Wednesday, 18 December 2019

ತಾಯ್ತನ... ಸುಂದರ ಅನುಭೂತಿ




      ತಾಯ್ತನ....ಅನ್ನುವ ಪದದಲ್ಲೇ ಏನೋ ಹಿತವಿದೆ...ಮಮತೆಯ ಬಂಧನವಿದೆ... ವಾತ್ಸಲ್ಯದ ಒರತೆಯಿದೆ...ಪ್ರೀತಿಯ ಅಪ್ಪುಗೆಯಿದೆ... ತಾಯ್ತನವನ್ನು ವರ್ಣಿಸಲು ಪದಗಳೇ ಸಾಲದು...ಪದಗಳಿಗೆ ನಿಲುಕದ ಸುಂದರ ಅನುಭೂತಿಯೇ ತಾಯ್ತನ.ಹೆಣ್ಣೊಬ್ಬಳು ಮದುವೆಯಾಗಿ ತಾಯಿಯಾದರೆ ಆಕೆಯ ಜನುಮ ಸಾರ್ಥಕ ಎಂಬ ಭಾವ ಜನರಲ್ಲಿ ಮನೆಮಾಡಿದೆ.



  ಮನೆಯ ಮುದ್ದು ಮಗಳಾಗಿ ಬೆಳೆದ ಹೆಣ್ಣಮಗಳಿಗೆ ಹದಿಹರೆಯ ಬರುತ್ತಿದ್ದಂತೆಯೇ ಅಮ್ಮ ಒಂದೊಂದೇ ಜವಾಬ್ದಾರಿಗಳನ್ನು ಕಲಿಸುತ್ತಾ ಹೋಗುತ್ತಾಳೆ.ಉದಾಸೀನ ಮಾಡಿದ ಮಗಳಿಗೆ ಗಂಡನ ಮನೆಗೆ ಹೋದಾಗ ನಿನಗೆ ಎಲ್ಲ ಅರಿವಾಗುತ್ತದೆ ಎಂಬ ಸಿದ್ಧ ಉತ್ತರ ಅಮ್ಮನಿಂದ ಸಿಗುವುದು ಸಾಮಾನ್ಯ. ಹದಿಹರೆಯ ದಾಟುತ್ತಿದ್ದಂತೆ ಹೆತ್ತವರಿಗೆ ಮಗಳ ಕಲ್ಯಾಣದ ಯೋಚನೆ ಆರಂಭವಾಗುತ್ತದೆ.ಆದಷ್ಟು ಬೇಗ ಕಂಕಣಭಾಗ್ಯ ಕೂಡಿಬಂದರೆ ಒಳಿತು ಎಂದು  ತಾಯಿಯಾದವಳ ಬಯಕೆಯಾಗಿರುತ್ತದೆ.


   ವಿವಾಹವಾದ ಬಳಿಕ ಪತಿಯ ಗೃಹಕ್ಕೆ ಕಾಲಿಡುವ ಹೆಣ್ಣು ಹೊಸ ವಾತಾವರಣ, ಬಾಂಧವ್ಯ, ಜವಾಬ್ದಾರಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲು ನಿಧಾನವಾಗಿ ಕಲಿಯುತ್ತಾ ಹೋಗುತ್ತಾಳೆ.ಅಪರಿಚಿತರಾಗಿದ್ದ ಜನರನ್ನು ತನ್ನ ಕುಟುಂಬ ಎಂದು ಅರಿತು ಆದರಿಸುತ್ತಾಳೆ.ಗಂಡನ ಪ್ರೀತಿಯಿಂದ, ಸಾಂಗತ್ಯದಿಂದ ಹೆತ್ತವರನ್ನು ಬಿಟ್ಟು ಬಾಳುತ್ತಾಳೆ.ಅಂತಹ ಸಂದರ್ಭದಲ್ಲಿ ತಾನು ತಾಯಿಯಾಗುವ ವಿಷಯ ತಿಳಿದಾಗ ಹರುಷಗೊಂಡು ಮೆಲ್ಲನೆ ತನ್ನ ಉದರವನ್ನು ನೇವರಿಸಿ ಹೆಮ್ಮೆಪಟ್ಟುಕೊಳ್ಳುತ್ತಾಳೆ.

#ಅಮ್ಮನ_ಪದವಿ

ಅಂದು ನನ್ನ ಬಾಳಿನ ಶುಭ ಬೆಳಗು
ಉಸುರಿತ್ತು ನನ್ನೊಳಗೆ ನಿನ್ನಿರುವು
ಅಮೃತ ಘುಳಿಗೆಯದು ಇನಿಯನಪ್ಪುಗೆ
ಕುಡಿಯೊಡೆದು ಚಿಗುರಿತ್ತು ನಮ್ಮೊಲವು...

ಸವಿಯಾದ ನುಡಿಕೇಳಿ ನೂರೊಂದು
ಮುತ್ತು ಕೆಂಪೇರಿತ್ತು ಕೆನ್ನೆಯ ರಂಗು
ಮಡಿಲಲ್ಲಿ ಮೂಡಿದ ಹೊನ್ನೊಂದು
ಕರುಣಿಸಿದೆ ಅಮ್ಮನ ಪದವಿಯೆನಗೆ...

                  ✍️... ಅನಿತಾ ಜಿ.ಕೆ.ಭಟ್.


   ಅಂದಿನಿಂದ ಅವಳ ಆದ್ಯತೆಯೇ ಬೇರೆ..ಕನವರಿಕೆಗಳೇ ಬೇರೆ... ಮೊದಲು ತನ್ನ ಅಂದಚಂದವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದವಳು ಈಗ...ಪ್ರತಿಯೊಂದರಲ್ಲೂ ಈ ಭುವಿಗೆ ಕಾಲಿಡುವ ಪುಟ್ಟ ಕಂದಮ್ಮನ ಒಳಿತನ್ನೇ ಬಯಸುತ್ತಾಳೆ.ಬೇಕರಿತಿಂಡಿ, ಕುರುಕಲು ತಿಂಡಿ ಪೋತೆಯಾದವಳು ಅದೆಲ್ಲವನ್ನೂ ಮಗುವಿನ ಹಿತದೃಷ್ಟಿಯಿಂದ ತ್ಯಜಿಸಿ ಸಾತ್ವಿಕ ಆಹಾರದತ್ತ.. ಪೌಷ್ಟಿಕಾಂಶ ಭರಿತ ಮೊಳಕೆಕಾಳುಗಳು , ಹಣ್ಣುಹಂಪಲು, ಹಸಿರು ತರಕಾರಿಗಳತ್ತ ಅವಳ ಚಿತ್ತ...


ಮೊದಲ ಮೂರು ತಿಂಗಳಲ್ಲಿ ಅವಳ ಸಂಕಟಗಳು ವಿಪರೀತ..ಆಹಾರ ಸೇರುವುದು ಕಡಿಮೆ..ಆದರೂ ನಿಲ್ಲದ ವಾಂತಿಯ ಉಪಟಳ..ಹೊಟ್ಟೆಯಲಿರುವ ಮಗುವಿಗೆ ಸಿಗುವುದೆಷ್ಟೋ... ಆಚೆ ಬಚ್ಚಲಿಗೆ ಆಹಾರವಾಗುವುದೆಷ್ಟೋ...ಆದರೂ ಕಂದನಿಗೋಸ್ಕರ ತಿನ್ನುವ ಪ್ರಯತ್ನ ಅವಳದು.ಗಂಡನಾದವನೂ ಕೂಡ ಇಂತಹ ಸಂದರ್ಭದಲ್ಲಿ ಆಕೆಗೆ ಜೊತೆಯಾಗುತ್ತಾನೆ.ಅಡುಗೆಗೆ ನೆರವಾಗುತ್ತಾ ,ಬಟ್ಟೆಯೊಗೆಯುತ್ತಾ,ನೆಲವೊರೆಸುತ್ತಾ ಸಹಕರಿಸಿದರೆ ಆಕೆಗೂ ಅನುಕೂಲ,ಪತಿಯ ಮೇಲೆ ಒಂದು ಹಿಡಿ ಒಲವು ಹೆಚ್ಚಾಗುವುದು...ಆಕೆಯ ಕಷ್ಟದಲ್ಲಿ ಕೆಲಸಗಳಿಗೆ ನೆರವಾಗುತ್ತಾ ತಂದೆಯಾಗುವ ಸಂತಸದಲ್ಲಿ ಸಂಭ್ರಮಿಸುತ್ತಾನೆ..

  ಮಗಳು ತಾಯಿಯಾಗುತ್ತಾಳೆಂದು ತಿಳಿದಾಗ ಅಮ್ಮನಿಗೆ ಆಗುವ ಖುಷಿ ಹೇಳತೀರದು.ಬಂಧುಗಳು ಸಿಕ್ಕಾಗ ಮೊದಲು ತಿಳಿಸುವುದು ಮಗಳು ತಾಯಿಯಾಗುತ್ತಿದ್ದಾಳೆ ಎಂದು..ಅದೇನು..ಆನಂದ ...ಸಂಭ್ರಮ ಆಕೆಯಲ್ಲಿ..


  ವೈದ್ಯರು ಹೇಳಿದ ಎಲ್ಲಾ ಔಷಧಿಗಳನ್ನು ತಂದುಕೊಡುವ ಪತಿ ನಿತ್ಯವೂ ಪತ್ನಿಯ ಮಡಿಲಿಗೊರಗಿ ಮಗುವಿನ ಬೆಳವಣಿಗೆಯನ್ನು ಗಮನಿಸುತ್ತಾ ...ತಾನೂ ಮುದ್ದಿಸುತ್ತಾನೆ.. ಉದರಕ್ಕೆ ತುಸು ನೋವೂ ಆಗದಂತೆ  ಜಾಗರೂಕತೆಯಿಂದ ಪತ್ನಿಯನ್ನು ತಬ್ಬಿಕೊಳ್ಳುತ್ತಾನೆ...ಪತಿಯ ಆಲಿಂಗನದಲ್ಲಿ ತನ್ನೊಡಲ ಕಂದಮ್ಮನಿಂದಾಗಿ ಅನುಭವಿಸುವ ಸಂಕಟವನ್ನು ಮರೆಯುತ್ತಾಳೆ ಹೆಣ್ಣು.


    ಮಗುವಿನ ಕಾಲೊದೆತದಿಂದ ಉಂಟಾಗುವ ನೋವಿನಲ್ಲೂ ಸುಖವನ್ನು ಕಾಣುವವಳು ತಾಯಿ.ಆ ನೋವಿನಲ್ಲಿ ಮೆಲ್ಲನೆ ಪತ್ನಿಯ ಉದರವ ನೇವರಿಸಿ ಸಾಂತ್ವನವ ನೀಡುವವನು ತಂದೆ.ತನ್ನ ಮಗುವಿಗೋಸ್ಕರ ಉತ್ತಮವಾದ ಪುಸ್ತಕಗಳನ್ನು ಓದುತ್ತಾ,ಆಹ್ಲಾದದಾಯಕ ವಿಷಯಗಳನ್ನು ಚಿಂತಿಸುತ್ತಾ, ಭಜನೆ,ಸ್ತೋತ್ರ ಪಠಣಗಳಲ್ಲಿ ತೊಡಗಿಸಿಕೊಳ್ಳುತ್ತಾಳೆ ತಾಯಿ.ಹಾಲು,ತುಪ್ಪ,ಮೊಸರು, ಬೆಣ್ಣೆ,ಮೊಳಕೆಕಾಳುಗಳು,ಒಣಹಸಿ ಹಣ್ಣುಗಳನ್ನು ತಿಂದ ಗರ್ಭಿಣಿಯು ಮೈದುಂಬಿಕೊಳ್ಳುತ್ತಾಳೆ .ಇಂತಹ ಹೊತ್ತಲ್ಲಿ ಆಕೆ ಖಂಡಿತ ತನ್ನ ವೈಯಕ್ತಿಕ ದೇಹ ಸೌಂದರ್ಯವನ್ನು  ಕಾಪಾಡಿಕೊಳ್ಳುವ ಬಗ್ಗೆ ಚಿಂತಿಸುವುದಿಲ್ಲ.ಸಂಭ್ರಮದ ಸೀಮಂತ ಮಾಡಿ ಮಡದಿಯ ಬಯಕೆಗಳನ್ನು ಈಡೇರಿಸುವ ಪತಿ,ಸೊಸೆಯ ಮಡಿಲು ತುಂಬುವ ಮನೆಯವರು..

  ಸೀಮಂತ ಮಾಡಿ ತವರಿಗೆ ಹೊರಡುವ ಹೆಣ್ಣು ಗಂಡನ ಪ್ರೀತಿಯನ್ನು ಕನವರಿಸುತ್ತಾಳೆ..ತಾಯಿಯ ಆರೈಕೆಯಲ್ಲಿ ಆರೋಗ್ಯದಿಂದ ನಳನಳಿಸುತ್ತಾಳೆ .ಮನದ ಮೂಲೆಯಲ್ಲಿ ಹೆರಿಗೆಯ ಆತಂಕವಿದ್ದರೂ ಸಹಜವಾಗಿದ್ದು ಏನನ್ನೂ ತೋರಗೊಡದೆ ದಿನದೂಡುವವಳು ಹೆಣ್ಣು.ತಾಯಮಡಿಲಿನ ಮಗುವಾಗುವಳು.ಕುಳಿತುಕೊಳ್ಳಲಾಗದೆ,ಓಡಾಡಲೂ ಆಗದೆ,ಮಲಗಲೂ ಸರಿಯಾಗಿ ಸಾಧ್ಯವಾಗದ ಅವಳ ಸಂಕಟ ಅವಳಿಗೇ ಗೊತ್ತು..ಆದರೂ ಗರ್ಭಿಣಿ ಹೆಣ್ಣು ಲವಲವಿಕೆಯಿಂದಿರುತ್ತಾಳೆ ..ತನ್ನ ಒಡಲ ಕುಡಿಗಾಗಿ..ಕಂದನ ಬರುವಿಕೆಗಾಗಿ..

ಪ್ರತೀ ಸಲ ಸ್ಕ್ಯಾನಿಂಗ್ ಮಾಡಿಸುವಾಗಲೂ ವೈದ್ಯರು ಏನು ಹೇಳುವರೋ ಎಂಬ ಆತಂಕ.ಅದೇ ಆತಂಕದಿಂದ ಪತಿಯ ಮುಖವನ್ನು ದಿಟ್ಟಿಸಿದರೆ ಅವನು ಎತ್ತಲೋ ನೋಡುತ್ತಿರುತ್ತಾನೆ..ಮಧ್ಯೆಯೊಮ್ಮೆ ಕಂಪ್ಯೂಟರ್ ಪರದೆಯತ್ತ ಗಂಡ ದೃಷ್ಟಿಹರಿಸಿದರೆ ಅವಳ ಕಂಗಳಲ್ಲಿ ಹೊಳಪು ಮೂಡುತ್ತದೆ.ತಾನು ಮಲಗಿದಲ್ಲಿಂದಲೇ ಬಾಗಿ ಪುಟ್ಟ ಕಂದನ ದೃಶ್ಯವನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಾಳೆ .ಆ ಪುಟ್ಟ ಪಾದಗಳಿಗೆ ಯಾವಾಗ ಸಿಹಿಮುತ್ತು ನೀಡುವೆನೋ ಎಂದು ಕಾತರಿಸುವಳು.


  ತುಂಬಿ ಬರುತ್ತಿರುವ ಉದರ, ಬಿಗಿಯಾಗುತ್ತಿರುವ ಸ್ತನಗಳು ..ನೀರು ತುಂಬಿಕೊಳ್ಳುತ್ತಿರುವ ಪಾದಗಳು,ಮಾಂಸ ತುಂಬಿಕೊಂಡು ಭಾರವಾದಂತೆ ಭಾಸವಾಗುವ ತೊಡೆಗಳು,ಊದಿಕೊಳ್ಳುವ ಕೆನ್ನೆಗಳು,ಮುಖವೂ ದೇಹವೂ ಒಂದಾದಂತೆ ತೋರುವ ಕುತ್ತಿಗೆ... ಎಲ್ಲವನ್ನೂ ಮುಚ್ಚಬಲ್ಲ ಸುಖಕರವಾದ ಉಡುಪು ಧರಿಸುವುದೇ ಸವಾಲಾಗುವುದು.ಅಂತಹ ಸಂದರ್ಭದಲ್ಲಿ ಆಕೆಗೆ ನೆರವಿಗೆ ಬರುವುದು ನೈಟಿ,ಫ್ರೀಸೈಜ್ ಲಾಂಗ್ ಕುರ್ತಾಗಳು..ಈ ಮಧ್ಯೆ ಆಕೆ ಪತಿಯ ಪ್ರೇಮದ ಸ್ಪರ್ಶಕ್ಕೆ ಬಹಳವೇ ಬಯಸುತ್ತಾಳೆ.


ನವಮಾಸ ತುಂಬಿದಾಗ ಆಕೆಯನ್ನು ಬಲು ಜತನದಿಂದ ನೋಡಿಕೊಳ್ಳುವ ಕುಟುಂಬ ಆಕೆಗಾಗಿ ಪುಟ್ಟ ಕಂದನಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿರುತ್ತದೆ .ಮೊದಲೇ ಆಸ್ಪತ್ರೆಗೆ ದಾಖಲಿಸಿ ಸುಖಪ್ರಸವಕ್ಕಾಗಿ ದೇವರ ಮೇಲೆ ಭಾರಹಾಕುತ್ತಾರೆ.ಹೆರಿಗೆನೋವು ಬಂದಮೇಲೆ ಆಸ್ಪತ್ರೆಗೆ ಒಯ್ದರಂತೂ ಆಕೆಯ ಬವಣೆ ಊಹಿಸಿದರೆ ಕಣ್ತುಂಬಿಬರುತ್ತದೆ.


   ತಾಯ್ತನ ದ ಅನುಭವಕ್ಕೆ ಇನ್ನು ಕೆಲವೇ ಕ್ಷಣಗಳಿರುವುದು ಎಂದಾದಾಗ ಅವಳ ಎದೆ ಬಲವಾಗಿ ಹೊಡೆದುಕೊಳ್ಳುತ್ತದೆ.ಆ ನೋವಿನಲ್ಲಿ ಚೀರುತ್ತಾಳೆ.ಒಂದೆಡೆ ಸಹಿಸಲಸಾಧ್ಯ ನೋವು ಸಂಕಟ.. ಇನ್ನೊಂದೆಡೆ ಪುಟ್ಟ ಕಂದನನ್ನು ಭುವಿಗಿಳಿಸುವ ಜವಾಬ್ದಾರಿ...ಈ ಕ್ಷಣವೇ.. ಆಕೆಯನ್ನು ಮಾಗಿಸುವುದು...ತನ್ನ ತಾಯಿಯ ಸಂಕಟ ಎಷ್ಟಿದ್ದಿರಬ‌ಹುದು ಎಂದು ಚಿಂತನೆಗೆ ಹಚ್ಚುವುದು...ಪತಿಯ ಒಲವು ಜೀವನದ ಒಂದು ಮಗ್ಗುಲಾದರೆ..ಹೆರಿಗೆಯ ನೋವು ಇನ್ನೊಂದು ಮಗ್ಗುಲು ಎಂದು ಅರ್ಥೈಸಿಕೊಳ್ಳುವಂತೆ ಮಾಡುವುದು...ಇಂತಹ ಸಂದರ್ಭದಲ್ಲಿ ಆಕೆಗೆ ಪತಿಯ ಸಾಂತ್ವನ ಬೇಕು... ತಾಯಿಯ ಅಕ್ಕರೆ ಕಾಳಜಿ ಬೇಕು..ಉತ್ತಮ ವೈದ್ಯರು ಜೊತೆಗಿರಬೇಕು..


   ಸಿಬ್ಬಂದಿ ಒಮ್ಮೆ ಪರೀಕ್ಷಿಸುವುದೆಂದರೆ ಆಕೆಯ ಜೀವ ಒಮ್ಮೆ ಹೋಗಿ ಬಂದಂತೆ... ಯಾತನೆ... ವೈದ್ಯರು ತಾಳ್ಮೆಯಿಂದ ಪರೀಕ್ಷಿಸಿದರೆ ಆ ವ್ಯತ್ಯಾಸವನ್ನು ಅರಿತು ಸಿಬ್ಬಂದಿಗಿಂತ ವ್ಯೆದ್ಯರೇ ಉತ್ತಮ ಎಂಬ ಭಾವ ಅವಳದು.. ಸಹಜವೋ... ಶಸ್ತ್ರಚಿಕಿತ್ಸೆಯ ಮೂಲಕವೋ ತಾಯಿಯಾಗುವ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಒಮ್ಮೆ ಕಂದ ಜಗತ್ತಿಗೆ ಬಂದರೆ ಸಾಕು ಎನ್ನುವ ಯಾತನೆ..

ವೈದ್ಯರು, ಸಿಬ್ಬಂದಿ ಎಲ್ಲರೂ ತಯಾರಾಗುತ್ತಿದ್ದಂತೆ ಆಕೆಯ ಕಂಗಳು ನೋವಿನಿಂದ ತುಂಬಿಬರುತ್ತವೆ,ದೈಹಿಕ ನೋವು,ಮಾನಸಿಕ ಯಾತನೆ ಎಲ್ಲವೂ ಜೊತೆಯಾಗಿ ಚೀರುತ್ತಾ ,ನರಳುತ್ತಾ ,ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಕಂದನನ್ನು  ಭೂಮಿಗಿಳಿಸುತ್ತಾಳೆ..ಆ ಯಾತನಾಮಯ ಅನುಭವದ ನಡುವೆಯೂ ನಗುವವಳು.. ನಗುತ್ತಾ ತನ್ನ ಕಂದನನ್ನು ಮುದ್ದಿಸುವವಳೇ ತಾಯಿ..ತಾಯಿ ಮಾತ್ರವೇ ಈ ಜಗದಲ್ಲಿ ನೋವಿನಲ್ಲೂ ನಗುವವಳು..

ತಾನು ಹೆತ್ತ ಕಂದನನ್ನು ಮೊದಲು ಎದೆಯ ಮೇಲೆ ಮಲಗಿಸಿದಾಗ ಆಗುವ ಆನಂದ ಅಷ್ಟಿಷ್ಟಲ್ಲ.ಪತಿಯು ಮಗುವನ್ನೆತ್ತಿ ಪತ್ನಿಯ ಕೈಮೇಲೆ ಮಗುವಿನ ಕೈಯನ್ನಿಟ್ಟಾಗ ಇಷ್ಟು ದಿನ ಪಟ್ಟ ನೋವು ಸಾರ್ಥಕ ಎಂಬ ಭಾವ.ನೋವನುಭವಿಸಿದ ಪತ್ನಿಯತ್ತ ಬಾಗಿ ಹಣೆಗೊಂದು ಹೂಮುತ್ತನಿಟ್ಟರೆ ಆಕೆಗೆ ಹೃದಯ ತುಂಬಿ ಬರುತ್ತದೆ.ಮಗು ತಾಯಿಯ ಬಳಿಯಲ್ಲಿದ್ದರೆ ತಾಯಿಯ ಅಮೃತ ಮಗುವಿಗಾಗಿ ಸ್ರವಿಸುತ್ತದೆ.ಮಗು ತನ್ನ ಅಮ್ಮನನ್ನು ಸ್ಪರ್ಶದಿಂದಲೇ ಗುರುತಿಸುತ್ತದೆ.

   ತಾಯಿಗೀಗ ಕಂದನೇ ಪ್ರಪಂಚ..ಮಗುವಿನ ಪೋಷಣೆಗೇ ಅವಳ ಸಮಯ ಮೀಸಲು.ಅದೇ ಅವಳ ಮೊದಲ ಆದ್ಯತೆ.ತನ್ನ ಊಟ ನಿದಿರೆಯನ್ನು ಮರೆತು ಕಂದನನ್ನು ಪೋಷಿಸುತ್ತಾಳೆ.ಕಂದನಿಗಾಗಿ ತನ್ನ ದೇಹದ ಅಮೃತವನುಣಿಸುತ್ತಾಳೆ.ದೈಹಿಕ ಸೌಂದರ್ಯದ ಚಿಂತೆ ಅವಳನ್ನು ಇಂತಹ ಸಂದರ್ಭದಲ್ಲಿ ಕಾಡುವುದಿಲ್ಲ..ಇತರರೂ ತಾಯಿಯಾದ ಮೇಲೆ ದಪ್ಪವಾಗಿದ್ದಾಳೆ ಎಂದು ಆಡಿಕೊಳ್ಳಬಾರದು. ಅದು ಆಕೆಯ ಕೈಯಲ್ಲಿಲ್ಲ.ಹಾರ್ಮೋನುಗಳ ಬದಲಾವಣೆ ಕಾರಣವಾಗಿರುತ್ತದೆ..


     ಹೆಣ್ಣನ್ನು,ಒಬ್ಬ ತಾಯಿಯನ್ನು ಬಾಹ್ಯ ಸೌಂದರ್ಯ ದಿಂದ ಅಳೆಯದೆ ಆಕೆಯ ಮಾತೃತ್ವದ ವಾತ್ಸಲ್ಯ,ಅಕ್ಕರೆ..ಗಂಡನನ್ನೂ ಮಗುವಂತೆ ಕಂಡು ಆದರಿಸುವ ರೀತಿ,ಅತ್ತೆಮಾವ ಕುಟುಂಬ ಎಂದು ಎಲ್ಲರಿಗೂ ಬೇಕಾದಂತೆ ನಡೆದುಕೊಳ್ಳುವ ಆಕೆಯ ಸ್ವಾರ್ಥರಹಿತ ಹೃದಯ ಶ್ರೀಮಂತಿಕೆಯಿಂದ ಗೌರವಿಸಬೇಕು.ತಾಯ್ತನ ಎಂಬುದು ಆಕೆ ಹಾಗೇ ಸುಮ್ಮನೆ ಪಡೆದುಕೊಂಡ ಪಟ್ಟವಲ್ಲ.ಅದರ ಹಿಂದೆ ಆಕೆಯ ನವಮಾಸದ ಸಂಕಟವಿದೆ,ದೈಹಿಕ ಯಾತನೆಯಿದೆ,ಮರೆಮಾಚಲಾಗದ ಬದಲಾವಣೆಗಳಿಗೆ ತನ್ನ ದೇಹವನ್ನು ಒಡ್ಡಿಕೊಂಡಿರುತ್ತಾಳೆ ..


   ತಾಯ್ತನವೆಂಬುದು ದೇವರು ನೀಡಿದ ಬೆಲೆಬಾಳುವ ವರ ಎಂದು ತಿಳಿಯುತ್ತಾರೆ ಹೆಣ್ಮಕ್ಕಳು.ದೇವನಿತ್ತ ವರವನ್ನು ಸಮರ್ಪಕವಾಗಿ ನಿಭಾಯಿಸಲು ಆಕೆಗೆ ಪತಿಯ ಸಹಕಾರ,ಪ್ರೇಮಮಯ ಸಾಂಗತ್ಯ ಅತ್ಯಗತ್ಯ.
ಆಕೆಗೆ ಮಗುವಿನ ಲಾಲನೆ ಪಾಲನೆ ಪೋಷಣೆಯಲ್ಲಿ ದಿನಗಳೆದದ್ದೇ ತಿಳಿಯಲಾರದು.ತನ್ನನ್ನು ತಾನು ಮಗುವಿಗಾಗಿ ಸಮರ್ಪಿಸಿಕೊಳ್ಳುವುದೇ ನಿಜವಾದ ತಾಯ್ತನದ ಸೌಂದರ್ಯ..

✍️... ಅನಿತಾ ಜಿ.ಕೆ.ಭಟ್.
16-12-2019.

 

2 comments: