Wednesday, 1 December 2021

ಒಂದು ಸುಂದರ ಸಂಜೆ

 



#ಸಂತಸದ ಒಂದು ಸಂಜೆ


      ಸುಮತಿಯ ಫೋನ್ ರಿಂಗಾದಾಗ ಅವಳು ಹತ್ತಿಪ್ಪತ್ತು ಆಳುಗಳಿಗೆ ಊಟಕ್ಕೆ ತಯಾರಿ ಮಾಡುತ್ತಿದ್ದಳು. ''ರೀ..ನೀವೇ ಸ್ವಲ್ಪ ಫೋನೆತ್ತಿ..'' ಎಂದಾಗ ರಾಜಾರಾಮ ರಾಯರು ಕರೆ ಸ್ವೀಕರಿಸಿದರು. ಸುಮತಿಯ ಗಮನ ಮಾತುಕತೆಯ ಮೇಲಿದ್ದುದರಿಂದ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ, "ಯಾರು? ಸಹನಾ ಬಂದಿದ್ದಾಳಂತಾ ಬೆಂಗಳೂರಿನಿಂದಾ? ಇಲ್ಲಿ ಕೊಡಿ ಸ್ವಲ್ಪ," ಎಂದು ತಾನೇ ಫೋನೆಳೆದುಕೊಂಡು ಮಾತನಾಡತೊಡಗಿದಳು.

       "ಸಹನಾ ಯಾವಾಗ ಬಂದೆ? ಹೇಗಿದ್ದೀಯಾ? ಕೊರೋನಾ ಬಂದು ನಿಮ್ಮನ್ನೆಲ್ಲ ಕಾಣದೆ ಎರಡು ವರ್ಷಗಳ ಮೇಲಾಯಿತು. ಸದ್ಯ ಈಗಲಾದರೂ ತವರಿಗೆ ಬರುವಷ್ಟು ಪರಿಸ್ಥಿತಿ ಸುಧಾರಿಸಿತಲ್ಲ." ಎಂದು ಬಾಯ್ತುಂಬಾ ಮಾತನಾಡಿದರು. ಅಕ್ಕತಂಗಿಯರ ಮಾತು ಸಾಗುತ್ತಾ "ಅಕ್ಕಾ ನೀನೂ ಬಾರೇ ತವರಿಗೆ, ಜೊತೆಯಾಗಿ ಕುಳಿತು ಹರಟೋಣ" ಎಂದಾಗ "ನಾನು ಹೇಗೆ ಬರಲಿ ಹೇಳು.? ನಂಗೆ ಇಲ್ಲಿ ಕೈತುಂಬಾ ಕೆಲಸವಿದೆ. ಬಿಡುವು ಎಂಬುದನ್ನು ಬಿಟ್ಟು ಮತ್ತೆಲ್ಲವೂ ಇರುವ ಕೃಷಿಕರು ನಾವು" ಎಂದು ಅಲವತ್ತುಕೊಂಡಳು.

                      ********
      ಮಾತೃನಿಲಯದಲ್ಲಿ  ಮಕ್ಕಳ ಕಲರವ ಮುಗಿಲುಮುಟ್ಟಿತ್ತು. ಸಹನಾ ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಡನೆ ಎರಡು ದಿನ ಹಿಂದೆಯೇ ಆಗಮಿಸಿದ್ದಳು. ಊರಲ್ಲೇ ಉದ್ಯೋಗ ಮಾಡಿಕೊಂಡು ತಂದೆತಾಯಿಯ ಜೊತೆಗೆ ವಾಸಿಸುವ ಮಹೇಶನ ಮಡದಿ ಮಕ್ಕಳಿಗೆ ಆದರಾತಿಥ್ಯದ ಜವಾಬ್ದಾರಿಯ ಜೊತೆಗೆ
ಸಂತಸದ ಸನ್ನಿವೇಶ. ಪೂನಾದಿಂದ ಭುವನ ಕುಟುಂಬ ಸಮೇತ ಗಂಡನ ಮನೆಗೆ ಬಂದಿದ್ದವಳು ಕೂಡಾ ಒಂದು ದಿನಕ್ಕೆಂದು ತವರಿಗೆ ಬಂದಳು. ಅವಳ ಇಬ್ಬರು ಹೆಣ್ಣುಮಕ್ಕಳಂತೂ ಪಾದರಸದಂತಹವರು.  ವಾಷಿಂಗ್ಟನ್‌ನಲ್ಲಿ ವಾಸವಾಗಿದ್ದು ಇಂಜಿನಿಯರಾಗಿರುವ  ಮಹಾಬಲ ಕಳೆದವಾರವೇ ಭಾರತಕ್ಕೆ ಬಂದವನು ಇಂದು ಮಡದಿ ಮಕ್ಕಳೊಂದಿಗೆ ಮನೆಗೆ ಬಂದಿದ್ದ. ಎಲ್ಲರ ಮಧ್ಯೆ ಸುಮತಿ ಒಬ್ಬಳದೇ ಅನುಪಸ್ಥಿತಿ ಎಂದಾಗುವುದು ಬೇಡವೆಂದು ಆಕೆಯ ಪತಿ ಕೆಲಸಾವಳಿಗಳ ನಡುವೆಯೂ ಆಕೆಯನ್ನು ಒಂದು ದಿನದ ಮಟ್ಟಿಗೆ ತವರಿಗೆ ಕಳುಹಿಸಿದರು.

       ಶಾರದಮ್ಮ ಮತ್ತು ರಘುನಂದನ ಮೂರ್ತಿಯವರ ಆನಂದಕ್ಕೆ ಪಾರವೇ ಇರಲಿಲ್ಲ. ಮನೆತುಂಬಾ ಮಕ್ಕಳು ಮೊಮ್ಮಕ್ಕಳು ಕಲೆತ ಅಪರೂಪದ ಕ್ಷಣಗಳು. ಸಂಜೆ ತಂಗಾಳಿ ಸೇವನೆಗೆಂದು ಎಲ್ಲರೂ ಸೇರಿ ತೋಟದ ಪಕ್ಕದಲ್ಲಿದ್ದ ಬೆಳ್ಮಣ್ಣು ಗುಡ್ಡೆಯೇರಿದರು. ಮಹಾಬಲ ಕೈಯಲ್ಲೊಂದು ಕತ್ತಿ ಕೋಲು ಹಿಡಿದು ಮುಂದೆ ಸಾಗಿದ್ದ. ಮೊದಲು ನಾವೆಲ್ಲ ಸಾಗಿ ಸಲೀಸಾಗಿದ್ದ ದಾರಿಯೀಗ ಗಿಡಗಂಟಿ ಮುಳ್ಳುಗಳಿಂದ ಕೂಡಿದೆಯೆಂದು ದಾರಿ ಬಿಡಿಸಿಕೊಟ್ಟು ಮುಂದೆ ಸಾಗಿದ. ಎಲ್ಲರೂ ನಿಧಾನವಾಗಿ ಹರಟುತ್ತಲೇ ಅವನನ್ನು ಹಿಂಬಾಲಿಸಿ ಗುಡ್ಡವೇರಿದರು. ಹೆಚ್ಚೇನೂ ಎತ್ತರವಿಲ್ಲದ ಆ ಗುಡ್ಡದ ಮಣ್ಣು ಬೆಳ್ಳಗಿನ ಬಣ್ಣಕ್ಕೆ ಹತ್ತಿರವಿದ್ದು, ಕಲ್ಲುಗಳೂ ಕುಡಾ ಬೆಳ್ಳಗಿವೆ. ಆದ್ದರಿಂದಲೇ ಬೆಳ್ಮಣ್ಣು ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಗುಡ್ಡದ ತುದಿಯಲ್ಲಿ ವಿಶಾಲವಾದ ಸಮತಟ್ಟು ಪ್ರದೇಶ. ಅಲ್ಲಿ ಎಲ್ಲಾ ಮಕ್ಕಳೂ ಆಟವಾಡಿದರು. ಮರದ ಮೇಲೆ ಹತ್ತಿ ಇಳಿದು ಮಾಡುತ್ತಾ ಮರಕೋತಿ ಆಟವಾಡಿದರು.

      ಮರದಲ್ಲಿದ್ದ ಕುಂಟಾಲದ ಹಣ್ಣನ್ನು ತಿಂದ ಮಕ್ಕಳು ಬಾಯಲ್ಲಿ ನೇರಳೆ ಬಣ್ಣ ಮೂಡಿದ್ದು ಕಂಡು ಮಕ್ಕಳಿಗೆ ಸೋಜಿಗ. Hey guys! This is natural colour. No side effects, no chemical ಎಂದು ಭುವನಾಳ ಮಕ್ಕಳು ಜಾಹೀರಾತು ನೀಡಲು
ಎಲ್ಲರೂ ಬಾಯ್ತುಂಬಾ ನಕ್ಕರು. ಸಹನಾ ಕೆಂಪನೆ ದುಂಡನೆ ಕೇಪುಳದ ಹಣ್ಣುಗಳನ್ನು ಕೊಯ್ದು ಬೊಗಸೆಯಲ್ಲಿ  ತುಂಬಿ ಮಕ್ಕಳ ಮುಂದೆ ಹಿಡಿದಳು. ಮಕ್ಕಳ ಮುಖ ಅರಳಿತು. Hey.. see here.. cute cherries.. ಮಕ್ಕಳ ದನಿಯಲ್ಲಿ ಆಶ್ಚರ್ಯವಿತ್ತು.  ಭುವನ ಮಣ್ಣಿನಲ್ಲಿ ಚಂದದ ಹೊಂಡ ನಿರ್ಮಾಣ ಮಾಡಿ ವಾಸಿಸುವ ಪುಟ್ಟ ಜೀವಿ ನೆಲಗುಬ್ಬಿಯನ್ನು ಮಕ್ಕಳಿಗೆ ತೋರಿಸಿದಳು.
ಆಟವಾಡುವಾಗ ಕಂಡ ಹುತ್ತದಲ್ಲಿ ಹಾವಿರಬಹುದಾ ಎಂಬ ಮಕ್ಕಳ ಕುತೂಹಲಕ್ಕೆ  ಮಹಾಬಲ ಉತ್ತರಿಸಿದ.

        ನಾವೆಲ್ಲಾ ಚಿಕ್ಕಂದಿನಲ್ಲಿ ಕಾರ್ಯಕ್ರಮವಿದ್ದಾಗ ಮುನ್ನಾದಿನ ಬಸ್ಸಿನಲ್ಲಿ ಬರುವ ಸುಮತಿ ಅಕ್ಕ ಭಾವ ಮಕ್ಕಳಿಗೆ, ಪುಟ್ಟತ್ತೆ ದೊಡ್ಡತ್ತೆ, ಶೀಲತ್ತೆ, ಶಾರತ್ತೆಗಾಗಿ ಇಲ್ಲಿ ಕಾದು ಕುಳಿತದ್ದನ್ನು ನೆನಪು ಮಾಡಿಕೊಂಡಳು ಸಹನಾ. ಕಾರ್ಯಕ್ರಮವಿದ್ದರೆ ಹೆಣ್ಣುಮಕ್ಕಳು ತವರಿಗೆ ಬರುವುದು ರೂಢಿ. ಆಗ ಈಗಿನಂತೆ ಫೋನ್ ಇರಲಿಲ್ಲ. ಸಂಜೆ ಆರುಗಂಟೆಗೆ ಬರುವ ನೀಲಿ ಬಣ್ಣದ ಬಸ್ಸಿನಲ್ಲಿ ಬಂದಿಳಿಯುವುದು. ಆಗ ಸಣ್ಣವರಾಗಿದ್ದ ತಮ್ಮ ತಂಗಿಯರಿಗೆಲ್ಲ ಅಕ್ಕಂದಿರ ಅತ್ತೆಯಂದಿರ ಬ್ಯಾಗ್ ಎತ್ತಿ ಒಯ್ಯುವುದು, ಮಕ್ಕಳನ್ನು ಎತ್ತಿಕೊಂಡು, ಕೈ ಹಿಡಿದು ಕೊಂಡು ನಡೆಯುವುದೆಂದರೆ ಬಲು ಅಭಿಮಾನದ ಸಂಗತಿ. ಬೆಳ್ಮಣ್ ಗುಡ್ಡದ ತುದಿಯಲ್ಲಿ ನಿಂತರೆ ದೂರದಲ್ಲಿ ಬಸ್ ಬರುವುದು ಕಾಣಿಸುತ್ತದೆ. ಆಗ ಗುಡ್ಡದ ಆಚೆ ಬದಿಗೆ ಇಳಿಜಾರಿನ ಸಪೂರ ದಾರಿಯಲ್ಲಿ ಇಳಿದರೆ ಬಸ್ ಬರುವ ವೇಳೆಗೆ  ಮಾರ್ಗದ ಬದಿಗೆ ತಲುಪಿ ಆಗುತ್ತದೆ. ಎಂದು ನೆನಪಿಸಿಕೊಂಡ ಮಹೇಶ. ನಂತರ ಎಲ್ಲರನ್ನೂ ಕರೆದುಕೊಂಡು ತೋಟದಂಚಿನ ಕಟ್ಟಪ್ಪುಣಿಯಲ್ಲಿ ಸಾಗುವಾಗ ಸಣ್ಣದೊಂದು ದಿಬ್ಬಣದಂತೆಯೇ ತೋರುತ್ತಿತ್ತು ಎಂದರೆ ತಪ್ಪಾಗಲಾರದು ಎಂದು ಸವಿನೆನಪುಗಳನ್ನು ಮೆಲುಕುಹಾಕಿದಳು ಸುಮತಿ.

      ಸಹನಾ ಒಂದೇ ಗಾತ್ರದ ಕಲ್ಲುಗಳನ್ನು ಹೆಕ್ಕಿ ಕಲ್ಲಾಟವಾಡುತ್ತಿದ್ದುದನ್ನು ಮಕ್ಕಳಿಗೆ ತೋರಿಸಿಕೊಟ್ಟಳು. ಅವಳು ಕಲ್ಲಾಟದಲ್ಲಿ ಚತುರೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ವೇಳೆ ಕಳೆಯಲು ಬೆಂಗಳೂರಿನಲ್ಲೂ ಕಲ್ಲಾಟವಾಡುತ್ತಿದ್ದೆ ಎಂದಾಗ ಮಹಾಬಲ "ಹುಟ್ಟು ಗುಣ ಘಟ್ಟಹತ್ತಿದರೂ ಬಿಡದು" ಎಂದು ಛೇಡಿಸಿದ.

     ತಂಗಾಳಿ ಜೋರಾಗಿ ಬೀಸುತ್ತಿತ್ತು. ಸೂರ್ಯಾಸ್ತದ ಸಮಯದಲ್ಲಿ ಬಾನು ರಂಗೇರಿ ನಿಂತಿತ್ತು. ಒಡಹುಟ್ಟಿದವರೆಲ್ಲ ತಮ್ಮತಮ್ಮ ಸವಿನೆನಪುಗಳ ಮೆಲುಕಿನಲ್ಲಿದ್ದರೆ ಮಕ್ಕಳು ಭವಿಷ್ಯದಲ್ಲಿ ಸವಿನೆನಪಿಗಾಗಿ ಇಂದು ಮನಬಂದಂತೆ ಆಡುತ್ತಾ ಕಲ್ಲುಗಳನ್ನು ಹೆಕ್ಕುತ್ತಾ ಆಡುತ್ತಿದ್ದರು.

       ರವಿಯು ಬಾನಂಚಿನಲ್ಲಿ ಮರೆಯಾಗುವ ಮುನ್ನ ಗೂಡುಸೇರುವ ತವಕದಲ್ಲಿದ್ದ ಹಕ್ಕಿಗಳ ಹಿಂಡನ್ನು ಕಂಡು "ಮಕ್ಕಳೇ ಅವುಗಳಂತೆಯೇ ನಾವೂ ನಮ್ಮ ಮನೆ ಸೇರೋಣವೇ?" ಎಂದು ಕೇಳಿದ ಮಹೇಶ. "ಸ್ವಲ್ಪ ಹೊತ್ತು ಮಾವ, ಸ್ವಲ್ಪ ಹೊತ್ತು ಚಿಕ್ಕಪ್ಪ" ಎಂಬ ಉತ್ತರವನ್ನು ಕೇಳಿ "ನಿಮ್ಮಂತೆಯೇ ನಾವೂ ಮಾಡುತ್ತಿದ್ದೆವು" ಎಂದು ಹೇಳುತ್ತಾ ಎಲ್ಲರೂ ಮೆಲ್ಲನೆ ಗುಡ್ಡವನ್ನಿಳಿಯಲು ಆರಂಭಿಸಿದರು.

✍️... ಅನಿತಾ ಜಿ.ಕೆಭಟ್.
14-11-2021. 






.

.

.

.



No comments:

Post a Comment