#ಹೊಂಗಿರಣ
ಮುದುಡಿದ ಮನಕೆ ಬೆಚ್ಚನೆ
ಹೊದೆಸಿದ ಅಳುಕಿನ
ಕೌದಿಯ ಸರಿಸುತ||
ಮೊಗದಿ ವಿಶ್ವಾಸದ
ಮಂದಹಾಸವ ಬೀರುತ
ಛಲದಿ ಸಾಗು ಮುನ್ನುಗ್ಗುತ||೧||
ಮೊಟ್ಟ ಮೊದಲಿನ ಸೋಲು
ಜಯಕೆ ಮುನ್ನುಡಿ, ಸರಿಸಮದಿ
ಸ್ವೀಕರಿಸು ಸೋಲುಗೆಲುವನು||
ದಿಟ್ಟ ಹೆಜ್ಜೆಯನಿಡಲು
ಹಿಂದೇಟು ಏಕೆ? ನೋಡಲ್ಲಿ
ರವಿ ಪಥವ ಬದಲಿಸಿಹನು||೨||
ನೂರು ಮಾತಿಗಿಂತ
ಮೌನವೇ ಮನುಜಗೆ
ಬಲವಾದ ಅಸ್ತ್ರವಹುದು||
ಸೋರುತಿಹ ಕಂಬನಿಯ
ಒರೆಸಲು ಪರರ ಕಾಯದಿರು
ನಿನ್ನಲಿ ಶುಭ್ರ ಕರವಸ್ತ್ರವಿಹುದು||೩||
ಕಾರ್ಯತತ್ಪರತೆ ಆತ್ಮವಿಶ್ವಾಸ
ಏಕಾಗ್ರತೆ ದೃಢನಿರ್ಧಾರವೇ
ಮಹಾಮಹಿಮರ ಯಶದ ಗುಟ್ಟು||
ತಡಮಾಡದೆ ಅಡಿಯಿಡು
ಬದುಕಿದು ನಿತ್ಯನೂತನ
ಅಂಜದೆಯೆ ಗುರಿಯ ಮುಟ್ಟು||೪||
ಅಂಧಕಾರವು ಸುತ್ತ
ಆವರಿಸಿದೆಯೆಂದು ಹೆದರಿ
ಆಗದಿರು ನೀನೆಂದು ನಿಶ್ಚಲ||
ತಮವಿದ್ದರೆ ದೀಪ
ಪ್ರಭೆಯ ಬೀರುವುದು
ಸರಿಸುತ ಮುತ್ತಿಹ ಕತ್ತಲ||೫||
ತುಂಬಿ ಬಾಗಿದ ತೆನೆಯು
ರೈತನ ಶ್ರಮದ ಬೆವರಹನಿ
ಸಮೃದ್ಧ ಪ್ರಕೃತಿಯ ಚೆಲುವು||
ನೋವೆಲ್ಲ ಮರೆತು
ನಗುವುದು ಕಲಿತರೆ
ಅನುದಿನವು ನಿನ್ನದೇ ಗೆಲುವು||೬||
ಎಳ್ಳು ಬೆಲ್ಲದ ಸಿಹಿಯು
ಕಷ್ಟಕಾರ್ಪಣ್ಯಗಳ ಕಳೆದು
ಸಂತಸದ ಸಂಕ್ರಮಣವ ಮನಕೀಯಲಿ||
ಹೊಸ ಧಾನ್ಯ ಸವಿ ಹುಗ್ಗಿ
ಹೊಸ ಹುರುಪು ತುಂಬಿ
ಬಾಳಲಿ ಹೊಂಗಿರಣ ಚೇತನವೀಯಲಿ||೭||
✍️... ಅನಿತಾ ಜಿ.ಕೆ.ಭಟ್.
13-01-2021.
#ಸೌಹಾರ್ದ ಬಳಗ #ಸಿಗ್ನೇಚರ್ ಲೈನ್
#ದಿಟ್ಟ ಹೆಜ್ಜೆಯನಿಡಲು ಹಿಂದೇಟು ಏಕೆ?
ನೋಡಲ್ಲಿ ರವಿ ಪಥವ ಬದಲಿಸಿಹನು.
ಚೆನ್ನಾಗಿದೆ... ಅಭಿನಂದನೆಗಳು...
ReplyDeleteಧನ್ಯವಾದಗಳು..🙏💐
Delete