ಮದರಂಗಿಯ ರಂಗು ಮಾಸುವ ಮುನ್ನ
" ಏಯ್...ಅದಲ್ಲ ರಾಜನಿಗೆ ಚಹಾಗೆ ಹಾಲು..ಅದು ನಿನ್ನೆಯ ಹಾಲು..ಕೆಳಗಡೆ ಇದೆ ನೋಡು.ಈಗ ತಾನೇ ಹಿಂಡಿ ತಂದ ನೊರೆ ಹಾಲು.ಅದನ್ನು ಹಾಕಿ ಚಹಾ ಮಾಡಿ ಕೊಡು.."ಎಂಬ ಅತ್ತೆಯ ಏರುದನಿಗೆ ಹೆದರಿದಳು ಮೃದುಲಾ..ಆಕೆ ಮೊದಲು ತೆರೆದಿದ್ದ ನಿನ್ನೆಯ ಹಾಲಿನ ಪಾತ್ರೆಯಿಂದ ಹಾಲು ಹಾಳಾದ ವಾಸನೆ ಅವಳ ಮೂಗಿಗೆ ಬಡಿದಿತ್ತು.
ಅತ್ತೆ ಹೇಳಿದ ಪಾತ್ರೆಯಿಂದ ನೊರೆ ಹಾಲು ಬಗ್ಗಿಸಿ,ಚಹಾ ಮಾಡಲು ಹೊರಟಳು.ನಿನ್ನೆ ಬೆಳಿಗ್ಗೆಯೇ ಚಹಾ ಮಾಡುವಾಗ ಅತ್ತೆಯ ಕೈಯಿಂದ " ಏನು ನಿನ್ನಮ್ಮ ಒಂದು ಲೋಟ ಚಹಾ ಮಾಡೋಕೂ ಕಲಿಸಲಿಲ್ವಾ?" ಎಂಬ ಮಾತು ಕೇಳಿ ಅಳು ನುಂಗಿಕೊಂಡಿದ್ದಳು.ಸಂಜೆ ಅತ್ತೆಯೇ ಮುಂದೆ ನಿಂತು ಚಹ ಮಾಡಲು ಹೇಳಿ ಕೊಟ್ಟಿದ್ದರು.
ನೆರಿಗೆ ಮೇಲೆತ್ತಿ ಸೊಂಟಕ್ಕೆ ಕುತ್ತಿ, ಅತ್ತಿಂದಿತ್ತ ಓಡಾಡುತ್ತಿದ್ದ ಅತ್ತೆ ರಾಧಮ್ಮ.."ನೋಡು ಚಹಾ ಮಾಡುತ್ತಾ ಸುಮ್ಮನೆ ನಿಲ್ಲುವುದಲ್ಲ.. ಅಲ್ಲಿ ಒಲೆಯ ಪಕ್ಕ ದೋಸೆ ಹಿಟ್ಟಿದೆ.ದೋಸೆ ಕಾವಲಿ ಇಟ್ಟು ದೋಸೆ ಹುಯ್ಯಿ.."ಎಂದಾಗ ಅಳುಕಿನಿಂದಲೇ ಕಾವಲಿಗೆಯಿಟ್ಟು ದೋಸೆ ಮಾಡಲು ಹೊರಟವಳಿಗೆ ದೋಸೆ ಸರಿ ಎದ್ದು ಬಂದರೆ ಸಾಕು.. ಚೆನ್ನಾಗಿ ಆದರೆ ಸಾಕಪ್ಪಾ..ಎಂದೆಲ್ಲ ಚಿಂತೆ.. ಅಲ್ಲಿ ದೋಸೆ ಮಾಡುತ್ತಿದ್ದಂತೆ ಚಹಾ ಕುದಿದು ಮೇಲೆ ಬಂತು.ಉಕ್ಕುವುದೊಂದು ಬಾಕಿ. ಒಳ್ಳೆ ಪರಿಮಳ ಬರುತ್ತಿದೆ ..ಪತಿರಾಯರಿಗೆ ಖಡಕ್ ಚಹಾ ನನ್ನ ಕೈಯಿಂದ. ಎಂದುಕೊಳ್ಳುತ್ತಾ ಖುಷಿಯಿಂದ ಸೋಸಿದಳು ಮೃದುಲಾ.
ದೋಸೆ ಕಾವಲಿಗೆ ಬಿಸಿಯಾಗುತ್ತಿತ್ತು. ಅವಳ ಮನಸ್ಸು ಯೋಚನೆಯಲ್ಲಿ ತೊಡಗಿತು. ಮದುವೆಯಾಗಿ ಕೇವಲ ನಾಲ್ಕು ದಿನವಾಗಿತ್ತು ಅಷ್ಟೇ. ಅಪ್ಪ ಅಮ್ಮನ ಮುದ್ದಿನ ಮಗಳು ಮೃದುಲಾ. ಮಗಳ ಯಾವ ಆಸೆಯನ್ನು ನಿರಾಸೆ ಮಾಡಲಿಲ್ಲ ಅಪ್ಪ ಅಮ್ಮ.ಮಗಳನ್ನು ಅವಳಿಷ್ಟದಂತೆ ಓದಿಸಿ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದರು.ಮಗಳ ಇಷ್ಟದಂತೆಯೇ ಆಭರಣಗಳನ್ನು ವಿನ್ಯಾಸಗೊಳಿಸಿ, ಅವಳಿಷ್ಟದ ಬಣ್ಣದ ಉಡುಗೆ ತೊಡುಗೆಗಳನ್ನು ಖರೀದಿಸಿ ಮದುವೆಗೆ ಏರ್ಪಾಟು ಮಾಡಿದ್ದರು.ಅಮ್ಮ ಮಗಳಿಗೆ ಆಗಾಗ "ಮನೆಕೆಲಸ ,ಅಡುಗೆ ಕೆಲಸವನ್ನು ಕಲಿತುಕೋ "ಎಂದು ತಾಕೀತು ಮಾಡಿದರೆ..ಮಗಳು ಮುಖ ಊದಿಸಿಕೊಂಡು ಅಪ್ಪನ ಬಳಿ ತೆರಳುತ್ತಿದ್ದಳು.."ನನ್ನ ಮುದ್ದು ಮಗಳಿಗೇನೂ ಕಷ್ಟ ಕೊಡಬೇಡ.ಮದುವೆಯಾದ ಮೇಲೆ ಜವಾಬ್ದಾರಿ ತಾನಾಗಿಯೇ ಬರುತ್ತೆ..".ಎನುವ ಅಪ್ಪನನ್ನು ಕಂಡರೆ ಮಗಳಿಗೂ ಎಲ್ಲಿಲ್ಲದ ಅಕ್ಕರೆ.."ನನ್ನ ಮುದ್ದಿನ ಅಪ್ಪ.." ಎನ್ನುತ್ತಾ ಅಪ್ಪನನ್ನು ಹೊಗಳಿ ಅಟ್ಟಕ್ಕೇರಿಸಿ ತನ್ನ ಕೆಲಸ ಸಲೀಸಾಗಿ ಸಾಧಿಸುತ್ತಿದ್ದಳು.
ಮದುವೆ ಹಿಂದಿನ ದಿನ ಮೆಹಂದಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಮೃದುಲಾಳ ಗೆಳೆಯ-ಗೆಳತಿಯರು, ಕುಟುಂಬದವರು ಎಲ್ಲರೂ ಸೇರಿ ಸಂಭ್ರಮಿಸಿದ್ದರು. ಅವಳ ಗೆಳತಿ ಶಿಲ್ಪ ಮದುಮಗಳ ಕೈಗೆ ಬಹಳ ಚೆನ್ನಾಗಿ ಮೆಹಂದಿ ಡಿಸೈನ್ ಹಾಕಿದಳು. ಶಿಲ್ಪಾಳ ಚಾಕಚಕ್ಯತೆಯನ್ನು ಎಲ್ಲರೂ ಕೂಡ ಹೊಗಳಿದ್ದರು. ಮೆಹಂದಿ ಚೆನ್ನಾಗಿ ರಂಗು ಬಂದಾಗ ತನ್ನ ಕೈಯನ್ನು ತಾನೇ ನೋಡಿ ನಕ್ಕು ನಾಚಿ ರಂಗೇರಿದ್ದಳು.ಗೆಳೆಯರ ರೇಗಿಸುವಿಕೆಯಲ್ಲಿ ತಾನೇ ಕಳೆದುಹೋಗಿದ್ದಳು.ರಾಜ್ ನ ಜೊತೆ ತನ್ನ ಭವಿಷ್ಯದ ಬದುಕನ್ನು ನೆನೆದು 'ವಾವ್..!! ನಾನೆಷ್ಟು ಲಕ್ಕೀ.. ಹ್ಯಾಂಡ್ ಸಮ್, ಲವ್ಲೀ ಬಾಯ್ ..ನನಗೆ ಸಿಕ್ಕಿದ್ದಾರೆ..ನಿನ್ನ ಪ್ರತಿ ಹೆಜ್ಜೆಗೂ ನನ್ನ ರಕ್ಷೆಯಿದೆ..ನಿನ್ನೆಲ್ಲಾ ಕೆಲಸಗಳಿಗೆ ನನ್ನ ಬೆಂಬಲವಿದೆ" ಎಂದು ಹೇಳುತ್ತಿದ್ದ ರಾಜ್'ನನ್ನು ಮನಸಲ್ಲೇ ಆರಾಧಿಸಿದಳು.
ಮದುವೆಯ ಕಾರ್ಯಕ್ರಮಗಳೆಲ್ಲವೂ ಸುಸೂತ್ರವಾಗಿ ನೆರವೇರಿ ಮೃದುಲ ಪತಿಯ ಮನೆಗೆ ಕಾಲಿಟ್ಟಳು. ಕಂಗಳ ತುಂಬಾ ಕನಸ ತೇರು. ಅಪ್ಪ-ಅಮ್ಮ ತಾವೇ ಆಯ್ಕೆಮಾಡಿದ ಅಳಿಯ ರಾಜ್. ಮೃದುಲಳಿಗೂ ಬಹಳವೇ ಇಷ್ಟವಾಗಿದ್ದ. ಮದುವೆಗೆ ಮುನ್ನವೇ ಸಾಕಷ್ಟು ಬಾರಿ ಅವಳನ್ನು ಭೇಟಿಯಾಗಿದ್ದ. ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿದ್ದರು. ನವ ಜೋಡಿಯ ಜೀವನ ಆರಂಭವಾಯಿತು. ಮದುವೆಗೂ ಮೊದಲು ಓದು, ಮನರಂಜನೆಯಲ್ಲಿ ಮುಳುಗಿದ್ದ ಮೃದುಲಾಳಿಗೆ ಅಡುಗೆಯಂತೂ ಸ್ವಲ್ಪವೂ ಬರುತ್ತಿರಲಿಲ್ಲ. ಅಮ್ಮ ಕಲಿಯೆಂದರೆ "ಅದೇನು ಮಹಾವಿದ್ಯೆನಾ ?ನಾನು ಯೂಟ್ಯೂಬ್ ನೋಡಿ ಕಲಿಯಬಲ್ಲೆ..ಅಲ್ಲದೆ ನಾನೇನೂ ಒಬ್ಬಳೇ ಇರಲ್ಲ ಅಲ್ಲಿ..ನನ್ನ ರಾಜ್ ನನ್ನ ಜೊತೆ ಇರ್ತಾರೆ.. " ಎಂದು ಅಮ್ಮನಿಗೆ ಎದುರು ಆಡುತ್ತಿದ್ದವಳಿಗೆ ಈಗ ಅಮ್ಮನ ಮಾತುಗಳು ಎಲ್ಲವೂ ಅರ್ಥವಾಗುತ್ತಿದೆ.
"ಏನೇ ದೋಸೆ ಮಾಡಿದ್ದೀಯಾ .." ಎಂಬ ಅತ್ತೆಯ ಮಾತಿಗೆ ವಾಸ್ತವಕ್ಕೆ ಬಂದಿದ್ದಳು. ದೋಸೆ ಕಾವಲಿಗೆ ಮೇಲೆ ಸರಿಯಾಗಿ ತುಪ್ಪ ಸವರಿ ದೋಸೆ ಹಿಟ್ಟು ಹಾಕಿದಳು. ವೃತ್ತಾಕಾರವಾಗಿ ದೋಸೆ ಮಾಡಲು ಹೋಗಿ ಸಾಧ್ಯವೇ ಆಗಲಿಲ್ಲ. ದೋಸೆ ಹಿಟ್ಟು ಎದ್ದು ಬರುವಂತಾಯಿತು. ಆದರೂ ಛಲ ಬಿಡದೆ ಪ್ರಯತ್ನಪಟ್ಟು ಅಂದವಾದ ದೋಸೆ ಮಾಡಿದಳು.
"ಅತ್ತೆ ..ದೋಸೆ ಮಾಡಿಟ್ಟಿದ್ದೀನಿ..."ಎಂದಳು...
"ಅತ್ತೆ ..ದೋಸೆ ಮಾಡಿಟ್ಟಿದ್ದೀನಿ..."ಎಂದಳು...
ಅತ್ತೆ ಮಗ ರಾಜನನ್ನು ತಿಂಡಿ ತಿನ್ನಲು ಕರೆದರು.ಮೃದುಲಾ ಗಂಡನಿಗೆ ತಟ್ಟೆ ಇಟ್ಟು ಬಡಿಸಲು ಹೊರಟಳು. ರಾಜ್ ಮಡದಿಯ ಕಡೆ ನೋಡಿ ನಸುನಕ್ಕು ತಿಂಡಿ ಚಹಾ ಸೇವಿಸುತ್ತಿದ್ದ.ಇದನ್ನು ಕಂಡ
ಅತ್ತೆ ಅವಳನ್ನು ಕಣ್ಣು ಕೆಕ್ಕರಿಸಿ ನೋಡಿ,..
ಅತ್ತೆ ಅವಳನ್ನು ಕಣ್ಣು ಕೆಕ್ಕರಿಸಿ ನೋಡಿ,..
" ಏನೇ ಇದು ಚಹಾ ಇಷ್ಟು ಕಪ್ಪಗಾಗಿದೆ..? ದೋಸೆಯೆಲ್ಲ ದಪ್ಪ ದಪ್ಪವಾಗಿದೆಯಲ್ಲಾ.." ಎನ್ನುತ್ತಾ ಮಗನನ್ನು ನೋಡಿ "ಏನು ಜನಾನೋ ಏನೋ.. ಹೆಣ್ಣುಮಕ್ಕಳಿಗೆ ಸ್ವಲ್ಪಾನೂ ಅಡುಗೆ ಕಲಿಸಲ್ಲ.."ಎಂದಾಗ ಮೃದುಲಾಳ ಕಣ್ಣು ತುಂಬಿ ಬಂತು.. ರಾಜ್ ಏನೂ ಮಾತನಾಡದೆ ತಲೆತಗ್ಗಿಸಿ ಚಹಾ ಕುಡಿದು ದೋಸೆ ತಿಂದು ಹೊರಟರು. ಮಾವನವರು ತಿಂಡಿಗೆ ಬರುತ್ತಿದ್ದಂತೆ ಗಡಿಬಿಡಿಯಲ್ಲಿ ಅತ್ತೆ ಒಲೆಯ ಮೇಲೆ ನೀರಿಟ್ಟು ಚಹಾ ಪುಡಿ ಹಾಕಿ ಕುದಿಸಿ ,ನಿನ್ನೆಯ ಹಾಲಿನ ಪಾತ್ರೆಯಿಂದ ಹಾಲು ತೆಗೆದು ಸೇರಿಸಿ, ಚಹಾ ಮಾಡಿ ಮಾವನ ಮುಂದಿಟ್ಟರು."ಆ ಕಡೆ ಸರಿ ..ನೀನು ಹೀಗೆ ದೋಸೆ ಮಾಡಿದರೆ ಯಾವಾಗ ಆಗೋದು"ಎನ್ನುತ್ತಾ ತಾನು ತುಂಬಾ ಹಿಟ್ಟು ಹಾಕಿ ದಪ್ಪ ದಪ್ಪ ದೋಸೆ ಮಾಡಿದರು.. ಅಯ್ಯೋ ನಾನೀಗ ಇದಕ್ಕಿಂತ ಸುಂದರವಾಗಿ, ತೆಳ್ಳಗಾಗಿ ದೋಸೆ ಮಾಡಿದ್ದರೆ ನನ್ನನ್ನು ಆಡಿದರಲ್ಲ.. !!!! ನೊರೆಯ ಹಾಲಿನಿಂದ ಚೆನ್ನಾಗಿ ಚಹಾ ಮಾಡಿದರೂ ಮಾತು ಕೇಳಬೇಕಾಯಿತು. ಆದರೆ ಮಾವನಿಗೆ ಮಾಡಿಕೊಟ್ಟದ್ದು ಹಾಳಾದ ಹಾಲಿನಿಂದ ಚಹಾ ಮತ್ತು ಅತಿಯಾಗಿ ದಪ್ಪವಾದ ದೋಸೆ...ತಾನು ಸಿನಿಮಾಗಳಲ್ಲಿ ಕಂಡಂತಹ,ಕಾದಂಬರಿಗಳಲ್ಲಿ ಓದಿದಂತಹ ಸನ್ನಿವೇಶವನ್ನು ಇನ್ನು ಇಲ್ಲಿ ಎದುರಿಸಬೇಕಾಗುತ್ತದೋ ಏನೋ...ನಿನಗೆ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದ್ದ ರಾಜ್ ಕೂಡಾ ಕಣ್ಣೆತ್ತಿಯೂ ನೋಡದೆ ಹೊರಟು ಹೋದರಲ್ಲ ಎಂದುಕೊಂಡವಳಿಗೆ ಕಂಠ ಬಿಗಿದು ಬಂದು ರೂಮಿಗೆ ಓಡಿದಳು.
ರೂಮಿಗೆ ಬಂದ ರಾಜ್ ಮಡದಿಯ ಕಣ್ಣೀರನ್ನು ಒರೆಸಿ ಕಣ್ಣಲ್ಲಿ ಕಣ್ಣಿಟ್ಟು ಕಂಡ.. ಮದರಂಗಿ ಇನ್ನೂ ಆರಿರದ ಅವಳ ಅಂಗೈ ಮೇಲೆ ತನ್ನ ಅಂಗೈಯನಿಟ್ಟ.. "ನನ್ನ ಸ್ವೀಟಿ " ಎನ್ನುತ್ತಾ ಮುಂಗೈ ಮೇಲಿನ ಮದರಂಗಿಯ ಚಿತ್ತಾರವನ್ನು ಸವರಿ ಸಂಭ್ರಮಿಸಿದವನಿಗೆ ಅದರ ಹಿಂದಿನ ಅವಳ ನೋವು ಅರಿವಾಗಲೇಯಿಲ್ಲ..ಮದರಂಗಿಯ ರಂಗು ಆರುವ ಮುನ್ನವೇ ಅವಳ ಮನಸು ಮುದುಡಿಕೊಂಡಿತು."ಶಿಲ್ಪಾ...ಈ ಮದರಂಗಿಯ ರಂಗು ಕೋಣೆಯ ಒಳಗೆ ಮಾತ್ರ...ಅದರಾಚೆ ಏನು ಮಾಡಿದರೂ ರಾಂಗ್... ರಾಂಗ್..."ಎನ್ನುತ್ತಾ ಮದರಂಗಿಯ ಚಿತ್ತಾರವನ್ನು ಬಿಡಿಸಿದ ಗೆಳತಿಯಲ್ಲಿ ಕೂಗಿ ಹೇಳಬೇಕೆನಿಸಿತು.
ಕನ್ನಡ ಪ್ರತಿಲಿಪಿ... ದೈನಿಕ ವಿಷಯ... ಮದರಂಗಿಯ ರಂಗಿನ ಹಿಂದೆ.... ಈ ವಿಷಯಕ್ಕೆ ಬರೆದ ಕಥೆ..
No comments:
Post a Comment