Saturday, 16 January 2021

ದಿಗಂತದೆತ್ತರ ಹಾರಾಡುವ ಕನಸು

 


"ತೇಜು... ತೇಜು.." ಅಮ್ಮ ಕರೆಯುತ್ತಲೇ ಇದ್ದರು. ಎಷ್ಟು ಕರೆದರೂ ಓಗೊಡುತ್ತಲೇ ಇಲ್ಲ ತೇಜು.. ಹುಡುಕುತ್ತಾ ಬಂದರು ಅಮ್ಮ ವಾಸಂತಿ. ಆಟಕೆ ಹೋದರೆ ಮನೆಯ ನೆನಪೇ ಇಲ್ಲ. ಎಲ್ಲಿ ಆಟವಾಡುತ್ತಿದ್ದಾನೋ ಏನೋ. ಎಂದು ಗೊಣಗುತ್ತಾ ಸಾಗುತ್ತಿದ್ದರು. ಮನೆಯ ಮಹಡಿಯ ಮೇಲೆ ಕುಳಿತು ಏನೋ ಯೋಚಿಸುತ್ತಿದ್ದ ಹತ್ತರ ಹರೆಯದ ತೇಜು. "ಏ..ಪುಟ್ಟ ಇಲ್ಲಿದ್ದೀಯಾ?  ಎಷ್ಟು ಸಲ ಕೂಗಿಕೊಂಡಿದ್ದೇನೆ.. ಕೇಳಿಸಿಯೇ ಇಲ್ಲವೇನೋ?" ಎನ್ನುತ್ತಾ ಮಗನ ತಲೆ ನೇವರಿಸಿ ಕರೆದುಕೊಂಡು ಹೋಗುವ ಪ್ರಯತ್ನಿಸಿದರು. "ಊಹೂಂ.. ನಾನು ಬರಲ್ಲ"

"ಏನಾಯ್ತು ಮಗನೇ..?"

"ನನ್ನ ಪ್ರಶ್ನೆಗೆ ಉತ್ತರಿಸಬೇಕು ಮೊದಲು.."

"ಸರಿ..ಏನದು..ಬೇಗ ಕೇಳು.."

"ಅಮ್ಮ ನನಗೊಂದು ಆಸೆ ಇದೆ.. ಈಗ ಮೇಲೆ ಹಾರಾಡಿತಲ್ಲ.. ಪುಟ್ಟ ವಿಮಾನ.. ಅದರಲ್ಲಿ ನಾನೂ ಕುಳಿತುಕೊಳ್ಳಬೇಕು.. ನಾನು ವಿಮಾನ ಓಡಿಸಬೇಕು."

"ಕನಸು ಕಾಣುವುದು ಒಳ್ಳೆಯದು. ಉನ್ನತವಾದ ಕನಸನ್ನೇ ಕಂಡಿದ್ದೀಯಾ. ಭೇಷ್ ಮಗನೇ"

"ಅಮ್ಮ ವಿಮಾನ ಹಾರಾಡಿಸಬೇಕಾದರೆ.. ವಿಮಾನ ಹಾರಾಟ ಎಲ್ಲಿ ಕಲಿಸುತ್ತಾರೆ?"

"ಅದು.... ಯಾವ ವಿಚಾರವೂ ನನಗೆ ತಿಳಿಯದು ಮಗನೇ. ನಮ್ಮಂತಹ ಬಡವರು ಉನ್ನತವಾದ ಕನಸುಗಳನ್ನು ಕಟ್ಟಿಕೊಳ್ಳಬಹುದು.. ಆದರೆ ಅದನ್ನು ಎಷ್ಟು ನನಸು ಮಾಡಲು ಸಾಧ್ಯ ಎಂಬುದು ಅದೃಷ್ಟದ ಮೇಲೆ ನಿರ್ಧರಿತವಾಗಿದೆ." ಎಂದ ಅಮ್ಮನ ಮಾತು ಅವನ ಉತ್ಸಾಹವನ್ನು ಕುಗ್ಗಿಸಿತು.

     ತೇಜುವಿನಲ್ಲಿ ಹುಟ್ಟಿದ ಕನಸು ಅವನನ್ನು ಪ್ರತಿದಿನ ಕಾಡುತ್ತಲೇ ಇತ್ತು. ಶಾಲೆಯಲ್ಲಿ ರಂಗನಾಥ ಮಾಷ್ಟ್ರು "ನಿಮ್ಮ ಕನಸುಗಳೇನು ನೀವು ಮುಂದೆ ಏನು ಆಗಲ್ಲ ಬಯಸುತ್ತೀರಿ..?" ಎಂದು ಕೇಳಿದಾಗ ಅವನು ಉತ್ತರಿಸಿದ್ದು "ನಾನು ಪೈಲೆಟ್ ಆಗಬೇಕೆಂದು ಬಯಸುತ್ತೇನೆ"
ಎಂಬುದಾಗಿ. ಅವನ ಮಾತಿಗೆ ಇಡೀ ತರಗತಿ ಮಕ್ಕಳು ಗೊಳ್ಳೆಂದು ನಕ್ಕಿದ್ದರು.. "ಒಂದು ಸೈಕಲ್ ಕೊಳ್ಳಲು ಇವನಲ್ಲಿ ಕಾಸಿಲ್ಲ. ಇನ್ನು ಪೈಲೆಟ್ ಆಗುತ್ತಾನಂತೆ..!!" ಎಂದು ಆಪ್ತ ಗೆಳೆಯ ಸುರೇಶ ಸಣ್ಣಗೆ ವಟಗುಟ್ಟಿದ.

"ತೇಜು.. ನೀನು ಉನ್ನತವಾದ ಕನಸನ್ನು ಕಟ್ಟಿಕೊಂಡಿದ್ದಿ. ಹೀಗೆ ಪ್ರತಿಯೊಬ್ಬರೂ ಭವಿಷ್ಯದ ಬಗ್ಗೆ ಈಗಲೇ ಕನಸುಗಳನ್ನು ಕಾಣಬೇಕು. ಅದನ್ನು ನನಸಾಗಿಸಲು ಪ್ರಯತ್ನಿಸಬೇಕು.. ತೇಜು ನಿನ್ನ ಕನಸನ್ನು ಸಾಧಿಸುವ ಶಕ್ತಿ, ಯುಕ್ತಿ ನಿನ್ನಲ್ಲಿ ಮೂಡಲಿ.." ಎಂದು ರಂಗನಾಥ ಮಾಷ್ಟ್ರು ಹುರಿದುಂಬಿಸಿದರು.

ಎಲ್ಲಾ ಸಹಪಾಠಿಗಳ ಎದುರು ರಂಗನಾಥ ಮಾಷ್ಟ್ರು ಆಡಿದ ಮಾತುಗಳು ಬಾಲಕನಲ್ಲಿ ತಾನು ಪೈಲಟ್ ಆಗಬೇಕೆಂಬ ತುಡಿತವನ್ನು ಹೆಚ್ಚಿಸಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಸಾಧನೆಗೆ  ಆರ್ಥಿಕ ಪರಿಸ್ಥಿತಿ ಅಡ್ಡಿಯಾದರೆ?  ಎಂಬ ಸಣ್ಣದೊಂದು ಆತಂಕ ಅವನ ಮನದಲ್ಲಿ ಇತ್ತು. ತಾನು ತನ್ನ ಕನಸನ್ನು ಸಾಕಾರಗೊಳಿಸಲು ಹೆತ್ತವರಿಗೆ ಹೊರೆಯಾಗಬಾರದು ಎಂದು ನಿರ್ಧರಿಸಿದ. ತಂದೆ-ತಾಯಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅವನನ್ನು ಪದವಿ ಓದಿಸಿದರು. ತೇಜುವಿನ ಮನದೊಳಗೆ ಪೈಲಟ್ ಆಗಬೇಕೆಂಬ ಕನಸು ಬೃಹದಾಕಾರವಾಗಿ ಬೆಳೆದಿತ್ತು.
ಆದರೆ ಯಾರಲ್ಲಾದರೂ ಹೇಳಿಕೊಂಡರೆ ಕೇವಲ ಅಪಹಾಸ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಆದ್ದರಿಂದ ಯಾರಲ್ಲೂ ಹೇಳುವುದಕ್ಕೆ ಹೋಗುತ್ತಿರಲಿಲ್ಲ. ಕೆಲಸವನ್ನು ಅರಸುತ್ತಾ  ಮುಂಬೈ ಕಡೆಗೆ ಪ್ರಯಾಣಿಸಿದ.

        ತನ್ನ ದೂರದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದು, ಹದಿನೈದು ದಿನಗಳ ಕಾಲ ಉದ್ಯೋಗವನ್ನರಸಿ,  ಪುಟ್ಟದೊಂದು ಉದ್ಯೋಗ ಹಿಡಿಯಲು ಸಮರ್ಥನಾದ. ಉದ್ಯೋಗ ಮಾಡುತ್ತಿದ್ದವನ ಕನಸುಗಳು ಮತ್ತೆ ಚಿಗುರಲು ಆರಂಭಿಸಿದ್ದವು. ಪೈಲೆಟ್ ಆಗಬೇಕಾದರೆ ಏನೆಲ್ಲ ಮಾಡಬೇಕು? ಎಲ್ಲಿ ತರಬೇತಿ ಪಡೆಯಬಹುದು ಎಂಬ ವಿಚಾರಗಳನ್ನು ಕಲೆಹಾಕುತ್ತಿದ್ದ. ಒಂದು ದಿನ ವಾರ್ತಾಪತ್ರಿಕೆಯೊಂದರಲ್ಲಿ 'ಪೈಲೆಟ್ ತರಬೇತಿ' ಎಂಬ ಶಿರೋನಾಮೆ ಕಂಡಾಗ ಆಸಕ್ತಿಯಿಂದ ನೋಡುತ್ತಿದ್ದನು. ಅಷ್ಟೊತ್ತಿಗೆ ಬಾಸ್ ಎಲ್ಲ ಕೆಲಸಗಾರರನ್ನು ಗಮನಿಸುತ್ತಾ  ಇವನ ಕ್ಯಾಬಿನ್ ಬಳಿ ಬಂದಿದ್ದರು. ಅದ್ಯಾವುದರ ಪರಿವೆಯೇ ಇಲ್ಲದೆ ಓದುತ್ತ ಕುಳಿತವನಲ್ಲಿ ಮಾತಿಗಿಳಿದರು ಬಾಸ್ ಶಂತನು.

ಇವನ ವಿಶೇಷ ಆಸಕ್ತಿಯನ್ನು ತಿಳಿದ ಶಂತನು ತನ್ನ ಗೆಳೆಯನೊಬ್ಬ ಪೈಲೆಟ್ ಆಗಿರುವ ವಿಷಯವನ್ನು ಹಂಚಿಕೊಂಡರು. ಅವನ ಮೂಲಕ ನಿನಗೆ ಏನಾದರೂ ಸಲಹೆ ಸಹಕಾರ ಸಿಗಬಹುದು. ವಿಚಾರಿಸುತ್ತೇನೆ ಎಂದರು. ತೇಜುವಿನ ಮುಖದಲ್ಲಿ ಆಶಾಭಾವನೆ ಮೂಡಿತು. ಇದಾಗಿ ಕೆಲವೇ ದಿನಗಳಲ್ಲಿ ಮಹತ್ವದ ಮಾಹಿತಿಗಳನ್ನು ತೇಜುಗೆ ಒದಗಿಸಿದ್ದರು ಬಾಸ್. ತರಬೇತಿಗೆ ಅಗತ್ಯವಾದಷ್ಟು ಹಣ ಹೊಂದಿಸುವುದು ಕಷ್ಟದ ಕೆಲಸವಾಗಿತ್ತು.
ಕಂಪೆನಿಯ ಎಲ್ಲಾ ಸದಸ್ಯರು ಕೂಡ ಯಥಾನುಶಕ್ತಿ ಕೈಜೋಡಿಸಿದರು. ಹಣವನ್ನು ಸಂಗ್ರಹಿಸಿ ತೇಜುಗೆ ನೆರವಾದರು. ತೇಜು ಆಸೆ ಗರಿಕೆದರಿ ನಿಂತಿದ್ದ. ಪೈಲೆಟ್ ಟ್ರೈನಿಂಗ್'ಗೆ ಹೊರಟವನಿಗೆ ಆಫೀಸಿನ ಸಿಬ್ಬಂದಿಗಳೆಲ್ಲ ಶುಭಕೋರಿದ್ದರು.

     ಪೈಲೆಟ್ ತರಬೇತಿಗೆ ಹಾಜರಾದ ತೇಜು. ಎಲ್ಲರೂ ಸಿರಿವಂತರಂತೆ ಕಾಣುತ್ತಿದ್ದರು. ಅವರಲ್ಲಿ ಸರಳ, ಸಭ್ಯ ವ್ಯಕ್ತಿಯಂತೆ ಕಾಣಿಸುತ್ತಿದ್ದ ತೇಜು. ಸತತ ಪರಿಶ್ರಮವೇ ಅವನ ಅಸ್ತ್ರವಾಗಿತ್ತು.  ಶಿಸ್ತು ಮತ್ತು ಬದ್ಧತೆಯಿಂದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ. ಅದನ್ನೇ ಉದ್ಯೋಗವಾಗಿ ಮಾಡಬೇಕೆಂದರೆ ಅವನ ಕನಸಿಗೆ ನೂರಾರು ತಡೆಗೋಡೆಗಳಿದ್ದವು. ತಾನು ಮೊದಲು ಕೆಲಸ ನಿರ್ವಹಿಸುತ್ತಿದ್ದ ಕಂಪನಿಯಲ್ಲಿ ಮತ್ತೆ ಕೆಲಸ ನಿರ್ವಹಿಸಿದ. ಇಂತಹ ಸಂದರ್ಭದಲ್ಲಿ ಅವನಿಗೆ ಪ್ರೈವೇಟ್ ವಿಮಾನ ಕಂಪನಿಯಲ್ಲಿ ಪೈಲೆಟ್ ಅವಕಾಶ ದೊರೆಯಿತು. ಬಹಳ ಆಸಕ್ತಿಯಿಂದ ತನ್ನ ಕಾರ್ಯವನ್ನು ನಿರ್ವಹಿಸಿದ. ಅವನ ನಡೆ, ಚುರುಕುತನ ಎಲ್ಲರಿಗೂ ಮೆಚ್ಚುಗೆಯಾಯಿತು. ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಉನ್ನತವಾದ ಹುದ್ದೆ, ಕೈತುಂಬಾ ಸಂಪಾದನೆಗಿಂತ ಅವನಿಗೆ ತನ್ನ ಕನಸನ್ನು ಕಷ್ಟಪಟ್ಟು ಸಾಕಾರಗೊಳಿಸಿದ್ದೇ ಹೆಮ್ಮೆಯ ವಿಷಯವಾಗಿತ್ತು.

       ತನ್ನ ಕನಸು ಸಾಕಾರಗೊಂಡ ಮೇಲೆ ಆತ ಮೊದಲು ತಾನು ಕಾರ್ಯನಿರ್ವಹಿಸುತ್ತಿದ್ದ ಕಂಪೆನಿಯ ಸಹೋದ್ಯೋಗಿಗಳಿಗೆಲ್ಲ ಧನ್ಯವಾದಗಳನ್ನು ಅರ್ಪಿಸಿದ, ಅವರ ಸಹಕಾರವನ್ನು ಕೊಂಡಾಡಿದ.

     ಇದುವರೆಗೆ ತನ್ನ ಕುಟುಂಬದಿಂದ ಮುಚ್ಚಿಟ್ಟಿದ್ದ ವಿಷಯವನ್ನು ಹೇಳಲೆಂದು ತನ್ನೂರಿಗೆ ಪಯಣ ಬೆಳೆಸಿದ. ಕೈಯಲ್ಲಿ ಸಿಹಿಯ ಪೊಟ್ಟಣವನ್ನು ಹಿಡಿದುಕೊಂಡು ಮನೆಗೆ ಆಗಮಿಸಿದ ಮಗನನ್ನು ಕಂಡು ವಾಸಂತಿಯ ಕಣ್ತುಂಬಿ ಬಂದಿತ್ತು. ಕೆಲವು ವರ್ಷಗಳ ನಂತರ ಮಗ ಹಿಂದಿರುಗಿದ್ದ. ತನ್ನ ಕನಸು ನನಸಾದ ಬಗೆಯನ್ನು ಅಮ್ಮನಿಗೆ ತಿಳಿಸಿದಾಗ ಅವರ ಬಾಯಲ್ಲಿ ಬಂದ ಮಾತುಗಳು "ದಿಗಂತದೆತ್ತರಕೆ ಸಾಧನೆ ಮಾಡಿದ್ದೀಯ ಮಗನೇ..  ನಿನ್ನ ಸ್ವಂತ ಪರಿಶ್ರಮದಿಂದ ಇಷ್ಟು ಸಾಧನೆಗೆ ಇರುವುದು ನನಗೆ ಬಹಳ ಹೆಮ್ಮೆ." ಎನ್ನುತ್ತಾ ತಲೆ ನೇವರಿಸಿದಾಗ ತೇಜು ಅವರ ಕಣ್ಣುಗಳಿಂದ ಜಿನುಗುತ್ತಿದ್ದ ಆನಂದ ಭಾಷ್ಪವನ್ನು ಒರೆಸಿ ಸಿಹಿ ತಿನ್ನಿಸಿದ. ಪೈಲೆಟ್ ಆಗುವ ಆಸೆಯನ್ನು ಪ್ರೋತ್ಸಾಹಿಸಿದ ರಂಗನಾಥ ಮಾಷ್ಟ್ರ ಮನೆಗೆ ಹೋಗಿ ತಾನು ಪೈಲೆಟ್ ಆದ ಬಗೆಯನ್ನು ವಿವರಿಸಿದಾಗ ಅವರು ಹರ್ಷಗೊಂಡರು. ತಾನು ಕಲಿತ ಶಾಲೆಯ ಸಹೋದರ ಸಹೋದರಿಯರ ಪಾಲಿಗೆ ತೇಜು ಹೀರೋ ಎನಿಸಿಕೊಂಡನು. ಊರಿಗೆ ಊರೇ ಸಂಭ್ರಮಿಸಿತು. ಹಳ್ಳಿ ಹುಡುಗನ ಈ ಸಾಧನೆಗೆ ಎಲ್ಲರೂ ಮೆಚ್ಚಿ ವ್ಯಕ್ತಪಡಿಸಿದರು.

✍️... ಅನಿತಾ ಜಿ.ಕೆ.ಭಟ್.
17-01-2021.

ಪ್ರತಿಲಿಪಿ ಕನ್ನಡ-  ದೈನಿಕಕಥೆ- ವಿಷಯ- ದಿಗಂತದೆತ್ತರ-ಚಿತ್ರ ಕೃಪೆ -ಅಂತರ್ಜಾಲ.


No comments:

Post a Comment