ಒಗೆತ
ಬೆವರುನಾರುವ ದಿರಿಸು,
ಕೆಸರಲಿ ಮುಳುಗೆದ್ದಂತಿದ್ದ ಚಡ್ಡಿ,
ನೆಲಕೆ ಪರಪರ ಒರೆಸಿ ದಪ್ಪವಾಗಿಹ ಪ್ಯಾಂಟು,
ಕೊರಳಿಗೆ ತಾಗಿ ಕಪ್ಪುಗೆರೆಯೆಳೆದ ಕಾಲರಿನ ಬಿಳಿಯಂಗಿ
ನೋಡುತಿಹವು ದಿಟ್ಟಿಸಿ ಸ್ವಚ್ಛಗೊಳಿಸುವೆಯಾ..
ಒಗ್ಗದು ಗಬ್ಬು; ಅವುಗಳಿಗೂ ಮಿರಮಿರ ಮಿನುಗುವ ಹಂಬಲ, ಮತ್ತೆ ಮೈಯೇರಿ ಹೆಮ್ಮೆಯಿಂದ ಬೀಗುವ ಚಪಲ,
ಶುಚಿಯಾದರೆ ಬೆಲೆ ಇಲ್ಲದಿರೆ ಮೂಲೆಪಾಲು..
ಮಾರ್ಜಕಗಳ ಸುವಾಸನೆ, ಜಲಸಿಂಚನ ಅದರೊಳಗೆ ಕೆಸರಂಗಿಗಳ ಮಜ್ಜನ,
ಮುಂದಾಗಿ ಮುಳುಗುವ ಬಿಳಿಯಂಗಿಗೇ ಹಮ್ಮು
ಕೊನೆಗುಳಿವ ಕರವಸ್ತ್ರ ಎಲ್ಲ ಕೊಳೆಯಳಿಸಿ ತನ್ನ ಶುಚಿಗೊಳಿಸಲು ನೀರಹನಿ ತಾಗದೆ ಕೊರಗಿದೆ..
ಬಟ್ಟೆಗಳ ಸರದಿ ಕಲ್ಲಿಗೆ ಉಜ್ಜಿ, ಮಾರ್ಜಕದಿ ಜಜ್ಜಿ
ಕರಗಳ ನಡುವೆ ನರ್ತನ, ನೊರೆಕಳೆಯೆ ನೀರ ಮಜ್ಜನ ಮತ್ತದೇ ಪುನರಾವರ್ತನ.. ಬಿರುಸಿನಲಿ ಹಾಸುಗಲ್ಲಿಗೆ ಬಡಿದು ಸ್ವರಗಾನ
ಆಗಾಗ ಏರಿಳಿತ; ಮಲಿನತೆಯ ತೊಳೆಯಾನ..
ಶುದ್ಧಸಲಿಲದಿ ಮರುಮಜ್ಜನ
ಹಿಂದಿನ ಪಾಪ ಕಳೆದುಬಂದಂತೆ ಪಾವನ
ಸೂರ್ಯರಶ್ಮಿಯು ಕಳೆದು ಸೂಕ್ಷ್ಮಾಣುಜೀವಿಯ
ಗರಿಗರಿ ಬಟ್ಟೆ ಸ್ವಚ್ಛ, ಶುದ್ಧ, ಹೊತ್ತು ಶುಭ್ರಕಳೆಯ..
ಶುದ್ಧವಾಗಲು ಹಂತಹಂತದ ಒಗೆತ
ತಿಕ್ಕಿತಿಣುಕಿ ಒಣಗಿಸಿದರೆ ಸಂಸ್ಕರಿತ
ಮನದ ಕೊಳೆಗೂ ಮೌನದ ಮಾರ್ಜಕ
ಧ್ಯಾನದ ಜಲಧಾರೆ ಮರೆವೆಂಬ ಹಾಸುಗಲ್ಲು
ಕ್ಷಮೆ ಪ್ರೀತಿಯ ಕಿರಣ
ಸೋಕಿದರೆ ಮನಃಶುದ್ಧಿ, ಚೈತನ್ಯಮಯ ಶರೀರ
ಆರೋಗ್ಯಕರ ಸ್ವಚ್ಛ ಜೀವನಯಾನ..
✍️... ಅನಿತಾ ಜಿ.ಕೆ.ಭಟ್.
10-01-2021.
ಚಿತ್ರ ಕೃಪೆ: ಅಂತರ್ಜಾಲ.
👌👌
ReplyDeleteThank you..
Delete