಲ್ಲಿ ಅದನ್ನು ಮರೆತು ಅದರ ಎರಡರಷ್ಟು ಪ್ರೀತಿಸುತ್ತಿದ್ದ ಕೇಶವ.ಬೆಳಗ್ಗೆ ಜಗಳಾಡಿ ಹೋದ ಕೇಶವನ ಬಗ್ಗೆ ದಿನವಿಡೀ ಸಿಡುಕಿನಿಂದ ಮನಸೋ ಇಚ್ಛೆ ತನ್ನೊಳಗೆ ಬಯ್ಯುತ್ತಿರುತ್ತಿದ್ದಳು ಸೌಜನ್ಯ.ಸಂಜೆ ಕೇಶವ ಬರುವಾಗ ಮೊಳ ಮಲ್ಲಿಗೆ ಹೂವು ತಂದು ಮುಡಿಸಿದಾಗ, ಬಿಸಿ ಬಿಸಿ ಕಡಲೆ ತಂದು ಬಾಯಿಯೊಳಗೆ ತುರುಕಿದಾಗ ಅವನ ಕಣ್ಣ ನೋಟಕ್ಕೆ ಅವಳ ಸಿಡುಕೆಲ್ಲ ಜರ್ರನೆ ಇಳಿದು ,ಅವನ ತೋಳಲ್ಲಿ ಮೈಮರೆಯುತ್ತಿದ್ದಳು.ತನಗಿದುವೇ ಸ್ವರ್ಗ ಎಂಬ ಭಾವ ಮೂಡುತ್ತಿತ್ತು.ಇದನ್ನೆಲ್ಲಾ ಈಗ ಯೋಚಿಸುತ್ತಾ ಕುಳಿತ ಸೌಜನ್ಯಳಿಗೆ ತನ್ನ ಪತಿ ಸ್ವಲ್ಪ ಒರಟನೇ... ಆದರೇನಂತೆ ಒರಟಾಗಿರುವವರಿಗೆ ಮಡದಿಯ ಮೇಲೆ ಪ್ರೀತಿ ಹೆಚ್ಚು..ನನ್ನಲ್ಲಿ ಜಗಳಾಡದೆ ಮತ್ತೆ ಯಾರಲ್ಲಿ ಜಗಳಾಡುತ್ತಾರೆ..?? ಮನಸ್ಸಲ್ಲಿ ಇದ್ದದ್ದನ್ನೆಲ್ಲ ಹೇಳಿ ಜಗಳಾಡಿದರೇ ಮನಸ್ಸು ಹಗುರಾಗಿ ಹೂವಾಗುವುದು.. ಮತ್ತೆ ಬೆಟ್ಟದಷ್ಟು ಪ್ರೀತಿ ತೋರುತ್ತಾ ಬಳಿಸೇರಲು ಮನವು ತವಕಿಸುವುದು.ಏನೇ ಆಗಲಿ ಸಮಾಜದಲ್ಲಿ ಮದುವೆಯಾದ ಹೆಣ್ಣು ಕಷ್ಟವೋ ಸುಖವೋ ಪತಿಯೊಂದಿಗೆ ಬಾಳಿದರೆ ಗೌರವ. ಪತಿಯ ಮನೆಯೇ ಅವಳಿಗೆ ಭದ್ರವಾದ ನೆಲೆಗಟ್ಟು.
ಎಂದು ಯೋಚಿಸುತ್ತಾ ತನ್ನ ಪತಿ ಬರುವ ಹೊತ್ತಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಬೇಕು ಎಂದು ಅಡುಗೆ ಮನೆ ಕಡೆಗೆ ತೆರಳಿದಳು.
ಮುಂದುವರಿಯುವುದು....
✍️... ಅನಿತಾ ಜಿ.ಕೆ.ಭಟ್.
01-07-2020.