#ಹೆಣ್ಣುಮಗಳು
ಕಾಲ್ಗೆಜ್ಜೆ ಸದ್ದಿನಲಿ
ಮನೆಮನವ ತುಂಬುವಳು
ಗದರಿದರೆ ಹೆದರುತಲಿ
ಕಣ್ತುಂಬಿ ಬಿಕ್ಕುವಳು||೧||
ಹೆಣ್ಣೆಂಬ ಹೀಗಳಿಕೆಗೆ
ಎದುರಾಡದೆ ಸಾಧಿಸುವ ಛಲದವಳು
ಹೆತ್ತವರ ಬವಣೆಗಳ
ಹೇಳದೆಯೆ ಅರಿತು ನಡೆವವಳು||೨|
ಎಲ್ಲರನು ನಗಿಸುತಲಿ
ತಾನೂ ನಗುವವಳು
ನೋವಿನಲೂ ನಲಿವಿನಲೂ
ಸಮನಾಗಿ ಬದುಕುವಳು||೩||
ಹೆತ್ತವರ ಬಳುವಳಿಯ
ರೂಪ,ಲಾವಣ್ಯದಲಿ ಮಿಂಚುವಳು
ರಕುತದಲಿ ಸದ್ಗುಣವನು
ಮಡಿಲ ಕುಡಿಗಳಿಗೆ ಹಂಚುವಳು||೪||
ಮಾತಿನೇಟಿಗೆ ಮೌನದಲಿ
ಮೂಲೆಯಲಿ ಅಳುವವಳು
ಅಂತರಂಗದಿ ಗಟ್ಟಿಯಾಗುತಲಿ
ಕಷ್ಟ ಕಾರ್ಪಣ್ಯಗಳ ಮೆಟ್ಟಿ ನಿಲುವವಳು||೫||
ಮನದ ಮಂಟಪದಲ್ಲಿ
ಸದಾ ಮೊದಲಿಗಳಾಗಿ ನಿಲುವಳು
ಮನೆತನದ ಹೆಸರು, ಗೌರವವ
ಎತ್ತರದಿ ನಿಲಿಸುವಳು||೬||
ಇನಿಯನ ಏಳಿಗೆಯಲಿ
ಬೆಂಬಲವಾಗಿ ಮರೆಯಲಿರುವವಳು
ಸಖ ಬಯಸಿದ ಸುಖವ
ಮೊಗೆಮೊಗೆದು ಉಣಿಸುವಳು||೭||
ಪತಿಮನೆಯಲಿ ಸುಖಶಾಂತಿಯ
ದೀವಿಗೆಯ ಬೆಳಗುವಳು
ತವರಿಗೆ ಸಹೋದರರಿಗೆ
ಯಶವ ಹರಸುವವಳು||೮||
✍️... ಅನಿತಾ ಜಿ.ಕೆ.ಭಟ್.
24-01-2021.
ಚಿತ್ರ ಕೃಪೆ- ಅಂತರ್ಜಾಲ.
No comments:
Post a Comment