Friday, 12 June 2020

ಮಾವಿನಹಣ್ಣಿನ ಪಾರಂಪರಿಕ ಅಡುಗೆಗಳು ಮೆಣಸ್ಕಾಯಿ, ಮಾಂಬಳ ,ಜಾಮ್ ,ಪಲ್ಪ್ 😋😋









    
Momspresso#ದಿನಕ್ಕೊಂದು ಬ್ಲಾಗ್
ವಿಷಯ:-ಅಜ್ಜಿ ಹೇಳಿಕೊಟ್ಟ ರೆಸಿಪಿ


ತನ್ನ ವಿಶೇಷವಾದ ಪರಿಮಳ, ಬಣ್ಣ, ಸ್ವಾದದಿಂದ ಎಲ್ಲರನ್ನೂ ಆಕರ್ಷಿಸುವ ಹಣ್ಣು  ಮಾವಿನಹಣ್ಣು.ಬೇಸಗೆಕಾಲದಲ್ಲಿ ಯಥೇಚ್ಛವಾಗಿ ದೊರೆಯುವ ಹಣ್ಣನ್ನು ಅಡುಗೆಯಲ್ಲಿ ಬಳಸುವುದನ್ನು ಹಿರಿಯರು ರೂಢಿಸಿಕೊಂಡಿದ್ದರು.ಮಾವಿನ ಹಣ್ಣು ಹಲವು ಪೋಷಕಾಂಶಗಳನ್ನು ಒಳಗೊಂಡಿದ್ದು ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ನಾರು, ಪೊಟ್ಯಾಷಿಯಂ, ಸೋಡಿಯಂ, ವಿಟಮಿನ್ ಎ,ಬಿ,ಸಿ ಯನ್ನು ಹೊಂದಿದೆ. ಯಾಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಮಾವು ಉತ್ತಮ ರೋಗ ನಿರೋಧಕ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ.ಆದ್ದರಿಂದ ಮಾವಿನ ಹಣ್ಣಿನ ಸೇವನೆ ಆರೋಗ್ಯಕರ.ಆಯಾಯ ಕಾಲದಲ್ಲಿ ದೊರಕುವ ಹಣ್ಣು ಹಂಪಲುಗಳನ್ನು ಎಲ್ಲಾ ವಿಧದಿಂದಲೂ ಉತ್ತಮ.


ಈ ಪಾಕ ವೈವಿಧ್ಯಗಳು ಹಿರಿಯರಿಂದ ಬಂದ ಬಳುವಳಿ.ಅಜ್ಜಿ ಮಾಡುತ್ತಿದ್ದ ಅಡುಗೆಗಳನ್ನು ಕಲಿತುಕೊಂಡು ಅಮ್ಮ ಮಾಡುತ್ತಿದ್ದರು.ಈಗ ನಾನೂ ಅದನ್ನೇ ಅನುಸರಿಸುತ್ತಿದ್ದೇನೆ.ಜೊತೆಗೆ ಆಗಾಗ ಹೊಸ ಪ್ರಯೋಗಗಳನ್ನೂ ಮಾಡುವುದೆಂದರೆ ನನಗೆ ಎಲ್ಲಿಲ್ಲದ ಹುರುಪು.

ಬೇಸಿಗೆ ಕಾಲದಲ್ಲಿ ಬೆಟ್ಟಗುಡ್ಡಗಳನ್ನು ಏರಿ ಮತ್ತೆ ಪ್ರಪಾತಕ್ಕೆ ಇಳಿದು ನಮ್ಮಜ್ಜನ ಮನೆಗೆ ಸಾಗುತ್ತಿದ್ದ ನಾವು  ಅಲ್ಲಿನ ರುಚಿರುಚಿಯಾದ ಕಾಟು, ನೆಕ್ಕರೆ ಮಾವಿನಹಣ್ಣಿಗೆ ಮನಸೋತವರು.ಬೆಳಗ್ಗೆಯೇ ಮಕ್ಕಳ ದಂಡು ಮಾವಿನಮರದ ಬುಡದಲ್ಲಿ ಸೇರುತ್ತಿತ್ತು.ಒಮ್ಮೆಯ ಹಣ್ಣುಗಳನ್ನೆಲ್ಲ ಹೆಕ್ಕಿ ತಂದು ಶುಚಿಗೊಳಿಸುವ, ಸ್ವಲ್ಪ ಹಣ್ಣನ್ನು ಕಚ್ಚಿ ತಿನ್ನುವ ಕಾಯಕ ನಮ್ಮದು.ಉಳಿದ ಹಣ್ಣುಗಳಲ್ಲಿ ಅಜ್ಜಿ ಮಧ್ಯಾಹ್ನ ರುಚಿಕರವಾದ ಅಡುಗೆ ತಯಾರಿಸುತ್ತಿದರು.ಅಜ್ಜಿ ಮಾಡುತ್ತಿದ್ದ ಕೆಲವು ಅಡುಗೆಗಳ ಪರಿಚಯ ಮಾಡಿಕೊಡುತ್ತೇನೆ.


ಮಾವಿನ ಕಾಯಿ ಮೆಣಸ್ಕಾಯಿ

ಮೆಣಸ್ಕಾಯಿ ಒಂದು ಪದಾರ್ಥ ಇದ್ದರೆ ಊಟಕ್ಕೆ ಮತ್ತೇನೂ ಬೇಡ.ಇದು ಹುಳಿ ಸಿಹಿ ಖಾರ ಮಿಶ್ರಿತ ಪದಾರ್ಥ.

ಬೇಕಾಗುವ ಸಾಮಗ್ರಿಗಳು:-

ಒಂದು ಕಪ್ ಮಾವಿನಕಾಯಿ ಹೋಳುಗಳು, ಎರಡು ಕಪ್ ತೆಂಗಿನಕಾಯಿ ತುರಿ, ಎರಡು ಕೆಂಪು ಮೆಣಸು, ಒಂದು ಚಮಚ ಕರಿ ಎಳ್ಳು, ಒಂದು ಚಮಚ ಜೀರಿಗೆ, ಅರ್ಧ ಚಮಚ ಉದ್ದಿನ ಬೇಳೆ, ಕಾಲು ಚಮಚ ಮೆಂತೆ, ಅರಿಶಿನ ಪುಡಿ,ಉಪ್ಪು ಬೆಲ್ಲ ರುಚಿಗೆ ತಕ್ಕಷ್ಟು,ಒಗ್ಗರಣೆಯ ಸಾಮಗ್ರಿಗಳು.

ಮಾಡುವ ವಿಧಾನ:-

ಮಾವಿನ ಕಾಯಿ ಹೋಳುಗಳನ್ನು ಉಪ್ಪು, ಬೆಲ್ಲ ಹಾಕಿ ಬೇಯಿಸಿ.ಹುಳಿ ಕಡಿಮೆ ಇದ್ದರೆ ಹುಣಸೆ ಹುಳಿ ಸೇರಿಸಿ.
ಕರಿ ಎಳ್ಳನ್ನು ಎಣ್ಣೆಹಾಕದೆ ಹುರಿದುಕೊಂಡು  ಮಿಕ್ಸಿಯಲ್ಲಿ ಹಾಕಿ.ನಂತರ ಉದ್ದಿನ ಬೇಳೆ, ಮೆಂತೆ, ಜೀರಿಗೆ,ಒಣಮೆಣಸನ್ನು ಹುರಿದುಕೊಂಡು ಕೊನೆಯಲ್ಲಿ ಅರಶಿನ ಪುಡಿ ಸೇರಿಸಿ .. ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ.ನಂತರ ತೆಂಗಿನಕಾಯಿ ತುರಿಯೊಂದಿಗೆ ರುಬ್ಬಿಕೊಳ್ಳಿ.ಬೆಂದ ಮಾವಿನ ಕಾಯಿ ಹೋಳುಗಳಿಗೆ ಸೇರಿಸಿ.ತುಂಬಾ ದಪ್ಪವೂ ಅಲ್ಲ,ತೆಳ್ಳಗೆಯೂ ಅಲ್ಲ ಎನ್ನುವ ಹದಕ್ಕೆ ನೀರು ಹಾಕಿಕೊಂಡು ಕುದಿಸಿ ,ಇಂಗಿನ ಜೊತೆ ಒಗ್ಗರಣೆ ಕೊಟ್ಟರೆ ಮಾವಿನ ಕಾಯಿ ಮೆಣಸ್ಕಾಯಿ ಸವಿಯಲು ಸಿದ್ಧ.


ಇದು ಕುದಿಸಿದಷ್ಟು ರುಚಿ.ಎರಡು ಮೂರು ದಿನ ಕುದಿಸಿ ಬಾಯಿಚಪ್ಪರಿಸಿಕೊಂಡು ಅನ್ನದ ಜೊತೆ ಸೇವಿಸುವವರಿದ್ದಾರೆ.ಇದು ಪಾರಂಪರಿಕ ಅಡುಗೆ.ಇದೇ ತೆರನಾದ ಮೆಣಸ್ಕಾಯಿ ಹಾಗಲಕಾಯಿ, ಪೈನಾಪಲ್ ಗಳಲ್ಲಿಯೂ ಮಾಡುತ್ತಾರೆ.ಕರಾವಳಿಯ ಭಾಗದಲ್ಲಿ ಪ್ರತೀ ಸಮಾರಂಭದಲ್ಲೂ ಊಟಕ್ಕೆ ಮೆಣಸ್ಕಾಯಿ ಇದ್ದೇ ಇರುತ್ತದೆ.ಅನ್ನದ ಜೊತೆ ಒಳ್ಳೆಯ ಕಾಂಬಿನೇಶನ್.ದೋಸೆ,ಚಪಾತಿಗೂ ಹೊಂದಿಕೆಯಾಗುತ್ತದೆ.


ಪಾರಂಪರಿಕ ಮಾಂಬಳಕ್ಕೆ ಹೊಸ ರೂಪ



ಕರಾವಳಿಯ ಭಾಗದಲ್ಲಿ ಬೇಸಿಗೆ ಬಂತೆಂದರೆ ಕಾಡುಮಾವಿನ ಹಣ್ಣುಗಳ ಸುಗ್ಗಿ.ಸ್ವಲ್ಪ ಹುಳಿ ಮತ್ತು ಸಿಹಿ ರುಚಿ ಇರುವ ಕಾಡು ಮಾವಿನ ಹಣ್ಣುಗಳು ಗೊಜ್ಜು, ಸಾಸಿವೆ,ಚಂಡ್ರುಳಿ ,ಸಾರು ಹೀಗೆ ಹಲವಾರು ಪಾಕವೈವಿಧ್ಯಗಳಲ್ಲಿ ಜನರ ನಾಲಿಗೆಯನ್ನು ತಣಿಸುತ್ತವೆ.ವರ್ಷದಲ್ಲಿ ಒಮ್ಮೆ ಸಿಗುವ ಇಂತಹ ರುಚಿಕಟ್ಟಾದ ಹಣ್ಣನ್ನು ವರ್ಷವಿಡೀ ಸವಿಯಬೇಕೆಂಬ ಬಳಕೆಯಾಗುವುದು ಸಹಜ.
ಹಣ್ಣುಗಳ ರಸವನ್ನು ಸಂಗ್ರಹಿಸಿ ಒಣಗಿಸಿದ ರೂಪವೇ ಮಾಂಬಳ.

ನಮ್ಮಜ್ಜಿ ತನ್ನ ಹಳೆಯ ಕಾಟನ್ ಸೀರೆ ಅಥವಾ ಅಜ್ಜನ ಹಳೆಯ ಪಂಚೆಯಲ್ಲಿ ,ಹಿಂಡಿದ ಮಾವಿನ ಹಣ್ಣಿನ ರಸವನ್ನು ಹಾಕಿ ಬಿಸಿಲಿನಲ್ಲಿ ಒಣಗಿಸಿಡುತ್ತಿದ್ದರು.ಸಂಪೂರ್ಣ ಒಣಗಿದಾಗ ಅದನ್ನು  ಉದ್ದಕ್ಕೆ ಗೆರೆಯೆಳೆದು ಕತ್ತರಿಸಿ ಸುರುಳಿ ಸುತ್ತುತ್ತಿದ್ದರು.ಹೀಗಿರುವ ಒಂದೊಂದು ಸುರುಳಿ/ರೋಲ್ ಒಬ್ಬೊಬ್ಬ ಮಗಳ ಮನೆಗೂ ಕಳುಹಿಸಿ ಕೊಟ್ಟಾಗಲೇ ಅಜ್ಜಿಗೆ ಸಂತೃಪ್ತಿಯಾಗುತ್ತಿದ್ದುದು.ಈಗ ನಾನು ಅದಕ್ಕೆ ಹೊಸ ರೂಪ ಕೊಟ್ಟು ಮಾಂಬಳ ತಯಾರಿಸುತ್ತಿದ್ದೇನೆ.


ಮಾವಿನ ಹಣ್ಣುಗಳನ್ನು ತೊಳೆದು ತೊಟ್ಟು ತೆಗೆದು ಸಿಪ್ಪೆಯನ್ನು ತೆಗೆದು ರಸ ಹಿಂಡಿಕೊಂಡು ಅದನ್ನು ದೊಡ್ಡ ಬಟ್ಟಲಿನಲ್ಲಿ ಹಾಕಿ ಬಿಸಿಲಿಗಿಡಬೇಕು.ರಸ ತುಂಬಾ ಇದ್ದರೆ ಅದಕ್ಕೆ ತಕ್ಕಂತೆ ಬಟ್ಟಲುಗಳ ಸಂಖ್ಯೆ ಹೆಚ್ಚಿಸಿ.ದಿನವೂ ಅದರ ಮೇಲೆ ತೆಳ್ಳನೆಯ ಪದರವಾಗಿ ರಸವನ್ನು ಹರಡುತ್ತಾ ಬಿಸಿಲಿನಲ್ಲಿ ಒಣಗಿಸಿ.ಧೂಳು ಇರುವ ಸ್ಥಳವಾದರೆ ತೆಳ್ಳಗಿನ ಬಟ್ಟೆಯನ್ನು ಮುಚ್ಚಿಕೊಳ್ಳಬಹುದು.ಪೂರ್ತಿ ತೇವಾಂಶ ಆರಿದಾಗ ಬಟ್ಟಲಿನಿಂದ ಮಾಂಬಳ ಎದ್ದು ಬರುತ್ತದೆ.ಪ್ಲಾಸ್ಟಿಕ್ ಕವರಿನಿಂದ ಸುತ್ತಿ ಶೇಖರಿಸಿಟ್ಟರೆ ಒಂದು ವರುಷದವರೆಗೆ ಹಾಳಾಗುವುದಿಲ್ಲ.

ಮಾವಿನ ಹಣ್ಣಿನ ರಸವನ್ನು ಬಟ್ಟೆಯಲ್ಲಿ ಹರಡಿ ಒಣಗಿಸುವ ಪದ್ಧತಿಯಲ್ಲಿ , ಅದು ಪೂರ್ಣ ಒಣಗುವವರೆಗೆ ಅದನ್ನು ಒಳಗೆ ಹೊರಗೆ ಒಯ್ಯುವುದು ಪ್ರಯಾಸದ ಕೆಲಸ.ಬಟ್ಟಲಿನಲ್ಲಾದರೆ ಸಂಜೆ ಮನೆಯ ಒಳಗೊಯ್ಯಲು ಮತ್ತು ಶೇಖರಿಸಿಡಲು ಸುಲಭ.

ಇದನ್ನು ಸಣ್ಣದಾಗಿ ತುಂಡು ಮಾಡಿ ಮಕ್ಕಳಿಗೆ ಕೊಟ್ಟರೆ ಚಾಕಲೇಟಿನಂತೆ ಇಷ್ಟಪಟ್ಟು ತಿನ್ನುತ್ತಾರೆ.ಮಕ್ಕಳ ಸ್ನ್ಯಾಕ್ಸ್ ಬಾಕ್ಸ್ ನಲ್ಲಿ ಒಂದೆರಡು ಪೀಸ್ ಹಾಕಿದರೆ ಹಸಿವೆಯಿಲ್ಲ ಅನ್ನುವ ಮಕ್ಕಳಿಗೆ ಚೆನ್ನಾಗಿ ಹಸಿವೆಯಾಗುತ್ತದೆ.ಮಾಂಬಳದ ತುಂಡನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ ನಂತರ ಗೊಜ್ಜು, ಸಾಸಿವೆಯನ್ನು ವರ್ಷವಿಡೀ ಮಾಡಬಹುದು..ಬಾಯಿ ನೀರೂರಿಸುವ ಮಾಂಬಳದ ಅಡುಗೆ ಕ್ಷಣಮಾತ್ರದಲ್ಲಿ ಸಿದ್ಧವಾಗುತ್ತದೆ.



ಮಾವಿನ ಹಣ್ಣಿನ ಜಾಮ್


ಜಾಮ್ ಎಂಬ ಹೆಸರು ಕೇಳಿದ ತಕ್ಷಣ ಸಾಮಾನ್ಯವಾಗಿ ಎಲ್ಲರ ಬಾಯಲ್ಲಿಯೂ ನೀರೂರುತ್ತದೆ. ಮಾರುಕಟ್ಟೆಯಲ್ಲಿ ತರತರದ ಜಾಮ್ ಗಳು ಇಂದು ಲಭ್ಯವಿವೆ. ನಮ್ಮ ಮನೆಯಲ್ಲಿ ಸಿಗುವ ತಾಜಾ ಹಣ್ಣಿನಿಂದ ಜಾಮ್ ಮಾಡಿದಾಗ ಅದು ರುಚಿಕರ ಹಾಗೂ ಆರೋಗ್ಯಕರ.

ಬೇಕಾಗುವ ಸಾಮಗ್ರಿಗಳು:-


*ಮಾವಿನ ಹಣ್ಣು

*ಸಕ್ಕರೆ:  ಮಾವಿನ ಹಣ್ಣಿನ ರಸದ ಮುಕ್ಕಾಲು ಭಾಗ(1cup ರಸ-ಮುಕ್ಕಾಲು ಕಪ್ ಸಕ್ಕರೆ)

*ಒಂದು ನಿಂಬೆಹಣ್ಣಿನ ರಸ


ಮಾಡುವ ವಿಧಾನ:-

ಮಾವಿನಹಣ್ಣಿನ ಸಿಪ್ಪೆ ತೆಗೆದು ರಸಹಿಂಡಿ ಅಥವಾ ತುಂಡು ಮಾಡಿ ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿ. ಯಾವುದೇ ಕಾರಣಕ್ಕೂ ಜಾರಿನಲ್ಲಿ ತೇವಾಂಶವಿರಬಾರದು.. ನೀರು ಹಾಕಬಾರದು. ಅದನ್ನು ಕಡಾಯಿಗೆ ಹಾಕಿ.ಮಧ್ಯಮ ಉರಿಯಲ್ಲಿ ಕದಡುತ್ತಿರಿ...ಸುಮಾರು ಏಳೆಂಟು ನಿಮಿಷದ ನಂತರ ಮಾವಿನ ಹಣ್ಣಿನ ರಸದ ಮುಕ್ಕಾಲು ಭಾಗದಷ್ಟು ಸಕ್ಕರೆ ಸೇರಿಸಿ. ಅಂದರೆ ಒಂದು ಕಪ್ ಮಾವಿನ ಹಣ್ಣಿನ ರಸಕ್ಕೆ ಮುಕ್ಕಾಲು ಕಪ್ ಸಕ್ಕರೆ..
ನಂತರ ಏಳೆಂಟು ನಿಮಿಷಗಳ ಕಾಲ ಚೆನ್ನಾಗಿ ತಿರುವುತ್ತಿರಿ..
ಗಟ್ಟಿಯಾಗುತ್ತಾ ಬಂದಾಗ ನಿಂಬೆಹಣ್ಣಿನ ರಸ ಹಾಕಿ ಮತ್ತು ಸ್ವಲ್ಪ ಹೊತ್ತು ತಿರುವಿ. ಜಾಮ್ ಪಾಕದ ಹದ ಬಂದಾಗ ಗ್ಲಾಸ್ ಜಾರ್ ಅಥವಾ ಸ್ಟೀಲ್ ಪಾತ್ರೆಗೆ ಹಾಕಿಡಿ. ಬಿಸಿಬಿಸಿಯಾದ ಮಾವಿನ ಹಣ್ಣಿನ ಜಾಮ್ ಸವಿಯಲು ಸಿದ್ಧ. ತಣಿದ ನಂತರ ಬೇಕಾದರೆ ಪ್ಲಾಸ್ಟಿಕ್ ಕಂಟೇನರ್ ಗಳಲ್ಲಿ ಕೂಡ ಹಾಕಿಡಬಹುದು.ಹೊರಗಡೆ ಇಟ್ಟರೆ ಒಂದು ವಾರದ ತನಕವೂ ಉಳಿಯಬಹುದು.. ಫ್ರೀಜರಿನಲ್ಲಿಟ್ಟರೆ ತುಂಬಾ ಸಮಯದವರೆಗೆ ಬಳಸಬಹುದು.

ಇದಕ್ಕೆ ಯಾವುದೇ ಫುಡ್ ಕಲರ್ ಅಥವಾ ಪ್ರಿಸರ್ವೇಟಿವ್ ಬಳಸಬೇಕಾಗಿಲ್ಲ. ನೈಸರ್ಗಿಕವಾದ ಬಣ್ಣ. ನಾಲಿಗೆಗೂ ಬಹಳ ರುಚಿಕರವಾಗಿರುತ್ತದೆ.. . ಇದನ್ನು ತೆಳ್ಳವು, (ನೀರುದೋಸೆ) ಉದ್ದಿನ ದೋಸೆ, ಚಪಾತಿ, ರೋಟಿ , ಬ್ರೆಡ್ ಜೊತೆ ಸವಿಯಬಹುದು. ಅಥವಾ ಹಾಗೆಯೇ ಹಲ್ವ ತರಹ ತಿನ್ನಬಹುದು.. ತುಂಬಾ ಟೇಸ್ಟಿ ಟೇಸ್ಟಿ ಆಗಿರುತ್ತದೆ...ಟ್ರೈ ಮಾಡಿ ನೋಡಿ...



ಪಲ್ಪ್ /ತಿರುಳು ಶೇಖರಣೆ


ಮಾವಿನಹಣ್ಣಿನ ತಿರುಳು/ಪಲ್ಪ್ ಶೇಖರಿಸಿಟ್ಟರೆ ವರ್ಷಪೂರ್ತಿ ತಾಜಾ ಹಣ್ಣಿನ ರುಚಿಯನ್ನು ಸವಿಯಬಹುದು.

ಮಾವಿನ ಹಣ್ಣನ್ನು ತೊಳೆದು ಬಟ್ಟೆಯಲ್ಲಿ ಹರವಿ ತೇವಾಂಶ ಆರಲು ಬಿಡಿ.ನಂತರ ಸಿಪ್ಪೆ ತೆಗೆದು ತಿರುಳನ್ನು ತುಂಡುಮಾಡಿ.ತೇವಾಂಶವಿಲದ ಮಿಕ್ಸಿ ಜಾರಿಗೆ ಹಾಕಿ ರುಬ್ಬಿ.ನಂತರ ಗ್ಲಾಸ್/ಪ್ಲಾಸ್ಟಿಕ್ ಕಂಟೈನರ್'ನಲ್ಲಿ ಹಾಕಿ ಮುಚ್ಚಳ ಭದ್ರಗೊಳಿಸಿ ಫ್ರೀಜರ್'ನಲ್ಲಿಡಿ.ಒಂದು ವರುಷದ ತನಕ ಹಾಳಾಗುವುದಿಲ್ಲ.ಬೇಕಾದಾಗ ತೆಗೆದು ಜ್ಯೂಸ್, ಗೊಜ್ಜು, ಸಾಸಿವೆ, ಐಸ್ಕ್ರೀಮ್,ಸ್ಮೂದಿ..ತಯಾರಿಸಿ ಸವಿಯಬಹುದು..


ನಮ್ಮ ಹಿರಿಯರಿಂದ ಕಲಿತ ಅಡುಗೆಯ ಪಾಕಗಳನ್ನು ಮರೆಯದೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಾ ,ಹೊಸದಾದ ಸವಿರುಚಿಗಳನ್ನು ಪ್ರಯೋಗ ಮಾಡುತ್ತಾ ಇರುವುದು ಮನಸ್ಸಿಗೆ ಆನಂದ.ದೇಹಕ್ಕೂ ಹಿತಕರ.ಗೃಹಿಣಿಯ ಯಶಸ್ಸು ,ಕರಕುಶಲತೆ ಅಡುಗೆಯೊಳಗೂ ಇದೆ.


✍️... ಅನಿತಾ ಜಿ.ಕೆ.ಭಟ್.
12-06-2020.




2 comments: