Saturday, 18 September 2021

ನಮ್ಮ ಸುತ್ತ

 


#ನಮ್ಮ ಸುತ್ತ

ಕಾ ಕಾ ಕೂಗುವ ಕಾಗೆ
ಕರ್ಕಶ ಧ್ವನಿಯದು ಕಿವಿಗೆ
ಊರೆಲ್ಲ ಹುಡುಕಿ ಕೊಳಕನು ಹೆಕ್ಕಿ
ಸ್ವಚ್ಛವ ಮಾಡುವುದು ಕುಕ್ಕಿ||೧||

ಕೆಂಪು ಕೊಕ್ಕು ಹಸಿರುಮೈಯ
ಗಿಣಿಯು ಹಾರುವ ಪಕ್ಷಿ
ಮಾತನು ಕಲಿತು ನಮ್ಮೊಳು ಬೆರೆತು
ಬಾಳುವ ಪಂಜರ ಪಕ್ಷಿ||೨||

ಚಿಂವ್ ಚಿಂವ್ ಎನುತಿದೆ ಗುಬ್ಬಚ್ಚಿ
ಕುಳಿತಿದೆ ಬೆಚ್ಚನೆ ಗೂಡನು ಕಟ್ಟಿ
ಹಾರಿಹೋಗಿ ಕಾಳನು ಅರಸಿ
ಸಾಕಿದೆ ಮರಿಗಳಿಗುಣಿಸಿ||೩||

ಗದ್ದೆಯ ತುಂಬಾ ಬೆಳ್ಳಕ್ಕಿಹಿಂಡು
ಬೆರಗಾದೆ ಬಿಳುಪನು ಕಂಡು
ಧ್ಯಾನದಿ ನಿಂತು ಕ್ರಿಮಿಗಳ ಹಿಡಿದು
ಹಾರಿದೆ ಬಾನಲಿ ಚಿತ್ರವ ಬರೆದು||೪||

ಬಣ್ಣದ ಚಿಟ್ಟೆ ಊರಲಿ ಸುತ್ತಿ
ಕುಳಿತಿದೆ ಹೂವಿನ ಮೇಲೆ
ತರತರ ರಂಗಿನ ಚಿತ್ರವ
ಬರೆದವರಾರು ಮೈಮೇಲೆ||೫||

✍️... ಅನಿತಾ ಜಿ.ಕೆ.ಭಟ್.
15-07-2021.

ಮಂಗಳಗೌರಿಯೇ ಕಾಯೇ

 


#ಮಂಗಳಗೌರಿಯೇ ಕಾಯೇ

ಶರಣು ಶರಣೆಂಬೆನು ತಾಯೇ
ತರಳೆಯ ಮಂಗಳಗೌರಿಯೇ ಕಾಯೇ
ಹರಳಿನ ಓಲೆಯ ಕೊಡುವೆ
ಕೊರಳಸೌಭಾಗ್ಯವ ಹರಸಮ್ಮಾ
ತಾಯೇ||೧||

ಮಾಗಿದ ಫಲಪುಷ್ಪ ನಿನಗರ್ಪಿಸುತ
ಬಾಗುವೆ ಸುಮತಿಯ ಬೇಡುತಲಿ
ಬಾಗಿನದೊಳು ಮಂಗಳದ್ರವ್ಯಗಳ-
ನಿರಿಸುವೆ
ಭೋಗಚಿಂತನೆಯ ಕಳೆಯಮ್ಮ
ಹರಸುತಲಿ||೨||

ಒಳಿತನು ಸೆಳೆಯುವ ಬಳೆಗಳ ತೊಡಿಸು
ತಿಲಕದಿ ಒಲವಿನ ಚಿಲುಮೆಯ ಬೆರೆಸು
ಮಾಲೆಮಾಂಗಲ್ಯದೊಳು ನಲಿವನು
ಉಣಿಸು
ಮೂಗುತಿ ಗರತಿಯ ಸದ್ಗುಣದಿ
ನಡೆಸು||೩||

ಮುಡಿಗೆ ಸೌಗಂಧದ ಸುಮವನು
ಮುಡಿಸು
ಕಾಲುಂಗುರದಲಿ ಸಹನೆಯ ನಿಲಿಸು
ಮಧುರತೈಲವನೆರೆದು ಅಸುರಿಯ
ಮಣಿಸಿ
ಹೃದಯದಿ ಪ್ರೇಮದ ಹಣತೆಯ
ಬೆಳಗಿಸು||೪||

✍️... ಅನಿತಾ ಜಿ.ಕೆ.ಭಟ್.
25-08-2021.

Saturday, 11 September 2021

ಇಷ್ಟಾರ್ಥ ಸಿದ್ಧಿ




#ಇಷ್ಟಾರ್ಥ ಸಿದ್ಧಿ- ಕಿರುಗಥೆ

        ಪವಿತ್ರ "ಹೂಂ, ತುಂಬಾ ಚೆನ್ನಾಗಿದೆ" ಎಂದು ಹೇಳಿ ನಸುನಕ್ಕಳು. ಮುಖದ ಮೇಲೆ ಮಂದಹಾಸವಿದ್ದರೂ ಅದರ ಹಿಂದಿನ ಮನೋನಿಗ್ರಹ ಅವಳಿಗೇ ಗೊತ್ತು. ಎಲ್ಲದಕ್ಕೂ ಚಿಂತಿಸುವ ಬದಲು ಹಗುರಾಗಿ ತೆಗೆದುಕೊಂಡು ತಾನಾಯಿತು ತನ್ನ ಕೆಲಸವಾಯಿತು ಎಂದು ಕೆಲಸದತ್ತ ಗಮನಕೊಟ್ಟಳು. ರಶ್ಮಿಗಾಗಲಿ
ವಿಭಾಳಿಗಾಗಲಿ ಅವಳ ಮನಸಿನ ಆಳದ ಭಾವಗಳನ್ನು ಎಂದೂ ತಿಳಿಯಗೊಟ್ಟವಳಲ್ಲ ಪವಿತ್ರ. ಸದಾ ಮೌನಿ. ಕೇಳಿದರೆ ಚುಟುಕಾಗಿ
ಉತ್ತರಿಸಿ ಮೌನಕ್ಕೆ ಜಾರುವವಳು ಪವಿತ್ರ.

     ಜೀವನ ನಾವು ಅಂದುಕೊಂಡಷ್ಟು ಸುಲಭವಲ್ಲ ಎಂದು ಅವಳಿಗೆ ಅನುಭವವಾದಾಗ ತಾನೂ ಸಂಸಾರಕ್ಕೆ ಹೆಗಲುಕೊಟ್ಟವಳು ಪವಿತ್ರ. ತನ್ನ ಕಾಲ ಮೇಲೆ ನಿಂತುಕೊಂಡು ಭವಿಷ್ಯದ ಚಿಂತನೆಯಿಂದಲೇ ಅತಿ ಜಾಗರೂಕತೆಯಿಂದ ಹೆಜ್ಜೆಯಿಡುತ್ತಿದ್ದಳು. ಮಾಡಿದ ಪ್ರತಿಯೊಂದು ನಿರ್ಧಾರಕ್ಕೂ ಬದ್ಧಳಾಗಿರುತ್ತಿದ್ದಳು. ತನ್ನ ಚಿಂತನೆಯಂತೆ ಜೀವನವು ಸಾಗದಿದ್ದಾಗ ಬೇಸರಿಸದೆ ಮುಂದೆ ಒಂದು ದಿನ ನಮ್ಮ ಆಸೆಗಳು
ಕೈಗೂಡಬಹುದು ಎಂಬ ವಿಶ್ವಾಸವನ್ನು
ಕಳೆದುಕೊಳ್ಳುತ್ತಿರಲಿಲ್ಲ. ಸಣ್ಣ ಪುಟ್ಟ
ವಿಷಯದಲ್ಲೂ ಬಹಳ ಎಚ್ಚರಿಕೆಯಿಂದ
ಮಿತವ್ಯಯ ಮಾಡುತ್ತಿದ್ದಳು.

       ರಶ್ಮಿ ಪ್ರತಿ ಹಬ್ಬಕ್ಕೂ ತನ್ನ ಸಂಬಳದ
ಹಣದಿಂದ ಬಟ್ಟೆ ಬರೆ ಖರೀದಿಸುತ್ತಿದ್ದಳು. ಸಾಕಷ್ಟು ಆಭರಣಗಳನ್ನು ಕೊಂಡು ಕೊಂಡಿದ್ದಳು. ಪ್ರತಿಯೊಂದನ್ನೂ ಗೆಳತಿಯರಾದ ಪವಿತ್ರ ಮತ್ತು ವಿಭಾಳಿಗೆ ತೋರಿಸಿ ಅವರು ಚೆನ್ನಾಗಿದೆ ಅಂದಾಗ ಅವಳಿಗೊಂದು ಸಮಾಧಾನ. ವಿಭಾಳಿಗೆ ಆಗಾಗ ಗಂಡ ಕೊಡುವ ಸರ್ಪ್ರೈಸ್ ಗಿಫ್ಟ್ ಗಳು ಬಲು ದುಬಾರಿಯವು. ಅವುಗಳನ್ನು ನೋಡಿ ಸ್ವಲ್ಪವೂ ಆಸೆ ಪಡದೆ "ತುಂಬಾ ಚೆನ್ನಾಗಿದೆ ಕಣೇ" ಎಂದು ಹೊಗಳುವುದು ಪವಿತ್ರಳ ಯಾಂತ್ರಿಕ ಜಾಯಮಾನ ಆಗಿಬಿಟ್ಟಿತ್ತು. ಆಗಾಗ ಐಶಾರಾಮಿ ಹೋಟೇಲ್, ಪಿಕ್ ನಿಕ್, ಟೂರ್ ಎಂದು ಹೋಗುತ್ತಾ ಮಜಾ ಮಾಡಿ ಫೊಟೋ
ತೋರಿಸಿದಾಗಲೂ ತನಗೂ ಹೀಗೆ
ಆನಂದದಿಂದ, ನಿಶ್ಚಿಂತೆಯಿಂದಜೀವನ ಸಾಗಿಸಬೇಕೆನ್ನುವ ಆಸೆಯನ್ನು ಕೂಡಲೇ ಚಿವುಟಿ ಬಿಡುತ್ತಿದ್ದಳು.

       ಇವೆಲ್ಲದಕ್ಕೂ ಅವಳ ಮುಂದಿದ್ದ
ದೊಡ್ಡ ಕನಸು ನನಸಾಗದೆ ಉಳಿದಿರುವುದೇ
ಕಾರಣವಾಗಿತ್ತು. ದೀಪಾವಳಿ ಹಬ್ಬಕ್ಕೆ ಗಂಡ
ತನಗೂ ಮಡದಿ ಮಕ್ಕಳಿಗೂ ಜೊತೆಗೆ ಹೊಸ ಬಟ್ಟೆ ಖರೀದಿಸಿದರೆ ಮುಗಿಯಿತು. ವರುಷವಿಡೀ ಅದೇ ಅವಳ ಪಾಲಿಗೆ ಹೊಸಬಟ್ಟೆ. ಪವಿತ್ರಳಿಗೆ ತಾನು ಕೆಲಸ ಮಾಡುವ ಆಫೀಸಿನ ಯಾವುದೇ
ಸಮಾರಂಭ, ಗೆಳತಿಯರ ವಿವಾಹ ಇವೆಲ್ಲದಕ್ಕೂ ಅದೇ ಒದಗುತ್ತಿದ್ದುದು. ಗೆಳತಿಯರು ಒಮ್ಮೊಮ್ಮೆ ನಯವಾಗಿ"ನೀನೂ ಸ್ವಲ್ಪ ನಿನಗೆ ಬೇಕಾದ್ದಕ್ಕೆಲ್ಲ ಖರ್ಚು ಮಾಡು ಕಣೇ.." ಎಂದರೂ "ಹಾಂ.."
ಎನ್ನುತ್ತಾ ತಲೆ ಅಲ್ಲಾಡಿಸಿ ಸುಮ್ಮನಾಗುತ್ತಿದ್ದಳು.

                *****

      ಪವಿತ್ರ  ಒಬ್ಬ ಸರ್ಕಾರಿ ಅಧಿಕಾರಿ ಮಗಳು. ಅಮ್ಮ ಗೃಹಿಣಿಯಾಗಿದ್ದರು. ಚೆನ್ನಾಗಿಯೇ ಓದಿ ಡಿಗ್ರಿ ಪಡೆಯುವಾಗ ಸುನಿಲ್'ನ ಪರಿಚಯವಾಗಿ ಸ್ನೇಹ, ಸಲುಗೆ ಬೆಳೆದು ಪ್ರೇಮಕ್ಕೆ ತಿರುಗಿತ್ತು.
ಮನೆಯವರು ಮೊದಲು ಬೇಸತ್ತರೂ,ತಮ್ಮ ಆಸ್ತಿ ಅಂತಸ್ತಿಗೆ ಸರಿ ಹೊಂದುವುದಿಲ್ಲ ಎಂದರೂ, ಕೊನೆಗೆ ಪ್ರೇಮಕ್ಕೆ ಮಣಿದು ಒಪ್ಪಿ
ವಿವಾಹ ಮಾಡಿಕೊಟ್ಟರು. ಮದುವೆಯ ನಂತರ ತವರಿನ ಸಂಬಂಧ ಹೆಸರಿಗಷ್ಟೇ ಎಂಬಂತೆ ಆಯಿತು. ಅಪರೂಪದಲ್ಲಿ ತವರಿನ ಸಮಾರಂಭಗಳಿಗೆ ಹೋದಾಗ "ನೀವು ನಗರದಲ್ಲಿ ಸ್ವಂತ ಮನೆಯಲ್ಲಿರುವುದಾ? ಅಲ್ಲ ಬಾಡಿಗೆ ಮನೆಯಲ್ಲಾ?" ಎಂದೆಲ್ಲ ಬಂಧುಗಳು ಪ್ರಶ್ನಿಸಿದಾಗ ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದಳು. ಈ ಜಗವೇ ಒಂಥರಾ ಬಾಡಿಗೆ ಮನೆಯಿದ್ದಂತೆ. ನಾವು ಬರುವವರು
ಹೋಗುವವರಲ್ಲವೇ? ಎಂದು ತನ್ನನ್ನು ತಾನೇ ಸಂತೈಸಿಕೊಳ್ಳುತ್ತಿದ್ದಳು.

        ಮಕ್ಕಳ ಲಾಲನೆ ಪಾಲನೆಗೆಂದು ಮನೆಯಲ್ಲಿಯೇ ಉಳಿದ ಪವಿತ್ರಳಿಗೆ
ಜೀವನದ ಕಷ್ಟ ಗೊತ್ತಾಗಲು ಆರಂಭವಾಯಿತು. ನಂತರ ತಾನೂ ಉದ್ಯೋಗಕ್ಕೆ ಸೇರಿಕೊಂಡು, ಒಂದೊಂದೇ ಅಗತ್ಯದ ಸಾಮಾನುಗಳನ್ನು ಮನೆಗೆ ತೆಗೆದುಕೊಂಡಳು. ಇನ್ನು ಅವಳಿಗಿದ್ದ
ಬಹುದೊಡ್ಡ ಕನಸು ನಗರದಲ್ಲೊಂದು ಸ್ವಂತ ಮನೆ ಮಾಡಿಕೊಳ್ಳುವುದು. ಇದು ಹಲವು
ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಮನೆ ಕಟ್ಟದೆ ಅನಗತ್ಯ ಖರ್ಚುಗಳನ್ನು
ಮಾಡಬಾರದು ಎಂದು ಇಬ್ಬರೂ
ನಿರ್ಧರಿಸಿದ್ದರು.  ನೋಡಿದ ಸೈಟುಗಳೂ, ಫ್ಲಾಟುಗಳೂಏನೇನೋ ನೆಪದಲ್ಲಿ ಅವರಿಗೆ ಸರಿ ಹೊಂದುತ್ತಲೇ ಇರಲಿಲ್ಲ. ಆದರೂ ಚೂರೂ ಅನಗತ್ಯ ಖರ್ಚು ಮಾಡದೆ ಕೂಡಿಡುವುದನ್ನು ಮರೆಯಲಿಲ್ಲ. ವರುಷಗಳು ಉರುಳಿದವು.

        ರಶ್ಮಿಯ ವಿವಾಹಕ್ಕೆ ಪವಿತ್ರ ವಿಭಾಳೊಂದಿಗೆ ಆಗಮಿಸಿದ್ದಳು. ವಿವಾಹವು ದೇವಸ್ಥಾನದ ಪಕ್ಕದ ಛತ್ರದಲ್ಲಿ ನಡೆದಿತ್ತು. ವಿಭಾ "ಬಾರೇ, ಸ್ವಲ್ಪ ದೇವಸ್ಥಾನದತ್ತ ಹೋಗಿ ಬರೋಣ" ಎಂದಳು. "ಹೂಂ.. ಹೋಗೋಣ" ಎಂದ ಪವಿತ್ರಳೂ ಜೊತೆಗೆ ಹೆಜ್ಜೆ ಹಾಕಿದಳು. "ಇಲ್ಲಿ ಇಪ್ಪತ್ತೊಂದು ಗರಿಕೆಯ ಚಿಗುರುಗಳನ್ನು ಅರ್ಪಿಸಿ ನಮ್ಮ ಇಷ್ಟಾರ್ಥಗಳನ್ನು ಕೋರಿದರೆ
ದೇವರು ನೆರವೇರಿಸುತ್ತಾನೆ ಎಂಬ ನಂಬಿಕೆಯಿದೆ" ಎಂದಳು ವಿಭಾ. ಅದರಂತೆ ಗರಿಕೆಯನ್ನು ಅರ್ಪಿಸಿ ಪವಿತ್ರ ತನ್ನ ಮನದ ಇಂಗಿತವನ್ನು ಬೇಡಿಕೊಂಡಿದ್ದಳು.

            *********

       "ಪವಿತ್ರ, ಸಂಜೆ ಐದು ಗಂಟೆಗೆ ಆಫೀಸಿನ ಹತ್ತಿರ ಬರುವೆ" ಎಂದ ಅವಳ ಪತಿ ಸುನಿಲ್. ಅವಳು ಆಫೀಸ್ ಅವಧಿ ಮುಗಿದ ಮೇಲೆ ಹೊರಗೆ ಬಂದಾಗ ಸುನಿಲ್ ಕಾಯುತ್ತಾ ನಿಂತಿದ್ದ.
"ಪವಿ.. ಇಲ್ಲಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರದಲ್ಲಿ ಇಂಜಿನಿಯರ್ ಒಬ್ಬರು ಮನೆ ಕಟ್ಟಿ ಮಾರುತ್ತಿದ್ದಾರೆ. ಕಾಮಗಾರಿ ನಡೆಯುತ್ತಿರುವ ಕೆಲವು ಮನೆಗಳು ಇವೆಯಂತೆ. ಬಾ, ಹೋಗಿ ನೋಡಿ ಬರೋಣ" ಎಂದು ಬೈಕ್ ಸ್ಟಾರ್ಟ್ ಮಾಡಿದ.

      ಸುಂದರವಾದ ಲೇ ಔಟ್ ಎದುರು ಬೈಕ್
ನಿಲ್ಲಿಸಿದ. ವಿಶಾಲವಾದ ಜಾಗದಲ್ಲಿ ಸಾಲಾಗಿ
ಮನೆಗಳನ್ನು ನಿರ್ಮಿಸಲಾಗಿತ್ತು. ತಮ್ಮ ಬಜೆಟ್ ಗೆ ಸರಿ ಹೊಂದುವಂತಹ ಮನೆಯನ್ನು ಕೊಳ್ಳುವ ನಿರ್ಧಾರಕ್ಕೆ ಬಂದರು.

        ಇದು ಕನಸೋ ಎಂಬಂತೆ ಕೆಲವೇ
ತಿಂಗಳುಗಳಲ್ಲಿ ಮನೆಯ ಗೃಹಪ್ರವೇಶ ನೆರವೇರಿತು. ಪವಿತ್ರ ಸುನಿಲ್ ಕುಟುಂಬದೊಡನೆ ಹೊಸಮನೆಗೆ ಕಾಲಿಟ್ಟರು. ರಶ್ಮಿ, ವಿಭಾ ಕೂಡಾ ಗೃಹಪ್ರವೇಶಕ್ಕೆ ಆಗಮಿಸಿದ್ದರು.

"ತುಂಬಾ ಚೆನ್ನಾಗಿದೆ ಕಣೇ, ನಿಮ್ಮ ಹೊಸ ಅರಮನೆ" ಎಂದು ಇಬ್ಬರೂ ಹೊಗಳಿದಾಗ
"ಎಲ್ಲಾ ನಿಮ್ಮಿಂದಲೇ ಆಗಿದ್ದು. ರಶ್ಮಿಯ ವಿವಾಹದ ದಿನ ಆ ದೇವಾಲಯದಲ್ಲಿ ಸಿದ್ಧಿಗಣಪನನ್ನು ಬೇಡಿಕೊಂಡು ಕಾರ್ಯಸಿದ್ಧಿಯಾದದ್ದು, ಇಷ್ಟಾರ್ಥಗಳು ಪೂರೈಸುವಂತಾದ್ದು." ಅಂದಾಗ, ಅವಳ ಕಣ್ಣುಗಳು ಆನಂದಬಾಷ್ಪ ಸುರಿಸಿದ್ದರೆ,
ವಿಭಾ ಮತ್ತು ರಶ್ಮಿ ಇಬ್ಬರೂ ಅವಳನ್ನು ಹೆಗಲ ಹಿಂದಿನಿಂದ ಬಳಸಿ "ಎಲ್ಲಿ.. ಚೂರು ನಗು ನೋಡೋಣ" ಎನ್ನುತ್ತಿದ್ದರು.

✍️... ಅನಿತಾ ಜಿ.ಕೆ.ಭಟ್.
08-09-2021.


             ಸಿದ್ಧಿ ವಿನಾಯಕ/ ಸಿದ್ಧಿ ಗಣಪತಿ 🙏🙏



Thursday, 9 September 2021

ಗಣಪ ಬರುವ ಮನೆಗೆ


#ಗಣಪ ಬರುವ ಧರೆಗೆ


ಗಣಪ ಬರುವ ಧರೆಗೆ
ಚೌತಿಯ ಸುದಿನ| ಗಣಪ ಬರುವ ಧರೆಗೆ||ಪ||
ಬೆನಕ ಬರುವ ಮನೆಗೆ
ಗೌರಿಯ ಕಂದ| ಶುಭವ ತರುವ ನಮಗೆ||ಅ.ಪ.||

ಬೊಮ್ಮನ ಬರುವಿಗೆ ಸುಮ್ಮನೆ ಕಾಯದೆ
ಘಮ್ಮನೆ ಕಜ್ಜಾಯ ಅಣಿಗೊಳಿಸಿ
ಮೂಷಿಕವಾಹನ ತೋಷದಿ ನಲಿಯಲು
ಘೋಷವ ಗೈಯುವ ನಾಮಗಳ||೧||

ಸಿದ್ಧಿಬುದ್ಧಿಯ ನೀಡಿ ಬಾಧಕ ಕಳೆವಾತ
ಆದರದಿ ಮೊದಲು ಪೂಜೆಗೊಂಬಾತ
ಓಂಕಾರನಾದಪ್ರಿಯ ಶಂಕರತನಯ
ಸಂಕಷ್ಟ ನೀಗುವ ಗಿರಿಜೆಯ ಕುವರ||೨||

ಸೊಕ್ಕನು ಇಳಿಸಲು ಪಕ್ಕನೆ ವಧಿಸಿ
ಉತ್ತರ ಗಜಶಿರ ಜೋಡಿಸಿದಶಿವ
ನಕ್ಕ ಚಂದಿರಗೆ ತಕ್ಕ ಶಾಪವನು
ಇತ್ತಿಹ ಮೋದಕಪ್ರಿಯ ಪ್ರಣವ||೩||

ಶನಿಯನುಕಂಡು ಗರಿಕೆಯ ರೂಪದಿ
ಅಡಗಿದ ಗೋವಿನ ಉದರದಲಿ
ಗೋಮಯದಲ್ಲಿ ಹೊರಗಡೆ ಬಂದು
ಮಣಿಸಿದ ಶನಿಯನು ಜಾಣ್ಮೆಯಲಿ||೪||

ವೇದವ್ಯಾಸರು ಹೇಳಿದ ಕಥೆಯನು
ಬರೆದಿಹ  ಗಣಪತಿ ಲಿಪಿಕಾರ
ಲೇಖನಿ ಮುನಿಸೆ ದಂತವ ಮುರಿದು
ಮುಂದುವರಿಸಿದ ಛಲಗಾರ||೫||

ಪರಮಪಾವನ ಬಂಧವಿಮೋಚನ
ಅಭಯವನೀವ ಭಕುತರಿಗೆ
ಮುನಿಜನ ನಮಿಸುವ ವೇದಜ್ಞಾನಿ
ಶುಭಮತಿಯ ನೀಡು ನಮಗೆ||೬||

✍️.. ಅನಿತಾ ಜಿ.ಕೆ.ಭಟ್.
09-09-2021.
ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.. 💐

Wednesday, 8 September 2021

ಮಂಗಳೆ ಶ್ರೀಗೌರಿ

 


#ಮಂಗಳೆ ಶ್ರೀಗೌರಿ

ಮಹಾದೇವಪ್ರೀಯಳ ದಿವ್ಯಮೂರುತಿ ಮಹಿಮೆಯಲಿ ಹರಸುವಳು ಎಮ್ಮ ಹರಸತಿ||ಪ||
ಮಂಗಳೆ ಶ್ರೀಗೌರಿ ವರದಾಯಿನಿ
ಅಂಗನೆಯರ ಪಾಲಿಸುವ ಕಾತ್ಯಾಯಿನಿ||ಅ.ಪ.||

ಕಡಗಕಂಕಣ ನಡುವಿನ ಒಡ್ಯಾಣ
ತೊಡಿಸುವೆ ಸಿಂಗರಿಸಿ ಶರ್ವಾಣಿಗೆ
ವಿಧವಿಧಸುಮವ ಹಳದಿಕುಂಕುಮವ
ಪಾದಕೆರಗಿ ಅರ್ಪಿಸುವೆ ಕಲ್ಯಾಣಿಗೆ||೧||

ಮಂಗಳದಾರತಿ ಗಜಗೌರಿಗೆ
ಎತ್ತುವೆವಾರತಿ ಜಯಗೌರಿಗೆ
ನವರತ್ನದಾರತಿ ಮುದ್ದು ಶಿವೆಗೆ
ಬಂಗಾರದಾರತಿ ಸೌಭಾಗ್ಯದಾತೆಗೆ||೨||

ಜಯಮಂಗಳ ಜಯಮಂಗಳ ಪಾರ್ವತಿದೇವಿಗೆ
ಶುಭಮಂಗಳ ಶುಭಮಂಗಳ ಪರಮೇಶ್ವರಿಗೆ
ಜಯಮಂಗಳ ಜಯಮಂಗಳ ಶೌರಿಸಹೋದರಿಗೆ
ಶುಭಮಂಗಳ ಶುಭಮಂಗಳ ಸ್ವರ್ಣಗೌರಿಗೆ||೩||

✍️ ಅನಿತಾ ಜಿ.ಕೆ.ಭಟ್.

ಸರ್ವರಿಗೂ ಗೌರಿ ಹಬ್ಬದ ಶುಭಾಶಯಗಳು.. 💐





Sunday, 5 September 2021

ಪರಮಪೂಜ್ಯ ಗುರುವೇ..

 


#ಪರಮಪೂಜ್ಯ ಗುರುವೇ

ಗುರುವೇ... ಪರಮಪೂಜ್ಯ ಗುರುವೇ..
ಬಾಗಿ ನಮಿಸುವೆ ನಿನ್ನ ಚರಣಗಳಿಗೆ||ಪ||

ದೇವರಂತೆಯೆ ಅನುದಿನವು
ರಕ್ಷಕ ಮಾರ್ಗದರ್ಶಕ
ಎಡವಿದರೆ ಕೈ ಬಿಡದ
ಶಿಕ್ಷಕ ಪ್ರೇರೇಪಕ||೧||

ತಪ್ಪುಗಳ ಒಪ್ಪದಲಿ
ಸರಿಪಡಿಸಿ ಮುನ್ನಡೆಸಿ
ಏರುತಲಿ ಎತ್ತರಕೆ
ಮನಸಾರೆ ಹರಸುವ||೨||

ಅಕ್ಷರದಿ ಅಕ್ಕರೆಯಲಿ
ಅರಿವನು ಮೂಡಿಸಿ
ನಕ್ಕುನಲಿವ ಮಕ್ಕಳಲಿ
ಜ್ಞಾನ ದೀವಿಗೆಯ ಬೆಳಗಿಸುವ||೩||

ದುರ್ಗುಣಗಳ ಮಣಿಸಿ
ಸದ್ಗುಣಗಳ ಬೆಳೆಸಿ
ಸತ್ಪಥವನು ತೋರುತಿಹೆ
ನಿಸ್ಪೃಹ ಸೇವೆಯಲಿ||೪||

ಶುದ್ಧಮನದಿ ಬುದ್ಧಿಪೇಳುತ
ವಿದ್ಯೆಧಾರೆಯೆರೆದ ಗುರುವರ್ಯ
ದಕ್ಷನಡೆಯಲಿ ಆದರ್ಶವೆನಿಪ
ಗುರುಸ್ಮರಣೆ ಸತ್ಕಾರ್ಯ||೫||

✍️... ಅನಿತಾ ಜಿ.ಕೆ.ಭಟ್.
05-09-2021.

Friday, 3 September 2021

ಕೃಷ್ಣ ಕೃಪೆ

 


#ಕೃಷ್ಣ ಕೃಪೆ- ಕಿರುಗಥೆ

        ಸಹನಾ ಅಡುಗೆ ಮಾಡಿಟ್ಟು ಗಂಡನ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಳು. "ಮೀಟಿಂಗ್ ಇದೆ. ಸ್ವಲ್ಪ ತಡವಾಗುತ್ತದೆ" ಎಂದಿದ್ದ ಗಿರಿಧರ. ಒಂಭತ್ತು ಗಂಟೆಯಾದರೂ ಕಾಣದೇ ಇದ್ದಾಗ ಕಾದು ಕುಳಿತ ಸಹನಾಳ ಕಣ್ಣಿಗೆ ನಿದ್ದೆಯು ಸುಳಿಯತೊಡಗಿತು. ಆಗಲೇ ಫೋನ್ ರಿಂಗಣಿಸಿತು. ಗಿರಿ 'ಬರೋದು ಇನ್ನೂ ಲೇಟಾಗುತ್ತೆ' ಅನ್ನಲು ಕರೆ ಮಾಡಿರಬೇಕು ಎಂದುಕೊಳ್ಳುತ್ತಾ ನಿದ್ದೆಯ‌ ಮಂಪರಿನಲ್ಲೇ ಫೋನೆತ್ತಿ "ಹಲೋ.." ಎಂದಾಗ "ಸಹನಾ, ಹೇಗಿದ್ದೀಯಮ್ಮಾ, ಆರಾಮವಾಗಿದ್ದೀರಿ ತಾನೇ? ಗಿರಿ ಏನು ಮಾಡುತ್ತಿದ್ದಾನೆ? ಊಟ ಆಯ್ತಾ? ಅಡುಗೆ ಏನು ಮಾಡಿದ್ದೀಯಮ್ಮಾ?" ಒಂದೇ ಸಮನೇ ಈಶ್ವರಿಯಮ್ಮ ಮಾತನಾಡುತ್ತಲೇ ಸಾಗಿದ್ದರು. ಕಣ್ಣುಜ್ಜಿಕೊಂಡು ಆಕಳಿಸಿಕೊಂಡು, "ಹೂಂ, ಆರಾಮವಾಗಿದ್ದೇವೆ." ಎನ್ನುತ್ತಾ ಅತ್ತೆಯೊಡನೆ ಮಾತನಾಡಿದಳು ಸಹನಾ. ಫೋನಿಡುವ ಮುನ್ನ ನಾಲ್ಕಾರು ಬಾರಿ 'ಆರೋಗ್ಯ ಹುಷಾರಾಗಿ ನೋಡಿಕೋ ಕಣಮ್ಮಾ' ಎನ್ನುವ ಮಾತಲ್ಲೇ ಅವರ ಕಾಳಜಿ ಎದ್ದುಕಾಣುತ್ತಿತ್ತು.

        ಗಿರಿ ಮನೆಗೆ ಬಂದಾಗ ರಾತ್ರಿ ಗಂಟೆ ಹತ್ತಾಗಿತ್ತು. ಊಟಮಾಡಿದವನು "ಸಹನಾ, ಇಷ್ಟು ಲೇಟಾಗಿ ಉಂಡರೆ ನನಗೆ ಕರಗುವುದಿಲ್ಲ. ಸ್ವಲ್ಪ ಇಲ್ಲೇ ಕೆಳಗೆ ವಾಕಿಂಗ್ ಮಾಡಿ ಬರ್ತೀನಿ" ಅಂದ. ತುಂಬಾ ದಿನದಿಂದ ಮನೆಯೊಳಗೇ ಇದ್ದ ಸಹನಾಳಿಗೂ ಜೊತೆಗೆ ಹೋಗಬೇಕೆನಿಸಿತು. "ನಾನೂ ಬರಲಾ" ಎಂದು ಆಸೆಯಿಂದ ಕಣ್ಣಲ್ಲಿ ಕಣ್ಣಿಟ್ಟು ಕೇಳಿದವಳನ್ನು ಬೇಡವೆನ್ನುವ ಮನಸ್ಸು ಗಿರಿಗೂ ಇರಲಿಲ್ಲ. "ಹೃದಯದರಸಿಯ ಜೊತೆಗೆ ನಡೆದರೆ ಎಷ್ಟು ನಡೆದರೂ ಆಯಾಸವಾಗುವುದಿಲ್ಲ. ಹೂಂ ಹೋಗೋಣ ಬಾ" ಎಂದ.

     ಇಬ್ಬರೂ ಅರ್ಧ ಗಂಟೆ ವಾಕಿಂಗ್ ಮಾಡಿ ಬಂದರು. ಸುಸ್ತಾಗಿ ಮಲಗಿದವರಿಗೆ ಸುಖವಾಗಿ ನಿದ್ದೆ ಬಂದಿತ್ತು. ರಾತ್ರಿ ಸಹನಾಳಿಗೆ ಎಚ್ಚರವಾದಾಗ  ಒದ್ದೆಯಾದ ಅನುಭವ. ಏನಾಗಿದೆ ಎಂದು ನೋಡಿದವಳು ಹೌಹಾರಿದ್ದಳು. "ರೀ.. ರೀ.. " ಎಂದು ಮಲಗಿದ್ದ ಗಿರಿಯನ್ನು ಎಬ್ಬಿಸಿದಳು.

     ಅವಸರವಸರವಾಗಿ ಸಹನಾಳನ್ನು ಸಮೀಪದಲ್ಲಿದ್ದ ನರ್ಸಿಂಗ್ ಹೋಂಗೆ ದಾಖಲಿಸಿದ ಗಿರಿ. ತಪಾಸಣೆ ಮಾಡಿದ ಶುಶ್ರೂಷಕಿ "ಏನಮ್ಮಾ, ಜಾಗರೂಕತೆಯಿಂದಿರಿ, ರೆಸ್ಟ್ ಮಾಡಿ ಎಂದು ಡಾಕ್ಟ್ರಮ್ಮಾ ಹೇಳಿದ್ದು ಮರೆತುಬಿಟ್ಟಿರಾ? " ಎಂದು  ಸ್ವರವೇರಿಸಿದಾಗ ಸಹನಾಳಿಗೆ ಅಳುವೇ ಬಂದಿತ್ತು. "ಬೆಡ್ ರೆಸ್ಟ್ ಮಾಡಿದ್ದಳು ಇತ್ತೀಚಿನವರೆಗೆ. ಕಳೆದ ಬಾರಿ ಚೆಕಪ್ ಗೆ ಬಂದಿದ್ದಾಗ ಇನ್ನು ಸ್ವಲ್ಪ ಕೆಲಸ ಮಾಡಬಹುದು ಅಡ್ಡಾಡಬಹುದು ಎಂದಿದ್ದಾರೆ ಡಾಕ್ಟರ್ ಮೇಡಂ." ಎಂದ ಗಿರಿ ಪೇಲವ ಮುಖದಿಂದ.

"ಹೂಂ, ಈಗ ಸ್ವಲ್ಪವೂ ಅಲ್ಲಾಡಿಸದೆ ಮಲಗಿಕೊಳ್ಳಿ. ಇನ್ನು ಅರ್ಧ ಗಂಟೆಯಲ್ಲಿ ಡಾಕ್ಟ್ರು ಬರುತ್ತಾರೆ" ಎಂದು ಸಹನಾಳನ್ನು ಬೆಡ್ ಮೇಲೆ ಮಲಗಿಸಿ ಮೊಣಕಾಲಿನಡಿಗೆ ಎರಡು ತಲೆದಿಂಬಿಟ್ಟರು ಶುಶ್ರೂಷಕಿ. ಮಲಗಿದ್ದ ಸಹನಾಗೆ ಆರೋಗ್ಯ ಜೋಪಾನ ಎಂದು ಪುಟಾಣಿ ಮಕ್ಕಳಿಗೆ ಹೇಳುವಂತೆ ನಾಲ್ಕಾರು ಬಾರಿ ಹೇಳಿದ ಅತ್ತೆಯ ಧ್ವನಿಯೇ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು..

      ಹೊರಗೆ ಕುಳಿತಿದ್ದ ಗಿರಿ ಕೈ ಕೈ ಹೊಸಕಿಕೊಳ್ಳುತ್ತಿದ್ದ. ನಾನೇ ತಪ್ಪು ಮಾಡಿದ್ದು. ವಾಕಿಂಗ್ ಗೆ ಬರಲಾ ಎಂದಾಗ ಬೇಡವೇ ಬೇಡ ಎನ್ನಬೇಕಿತ್ತು. ಛೇ..! ಏನು ಅನಾಹುತ ಆಯ್ತು. ಏನಾದ್ರೂ ಹೆಚ್ಚು ಕಮ್ಮಿ ಆದರೆ, ಅದನ್ನು ಸಹಿಸುವ ಮಾನಸಿಕ ದೃಢತೆ ನಮಗಿಲ್ಲ.

     ವೈದ್ಯೆ ಆಗಮಿಸಿ ಚೆಕಪ್ ಮಾಡಿ, ಸ್ಕ್ಯಾನಿಂಗ್ ಮಾಡಿದರು. "ನೋಡಮ್ಮಾ, ಇಷ್ಟು ಕೇರ್ ಲೆಸ್ ಮಾಡಬಾರದು ಯಾವತ್ತೂ. ಟ್ರೀಟ್ಮೆಂಟ್ ಕೊಡ್ತೀನಿ, ಭ್ರೂಣ ಉಳಿಯಬಹುದು ಎಂದು ಭರವಸೆ ನಾನು ಕೊಡಲ್ಲ. ಎಲ್ಲ ಆ ದೇವರ ಕೈಯಲ್ಲಿದೆ.'' ಎಂದು ಹೇಳಿ ಹೊರಗೆ ಬಂದವರು, ಗಿರಿ ಮಾತನಾಡಲು ಬಂದರೂ ಮಾತನಾಡದೆ ಬಿರಬಿರನೇ ನಡೆದೇಬಿಟ್ಟರು.

     ವಿಷಯ ತಿಳಿದ ಈಶ್ವರಿಯಮ್ಮ ಸೊಸೆಯ ಆರೈಕೆಗೆ ಖುದ್ದಾಗಿ ತಾವೇ ಆಗಮಿಸಿದರು. ಆಕೆಯ ಆಹಾರ ಔಷಧೋಪಚಾರ ಎಲ್ಲವನ್ನೂ ತಾವೇ ಮುಂದೆ ನಿಂತು ನಿಭಾಯಿಸಿದರು. "ನೋಡು ಗಿರಿ ಇನ್ನು ಸಹನಾಳ ಹೆರಿಗೆಯವರೆಗೆ ಅವಳ ಆರೈಕೆಯ ಹೊಣೆ ನನ್ನದು. ನಿಮ್ಮನ್ನಿಬ್ಬರನ್ನೇ ನಗರದಲ್ಲಿ ಬಿಟ್ಟು ನಾನು ಹಳ್ಳಿಗೆ ಹೋಗಲಾರೆ. ಮುದ್ದು ಮುಕುಂದನೊಂದಿಗೇ ನಾವು ಮನೆಗೆ ತೆರಳೋದು" ಅಂದಾಗ ಸಹನಾ ಹಾಗೂ ಗಿರಿ ಇಬ್ಬರ ಕಣ್ಣಂಚೂ ಒದ್ದೆಯಾಗಿತ್ತು. ಆಸ್ಪತ್ರೆಯಲ್ಲಿ ಸುಮ್ಮನೆ ಕುಳಿತುಕೊಂಡು ಅವರು ಗುನುಗುತ್ತಿದ್ದುದು ಸಹನಾಳ ಕಿವಿಗೂ ಬಿದ್ದಿತ್ತು.

ಬಾರೋ ಗೋಪಾಲ ನಮ್ಮನೆಗೆ
ದೂರಮಾಡೆಮ್ಮನು ಕಾಡುವ ನೋವನು||ಪ||

ತುಂಬಿದ ಮಜ್ಜಿಗೆ ಗಡಿಗೆಯ ಮೇಲೆ
ಬೆಣ್ಣೆ ಉಂಡೆಗಳು ತೇಲುತಲಿಹವು
ಸಿಕ್ಕದಲಿಡೆನು ಸಿಕ್ಕುವಂತಿಡುವೆ
ಪಕ್ಕನೇ ಬಾರೋ ಬಾಲಗೋಪಾಲ||೧||

ಅಂಗಳದಲ್ಲಿ ನವಿಲಿನ ಹಿಂಡು
ಚಂದದಿ ನಾಟ್ಯವನಾಡುತಲಿಹವು
ಗರಿಯನು ಹೆಕ್ಕಿ ಮುಡಿಯಲಿರಿಸುವೆ
ಗಿರಿಧಾರಿ ಬಾರೋ ನಂದಗೋಪಾಲ||೨||

ಆಟದ ಗಾಡಿಲಿ ನಿನ್ನನು ಕೂಡಿಸಿ
ದೂಡುವೆ ನಾನೇ ಜಗದೀಶನಾ
ಗೆಳೆಯರ ಕೂಟದಿ ತಂಟೆಯಗೈದರೆ
ಗಂಟಿಕ್ಕೆನು ಮೊಗ ಯದುಬಾಲ||೩||

ತೋಟದ ಅಂಚಿನ ಬಿದಿರಿನ ಗಂಟಲಿ
ತೂತೆಂಟನು ಕೊರೆವೆ ಮುರಲೀಲೋಲ
ಕೊಳಲನೂದುತ ಕಳವಳ ಕಳೆಯಲು
ಧರೆಯೊಳು ಬಾರೋ ರಾಧಾಲೋಲ||೪||

     ಹದಿನೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ರಕ್ತಸ್ರಾವ ನಿಂತು ಆರೋಗ್ಯ ಹಿಡಿತಕ್ಕೆ ಬಂತು. ಡಾಕ್ಟ್ರಮ್ಮ ಈಶ್ವರಿಯಮ್ಮನನ್ನು ಕರೆದು " ಬಹಳ ಜಾಗರೂಕತೆಯಿಂದ ನೋಡಿಕೊಳ್ಳಿ. ಇನ್ನು ಪುನಃ ಹೀಗಾಗದಂತೆ ಎಚ್ಚರಿಕೆವಹಿಸಿ." ಎಂದಾಗ "ಸರಿ ಡಾಕ್ಟ್ರೇ, ನಾನೇ ನಿಲ್ಲುತ್ತೇನೆ ಇವರೊಂದಿಗೆ" ಎಂದಾಗ ವೈದ್ಯೆಯ ಮುಖದಲ್ಲಿ ಮಂದಹಾಸ ಮೂಡಿತು.

       ಗಿರಿ ಕಾಳುಗಳನ್ನು ಮೊಳಕೆ ಬರಿಸಿ ಕೊಡುತ್ತಿದ್ದ. ‌ಮಡದಿ ಆಸೆಪಡುತ್ತಿದ್ದ ಹಣ್ಣುಹಂಪಲು ತರುತ್ತಿದ್ದ. ಆಕೆ ಇಷ್ಟಪಟ್ಟ ರುಚಿಯ ಪಾಕಗಳನ್ನು ಈಶ್ವರಿಯಮ್ಮ ಕೈಯಾರೆ ಮಾಡಿ ಬಡಿಸುತ್ತಿದ್ದರು. ಮನೆಯ ಕೆಲಸಕಾರ್ಯಗಳಲ್ಲಿ ಅಮ್ಮನಿಗೆ ನೆರವಾಗುತ್ತಿದ್ದವನು ಗಿರಿಯೇ. ಸಹನಾಳಿಗೆ ಕುಳಿತೂ ಮಲಗಿ ಸಾಕಾಗಿ ಹೋಗಿದ್ದರೂ ತಾಳ್ಮೆಯಿಂದ ಮಡಿಲಕಂದನಿಗಾಗಿ ಸಹಿಸಿಕೊಳ್ಳುತ್ತಿದ್ದಳು. ನವಮಾಸ ಅತ್ತೆಯ ಸುಪರ್ದಿಯಲ್ಲಿ ಆರೈಕೆ ಮಾಡಿಸಿಕೊಂಡ ಸಹನಾ ಮೈಕೈ ತುಂಬಿಕೊಂಡಿದ್ದಳು. ಮುದ್ದು ಮಗುವಿನ ಆಗಮನಕ್ಕೆ ಕಾತರಿಸುತ್ತಿದ್ದಳು..

    ಅಂದು ಅವಳಿಗೆ ಮುನ್ನುಗ್ಗಿ ಬರುತ್ತಿದ್ದ ನೋವಿನಲ್ಲಿ "ಕೆಲವೇ ಗಂಟೆಗಳಷ್ಟೇ ತಾಳಿಕೋ. ಆ ಶಕ್ತಿ ನಿನಗಿದೆ ಎಂದು ಪ್ರೀತಿಯಿಂದ ಮೈದಡವಿದರು" ಅತ್ತೆ ಈಶ್ವರಿಯಮ್ಮ. "ನೀನೇ ಎದೆಗುಂದಿದರೆ ನನ್ನ ಕೈಯಲ್ಲಿ ನೋಡಕಾಗಲ್ಲ ಕಣೇ" ಎಂದು ಕಣ್ತುಂಬಿಸಿಕೊಂಡ ಗಿರಿ.

       ಮುದ್ದಾದ ಕೆಂಪೇರಿದಂತಿದ್ದ, ಅಂಗೈಯಿಂದ ಚೂರೇಚೂರು ಹೊರಮೀರುತ್ತಿದ್ದ, ಬಿಳಿಬಟ್ಟೆಯಲ್ಲಿ ಸುತ್ತಿದ್ದ ಆ ಮುದ್ದುಕಂದನನ್ನು ಸ್ಪರ್ಶಿಸಿದಾಗ ಸ್ವರ್ಗವೇ ಧರೆಗಿಳಿದಂತೆ ಭಾಸವಾಯಿತು ಸಹನಾಳಿಗೆ. ಗಿರಿ ಮುದ್ದು ಕಂದನನ್ನು ಅಪ್ಪಿ ಹಿಡಿದು ಬಾಯಲ್ಲಿ ಸಣ್ಣಕ್ಕೇನೋ ಆ.. ಆ.. ಲಾಲಿ.. ಲಾಲಿ.. ಎನ್ನುತ್ತಿದ್ದರೆ ಪುಟಾಣಿ ನಿದ್ದೆಗೆ ಜಾರುವುದು ಸಹನಾಳಿಗೆ ಸೋಜಿಗ ತಂದಿತ್ತು.

        ಬಾಣಂತನ ಮುಗಿಸಿ ಪತಿ ಮನೆಗೆ ಮಗುವಿನೊಡನೆ ಕಾಲಿಟ್ಟಳು ಸಹನಾ. ಮಗುವಿನ ಸ್ನಾನ ಆರೈಕೆ ಎಲ್ಲದರಲ್ಲೂ ಈಶ್ವರಿಯಮ್ಮನದೇ ಮೇಲುಸ್ತುವಾರಿ. ಮುದ್ದುಕಂದನಿಗೆ ಅಜ್ಜಿಯೇ ಜೋಗುಳ ಹಾಡಿ ತೊಟ್ಟಿಲು ತೂಗಿ ಮಲಗಿಸುತ್ತಿದ್ದರು. ಅಜ್ಜಿಯ ಲಾಲಿ ಪದ ಮುಗಿಯುವುದರೊಳಗೆ ಮಗುವನ್ನು ನಿದಿರಾದೇವಿ ಆವರಿಸುತ್ತಿದ್ದಳು.

ಮಲಗು ಎಮ್ಮನೆಯ ಬೆಳಕೇ
ಸುಖನಿದಿರೆಗೈ ನೀನು ಲಾಲಿಯ ಪದಕೆ||ಪ||

ಘಮ್ಮೆನುವ ಘೃತನಿನ್ನ ಮೈಗೆಲ್ಲ ಪೂಸಿ
ಕೆನೆಹಾಲಲಿ ನಿನಗೆ ಅಭ್ಯಂಗಮಾಡಿಸಿ
ಕೊಳದ ತಿಳಿನೀರಲಿ ನೀರಾಟವನಾಡಿಸಿ
ಎತ್ತಿ ಕರೆತಂದಿಹೆ ಮುದ್ದು ಗೋಪಾಲನಾ||೧||

ಗಂಧಸುಗಂಧವ ತೇಯ್ದುಲೇಪಿಸಿ
ನವನೀತವನುಣಿಸಿ ಉದರತಂಪಾಗಿಸಿ
ತೊಟ್ಟಿಲಸಿಂಗರಿಸಿ ತೂಗುವೆ ದೇವನಾ
ದೀನರಿಗೆ ದಾನಿಯಾಗಿಹ ಪರಮಾತ್ಮನಾ||೨||

ತಾವರೆಯ ಚೆಲುವಿನ ಬಾಲಕೃಷ್ಣನಾ
ಕಣ್ಣಲ್ಲಿ ಹಾಲ್ಬೆಳದಿಂಗಳ ಚೆಲ್ಲುವನಾ
ಧರಣಿಯ ದುರುಳರ ತರಿದವನಾ
ತೂಗುವೆ ಸಜ್ಜನರ ಪೊರೆವವನಾ||೩||

      ಅಜ್ಜಿಯ ಲಾಲಿ ಹಾಡು ಮಗುವಿಗೆ ಹಿತವಾಗುತ್ತಿತ್ತು. ಎದ್ದಾಗ ಸಹನಾಳೇ ಬಳಿಯಿರಬೇಕಾಗಿತ್ತು. ಸಹನಾ ಮಡಿಲ ಮಗುವಿನ ಪಾಲನೆ ಪೋಷಣೆಯಲ್ಲೇ ವ್ಯಸ್ತಳಾದಳು.

     ಒಂದು ದಿನ ಬೆಳಗ್ಗೆ "ಗಿರಿ, ದೇವಸ್ಥಾನಕ್ಕೆ ಹೋಗುವುದಿದೆ" ಎಂದರು ಈಶ್ವರಿಯಮ್ಮ. "ಸರಿ ಅಮ್ಮಾ ಹೋಗೋಣಂತೆ" ಎಂದ ಗಿರಿ ಅಮ್ಮನ ಆಣತಿಯಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿದ. ಎಲ್ಲರೂ ಜೊತೆಗೂಡಿ ದೇವಾಲಯಕ್ಕೆ ತೆರಳಿದರು.
ವಿಶಾಲವಾದ ದೇವಾಲಯದ ಎದುರಿನ ಬಯಲಲ್ಲಿ ಕಾರಿನಿಂದಿಳಿದಳು ಸಹನಾ ಮುದ್ದುಕಂದನೊಡನೆ. ಹೊಸ ದೇವಾಲಯ. ಅವಳಿದುವರೆಗೆ ಅಲ್ಲಿಗೆ ಬಂದೂ ಇಲ್ಲ. ಹೆಸರೂ ಕೇಳಿರಲಿಲ್ಲ. ದೇವಾಲಯದ ಪಕ್ಕದಲ್ಲಿ ಸುತ್ತಲೂ ಮೆಟ್ಟಿಲುಗಳಿದ್ದ ಕೆರೆಯಿತ್ತು. ಕಾಲು ತೊಳೆದುಕೊಂಡು ಒಳಬಂದಾಗ ಸುತ್ತಲೂ ಗೋವುಗಳು ಸಂಚರಿಸುತ್ತಿದ್ದವು. ನವಿಲುಗಳು ನಿರ್ಭೀತಿಯಿಂದ ಸಂಚರಿಸುತ್ತಿದ್ದವು. ಗರ್ಭಗುಡಿಯ ಎದುರು ನಿಂತ ಸಹನಾಳಿಗೆ ಕಂಡದ್ದು ಕಪ್ಪು ಶಿಲೆಯಲ್ಲಿ ಕೆತ್ತಿದ ಗೋಪಾಲಕೃಷ್ಣನ ದಿವ್ಯಮೂರುತಿ. ಗಿರಿ "ಅಮ್ಮಾ.. ಈಗ ಸ್ವಲ್ಪ ಹೊತ್ತಿನಲ್ಲಿ ದೇವರ ಪೂಜೆಯಾಗಿ ನೈವೇದ್ಯ ಪ್ರಸಾದವನ್ನು ಕೊಡುತ್ತಾರೆ. ದೇವರ ಮುಂದೆಯೇ ಬಾಳೆಲೆಯ ಮೇಲೆ ಮಗುವಿಗೆ ಉಣಿಸೋಣ" ಎಂದಾಗ ಸಹನಾಳಿಗೆ ಅಚ್ಚರಿ ಆನಂದ ಎರಡೂ ಒಟ್ಟೊಟ್ಟಿಗೇ ಆಗಿತ್ತು. ಅತ್ತೆ ಹೇಳುತ್ತಿದ್ದ ಬಾರೋ ಗೋಪಾಲ ನಮ್ಮನೆಗೆ, ತೂಗುವೆ ಸಜ್ಜನರ ಪೊರೆವವನಾ ಎಂಬ ಹಾಡುಗಳ ಹಿಂದಿನ ಅವರ ವಿನೀತವಾದ ದೈವೀಭಾವ ಅರ್ಥವಾಗಿತ್ತು. ಸಂಕಟದಿಂದ ಪಾರು ಮಾಡಿದ ಗೋಪಾಲಕೃಷ್ಣನ ಪರಮಸುಂದರ ರೂಪದೆದುರು ಕರಜೋಡಿಸಿ ಶಿರಬಾಗಿದ್ದಳು. ನೈವೇದ್ಯವನುಣಿಸಿ ಮಡಿಲ ಕಂದನ "ನಂದನ.." ಎಂದು ಕರೆದಿದ್ದಳು.

✍️ ಅನಿತಾ ಜಿ.ಕೆ.ಭಟ್.
30-08-2021.
#ಸಾಂದರ್ಭಿಕ ಚಿತ್ರ: ಅಂತರ್ಜಾಲದ ಕೃಪೆ.
#ಕಾಲ್ಪನಿಕ ಕಥೆ.
#ಇಲ್ಲಿ ಬಳಸಿದ ಎರಡೂ ಹಾಡುಗಳು ಕಥಾ ಸನ್ನಿವೇಶಕ್ಕೆಂದು ನಾನೇ ರಚಿಸಿರುವುದು.