Tuesday, 24 December 2019

ಚಳಿಗಾಲದ ಆರೋಗ್ಯಕ್ಕಾಗಿ ಮನೆಮದ್ದು




      ಚಳಿಗಾಲ ಆರಂಭವಾಗುತ್ತಿದ್ದಂತೆ ಶರೀರಕ್ಕೆ ಕಾಯಿಲೆಗಳು ಲಗ್ಗೆಯಿಡಲು ಆರಂಭಿಸುತ್ತವೆ.ಮಂಜುಮುಸುಕಿದ ವಾತಾವರಣ ,ತುಂತುರುಗೈಯುತ್ತಿರುವ ಇಬ್ಬನಿ ಕಣ್ಮನಗಳಿಗೆ ರಂಗನ್ನೀಯುತ್ತದೆ...ಆದರೆ ದೇಹಕ್ಕೆ  ರೋಗವನ್ನು ಆಹ್ವಾನಿಸುತ್ತದೆ.ರೋಗಬರದಂತೆ ಮುಂಜಾಗ್ರತೆ ಅತ್ಯಗತ್ಯ.ಚಳಿಗಾಲದಲ್ಲಿ ರಾತ್ರಿ ಸಮಯ ದೀರ್ಘವಾಗಿದ್ದು ಹಗಲು ಕಡಿಮೆಯಿರುತ್ತದೆ.ಚಳಿಯಿಂದಾಗ ಏಳಲೂ ಕೂಡ ಔದಾಸೀನ್ಯ ಹೆಚ್ಚು.ಈ ಕಾರಣಗಳಿಗಾಗಿ ಶಾರೀರಿಕ ವ್ಯಾಯಾಮ ಕಡಿಮೆ.ಆಗ ಆರೋಗ್ಯ ಸಮಸ್ಯೆಗಳೂ ಹೆಚ್ಚು.


        ಚಳಿಗಾಲದಲ್ಲಿ ದೇಹದ ಉಷ್ಣತೆ ಕಡಿಮೆಯಾಗುತ್ತದೆ.ವಾತಾವರಣದಲ್ಲಿ ಶುಷ್ಕತೆ ಹೆಚ್ಚಿ ಧೂಳು,ಮಾಲಿನ್ಯ ಅಧಿಕವಿರುತ್ತದೆ ಮತ್ತು ಕೆಲವು ಗಿಡಗಳು ಹೂವರಳುವ ಸಮಯ ದೇಹಕ್ಕೆ ಅಲರ್ಜಿಯನ್ನುಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ದೇಹಕ್ಕೆ ಸಮತೋಲನದ ಆಹಾರ ಅತೀ ಮುಖ್ಯವಾದುದು.ಆಹಾರವನ್ನು ಆಗಿಂದಾಗ್ಗೆ ತಯಾರಿಸಿ ಬಿಸಿಬಿಸಿಯಾಗಿ ಬಳಸಬೇಕು.ಫೈಬರ್, ವಿಟಮಿನ್,ಖನಿಜಾಂಶಗಳು ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.


     ಹಸಿರು ಸೊಪ್ಪುಗಳು ,ನಾರಿನಂಶವಿರುವ ತರಕಾರಿಗಳು,ಈ ಸಮಯದಲ್ಲಿ ದೊರೆಯುವ ಹಣ್ಣುಗಳು ನಿತ್ಯದ ಆಹಾರದಲ್ಲಿರಲಿ.ಬೆಳ್ಳುಳ್ಳಿ, ಶುಂಠಿ,ಲವಂಗ,ಕಾಳುಮೆಣಸು , ನಿಂಬೆಹಣ್ಣು ಹೆಚ್ಚಾಗಿ ಬಳಸಬೇಕು..ಹಣ್ಣುಗಳಲ್ಲಿ ವಿಟಮಿನ್ ಸಿ ಇರುವಂತಹ ಹಣ್ಣುಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಕಿತ್ತಳೆ, ಪೇರಳೆ, ಪಪ್ಪಾಯಿ,ನೆಲ್ಲಿಕಾಯಿ...ಇತ್ಯಾದಿಗಳು ಸೂಕ್ತ.


ಮಕ್ಕಳ ಆರೋಗ್ಯ:-

    ಪುಟ್ಟ ಮಕ್ಕಳಿಗೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಜ್ವರ,ಶೀತ,ಕಫ,ಗಂಪಲು ಕೆರೆತ, ಕೆಮ್ಮು ಇತ್ಯಾದಿ.. ಇದಕ್ಕಾಗಿ ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.

*ಚಳಿಗಾಲ ಆರಂಭವಾಗುತ್ತಿದ್ದಂತೆ ಮಕ್ಕಳ ಸ್ವೆಟರ್,ತಲೆಯ ಸ್ಕಾರ್ಫ್ ಮುಂತಾದ ಚಳಿಯ ದಿರಿಸುಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ ಇಡಬೇಕು.ತುಂಬಾ ಸಮಯದ ಹಿಂದೆ ಮಡಚಿಟ್ಟ ಬಟ್ಟೆಗಳನ್ನು ನೇರವಾಗಿ ಬಳಸಿದರೆ ಮಗುವಿಗೆ ಸೋಂಕುತಗಲುವ ಸಾಧ್ಯತೆಯಿದೆ.

*ನಾಯಿ, ಬೆಕ್ಕು... ಇತ್ಯಾದಿ ಸಾಕುಪ್ರಾಣಿಗಳು ಒಮ್ಮೆ ಮೈಕೊಡವಿದರೆ ಸಹಸ್ರಾರು ಅಲರ್ಜಿಕಾರಕ ಸೂಕ್ಷ್ಮಾಣು ಜೀವಿಗಳು ಗಾಳಿಯಲ್ಲಿ ಹರಡುತ್ತವೆ.ಆದ್ದರಿಂದ ಪುಟ್ಟ ಮಕ್ಕಳನ್ನು ಅವುಗಳಿಂದ ದೂರವಿಡುವುದು ಲೇಸು..ಶೀತ, ಗಂಟಲು ನೋವು, ಕೆಮ್ಮು, ಕಫ ಬಾಧಿಸುತ್ತಿರುವ ಮಕ್ಕಳನ್ನು ಅಗತ್ಯವಾಗಿ ಸಾಕುಪ್ರಾಣಿಗಳ ಸಂಪರ್ಕಕ್ಕೆ ತರದಿರಿ.

*ಆದಷ್ಟು ಬಿಸಿಯಾದ ಆಹಾರ, ಆಗಾಗ ಬಿಸಿನೀರು ಕುಡಿಸುತ್ತಿರಬೇಕು.ಫ್ರಿಡ್ಜ್ನಲ್ಲಿಟ್ಟ ಆಹಾರ ಪದಾರ್ಥಗಳನ್ನು ಬಳಸದಿರಿ.

*ಕುರುಕಲು ತಿಂಡಿಗಳು, ಜಂಕ್ ಫುಡ್, ಐಸ್ ಕ್ರೀಮ್ ಇತ್ಯಾದಿಗಳ ಬಳಕೆಯ ಮೇಲೆ ಹಿಡಿತವಿರಲಿ.

*ಸಂಜೆಯ ಹೊತ್ತು ಮತ್ತು ಬೆಳಗಿನ ಹೊತ್ತು ತಣ್ಣನೆಯ ಗಾಳಿಗೆ ಮಕ್ಕಳು ಮೈಯೊಡ್ಡದಿರುವುದು ಉತ್ತಮ.ಅನಿವಾರ್ಯ ಸಂದರ್ಭಗಳಲ್ಲಿ ಮಕ್ಕಳ ಕಿವಿಗಳನ್ನು ಸ್ಕಾರ್ಫ್ ಬಳಸಿ ಮುಚ್ಚಿ..ತಣ್ಣಗಿನ ಗಾಳಿ ಕಿವಿಗೆ ಸೋಕಿದಾಗ ಗಂಟಲಿನ ಕಿರಿಕಿರಿ,ಶೀತವಾಗುವ ಸಾಧ್ಯತೆ ಇದೆ.

*ರಾತ್ರಿ ಮಲಗುವ ಮುನ್ನ ಮರೆಯದೆ ಸ್ವೆಟರ್ ಹಾಕಿಸಿ.ಅಗತ್ಯವೆಂದಾದರೆ ಕಾಲಿಗೆ ಸಾಕ್ಸ್ ಕೂಡ ಹಾಕಿಸಿ.

*ಶೀತದ ನಿರಂತರ ಕಿರಿಕಿರಿ ಇದ್ದರೆ ನೀರಿಗೆ ಸಣ್ಣ ತುಂಡು ಶುಂಠಿ ಹಾಕಿ ಕುದಿಸಿ ಬಿಸಿ ಬಿಸಿಯಾಗಿ ದಿನಕ್ಕೆ ಮೂರು ಬಾರಿ ಕುಡಿಸಿ.

*ಕಫದ ಕೆಮ್ಮು ಇದ್ದರೆ ನಾಲ್ಕು ದೊಡ್ಡಪತ್ರೆ ಎಲೆಗಳನ್ನು ಸ್ಟವ್ ಮೇಲೆ ಬಾಡಿಸಿಕೊಂಡು ರಸಹಿಂಡಿ ಜೇನುತುಪ್ಪವನ್ನು ಬೆರೆಸಿ ಎರಡು ಚಮಚದಷ್ಟು ದಿನಕ್ಕೆರಡು ಬಾರಿ ಮೂರು ದಿನ ಕುಡಿಸಬಹುದು.(ಒಂದು ವರ್ಷದ ಒಳಗಿನ ಮಗುವಿಗೆ ಒಂದು ಚಮಚದಷ್ಟು ಸಾಕು)

*ತುಳಸಿ, ದೊಡ್ಡಪತ್ರೆ, ಶುಂಠಿಯನ್ನು ಜಜ್ಜಿ ರಸಹಿಂಡಿ ನಿಂಬೆರಸ ಜೇನುತುಪ್ಪ ಮಿಶ್ರಮಾಡಿ ಎರಡು ಚಮಚದಷ್ಟು ದಿನಕ್ಕೆರಡು ಬಾರಿ ಕುಡಿಸುವುದು.(ಒಂದು ವರ್ಷದ ಒಳಗಿನ ಮಗುವಿಗೆ ಒಂದು ಚಮಚದಷ್ಟು ಸಾಕು).

*ಹಾಲಿಗೆ ಅರಿಶಿನ ಹುಡಿ , ಕಲ್ಲುಸಕ್ಕರೆ ಬೆರೆಸಿ ಕುಡಿಸಿದರೆ ಒಣಕೆಮ್ಮು ಶಮನವಾಗುತ್ತದೆ.

*ಕಲ್ಲುಸಕ್ಕರೆಯನ್ನು ಶುಂಠಿ,,ಕಾಳುಮೆಣಸಿನ   ಪುಡಿಯೊಂದಿಗೆ ಪಾಕ ಮಾಡಿ ತಣ್ಣಗಾದ ನಂತರ ನಿಂಬೆರಸ ಹಿಂಡಿ ಗಟ್ಟಿಯಾಗಲು ಬಿಡಿ.ಇದನ್ನು ಅರ್ಧ ಚಮಚದಷ್ಟು ತೆಗೆದುಕೊಂಡು ಬೆಳಿಗ್ಗೆ ರಾತ್ರಿ ನೆಕ್ಕಿದರೆ ಗಂಟಲು ನೋವು, ಕಿರಿಕಿರಿ ಶಾಂತವಾಗುತ್ತದೆ.

*ಒಂದೆರಡು ಲೋಟ ನೀರನ್ನು ಕುದಿಸಿ ಅದಕ್ಕೆ ತುಳಸಿ ದಳ ಅಥವಾ ವಿಕ್ಸ್ ಹಾಕಿ ಹಬೆಯನ್ನು ತೆಗೆದು ಕೊಳ್ಳಬೇಕು . ಕೆಳಗಿಟ್ಟ ಪಾತ್ರೆ ಮುಚ್ಚುವಂತೆ ತಲೆಯಮೇಲೆ ಟವೆಲ್ ಹಾಕಿಕೊಂಡರೆ ಹಬೆ ಹೊರಗೆ ಹೋಗುವುದು ತಪ್ಪುತ್ತದೆ.ದೀರ್ಘವಾದ ಉಸಿರು ತೆಗೆದುಕೊಳ್ಳಲು ಹೇಳಿರಿ.ಈ ರೀತಿ ಮಾಡುವುದರಿಂದ ಮಕ್ಕಳಿಗೆ ಶೀತ ಸೋರುವುದು,ತಲೆಭಾರವಾಗುವುದು ಗಂಟಲಿನ ಸಮಸ್ಯೆ ಗಳು ಶೀಘ್ರವಾಗಿ ಶಮನಗೊಳ್ಳುತ್ತವೆ.

*ಗಂಟಲಿನ ಕಿರಿಕಿರಿ ಆರಂಭವಾಗುತ್ತಿದ್ದಂತೆ ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಗಾರ್ಗಲ್ ಮಾಡಬೇಕು.ಸೋಂಕು ಜಾಸ್ತಿಯಾಗದಂತೆ ತಡೆದು ಪರಿಣಾಮಕಾರಿಯಾಗಿ ಗುಣಮುಖವಾಗುವುದು..

*ಮಕ್ಕಳಿಗೆ ಶೀತವಾದಾಗ ಸೀನುಬಂದರೆ , ಕೆಮ್ಮು ಬಂದರೆ ಟವೆಲ್ ಅಡ್ಡಹಿಡಿಯಲು ಅಭ್ಯಾಸ ಮಾಡಿಸಬೇಕು.ಇಲ್ಲದಿದ್ದರೆ ರೋಗಾಣುಗಳು ಸುತ್ತಮುತ್ತಲಿನವರಿಗೂ ಪಸರಿಸುತ್ತದೆ .ಈ ಟವೆಲ್ ಗಳನ್ನು ಬಿಸಿನೀರಿನಲ್ಲಿ ತೊಳೆದು ಬಿಸಿಲಿಗೆ ಒಣಗಿಸಿ ಇಲ್ಲವೇ ಇಸ್ತ್ರಿ ಮಾಡಿ ಪುನಃ ಬಳಸಬೇಕು.ಇಲ್ಲವೆಂದಾದರೆ ಅದೇ ಟವೆಲ್ ನಲ್ಲಿ ಜೀವಂತವಾಗಿರುವ ಸೂಕ್ಷ್ಮಾಣುಜೀವಿಗಳು ಮತ್ತೆ ಸೋಂಕನ್ನುಂಟುಮಾಡುತ್ತವೆ.


ಹತ್ತಾರು ಮನೆಮದ್ದನ್ನು ಮಾಡಿ ಮಕ್ಕಳ ಆರೋಗ್ಯ ಹಿಡಿತಕ್ಕೆ ಬರದಿದ್ದರೆ ಖಂಡಿತ ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು.

ಚರ್ಮದ ಸಮಸ್ಯೆಗಳು:-

      ಚಳಿಗಾಲದಲ್ಲಿ ವಾತಾವರಣ ಶುಷ್ಕ ವಾಗಿರುವುದರಿಂದ ಚರ್ಮವು ಒಡೆಯುವುದು,ಬಿರಿದಂತಾಗುವುದು ಕಂಡುಬರುತ್ತದೆ.ಇದಕ್ಕೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಸರಳ ಉಪಾಯಗಳು ಇಲ್ಲಿವೆ.

*ಯಥೇಚ್ಛವಾಗಿ ನೀರು ಕುಡಿಯಬೇಕು, ಹಣ್ಣುಗಳು,ಹಸಿರು ತರಕಾರಿಗಳು ಆಹಾರದಲ್ಲಿ ಇರಲಿ.ಪ್ರತೀ ಊಟದ ಮೊದಲ ತುತ್ತಿಗೆ ಒಂದು ಅಥವಾ ಎರಡು ಚಮಚ ತುಪ್ಪವನ್ನು ಬೆರೆಸಿ ಸೇವಿಸಿ.ಇದು ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ..ಹಾಗೂ ಚಳಿಗಾಲದಲ್ಲಿ ಹೆಚ್ಚಾಗಿ ಬಾಧಿಸುವ ಮಂಡಿನೋವು,ಗಂಟುನೋವು, ಸೊಂಟನೋವಿಗೆ ಉಪಶಮನ ನೀಡುತ್ತದೆ.

*ತುಟಿಗಳು ಒಡೆಯುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸ್ವಲ್ಪ ಬೆಣ್ಣೆ,ಹಾಲಿನ ಕೆನೆ,ಲೋಳೆಸರ (ಅಲೊವೆರಾ) ಸವರಿ ಬಿಡಿ.

*ಅತಿಯಾಗಿ ಸಾಬೂನು ಬಳಸುವುದನ್ನು ಕಡಿಮೆ ಮಾಡಿ ಕಡಲೆಹಿಟ್ಟಿನಿಂದ ಮುಖ, ಕೈಕಾಲು ತೊಳೆಯಲು ಆರಂಭಿಸಿ.ಇದರಿಂದ ತೇವಾಂಶ ಕಳೆದುಕೊಳ್ಳುವುದು ಕಡಿಮೆ.

*ಕಾಲಿನ ಹಿಮ್ಮಡಿ ಒಡೆದು ನೋಯುತ್ತಿದ್ದರೆ ರಾತ್ರಿ ಮಲಗುವ ಮುನ್ನ ಚೆನ್ನಾಗಿ ತೊಳೆದು ಸ್ವಚ್ಛ ಗೊಳಿಸಿ ಸ್ವಲ್ಪ ಬೆಣ್ಣೆ ,ತುಪ್ಪ,ಹಾಲಿನ ಕೆನೆ,ಲೋಳೆಸರ (ಅಲೋವೆರಾ) ಸವರಿ ಸ್ವಲ್ಪ ಹೊತ್ತು ಪೃಥ್ವಿ ಮುದ್ರೆ,ವರುಣ ಮುದ್ರೆ,ಪ್ರಾಣ ಮುದ್ರೆಗಳನ್ನು  ಅಭ್ಯಾಸ ಮಾಡಿ.ಕೆಲವೇ ದಿನಗಳಲ್ಲಿ ಬಿರುಕುಗಳು ಕೂಡಿಕೊಳ್ಳುತ್ತವೆ..

ತಲೆಹೊಟ್ಟು ನಿವಾರಣೆ:-

     ಚಳಿಗಾಲದಲ್ಲಿ ತಲೆಹೊಟ್ಟು ಏಳುವುದು ಹೆಚ್ಚಿನವರು ಎದುರಿಸುವ ಸಾಮಾನ್ಯವಾದ ತೊಂದರೆ.ಇದಕ್ಕಾಗಿ ಕೆಲವು ಪರಿಹಾರೋಪಾಯಗಳು ..

*ವಾರಕ್ಕೆರಡು ಬಾರಿ ತಲೆಗೆ ತೈಲವನ್ನು ಧಾರಾಳವಾಗಿ ಹಾಕಿ ಒಂದು ಗಂಟೆ ಬಿಟ್ಟು ಅಲೋವೆರಾ, ಕಡ್ಲೆ ಹುಡಿ ಬಳಸಿ ತಲೆಗೆ ಸ್ನಾನ ಮಾಡಿ.

*ವಾರಕ್ಕೊಮ್ಮೆ ತಲೆಗೆ ದಾಸವಾಳದ ಎಲೆ, ಹೂವು,ಅಲೋವೆರಾ,ಬಸಳೆ ಎಲೆ, ಭೃಂಗರಾಜ,ಮದುರಂಗಿ ಎಲೆಗಳ ಪೇಸ್ಟ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಆದಷ್ಟು ಸಾಬೂನು ಕಡಿಮೆ ಬಳಸಿ ಕಡಲೆ ಹಿಟ್ಟು ಬಳಸಿ ತಲೆಗೆ ಸ್ನಾನ ಮಾಡಿ..ಇದರಿಂದ ತಲೆಹೊಟ್ಟು ನಿವಾರಣೆ,ಕಣ್ಣುರಿ ಶಮನ, ಕೂದಲುದುರುವಿಕೆ ನಿಯಂತ್ರಣಕ್ಕೆ ಬರುತ್ತದೆ.

*ಯಥೇಚ್ಛವಾಗಿ ನೀರು, ಪೌಷ್ಟಿಕಾಂಶ ಭರಿತ ಆಹಾರಗಳು ನಿಮ್ಮ ಊಟದಲ್ಲಿರಲಿ.

*ಪೃಥ್ವಿ ಮುದ್ರೆ, ವರುಣ ಮುದ್ರೆ ತಲೆಹೊಟ್ಟು ನಿವಾರಣೆಗೆ, ಕೂದಲುದುರುವಿಕೆ ನಿಯಂತ್ರಣಕ್ಕೆ ಸಹಕಾರಿ.

ಶೀತ, ಅಸ್ತಮಾ ಸಮಸ್ಯೆಗಳು:-


        ಅಸ್ತಮಾ,ಅಲರ್ಜಿಯಂತಹ ಸಮಸ್ಯೆಗಳು ಬಂದಮೇಲೆ ಗುಣಪಡಿಸುವುದಕ್ಕಿಂತ ಬರುವ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.ಸಾಮಾನ್ಯವಾಗಿ ಶೀತಪ್ರವೃತ್ತಿಯವರು ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

*ಚಳಿಗಾಲ ಆರಂಭವಾಗುವ ಮುನ್ನವೇ ಸ್ವೆಟರ್,ಕಾಲುಚೀಲ, ಸ್ಕಾರ್ಫ್ , ಟವೆಲ್..
ಇತ್ಯಾದಿಗಳು ತೊಳೆದು ಬಿಸಿಲಿನಲ್ಲಿ ಒಣಗಿಸಿ ಇಡಬೇಕು.. ಹಳೆಯದನ್ನು ಸೀದಾ ತೆಗೆದು ಬಳಸಿದರೆ ಅದರಿಂದಲೇ ಅಲರ್ಜಿ ಉಂಟಾಗುವುದು.

*ಬೆಳಗಿನ ಮತ್ತು ಸಂಜೆಯ ತಂಪುಹವೆಯಲ್ಲಿ ಓಡಾಡುವುದನ್ನು ಕಡಿಮೆಮಾಡಿ.ಹಗಲು ಬಿಸಿಲಿಗೆ ಮೈಯೊಡ್ಡಬಹುದು.ಊಟದ ಕೊನೆಯಲ್ಲಿ ನಿಂಬೆಹುಳಿ, ನೆಲ್ಲಿಕಾಯಿ, ಶುಂಠಿ, ಬೆಳ್ಳುಳ್ಳಿ ಮಿಶ್ರಮಾಡಿ ತಯಾರಿಸಿದ ಉಪ್ಪಿನಕಾಯಿ  ಬಳಸಬಹುದು..

*ಅಸ್ತಮಾಕ್ಕೆ ಬಳಸುವ ಇನ್ಹೇಲರ್, ಔಷಧಿಗಳನ್ನು ಮೊದಲೇ ತಂದಿರಿಸಿಕೊಳ್ಳಿ.ನಿಯಮಿತವಾಗಿ ಸೇವಿಸುವ ಔಷಧಿಗಳನ್ನು ಮರೆಯದೆ ತೆಗೆದುಕೊಳ್ಳಿ.

*ಬೆಳಗ್ಗೆ ಸಂಜೆ ಉಗುರುಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗಲ್ ಮಾಡುವುದು,ಕುದಿಸಿದ ನೀರಿಗೆ ವಿಕ್ಸ್/ನೀಲಗಿರಿ ತೈಲ ಬೆರೆಸಿ ಹಬೆ ತೆಗೆದುಕೊಳ್ಳುವುದು ಮಾಡುತ್ತಿರುವುದು.. ಕಡ್ಡಾಯವಾಗಿ ಬಿಸಿನೀರನ್ನೇ ಕುಡಿಯಿರಿ.ಸ್ನಾನಕ್ಕೂ ಬಿಸಿನೀರನ್ನೇ ಬಳಸಿ..

*ಊಟವಾದ ಬಳಿಕ ಕೂಡಲೇ ಮಲಗದೆ ಸ್ವಲ್ಪ ಹೊತ್ತು ಮನೆಯೊಳಗೆ ನಡೆದಾಡುವುದು.ಊಟಕ್ಕೂ ಮಲಗುವ ಸಮಯಕ್ಕೂ ಎರಡೂವರೆ ಗಂಟಗಳ ಅಂತರವಿರಲಿ.

*ಯೋಗಾಸನ, ಪ್ರಾಣಾಯಾಮ ನಿತ್ಯವೂ ರೂಢಿಸಿಕೊಳ್ಳಿ.ಸೂರ್ಯಮುದ್ರೆ,ಶಂಖಮುದ್ರೆ,ಲಿಂಗಮುದ್ರೆಗಳು ಶೀತ, ಅಸ್ತಮಾ ಸಮಸ್ಯೆಗಳ ಹತೋಟಿಗೆ ಸಹಕಾರಿ.

*ನೀರಿಗೆ ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಕುದಿಸಿ..ಅದೇ ಬಿಸಿನೀರನ್ನೇ ಕುಡಿಯುತ್ತಿರುವುದು.. ಸೋಂಕು ತಗಲುವುದನ್ನು ಕಡಿಮೆಮಾಡುತ್ತದೆ.

*ನಾಲ್ಕು ಲೋಟ ನೀರಿಗೆ ಏಳೆಂಟು ಕಾಳುಮೆಣಸು,ಒಂದು ಚಮಚ ಅರಿಶಿಣ ಪುಡಿ, ಸ್ವಲ್ಪ ಬೆಲ್ಲ/ಕಲ್ಲುಸಕ್ಕರೆ, ಹಾಕಿ ಚೆನ್ನಾಗಿ ಕುದಿಸಿ .ಆರಿದ ನಂತರ ಅರ್ಧ ಲೋಟ ಈ ಕಷಾಯಕ್ಕೆ ಒಂದು ಚಮಚ ಜೇನು ತುಪ್ಪ,ಒಂದುಚಮಚ ನಿಂಬೆರಸ ಹಿಂಡಿ ದಿನಕ್ಕೆರಡು ಬಾರಿ ಸೇವಿಸಿ.

*ಗಂಟಲು ಕೆರೆತವಿದ್ದರೆ ಒಂದು ತುಂಡು ಶುಂಠಿ, ಎರಡು ಕಾಳುಮೆಣಸು, ಕಲ್ಲುಪ್ಪು, ಕಾಮಕಸ್ತೂರಿ ಎಲೆ,ತುಳಸಿ ಎಲೆ, ದೊಡ್ಡ ಪತ್ರೆ ಎಲೆಗಳನ್ನು ಜೊತೆಯಾಗಿ ಮಡಚಿ ಬಾಯೊಳಗಿಟ್ಟುಕೊಂಡು ನಿಧಾನವಾಗಿ ರಸಸೇವಿಸುತ್ತಿರಿ.. ಉಪಶಮನಕ್ಕೆ ಸಹಕಾರಿ.

*ಅಲರ್ಜಿಯಾಗುವಂತಹ ಧೂಳು, ಆಹಾರ ಪದಾರ್ಥಗಳು, ಹೂವಿನ ಪರಿಮಳ,ಘಾಟುಗಳು,ಸಾಕುಪ್ರಾಣಿಗಳ ಒಡನಾಟದಿಂದ ದೂರವಿರಿ.

*ಫ್ರಿಡ್ಜ್ ನಲ್ಲಿ ಇರಿಸಿದ ಆಹಾರ ಪದಾರ್ಥಗಳನ್ನು ಬಳಸದೆ ಬಿಸಿಯಾದುದನ್ನೇ ಬಳಸಿ.ರಾತ್ರಿ ಮಲಗುವ ಮುನ್ನ ಬೆಚ್ಚನೆ ಸ್ವೆಟರ್ ಅಗತ್ಯವಿದ್ದರೆ ಕಾಲುಚೀಲವನ್ನು ಹಾಕಿಕೊಳ್ಳಿ.


ಹಲವಾರು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿಯೂ ಅನಾರೋಗ್ಯ ಕಾಡಿದರೆ ಕೂಡಲೇ ತಜ್ಞವೈದ್ಯರನ್ನು ಭೇಟಿಮಾಡಿ.


ಇನ್ನಿತರ ತೊಂದರೆಗಳು:-

     ಚಳಿಗಾಲದಲ್ಲಿ ಹೃದಯ ಕಾಯಿಲೆ ಇರುವವರು ಕೂಡ ಜಾಗೃತರಾಗಿರಬೇಕು.ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಆಗುವ ಸಂಭವ ಹೆಚ್ಚು.ಮುಂಜಾನೆಯ ಚಳಿಗೆ ರಕ್ತನಾಳಗಳು ಸಂಕುಚಿತಗೊಂಡು ಹೃದಯ ಸ್ತಂಭನವಾಗುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಬೇಕು..ಸರಿಯಾದ ಸಮಯಕ್ಕೆ ಔಷಧ ಸೇವಿಸಿ ,ದೇಹದ ಉಷ್ಣತೆ ಕಾಪಾಡುವಂತಹ ಉಡುಪುಗಳನ್ನು ಧರಿಸಿ..

     ಕೆಲವು ಹೆಣ್ಮಕ್ಕಳಲ್ಲಿ ಚಳಿಗಾಲದಲ್ಲಿ ಒಂದು ತೆರನಾದ ಡಿಪ್ರೆಶನ್,ಆತಂಕ ಕಾಡುವುದಿದೆ.ಕುಟುಂಬ ಅಂತಹ ಸಂಗತಿಯನ್ನು ಅರಿತು ನಿನ್ನೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಿ ಸಾಂತ್ವನ ಹೇಳಬೇಕು.


      ಚಳಿಗಾಲದಲ್ಲಿ ಹೊಟ್ಟೆನೋವು, ಬೇಧಿ ಇತ್ಯಾದಿಗಳು ಕಾಣಿಸಿಕೊಳ್ಳುವುದು ಹೆಚ್ಚು.ಆಹಾರಮೇಲೆ ನಿಗಾ ಇರಲಿ.ದೇಹದ ಉಷ್ಣತೆಗಿಂತ ಅಧಿಕ ಉಷ್ಣತೆಯಿರುವ ಆಹಾರವನ್ನು ಸೇವಿಸಿ.ಚಳಿಗಾಲದಲ್ಲಿ ಹಸಿವೆ ಹೆಚ್ಚು.ಹಾಗೆಂದು ಹೆಚ್ಚು ಆಹಾರ ಸೇವಿಸಿದರೆ ಅನಾರೋಗ್ಯಕ್ಕೆ ಆಹ್ವಾನವಿತ್ತಂತೆ.ನಿಯಮಿತ ಆಹಾರ ..ಜೊತೆಗೆ ನಿಯಮಿತ ನಡಿಗೆ, ವ್ಯಾಯಾಮ ಕೂಡಾ ಅವಶ್ಯಕ.


ಪ್ರಾದೇಶಿಕ ಆಹಾರ:-

     ಆಯಾಯಾ ಋತುಗಳಿಗೆ ಅನುಗುಣವಾಗಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಆಹಾರ ಪದ್ಧತಿಯು ನಮ್ಮ ಹಿರಿಯರಿಂದಲೇ ಬಂದಿರುತ್ತದೆ.ಇದರ ಹಿನ್ನೆಲೆಯನ್ನು ಅರಿತು ಅಳವಡಿಸಿಕೊಳ್ಳುವುದು ಸೂಕ್ತ.ನಾವು ಕರಾವಳಿಯವರು..ಇಲ್ಲಿ ನಮ್ಮ ಚಳಿಗಾಲದಲ್ಲಿ ಕೆಲವು ಗಿಡಗಳ ಎಳೆಯ ಕುಡಿಗಳನ್ನು ಕೊಯ್ದು ಚಟ್ನಿ,ತಂಬುಳಿ ಮಾಡುವುದು ರೂಢಿ ..

     ಮಾವಿನ ಕುಡಿ,ಚೇರೆಕುಡಿ ಒಂದೇ ಒಂದು,ಪೇರಳೆಕುಡಿ,ನೆಕ್ಕರಿಕನ ಕುಡಿ,ಹೊನಗೊನ್ನೆ ಕುಡಿ,ಹುಳಿಗರಗನ ಕುಡಿ ನೆಲನೆಕ್ಕರಿಕನ ಕುಡಿ, ಕುಂಟಾಲ ಕುಡಿ,ಎಂಜಿರ ಕೊಡಿ....ಇನ್ನೂ ಹೀಗೇ ಔಷಧೀಯ ಗುಣವುಳ್ಳ ಹಲವಾರು ಕುಡಿಗಳನ್ನು ಕೊಯ್ದು ತಂದು ಚೆನ್ನಾಗಿ ತೊಳೆದು ಬೇಯಿಸಿ ತೆಂಗಿನ ತುರಿಯೊಂದಿಗೆ ರುಬ್ಬಿ ಮಜ್ಜಿಗೆ ಬೆರೆಸಿ ತಂಬುಳಿ ತಯಾರಿಸುತ್ತಾರೆ.ಹುರಿದ ಮೆಣಸು,ಹುಳಿಯೊಂದಿಗೆ ಗಟ್ಟಿಯಾಗಿ ರುಬ್ಬಿದರೆ ಚಟ್ನಿ ತಯಾರು..ಬಿಸಿ ಬಿಸಿ ಕುಚ್ಚಿಲಕ್ಕಿ ಅನ್ನ/ಗಂಜಿಯೊಂದಿಗೆ ಕುಡಿ ಚಟ್ನಿ/ತಂಬುಳಿ ಸವಿಯುವುದು ಕರಾವಳಿಯ ಚಳಿಗಾಲದ ವಿಶೇಷವಾದ ಆಹಾರ ಪದ್ಧತಿ.


      ಚಳಿಗಾಲದಲ್ಲಿ ಬರಬಹುದಾದ ಸಮಸ್ಯೆಗಳಿಗೆ ಎಚ್ಚೆತ್ತುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳೋಣ .. ಕುಟುಂಬದ ಸದಸ್ಯರ ಆರೋಗ್ಯದ ಗುಟ್ಟು ಕಾಳಜಿವಹಿಸುವ ಗೃಹಿಣಿಯ ಕೈಯಲ್ಲಿದೆ ..ಚಳಿಗಾಲವನ್ನು ಕುಟುಂಬದ ಸದಸ್ಯರೊಂದಿಗೆ ಆನಂದಿಸಿ...


✍️... ಅನಿತಾ ಜಿ.ಕೆ.ಭಟ್.
25-12-2019.





ಗತವೈಭವ



ಕಳೆದುಹೋದ ಕಾಡಬದುಕು
ಮರಳಿ ನನಗೆ ದೊರೆವುದೇ
ಎಳೆಯ ಬಿದಿರಮೆಳೆಯ ಹೊಕ್ಕು
ಕೊರಳನೆತ್ತಿ ಸೊಪ್ಪ ಮುರಿವೆನೆ...||

ಮೋಸದಲ್ಲಿ ಮನುಜನೆನ್ನ
ಹಿಡಿದು ಕೂಡಿಹಾಕಿಹ
ಖಾಸಗಿಯ ಬದುಕು ಕಸಿದು
ಬಿಡದೆ ಅಂಕುಶವ ತುರುಕುವ...||

ನೀರಿನಾಟದಲ್ಲಿ ಲಲ್ಲೆಗೆರೆದ
ನೀರೆ ನನ್ನ ನಲ್ಲೆಯು
ಎಲ್ಲಮರೆತು ಇಲ್ಲಿಯಿರುವೆ
ಮಲ್ಲನಿಗೆ ಸಲಿಲವೆರಚುತ...||

ಹಬ್ಬಿನಿಂತ ಶುದ್ಧಸರಸಿನಲ್ಲಿ
ವಾರಕೊಂದೆ ವಿಹಾರವು
ಕೊಬ್ಬಿನಿಂತ ಮಲ್ಲನಿವನು
ಕರೆದುಕೊಂಡು ಹೊರಟನು...||

ಸ್ಪಟಿಕ ಜಲಧಿ ಮುತ್ತ ಹನಿಯು
ಸಿಗದು ಸ್ವಚ್ಛಂದ ವೈಭವ
ಕಟುಕ ನರನೇ ಕೊಡಿಸುಯೆನಗೆ
ಖಗಮೃಗಗಳ ಜೊತೆಗೆ ವಾಸವ...||

✍️... ಅನಿತಾ ಜಿ.ಕೆ.ಭಟ್.
25-12-2019.

Wednesday, 18 December 2019

ಹೊರಟೆಯೇಕೆ ನೇಸರ



 ಹೊರಟೆಯೇಕೆ ನೇಸರ
ಕೈಯ ತೊಳೆದು ಕಡಲಲಿ
ಗೀಚಿ ಹೋದೆ ಸುಂದರ
ವರ್ಣ ಚಿತ್ರವ ಅಲೆಯಲಿ...

ಬಾನಿನಂಗಳ ಬಂಗಾರದ
ಪರದೆಯಾಗಿಸಿ ಅಂಚಲಿ
ಜಲಧಿ ತಾ ಹಿಡಿದು ನಿಂತಿದೆ
ನಿನ್ನ ಕಿರಣಕೆ ಅಂಜಲಿ....

ಯೋಗಿಮಾನವ ತನ್ನ ದೇಹವ
ಊರಿ ತೀರದಿ ಕರದಲಿ
ಭೋಗಿಯಾಗಿಹ ಭೂರಿಯುಂಡಿಹ
ನೆರಳು ಬಿಡದೆ ಜೊತೆಯಲಿ...

ಹೊಸದು ಅಲೆಯೂ ಎದ್ದು ಬರುತಿದೆ
ಹೊತ್ತು ಜೊಳ್ಳನು ತನ್ನಲಿ
ಹಳೆಯ ಕೊಬ್ಬನು ಕಳೆಯಬೇಕಿದೆ
ಮತ್ತೆ ಬಾಳಲು ಸುಖದಲಿ...

ಕ್ಷಣದಿ ರವಿಯು ನಿದಿರೆಗೈಯುವ
ಪಡುಗಡಲ ಕೊನೆಯಲಿ
ಕತ್ತಲಲ್ಲೂ ಬಾಳಬೇಕು ನವ
ಭರವಸೆಯ ಬೆಳಕಲಿ...

✍️... ಅನಿತಾ ಜಿ.ಕೆ.ಭಟ್.
15-12-2019.

ನೀ... ಮಲಗು ಮಗುವೇ...





ನೀ ಮಲಗು ಮಗುವೇ..



ಕಣ್ಣರಳಿಸಿ ನೋಡದಿರು
ಕಣ್ಣಿನಲೆ ಕರೆಯದಿರು
ನಿದ್ದೆ ತೂಗುವ ಹೊತ್ತು..ನೀ ಮಲಗು ಮಗುವೇ...||


ಹೊತ್ತು ಮೂಡುವ ಮುನ್ನ
ಕಿತ್ತು ನಿದಿರೆಯ ನಿನ್ನ
ಎತ್ತಿ ಬಂದಿಹೆ ಮುತ್ತು..ನೀ ಮಲಗು ಮಗುವೇ...||

ಸುತ್ತಲಿಹ ಬೊಂಬೆಗಳು
ಕತ್ತಲೆಯ ಬಾಳುವೆಗೆ
ಬೆಳಕ ನೀಡುವ ಹೊತ್ತು..ನೀ ಮಲಗು ಮಗುವೇ...||

ಕಷ್ಟದ ದುಡಿಮೆಯಿದು
ಇಷ್ಟದಿ ನಡೆಸುತಿರೆ
ಲಾಭ ನಷ್ಟದ ತುತ್ತು...ನೀ ಮಲಗು ಮಗುವೇ...||

ಹಾಡುಬೇಡದ ಗೊಂಬೆ
ನಡುವೆ ಹಾಲುಣಿಸಿ ಅಬ್ಬೆ
ಕಾಡಿಸದೆ ಕಿಂಚಿತ್ತೂ....ನೀ ಮಲಗು ಮಗುವೇ...||

ವಿದ್ಯೆ ಕಲಿಯುವ ಮನಸು
ಸಾಧಿಸುತ ಸವಿಗನಸು
ಮೆರೆಯಬೇಕೆನ್ನ ಕೂಸು...ನೀ ಮಲಗು ಮಗುವೇ...||

✍️... ಅನಿತಾ ಜಿ.ಕೆ.ಭಟ್.
07-12-2019.
ಚಿತ್ರ ಕೃಪೆ ಕನ್ನಡ ಕಥಾಗುಚ್ಛ.
ಈ ಹಾಡನ್ನು ಯೂಟ್ಯೂಬ್ ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿ..https://youtu.be/dsdRNLxbo8w

ತಾಯ್ತನ... ಸುಂದರ ಅನುಭೂತಿ




      ತಾಯ್ತನ....ಅನ್ನುವ ಪದದಲ್ಲೇ ಏನೋ ಹಿತವಿದೆ...ಮಮತೆಯ ಬಂಧನವಿದೆ... ವಾತ್ಸಲ್ಯದ ಒರತೆಯಿದೆ...ಪ್ರೀತಿಯ ಅಪ್ಪುಗೆಯಿದೆ... ತಾಯ್ತನವನ್ನು ವರ್ಣಿಸಲು ಪದಗಳೇ ಸಾಲದು...ಪದಗಳಿಗೆ ನಿಲುಕದ ಸುಂದರ ಅನುಭೂತಿಯೇ ತಾಯ್ತನ.ಹೆಣ್ಣೊಬ್ಬಳು ಮದುವೆಯಾಗಿ ತಾಯಿಯಾದರೆ ಆಕೆಯ ಜನುಮ ಸಾರ್ಥಕ ಎಂಬ ಭಾವ ಜನರಲ್ಲಿ ಮನೆಮಾಡಿದೆ.



  ಮನೆಯ ಮುದ್ದು ಮಗಳಾಗಿ ಬೆಳೆದ ಹೆಣ್ಣಮಗಳಿಗೆ ಹದಿಹರೆಯ ಬರುತ್ತಿದ್ದಂತೆಯೇ ಅಮ್ಮ ಒಂದೊಂದೇ ಜವಾಬ್ದಾರಿಗಳನ್ನು ಕಲಿಸುತ್ತಾ ಹೋಗುತ್ತಾಳೆ.ಉದಾಸೀನ ಮಾಡಿದ ಮಗಳಿಗೆ ಗಂಡನ ಮನೆಗೆ ಹೋದಾಗ ನಿನಗೆ ಎಲ್ಲ ಅರಿವಾಗುತ್ತದೆ ಎಂಬ ಸಿದ್ಧ ಉತ್ತರ ಅಮ್ಮನಿಂದ ಸಿಗುವುದು ಸಾಮಾನ್ಯ. ಹದಿಹರೆಯ ದಾಟುತ್ತಿದ್ದಂತೆ ಹೆತ್ತವರಿಗೆ ಮಗಳ ಕಲ್ಯಾಣದ ಯೋಚನೆ ಆರಂಭವಾಗುತ್ತದೆ.ಆದಷ್ಟು ಬೇಗ ಕಂಕಣಭಾಗ್ಯ ಕೂಡಿಬಂದರೆ ಒಳಿತು ಎಂದು  ತಾಯಿಯಾದವಳ ಬಯಕೆಯಾಗಿರುತ್ತದೆ.


   ವಿವಾಹವಾದ ಬಳಿಕ ಪತಿಯ ಗೃಹಕ್ಕೆ ಕಾಲಿಡುವ ಹೆಣ್ಣು ಹೊಸ ವಾತಾವರಣ, ಬಾಂಧವ್ಯ, ಜವಾಬ್ದಾರಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲು ನಿಧಾನವಾಗಿ ಕಲಿಯುತ್ತಾ ಹೋಗುತ್ತಾಳೆ.ಅಪರಿಚಿತರಾಗಿದ್ದ ಜನರನ್ನು ತನ್ನ ಕುಟುಂಬ ಎಂದು ಅರಿತು ಆದರಿಸುತ್ತಾಳೆ.ಗಂಡನ ಪ್ರೀತಿಯಿಂದ, ಸಾಂಗತ್ಯದಿಂದ ಹೆತ್ತವರನ್ನು ಬಿಟ್ಟು ಬಾಳುತ್ತಾಳೆ.ಅಂತಹ ಸಂದರ್ಭದಲ್ಲಿ ತಾನು ತಾಯಿಯಾಗುವ ವಿಷಯ ತಿಳಿದಾಗ ಹರುಷಗೊಂಡು ಮೆಲ್ಲನೆ ತನ್ನ ಉದರವನ್ನು ನೇವರಿಸಿ ಹೆಮ್ಮೆಪಟ್ಟುಕೊಳ್ಳುತ್ತಾಳೆ.

#ಅಮ್ಮನ_ಪದವಿ

ಅಂದು ನನ್ನ ಬಾಳಿನ ಶುಭ ಬೆಳಗು
ಉಸುರಿತ್ತು ನನ್ನೊಳಗೆ ನಿನ್ನಿರುವು
ಅಮೃತ ಘುಳಿಗೆಯದು ಇನಿಯನಪ್ಪುಗೆ
ಕುಡಿಯೊಡೆದು ಚಿಗುರಿತ್ತು ನಮ್ಮೊಲವು...

ಸವಿಯಾದ ನುಡಿಕೇಳಿ ನೂರೊಂದು
ಮುತ್ತು ಕೆಂಪೇರಿತ್ತು ಕೆನ್ನೆಯ ರಂಗು
ಮಡಿಲಲ್ಲಿ ಮೂಡಿದ ಹೊನ್ನೊಂದು
ಕರುಣಿಸಿದೆ ಅಮ್ಮನ ಪದವಿಯೆನಗೆ...

                  ✍️... ಅನಿತಾ ಜಿ.ಕೆ.ಭಟ್.


   ಅಂದಿನಿಂದ ಅವಳ ಆದ್ಯತೆಯೇ ಬೇರೆ..ಕನವರಿಕೆಗಳೇ ಬೇರೆ... ಮೊದಲು ತನ್ನ ಅಂದಚಂದವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದವಳು ಈಗ...ಪ್ರತಿಯೊಂದರಲ್ಲೂ ಈ ಭುವಿಗೆ ಕಾಲಿಡುವ ಪುಟ್ಟ ಕಂದಮ್ಮನ ಒಳಿತನ್ನೇ ಬಯಸುತ್ತಾಳೆ.ಬೇಕರಿತಿಂಡಿ, ಕುರುಕಲು ತಿಂಡಿ ಪೋತೆಯಾದವಳು ಅದೆಲ್ಲವನ್ನೂ ಮಗುವಿನ ಹಿತದೃಷ್ಟಿಯಿಂದ ತ್ಯಜಿಸಿ ಸಾತ್ವಿಕ ಆಹಾರದತ್ತ.. ಪೌಷ್ಟಿಕಾಂಶ ಭರಿತ ಮೊಳಕೆಕಾಳುಗಳು , ಹಣ್ಣುಹಂಪಲು, ಹಸಿರು ತರಕಾರಿಗಳತ್ತ ಅವಳ ಚಿತ್ತ...


ಮೊದಲ ಮೂರು ತಿಂಗಳಲ್ಲಿ ಅವಳ ಸಂಕಟಗಳು ವಿಪರೀತ..ಆಹಾರ ಸೇರುವುದು ಕಡಿಮೆ..ಆದರೂ ನಿಲ್ಲದ ವಾಂತಿಯ ಉಪಟಳ..ಹೊಟ್ಟೆಯಲಿರುವ ಮಗುವಿಗೆ ಸಿಗುವುದೆಷ್ಟೋ... ಆಚೆ ಬಚ್ಚಲಿಗೆ ಆಹಾರವಾಗುವುದೆಷ್ಟೋ...ಆದರೂ ಕಂದನಿಗೋಸ್ಕರ ತಿನ್ನುವ ಪ್ರಯತ್ನ ಅವಳದು.ಗಂಡನಾದವನೂ ಕೂಡ ಇಂತಹ ಸಂದರ್ಭದಲ್ಲಿ ಆಕೆಗೆ ಜೊತೆಯಾಗುತ್ತಾನೆ.ಅಡುಗೆಗೆ ನೆರವಾಗುತ್ತಾ ,ಬಟ್ಟೆಯೊಗೆಯುತ್ತಾ,ನೆಲವೊರೆಸುತ್ತಾ ಸಹಕರಿಸಿದರೆ ಆಕೆಗೂ ಅನುಕೂಲ,ಪತಿಯ ಮೇಲೆ ಒಂದು ಹಿಡಿ ಒಲವು ಹೆಚ್ಚಾಗುವುದು...ಆಕೆಯ ಕಷ್ಟದಲ್ಲಿ ಕೆಲಸಗಳಿಗೆ ನೆರವಾಗುತ್ತಾ ತಂದೆಯಾಗುವ ಸಂತಸದಲ್ಲಿ ಸಂಭ್ರಮಿಸುತ್ತಾನೆ..

  ಮಗಳು ತಾಯಿಯಾಗುತ್ತಾಳೆಂದು ತಿಳಿದಾಗ ಅಮ್ಮನಿಗೆ ಆಗುವ ಖುಷಿ ಹೇಳತೀರದು.ಬಂಧುಗಳು ಸಿಕ್ಕಾಗ ಮೊದಲು ತಿಳಿಸುವುದು ಮಗಳು ತಾಯಿಯಾಗುತ್ತಿದ್ದಾಳೆ ಎಂದು..ಅದೇನು..ಆನಂದ ...ಸಂಭ್ರಮ ಆಕೆಯಲ್ಲಿ..


  ವೈದ್ಯರು ಹೇಳಿದ ಎಲ್ಲಾ ಔಷಧಿಗಳನ್ನು ತಂದುಕೊಡುವ ಪತಿ ನಿತ್ಯವೂ ಪತ್ನಿಯ ಮಡಿಲಿಗೊರಗಿ ಮಗುವಿನ ಬೆಳವಣಿಗೆಯನ್ನು ಗಮನಿಸುತ್ತಾ ...ತಾನೂ ಮುದ್ದಿಸುತ್ತಾನೆ.. ಉದರಕ್ಕೆ ತುಸು ನೋವೂ ಆಗದಂತೆ  ಜಾಗರೂಕತೆಯಿಂದ ಪತ್ನಿಯನ್ನು ತಬ್ಬಿಕೊಳ್ಳುತ್ತಾನೆ...ಪತಿಯ ಆಲಿಂಗನದಲ್ಲಿ ತನ್ನೊಡಲ ಕಂದಮ್ಮನಿಂದಾಗಿ ಅನುಭವಿಸುವ ಸಂಕಟವನ್ನು ಮರೆಯುತ್ತಾಳೆ ಹೆಣ್ಣು.


    ಮಗುವಿನ ಕಾಲೊದೆತದಿಂದ ಉಂಟಾಗುವ ನೋವಿನಲ್ಲೂ ಸುಖವನ್ನು ಕಾಣುವವಳು ತಾಯಿ.ಆ ನೋವಿನಲ್ಲಿ ಮೆಲ್ಲನೆ ಪತ್ನಿಯ ಉದರವ ನೇವರಿಸಿ ಸಾಂತ್ವನವ ನೀಡುವವನು ತಂದೆ.ತನ್ನ ಮಗುವಿಗೋಸ್ಕರ ಉತ್ತಮವಾದ ಪುಸ್ತಕಗಳನ್ನು ಓದುತ್ತಾ,ಆಹ್ಲಾದದಾಯಕ ವಿಷಯಗಳನ್ನು ಚಿಂತಿಸುತ್ತಾ, ಭಜನೆ,ಸ್ತೋತ್ರ ಪಠಣಗಳಲ್ಲಿ ತೊಡಗಿಸಿಕೊಳ್ಳುತ್ತಾಳೆ ತಾಯಿ.ಹಾಲು,ತುಪ್ಪ,ಮೊಸರು, ಬೆಣ್ಣೆ,ಮೊಳಕೆಕಾಳುಗಳು,ಒಣಹಸಿ ಹಣ್ಣುಗಳನ್ನು ತಿಂದ ಗರ್ಭಿಣಿಯು ಮೈದುಂಬಿಕೊಳ್ಳುತ್ತಾಳೆ .ಇಂತಹ ಹೊತ್ತಲ್ಲಿ ಆಕೆ ಖಂಡಿತ ತನ್ನ ವೈಯಕ್ತಿಕ ದೇಹ ಸೌಂದರ್ಯವನ್ನು  ಕಾಪಾಡಿಕೊಳ್ಳುವ ಬಗ್ಗೆ ಚಿಂತಿಸುವುದಿಲ್ಲ.ಸಂಭ್ರಮದ ಸೀಮಂತ ಮಾಡಿ ಮಡದಿಯ ಬಯಕೆಗಳನ್ನು ಈಡೇರಿಸುವ ಪತಿ,ಸೊಸೆಯ ಮಡಿಲು ತುಂಬುವ ಮನೆಯವರು..

  ಸೀಮಂತ ಮಾಡಿ ತವರಿಗೆ ಹೊರಡುವ ಹೆಣ್ಣು ಗಂಡನ ಪ್ರೀತಿಯನ್ನು ಕನವರಿಸುತ್ತಾಳೆ..ತಾಯಿಯ ಆರೈಕೆಯಲ್ಲಿ ಆರೋಗ್ಯದಿಂದ ನಳನಳಿಸುತ್ತಾಳೆ .ಮನದ ಮೂಲೆಯಲ್ಲಿ ಹೆರಿಗೆಯ ಆತಂಕವಿದ್ದರೂ ಸಹಜವಾಗಿದ್ದು ಏನನ್ನೂ ತೋರಗೊಡದೆ ದಿನದೂಡುವವಳು ಹೆಣ್ಣು.ತಾಯಮಡಿಲಿನ ಮಗುವಾಗುವಳು.ಕುಳಿತುಕೊಳ್ಳಲಾಗದೆ,ಓಡಾಡಲೂ ಆಗದೆ,ಮಲಗಲೂ ಸರಿಯಾಗಿ ಸಾಧ್ಯವಾಗದ ಅವಳ ಸಂಕಟ ಅವಳಿಗೇ ಗೊತ್ತು..ಆದರೂ ಗರ್ಭಿಣಿ ಹೆಣ್ಣು ಲವಲವಿಕೆಯಿಂದಿರುತ್ತಾಳೆ ..ತನ್ನ ಒಡಲ ಕುಡಿಗಾಗಿ..ಕಂದನ ಬರುವಿಕೆಗಾಗಿ..

ಪ್ರತೀ ಸಲ ಸ್ಕ್ಯಾನಿಂಗ್ ಮಾಡಿಸುವಾಗಲೂ ವೈದ್ಯರು ಏನು ಹೇಳುವರೋ ಎಂಬ ಆತಂಕ.ಅದೇ ಆತಂಕದಿಂದ ಪತಿಯ ಮುಖವನ್ನು ದಿಟ್ಟಿಸಿದರೆ ಅವನು ಎತ್ತಲೋ ನೋಡುತ್ತಿರುತ್ತಾನೆ..ಮಧ್ಯೆಯೊಮ್ಮೆ ಕಂಪ್ಯೂಟರ್ ಪರದೆಯತ್ತ ಗಂಡ ದೃಷ್ಟಿಹರಿಸಿದರೆ ಅವಳ ಕಂಗಳಲ್ಲಿ ಹೊಳಪು ಮೂಡುತ್ತದೆ.ತಾನು ಮಲಗಿದಲ್ಲಿಂದಲೇ ಬಾಗಿ ಪುಟ್ಟ ಕಂದನ ದೃಶ್ಯವನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಾಳೆ .ಆ ಪುಟ್ಟ ಪಾದಗಳಿಗೆ ಯಾವಾಗ ಸಿಹಿಮುತ್ತು ನೀಡುವೆನೋ ಎಂದು ಕಾತರಿಸುವಳು.


  ತುಂಬಿ ಬರುತ್ತಿರುವ ಉದರ, ಬಿಗಿಯಾಗುತ್ತಿರುವ ಸ್ತನಗಳು ..ನೀರು ತುಂಬಿಕೊಳ್ಳುತ್ತಿರುವ ಪಾದಗಳು,ಮಾಂಸ ತುಂಬಿಕೊಂಡು ಭಾರವಾದಂತೆ ಭಾಸವಾಗುವ ತೊಡೆಗಳು,ಊದಿಕೊಳ್ಳುವ ಕೆನ್ನೆಗಳು,ಮುಖವೂ ದೇಹವೂ ಒಂದಾದಂತೆ ತೋರುವ ಕುತ್ತಿಗೆ... ಎಲ್ಲವನ್ನೂ ಮುಚ್ಚಬಲ್ಲ ಸುಖಕರವಾದ ಉಡುಪು ಧರಿಸುವುದೇ ಸವಾಲಾಗುವುದು.ಅಂತಹ ಸಂದರ್ಭದಲ್ಲಿ ಆಕೆಗೆ ನೆರವಿಗೆ ಬರುವುದು ನೈಟಿ,ಫ್ರೀಸೈಜ್ ಲಾಂಗ್ ಕುರ್ತಾಗಳು..ಈ ಮಧ್ಯೆ ಆಕೆ ಪತಿಯ ಪ್ರೇಮದ ಸ್ಪರ್ಶಕ್ಕೆ ಬಹಳವೇ ಬಯಸುತ್ತಾಳೆ.


ನವಮಾಸ ತುಂಬಿದಾಗ ಆಕೆಯನ್ನು ಬಲು ಜತನದಿಂದ ನೋಡಿಕೊಳ್ಳುವ ಕುಟುಂಬ ಆಕೆಗಾಗಿ ಪುಟ್ಟ ಕಂದನಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿರುತ್ತದೆ .ಮೊದಲೇ ಆಸ್ಪತ್ರೆಗೆ ದಾಖಲಿಸಿ ಸುಖಪ್ರಸವಕ್ಕಾಗಿ ದೇವರ ಮೇಲೆ ಭಾರಹಾಕುತ್ತಾರೆ.ಹೆರಿಗೆನೋವು ಬಂದಮೇಲೆ ಆಸ್ಪತ್ರೆಗೆ ಒಯ್ದರಂತೂ ಆಕೆಯ ಬವಣೆ ಊಹಿಸಿದರೆ ಕಣ್ತುಂಬಿಬರುತ್ತದೆ.


   ತಾಯ್ತನ ದ ಅನುಭವಕ್ಕೆ ಇನ್ನು ಕೆಲವೇ ಕ್ಷಣಗಳಿರುವುದು ಎಂದಾದಾಗ ಅವಳ ಎದೆ ಬಲವಾಗಿ ಹೊಡೆದುಕೊಳ್ಳುತ್ತದೆ.ಆ ನೋವಿನಲ್ಲಿ ಚೀರುತ್ತಾಳೆ.ಒಂದೆಡೆ ಸಹಿಸಲಸಾಧ್ಯ ನೋವು ಸಂಕಟ.. ಇನ್ನೊಂದೆಡೆ ಪುಟ್ಟ ಕಂದನನ್ನು ಭುವಿಗಿಳಿಸುವ ಜವಾಬ್ದಾರಿ...ಈ ಕ್ಷಣವೇ.. ಆಕೆಯನ್ನು ಮಾಗಿಸುವುದು...ತನ್ನ ತಾಯಿಯ ಸಂಕಟ ಎಷ್ಟಿದ್ದಿರಬ‌ಹುದು ಎಂದು ಚಿಂತನೆಗೆ ಹಚ್ಚುವುದು...ಪತಿಯ ಒಲವು ಜೀವನದ ಒಂದು ಮಗ್ಗುಲಾದರೆ..ಹೆರಿಗೆಯ ನೋವು ಇನ್ನೊಂದು ಮಗ್ಗುಲು ಎಂದು ಅರ್ಥೈಸಿಕೊಳ್ಳುವಂತೆ ಮಾಡುವುದು...ಇಂತಹ ಸಂದರ್ಭದಲ್ಲಿ ಆಕೆಗೆ ಪತಿಯ ಸಾಂತ್ವನ ಬೇಕು... ತಾಯಿಯ ಅಕ್ಕರೆ ಕಾಳಜಿ ಬೇಕು..ಉತ್ತಮ ವೈದ್ಯರು ಜೊತೆಗಿರಬೇಕು..


   ಸಿಬ್ಬಂದಿ ಒಮ್ಮೆ ಪರೀಕ್ಷಿಸುವುದೆಂದರೆ ಆಕೆಯ ಜೀವ ಒಮ್ಮೆ ಹೋಗಿ ಬಂದಂತೆ... ಯಾತನೆ... ವೈದ್ಯರು ತಾಳ್ಮೆಯಿಂದ ಪರೀಕ್ಷಿಸಿದರೆ ಆ ವ್ಯತ್ಯಾಸವನ್ನು ಅರಿತು ಸಿಬ್ಬಂದಿಗಿಂತ ವ್ಯೆದ್ಯರೇ ಉತ್ತಮ ಎಂಬ ಭಾವ ಅವಳದು.. ಸಹಜವೋ... ಶಸ್ತ್ರಚಿಕಿತ್ಸೆಯ ಮೂಲಕವೋ ತಾಯಿಯಾಗುವ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಒಮ್ಮೆ ಕಂದ ಜಗತ್ತಿಗೆ ಬಂದರೆ ಸಾಕು ಎನ್ನುವ ಯಾತನೆ..

ವೈದ್ಯರು, ಸಿಬ್ಬಂದಿ ಎಲ್ಲರೂ ತಯಾರಾಗುತ್ತಿದ್ದಂತೆ ಆಕೆಯ ಕಂಗಳು ನೋವಿನಿಂದ ತುಂಬಿಬರುತ್ತವೆ,ದೈಹಿಕ ನೋವು,ಮಾನಸಿಕ ಯಾತನೆ ಎಲ್ಲವೂ ಜೊತೆಯಾಗಿ ಚೀರುತ್ತಾ ,ನರಳುತ್ತಾ ,ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಕಂದನನ್ನು  ಭೂಮಿಗಿಳಿಸುತ್ತಾಳೆ..ಆ ಯಾತನಾಮಯ ಅನುಭವದ ನಡುವೆಯೂ ನಗುವವಳು.. ನಗುತ್ತಾ ತನ್ನ ಕಂದನನ್ನು ಮುದ್ದಿಸುವವಳೇ ತಾಯಿ..ತಾಯಿ ಮಾತ್ರವೇ ಈ ಜಗದಲ್ಲಿ ನೋವಿನಲ್ಲೂ ನಗುವವಳು..

ತಾನು ಹೆತ್ತ ಕಂದನನ್ನು ಮೊದಲು ಎದೆಯ ಮೇಲೆ ಮಲಗಿಸಿದಾಗ ಆಗುವ ಆನಂದ ಅಷ್ಟಿಷ್ಟಲ್ಲ.ಪತಿಯು ಮಗುವನ್ನೆತ್ತಿ ಪತ್ನಿಯ ಕೈಮೇಲೆ ಮಗುವಿನ ಕೈಯನ್ನಿಟ್ಟಾಗ ಇಷ್ಟು ದಿನ ಪಟ್ಟ ನೋವು ಸಾರ್ಥಕ ಎಂಬ ಭಾವ.ನೋವನುಭವಿಸಿದ ಪತ್ನಿಯತ್ತ ಬಾಗಿ ಹಣೆಗೊಂದು ಹೂಮುತ್ತನಿಟ್ಟರೆ ಆಕೆಗೆ ಹೃದಯ ತುಂಬಿ ಬರುತ್ತದೆ.ಮಗು ತಾಯಿಯ ಬಳಿಯಲ್ಲಿದ್ದರೆ ತಾಯಿಯ ಅಮೃತ ಮಗುವಿಗಾಗಿ ಸ್ರವಿಸುತ್ತದೆ.ಮಗು ತನ್ನ ಅಮ್ಮನನ್ನು ಸ್ಪರ್ಶದಿಂದಲೇ ಗುರುತಿಸುತ್ತದೆ.

   ತಾಯಿಗೀಗ ಕಂದನೇ ಪ್ರಪಂಚ..ಮಗುವಿನ ಪೋಷಣೆಗೇ ಅವಳ ಸಮಯ ಮೀಸಲು.ಅದೇ ಅವಳ ಮೊದಲ ಆದ್ಯತೆ.ತನ್ನ ಊಟ ನಿದಿರೆಯನ್ನು ಮರೆತು ಕಂದನನ್ನು ಪೋಷಿಸುತ್ತಾಳೆ.ಕಂದನಿಗಾಗಿ ತನ್ನ ದೇಹದ ಅಮೃತವನುಣಿಸುತ್ತಾಳೆ.ದೈಹಿಕ ಸೌಂದರ್ಯದ ಚಿಂತೆ ಅವಳನ್ನು ಇಂತಹ ಸಂದರ್ಭದಲ್ಲಿ ಕಾಡುವುದಿಲ್ಲ..ಇತರರೂ ತಾಯಿಯಾದ ಮೇಲೆ ದಪ್ಪವಾಗಿದ್ದಾಳೆ ಎಂದು ಆಡಿಕೊಳ್ಳಬಾರದು. ಅದು ಆಕೆಯ ಕೈಯಲ್ಲಿಲ್ಲ.ಹಾರ್ಮೋನುಗಳ ಬದಲಾವಣೆ ಕಾರಣವಾಗಿರುತ್ತದೆ..


     ಹೆಣ್ಣನ್ನು,ಒಬ್ಬ ತಾಯಿಯನ್ನು ಬಾಹ್ಯ ಸೌಂದರ್ಯ ದಿಂದ ಅಳೆಯದೆ ಆಕೆಯ ಮಾತೃತ್ವದ ವಾತ್ಸಲ್ಯ,ಅಕ್ಕರೆ..ಗಂಡನನ್ನೂ ಮಗುವಂತೆ ಕಂಡು ಆದರಿಸುವ ರೀತಿ,ಅತ್ತೆಮಾವ ಕುಟುಂಬ ಎಂದು ಎಲ್ಲರಿಗೂ ಬೇಕಾದಂತೆ ನಡೆದುಕೊಳ್ಳುವ ಆಕೆಯ ಸ್ವಾರ್ಥರಹಿತ ಹೃದಯ ಶ್ರೀಮಂತಿಕೆಯಿಂದ ಗೌರವಿಸಬೇಕು.ತಾಯ್ತನ ಎಂಬುದು ಆಕೆ ಹಾಗೇ ಸುಮ್ಮನೆ ಪಡೆದುಕೊಂಡ ಪಟ್ಟವಲ್ಲ.ಅದರ ಹಿಂದೆ ಆಕೆಯ ನವಮಾಸದ ಸಂಕಟವಿದೆ,ದೈಹಿಕ ಯಾತನೆಯಿದೆ,ಮರೆಮಾಚಲಾಗದ ಬದಲಾವಣೆಗಳಿಗೆ ತನ್ನ ದೇಹವನ್ನು ಒಡ್ಡಿಕೊಂಡಿರುತ್ತಾಳೆ ..


   ತಾಯ್ತನವೆಂಬುದು ದೇವರು ನೀಡಿದ ಬೆಲೆಬಾಳುವ ವರ ಎಂದು ತಿಳಿಯುತ್ತಾರೆ ಹೆಣ್ಮಕ್ಕಳು.ದೇವನಿತ್ತ ವರವನ್ನು ಸಮರ್ಪಕವಾಗಿ ನಿಭಾಯಿಸಲು ಆಕೆಗೆ ಪತಿಯ ಸಹಕಾರ,ಪ್ರೇಮಮಯ ಸಾಂಗತ್ಯ ಅತ್ಯಗತ್ಯ.
ಆಕೆಗೆ ಮಗುವಿನ ಲಾಲನೆ ಪಾಲನೆ ಪೋಷಣೆಯಲ್ಲಿ ದಿನಗಳೆದದ್ದೇ ತಿಳಿಯಲಾರದು.ತನ್ನನ್ನು ತಾನು ಮಗುವಿಗಾಗಿ ಸಮರ್ಪಿಸಿಕೊಳ್ಳುವುದೇ ನಿಜವಾದ ತಾಯ್ತನದ ಸೌಂದರ್ಯ..

✍️... ಅನಿತಾ ಜಿ.ಕೆ.ಭಟ್.
16-12-2019.

 

Saturday, 14 December 2019

ಸುಮಕೋಮಲೆ





ಅಂಗಳದ ಮೂಲೆಯಲಿ
ಕಂಗಳನು ಸೆಳೆಯುತಲಿ
ಕಂಗೊಳಿಪ ಸುಮಕೋಮಲ
ಅಂಗನೆಯಿವಳು...

ಮುದವೀವ ಚಳಿಯಲಿ
ಹದವಾಗಿ ಅರಳುತಲಿ
ವಿಧವೆರಡು ವರ್ಣದಲಿ
ಹೃದಯಕದ್ದವಳು...

ಬಾನಂಗಳದ ಅರಸನ
ಜೇನಸವಿ ನೋಟದಲಿ
ಮನವನಾವರಿಸಿದ ಕಾಮ-
ಧೇನುವಿವಳು...

ಇನಿತು ಎಸಳಿನ ಬಾಲೆ
ಹನಿಯಿಬ್ಬನಿಯ ಹೊದಿಕೆಯಲಿ
ಎನಿತು ಸೊಗಸಿನ ಪುಷ್ಪಚೆಲ್ವಿ
ಅನಿತೆಯಂಗಳದಿ ನಗುತಿರುವಳು..

✍️... ಅನಿತಾ ಜಿ.ಕೆ.ಭಟ್.
14-12-2019.

ಬಂದಿದೆ ನವಶ್ರಾವಣ


ಧರೆಗಿಳಿದು ಬಂದಿದೆ ನವ ಶ್ರಾವಣ
ಧಾರೆಯನು ಮಿತಗೊಳಿಸಿಹನು ವರುಣ
ಇನಿಯನಿಗೆ ಕೈಬಳೆ ಸದ್ದಿನ ಮರುಶ್ರವಣ
ತವರ ನೆನಪಿಗೆ ಪಂಚಮಿಯೆ ಕಾರಣ||

ವರ್ಷ ಋತುವಿನಲಿ ಬರುವುದು ಶ್ರಾವಣ
ಹರ್ಷವುಕ್ಕಿಸುವ ಹಬ್ಬಗಳ ಆಚರಣೆ
ಸ್ವಾಗತಿಸಿದೆ ಭೂರಮೆಯ ಹಸಿರು ತೋರಣ
ವರಮಹಾಲಕ್ಷ್ಮಿ ವ್ರತದ ವೈಭವದ ಚಿತ್ರಣ||

ಆಷಾಢ ಕಳೆದು ವಿರಹ ದೂರಾಯಿತಣ್ಣ
ಸನಿಹದಲಿ ನವವಧು ನಾಚಿ ಕೆನ್ನೆಕೆಂಬಣ್ಣ
ಮನೆಮನದ ತುಂಬೆಲ್ಲ ರಂಗು ಚೆಲ್ಲಿ
ಬೆಳೆವ ಪೈರು ಮುದವು ರೈತನ ಮೊಗದಲ್ಲಿ||

ಸ್ವಾತಂತ್ರ್ಯೋತ್ಸವಕೆ ಸಿದ್ಧ ತಾಯಿ ಭಾರತಿ
ನಾಗರಪಂಚಮಿಯ ಸಂಭ್ರಮದಿ ಗರತಿ
ಲಕ್ಷ್ಮೀ ಪೂಜೆಯಲಿ ಎಷ್ಟೊಂದು ಭಕುತಿ
ಸಡಗರದಿ ಅಲಂಕರಿಸಿಹಳು ಮನೆಯೊಡತಿ||

ಶ್ರಾವಣದಿ ಹೊಸ್ತಿಲ ಗಂಗೆಯ ಪೂಜಿಸಿ
ಸೋಣೆಹುಲ್ಲ ಗಂಗೆಗರ್ಪಿಸಿ ನಮಸ್ಕರಿಸಿ
ವಿರಮಿಸುತಿರುವ ಕೃಷಿಕ ಮೆಲ್ಲುವ ತಾಂಬೂಲ
ಸೋದರನ ರಾಖಿಗೆ ಮುಖವು ಮೊರದಗಲ||

ಕೊಳಲನೂದುತ ಬಂದಿಹ ಬೆಣ್ಣೆ ಕೃಷ್ಣ
ಬಂದಿದೆ ನೈವೇದ್ಯ ಭಕ್ಷ್ಯ ಗಳ ದಿಬ್ಬಣದ
ಮೂಡಣದಿ ಮೂಡಿಹ ರವಿಯ ಹೊಂಬಣ್ಣ
ಭೂರಮೆಯ ಸಿಂಗಾರ ಹಸಿರು ಬಣ್ಣ||

ಸಂತಸವ ತಂದಿದೆ ಹೊಸ ಶ್ರಾವಣ...
ತುಂಬಿದೆ ಕಣಕಣದಲಿ ನವಚೇತನ...


✍️... ಅನಿತಾ ಜಿ.ಕೆ.ಭಟ್.
02-07-2019



ಪ್ರಕೃತಿಯೊಂದಿಗೆ ಋತುಗಳ ಲಾಸ್ಯ




*** ಪ್ರಕೃತಿಯೊಂದಿಗೆ ಋತುಗಳ ಲಾಸ್ಯ ***
""""""""""""""""""""""""""""""""""""""""""""""""""""


ವೈಭವದಿ ಕುಣಿಯಿತು ವಸಂತ ಋತು
ಮಾಮರವು ತುಂಬಿತ್ತು ಚಿಗುರ ಹೊತ್ತು
ಕೋಗಿಲೆಯು ಇಂಪಾಗಿ ತರುಲತೆಸೊಂಪಾಗಿ
ಮೈದುಂಬಿ ನಿಂತಿಹುದು ಇಳೆಯು ಕಳೆಯಾಗಿ||

ಕಳ್ಳ ಹೆಜ್ಜೆಯಿಡುತಿತ್ತು ಉಗ್ರತಾಪ
ಗ್ರೀಷ್ಮಕೆ ತಾಳದ ವರುಣನ ಕೋಪ
ಧಗೆಯೂ ಕಾರ್ಮುಗಿಲೂ ಗೆಳೆತನವ ಮಾಡಿ
ಜಗದೆಲ್ಲ ಸಂಕುಲದ ಆಕ್ರಂದನ ನೋಡಿ||

ಹರ್ಷದ ಹೊಂಗಿರಣ ವರ್ಷ ಋತು
ಆಕರ್ಷಣೆಯ ಸಾಂಗತ್ಯದ ಹನಿಮುತ್ತು
ಆಟಿಯ ಕೂಟದ ಬಯಕೆಯೊಳು
ಮೈದುಂಬಿ ಹರಿಯಿತು ಹಳ್ಳಕೊಳ್ಳ||


ಸರಸರನೆ ಎಲೆಯುದುರಿಸಿದ ಶರತ
ಭೂರಮೆಯ ಬೋಳಿಸುವುದವನ ಶಪಥ
ಸುಯ್ಯೆಂದು ತಂಗಾಳಿ ಜೊತೆಗೆ ಹೇಮಂತ
ಗಿಡಮರಗಳೆಲ್ಲ ಲಾಸ್ಯದಲಿ ನರ್ತಿಸುತ||

ಮಂಜು ಮುಸುಕಿನಲಿ ಶಿಶಿರ ಋತು
ಮೈದಡವಿ ಹಸಿರ ಚಾದರ ಹೊದೆಸಿತು
ಪ್ರೇಮದಲಿ ಒಲಿದಿಹಳು ವಸುಂಧರೆ
ಕೊರಳೊಡ್ಡಿ ನಿಂತಿಹಳು ಇಬ್ಬನಿಗೆ ಧರೆ||

ಮತ್ತದೇ ಚಕ್ರದಲಿ ಬರುವನು ವಸಂತ
ಭುವಿಗೆ ಕನಸು ನನಸಾಗುವುದೋ ಧಾವಂತ
ಕಾತರದಿ ಭೂದೇವಿ ನಿಂದಿಹಳು ಕಾದು
ಸಂಕುಲವನೆಲ್ಲ ಒಡಲೊಳಗೆ ಪೊರೆದು||

          .                🌳
✍️...ಅನಿ ಅಜಿ.ಕೆ.ಭಟ್.
14-12-2019.


ಋತು



**ನಾನೊಂದು ಹೆಣ್ಣು**

ಹುಟ್ಟಿದಾಗಲೇ ಜಗಕೆಲ್ಲ ತಿರಸ್ಕಾರ
ನಾನಾದೆನೆಂದು ಹೆಣ್ಣು
ಹೆತ್ತವಳಿಗೆ ಆರದ ವಾತ್ಸಲ್ಯ ಮಮತೆ
ಕಾಲ್ಗೆಜ್ಜೆ ಸಪ್ಪಳ ಮನೆತುಂಬಿತು
ಮನೆಯಂಗಳವು ನನ್ನ ಸಂತಸಕೆ ಸಾಕ್ಷಿಯಾಯಿತು
ಬೀದಿ ತುಂಬ ನಕ್ಕುನಲಿದೆ
ಸ್ವಚ್ಛಂದದಿ ಹಾರಾಡುವ ಹಕ್ಕಿಯಾದೆ
ಗರಿಬಿಚ್ಚಿ ಕುಣಿವ ನವಿಲಾದೆ....


ಅದೊಂದು ದಿನ ಜಗಕೆ ಕಾಲಿಟ್ಟ ವಸಂತ ಋತು
ನನ್ನೊಳಗೆ ಅದೇ...ಅದೇ..ಹೆಣ್ತನದ ಋತು
ಸುತ್ತೆಲ್ಲರ ದೃಷ್ಟಿಯಲಿ ನಾನೀಗ ಪ್ರೌಢ ಹೆಣ್ಣು
ಕಾಮುಕರಿಗೋ ನನ್ನ ಮೇಲೆ ವಕ್ರಕಣ್ಣು....

ಬೀದಿಯಾಟಕೆ ಬಿತ್ತು ಬೇಲಿ
ಇಣುಕಿದೆ ಕಿಟಿಕಿ ಸಂದಿಯಲಿ
ಹಾಡುತಿದೆ ಕೋಗಿಲೆ ಇಂಪಾಗಿ;ನಾನೋ ಮೂಲೆಗುಂಪಾಗಿ
ಯಾಕೀ ಬಂಧನವೊ ತಿಳಿಯದು ಮನಕೊಂದೂ
ಋತು ವ ನಿಂದಿಸಿದೆ ಯಾಕೆ ಬಂದೆಯೆಂದು.....



ಕರೆಯುತಿರುವೆ ಓ.. ನನ್ನ ಪ್ರೇಮಿಯೇ
ವಸಂತ ಶರತ ಶಿಶಿರ ಯಾರಾದರೂ ಸರಿಯೇ
ಜಗದ ಷರತ್ತುಗಳ ಮುರಿಯಲು ಬನ್ನಿ
ನನ್ನ ಕನಸುಗಳಿಗೆ ನೀರೆರೆಯ ಬನ್ನಿ
ಕತ್ತಲಗೋಡೆಯೊಳಗೆ ಕರಗಿರುವ ಹೆಣ್ಣ ಬಾಳಿಗೆ
ಸಂತಸದ ಸೆಲೆಯಾಗಬನ್ನಿ..

                                  ಇಂತಿ...
                                  ನಾನೊಂದು ಹೆಣ್ಣು.


✍️... ಅನಿತಾ ಜಿ.ಕೆ.ಭಟ್.
14-12-2019.

ನಾನೊಬ್ಬಳು ದ್ವಾದಶಿ





""""""""""""""""""""""""""""""""""""""""""""
      💃ನಾನೊಬ್ಬಳು ದ್ವಾದಶೀ....💃
""""""""""""""""""""""""""""""""""""""""""""

ಸುತ್ತಲೂ ಚೆಲ್ಲಿದೆ ಇರುಳ ಹಾಸು
ಕಂಗಳಲಿ ತುಂಬಿದೆ ಬಣ್ಣದ ಕನಸು
ಬಡವಿ ನಾ ಬರಿ ಹನ್ನೆರಡರ ವಯಸು
ಮರೆಯಲಿ ನಿಂತು ಕೊರಗಿದೆ ಮನಸು||

ಖುಷಿಯ ಅಲೆಯಲಿ ತೇಲುತಿದ್ದೆ
ಕಾಲ ಗೆಜ್ಜೆಯ ಕುಣಿಸಿ ಆಡುತಿದ್ದೆ
ಮನೆ ಮನದ ಒಳಹೊರಗೆ
ಉಕ್ಕಿದೆ ಸಂತಸದ ಹೊನಲೆನಗೆ||

ಧರೆಗಿಂದು ಬಂದಿಹನು ವಸಂತ ಋತು
ನನ್ನೊಳಗೆ ಅದೇ...ಹೆಣ್ತನದ ಋತು
ಸುತ್ತೆಲ್ಲರ ದೃಷ್ಟಿಯಲಿ ನಾ ಪ್ರೌಢಹೆಣ್ಣು
ಸಹಿಸಲಾರೆನು ನಾ ಕಾಮದ ಓರೆಗಣ್ಣು||

ಗೆಳೆಯರ ಜೊತೆಯಾಟಕೆ ಬಿತ್ತು ಬೇಲಿ
ಇಣುಕುವೆನು ಹೀಗೆ ಮರದ ಸಂದಿಯಲಿ
ಕೋಗಿಲೆಯ ಇಂಪಾದ ಗಾನ; ನನಗೇಕೆ ಈ ಬಂಧನ
ಷರತ್ತುಗಳ ವಿಧಿಸಿರುವುದೇಕೆ ಈ ಜೀವನ||

ಕೈಬಳೆ ತೊಟ್ಟು ಮಲ್ಲೆಮಾಲೆ ಮುಡಿದು
ಕನ್ನಡಿಯ ಮುಂದೆ ನಿಲುವ ವಯಸಿದು
ಪ್ರಜ್ಞಾವಂತ ಮನುಜರೇ...
ಮೌಢ್ಯತೆಯ ಗೋಡೆಗಳ ಕೆಡವ ಬನ್ನಿ
ಕತ್ತಲೆಯಲಿ ಕರಗಿರುವ ದ್ವಾದಶಿಯ ಮೊಗದಿ
ನಗುವ ತನ್ನಿ||

                       ಇಂತಿ,
                                ನಿಮ್ಮ ಪ್ರೀತಿಯ,
                                   ದ್ವಾದಶಿ...                 

                       🙏🙏

✍️...ಅನಿತಾ ಜಿ.ಕೆ.ಭಟ್.
07-06-2019

ಏಡ್ಸ್




ಬಂಧನವಿಲ್ಲದ ಸುಖಮೋಹದಲಿ
ಅಂಟಲು ದೇಹಕೆ ಪಿಡುಗು
ಬಾಂಧವ್ಯವದು ಮಿಲನದಲಿ
ಆರಿತು ಬಾಳಿನ ಬೆಡಗು||

ಮನಸಿನ ದಾಳಕೆ ಒಳಗಾಗಿ
ಬುದ್ಧಿಯು ದಾಸ್ಯಕೆ ಬಲಿಯು
ಕನಸಿನ ನಾಳೆಯ ತಿರುವಾಗಿ
ವ್ಯಾಧಿಯ ಕರಾಳ ನಗೆಯು||

ಉದರವ ತಣಿಸುವ ಕಾಯಕದಿ
ಬದುಕದು ಮೂರಾಬಟ್ಟೆ
ಆದಳು ಹೆಣ್ಣು ಕಾಮುಕನಿಗೆ
ಸುಖವುಣಿಸುವ ಬಣ್ಣದ ಚಿಟ್ಟೆ||

ಪತಿಯನೆ ನಂಬಿದ ಸತಿಗಿಂದು
ಮಹಾಮಾರಿಯ ಬಹುಮಾನ
ಕಣ್ಣೀರೊರೆಸಲು ಪತಿಯೆಲ್ಲಿಹನು
ಯಮರಾಜನು ಒಯ್ದಿಹ ಅವನ||

ರಕುತವ ಪಡೆಯುವ ಮುನ್ನ
ಪರೀಕ್ಷೆಯ ಮಾಡುವುದು ಚೆನ್ನ
ಚುಚ್ಚವ ಸಿರಿಂಜ್  ಕಡೆಗೊಮ್ಮೆ
ಎಚ್ಚರನೋಟವ  ಹರಿಸೊಮ್ಮೆ||

ರೋಗಪೀಡಿತೆ ಅಮ್ಮನ ಗರ್ಭದಲಿ
ಬೆಚ್ಚನೆ ಮಗುವಿದೆ ಮಡಿಲಿನಲಿ
ಅಮೃತಪಾನವ ಮಾಡಿಸದೆ
ಕೆಚ್ಚಲಿನ ಗೋಕ್ಷೀರವ ಕುಡಿಸುತಲಿ||

ಅಂಟಿದ ಜಾಡ್ಯವು ಎಂದಿಗೂ ಬಿಡದು
ಸುಮ್ಮನೆ ಎಂದೂ ಪಸರಿಸದು
ಹಿಡಿತವಿರಲಿ ಕಾಮಸೂತ್ರದಲಿ
ಏಕಸಂಗಾತಿಯಿರಲಿ ಬದುಕಿನಲಿ||

ರೋಗಿಗೆ ಪ್ರೀತಿ ಕಾಳಜಿಯೆ
ತುಂಬುವುದು ನಿರೋಧಕ ಶಕ್ತಿ
ನೋವನು ಮರೆತು ನಗುನಗುತ
ಬಾಳುವುದೇ ರೋಗವ ಗೆಲ್ಲುವ ಯುಕ್ತಿ||

✍️... ಅನಿತಾ ಜಿ.ಕೆ.ಭಟ್.
14-12-2019.





ಸತ್ಯದೈವ



          ಸಂತು ಮೊಬೈಲನ್ನು ಒಮ್ಮೆ ನೋಡಿದ.ಗೆಳೆಯನ ಮುಖವನ್ನೊಮ್ಮೆ ದಿಟ್ಟಿಸಿದ.ರಮೇಶ ಆವನ ಇಂಗಿತವನ್ನರಿತು ಜೇಬಿನಿಂದ ಸಿಗರೇಟ್ ಪ್ಯಾಕೆಟ್ ತೆಗೆದು ಅವನತ್ತ ಚಾಚಿದ.. ಸಂತು ಒಂದನ್ನು ತೆಗೆದುಕೊಂಡು ಒಂದು ದಮ್ ಏರಿಸಿಯೇಬಿಟ್ಟ...

       ಅಷ್ಟರಲ್ಲಿ ಪುನಃ ಗಮನ ಮೊಬೈಲ್ ಕಡೆಗೆ.. ಸಿಗ್ನಲ್ ಬಂದೇ ಬಿಟ್ಟಿತು..🛣️🚦🕛 🏍️ನಿಂತಿರುವಲ್ಲಿಂದ ಹೈವೇಯಲ್ಲಿ ಸಾಗಿ ಸಿಗ್ನಲ್ ಇರುವಲ್ಲಿಗೆ ರಾತ್ರಿ ಹನ್ನೆರಡು ಗಂಟೆಗೆ ಬೈಕಿನಲ್ಲಿ ಬಂದು ನಮ್ಮ ಜೊತೆಯಾಗಬೇಕು ಎಂದು ಆ ಸಿಂಬಲ್ ಅನ್ನು ಓದಿಕೊಂಡ ಸಂತು...

ರಮೇಶನನ್ನು ಹಿಂದೆ ಕೂರಿಸಿಕೊಂಡು ರೈನ್ ಕೋಟ್, ಹೆಲ್ಮೆಟ್ ಧರಿಸಿ ಹೊರಟರು.ಹೇಳಿದ ಜಾಗಕ್ಕೆ ಸರಿಯಾದ ಸಮಯಕ್ಕೆ ತಲುಪಿದರು.ಸ್ವಲ್ಪ ಹೊತ್ತಿನಲ್ಲಿ ಬೈಕೊಂದು ಪಕ್ಕದಲ್ಲಿ ಬಂದು ನಿಂತಿತು.ಪರಸ್ಪರ ಸಂಧಿಸಬೇಕೆಂದುಕೊಂಡವರು ನಾವೇ ಎಂದು ಖಚಿತಪಡಿಸಿಕೊಂಡರು.ಹ್ಯಾರಿಸ್ ಮತ್ತು ಸಲೀಂ ಬೈಕ್ ನಲ್ಲಿ ಮುಂದೆ ಸಾಗಿದರು.ಸಂತು ಮತ್ತು ರಮೇಶ್ ಹಿಂಬಾಲಿಸಿದರು..

ಅಮಾವಾಸ್ಯೆಯ ರಾತ್ರಿಯಲ್ಲಿ ಪಯಣವು ಸತ್ಯಾಪುರದತ್ತ ಸಾಗಿತು..ದಟ್ಟ ಕಾಡು..ಮಳೆಗಾಲ ಬೇರೆ.. ಸುತ್ತಲೂ ಜೀರುಂಡೆಗಳ ಝೇಂಕಾರ ,ಎತ್ತರ ತಗ್ಗು ಹೊಂಡ ಗುಂಡಿಯಿರುವ ಮಣ್ಣ ಮಾರ್ಗ..

ಎದುರಿನಿಂದ ಎರಡು ಹೊಳೆವ ವಸ್ತು ಕಂಡಿತು ಹ್ಯಾರಿಸ್ ಗೆ.. ಒಮ್ಮೆಲೇ ಬ್ರೇಕ್ ಒತ್ತಿದ.. ಅಬ್ಬಾ..!!ಎಂಬ ಉದ್ಗಾರದೊಂದಿಗೆ ಕೆಳಗೆ ಬೀಳುವಂತಾದ ಸಲೀಂ ಬ್ಯಾಲೆನ್ಸ್ ಮಾಡಿಕೊಂಡ..

ಎದುರಿನಿಂದ ಬೆಳಕು ಹತ್ತಿರ ಹತ್ತಿರ ಬಂದಂತೆ ಕಂಡಿತು.. ಹೆದರಿ ಹೋದರು..ಹಿಂದಿನಿಂದ ಬಂದ ಸಂತು ಕೂಡಾ ಅಲ್ಲಿಯೇ ಬೈಕ್ ನಿಲ್ಲಿಸಿದ.ಬೆಳಕುಮತ್ತಷ್ಟು ಪ್ರಖರವಾಯಿತು... ಬೈಕ್ ಮುಂದೆ ಚಲಾಯಿಸಲು ಧೈರ್ಯ ಬರಲಿಲ್ಲ..

ಸ್ವಲ್ಪ ಹೊತ್ತಿನಲ್ಲಿ ಬೆಳಕು ಕಾಣುವುದು ನಿಂತಿತು.ಆದರೆ ಹೆದರಿದ ಹ್ಯಾರಿಸ್, ಸಲೀಂ ಇಲ್ಲಿಯೇ ವ್ಯವಹಾರ ಮುಗಿಸಿ ಬಿಡೋಣ ಎಂದು ಸಂತು ಹಾಗೂ ರಮೇಶನಲ್ಲಿ ಹೇಳಿದರು..

ಬೈಕ್ ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲಿ ಹತ್ತಿರದಲ್ಲೇ ಇರುವ ಕಟ್ಟೆಯಲ್ಲಿ ಕುಳಿತುಕೊಂಡರು...ದೂರದಿಂದ ನರಿಗಳು ಕೂಗುವುದು ಕೇಳಿಬರುತ್ತಿತ್ತು..

ಸಿಗರೇಟ್ ದಮ್ ಎಳೆದುಕೊಂಡರು... ಹ್ಯಾರಿಸ್ ತಾನು ತಂದ ಗಾಂಜಾ ಪ್ಯಾಕೆಟ್ ತೆಗೆದನು.. ಸಂತು ಗೆ ರೇಟ್ ಹೇಳಿದ... ಅವನು ದುಡ್ಡು ಎಣಿಸುತ್ತಿದ್ದ.. ಅಷ್ಟರಲ್ಲಿ ಹಿಂದಿನಿಂದ ಟಕ್..ಟಕ್...ಟಕ್..ಶಬ್ದ ಬಲವಾಗಿ ಇವರತ್ತವೇ ನಡೆದು ಬರುತ್ತಿದ್ದಂತೆ ಭಾಸವಾಯಿತು.

ನಿರ್ಜನ ಪ್ರದೇಶ ವನ್ನು ಆಯ್ದುಕೊಂಡರೂ ಭಯ ಬೆನ್ನಟ್ಟಿ ಬಂದಿತ್ತು.. ಪೋಲೀಸರು ಇಲ್ಲಿ ಬರಲಾರರು ಎಂಬ ಧೈರ್ಯದಿಂದ ಇಲ್ಲಿ ಬಂದರೆ ಅದಕ್ಕಿಂತಲೂ ಭಯಾನಕವಾದ ಅನುಭವ...

ಸಂತು ಹಣ ಕೊಡಲು ಕೈ ಮುಂದೆ ಚಾಚಿದ್ದಾನೆ...ಕೈ ನಡುಗುತ್ತಿದೆ...ಟಕ್ ಟಕ್...ಶಬ್ದ ಜೋರಾಗುತ್ತಿದೆ... ಪೊಟ್ಟಣವನ್ನು ಪಡೆದುಕೊಂಡು ಓಡಿ ಹೋಗಬೇಕೆಂದುಕೊಂಡನು.. ಅಷ್ಟರಲ್ಲಿ ಬಂದೇ ಬಿಟ್ಟಿತು.. ಹಿಂದೆಯೇ... ನಿಂತಿದೆ...

"ನೋಡಿ ಮಕ್ಕಳಾ."..ಏರು ಧ್ವನಿಯಲ್ಲಿ ಕರೆದಂತೆ ಭಾಸವಾಯಿತು.. ಆಜಾನುಬಾಹು ಶರೀರ... ಕೈಲೊಂದು ಕೋಲು... ಮೈತುಂಬಾ ವಿಚಿತ್ರ ಅಲಂಕಾರ...ಈಗಲೇ ನುಂಗಿಬಿಡುವಂತೆ ಕಾಣಿಸುವ  ನೋಟ..

ಹ್ಯಾರಿಸ್, ಸಲೀಂ ಥರ ಥರ ನಡುಗಿದರು.. ಸಂತು ,ರಮೇಶ್ ಭಯಭೀತರಾಗಿ ಕೈಮುಗಿದು ನಿಂತರು..

"ನೋಡಿ ಮಕ್ಕಳಾ... ಇದು ಸತ್ಯಾಪುರ..ಇಲ್ಲಿ ಕಳ್ಳಕೆಲಸ ಮಾಡುವಹಾಗಿಲ್ಲ...ಕೆಟ್ಟ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನ ಹಾಳುಮಾಡಿಕೊಳ್ಳಬೇಡಿ..."ಎನ್ನುತ್ತಾ ಒಂದು ತೀಕ್ಷ್ಣ ದೃಷ್ಟಿ ಹರಿಸಿ, ಹಿಂದಿರುಗಿ ಟಕ್ ಟಕ್ ಎಂಬ ಸದ್ದಿನೊಂದಿಗೆ ಗಂಭೀರವಾಗಿ ಹೆಜ್ಜೆಹಾಕಿತು..ಆ ಆಕೃತಿ..

ಅಬ್ಬಾ...!!!!!...ಬೆವತೇ ಹೋಗಿದ್ದರು..ಒಂದುಕ್ಷಣ ಉಸಿರೇ ನಿಂತಂತಾಗಿತ್ತು ...

ಆಕೃತಿ ಕಣ್ಮರೆಯಾಯಿತು.... ಸಂತು ಹಣ ಹ್ಯಾರಿಸ್ ಗೆ ನೀಡಿದ... ಹ್ಯಾರಿಸ್ ತಂದಿದ್ದ ಗಾಂಜಾ,ಇನ್ನಿತರ ಮಾದಕ ವಸ್ತುಗಳ ನ್ನು ಪಡೆದುಕೊಂಡು ಭದ್ರವಾಗಿ ತನ್ನ ಉಡುಪುಗಳ ಒಳಗಿರಿಸಿದ.... ರೈನ್ ಕೋಟ್ ಮತ್ತೆ ಮೊದಲಿನಂತೆ ಹಾಕಿಕೊಂಡ...

ಹೊರಡುವ ಆಲೋಚನೆ ಮಾಡಿದರು.. ಬೈಕ್ ಏರಿ ಸ್ಟಾರ್ಟ್ ಮಾಡಲು ತೊಡಗಿದರು.. ಸ್ಟಾರ್ಟ್ ಆಗುತ್ತಲೇ ಇಲ್ಲ..ಎರಡು ಬೈಕ್ ಕೂಡ...

ಒಂದು ಗಂಟೆ ಹೊತ್ತು ಪ್ರಯತ್ನಿಸಿದರೂ ಸ್ಟಾರ್ಟ್ ಆಗಲಿಲ್ಲ..ಕಟ್ಟೆಯತ್ತ ತೆರಳಿದರು ಪುನಃ....ಇದ್ದ ಒಂದು ಪ್ಯಾಕೆಟ್ ಬಿಸ್ಕಿಟ್ ತಿಂದು ನೀರು ಕುಡಿದು ಅಲ್ಲೇ ಗಲೀಜು ಮಾಡಿದರು..

ಪುನಃ ಟಕ್ ಟಕ್ ಶಬ್ದ ಜೋರಾಗಿ ಕೇಳಿ ಬಂತು..
"ಏನು ಮಕ್ಕಳೇ.. ನಾನು ಹೇಳಿದ್ದು ತಿಳೀಲಿಲ್ವೇ
...ಕಳ್ಳ ಕೆಲಸ ಮಾಡಿದ್ದಲ್ಲದೇ..ಈ ಸ್ಥಳದಲ್ಲಿ ಗಲೀಜು ಮಾಡುತ್ತಿದ್ದೀರಾ..."ಜೋರಾಗಿ ಗದರುತ್ತಾ...ಸಂತುವಿನ ಕೆನ್ನೆಗೆ "ಫಟಾರ್ "ಎಂದು ಒಂದೇಟು ಹೊಡೆದೇ ಬಿಟ್ಟಿತು...
ಕಣ್ಣುಕತ್ತಲೆ ಬಂದಂತಾಗಿ ಬಿದ್ದದ್ದಷ್ಟೇ ಗೊತ್ತು...

ಹ್ಯಾರಿಸ್ ,ಸಲೀಂ... ರಮೇಶ್ ಕಡೆ ತಿರುಗಿತು..."ಹೂಂ.. ಏನು ನೋಡ್ತಾ ನಿಂತಿದ್ದೀರಿ...ಮಾಡಬಾರದ್ದು ಮಾಡಿ.."ಎನ್ನುತ್ತಾ ಫಟಾರೆಂದು ಕೈ ಬೀಸಿಯೇ ಬಿಟ್ಟಿತು...
.
.
.
ಸಂತು.. ಮೆಲ್ಲಗೆ ಕಣ್ಣು ಬಿಡಲು ಪ್ರಯತ್ನಿಸಿದ..ಕಣ್ಣೊಡೆಯಲೂ ಕೂಡಾ ಭಯ.. ಮೆಲ್ಲನೆ ಪ್ಯಾಂಟ್ ಜೇಬು ತಡಕಾಡಿದ.. ಮೊಬೈಲ್ ತೆಗೆದುಕೊಂಡು ಸಮಯ ನೋಡಲು ಮೆಲ್ಲ ಕಣ್ಣಗಲಿಸಿದ...ಓಹೋ ಗಂಟೆ ಐದೂವರೆ... ಬೆಳಿಗ್ಗೆ ಆಯಿತು... ಇನ್ನು ತಡಮಾಡಿದರೆ ನಮ್ಮನ್ನು ಕಂಡು ಯಾರಿಗಾದರೂ ಅನುಮಾನ ಬಂದರೆ ಕಷ್ಟ.. ಎಂದುಕೊಂಡು ... ಹ್ಯಾರಿಸ್ ಸಲೀಂ ರಮೇಶನನ್ನು ತಟ್ಟಿ ಎಬ್ಬಿಸಿದ.. ಎಲ್ಲರಲ್ಲೂ ಭಯವೇ ಆವರಿಸಿತ್ತು...

ಮೆಲ್ಲಗೆ ಎದ್ದು ಹೊರಡಲು ತಯಾರಾದರು.ಬೈಕ್ ಸ್ಟಾರ್ಟ್ ಮಾಡಿ ನೋಡಿದರು.. ಸುಲಭದಲ್ಲಿ ಸ್ಟಾರ್ಟ್ ಆಯ್ತು...ನಿನ್ನೆ ರಾತ್ರಿ ಹಾಗಿದ್ದರೆ ನಮ್ಮ ಬೈಕಿಗೆ ಏನಾಗಿತ್ತು..? ಏಕೆ ಸ್ಟಾರ್ಟ್ ಆಗುತತ್ತಿರಲಿಲ್ಲ...?? ಪ್ರಶ್ನೆ ಗೆ ಭಯವೇ ಉತ್ತರವಾಗಿತ್ತು...

ಸತ್ಯಾಪುರದ ಗಡಿ ದಾಟುವ ಹೊತ್ತು..ಎದುರಿನಿಂದ ಪೋಲೀಸ್ ಜೀಪು ಬರುತ್ತಿತ್ತು... ಬೈಕನ್ನು ಕಂಡು ನಿಲ್ಲಿಸಲು ಹೇಳಿದರು..ಸಿಕ್ಕಿಹಾಕಿಕೊಳ್ಳುವ ಭಯದಿಂದ ಬೈಕ್ ನಿಲ್ಲಿಸದೆ ವೇಗವಾಗಿ ಚಲಾಯಿಸಿದರು...

ಪೋಲೀಸರಿಗೆ ಅನುಮಾನ ಬಂದು ಹತ್ತಿರದ ಎಲ್ಲ ಸ್ಟೇಷನ್ ಗೂ ಸುದ್ದಿ ರವಾನಿಸಿದರು...ಹಿಂದಿನಿಂದ ಬರುತ್ತಿದ್ದ ಮತ್ತೊಂದು ಪೋಲೀಸ್ ಜೀಪ್ ಇವರಿಗೆ ಸ್ಕೆಚ್ ಹಾಕಿತು.. ಸುಲಭದಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದರು..

ನಾಲ್ವರಿಗೂ ಆ ಭಯಾನಕ ಆಕೃತಿಯ ನೆನಪಾಯಿತು... "ಮಕ್ಕಳೇ ಕೆಟ್ಟ ಕೆಲಸ ಮಾಡಬೇಡಿ" ಎಂದು ಹೇಳಿದ್ದು ನೆನಪಾಯಿತು...ಹಿತನುಡಿಯ ಕೇಳದೆ ಈಗ ಪೋಲೀಸರ ಅತಿಥಿಯಾಗಬೇಕಾಗಿ ಬಂತು.. ಎಂದು ಮರುಗಿದರು..

ಸತ್ಯಾಪುರದಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಸತ್ಯದೈವವೇ ಹೋರಾಡಿ ಕೈಗೆ ಕೋಳ ತೊಡಿಸಿತು..ಎಂಬ ಸುದ್ದಿ ಊರೆಲ್ಲಾ ಹಬ್ಬಿತು..ಸತ್ಯಾಪುರದ ಸತ್ಯದೈವದ ಮಹಿಮೆ ಮನೆಮಾತಾಯಿತು...ಕೆಟ್ಟ ಕೆಲಸ ಮಾಡಿದರೆ ಸತ್ಯದೈವಕ್ಕೆ ಹರಕೆ ಹೇಳುತ್ತೇನೆ ಎಂದು ಹೇಳಿ ಹೆದರಿಸುವ ಪರಿಪಾಠ ಸತ್ಯಾಪುರದಲ್ಲಿ ಮುಂದುವರಿದಿದೆ..

#ಧೂಮಪಾನ ಆರೋಗ್ಯಕ್ಕೆ ಹಾನಿಕರ.
#ಮಾದಕದ್ರವ್ಯ ವಹಿವಾಟು ಕಾನೂನುಬಾಹಿರ.

                          🙏

✍️... ಅನಿತಾ ಜಿ.ಕೆ.ಭಟ್.
14-12-2019.

ಸಿಹಿಗನಸು



         ಭಾವನಾ ಅಮ್ಮನತ್ತ ಬಿಂಕದ ನೋಟವನ್ನು ಬೀರಿದಳು.ತನ್ನ ಪ್ರಣಯ ರಾಜ ಉಲ್ಲಾಸನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಸಂಭ್ರಮ ಅವಳಿಗೆ.ಉಲ್ಲಾಸ ತಾನು ಇಷ್ಟಪಟ್ಟ ಹುಡುಗ . ಇಬ್ಬರೂ ಜೊತೆಯಾಗಿ ಎರಡು ವರ್ಷ ಒಟ್ಟಿಗೆ ಓಡಾಡಿ ಒಬ್ಬರನ್ನೊಬ್ಬರು ಅರಿತುಕೊಂಡು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.ಅಮ್ಮ ಅಪ್ಪ ಇಬ್ಬರಿಗೂ ಉಲ್ಲಾಸನ ಗುಣನಡತೆ ಇಷ್ಟವಾಗಿತ್ತು.ಒಳ್ಳೆಯ ಕೌಟುಂಬಿಕ ಹಿನ್ನೆಲೆಯುಳ್ಳ ಶ್ರೀಮಂತ ವರ.

        ನಿಶ್ಚಿತಾರ್ಥ ಮುಗಿದು ತಿಂಗಳಲ್ಲೇ ಮದುವೆಯೂ ನಡೆಯಿತು.ವೈಭವದ ಮದುವೆ.ಮದುವೆ ಮಂಟಪ ಝಗಮಗಿಸುತ್ತಿತ್ತು.ಭಾವನಾ ಖುಷಿಯಲ್ಲಿ ತೇಲಾಡಿದಳು.ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ಅಪ್ಪ ಅಮ್ಮ ಭಾವುಕರಾದರು.ಅಮ್ಮ  ವಾರಿಜಾಳ ಕೈ ಮಗಳ ಹೆಗಲಮೇಲಿಂದ ಕದಲಲು ಒಪ್ಪಲೇ ಇಲ್ಲ.ಕಷ್ಟಸುಖ ಎರಡನ್ನೂ ಸಮಾನವಾಗಿ ಕಂಡು ಬಾಳು ಮಗಳೇ.. ಎಂದು ತುಂಬಿದ ಕಂಗಳಿಂದ ಮಗಳು ಅಳಿಯನನ್ನು ಹರಸಿ ಕಳುಹಿಸಿದರು.ಭಾವನಾ ಗಂಡನೊಡನೆ ನಿಧಾನವಾಗಿ ಹೆಜ್ಜೆ ಹಾಕಿದಳು.

         ಹನಿಮೂನ್ ಗೆ ಇಬ್ಬರೂ ಸ್ವಿಟ್ಜರ್ಲೆಂಡ್ ಗೆ ಹಾರಿದರು.ಭಾವನಾಗೆ ಮೊದಲ ವಿಮಾನ ಪ್ರಯಾಣ.ಭಯದಿಂದ ತನ್ನೆರಡೂ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡಿದ್ದಳು.ಸ್ವಿಟ್ಜರ್ಲೆಂಡ್ ನ ಸುಂದರ ತಾಣಗಳನ್ನು ಕಂಡ ಭಾವನಾ ಹುಚ್ಚೆದ್ದು ಕುಣಿದಾಡಿದಳು.ಉಲ್ಲಾಸನು ಗಂಡನಾಗಿ ದೊರೆತದ್ದು ಸೌಭಾಗ್ಯ ಎಂದುಕೊಂಡಳು.ಅವನ ತುಂಟಾಟ ,ಪ್ರೇಮದಾಸರೆಯಲ್ಲಿ ಮೈಮರೆತಳು.ಯಾವಾಗಲೂ ಕಾಲೆಳೆದು ಕೀಟಲೆ ಮಾಡುತ್ತಿದ್ದ ಉಲ್ಲಾಸನ ಪ್ರತಿನೋಟದಲ್ಲೂ ಒಂದು ಪ್ರೇಮಕವನವಿದ್ದಂತೆ ಭಾಸವಾಯಿತು.

       ದಿನಕಳೆದದ್ದೇ ತಿಳಿಯಲಿಲ್ಲ.ಬೆಂಗಳೂರಿಗೆ ವಾಪಾಸಾದರು.ಅಮ್ಮ ಅಪ್ಪನನ್ನು ನೋಡುವ ಹಂಬಲ.ಉಲ್ಲಾಸನನ್ನು ಬಿಟ್ಟು ಹೋಗಲಾಗದ ಚಡಪಡಿಕೆ."ಮಹಾರಾಣಿಯವರೇ ಹೋಗಿ ಬರೋಣ.ನನಗೂ ಎರಡು ದಿನ ನಿಲ್ಲಲು ಅವಕಾಶ ಕೊಡುವಿರಲ್ಲ.". ಎಂದು ಗಲ್ಲ ಹಿಂಡಿದ ನಲ್ಲ.."ಅಯ್ಯೋ ಬಿಡಿ.. ನೋವಾಗುತ್ತದೆ.." ಎಂದು ಕಿರುಚಿದಳು..

        ತವರು ಮನೆಯಲ್ಲಿ ಎರಡು ದಿನ ನವದಂಪತಿಗೆ ಭರ್ಜರಿ ಔತಣ ಮಾಡಲಾಯಿತು.ಇಬ್ಬರೂ ಸಂತುಷ್ಟರಾಗಿ ಮನೆಗೆ ಮರಳಿದರು.ಭಾವನಾಳಿಗೆ ಇನ್ನೂ ಒಂದು ವರ್ಷ ಇಂಜಿನಿಯರಿಂಗ್ ಓದುವುದಿತ್ತು.ಇಷ್ಟು ದಿನ ರಜೆ ಹಾಕಿದ್ದು ಇನ್ನು ನೋಟ್ಸ್ ಬರೆಯುವ, ಪ್ರಾಕ್ಟಿಕಲ್ ಮಾಡುವ ಕೆಲಸವಿದೆ..ಇವತ್ತಿನಿಂದಲೇ ಕಾಲೇಜಿಗೆ ಹೋಗಬೇಕು.ಬೇಗನೆ ಎದ್ದು ಹೊರಡುತ್ತೇನೆ ಎಂದು ಏಳಲು ನೋಡಿದಳು.ಪತಿ ಗಟ್ಟಿಯಾಗಿ ತಬ್ಬಿಹಿಡಿದಿದ್ದರು ..ಅಯ್ಯೋ ಉಲ್ಲಾಸ್ ಬಿಡಿ ನನ್ನ... ಎನ್ನುತ್ತಿದ್ದಂತೆ ಗಲ್ಲಕೊಂದು ಮುತ್ತು ಕೊಟ್ಟರು..

       ಎದ್ದವಳೇ ಆಚೆ ಈಚೆ ತಿರುಗಿ ನೋಡಿದಳು.ಹಾಂ..ನಾನೆಲ್ಲಿದ್ದೇನೆ...ಉಲ್ಲಾಸ್ ಎಲ್ಲಿ... ಎನ್ನುತ್ತಾ ಕಣ್ಣುಜ್ಜಿಕೊಂಡಳು... ಶಮಿತಾ ಬಂದು "ಏನೇ ಭಾವನಾ ಆಗಿನಿಂದ ಉಲ್ಲಾಸ್.. ಉಲ್ಲಾಸ್ ಎಂದು ಕೂಗಿಕೊಳ್ತಿದೀಯಾ...ಯಾರನ್ನಾದರೂ ಲವ್ ಮಾಡ್ತಾ ಇದ್ದೀಯಾ..".ಪಿಜಿ ಮೇಟ್ ಶಮಿತಾ ಅಂದಾಗಲೇ ತಾನಿದುವರೆಗೂ ಕಂಡದ್ದು ಕನಸು ಎಂದು ಅರಿವಾಗಿದ್ದು ಭಾವನಾಗೆ..


    ಶಮಿತಾ ನಂಗೆ ಎಷ್ಟು ಒಳ್ಳೆಯ ಕನಸು ಬಿದ್ದಿತ್ತು ಗೊತ್ತಾ..ನೀನು ಯಾವಾಗಲೂ ಹಾಗೆ ಕನಸು ಬಿತ್ತು ಹೀಗೆ ಬಿತ್ತು ಎಂದು ಹೇಳ್ತಿದ್ದಾಗ ನನಗೆ ಯಾಕೆ ನಿನ್ನಂತೆ ಸಿಹಿಗನಸು ಬೀಳುತ್ತಿಲ್ಲ ಅಂದುಕೊಂಡಿದ್ದೆ.. ಇಂದು ಸುಸ್ವಪ್ನವೊಂದು ಬಿತ್ತು ಕಣೇ...ಕನಸಿನೊಳಗೊಂದು ಕನಸು...

     ಉಲ್ಲಾಸ ನನ್ನ ಕೈಹಿಡಿದ ರಾಜಕುಮಾರನಾದರೆ ... ನಾನು ಇದುವರೆಗೆ ಕಾಣದ ನನ್ನ ಅಮ್ಮ ಇವತ್ತು ಕಣ್ಣಾರೆ ಕಂಡರು ಶಮಿತಾ... ನಿಜಕ್ಕೂ ಅಮ್ಮ ನನ್ನ ಪಕ್ಕದಲ್ಲೇ ಕೂತಿದ್ರು.. ನನ್ನನ್ನು ಧಾರೆಯೆರೆದುಕೊಟ್ರು.. ಮದುವೆಯಾಗಿ ಗಂಡನ ಜೊತೆ ಹೊರಡಬೇಕಾದ್ರೆ ಎಷ್ಟು ಭಾವುಕರಾದರು ಗೊತ್ತಾ.. ಎನ್ನುತ್ತಾ ಭಾವನಾಳ ಕಂಗಳು ಒದ್ದೆಯಾದುವು.ಶಮಿತಾ ಪಕ್ಕದಲ್ಲಿ ನಿಂತು ಭಾವನಾಳನ್ನು ಸಂತೈಸಿದಳು.ಭಾವನಾಳಿಗೆ ತೀರಿಹೋದ ತನ್ನ ಅಮ್ಮನನ್ನು ನೋಡಬೇಕೆಂಬ ಬಯಕೆ ಇದ್ದದ್ದು ಈಗ ಕನಸಿನ ಮೂಲಕ ಈಡೇರಿತು.ಕನಸಿನಲ್ಲಿ ಅಮ್ಮ ಕೈಯಿಟ್ಟಿದ್ದ ಹೆಗಲನ್ನೊಮ್ಮೆ ಮುಟ್ಟಿಕೊಂಡಳು..ಅಮ್ಮನ ಹಿತನುಡಿಗಳನ್ನು ಕಡೆಯವರೆಗೆ ನೆನಪಿಡಬೇಕೆಂದು  ಬರೆಯಲು ಡೈರಿ ತೆರೆದಳು...ನಲ್ಲ ಉಲ್ಲಾಸ ಕೊಟ್ಟಿದ್ದ ಸಿಹಿಮುತ್ತನ್ನು ನನೆದು ಗಲ್ಲವ ಸವರಿಕೊಂಡಳು..



✍️... ಅನಿತಾ ಜಿ.ಕೆ.ಭಟ್.
14-12-2019.

ಒಳಮನಸಿನ ತೊಳಲಾಟ



        ಸುತ್ತಲಿನ ಆಗುಹೋಗುಗಳ ಪರಿವೆಯೇ ಇಲ್ಲದೆ ಮಲಗಿದ್ದ ಗಂಡನಿಗೆ ಕಾಫಿ ಕುಡಿಸಿ ,ದೋಸೆಯ ತುಂಡುಗಳನ್ನು ತಿನ್ನಿಸಿ ಬಾಯೊರೆಸಿದರು ಶಂಕರಿಯಮ್ಮ.ಗಂಡ ಈಶ್ವರಯ್ಯನಿಗೆ ಪಕ್ಷವಾತ ತಗುಲಿ ಇಂದಿಗೆ ಐದು ವರ್ಷ.ಅಂದಿನಿಂದ ಶಂಕರಿಯಮ್ಮ ಗಂಡನನ್ನು ಮಗನಂತೆ ಕಂಡು ಆರೈಕೆ ಮಾಡಿದರು.ಇತ್ತೀಚೆಗೆ ತೀರಾ ಕಂಗಾಲಾದ ಪರಿಸ್ಥಿತಿ.ಎಲ್ಲವೂ ಮಲಗಿದಲ್ಲಿಯೇ.ಎತ್ತಿ ಕೂರಿಸಲು ,ಸ್ನಾನ ಮಾಡಿಸಲು ಮಗ ನರಸಿಂಹ ಸಹಾಯ ಮಾಡುತ್ತಾನೆ.ಅಷ್ಟು ಬಿಟ್ಟರೆ ಮತ್ತೆಲ್ಲವೂ ಶಂಕರಿಯಮ್ಮನ ಹೆಗಲ ಮೇಲೆ.ಅವರಿಗೂ ವಯಸ್ಸಾಯಿತು.ವಯೋಸಹಜ ದೌರ್ಬಲ್ಯ ಗಳು ಕಾಡುತ್ತಿವೆ..

         ನರಸಿಂಹ ಬೆಳಗ್ಗೆ ಬೇಗನೆದ್ದು ದನದ ಹಾಲುಹಿಂಡಿ,ಹಸುಕರುಗಳ ಸೆಗಣಿ ಬಾಚಿ , ಕೊಟ್ಟಿಗೆ ತೊಳೆದು, ಹುಲ್ಲು ಹಿಂಡಿ ಕೊಟ್ಟು ಹಾಲನ್ನು ಡೈರಿಗೆ ಕೊಟ್ಟು ಒಳಗೆ ಕಾಲಿಟ್ಟನು.ಬಂದ ಮಗನತ್ತ ದೈನ್ಯತೆಯ ನೋಟ ಬೀರಿದರು.ತಾಯಿಯ ಈ ಪರಿಯ ನೋಟವನ್ನು ಸಹಿಸುವುದು ನರಸಿಂಹನಿಗೆ ಬಹಳ ಕಷ್ಟ.ಮುಂದೆ ಅಮ್ಮ ಏನು ಹೇಳುತ್ತಾರೆ ಎಂಬುದರ ಅರಿವೂ ಅವನಿಗಿತ್ತು.ಹೌದು ಅಮ್ಮ ಇತ್ತೀಚೆಗೆ ಹೇಳುವುದೊಂದೇ" ಮಗ...ನನಗೂ ವಯಸ್ಸಾಯಿತು...ಅಪ್ಪ ಬದುಕಿದ್ದಾಗಲೇ ಮದುವೆ ಆಗು ಕಣೋ..ನಿನಗೂ ಆಸರೆಗೆ ಒಂದು ಜೀವ ಅಂತ ಇರುತ್ತೆ ಕಣೋ..."

         ಅಮ್ಮನ ಮಾತು ಬರುವ ಮುನ್ನವೇ ವೇಗವಾಗಿ ಊಟದ ಕೋಣೆಯತ್ತ ದಾಪುಗಾಲಿಕ್ಕಿದ.ಅಮ್ಮ ಮಾಡಿ ಮುಚ್ಚಿಟ್ಟ ದೋಸೆ ಬಟ್ಟಲಿಗೆ ಬಡಿಸಿಕೊಂಡು ಕೊಬ್ಬರಿ ಚಟ್ನಿಯೊಂದಿಗೆ ಸವಿದ.ಅಮ್ಮನ ಕೈರುಚಿಯನ್ನು ಮೀರಿಸುವವರುಂಟೆ..?? ಹೊಟ್ಟೆತುಂಬಾ ತಿಂದು ಒಂದು ತಪಲೆಯಲ್ಲಿ ಇದ್ದ ಕೊತ್ತಂಬರಿ ಜೀರಿಗೆ ಕಷಾಯವನ್ನು ಕುಡಿದು ತೇಗಿ ಹೊರಬಂದ..ಅಮ್ಮ ಅಪ್ಪನ ಬೆಳಗಿನ ಚಾಕರಿ ಮುಗಿಸಿದರು. ಮೆಲ್ಲನೆ ಆಸಕ್ತಿಯೇ ಇಲ್ಲದಂತೆ ಬಟ್ಟಲಿನ ಬುಡದಲ್ಲಿ ಕುಳಿತರು..ಅಮ್ಮನ ವೇದನೆಯನ್ನು ಕಂಡ ನರಸಿಂಹನಿಗೆ ಸುಮ್ಮನೆ ತಪ್ಪಿಸಿಕೊಳ್ಳಲು ಮನಸ್ಸು ಬರಲಿಲ್ಲ..


         "ಎಷ್ಟು ದಿನ ಹೀಗೇ ಇರ್ತಿ ನರಸಿಂಹ.ಮದುವೆ ಮಾಡಿಕೋ..ಬರುವ ಯುಗಾದಿಗೆ ನಿನಗೆ ವರ್ಷ ಭರ್ತಿ  ನಲುವತ್ತಾಗುತ್ತೆ..ನಿನ್ನ ಪ್ರಾಯದವರೆಲ್ಲ ಮದುವೆಯಾಗಿ ಮಗನಿಗೆ ಬ್ರಹ್ಮೋಪದೇಶ ಮಾಡಿ ಆಯ್ತು.. ನಿನಗೆ ಯಾವ ಚಿಂತೆಯೂ ಇಲ್ಲ.. ಮೊನ್ನೆ  ಮಾವನ ಮಗನ ಮದುವೆಯಲ್ಲಿ ಅತ್ತಿಗೆಯಂದಿರೆಲ್ಲ ಕೇಳುವಾಗ ನನಗೇ ಏನು ಹೇಳಬೇಕೋ ತೋಚಲಿಲ್ಲ... ನೀನು ಯಾವ ಹುಡುಗಿಯನ್ನು ತೋರಿಸಿ ಇವಳನ್ನು ಮದುವೆ ಆಗ್ತೀನಿ ಅಂತೀಯೋ ..ನಾನು ಅವಳನ್ನು ಮನಸಾರೆ ಸೊಸೆಯೆಂದು ಸ್ವೀಕರಿಸುತ್ತೇನೆ.."

         "ಹೇಳುವವರು ಹೇಳಲಿ... ನಾನು ನಿನ್ನ ಮಗನಮ್ಮಾ.. ನಿಮ್ಮನ್ನು ಯಾವತ್ತೂ ಕೈಬಿಡಲ್ಲ.." ಎಂದು ಅಮ್ಮನನ್ನು ಸಂತೈಸಿ ಹೊರಗೆ ಹೋದ..

       ಶಂಕರಿಯಮ್ಮ ಕಷ್ಟದಲ್ಲಿ ತುತ್ತು ಗಂಟಲಿನಲ್ಲಿಳಿಸಿದರು..ನನ್ನ ಅತ್ತಿಗೆ ಸುನಂದಾಗೆ ನರಸಿಂಹನ ಪ್ರಾಯದ್ದೇ ಹೆಣ್ಣುಮಗು ಹುಟ್ಟಿದಾಗ ನನ್ನ ತಾಯಿ ಶಂಕರಿಗೆ ಗಂಡು ಮಗು ಎಂದು ಸಂಭ್ರಮಿಸಿದ್ದರು..ಎಲ್ಲ ನೀರಮೇಲೆ ಹೋಮ ಮಾಡಿದಂತಾಯ್ತು..ಸುನಂದಾಳ ಮಗಳು ಸುಮಾಗೆ ಮದುವೆಯಾಗಿ ಡಿಗ್ರಿ ಓದುವ ಮಗಳಿದ್ದಾಳೆ..ನಮ್ಮ ನರಸಿಂಹನಿಗೆ ಮಾತ್ರ ಕಂಕಣ ಭಾಗ್ಯ ಕೂಡಿ ಬಂದಿಲ್ಲ..ಛೇ...!!
ಎಲ್ಲರಲ್ಲೂ ಮಗನಿಗೆ ಎಲ್ಲಾದರೂ ಹುಡುಗಿಯಿದ್ದರೆ ಹೇಳಿ ಎಂದು ಹೇಳಿಯಾಯಿತು..ಸಿಗಲಿಲ್ಲ.ಈಗಂತೂ ನಾನು ಹಾಗೆ ಹೇಳುತ್ತೇನೆಂದು ನೆಂಟರು ನನ್ನ ಬಳಿ ಮಾತನಾಡುವುದನ್ನೇ ಕಡಿಮೆ ಮಾಡಿದ್ದಾರೆ ..

            ನರಸಿಂಹನ ತಲೆಯೂ ಯೋಚನೆಗಳಿಂದ ತುಂಬಿತ್ತು..ಅಲ್ಲ ಮದುವೆಯಾದರೆ ಮಾತ್ರ ಬದುಕಾ...ಬ್ರಹ್ಮಾಚಾರಿಯಾಗಿದ್ದರೆ ತಪ್ಪಾ.. ಹೆತ್ತವರನ್ನು ಪ್ರೀತಿಯಿಂದ ನೋಡಿಕೊಂಡರೆ ಸಾಲದಾ...ನನಗೂ ಮದುವೆಯ ಕನಸೇನೋ ಇದೆ.. ನನ್ನವಳು ತಂದೆತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.. ಮನೆತನಕ್ಕೆ ತಕ್ಕಂತೆ ಬಾಳಬೇಕು..ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕು... ಇದಕ್ಕೆಲ್ಲಾ ಸರಿಹೊಂದುವ ಹುಡುಗಿ ಸಿಗುತ್ತಾಳಾ... ಮದುವೆಯಾಗಿ ಸ್ವಲ್ಪ ಸಮಯಕ್ಕೆ ಪಟ್ಟಣಕ್ಕೆ ಹೋಗೋಣ ಎಂದರೆ ತಂದೆ ತಾಯಿಯ ಗತಿಯೇನು..?? ಎಲ್ಲರೂ ಕಂಡಾಗ ಫೋನ್ ಮಾಡಿದಾಗ.. ಮದುವೆ ಯಾವಾಗ..?? ಎಂದು ಕೇಳುವ ಪ್ರಶ್ನೆಗೆ  ತೆರೆಯೆಳೆಯಲು ನನ್ನಿಂದ ಆದೀತೇ..

              ನನ್ನಂತೆಯೇ ಹುಡುಗಿಗೂ ಕನಸಿರುವುದಿಲ್ಲವೇ..ಪಟ್ಟಣದಲ್ಲಿ ಗಂಡ ಮಕ್ಕಳೊಂದಿಗೆ ಹೈಫೈ ಜೀವನ ಬೇಕು..ಕಾರು, ಬಂಗಲೆ, ಐಶಾರಾಮಿ ಸೌಲಭ್ಯಗಳೂ ಬೇಕು ಎಂದು..ಅದೂ ತಪ್ಪಾ..ಅಲ್ಲವಲ್ಲಾ.. ಹಾಗೆಂದು ಅದನ್ನೆಲ್ಲ ಪೂರೈಸಲು ನನ್ನಿಂದ ಸಾಧ್ಯಾನಾ..ಕೈಹಿಡಿದವಳಿಗೆ ನಿರಾಸೆಪಡಿಸುವುದಕ್ಕಿಂತ ಒಂಟಿ ಬದುಕೇ ಲೇಸು...

          ಹಾಗೂ ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗಿ ಮತ್ತೆ ಪುನಃ ಉದ್ಯೋಗಕ್ಕೆ ಸೇರಲು ಮಡದಿ ಒತ್ತಾಯಿಸಿದರೆ..ನನ್ನ ಮನಸ್ಸನ್ನು ಕಲ್ಲು ಮಾಡಿ ಇಲ್ಲವೆನ್ನಲು ಆದೀತೇ.. ಸಾಫ್ಟವೇರ್ ಇಂಜನಿಯರ್ ಆಗಿದ್ದು ಕೈತುಂಬಾ ಸಂಬಳವಿದ್ದ ಉದ್ಯೋಗ ಬಿಟ್ಟು ಹಳ್ಳಿ ಸೇರಿದ್ದು ತಂದೆತಾಯಿಯನ್ನು ನೋಡಿಕೊಳ್ಳಲೆಂದು ...ಆ ಉದ್ದೇಶವನ್ನೇ  ಕೌಟುಂಬಿಕ ಪ್ರಪಂಚದಲ್ಲಿ ನಾನು ಮರೆತರೆ...


         ಎಂದೆಲ್ಲ ಯೋಚಿಸುತ್ತಿದ್ದ ನರಸಿಂಹನಿಗೆ ಇಂದು ಹತ್ತಿರದ ಪಟ್ಟಣಕ್ಕೆ ಹೋಗಬೇಕೆಂದು ನೆನಪಾಯಿತು.." ಅಮ್ಮಾ...ಹೋಗಿಬರುತ್ತೇನೆ"... ಎಂದು ಹೇಳಿ ಹಳೆಯ ಓಮ್ನಿ ಯಲ್ಲಿ ಅಡಿಕೆ, ಬಾಳೆಗೊನೆ ತೆಗೆದುಕೊಂಡು ಹೊರಟ.ಪಟ್ಟಣದಲ್ಲಿ ಅದನ್ನು ಮಾರಿ ದಿನಸಿ ಅಂಗಡಿಗೆ ಬಂದು ಒಂದೊಂದೇ ಸಾಮಾನು ಚೀಟಿಯಲ್ಲಿದ್ದುದನ್ನು ಓದಿ ಹೇಳಿದ.ಅಲ್ಲಿದ್ದ ಅಂಗಡಿಯ ಸಹಾಯಕಿ .."ಸರ್.. ನೀವು ಆ ಚೀಟಿಯನ್ನೇ ಕೊಟ್ಟುಬಿಡಿ ..ನಮಗೆ ಸುಲಭ ಆಗುತ್ತದೆ.." ಎಂದು ಕೇಳಿ ಪಡೆದುಕೊಂಡು ಸಾಮಾನು ಕಟ್ಟಿಕೊಡುತ್ತಿದ್ದ ರಾಮಣ್ಣನ ಕೈಗಿತ್ತಳು..

ನರಸಿಂಹ ಸಾಮಾನು ಕಟ್ಟಿ ಆಗುವಷ್ಟು ಹೊತ್ತು ಪಕ್ಕದ ಫ್ಯಾನ್ಸಿ ಅಂಗಡಿಯತ್ತ ನೋಟಹರಿಸಿದ.ಒಂದು ಕುಟುಂಬ ವ್ಯಾಪಾರ ಮಾಡುತ್ತಿತ್ತು .ಪುಟ್ಟ ಹುಡುಗಿ ".....ಅದು ಬೇಕು ಇದು ಬೇಕು "ಎಂದು ಸಿಕ್ಕಿದ್ದೆಲ್ಲಾ ತೋರಿಸುತ್ತಿತ್ತು.ಪಕ್ಕದಲ್ಲಿದ್ದ ಅಮ್ಮ "ಅದು ಬೇಡ ಮಗಳೇ..." ಎಂದರೆ ಅಪ್ಪ ಮಾತ್ರ ಅದಕ್ಕೆ ಎಷ್ಟು ಎಂದು ಕೇಳಿ ಇರಲಿ ಎನ್ನುತ್ತಿದ್ದ.. ಇದನ್ನೆಲ್ಲಾ ಬಾಗಿಲ ಸಂದಿಯಲ್ಲಿ ನಿಂತು ಸುಮಾರು ಆರೇಳು ವರ್ಷದ ಬಾಲಕಿಯೊಬ್ಬಳು ಆಸೆಯ ಕಣ್ಣುಗಳಿಂದ ಗಮನಿಸುತ್ತಿದ್ದಳು.ತಂದೆ ಮಗಳಿಗೆ ಬೇಕಾದ್ದನ್ನೆಲ್ಲ ಕೊಡಿಸಿ ದೊಡ್ಡ ಪ್ಯಾಕ್ ಹಿಡಿದು ಹೊರಬಂದು ಹೆಂಡತಿ ಮಗಳನ್ನು ಕಾರಿನಲ್ಲಿ ಕುಳ್ಳಿರಿಸಿದರೆ ...ಬಾಗಿಲ ಸಂದಿಯಲ್ಲಿ ಆಸೆಕಂಗಳಿಂದ ನೋಡುತ್ತಿದ್ದ ಹುಡುಗಿಯ ಕಣ್ಣಂಚಿನಿಂದ ಕಣ್ಣೀರು ಜಿನುಗಿತ್ತು.


       ಇದನ್ನು ಕಂಡು ನರಸಿಂಹ "ನಿನಗೇನಾದರೂ ಬೇಕಿತ್ತಾ ಹುಡುಗಿ.".ಅಂದ.. ಒಂದು ಕ್ಷಣ ನರಸಿಂಹನ ಮುಖವನ್ನೇ ದಿಟ್ಟಿಸಿದ ಬಾಲಕಿ.. ಅಪರಿಚಿತ ವ್ಯಕ್ತಿಯ ಕಂಡು .."ಬೇಡ.. ನನಗೇನೂ ಬೇಡ..ನನಗೂ ಆಪ್ಪ ಇದ್ದರೆ...ಕೊಡಿಸುತ್ತಿದ್ದರು.."ಎಂದು ಹೇಳಿ ಸೀದಾ ತಾನು ಸಾಮಾನು ಕೊಳ್ಳುತ್ತಿದ್ದ ಅಂಗಡಿಯ ಒಳಗೆ ಹೋಯಿತು.ಅಲ್ಲಿದ್ದ ಸಹಾಯಕಿಯ ಮಗಳು ಈಕೆ ಎಂದು ತಿಳಿಯಲು ನರಸಿಂಹನಿಗೆ ಹೆಚ್ಚು ಕಾಲ ಹಿಡಿಯಲಿಲ್ಲ..

         ಸಾಮಾನಿನ ಬಿಲ್ ಕೈಗಿತ್ತ ಸಹಾಯಕಿಯ ಮುಖವನ್ನೊಮ್ಮೆ ನೋಡಿದ ನರಸಿಂಹ..ಇವನೇನು ಹೀಗೆ ನೋಡುತ್ತಿದ್ದಾನೆ ಎಂಬಂತೆ ಅತ್ತ ನೋಡಿದಳು ಆಕೆ.. ಮನೆಗೆ ಮರಳುತ್ತಿದ್ದ ನರಸಿಂಹನ ತಲೆಯಲ್ಲಿ ಯೋಚನೆಗಳ ಕೊರೆತ.. ನಾವು ನಮ್ಮ ಸ್ವಾರ್ಥ ವನ್ನೇ ನೋಡುತ್ತಿದ್ದೇವೆ..ನಮ್ಮ ಇಷ್ಟಕಷ್ಟಗಳಿಗೆ ಹೊಂದುವಂತಹ ಹೆಣ್ಣನ್ನು ಕೈಹಿಡಿಯಬೇಕು ಎಂದು ಯೋಚಿಸುತ್ತಿದ್ದೇವೆಯೇ ಹೊರತು ಕಷ್ಟದಲ್ಲೇ ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿರುವವರ ಬಗ್ಗೆ ಯೋಚಿಸುವುದೇ ಇಲ್ಲ..ಛೇ..!ನನ್ನದು ಎಷ್ಟು ಸಣ್ಣತನ.. ನಾನು ಆ ಪುಟ್ಟ ಬಾಲಕಿಗೆ ಯಾಕೆ ತಂದೆಯ ಸ್ಥಾನದಲ್ಲಿ ನಿಲ್ಲಬಾರದು... ಯಾವುದೋ ಕಾರಣಕ್ಕೆ ಬದುಕಿನಲ್ಲಿ ನೊಂದು ಬೆಂದು ಹೋದ ಸ್ತ್ರೀ ಗೆ ಯಾಕೆ ಜೀವನ ಕೊಡಬಾರದು..ನನ್ನಂತೆಯೇ ಆಕೆಗೂ ಸುಂದರ ಬದುಕಿನ ಕನಸಿರಬಹುದು .. ನಾನು ನಿನಗೆ ನೀನು ನನಗೆ ಎಂದು ಬದುಕಹೊಸೆದರೆ ತಪ್ಪೇನಿದೆ...ಎಂದೆಲ್ಲ ಯೋಚನೆಗಳೇ ತುಂಬಿದವು.. ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು.

          ಮನೆಗೆ ಮರಳಿದ ನರಸಿಂಹನ ಮೊಗದಲ್ಲಿ ಮಂದಹಾಸ ಇತ್ತು.ಅಂಗಳದಲ್ಲಿ ಓಮ್ನಿ ನಿಲ್ಲಿಸಿದವನೇ ಅಮ್ಮಾ.. ಎನ್ನುತ್ತಾ ಒಳಗೆ ಓಡಿದ..ನೀನಂದಂತೆ ನಾನು ಮದುವೆಯಾಗುತ್ತೇನೆ.. ಹುಡುಗಿಯನ್ನು ಮದುವೆಗೆ ಒಪ್ಪಿಸುವ ಕೆಲಸ ನಿನ್ನದು..

ಹರುಷಗೊಂಡ ಶಂಕರಿಯಮ್ಮ "ಹೌದೋ... ಯಾರವಳು ..ಹೇಳು.."

"ಅವಳೇ ಅಮ್ಮಾ...ಶ್ಯಾಮಣ್ಣನ ಅಂಗಡಿಯಲ್ಲಿ ಸಹಾಯಕಿ ಆಗಿದ್ದಾಳಲ್ಲ .. ಅವಳು..."

"ಅವಳಾ.."ಮುಖ ಸಣ್ಣದು ಮಾಡಿಕೊಂಡರು..

"ಯಾಕಮ್ಮಾ.. ಅವಳು ಚೆನ್ನಾಗಿಲ್ವಾ... ಯಾರನ್ನು ತಂದು ನಿಲ್ಲಿಸಿದರೂ ಒಪ್ಪಿಕೊಳ್ಳುವೆ ಅಂದೆ.."

"ಹೌದು ಅಂದೆ.. ಆದರೆ... ಅವಳನ್ನು ಮದುವೆಯಾದರೆ ಜನ ಬಾಯಿಗೊಂದರಂತೆ ಆಡಿಕೊಳ್ಳುತ್ತಾರೆ ..ಬೇಡ ಕಣೋ.."

"ಇಲ್ಲಮ್ಮ.. ನಾನು ನಿರ್ಧಾರ ಮಾಡಿ ಆಗಿದೆ..ಆದರೆ ಅವಳನ್ನೇ ಆಗೋದು.."

     "ಬೇಡ ಎಂದು ಹೇಳುತ್ತಿದ್ದೇನೆ...ಅವಳ ಜಾತಿ ಬೇರೆ..ಸಂಸ್ಕಾರ ಬೇರೆ.. ಮತ್ತೆ ಯಾವನ ಜೊತೇಲೋ ಓಡಿಹೋದವಳು... ಇಷ್ಟೆಲ್ಲಾ ಆದರೂ ಏನೂ ನಡೆದಿಲ್ಲ ಎಂಬಂತೆ ಬದುಕುತ್ತಿದ್ದಾಳೆ.."

      "   ...  ನೋಡಮ್ಮ.. ಮನುಷ್ಯ ಜಾತಿ ..ಹೆಣ್ಣು ಗಂಡು ಎಂಬ ಭೇದವನ್ನಷ್ಟೇ  ನಂಬುವವನು ನಾನು..ಅಲ್ಲದೇ ಪ್ರೀತಿ ಮಾಡಿದ್ದು ತಪ್ಪಲ್ಲ.. ಮದುವೆಯಾದರೂ ಪ್ರೀತಿಮಾಡಲೇಬೇಕು ತಾನೇ.. ಅಷ್ಟೆಲ್ಲಾ ನೋವನುಭವಿಸಿದರೂ ಆತ್ಮಹತ್ಯೆ ಮಾಡಿಕೊಳ್ಳುವ ಗೋಜಿಗೆ ಹೋಗದೆ ಮಗಳೊಂದಿಗೆ ಸಮಾಜದಲ್ಲಿ ಬದುಕುವುದಕ್ಕೆ ಗುಂಡಿಗೆ ಬೇಕಮ್ಮಾ..ಅವಳನ್ನೇ ಮದುವೆಯಾಗ್ತೀನಿ..."..ಎಂದವನೇ ತನ್ನ ಸ್ನೇಹಿತರ ಮೂಲಕ ಹುಡುಗಿಯ ಬಗ್ಗೆ ವಿಚಾರಿಸಿದ..

        ಆಕೆಯ ಹೆಸರು ನಂದಿನಿ.ಅಮ್ಮ ಹೇಳಿದ ಘಟನೆಗಳು ಸತ್ಯ.ಪ್ರೀತಿಸಿ ಮೋಸಹೋಗಿದ್ದಳು.ಕೈಗೊಂದು ಮಗು ಬಂದಾಗ ಆತ ಪರಾರಿಯಾಗಿದ್ದ.ಜವಾಬ್ದಾರಿ ಬೇಡ ಹೆಣ್ಣು ಮಾತ್ರ ಬೇಕು ಎನ್ನುವ ಖಯಾಲಿಯ ಮನುಷ್ಯ.. ತವರು ಮನೆಯಲ್ಲಿ ಆಶ್ರಯ ಪಡೆದುಕೊಂಡಳು ನಂದಿನಿ.ಇಷ್ಟೆಲ್ಲ
ಆದರೂ ತಂದೆಯಿಲ್ಲದ ಮಗುವಿಗೆ ತಂದೆಯ ಸ್ಥಾನ ನೀಡಲು ನಾನು ಬದ್ಧ..ಎಂದ ನರಸಿಂಹ.. ಎಂದೂ ಪುನಃ ಮದುವೆಯಾಗುವ ಕನಸನ್ನು ಕಾಣದಿದ್ದ ನಂದಿನಿ ನರಸಿಂಹನ ಹೃದಯ ವೈಶಾಲ್ಯತೆಯನ್ನು ಕಂಡು ಒಪ್ಪಿಗೆಯಿತ್ತಳು.. ಹಳ್ಳಿಯಲ್ಲಿ ಬದುಕುತ್ತಾ ಹಿರಿಯರ ಜೊತೆ ಮನೆತನಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವ ಭರವಸೆಯಿತ್ತಳು..ನಂದಿನಿಯ ಮಗಳು ನಿಶಾ ಹೊಸ ತಂದೆ ಸಿಗುವರೆಂಬ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಳು..


        ಸಧ್ಯದಲ್ಲೇ ಅವಿವಾಹಿತ ಬದುಕನ್ನು ಕೊನೆಗಾಣಿಸಿ ಮದುವೆಯಾಗಿ  ... ಮಡದಿಗೆ ಒಳ್ಳೆಯ ಪತಿಯಾಗಿ..ಮಗಳಿಗೆ ಜವಾಬ್ದಾರಿಯುತ ತಂದೆಯಾಗಿ ತನ್ನ ಹೆತ್ತವರನ್ನೂ ಚೆನ್ನಾಗಿ ನೋಡಿಕೊಂಡು ಬದುಕಬೇಕು ಎಂದು ಕನಸುಕಾಣುತ್ತಿದ್ದಾನೆ ನರಸಿಂಹ..

✍️... ಅನಿತಾ ಜಿ.ಕೆ.ಭಟ್.
14-12-2019.