ಹಲಸಿನ ಹಣ್ಣಿನ ಕಡುಬು/ಕೊಟ್ಟಿಗೆ
ಹಲಸಿನ ಹಣ್ಣು ದೊರೆಯುವ ಸಮಯದಲ್ಲಿ ಹಲಸಿನ ಹಣ್ಣಿನ ಕಡುಬು ಬಹಳ ಸಾಮಾನ್ಯವಾಗಿ ಮಾಡುವ ತಿಂಡಿ.ಸಿಹಿಪ್ರಿಯರಿಗೆ ಈ ಕಡುಬು ಸಿಹಿ ಇಷ್ಟವಿಲ್ಲದವರಿಗೆ ಸೌತೆಕಾಯಿ ಕಡುಬು ಮಾಡುವ ರೂಢಿಯೂ ಕೆಲವು ಮನೆಗಳಲ್ಲಿದೆ.ಬಿಸಿ ಬಿಸಿ ಕಡುಬು ಎಣ್ಣೆ ಅಥವಾ ತುಪ್ಪದ ಜೊತೆ ತಿನ್ನಲು ಬಲು ರುಚಿ.
ಬೇಕಾಗುವ ಸಾಮಗ್ರಿಗಳು:-
ಎರಡು ಕಪ್ ದೋಸೆ ಅಕ್ಕಿ, ನಾಲ್ಕು ಕಪ್ ಹಲಸಿನ ಹಣ್ಣಿನ ಸೊಳೆ/ತೊಳೆ, ಉಪ್ಪು, ತೆಂಗಿನ ತುರಿ ಅರ್ಧ ಕಪ್,ಬೆಲ್ಲ ಅರ್ಧ ಕಪ್ ಅಥವಾ ರುಚಿಗೆ ತಕ್ಕಷ್ಟು.
( ಶುಂಠಿ ತುಂಡು,ಕಾಳುಮೆಣಸು .. ಇವನ್ನೆಲ್ಲ ಕೆಲವರು ಬಳಸುತ್ತಾರೆ.ಬೇಕಾದಲ್ಲಿ ಬಳಸಬಹುದು.. ನಾನು ಬಳಸುವುದಿಲ್ಲ)
( ಶುಂಠಿ ತುಂಡು,ಕಾಳುಮೆಣಸು .. ಇವನ್ನೆಲ್ಲ ಕೆಲವರು ಬಳಸುತ್ತಾರೆ.ಬೇಕಾದಲ್ಲಿ ಬಳಸಬಹುದು.. ನಾನು ಬಳಸುವುದಿಲ್ಲ)
ಮಾಡುವ ವಿಧಾನ:-
ಬಾಳೆ ಎಲೆಗಳನ್ನು ಅಡಿ ಮೇಲೆ ಎರಡೂ ಬದಿಗಳಲ್ಲಿ ತೊಳೆದು ನೀರು ಬಸಿಯುವಂತೆ ಇಡಿ.ಒಲೆ /ಸ್ಟವ್ ಮೇಲೆ ಚೆನ್ನಾಗಿ ಬಾಡಿಸಿಕೊಳ್ಳಿ.ನಂತರ ನೀರು ಮುಟ್ಟಿಸಿ ಬಟ್ಟೆಯಲ್ಲಿ ಅಡಿ ಮೇಲೆ ಎರಡು ಬದಿ ಒರೆಸಿಕೊಳ್ಳಿ.
ಅಕ್ಕಿಯನ್ನು ಎರಡರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ತೊಳೆದಿಡಿ.ಹಲಸಿನ ಹಣ್ಣನ್ನು ತುಂಡುಮಾಡಿ ಸೊಳೆ ಬಿಡಿಸಿ ಇಟ್ಟುಕೊಳ್ಳಿ.ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸೊಳೆಯನ್ನು ಹಾಕಿ ಗರ್ ಮಾಡಿ.ಸೊಳೆ ತುಂಡಾದರೆ ಸಾಕು.ನಣ್ಣಗಾಗುವುದು ಬೇಡ.ಹೀಗೆ ಸೊಳೆಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಪಾತ್ರೆಗೆ ಹಾಕಿಕೊಳ್ಳಿ.
ಅಕ್ಕಿ, ತೆಂಗಿನತುರಿ,ಬೆಲ್ಲದ ಪುಡಿ, ಉಪ್ಪು ಎಲ್ಲವನ್ನು ಜೊತೆಗೆ ರುಬ್ಬಿ ಪಾತ್ರೆಯಲ್ಲಿದ್ದ ಹಲಸಿನ ಹಣ್ಣಿನ ತುಂಡುಗಳ ಜೊತೆ ಸೇರಿಸಿ ಚೆನ್ನಾಗಿ ಹೊಂದಿಕೊಳ್ಳುವಂತೆ ತಿರುವಿ.ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಕಾಯಲು ಬಿಡಿ.
ಈ ಮಿಶ್ರಣವನ್ನು ತಯಾರು ಮಾಡಿಟ್ಟ ಬಾಳೆ ಎಲೆಯ ಮೇಲೆ ಒಂದೆರಡು ಸೌಟಿನಷ್ಟು ಹಾಕಿ ಬಾಳೆಲೆಯ ಮೇಲಿನ ಬದಿ ಮಡಚಿ.ಅದರ ಮೇಲೆ ಕೆಳಗಿನ ಬದಿ ಮಡಚಿ.ನಂತರ ಎರಡೂ ಬದಿಯನ್ನು ಮಡಚಿ,ಕವಚಿ ಇಡಿ.ಇದನ್ನು ಬಿಸಿಯಾಗುತ್ತಿರುವ ಇಡ್ಲಿ ಪಾತ್ರೆಯಲ್ಲಿ ಒಂದರ ಮೇಲೊಂದರಂತೆ ಇಡುತ್ತಾ ಬನ್ನಿ.ಪೂರ್ತಿ ಇಟ್ಟಾದ ಮೇಲೆ ಮುಚ್ಚಳ ಹಾಕಿ ದೊಡ್ಡ ಉರಿಯಲ್ಲಿ ಬೇಯಿಸಿ.ಅರ್ಧ ಗಂಟೆಯಲ್ಲಿ ಉರಿ ಸಣ್ಣ ಮಾಡಿ.ಒಂದು ಗಂಟೆ ಹಬೆಯಲ್ಲಿ ಬೆಂದರೆ ಬಿಸಿ ಬಿಸಿ ಕಡುಬು ತಿನ್ನಲು ತಯಾರಾಗುತ್ತದೆ..
ಬಾಳೆ ಎಲೆ ಸಿಗದಿದ್ದವರು ಅಥವಾ ಅದನ್ನು ಸ್ವಚ್ಛಗೊಳಿಸುವಷ್ಟು ಸಮಯವಿಲ್ಲದಿದ್ದರೆ ಮೇಲಿನ ಹಿಟ್ಟನ್ನು ಇಡ್ಲಿ ತಟ್ಟೆಗೆ ಎಣ್ಣೆ ಅಥವಾ ತುಪ್ಪ ಸವರಿ ಬೇಯಿಸಬಹುದು.ಅಥವಾ ಬಟ್ಟಲಿನಲ್ಲಿ ಹಾಕಿ ಬೇಯಿಸಬಹುದು.
ಬಿಸಿ ಕಡುಬಿಗೆ ಎಣ್ಣೆ ಅಥವಾ ತುಪ್ಪ ಸವರಿ ತಿನ್ನಲು ಬಲು ರುಚಿ.ಅಲ್ಲದೇ ಇದನ್ನು ತೆಂಗಿನಕಾಯಿ ಚಟ್ನಿ, ಶುಂಠಿ ಚಟ್ನಿಯೊಂದಿಗೆ ಕೂಡ ತಿನ್ನಲು ಕೊಡಬಹುದು.
✍️... ಅನಿತಾ ಜಿ.ಕೆ.ಭಟ್.
20-06-2020.
20-06-2020.
ಹಲಸಿನ ಹಣ್ಣಿನ ಕೊಟ್ಟಿಗೆ .. ತುಪ್ಪ... ಶುಂಠಿ ಚಟ್ನಿ 😋😋
ReplyDeleteಶುಂಠಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿ..💐🙏
Delete