Sunday, 5 December 2021

ಬಲಗಾಲನಿಡುತ ಬಾ

 


#ಬಲಗಾಲನಿಡುತ ಬಾ

ಕನಸು ಕಂಗಳ ಚೆಲುವೆ
ಬಲಗಾಲನಿಡುತ ಬಾ
ನನ್ನ ಹೃದಯದ ಅರಮನೆಗೆ||
ಮನಸು ನಿನ್ನೊಳು ಬೆರೆತು
ದಿನವೊಂದು ಯುಗವಾಯ್ತು
ಹೊಸ ಹುರುಪು ತುಂಬು ಬಾ ನನಬಾಳಿಗೆ||೧||

ತಾರೆ ಹೊಳಪಿನ ಕಣ್ಣ
ಚಂದ್ರ ಬಿಳುಪಿನ ಬಣ್ಣ
ಕೆಂಪೇರಿದ ಕದಪು ಸನಿಹದಲ್ಲಿ||
ಓರೆ ಕಣ್ಣಿನ ನೋಟ
ಕರದ ಬಿಸುಪಿನ ಹಿಡಿತ
ಒಲವ ಮಳೆಯಾಗುತಿದೆ ಹೃದಯದಲ್ಲಿ||೨||

ನಾನೆಂಬುದನು ಮರೆತು
ನಾವೆಂದು ಬಾಳೋಣ
ಆನಂದದಿಂದ ಈ ಮನೆಯಲಿ||
ಕೂಡಿ ಬಾಳುವ ಹರುಷ
ಕೊಡು ಈಶ ಶತವರುಷ
ಪ್ರೇಮಲತೆ ಚಿಗುರೊಡೆದು ನಳನಳಿಸಲಿ||೩||

✍️... ಅನಿತಾ ಜಿ.ಕೆ.ಭಟ್.
05-12-2021.

ಚಿತ್ರ ಕೃಪೆ: ಸೌರಭ ಬಳಗ




No comments:

Post a Comment