Friday, 3 September 2021

ಕೃಷ್ಣ ಕೃಪೆ

 


#ಕೃಷ್ಣ ಕೃಪೆ- ಕಿರುಗಥೆ

        ಸಹನಾ ಅಡುಗೆ ಮಾಡಿಟ್ಟು ಗಂಡನ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಳು. "ಮೀಟಿಂಗ್ ಇದೆ. ಸ್ವಲ್ಪ ತಡವಾಗುತ್ತದೆ" ಎಂದಿದ್ದ ಗಿರಿಧರ. ಒಂಭತ್ತು ಗಂಟೆಯಾದರೂ ಕಾಣದೇ ಇದ್ದಾಗ ಕಾದು ಕುಳಿತ ಸಹನಾಳ ಕಣ್ಣಿಗೆ ನಿದ್ದೆಯು ಸುಳಿಯತೊಡಗಿತು. ಆಗಲೇ ಫೋನ್ ರಿಂಗಣಿಸಿತು. ಗಿರಿ 'ಬರೋದು ಇನ್ನೂ ಲೇಟಾಗುತ್ತೆ' ಅನ್ನಲು ಕರೆ ಮಾಡಿರಬೇಕು ಎಂದುಕೊಳ್ಳುತ್ತಾ ನಿದ್ದೆಯ‌ ಮಂಪರಿನಲ್ಲೇ ಫೋನೆತ್ತಿ "ಹಲೋ.." ಎಂದಾಗ "ಸಹನಾ, ಹೇಗಿದ್ದೀಯಮ್ಮಾ, ಆರಾಮವಾಗಿದ್ದೀರಿ ತಾನೇ? ಗಿರಿ ಏನು ಮಾಡುತ್ತಿದ್ದಾನೆ? ಊಟ ಆಯ್ತಾ? ಅಡುಗೆ ಏನು ಮಾಡಿದ್ದೀಯಮ್ಮಾ?" ಒಂದೇ ಸಮನೇ ಈಶ್ವರಿಯಮ್ಮ ಮಾತನಾಡುತ್ತಲೇ ಸಾಗಿದ್ದರು. ಕಣ್ಣುಜ್ಜಿಕೊಂಡು ಆಕಳಿಸಿಕೊಂಡು, "ಹೂಂ, ಆರಾಮವಾಗಿದ್ದೇವೆ." ಎನ್ನುತ್ತಾ ಅತ್ತೆಯೊಡನೆ ಮಾತನಾಡಿದಳು ಸಹನಾ. ಫೋನಿಡುವ ಮುನ್ನ ನಾಲ್ಕಾರು ಬಾರಿ 'ಆರೋಗ್ಯ ಹುಷಾರಾಗಿ ನೋಡಿಕೋ ಕಣಮ್ಮಾ' ಎನ್ನುವ ಮಾತಲ್ಲೇ ಅವರ ಕಾಳಜಿ ಎದ್ದುಕಾಣುತ್ತಿತ್ತು.

        ಗಿರಿ ಮನೆಗೆ ಬಂದಾಗ ರಾತ್ರಿ ಗಂಟೆ ಹತ್ತಾಗಿತ್ತು. ಊಟಮಾಡಿದವನು "ಸಹನಾ, ಇಷ್ಟು ಲೇಟಾಗಿ ಉಂಡರೆ ನನಗೆ ಕರಗುವುದಿಲ್ಲ. ಸ್ವಲ್ಪ ಇಲ್ಲೇ ಕೆಳಗೆ ವಾಕಿಂಗ್ ಮಾಡಿ ಬರ್ತೀನಿ" ಅಂದ. ತುಂಬಾ ದಿನದಿಂದ ಮನೆಯೊಳಗೇ ಇದ್ದ ಸಹನಾಳಿಗೂ ಜೊತೆಗೆ ಹೋಗಬೇಕೆನಿಸಿತು. "ನಾನೂ ಬರಲಾ" ಎಂದು ಆಸೆಯಿಂದ ಕಣ್ಣಲ್ಲಿ ಕಣ್ಣಿಟ್ಟು ಕೇಳಿದವಳನ್ನು ಬೇಡವೆನ್ನುವ ಮನಸ್ಸು ಗಿರಿಗೂ ಇರಲಿಲ್ಲ. "ಹೃದಯದರಸಿಯ ಜೊತೆಗೆ ನಡೆದರೆ ಎಷ್ಟು ನಡೆದರೂ ಆಯಾಸವಾಗುವುದಿಲ್ಲ. ಹೂಂ ಹೋಗೋಣ ಬಾ" ಎಂದ.

     ಇಬ್ಬರೂ ಅರ್ಧ ಗಂಟೆ ವಾಕಿಂಗ್ ಮಾಡಿ ಬಂದರು. ಸುಸ್ತಾಗಿ ಮಲಗಿದವರಿಗೆ ಸುಖವಾಗಿ ನಿದ್ದೆ ಬಂದಿತ್ತು. ರಾತ್ರಿ ಸಹನಾಳಿಗೆ ಎಚ್ಚರವಾದಾಗ  ಒದ್ದೆಯಾದ ಅನುಭವ. ಏನಾಗಿದೆ ಎಂದು ನೋಡಿದವಳು ಹೌಹಾರಿದ್ದಳು. "ರೀ.. ರೀ.. " ಎಂದು ಮಲಗಿದ್ದ ಗಿರಿಯನ್ನು ಎಬ್ಬಿಸಿದಳು.

     ಅವಸರವಸರವಾಗಿ ಸಹನಾಳನ್ನು ಸಮೀಪದಲ್ಲಿದ್ದ ನರ್ಸಿಂಗ್ ಹೋಂಗೆ ದಾಖಲಿಸಿದ ಗಿರಿ. ತಪಾಸಣೆ ಮಾಡಿದ ಶುಶ್ರೂಷಕಿ "ಏನಮ್ಮಾ, ಜಾಗರೂಕತೆಯಿಂದಿರಿ, ರೆಸ್ಟ್ ಮಾಡಿ ಎಂದು ಡಾಕ್ಟ್ರಮ್ಮಾ ಹೇಳಿದ್ದು ಮರೆತುಬಿಟ್ಟಿರಾ? " ಎಂದು  ಸ್ವರವೇರಿಸಿದಾಗ ಸಹನಾಳಿಗೆ ಅಳುವೇ ಬಂದಿತ್ತು. "ಬೆಡ್ ರೆಸ್ಟ್ ಮಾಡಿದ್ದಳು ಇತ್ತೀಚಿನವರೆಗೆ. ಕಳೆದ ಬಾರಿ ಚೆಕಪ್ ಗೆ ಬಂದಿದ್ದಾಗ ಇನ್ನು ಸ್ವಲ್ಪ ಕೆಲಸ ಮಾಡಬಹುದು ಅಡ್ಡಾಡಬಹುದು ಎಂದಿದ್ದಾರೆ ಡಾಕ್ಟರ್ ಮೇಡಂ." ಎಂದ ಗಿರಿ ಪೇಲವ ಮುಖದಿಂದ.

"ಹೂಂ, ಈಗ ಸ್ವಲ್ಪವೂ ಅಲ್ಲಾಡಿಸದೆ ಮಲಗಿಕೊಳ್ಳಿ. ಇನ್ನು ಅರ್ಧ ಗಂಟೆಯಲ್ಲಿ ಡಾಕ್ಟ್ರು ಬರುತ್ತಾರೆ" ಎಂದು ಸಹನಾಳನ್ನು ಬೆಡ್ ಮೇಲೆ ಮಲಗಿಸಿ ಮೊಣಕಾಲಿನಡಿಗೆ ಎರಡು ತಲೆದಿಂಬಿಟ್ಟರು ಶುಶ್ರೂಷಕಿ. ಮಲಗಿದ್ದ ಸಹನಾಗೆ ಆರೋಗ್ಯ ಜೋಪಾನ ಎಂದು ಪುಟಾಣಿ ಮಕ್ಕಳಿಗೆ ಹೇಳುವಂತೆ ನಾಲ್ಕಾರು ಬಾರಿ ಹೇಳಿದ ಅತ್ತೆಯ ಧ್ವನಿಯೇ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು..

      ಹೊರಗೆ ಕುಳಿತಿದ್ದ ಗಿರಿ ಕೈ ಕೈ ಹೊಸಕಿಕೊಳ್ಳುತ್ತಿದ್ದ. ನಾನೇ ತಪ್ಪು ಮಾಡಿದ್ದು. ವಾಕಿಂಗ್ ಗೆ ಬರಲಾ ಎಂದಾಗ ಬೇಡವೇ ಬೇಡ ಎನ್ನಬೇಕಿತ್ತು. ಛೇ..! ಏನು ಅನಾಹುತ ಆಯ್ತು. ಏನಾದ್ರೂ ಹೆಚ್ಚು ಕಮ್ಮಿ ಆದರೆ, ಅದನ್ನು ಸಹಿಸುವ ಮಾನಸಿಕ ದೃಢತೆ ನಮಗಿಲ್ಲ.

     ವೈದ್ಯೆ ಆಗಮಿಸಿ ಚೆಕಪ್ ಮಾಡಿ, ಸ್ಕ್ಯಾನಿಂಗ್ ಮಾಡಿದರು. "ನೋಡಮ್ಮಾ, ಇಷ್ಟು ಕೇರ್ ಲೆಸ್ ಮಾಡಬಾರದು ಯಾವತ್ತೂ. ಟ್ರೀಟ್ಮೆಂಟ್ ಕೊಡ್ತೀನಿ, ಭ್ರೂಣ ಉಳಿಯಬಹುದು ಎಂದು ಭರವಸೆ ನಾನು ಕೊಡಲ್ಲ. ಎಲ್ಲ ಆ ದೇವರ ಕೈಯಲ್ಲಿದೆ.'' ಎಂದು ಹೇಳಿ ಹೊರಗೆ ಬಂದವರು, ಗಿರಿ ಮಾತನಾಡಲು ಬಂದರೂ ಮಾತನಾಡದೆ ಬಿರಬಿರನೇ ನಡೆದೇಬಿಟ್ಟರು.

     ವಿಷಯ ತಿಳಿದ ಈಶ್ವರಿಯಮ್ಮ ಸೊಸೆಯ ಆರೈಕೆಗೆ ಖುದ್ದಾಗಿ ತಾವೇ ಆಗಮಿಸಿದರು. ಆಕೆಯ ಆಹಾರ ಔಷಧೋಪಚಾರ ಎಲ್ಲವನ್ನೂ ತಾವೇ ಮುಂದೆ ನಿಂತು ನಿಭಾಯಿಸಿದರು. "ನೋಡು ಗಿರಿ ಇನ್ನು ಸಹನಾಳ ಹೆರಿಗೆಯವರೆಗೆ ಅವಳ ಆರೈಕೆಯ ಹೊಣೆ ನನ್ನದು. ನಿಮ್ಮನ್ನಿಬ್ಬರನ್ನೇ ನಗರದಲ್ಲಿ ಬಿಟ್ಟು ನಾನು ಹಳ್ಳಿಗೆ ಹೋಗಲಾರೆ. ಮುದ್ದು ಮುಕುಂದನೊಂದಿಗೇ ನಾವು ಮನೆಗೆ ತೆರಳೋದು" ಅಂದಾಗ ಸಹನಾ ಹಾಗೂ ಗಿರಿ ಇಬ್ಬರ ಕಣ್ಣಂಚೂ ಒದ್ದೆಯಾಗಿತ್ತು. ಆಸ್ಪತ್ರೆಯಲ್ಲಿ ಸುಮ್ಮನೆ ಕುಳಿತುಕೊಂಡು ಅವರು ಗುನುಗುತ್ತಿದ್ದುದು ಸಹನಾಳ ಕಿವಿಗೂ ಬಿದ್ದಿತ್ತು.

ಬಾರೋ ಗೋಪಾಲ ನಮ್ಮನೆಗೆ
ದೂರಮಾಡೆಮ್ಮನು ಕಾಡುವ ನೋವನು||ಪ||

ತುಂಬಿದ ಮಜ್ಜಿಗೆ ಗಡಿಗೆಯ ಮೇಲೆ
ಬೆಣ್ಣೆ ಉಂಡೆಗಳು ತೇಲುತಲಿಹವು
ಸಿಕ್ಕದಲಿಡೆನು ಸಿಕ್ಕುವಂತಿಡುವೆ
ಪಕ್ಕನೇ ಬಾರೋ ಬಾಲಗೋಪಾಲ||೧||

ಅಂಗಳದಲ್ಲಿ ನವಿಲಿನ ಹಿಂಡು
ಚಂದದಿ ನಾಟ್ಯವನಾಡುತಲಿಹವು
ಗರಿಯನು ಹೆಕ್ಕಿ ಮುಡಿಯಲಿರಿಸುವೆ
ಗಿರಿಧಾರಿ ಬಾರೋ ನಂದಗೋಪಾಲ||೨||

ಆಟದ ಗಾಡಿಲಿ ನಿನ್ನನು ಕೂಡಿಸಿ
ದೂಡುವೆ ನಾನೇ ಜಗದೀಶನಾ
ಗೆಳೆಯರ ಕೂಟದಿ ತಂಟೆಯಗೈದರೆ
ಗಂಟಿಕ್ಕೆನು ಮೊಗ ಯದುಬಾಲ||೩||

ತೋಟದ ಅಂಚಿನ ಬಿದಿರಿನ ಗಂಟಲಿ
ತೂತೆಂಟನು ಕೊರೆವೆ ಮುರಲೀಲೋಲ
ಕೊಳಲನೂದುತ ಕಳವಳ ಕಳೆಯಲು
ಧರೆಯೊಳು ಬಾರೋ ರಾಧಾಲೋಲ||೪||

     ಹದಿನೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ರಕ್ತಸ್ರಾವ ನಿಂತು ಆರೋಗ್ಯ ಹಿಡಿತಕ್ಕೆ ಬಂತು. ಡಾಕ್ಟ್ರಮ್ಮ ಈಶ್ವರಿಯಮ್ಮನನ್ನು ಕರೆದು " ಬಹಳ ಜಾಗರೂಕತೆಯಿಂದ ನೋಡಿಕೊಳ್ಳಿ. ಇನ್ನು ಪುನಃ ಹೀಗಾಗದಂತೆ ಎಚ್ಚರಿಕೆವಹಿಸಿ." ಎಂದಾಗ "ಸರಿ ಡಾಕ್ಟ್ರೇ, ನಾನೇ ನಿಲ್ಲುತ್ತೇನೆ ಇವರೊಂದಿಗೆ" ಎಂದಾಗ ವೈದ್ಯೆಯ ಮುಖದಲ್ಲಿ ಮಂದಹಾಸ ಮೂಡಿತು.

       ಗಿರಿ ಕಾಳುಗಳನ್ನು ಮೊಳಕೆ ಬರಿಸಿ ಕೊಡುತ್ತಿದ್ದ. ‌ಮಡದಿ ಆಸೆಪಡುತ್ತಿದ್ದ ಹಣ್ಣುಹಂಪಲು ತರುತ್ತಿದ್ದ. ಆಕೆ ಇಷ್ಟಪಟ್ಟ ರುಚಿಯ ಪಾಕಗಳನ್ನು ಈಶ್ವರಿಯಮ್ಮ ಕೈಯಾರೆ ಮಾಡಿ ಬಡಿಸುತ್ತಿದ್ದರು. ಮನೆಯ ಕೆಲಸಕಾರ್ಯಗಳಲ್ಲಿ ಅಮ್ಮನಿಗೆ ನೆರವಾಗುತ್ತಿದ್ದವನು ಗಿರಿಯೇ. ಸಹನಾಳಿಗೆ ಕುಳಿತೂ ಮಲಗಿ ಸಾಕಾಗಿ ಹೋಗಿದ್ದರೂ ತಾಳ್ಮೆಯಿಂದ ಮಡಿಲಕಂದನಿಗಾಗಿ ಸಹಿಸಿಕೊಳ್ಳುತ್ತಿದ್ದಳು. ನವಮಾಸ ಅತ್ತೆಯ ಸುಪರ್ದಿಯಲ್ಲಿ ಆರೈಕೆ ಮಾಡಿಸಿಕೊಂಡ ಸಹನಾ ಮೈಕೈ ತುಂಬಿಕೊಂಡಿದ್ದಳು. ಮುದ್ದು ಮಗುವಿನ ಆಗಮನಕ್ಕೆ ಕಾತರಿಸುತ್ತಿದ್ದಳು..

    ಅಂದು ಅವಳಿಗೆ ಮುನ್ನುಗ್ಗಿ ಬರುತ್ತಿದ್ದ ನೋವಿನಲ್ಲಿ "ಕೆಲವೇ ಗಂಟೆಗಳಷ್ಟೇ ತಾಳಿಕೋ. ಆ ಶಕ್ತಿ ನಿನಗಿದೆ ಎಂದು ಪ್ರೀತಿಯಿಂದ ಮೈದಡವಿದರು" ಅತ್ತೆ ಈಶ್ವರಿಯಮ್ಮ. "ನೀನೇ ಎದೆಗುಂದಿದರೆ ನನ್ನ ಕೈಯಲ್ಲಿ ನೋಡಕಾಗಲ್ಲ ಕಣೇ" ಎಂದು ಕಣ್ತುಂಬಿಸಿಕೊಂಡ ಗಿರಿ.

       ಮುದ್ದಾದ ಕೆಂಪೇರಿದಂತಿದ್ದ, ಅಂಗೈಯಿಂದ ಚೂರೇಚೂರು ಹೊರಮೀರುತ್ತಿದ್ದ, ಬಿಳಿಬಟ್ಟೆಯಲ್ಲಿ ಸುತ್ತಿದ್ದ ಆ ಮುದ್ದುಕಂದನನ್ನು ಸ್ಪರ್ಶಿಸಿದಾಗ ಸ್ವರ್ಗವೇ ಧರೆಗಿಳಿದಂತೆ ಭಾಸವಾಯಿತು ಸಹನಾಳಿಗೆ. ಗಿರಿ ಮುದ್ದು ಕಂದನನ್ನು ಅಪ್ಪಿ ಹಿಡಿದು ಬಾಯಲ್ಲಿ ಸಣ್ಣಕ್ಕೇನೋ ಆ.. ಆ.. ಲಾಲಿ.. ಲಾಲಿ.. ಎನ್ನುತ್ತಿದ್ದರೆ ಪುಟಾಣಿ ನಿದ್ದೆಗೆ ಜಾರುವುದು ಸಹನಾಳಿಗೆ ಸೋಜಿಗ ತಂದಿತ್ತು.

        ಬಾಣಂತನ ಮುಗಿಸಿ ಪತಿ ಮನೆಗೆ ಮಗುವಿನೊಡನೆ ಕಾಲಿಟ್ಟಳು ಸಹನಾ. ಮಗುವಿನ ಸ್ನಾನ ಆರೈಕೆ ಎಲ್ಲದರಲ್ಲೂ ಈಶ್ವರಿಯಮ್ಮನದೇ ಮೇಲುಸ್ತುವಾರಿ. ಮುದ್ದುಕಂದನಿಗೆ ಅಜ್ಜಿಯೇ ಜೋಗುಳ ಹಾಡಿ ತೊಟ್ಟಿಲು ತೂಗಿ ಮಲಗಿಸುತ್ತಿದ್ದರು. ಅಜ್ಜಿಯ ಲಾಲಿ ಪದ ಮುಗಿಯುವುದರೊಳಗೆ ಮಗುವನ್ನು ನಿದಿರಾದೇವಿ ಆವರಿಸುತ್ತಿದ್ದಳು.

ಮಲಗು ಎಮ್ಮನೆಯ ಬೆಳಕೇ
ಸುಖನಿದಿರೆಗೈ ನೀನು ಲಾಲಿಯ ಪದಕೆ||ಪ||

ಘಮ್ಮೆನುವ ಘೃತನಿನ್ನ ಮೈಗೆಲ್ಲ ಪೂಸಿ
ಕೆನೆಹಾಲಲಿ ನಿನಗೆ ಅಭ್ಯಂಗಮಾಡಿಸಿ
ಕೊಳದ ತಿಳಿನೀರಲಿ ನೀರಾಟವನಾಡಿಸಿ
ಎತ್ತಿ ಕರೆತಂದಿಹೆ ಮುದ್ದು ಗೋಪಾಲನಾ||೧||

ಗಂಧಸುಗಂಧವ ತೇಯ್ದುಲೇಪಿಸಿ
ನವನೀತವನುಣಿಸಿ ಉದರತಂಪಾಗಿಸಿ
ತೊಟ್ಟಿಲಸಿಂಗರಿಸಿ ತೂಗುವೆ ದೇವನಾ
ದೀನರಿಗೆ ದಾನಿಯಾಗಿಹ ಪರಮಾತ್ಮನಾ||೨||

ತಾವರೆಯ ಚೆಲುವಿನ ಬಾಲಕೃಷ್ಣನಾ
ಕಣ್ಣಲ್ಲಿ ಹಾಲ್ಬೆಳದಿಂಗಳ ಚೆಲ್ಲುವನಾ
ಧರಣಿಯ ದುರುಳರ ತರಿದವನಾ
ತೂಗುವೆ ಸಜ್ಜನರ ಪೊರೆವವನಾ||೩||

      ಅಜ್ಜಿಯ ಲಾಲಿ ಹಾಡು ಮಗುವಿಗೆ ಹಿತವಾಗುತ್ತಿತ್ತು. ಎದ್ದಾಗ ಸಹನಾಳೇ ಬಳಿಯಿರಬೇಕಾಗಿತ್ತು. ಸಹನಾ ಮಡಿಲ ಮಗುವಿನ ಪಾಲನೆ ಪೋಷಣೆಯಲ್ಲೇ ವ್ಯಸ್ತಳಾದಳು.

     ಒಂದು ದಿನ ಬೆಳಗ್ಗೆ "ಗಿರಿ, ದೇವಸ್ಥಾನಕ್ಕೆ ಹೋಗುವುದಿದೆ" ಎಂದರು ಈಶ್ವರಿಯಮ್ಮ. "ಸರಿ ಅಮ್ಮಾ ಹೋಗೋಣಂತೆ" ಎಂದ ಗಿರಿ ಅಮ್ಮನ ಆಣತಿಯಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿದ. ಎಲ್ಲರೂ ಜೊತೆಗೂಡಿ ದೇವಾಲಯಕ್ಕೆ ತೆರಳಿದರು.
ವಿಶಾಲವಾದ ದೇವಾಲಯದ ಎದುರಿನ ಬಯಲಲ್ಲಿ ಕಾರಿನಿಂದಿಳಿದಳು ಸಹನಾ ಮುದ್ದುಕಂದನೊಡನೆ. ಹೊಸ ದೇವಾಲಯ. ಅವಳಿದುವರೆಗೆ ಅಲ್ಲಿಗೆ ಬಂದೂ ಇಲ್ಲ. ಹೆಸರೂ ಕೇಳಿರಲಿಲ್ಲ. ದೇವಾಲಯದ ಪಕ್ಕದಲ್ಲಿ ಸುತ್ತಲೂ ಮೆಟ್ಟಿಲುಗಳಿದ್ದ ಕೆರೆಯಿತ್ತು. ಕಾಲು ತೊಳೆದುಕೊಂಡು ಒಳಬಂದಾಗ ಸುತ್ತಲೂ ಗೋವುಗಳು ಸಂಚರಿಸುತ್ತಿದ್ದವು. ನವಿಲುಗಳು ನಿರ್ಭೀತಿಯಿಂದ ಸಂಚರಿಸುತ್ತಿದ್ದವು. ಗರ್ಭಗುಡಿಯ ಎದುರು ನಿಂತ ಸಹನಾಳಿಗೆ ಕಂಡದ್ದು ಕಪ್ಪು ಶಿಲೆಯಲ್ಲಿ ಕೆತ್ತಿದ ಗೋಪಾಲಕೃಷ್ಣನ ದಿವ್ಯಮೂರುತಿ. ಗಿರಿ "ಅಮ್ಮಾ.. ಈಗ ಸ್ವಲ್ಪ ಹೊತ್ತಿನಲ್ಲಿ ದೇವರ ಪೂಜೆಯಾಗಿ ನೈವೇದ್ಯ ಪ್ರಸಾದವನ್ನು ಕೊಡುತ್ತಾರೆ. ದೇವರ ಮುಂದೆಯೇ ಬಾಳೆಲೆಯ ಮೇಲೆ ಮಗುವಿಗೆ ಉಣಿಸೋಣ" ಎಂದಾಗ ಸಹನಾಳಿಗೆ ಅಚ್ಚರಿ ಆನಂದ ಎರಡೂ ಒಟ್ಟೊಟ್ಟಿಗೇ ಆಗಿತ್ತು. ಅತ್ತೆ ಹೇಳುತ್ತಿದ್ದ ಬಾರೋ ಗೋಪಾಲ ನಮ್ಮನೆಗೆ, ತೂಗುವೆ ಸಜ್ಜನರ ಪೊರೆವವನಾ ಎಂಬ ಹಾಡುಗಳ ಹಿಂದಿನ ಅವರ ವಿನೀತವಾದ ದೈವೀಭಾವ ಅರ್ಥವಾಗಿತ್ತು. ಸಂಕಟದಿಂದ ಪಾರು ಮಾಡಿದ ಗೋಪಾಲಕೃಷ್ಣನ ಪರಮಸುಂದರ ರೂಪದೆದುರು ಕರಜೋಡಿಸಿ ಶಿರಬಾಗಿದ್ದಳು. ನೈವೇದ್ಯವನುಣಿಸಿ ಮಡಿಲ ಕಂದನ "ನಂದನ.." ಎಂದು ಕರೆದಿದ್ದಳು.

✍️ ಅನಿತಾ ಜಿ.ಕೆ.ಭಟ್.
30-08-2021.
#ಸಾಂದರ್ಭಿಕ ಚಿತ್ರ: ಅಂತರ್ಜಾಲದ ಕೃಪೆ.
#ಕಾಲ್ಪನಿಕ ಕಥೆ.
#ಇಲ್ಲಿ ಬಳಸಿದ ಎರಡೂ ಹಾಡುಗಳು ಕಥಾ ಸನ್ನಿವೇಶಕ್ಕೆಂದು ನಾನೇ ರಚಿಸಿರುವುದು.

No comments:

Post a Comment