Friday, 5 June 2020

ಜೀವನ ಮೈತ್ರಿ ಭಾಗ ೮೬(86)




ಜೀವನ ಮೈತ್ರಿ ಭಾಗ ೮೬



        ಬೆಳಿಗ್ಗೆ ಅಲಾರಾಂ ಹೊಡೆಯುತ್ತಲೇ ಇವತ್ತಿನ ತಿಂಡಿ ಸರಿಬರಲಿ... ಪತಿ ರೇಗಿಸುವಂತಾಗುವುದು ಬೇಡವೆಂದುಕೊಳ್ಳುತ್ತಾ ಎದ್ದಳು. ಕಿಶನ್ ಗಾಢ ನಿದ್ರೆಯಲ್ಲಿದ್ದ. ಮೊದಲಾದರೆ ಬೆಳಗ್ಗೆ ಏಳುತ್ತಲೇ ಅಜ್ಜಿ ಅಮ್ಮನ ಮುಖ ದರ್ಶನವಾಗುತ್ತಿತ್ತು. ಇಲ್ಲಿ ಅದ್ಯಾವುದೂ ಇಲ್ಲ .ಅಕ್ಕ ಪಕ್ಕದ ಮನೆಗಳಿಂದ ಪಾತ್ರೆಯ ದಡ ಬಡ ಸದ್ದು ಮಾತ್ರ ಕೇಳಿಸುತ್ತಿತ್ತು. ಫ್ರೆಶ್ ಆಗಿ ಬಂದವಳಿಗೆ ಇನ್ನು ಕೆಳಗೆ ಹೋಗಿ ಹಾಲು ತರಬೇಕಷ್ಟೆ ಎಂಬ ಯೋಚನೆ.  ಸ್ವಲ್ಪ ಕೆಲಸ ಮಾಡಿ ಆಮೇಲೆ  ಕಿಶನ್ ನನ್ನು ಎಬ್ಬಿಸುವೆ ಎಂದುಕೊಂಡಳು. ತವರಿನಲ್ಲಾದರೆ  ಅಪ್ಪ ದನದ ಹಾಲು ಕರೆದು ನೊರೆಹಾಲು ತಂದು ಒಳಗಿಟ್ಟುಬಿಡುತ್ತಿದ್ದರು.. ಇಲ್ಲಿ ಪ್ಯಾಕೆಟ್ ಹಾಲೇ ಗತಿ.


      ನಿನ್ನೆಯೇ ದೋಸೆ ಅಕ್ಕಿಯನ್ನು ನೆನೆಸಿ ಇಟ್ಟಿದ್ದಳು. ಅಮ್ಮ ಮಾಡಿದಂತೆ ಬೆಳ್ಳಗಿನ ತೆಳ್ಳವು (ನೀರ್ದೋಸೆ )ಮಾಡಲೆಂದು. ಮಿಕ್ಸಿಯನ್ನು ತೆಗೆದಿಟ್ಟು ಅದಕ್ಕೆ ಅಕ್ಕಿ ಹಾಕಿ  ರುಬ್ಬಿದಳು.. ಎಷ್ಟು ರುಬ್ಬಿದರು ಪೂರ್ತಿಯಾಗಿ ನುಣ್ಣಗಾಗುತ್ತಿಲ್ಲ. 'ಏನೋ ನೋಡೋಣ ದೋಸೆ ಮಾಡಲು ಆಗುತ್ತದಾ 'ಎಂದು  ಅಲ್ಲಿಗೆ ನಿಲ್ಲಿಸಿದಳು. ಟೊಮೆಟೊ ಚಟ್ನಿ ಮಾಡೋಣ ಎಂದು ಟೊಮೆಟೊವನ್ನು ಕತ್ತರಿಸತೊಡಗಿದಳು. ಕಿಶನ್ ಹೊಸ ಚೂರಿಯನ್ನು ತಂದಿದ್ದ. ಬೆರಳು ಕೊಯ್ದುಹೋಯ್ತು. ಫಕ್ಕನೆ ಬಾಯಿಗಿಟ್ಟುಕೊಂಡಳು. ಮನೆಯಲ್ಲಿದ್ದರೆ ಅಮ್ಮ ಬಂದು ಸಾಕು ನೀನು ಮಾಡಿದ್ದು ಎನ್ನುತ್ತಿದ್ದಳು.. ಇಲ್ಲಿ ಯಾರಿದ್ದಾರೆ ..? ಎಂದು ಆಗಾಗ ಬಾಯಿಯಿಂದ ತೆಗೆದು ನೋಡುತ್ತಿದ್ದಳು.


          ತೆಂಗಿನ ಕಾಯಿಯನ್ನು ತುರಿದು ಮಿಕ್ಸಿಗೆ ಹಾಕಬೇಕೆನ್ನುವಷ್ಟರಲ್ಲಿ ಕರೆಂಟು ಹೋಯಿತು. ಅಯ್ಯಪ್ಪ ..!!
ಇನ್ನೇನು ಮಾಡಲಿ. ಊರಲ್ಲಿದ್ದರೆ  ಇನ್ವರ್ಟರ್ ಇತ್ತು. ಸಾಲದಿದ್ದರೆ ರುಬ್ಬುವ ಕಲ್ಲು ಇತ್ತು. ಇಲ್ಲಿ ಎರಡೂ ಇಲ್ಲ.ಏನು ಮಾಡಲಿ ಎಂದು ಯೋಚಿಸುತ್ತಾ ಸಿಂಕಿನಲ್ಲಿದ್ದ ಪಾತ್ರೆ ತೊಳೆದು ಹಾಕಿದಳು. ತೊಳೆಯುವಾಗ ಗಾಯವಾದ ಜಾಗ  ನೀರು ಮುಟ್ಟುತ್ತಿದ್ದಂತೆಯೇ ಉರಿಯುತ್ತಿತ್ತು. ನೋವನ್ನು ಸಹಿಸಿಕೊಂಡಳು.ಎದ್ದು ಬಂದು ಹಿಂದಿನಿಂದ  ತುಂಟತನ ಮಾಡಿದ ಕಿಶನ್. "ಹೋಗಿ ಬೇಗ ಹಾಲು ತನ್ನಿ " ಎಂದು ಗಂಡನನ್ನು  ಸಾಗಹಾಕಿದಳು.


          ಕರೆಂಟ್ ಎಂಬ ಗುಮ್ಮ ಪತ್ತೆಯೇ ಇಲ್ಲ.ಊರಿಂದ ಬರುವಾಗ ತಂದಿದ್ದ ಚಟ್ನಿಪುಡಿ, ಉಪ್ಪಿನಕಾಯಿ ಸೇರಿಸಿಕೊಂಡು ತಿನ್ನೋಣ ಎಂದುಕೊಂಡರು. ಡಬ್ಬದಿಂದ ಎರಡು ತುಂಡು ಬೆಲ್ಲ ತೆಗೆದು ನೀರು ಸೇರಿಸಿ ಕುದಿಸಿ ಬೆಲ್ಲದರವೆ ಪಾಕ ಮಾಡಿದಳು. ಹಿಟ್ಟುಹದ ಮಾಡುವುದು ಸವಾಲಾಯಿತು. ಅಮ್ಮನ ಹೇಳಿಕೊಟ್ಟ ಅಂದಾಜಿನಂತೆ ಮಾಡಿ ಕಾವಲಿಗೆ ಮೇಲೆ ಹೊಯ್ದಳು.
ಆಗಾಗ ಮುಚ್ಚಳ ತೆಗೆದು ನೋಡಿ ,ಬೆಂದಮೇಲೆ ತೆಗೆಯಲು ಬರುತ್ತದಾ ಇಲ್ಲವಾ ಎನ್ನುವ ಆತಂಕ ಮೈತ್ರಿಗೆ. ಒಂದು ಚೂರು ಬದಿ ಬಿಡುತ್ತಿದ್ದಂತೆ ಸಟ್ಟುಗ ಹಾಕಿ ಎಬ್ಬಿಸಲು ಪ್ರಯತ್ನಿಸಿದಳು.ಊಹೂಂ... ಏಳುತ್ತಲೇ ಇಲ್ಲ. ಏನು ಮಾಡುವುದು ಎಂಬ ಯೋಚನೆ.  ನೀರು ಜಾಸ್ತಿ ಆಯ್ತು ಎಂದ ಕಿಶನ್.
 ಅಮ್ಮನಿಗೆ ಫೋನ್ ಮಾಡೋಣವೆಂದರೆ ಆಗಲೇ ಗಂಟೆ 8.30 ಆಗಿ ಹೊಟ್ಟೆ ಚುರುಗುಟ್ಟುತ್ತಿತ್ತು. ಕಣ್ಣಿಗೆ ಕಂಡ ಎಲ್ಲ ಡಬ್ಬಗಳನ್ನು ಹುಡುಕಾಡಿ ಸ್ವಲ್ಪ ಮೈದಾ ಪುಡಿ ಸಿಕ್ಕಿತು. ಅದನ್ನು ಬೆರೆಸಿ ದೋಸೆ ಹೊಯ್ದು ಕಿಶನ್ ಗೆ ಬಡಿಸಲು ತಯಾರಿ ಮಾಡಿದಳು.


           ದೋಸೆ ಸರಿಯಾಗಿ ಏಳದೆ ಮುದ್ದೆ ಮುದ್ದೆಯಾದ ಹಾಗಿತ್ತು ..ಇದನ್ನು ಕಿಶನ್ ಗೆ ಹೇಗೆ ಬಡಿಸಲಿ.. ಎಂದು ಯೋಚಿಸುತ್ತ ಬಡಿಸಿದಳು. ಆತನು ಏನೂ ಅನ್ನದೆ ತಿಂದುಬಿಟ್ಟ.ಅಡುಗೆ ಮಾಡುವ ಕಷ್ಟ ಅವನಿಗೆ ಗೊತ್ತಿತ್ತು.ಬ್ಯಾಚ್ಯುಲರ್ ಲೈಫ್ ನಲ್ಲಿ ಅಡುಗೆ ಮಾಡಿ ಉಣ್ಣುತ್ತಿದ್ದ. ಎರಡು ದೋಸೆ ಬೆಲ್ಲದ ರವೆ, ಚಟ್ನಿಪುಡಿ ಯಲ್ಲಿ ತಿನ್ನುತ್ತಿದ್ದಂತೆ ಕರೆಂಟು ಆಗಮಿಸಿತ್ತು. ಸ್ವಲ್ಪ ಇರಿ.. ಚಟ್ನಿ ಮಾಡಿಕೊಡುತ್ತೇನೆ ಎಂದು ಮಿಕ್ಸಿಯತ್ತ ಗಮನಹರಿಸಿದಳು. . ಈಚೆ ಸ್ಟವ್ ಸಿಂಪಲ್ ಮಾಡಲು ಮರೆತೇ ಬಿಟ್ಟಿದ್ದರು. ಚಟ್ನಿ ಕಡೆದಾಗುತ್ತಿದ್ದಂತೆ ದೋಸೆ ಕಪ್ಪಾಗಿ ಬಿಟ್ಟಿತ್ತು.ಅದನ್ನು ತೆಗೆದು ಕಾವಲಿಯನ್ನು ಸರಿ ಮಾಡುವಷ್ಟರಲ್ಲಿ ಸುಸ್ತಾಗಿ ಹೋಗಿತ್ತು. ಕಿಶನ್ ಗೆ ಹೊಟ್ಟೆತುಂಬಾ ದೋಸೆ ಚಟ್ನಿಯೊಂದಿಗೆ ಬಡಿಸಿದಾಗ ಮೈತ್ರಿಯ ಹಣೆಯಲ್ಲಿ ಬೆವರಹನಿಗಳು ಸಾಲಾಗಿ ನಿಂತಿದ್ದವು.


           ಅಮ್ಮ ಅಜ್ಜಿ ಅಡುಗೆ ಮಾಡುತ್ತಿದ್ದಾಗ ಸ್ವಲ್ಪವೂ ಸೇರದೆ ಇದ್ದವಳಿಗೆ ಈಗ ಅಡುಗೆ ಮಾಡುವ ಕಷ್ಟ ಸರಿಯಾಗಿ ಗೊತ್ತಾಯ್ತು. ಪಾಪದ ಕಿಶನ್  ಮಾತ್ರ ಯಾವುದಕ್ಕೂ ಕೊರತೆ ಹೇಳದೆ ಮುದ್ದಿನ ಮಡದಿಯನ್ನು ಸ್ವಲ್ಪ ಜಾಸ್ತಿಯೇ ಹೊಗಳಿ ಹೊಟ್ಟೆ ತುಂಬಿಸಿಕೊಂಡ. ಬೆಳಗಿನ ತಿಂಡಿಯಾಗಿ ಅಡುಗೆ ಮನೆ ಸ್ವಚ್ಛಮಾಡಿ ಆದಾಗ ಮೈತ್ರಿ ಸುಸ್ತಾಗಿದ್ದಳು.


ಬಾ ಇಲ್ಲಿಎಂದು ಕಿಶನ್ ಮಡದಿಯನ್ನು ಕರೆದ.ಅವಳು ಕೆಲಸದ ಸಾಬೂಬು ಹೇಳಿದರೂ ಬಿಡದೆ ಕರೆದೊಯ್ದು.ಹಾಲ್ ನಲ್ಲಿ ಕುಳಿತು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು.ಅವಳಿಗೆ ಅಮ್ಮನ ಮಡಿಲಿನ ನೆನಪಾಯಿತು.ಕೆಲಸ ಮಾಡಿ ಸುಸ್ತಾಗಿದ್ಯಾ..ಅಂತ ಕೇಳುತ್ತಾ ಆಕೆಯ ಕೈಗಳನ್ನು ತೀಡಿದ." ಈ ಮೆದುವಾದ ಅಂಗೈ ಗಡುಸಾಗಬಾರದು".ಎಂದ .

"ಹಾಗೇನೂ ಆಗಲ್ಲ.ಇಬ್ಬರಿಗಷ್ಟೇ ಅಡುಗೆ.ಇಬ್ಬರದೇ ಬಟ್ಟೆ ಒಗೆಯುವ ಕೆಲಸ.ನಾನೇ ಮಾಡ್ತೀನಿ."

"ಇನ್ನೆರಡು ದಿನವಿದೆ ಆಫೀಸಿಗೆ ಹೋಗಲು.ಎಲ್ಲಾದರೂ ಹೊರಗಡೆ ಸುತ್ತಾಡಿ ಬರೋಣ."

"ಹೂಂ... "

"ಲಾಲ್ ಬಾಗ್, ಇಸ್ಕಾನ್ ಕೃಷ್ಣ ದೇವಾಲಯ ಕ್ಕೆ ಇವತ್ತು ನಾಳೆ ಹೋಗಿಬರೋಣ.ವೀಕೆಂಡ್ ನಲ್ಲಿ ನಂದಿಬೆಟ್ಟಕ್ಕೆ ಹೋಗೋಣ.ಚೆನ್ನಾಗಿರುತ್ತೆ."

"ಸರಿ... "ಎಂದಳು ಮೈತ್ರಿ.

"ಹೊರಡೋಣ "ಎಂದ ಕಿಶನ್.

ಲಗುಬಗೆಯಿಂದ ಇಬ್ಬರೂ ಹೊರಟರು . ದಾರಿಯುದ್ದಕ್ಕೂ ಇಬ್ಬರ ಹರಟೆ ಜೋರಾಗಿತ್ತು.ಕಿಶನ್ ತುಂಟಾಟವಾಡುತ್ತಿದ್ದರೆ... "ಜೋಪಾನ..ಗಮನ ಡ್ರೈವಿಂಗ್ ಮೇಲಿರಲಿ" ಎನ್ನುತ್ತಿದ್ದಳು ಮೈತ್ರಿ.ಅವಳಿಗೆ ಬೆಂಗಳೂರಿನ ಅತಿಯಾದ ಟ್ರಾಫಿಕ್ ಭಯ ತರಿಸಿತ್ತು.ವಾಯುಮಾಲಿನ್ಯದಿಂದಾಗಿ ಆಕ್ಸೀ....ಆಕ್ಸೀ.. ಎಂದು ಸೀನಲು ಆರಂಭಿಸಿದಳು ಮೈತ್ರಿ.
ಬ್ಯಾಗಿನಲ್ಲಿ ಅಮ್ಮ ಉಪ್ಪಿನಲ್ಲಿ ಅದ್ದಿ ಒಣಗಿಸಿ ಕೊಟ್ಟಿದ್ದ ಶುಂಠಿ ತುಂಡುಗಳಿದ್ದವು.ಎರಡು ತುಂಡನ್ನು ಬಾಯಿಗೆ ಹಾಕಿಕೊಂಡಳು.

"ಅದೇನು..?"

"ಉಪ್ಪು ಶುಂಠಿ.."

"ಜಂಭದ ಚೀಲದಲ್ಲಿ ಏನೇನಿದೆ.. ಮೇಕಪ್ ಕಿಟ್ ಮಾತ್ರ ಅಲ್ವಾ..?"

"ಅಗತ್ಯವಿರುವ ಕೆಲವು ವಸ್ತುಗಳಿವೆ..ನಿಮ್ಗೂ ಬೇಕಿತ್ತಾ..?"

"ನಂಗೂ ಬೇಕಿತ್ತು ಮಿರರ್,ಕೂಂಬ್,ಸನ್ ಸ್ಕ್ರೀನ್ ಲೋಷನ್.."

"ಲಿಪ್ ಸ್ಟಿಕ್... ಬೇಡ್ವಾ..?"

"ಲಿಪ್ ಸ್ಟಿಕ್ ನೀನು ಹಾಕ್ಕೊಂಡ್ರೆ ಸಾಕು..ಅದರಿಂದ ಅರ್ಧ ನಾನು ತಗೋತೀನಿ.."

"ಈ ತುಂಟನಿಗೆ ಇವತ್ತು ಕಿಸ್ ಕೊಡೋದೇ ಇಲ್ಲ.."

"ಹೇಗೆ ಪಡೀಬೇಕು ಅಂತ ನನಗೂ ಗೊತ್ತು.."

"ತರ್ಲೆ... ಬುದ್ಧಿ..ಬಿಡೋದೇ ಇಲ್ಲ.."

ಅವನ ತುಂಟನಗುವಿಗೆ ಸೋತು ಕರಗಿ ಅವಳು ಮೌನದ ಮುಸುಕೆಳೆದು ರಂಗು ತುಂಬಿಕೊಂಡಳು.



    ಲಾಲ್ ಬಾಗ್ ನ ಒಳಪ್ರವೇಶಿಸಿದರು ಮುದ್ದು ಜೋಡಿ.ಪತಿಯ ಕೈಹಿಡಿದು ಸಾಗಿದ ಮೈತ್ರಿಗೆ ಮೊದಲು ಕಂಡದ್ದು ಸಾಲುಸಾಲು ಪ್ರೇಮಪಕ್ಷಿಗಳು.ಅವರ ಮನಸ್ಸೂ ಗರಿಗೆದರಿತು.ಹಸಿರುಸಿರಿಯನ್ನು,ಸುಂದರ ಪುಷ್ಪಗಳನ್ನು ವೀಕ್ಷಿಸುತ್ತಾ ತಮ್ಮ ನಾಲ್ಕು ವರ್ಷದ ಪ್ರೇಮಪಯಣವನ್ನೂ ಮೆಲುಕು ಹಾಕಿಕೊಂಡರು.ಇಬ್ಬರಿಗೂ ನಾವು ಇವರಂತೆ ನಿರ್ಲಜ್ಜರಾಗಿ ನಡೆದುಕೊಂಡಿಲ್ಲ ಎಂಬುದು ಸಂತಸದ ಹೆಮ್ಮೆಯ ವಿಚಾರವಾಗಿತ್ತು.ಸಾಕಷ್ಟು ಫೊಟೋ ಹೊಡೆದುಕೊಂಡರು.


        ಹೂವಿನ ರಾಶಿಯ ಮಧ್ಯೆ" ಇದಕ್ಕಿಂತ ಸುಂದರ ಹೂವು ನಮ್ಮನೇಲಿದೆ" ಅಂದ.

"ಹೌದಾ ನಾ ನೋಡೇ ಇಲ್ಲ.ಎಲ್ಲಿದೆ."

"ನೋಡೆಯಿಲ್ವಾ..ತೋರಿಸ್ತೀನಿ ಬಾ.."ಅಂತ ಮೊಬೈಲ್ ತೆಗೆದು ತೋರಿಸುವ ನೆಪದಲ್ಲಿ ಸೆಲ್ಫಿ ಹೊಡೆದು ...ನನ್ನ ಪಕ್ಕದಲ್ಲಿದೆ ಅಂದ.. ಮೈತ್ರಿ ನಾಚಿ ಕೆಂಪಾದಳು.

ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
05-06-2020.

ಮುಂದಿನ ಭಾಗ... ಸೋಮವಾರ..

ಹೆಚ್ಚಿನ ಓದಿಗಾಗಿ... home ,view web version,> ಬಳಸಿಕೊಳ್ಳಬಹುದು.

No comments:

Post a Comment