#ಕೋರಿಕೆ
ಬಾಳಿನ ಪಯಣದ ನಾವೆಯಲಿ
ರಂಗನು ತುಂಬಿದ ಸಖನೇ
ನಾಳೆಯ ಕನಸನು ಎದೆಯಲಿ ಬಿತ್ತಿ
ಮರೆತರೆ ಸಹಿಸೆನು ಬೇನೆ||೧||
ಕಂಬನಿ ಹರಿದು ಸಾಗರ ಸೇರಿದೆ
ನೆನಪಿನ ಅಲೆಗಳು ಚಿಮ್ಮುತಿವೆ
ಕಲ್ಪನಾಲೋಕದಿ ವಿಹಾರ ಹೊರಟಿಹೆ
ಗೀಚುತ ನಿನ್ನದೇ ಚಿತ್ರವನು||೨||
ಧಮನಿಯ ರಕುತದಿ ಏರಿದೆ ಶಾಖವು
ಒಲವಿನ ಸ್ಪಂದನ ಬಯಸಿ
ಧ್ಯಾನದಿ ನಿರತವು ಮೈಮನವು
ಉಸಿರಲಿ ನಿನ್ನನೇ ಸ್ಮರಿಸಿ||೩||
ಕಂಡೆನು ನಿನ್ನದೇ ಬಿಂಬವನು
ಶರಧಿಯ ಅಲೆಗಳ ರಿಂಗಣದಿ
ಕಣ್ಣನು ಮುಚ್ಚಿ ಕನ್ಯೆಯ ಮೆಚ್ಚಿ
ಬಂಧಿಸಿ ಬಿಡುವೆಯಾ ಕಂಕಣದಿ||೪||
ಬಾನಿನ ಬಯಲಲಿ ಚದುರಿದೆ ಮೋಡ
ಮೂಡಿಸಿ ಚೆಲುವಿನ ಚಿತ್ತಾರ
ಪಕ್ಷಿಗಳಾಗಿ ಕೂಡುತ ನಲಿದರೆ
ನಮ್ಮಯ ಬಾಳೇ ಬಂಗಾರ||೫||
ಸೆಳೆದಿಹ ವದನವ ಕಾದಿಹೆ ನೊಂದು
ಬರುವೆಯ ಮುನಿಸನು ತೊರೆದು
ಕಳೆಯುತ ಬೇಗೆಯ ತಂಪೆರೆದು
ನಗಿಸುತ ನಡೆಸೆಯಾ ಕೈಹಿಡಿದು||೬||
✍️... ಅನಿತಾ ಜಿ.ಕೆ.ಭಟ್.
24-01-2021.
ದತ್ತ ಸಾಲು:- ನಿನ್ನಯ ಬಿಂಬವ ಕಂಡೆನು ನಾನು ಶರಧಿಯ ಅಲೆಗಳ ರಿಂಗಣದಿ.
ಚಿತ್ರ ಕೃಪೆ:- ಸವಿತಾ ಹೆಗಡೆ, ಸೌಹಾರ್ದ ಬಳಗ.
💮🌿💮🌿💮🌿💮🌿💮🌿💮🌿💮🌿💮🌿💮
ಇದನ್ನು "ಕಲಾಚಾವಡಿ" ಫೇಸ್ಬುಕ್ ಗ್ರೂಪಿನ ಮೊದಲ ವಾರ್ಷಿಕೋತ್ಸವ "ಕಲಾಸಂಭ್ರಮ" ಉತ್ಸವದಲ್ಲಿ "ಸಾಹಿತ್ಯ ಸಂಭ್ರಮ- ಕವನವಾಚನ-ಗಾಯನ" ದಲ್ಲಿ ಪ್ರಸ್ತುತಪಡಿಸಿದ್ದೇವೆ. ರಾಗಸಂಯೋಜನೆ ಮಾಡಿ ಮನಮುಟ್ಟುವಂತೆ ಸುಶ್ರಾವ್ಯವಾಗಿ ಹಾಡಿರುವವರು ಶ್ರೀಮತಿ ಕಲ್ಪನಾ ಸುರೇಶ್ ಜೈನ್ ಅವರು. ಕೆಳಗಿನ ಲಿಂಕ್ ಬಳಸಿ ವಿಡಿಯೋ ವೀಕ್ಷಿಸಿ..