Saturday, 11 September 2021

ಇಷ್ಟಾರ್ಥ ಸಿದ್ಧಿ




#ಇಷ್ಟಾರ್ಥ ಸಿದ್ಧಿ- ಕಿರುಗಥೆ

        ಪವಿತ್ರ "ಹೂಂ, ತುಂಬಾ ಚೆನ್ನಾಗಿದೆ" ಎಂದು ಹೇಳಿ ನಸುನಕ್ಕಳು. ಮುಖದ ಮೇಲೆ ಮಂದಹಾಸವಿದ್ದರೂ ಅದರ ಹಿಂದಿನ ಮನೋನಿಗ್ರಹ ಅವಳಿಗೇ ಗೊತ್ತು. ಎಲ್ಲದಕ್ಕೂ ಚಿಂತಿಸುವ ಬದಲು ಹಗುರಾಗಿ ತೆಗೆದುಕೊಂಡು ತಾನಾಯಿತು ತನ್ನ ಕೆಲಸವಾಯಿತು ಎಂದು ಕೆಲಸದತ್ತ ಗಮನಕೊಟ್ಟಳು. ರಶ್ಮಿಗಾಗಲಿ
ವಿಭಾಳಿಗಾಗಲಿ ಅವಳ ಮನಸಿನ ಆಳದ ಭಾವಗಳನ್ನು ಎಂದೂ ತಿಳಿಯಗೊಟ್ಟವಳಲ್ಲ ಪವಿತ್ರ. ಸದಾ ಮೌನಿ. ಕೇಳಿದರೆ ಚುಟುಕಾಗಿ
ಉತ್ತರಿಸಿ ಮೌನಕ್ಕೆ ಜಾರುವವಳು ಪವಿತ್ರ.

     ಜೀವನ ನಾವು ಅಂದುಕೊಂಡಷ್ಟು ಸುಲಭವಲ್ಲ ಎಂದು ಅವಳಿಗೆ ಅನುಭವವಾದಾಗ ತಾನೂ ಸಂಸಾರಕ್ಕೆ ಹೆಗಲುಕೊಟ್ಟವಳು ಪವಿತ್ರ. ತನ್ನ ಕಾಲ ಮೇಲೆ ನಿಂತುಕೊಂಡು ಭವಿಷ್ಯದ ಚಿಂತನೆಯಿಂದಲೇ ಅತಿ ಜಾಗರೂಕತೆಯಿಂದ ಹೆಜ್ಜೆಯಿಡುತ್ತಿದ್ದಳು. ಮಾಡಿದ ಪ್ರತಿಯೊಂದು ನಿರ್ಧಾರಕ್ಕೂ ಬದ್ಧಳಾಗಿರುತ್ತಿದ್ದಳು. ತನ್ನ ಚಿಂತನೆಯಂತೆ ಜೀವನವು ಸಾಗದಿದ್ದಾಗ ಬೇಸರಿಸದೆ ಮುಂದೆ ಒಂದು ದಿನ ನಮ್ಮ ಆಸೆಗಳು
ಕೈಗೂಡಬಹುದು ಎಂಬ ವಿಶ್ವಾಸವನ್ನು
ಕಳೆದುಕೊಳ್ಳುತ್ತಿರಲಿಲ್ಲ. ಸಣ್ಣ ಪುಟ್ಟ
ವಿಷಯದಲ್ಲೂ ಬಹಳ ಎಚ್ಚರಿಕೆಯಿಂದ
ಮಿತವ್ಯಯ ಮಾಡುತ್ತಿದ್ದಳು.

       ರಶ್ಮಿ ಪ್ರತಿ ಹಬ್ಬಕ್ಕೂ ತನ್ನ ಸಂಬಳದ
ಹಣದಿಂದ ಬಟ್ಟೆ ಬರೆ ಖರೀದಿಸುತ್ತಿದ್ದಳು. ಸಾಕಷ್ಟು ಆಭರಣಗಳನ್ನು ಕೊಂಡು ಕೊಂಡಿದ್ದಳು. ಪ್ರತಿಯೊಂದನ್ನೂ ಗೆಳತಿಯರಾದ ಪವಿತ್ರ ಮತ್ತು ವಿಭಾಳಿಗೆ ತೋರಿಸಿ ಅವರು ಚೆನ್ನಾಗಿದೆ ಅಂದಾಗ ಅವಳಿಗೊಂದು ಸಮಾಧಾನ. ವಿಭಾಳಿಗೆ ಆಗಾಗ ಗಂಡ ಕೊಡುವ ಸರ್ಪ್ರೈಸ್ ಗಿಫ್ಟ್ ಗಳು ಬಲು ದುಬಾರಿಯವು. ಅವುಗಳನ್ನು ನೋಡಿ ಸ್ವಲ್ಪವೂ ಆಸೆ ಪಡದೆ "ತುಂಬಾ ಚೆನ್ನಾಗಿದೆ ಕಣೇ" ಎಂದು ಹೊಗಳುವುದು ಪವಿತ್ರಳ ಯಾಂತ್ರಿಕ ಜಾಯಮಾನ ಆಗಿಬಿಟ್ಟಿತ್ತು. ಆಗಾಗ ಐಶಾರಾಮಿ ಹೋಟೇಲ್, ಪಿಕ್ ನಿಕ್, ಟೂರ್ ಎಂದು ಹೋಗುತ್ತಾ ಮಜಾ ಮಾಡಿ ಫೊಟೋ
ತೋರಿಸಿದಾಗಲೂ ತನಗೂ ಹೀಗೆ
ಆನಂದದಿಂದ, ನಿಶ್ಚಿಂತೆಯಿಂದಜೀವನ ಸಾಗಿಸಬೇಕೆನ್ನುವ ಆಸೆಯನ್ನು ಕೂಡಲೇ ಚಿವುಟಿ ಬಿಡುತ್ತಿದ್ದಳು.

       ಇವೆಲ್ಲದಕ್ಕೂ ಅವಳ ಮುಂದಿದ್ದ
ದೊಡ್ಡ ಕನಸು ನನಸಾಗದೆ ಉಳಿದಿರುವುದೇ
ಕಾರಣವಾಗಿತ್ತು. ದೀಪಾವಳಿ ಹಬ್ಬಕ್ಕೆ ಗಂಡ
ತನಗೂ ಮಡದಿ ಮಕ್ಕಳಿಗೂ ಜೊತೆಗೆ ಹೊಸ ಬಟ್ಟೆ ಖರೀದಿಸಿದರೆ ಮುಗಿಯಿತು. ವರುಷವಿಡೀ ಅದೇ ಅವಳ ಪಾಲಿಗೆ ಹೊಸಬಟ್ಟೆ. ಪವಿತ್ರಳಿಗೆ ತಾನು ಕೆಲಸ ಮಾಡುವ ಆಫೀಸಿನ ಯಾವುದೇ
ಸಮಾರಂಭ, ಗೆಳತಿಯರ ವಿವಾಹ ಇವೆಲ್ಲದಕ್ಕೂ ಅದೇ ಒದಗುತ್ತಿದ್ದುದು. ಗೆಳತಿಯರು ಒಮ್ಮೊಮ್ಮೆ ನಯವಾಗಿ"ನೀನೂ ಸ್ವಲ್ಪ ನಿನಗೆ ಬೇಕಾದ್ದಕ್ಕೆಲ್ಲ ಖರ್ಚು ಮಾಡು ಕಣೇ.." ಎಂದರೂ "ಹಾಂ.."
ಎನ್ನುತ್ತಾ ತಲೆ ಅಲ್ಲಾಡಿಸಿ ಸುಮ್ಮನಾಗುತ್ತಿದ್ದಳು.

                *****

      ಪವಿತ್ರ  ಒಬ್ಬ ಸರ್ಕಾರಿ ಅಧಿಕಾರಿ ಮಗಳು. ಅಮ್ಮ ಗೃಹಿಣಿಯಾಗಿದ್ದರು. ಚೆನ್ನಾಗಿಯೇ ಓದಿ ಡಿಗ್ರಿ ಪಡೆಯುವಾಗ ಸುನಿಲ್'ನ ಪರಿಚಯವಾಗಿ ಸ್ನೇಹ, ಸಲುಗೆ ಬೆಳೆದು ಪ್ರೇಮಕ್ಕೆ ತಿರುಗಿತ್ತು.
ಮನೆಯವರು ಮೊದಲು ಬೇಸತ್ತರೂ,ತಮ್ಮ ಆಸ್ತಿ ಅಂತಸ್ತಿಗೆ ಸರಿ ಹೊಂದುವುದಿಲ್ಲ ಎಂದರೂ, ಕೊನೆಗೆ ಪ್ರೇಮಕ್ಕೆ ಮಣಿದು ಒಪ್ಪಿ
ವಿವಾಹ ಮಾಡಿಕೊಟ್ಟರು. ಮದುವೆಯ ನಂತರ ತವರಿನ ಸಂಬಂಧ ಹೆಸರಿಗಷ್ಟೇ ಎಂಬಂತೆ ಆಯಿತು. ಅಪರೂಪದಲ್ಲಿ ತವರಿನ ಸಮಾರಂಭಗಳಿಗೆ ಹೋದಾಗ "ನೀವು ನಗರದಲ್ಲಿ ಸ್ವಂತ ಮನೆಯಲ್ಲಿರುವುದಾ? ಅಲ್ಲ ಬಾಡಿಗೆ ಮನೆಯಲ್ಲಾ?" ಎಂದೆಲ್ಲ ಬಂಧುಗಳು ಪ್ರಶ್ನಿಸಿದಾಗ ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದಳು. ಈ ಜಗವೇ ಒಂಥರಾ ಬಾಡಿಗೆ ಮನೆಯಿದ್ದಂತೆ. ನಾವು ಬರುವವರು
ಹೋಗುವವರಲ್ಲವೇ? ಎಂದು ತನ್ನನ್ನು ತಾನೇ ಸಂತೈಸಿಕೊಳ್ಳುತ್ತಿದ್ದಳು.

        ಮಕ್ಕಳ ಲಾಲನೆ ಪಾಲನೆಗೆಂದು ಮನೆಯಲ್ಲಿಯೇ ಉಳಿದ ಪವಿತ್ರಳಿಗೆ
ಜೀವನದ ಕಷ್ಟ ಗೊತ್ತಾಗಲು ಆರಂಭವಾಯಿತು. ನಂತರ ತಾನೂ ಉದ್ಯೋಗಕ್ಕೆ ಸೇರಿಕೊಂಡು, ಒಂದೊಂದೇ ಅಗತ್ಯದ ಸಾಮಾನುಗಳನ್ನು ಮನೆಗೆ ತೆಗೆದುಕೊಂಡಳು. ಇನ್ನು ಅವಳಿಗಿದ್ದ
ಬಹುದೊಡ್ಡ ಕನಸು ನಗರದಲ್ಲೊಂದು ಸ್ವಂತ ಮನೆ ಮಾಡಿಕೊಳ್ಳುವುದು. ಇದು ಹಲವು
ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಮನೆ ಕಟ್ಟದೆ ಅನಗತ್ಯ ಖರ್ಚುಗಳನ್ನು
ಮಾಡಬಾರದು ಎಂದು ಇಬ್ಬರೂ
ನಿರ್ಧರಿಸಿದ್ದರು.  ನೋಡಿದ ಸೈಟುಗಳೂ, ಫ್ಲಾಟುಗಳೂಏನೇನೋ ನೆಪದಲ್ಲಿ ಅವರಿಗೆ ಸರಿ ಹೊಂದುತ್ತಲೇ ಇರಲಿಲ್ಲ. ಆದರೂ ಚೂರೂ ಅನಗತ್ಯ ಖರ್ಚು ಮಾಡದೆ ಕೂಡಿಡುವುದನ್ನು ಮರೆಯಲಿಲ್ಲ. ವರುಷಗಳು ಉರುಳಿದವು.

        ರಶ್ಮಿಯ ವಿವಾಹಕ್ಕೆ ಪವಿತ್ರ ವಿಭಾಳೊಂದಿಗೆ ಆಗಮಿಸಿದ್ದಳು. ವಿವಾಹವು ದೇವಸ್ಥಾನದ ಪಕ್ಕದ ಛತ್ರದಲ್ಲಿ ನಡೆದಿತ್ತು. ವಿಭಾ "ಬಾರೇ, ಸ್ವಲ್ಪ ದೇವಸ್ಥಾನದತ್ತ ಹೋಗಿ ಬರೋಣ" ಎಂದಳು. "ಹೂಂ.. ಹೋಗೋಣ" ಎಂದ ಪವಿತ್ರಳೂ ಜೊತೆಗೆ ಹೆಜ್ಜೆ ಹಾಕಿದಳು. "ಇಲ್ಲಿ ಇಪ್ಪತ್ತೊಂದು ಗರಿಕೆಯ ಚಿಗುರುಗಳನ್ನು ಅರ್ಪಿಸಿ ನಮ್ಮ ಇಷ್ಟಾರ್ಥಗಳನ್ನು ಕೋರಿದರೆ
ದೇವರು ನೆರವೇರಿಸುತ್ತಾನೆ ಎಂಬ ನಂಬಿಕೆಯಿದೆ" ಎಂದಳು ವಿಭಾ. ಅದರಂತೆ ಗರಿಕೆಯನ್ನು ಅರ್ಪಿಸಿ ಪವಿತ್ರ ತನ್ನ ಮನದ ಇಂಗಿತವನ್ನು ಬೇಡಿಕೊಂಡಿದ್ದಳು.

            *********

       "ಪವಿತ್ರ, ಸಂಜೆ ಐದು ಗಂಟೆಗೆ ಆಫೀಸಿನ ಹತ್ತಿರ ಬರುವೆ" ಎಂದ ಅವಳ ಪತಿ ಸುನಿಲ್. ಅವಳು ಆಫೀಸ್ ಅವಧಿ ಮುಗಿದ ಮೇಲೆ ಹೊರಗೆ ಬಂದಾಗ ಸುನಿಲ್ ಕಾಯುತ್ತಾ ನಿಂತಿದ್ದ.
"ಪವಿ.. ಇಲ್ಲಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರದಲ್ಲಿ ಇಂಜಿನಿಯರ್ ಒಬ್ಬರು ಮನೆ ಕಟ್ಟಿ ಮಾರುತ್ತಿದ್ದಾರೆ. ಕಾಮಗಾರಿ ನಡೆಯುತ್ತಿರುವ ಕೆಲವು ಮನೆಗಳು ಇವೆಯಂತೆ. ಬಾ, ಹೋಗಿ ನೋಡಿ ಬರೋಣ" ಎಂದು ಬೈಕ್ ಸ್ಟಾರ್ಟ್ ಮಾಡಿದ.

      ಸುಂದರವಾದ ಲೇ ಔಟ್ ಎದುರು ಬೈಕ್
ನಿಲ್ಲಿಸಿದ. ವಿಶಾಲವಾದ ಜಾಗದಲ್ಲಿ ಸಾಲಾಗಿ
ಮನೆಗಳನ್ನು ನಿರ್ಮಿಸಲಾಗಿತ್ತು. ತಮ್ಮ ಬಜೆಟ್ ಗೆ ಸರಿ ಹೊಂದುವಂತಹ ಮನೆಯನ್ನು ಕೊಳ್ಳುವ ನಿರ್ಧಾರಕ್ಕೆ ಬಂದರು.

        ಇದು ಕನಸೋ ಎಂಬಂತೆ ಕೆಲವೇ
ತಿಂಗಳುಗಳಲ್ಲಿ ಮನೆಯ ಗೃಹಪ್ರವೇಶ ನೆರವೇರಿತು. ಪವಿತ್ರ ಸುನಿಲ್ ಕುಟುಂಬದೊಡನೆ ಹೊಸಮನೆಗೆ ಕಾಲಿಟ್ಟರು. ರಶ್ಮಿ, ವಿಭಾ ಕೂಡಾ ಗೃಹಪ್ರವೇಶಕ್ಕೆ ಆಗಮಿಸಿದ್ದರು.

"ತುಂಬಾ ಚೆನ್ನಾಗಿದೆ ಕಣೇ, ನಿಮ್ಮ ಹೊಸ ಅರಮನೆ" ಎಂದು ಇಬ್ಬರೂ ಹೊಗಳಿದಾಗ
"ಎಲ್ಲಾ ನಿಮ್ಮಿಂದಲೇ ಆಗಿದ್ದು. ರಶ್ಮಿಯ ವಿವಾಹದ ದಿನ ಆ ದೇವಾಲಯದಲ್ಲಿ ಸಿದ್ಧಿಗಣಪನನ್ನು ಬೇಡಿಕೊಂಡು ಕಾರ್ಯಸಿದ್ಧಿಯಾದದ್ದು, ಇಷ್ಟಾರ್ಥಗಳು ಪೂರೈಸುವಂತಾದ್ದು." ಅಂದಾಗ, ಅವಳ ಕಣ್ಣುಗಳು ಆನಂದಬಾಷ್ಪ ಸುರಿಸಿದ್ದರೆ,
ವಿಭಾ ಮತ್ತು ರಶ್ಮಿ ಇಬ್ಬರೂ ಅವಳನ್ನು ಹೆಗಲ ಹಿಂದಿನಿಂದ ಬಳಸಿ "ಎಲ್ಲಿ.. ಚೂರು ನಗು ನೋಡೋಣ" ಎನ್ನುತ್ತಿದ್ದರು.

✍️... ಅನಿತಾ ಜಿ.ಕೆ.ಭಟ್.
08-09-2021.


             ಸಿದ್ಧಿ ವಿನಾಯಕ/ ಸಿದ್ಧಿ ಗಣಪತಿ 🙏🙏



No comments:

Post a Comment