ಭಾವನಾ ಅಮ್ಮನತ್ತ ಬಿಂಕದ ನೋಟವನ್ನು ಬೀರಿದಳು.ತನ್ನ ಪ್ರಣಯ ರಾಜ ಉಲ್ಲಾಸನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಸಂಭ್ರಮ ಅವಳಿಗೆ.ಉಲ್ಲಾಸ ತಾನು ಇಷ್ಟಪಟ್ಟ ಹುಡುಗ . ಇಬ್ಬರೂ ಜೊತೆಯಾಗಿ ಎರಡು ವರ್ಷ ಒಟ್ಟಿಗೆ ಓಡಾಡಿ ಒಬ್ಬರನ್ನೊಬ್ಬರು ಅರಿತುಕೊಂಡು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.ಅಮ್ಮ ಅಪ್ಪ ಇಬ್ಬರಿಗೂ ಉಲ್ಲಾಸನ ಗುಣನಡತೆ ಇಷ್ಟವಾಗಿತ್ತು.ಒಳ್ಳೆಯ ಕೌಟುಂಬಿಕ ಹಿನ್ನೆಲೆಯುಳ್ಳ ಶ್ರೀಮಂತ ವರ.
ನಿಶ್ಚಿತಾರ್ಥ ಮುಗಿದು ತಿಂಗಳಲ್ಲೇ ಮದುವೆಯೂ ನಡೆಯಿತು.ವೈಭವದ ಮದುವೆ.ಮದುವೆ ಮಂಟಪ ಝಗಮಗಿಸುತ್ತಿತ್ತು.ಭಾವನಾ ಖುಷಿಯಲ್ಲಿ ತೇಲಾಡಿದಳು.ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ಅಪ್ಪ ಅಮ್ಮ ಭಾವುಕರಾದರು.ಅಮ್ಮ ವಾರಿಜಾಳ ಕೈ ಮಗಳ ಹೆಗಲಮೇಲಿಂದ ಕದಲಲು ಒಪ್ಪಲೇ ಇಲ್ಲ.ಕಷ್ಟಸುಖ ಎರಡನ್ನೂ ಸಮಾನವಾಗಿ ಕಂಡು ಬಾಳು ಮಗಳೇ.. ಎಂದು ತುಂಬಿದ ಕಂಗಳಿಂದ ಮಗಳು ಅಳಿಯನನ್ನು ಹರಸಿ ಕಳುಹಿಸಿದರು.ಭಾವನಾ ಗಂಡನೊಡನೆ ನಿಧಾನವಾಗಿ ಹೆಜ್ಜೆ ಹಾಕಿದಳು.
ಹನಿಮೂನ್ ಗೆ ಇಬ್ಬರೂ ಸ್ವಿಟ್ಜರ್ಲೆಂಡ್ ಗೆ ಹಾರಿದರು.ಭಾವನಾಗೆ ಮೊದಲ ವಿಮಾನ ಪ್ರಯಾಣ.ಭಯದಿಂದ ತನ್ನೆರಡೂ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡಿದ್ದಳು.ಸ್ವಿಟ್ಜರ್ಲೆಂಡ್ ನ ಸುಂದರ ತಾಣಗಳನ್ನು ಕಂಡ ಭಾವನಾ ಹುಚ್ಚೆದ್ದು ಕುಣಿದಾಡಿದಳು.ಉಲ್ಲಾಸನು ಗಂಡನಾಗಿ ದೊರೆತದ್ದು ಸೌಭಾಗ್ಯ ಎಂದುಕೊಂಡಳು.ಅವನ ತುಂಟಾಟ ,ಪ್ರೇಮದಾಸರೆಯಲ್ಲಿ ಮೈಮರೆತಳು.ಯಾವಾಗಲೂ ಕಾಲೆಳೆದು ಕೀಟಲೆ ಮಾಡುತ್ತಿದ್ದ ಉಲ್ಲಾಸನ ಪ್ರತಿನೋಟದಲ್ಲೂ ಒಂದು ಪ್ರೇಮಕವನವಿದ್ದಂತೆ ಭಾಸವಾಯಿತು.
ದಿನಕಳೆದದ್ದೇ ತಿಳಿಯಲಿಲ್ಲ.ಬೆಂಗಳೂರಿಗೆ ವಾಪಾಸಾದರು.ಅಮ್ಮ ಅಪ್ಪನನ್ನು ನೋಡುವ ಹಂಬಲ.ಉಲ್ಲಾಸನನ್ನು ಬಿಟ್ಟು ಹೋಗಲಾಗದ ಚಡಪಡಿಕೆ."ಮಹಾರಾಣಿಯವರೇ ಹೋಗಿ ಬರೋಣ.ನನಗೂ ಎರಡು ದಿನ ನಿಲ್ಲಲು ಅವಕಾಶ ಕೊಡುವಿರಲ್ಲ.". ಎಂದು ಗಲ್ಲ ಹಿಂಡಿದ ನಲ್ಲ.."ಅಯ್ಯೋ ಬಿಡಿ.. ನೋವಾಗುತ್ತದೆ.." ಎಂದು ಕಿರುಚಿದಳು..
ತವರು ಮನೆಯಲ್ಲಿ ಎರಡು ದಿನ ನವದಂಪತಿಗೆ ಭರ್ಜರಿ ಔತಣ ಮಾಡಲಾಯಿತು.ಇಬ್ಬರೂ ಸಂತುಷ್ಟರಾಗಿ ಮನೆಗೆ ಮರಳಿದರು.ಭಾವನಾಳಿಗೆ ಇನ್ನೂ ಒಂದು ವರ್ಷ ಇಂಜಿನಿಯರಿಂಗ್ ಓದುವುದಿತ್ತು.ಇಷ್ಟು ದಿನ ರಜೆ ಹಾಕಿದ್ದು ಇನ್ನು ನೋಟ್ಸ್ ಬರೆಯುವ, ಪ್ರಾಕ್ಟಿಕಲ್ ಮಾಡುವ ಕೆಲಸವಿದೆ..ಇವತ್ತಿನಿಂದಲೇ ಕಾಲೇಜಿಗೆ ಹೋಗಬೇಕು.ಬೇಗನೆ ಎದ್ದು ಹೊರಡುತ್ತೇನೆ ಎಂದು ಏಳಲು ನೋಡಿದಳು.ಪತಿ ಗಟ್ಟಿಯಾಗಿ ತಬ್ಬಿಹಿಡಿದಿದ್ದರು ..ಅಯ್ಯೋ ಉಲ್ಲಾಸ್ ಬಿಡಿ ನನ್ನ... ಎನ್ನುತ್ತಿದ್ದಂತೆ ಗಲ್ಲಕೊಂದು ಮುತ್ತು ಕೊಟ್ಟರು..
ಎದ್ದವಳೇ ಆಚೆ ಈಚೆ ತಿರುಗಿ ನೋಡಿದಳು.ಹಾಂ..ನಾನೆಲ್ಲಿದ್ದೇನೆ...ಉಲ್ಲಾಸ್ ಎಲ್ಲಿ... ಎನ್ನುತ್ತಾ ಕಣ್ಣುಜ್ಜಿಕೊಂಡಳು... ಶಮಿತಾ ಬಂದು "ಏನೇ ಭಾವನಾ ಆಗಿನಿಂದ ಉಲ್ಲಾಸ್.. ಉಲ್ಲಾಸ್ ಎಂದು ಕೂಗಿಕೊಳ್ತಿದೀಯಾ...ಯಾರನ್ನಾದರೂ ಲವ್ ಮಾಡ್ತಾ ಇದ್ದೀಯಾ..".ಪಿಜಿ ಮೇಟ್ ಶಮಿತಾ ಅಂದಾಗಲೇ ತಾನಿದುವರೆಗೂ ಕಂಡದ್ದು ಕನಸು ಎಂದು ಅರಿವಾಗಿದ್ದು ಭಾವನಾಗೆ..
ಶಮಿತಾ ನಂಗೆ ಎಷ್ಟು ಒಳ್ಳೆಯ ಕನಸು ಬಿದ್ದಿತ್ತು ಗೊತ್ತಾ..ನೀನು ಯಾವಾಗಲೂ ಹಾಗೆ ಕನಸು ಬಿತ್ತು ಹೀಗೆ ಬಿತ್ತು ಎಂದು ಹೇಳ್ತಿದ್ದಾಗ ನನಗೆ ಯಾಕೆ ನಿನ್ನಂತೆ ಸಿಹಿಗನಸು ಬೀಳುತ್ತಿಲ್ಲ ಅಂದುಕೊಂಡಿದ್ದೆ.. ಇಂದು ಸುಸ್ವಪ್ನವೊಂದು ಬಿತ್ತು ಕಣೇ...ಕನಸಿನೊಳಗೊಂದು ಕನಸು...
ಉಲ್ಲಾಸ ನನ್ನ ಕೈಹಿಡಿದ ರಾಜಕುಮಾರನಾದರೆ ... ನಾನು ಇದುವರೆಗೆ ಕಾಣದ ನನ್ನ ಅಮ್ಮ ಇವತ್ತು ಕಣ್ಣಾರೆ ಕಂಡರು ಶಮಿತಾ... ನಿಜಕ್ಕೂ ಅಮ್ಮ ನನ್ನ ಪಕ್ಕದಲ್ಲೇ ಕೂತಿದ್ರು.. ನನ್ನನ್ನು ಧಾರೆಯೆರೆದುಕೊಟ್ರು.. ಮದುವೆಯಾಗಿ ಗಂಡನ ಜೊತೆ ಹೊರಡಬೇಕಾದ್ರೆ ಎಷ್ಟು ಭಾವುಕರಾದರು ಗೊತ್ತಾ.. ಎನ್ನುತ್ತಾ ಭಾವನಾಳ ಕಂಗಳು ಒದ್ದೆಯಾದುವು.ಶಮಿತಾ ಪಕ್ಕದಲ್ಲಿ ನಿಂತು ಭಾವನಾಳನ್ನು ಸಂತೈಸಿದಳು.ಭಾವನಾಳಿಗೆ ತೀರಿಹೋದ ತನ್ನ ಅಮ್ಮನನ್ನು ನೋಡಬೇಕೆಂಬ ಬಯಕೆ ಇದ್ದದ್ದು ಈಗ ಕನಸಿನ ಮೂಲಕ ಈಡೇರಿತು.ಕನಸಿನಲ್ಲಿ ಅಮ್ಮ ಕೈಯಿಟ್ಟಿದ್ದ ಹೆಗಲನ್ನೊಮ್ಮೆ ಮುಟ್ಟಿಕೊಂಡಳು..ಅಮ್ಮನ ಹಿತನುಡಿಗಳನ್ನು ಕಡೆಯವರೆಗೆ ನೆನಪಿಡಬೇಕೆಂದು ಬರೆಯಲು ಡೈರಿ ತೆರೆದಳು...ನಲ್ಲ ಉಲ್ಲಾಸ ಕೊಟ್ಟಿದ್ದ ಸಿಹಿಮುತ್ತನ್ನು ನನೆದು ಗಲ್ಲವ ಸವರಿಕೊಂಡಳು..
✍️... ಅನಿತಾ ಜಿ.ಕೆ.ಭಟ್.
14-12-2019.
👌🏻👌🏻😊
ReplyDeleteಥ್ಯಾಂಕ್ಯೂ 💐🙏
ReplyDelete