Monday, 1 June 2020

ಜೀವನ ಮೈತ್ರಿ ಭಾಗ ೮೪(84)




ಜೀವನ ಮೈತ್ರಿ ಭಾಗ ೮೪


    ಮೈತ್ರಿ ಪತಿ ಹಾಗೂ ಅತ್ತೆ ಮಾವನೊಂದಿಗೆ ತವರು ಮನೆಗೆ ಆಗಮಿಸಿದಳು. ಕಾರಿನಿಂದಿಳಿದವಳೇ ಅಜ್ಜಿ ಅಜ್ಜನ ಔಪಚಾರಿಕತೆಯನ್ನು ಸ್ವೀಕರಿಸಿ ಸೀದಾ ಒಳಗೆ ಬಂದಳು ಅಮ್ಮನನ್ನು ಹುಡುಕಿಕೊಂಡು .ಅಮ್ಮನೂ ಕೆಲಸದಲ್ಲಿ ಮುಳುಗಿದ್ದುದರಿಂದ ಮಗಳು ಬಂದದ್ದು ತಿಳಿದಿರಲಿಲ್ಲ. ಮಗಳು ಬಂದು ಕಣ್ಣೆದುರು ನಿಂತಾಗ  ಕೈಯಲ್ಲಿ ಹಿಡಿದಿದ್ದ ಪಾತ್ರೆಯನ್ನು ಅಲ್ಲಿಯೇ ಬಿಟ್ಟು ಬಾಚಿತಬ್ಬಿಕೊಂಡಿದ್ದರು . ಇಬ್ಬರ ಕಣ್ಣುಗಳು ತುಂಬಿ ಬಂದಿತ್ತು. ಹಿಂದಿನಿಂದ ಬಂದ ಅತ್ತೆ ಮಮತಾ ಅಮ್ಮ ಮಗಳನ್ನು ನೋಡಿ ಮೂಕವಾಗಿ ನಿಂತುಬಿಟ್ಟರು. ಅವರಿಗೂ ಗೊತ್ತು ಅಮ್ಮ-ಮಗಳ ಅಗಲಿಕೆಯ ವೇದನೆ. ಅವರೂ ಹೆಣ್ಣು ಹೆತ್ತವರಲ್ಲವೇ....?

         ಒಂದು ಕ್ಷಣ ಸಾವರಿಸಿಕೊಂಡು  "ಬಾಯಾರಿಕೆ ಆಯ್ತಾ" ಎಂದು ಮಂಗಳಮ್ಮ ಇಬ್ಬರನ್ನು  ವಿಚಾರಿಸಿಕೊಂಡರು. ಆಗಮಿಸಿದ್ದ ನೆರೆಹೊರೆಯವರ ಕಣ್ಣು ಮೈತ್ರಿಯನ್ನು ಅಳೆಯುತ್ತಿತ್ತು. ಮದುವೆಯಾದ ಮೇಲೆ ಬದಲಾಗಿದ್ದಾಳಾ ಎಂದು. ಅತ್ತೆಯನ್ನು  ನೆರೆಹೊರೆಯವರು ಪರಿಚಯ ಮಾಡಿಕೊಂಡು ಮಾತನಾಡಿದರು. ಮಂಗಳಮ್ಮ ಹೊರಗಡೆ ಹೋಗಿ ಅಳಿಯಂದಿರನ್ನು ಬೀಗರನ್ನು ಮಾತನಾಡಿಸಿ ಬಂದರು. ಅಜ್ಜಿ ಮೈತ್ರಿಯನ್ನು .. "ಪುಳ್ಳಿ ಅಲ್ಲಿ ಹೇಗಾಗುತ್ತದೆ..ಮುಟ್ಟು ಕುಳಿತುಕೊಳ್ಳಲು ಕಷ್ಟವಾಯಿತಾ ..ನಾವು ಯಾರೂ ಜೊತೆಗಿಲ್ಲದೆ?"ಎಂದು ಕೇಳಿದರು.

"ಇಲ್ಲ ಅಜ್ಜಿ.. ಅತ್ತೆ ಚೆನ್ನಾಗಿ ನೋಡಿಕೊಂಡರು.. ಮನೆಯವರೆಲ್ಲ ಸಹಕರಿಸಿದರು.ಏನೂ ತೊಂದರೆಯಾಗಿಲ್ಲ.."

"ಮತ್ತೆ ಬಟ್ಟೆ ,ಹಾಸಿ ಹೊದೆದ ಬೆಡ್ ಶೀಟ್ ಒಗೆಯಲು ನಿನಗೆ ಸಾಧ್ಯವಾಯಿತಾ.. ವಾಶಿಂಗ್ ಮಶೀನ್ ಕೂಡಾ ಇಲ್ಲ ?"

ಉತ್ತರಿಸಲು ಮೈತ್ರಿ ಬಾಯಿಯೊಡೆದಳು.ಹತ್ತಿರದಲ್ಲಿ ನೆರೆಹೊರೆಯ ಹೆಣ್ಣು ಮಕ್ಕಳು ಇದ್ದುದನ್ನು ಕಂಡು ಮಂಗಳಮ್ಮ ಮಗಳಿಗೆ 'ಹೇಳಬೇಡ ಅದನ್ನೆಲ್ಲ..' ಎನ್ನುವಂತೆ ಕಣ್ಸನ್ನೆ ಮಾಡಿದರು.ಮೈತ್ರಿ ಅರ್ಥಮಾಡಿಕೊಂಡು ಹೊರಗೆ ನಡೆದು ತಮ್ಮನಲ್ಲಿ ಮಾತನಾಡಿದಳು.ಅವನಿಗೆ ಈಗ ಅಕ್ಕನಲ್ಲಿ ಮೊದಲಿನಂತೆ ಕಾಲೆಳೆದು ಮಾತನಾಡಲು ಸಂಕೋಚ ಆವರಿಸಿತ್ತು.

"ಅಕ್ಕಾ ನೀನಿಲ್ದೇ..."

"ಏನು ನಾನಿಲ್ದೆ...ಬೋರಾಯ್ತಾ.."

"ಇಲ್ಲಪ್ಪಾ...ಇಲ್ಲಿ ನೀನಿಲ್ದೆ ಐದು ದಿನ ಆಯ್ತು.. ಏನೆಲ್ಲ ಬದಲಾವಣೆಗಳಾಗಿವೆ ಅಂತ  ಮೂಲೆ ಮೂಲೆಯಲ್ಲಿ ನೋಡು.."

"ಇನ್ನೂ.. ನೀನು ನಿನ್ನ ಮೂಲ ಬುದ್ಧಿ ಬಿಟ್ಟಿಲ್ಲ.. ತರ್ಲೆ.. ಮೂಲೆ ಮೂಲೆಯಲ್ಲಿ ನೋಡಿ ಬಲೆ ಹೋಗಲಿ ಅಂತಾನಾ..?"

"ಆಮೇಲೆ.. ಭಾವನ ಜೊತೆ ಹೋದ ಮೇಲೆ ಅಯ್ಯೋ ನಾ ನೋಡೇ ಇಲ್ಲ ಅಂತ ಗೋಳು ಹೊಯ್ಕೋಬೇಡ.."

"ಅಂತಹ ಬದಲಾವಣೆ ಏನಾಗಿದೆ..?" ಎಂದು ಕೇಳಿದರೂ ಮಹೇಶ್ ಹೇಳದೆ ಗುಟ್ಟಾಗಿಟ್ಟಿದ್ದ.. ಮೈತ್ರಿ ತಮ್ಮನಲ್ಲಿ ಮಾತನಾಡಿ ನಂತರ ರೂಮಿನೊಳಗೆ ಹೋದಳು. ಆಗ ತಮ್ಮ ಹೇಳಿದ ಮಾತು ಅವಳಿಗೆ ಅರ್ಥವಾಗಿತ್ತು. ಒಮ್ಮೆ ನಿಂತು ಸುತ್ತಲೂ ಕಣ್ಣು ಹಾಯಿಸಿ ಕಣ್ಣು ತುಂಬಿಕೊಂಡಳು. ಸೆಲ್ಫ್ ನಲ್ಲಿದ್ದ ತನ್ನ ಪುಟ್ಟ ಗಣಪತಿಯ ಮೂರ್ತಿ ಪಕ್ಕಕ್ಕೆ ತಳ್ಳಿದ್ದು ಕಂಡು ಫಕ್ಕನೆ ಎತ್ತಿಕೊಂಡು ಬೊಗಸೆಯಲ್ಲಿ ಹಿಡಿದುಕೊಂಡು, ಗಣೇಶನನ್ನು ನೋಡುತ್ತಾ ಒಂದು ಕ್ಷಣ ಮೈಮರೆಯುತಳು. ಆ ಪುಟ್ಟ ಗಣೇಶ ಆಕೆಯ ಪಾಲಿಗೆ ಗೆಳೆಯನಾಗಿದ್ದ. ತನಗೆ ನೋವಾದಾಗ ಹೇಳಿಕೊಳ್ಳುತ್ತಿದ್ದುದು  ಆ ಗಣೇಶನ ಮುಂದೆ.ನನ್ನ ಕಿಶನ್  ಪ್ರೀತಿಯನ್ನು ಒಂದು ಮಾಡೆಂದು ಬೇಡಿಕೊಳ್ಳುತ್ತಿದ್ದುದೂ ಇತ್ತು. ಇನ್ನೊಂದು ಬದಿಗೆ ತಿರುಗಿದರೆ ಅಯ್ಯೋ ತನ್ನ ಅಚ್ಚುಮೆಚ್ಚಿನ ಡ್ರೆಸ್... ಎಲ್ಲವೂ ಹೊರಗಡೆ ಅಟ್ಟಿ ಇಟ್ಟಿದ್ದರು. ಏನಾಗಿದೆ ಎಂದು  ಕಪಾಟಿನ ಬಾಗಿಲು ತೆರೆದು ನೋಡಿದರೆ.. ತನ್ನ ಬಟ್ಟೆಗಳಿರುವ ಜಾಗದಲ್ಲಿ ಅಜ್ಜಿಯ ಸೀರೆಗಳು ಬಂದು ಕುಳಿತಿದ್ದವು. ತನ್ನ ಹಾಸಿಗೆಯ ಮೇಲೆ ಅಜ್ಜಿಯ ಹಾಸಿಗೆ 'ಇನ್ನು ನಿನಗಿಲ್ಲಿ ಜಾಗವಿಲ್ಲ' ಎಂದು ಹೇಳಿದಂತೆ ಭಾಸವಾಯಿತು. ಯಾರು ಹೇಳಬೇಕಿರಲಿಲ್ಲ ....'ಇನ್ನು ಇದು ತನ್ನ ರೂಮು' ಎಂದು ಅಜ್ಜಿ ನಿಗದಿ ಮಾಡಿಕೊಂಡದ್ದು ಅವಳಿಗೆ ಮನದಟ್ಟಾಯಿತು.



        ನಾನು ಹುಟ್ಟಿದ ಮನೆಗೆ ಪರಕೀಯಳಾದೆನೇ.. ? ಐದೇ ದಿನದಲ್ಲಿ ನನ್ನ ಸಾಮಾನುಗಳೆಲ್ಲ ಹೊರಬಿದ್ದಿದೆ. ಅಜ್ಜಿಗಾದರೂ ಅಷ್ಟು ಅವಸರವೇನಿತ್ತು....? ಸ್ವಲ್ಪ ದಿನಗಳ ನಂತರ ಬಟ್ಟೆಗಳನ್ನು ತೆಗೆದು ಹೊರಗೆ ಇರಿಸಿದರೂ ಸಾಕಿತ್ತು. ಶೆಲ್ಫ್ ನ ವಸ್ತುಗಳೆಲ್ಲ ಬದಿಗೆ ತಳ್ಳಿ ಅಜ್ಜಿಯ ಅರಿಷ್ಟದ ಬಾಟಲಿಗಳು, ತೈಲಗಳು ರಾರಾಜಿಸಿದವು.. ಅಳು ಒತ್ತರಿಸಿ ಬಂದರೂ ನುಂಗಿಕೊಂಡು ಹೊರನಡೆದಳು ಮೈತ್ರಿ.

         ಹೊರಬರುತ್ತಿದ್ದಂತೆ ನಗು ನಗುತ್ತಾ ನಿಂತಿದ್ದ ಪತಿಯ  ಮುಖವನ್ನು ಕಂಡು ಸ್ವಲ್ಪ ಸಮಾಧಾನವಾಯಿತು. "ಏನು..?" ಎಂದು ಕಣ್ಣಲ್ಲಿ ಪ್ರಶ್ನಿಸಿದ ಕಿಶನ್. ಪತ್ನಿಯ ಮುಖ ನೋಡಿದಾಗ ಕಣ್ತುಂಬಿಕೊಂಡಿದ್ದುದು ಅವನಿಗೆ ಗೊತ್ತಾಯಿತು. ತನ್ನ ಸಂಕಟವನ್ನೆಲ್ಲ ಇವರಿಗೆ ಹೇಗೆ ಹೇಳುವುದು...? ಹೇಳಿದರೂ ಅವರಿಗೆ ಅರ್ಥವಾಗಲಾರದು ಎಂದು ಸುಮ್ಮನಿದ್ದಳು. "ಏನಿಲ್ಲ ..." ಎಂದ ಅವಳನ್ನು ಆತ ಮೆಲ್ಲಗೆ ಕೈಗೆ ಕೈ ಸ್ಪರ್ಶಿಸಿ "ಸ್ವಲ್ಪ ಹೊತ್ತು ಹೊರಗಡೆ ಹೋಗೋಣ ಬಾ " ಎಂದು ಕರೆದ. ಅವನ ಪ್ರೀತಿಗೆ ಅವಳ ನೋವು ಮಾಯವಾಯಿತು.ಹೊರಗಡೆ ವಿಹರಿಸಿ ಬಂದರು.


         ಊಟವಾಗಿ ಹೊರಡುವ ಸಮಯ. ಮೈತ್ರಿ ತನ್ನ ಕೆಲವು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೊರಟಾಗ...ಅದರಲ್ಲಿದ್ದ ಬಟ್ಟೆಗಳನ್ನು ಕಂಡು ಕಿಶನ್ " ಇದೆಲ್ಲಾ ಯಾಕೆ ಕೊಂಡೊಯ್ಯಬೇಕು. ಅಲ್ಲಿ ನಾವು
ಬೇರೆ ಕೊಂಡುಕೊಳ್ಳೋಣ ಆಗದೇ". ಎಂದ.
ಪುಟ್ಟ ಗಣೇಶನ ಮೂರ್ತಿಯನ್ನು ತುಂಬಿಸಿಕೊಂಡಿದ್ದನ್ನು ಕಂಡು "ಗಣೇಶನ ವಿಗ್ರಹ ಇದಕ್ಕಿಂತ ಚೆನ್ನಾಗಿರುವುದು  ಪಂಚ ಲೋಹದ ಮೂರ್ತಿಯನ್ನು ತೆಗೆದು ಕೊಡುತ್ತೇನೆ ಇದು ಬೇಡ ಇಲ್ಲೇ ಇರಲಿ. ಆಗದೆ..?" ಎಂದನು. ಪತಿಯ ಮಾತಿಗೆ ಏನೂ ಹೇಳಲಾಗದೆ ಚಡಪಡಿಸಿದಳು ಮೈತ್ರಿ. ಮನದ ಭಾವಗಳನ್ನು ಮಾತಿನಲ್ಲಿ ಫೋಣಿಸಿ ಅವರಿಗೆ  ಹೇಳಲು ಸಾಧ್ಯವಾಗದೇ  ಕೊರಗಿದಳು. ಗಂಡ ಎಷ್ಟೇ ದೊಡ್ಡ ಮೂರ್ತಿ ತಂದು ಕೊಟ್ಟರೂ..
.ತನಗೆ ತನ್ನ ನೋವು ನಲಿವಿನಲ್ಲಿ  ಭಾಗಿಯಾದ, ನನ್ನ ಪ್ರೀತಿಯನ್ನು ಒಂದುಮಾಡೆಂದು ಸದಾ ಬೇಡಿಕೊಳ್ಳುತ್ತಿದ್ದ ಗಣಪತಿ ಮೂರ್ತಿಯ ಜೊತೆ  ಬಿಡಿಸಲಾಗದ ಬಂಧವಿತ್ತು. ಈಗ ಅನಿವಾರ್ಯವಾಗಿ ಅದನ್ನು ಇಲ್ಲಿ ಬಿಟ್ಟು ಹೋಗಬೇಕಾದಾಗ  ಮೌನಿಯಾದಳು ಮೈತ್ರಿ.

         ತಾನು ಹಾಡುವಾಗ ಬಳಸುತ್ತಿದ್ದ ಶೃತಿಪೆಟ್ಟಿಗೆ ಖಂಡಿತ ಕೊಂಡೊಯ್ಯಲು ಬಿಡಲಾರ ಎಂದು ಗೊತ್ತಿತ್ತು. ಹಾಗೆಯೇ ಅದನ್ನು ಹಾಕಿ ಎತ್ತಿಕೊಳ್ಳುವ ಪ್ರಯತ್ನವೇ ಮಾಡಲಿಲ್ಲ. ಅಮ್ಮ ಬಂದವರೇ "ಮೈತ್ರಿ ಶೃತಿಪೆಟ್ಟಿಗೆ ತಗೋ. ಬೆಂಗಳೂರಲ್ಲಿ ಸಮಯವಿದ್ದಾಗ ಸಂಗೀತಾಭ್ಯಾಸ ಮಾಡು.. ಬಿಡಬೇಡ ಇನ್ನಷ್ಟು ಪ್ರಯತ್ನ ಮಾಡು." ಎಂದರು. ಆಗಲೇ ಕಿಶನ್. "ಅತ್ತೆ ಅವಳಿಗೆ ಶೃತಿಪೆಟ್ಟಿಗೆ ನಾನು  ತೆಗೆದುಕೊಡುತ್ತೇನೆ ..ಇದು ಇಲ್ಲೇ ಇರಲಿ.." ಎಂದು ಹೇಳಿದ. ಆತನು ಸ್ವಾಭಿಮಾನಿ ಎಲ್ಲವನ್ನೂ ಮಾವನ ಮನೆಯಿಂದ ಕೊಂಡೊಯ್ಯುವುದು ಅವನಿಗೆ ಹಿತವಿಲ್ಲ. ಮೈತ್ರಿ ಇದನ್ನು ಅವನಿಂದ ನಿರೀಕ್ಷಿಸಿದ್ದ ಕಾರಣ ಭಾವುಕಳಾಗಲಿಲ್ಲ. ಸಹಿಸಿಕೊಂಡಳು. ಇನ್ನು ಹೀಗೇನೆ ನಾನು ತವರಿಗೆ ಬಂದು ಎಲ್ಲವನ್ನೂ ತೆಗೆದುಕೊಂಡು ಹೋಗುವ ಹಾಗಿಲ್ಲ. ಪತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಎಂದು ಯೋಚಿಸುತ್ತಿದ್ದಂತೆ 'ಓ ಹೆಣ್ಣೇ....   ನೀನೆಷ್ಟು ತ್ಯಾಗಮಯಿ ...ನಿನ್ನ ಪ್ರೀತಿಯನ್ನೆಲ್ಲ  ಬಿಟ್ಟುಕೊಟ್ಟು ಪತಿಯ ಹಿಂದೆ ನಡೆಯುವವಳು. ಅದಕ್ಕೆ ಎದೆಗಾರಿಕೆ ಬೇಕು. ತನ್ನವರನ್ನು ಬಿಟ್ಟು ಇನ್ನಾರದೋ ಮನೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು.' ಎಂದು ಯೋಚಿಸುತ್ತಿದ್ದಂತೆ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯಲಾರಂಭಿಸಿತು.

       ಅದನ್ನು ಕಂಡ ಕಿಶನ್ ಅಳಬೇಡ ಎಂದು ಹತ್ತಿರ ಬಂದು ಸಂತೈಸಿದ. ಅವನ ಕೈಗಳು ಮಡದಿಯ ಮೈದಡವುತ್ತಿದ್ದವು.ಈಗ ಅವಳ ದುಃಖ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ.ಮಂಗಳಮ್ಮನಿಗೂ ಮಗಳನ್ನು ಕಂಡು ದುಃಖವಾಯಿತು.ಅಜ್ಜಿ ಬಂದು "ಕೂಸೇ...ಹೀಂಗೆ ಕೂಗಿರಾವುತ್ತಾ..ಗಂಡನ ಮನೆಗೆ ನಗುನಗುತ್ತಾ ಹೋಯೆಕ್ಕು " ಅಂದರು.

ಆಗ ಮಹೇಶ್  "ಅಕ್ಕಾ... ನೀನು ಹೀಗೆ ಅಳ್ತಾ ಇದ್ರೆ ನಾವೆಲ್ರೂ ನಿನ್ನ ಜೊತೆ ಬರ್ತೀವಿ ಮತ್ತೆ...ನೀನೇ ಕೈಯಾರೆ ನಮಗೆಲ್ಲ ಅಡುಗೆ ಮಾಡಿ ಬಡಿಸ್ಬೇಕು.."ಅಂದಾಗ ನಗು ಮೂಡಿತು ಅಕ್ಕನ ಮುಖದಲ್ಲಿ.

"ಆಮೇಲೆ ಭಾವನಿಗೆ ನೀ ಹೇಳಿದಂತೆ ತರಕಾರಿ ಹಚ್ಚೋದು, ತೆಂಗಿನಕಾಯಿ ತುರಿಯೋದೇ ಕೆಲಸವಾದೀತು..ನಿನ್ನ ಲವ್ ಮಾಡೋಕೆ ಟೈಂ ಸಿಗಲಿಕ್ಕಿಲ್ಲ..."ಅಂದಾಗ ಮೈತ್ರಿಗೂ ನಗು ತಡೆಯಲಾಗಲಿಲ್ಲ..

"ಮನೆಯಲ್ಲಿದ್ದ ರೂಮುಗಳಲ್ಲಿ ನಾವೇ ಭರ್ತಿಯಾದೇವು.. ನೀನು ಭಾವ ಅಟ್ಟದಲ್ಲಿ ಮಲಗಬೇಕಾದೀತು.. ಹುಷಾರು.. ರಾತ್ರಿ ಇಲಿಗಳು ಓಡಾಡುತ್ತವೆ.."ಎಂದು ಅಕ್ಕನ ಬಳಿ ಬಂದು ಕಿವಿಯಲ್ಲುಸುರಿದಾಗ ಸಂಜನಾ ಇವನಿಗೆ ಅಟ್ಟದಲ್ಲಿ ಮೇದಿನಿಯತ್ತಿಗೆ ಮಲಗಿದ ಸುದ್ದಿ  ಹೇಳಿದ್ದಾಳೆ ಎಂದು ಮೈತ್ರಿಗೆ ಗೊತ್ತಾಯ್ತು..ತಮ್ಮನ ತರ್ಲೆಗೆ ನಕ್ಕುನಕ್ಕು ಸುಸ್ತಾದಳು ಮೈತ್ರಿ..


           ಸಂತಸದಿಂದ ಹಿರಿಯರಿಗೆಲ್ಲ ನಮಸ್ಕರಿಸಿದರು ನವದಂಪತಿ.ಭಾಸ್ಕರ ಶಾಸ್ತ್ರಿಗಳು ಮಗಳು ಅಳಿಯನಿಗೆ "ಶುಭವಾಗಲಿ" ಎಂದು ಹೇಳಿ ಹರಸಿದರು.ಮನದ ಭಾವವನ್ನು ಮುಖದಲ್ಲಿ ತೋರ್ಪಡಿಸಲಿಲ್ಲ.ಮಂಗಳಮ್ಮ ಮಗಳು ಅಳಿಯನ ಶಿರಮುಟ್ಟಿ ಹರಸಿ ಮಗಳನ್ನು ತಬ್ಬಿಕೊಂಡು ಹನಿಗಣ್ಣಾದರು.ಅಜ್ಜ ಕುರ್ಚಿಯಲ್ಲಿ ಕುಳಿತಲ್ಲಿಂದಲೇ ಹಸ್ತದಲ್ಲಿ ಆಶೀರ್ವಾದ ಮಾಡಿದರು.ಅಜ್ಜಿ "ಹೋದ ಮನೆಯ ಸಂಸ್ಕಾರಕ್ಕೆ ತಕ್ಕಂತೆ ಹೊಂದಿಕೊಂಡು ಬಾಳು "ಎಂದರು.ಹೊರಗಡೆ ಬಂದಾಗ ಅವಳ ಪ್ರೀತಿಯ ಹೂಗಿಡಗಳನ್ನು ಕಂಡು ಅವುಗಳನ್ನೊಮ್ಮೆ ನೇವರಿಸಿದಾಗ ಗುಲಾಬಿ ಮುಳ್ಳು ತಾನೂ ಬರುವೆನೆಂಬಂತೆ ಹಿಡಿದುಕೊಂಡಿತು.."ನೀವಿಲ್ಲೇಯಿರಿ..ನನ್ನಮ್ಮನ ಜೊತೆಗೆ "ಎನ್ನುತ್ತಾ ಕಾರಿನ ಬಳಿ ಬರಬೇಕೆನ್ನುವಷ್ಟರಲ್ಲಿ ದನದ ಕೊಟ್ಟಿಗೆಯತ್ತ ತಿರುಗಿದಳು.ತನ್ನ ಪ್ರೀತಿಯ ದನ ಗಂಗೆ,ಕಪಿಲೆಯನ್ನು ಮೈದಡವಿ,ಹಸಿಹುಲ್ಲುತಿನ್ನಿಸಿ ಹೊರಟಾಗ ಅಂಬಾ ಎನ್ನುತ್ತಾ ಅವುಗಳೂ ಹರಸಿದ್ದವು.ಪಕ್ಕದ ಜಗಲಿಯಲ್ಲಿ ಕುಳಿತಿದ್ದ ಕೆಲಸದಾಳುಗಳಾದ ಸರಸು,ಸೇಸಪ್ಪ,ಜಿನ್ನಪ್ಪ "ಪೋತು ಬಲೆ ಅಕ್ಕಾ..ಎಡ್ಡೆ ಆವಾಡ್..."ಎಂದು ತಮ್ಮದೇ ಭಾಷೆಯಲ್ಲಿ ಹರಸಿದರು..


   ಮಹೇಶ್ ಅಕ್ಕನನ್ನು ಚೇಷ್ಟೆ ಮಾಡಲೆಂದೇ "ಅಕ್ಕಾ..ಗಂಡನ ಮನೆಗೆ ಹೋಗಿ ಚೆನ್ನಾಗಿ ಅಡಿಗೆ ಕಲಿ.. ನಾನು ಬಂದಾಗ ನನಗೆ ಗೋಬಿ ಮಂಚೂರಿಯನ್ ,ಪಕೋಡ, ಚಪಾತಿ ದಾಲ್,ಪೂರಿ, ಪರಾಟ, ಕಚೋರಿ....ಎಲ್ಲ ಫಟಾ ಫಟ್ ಮಾಡಿ ಬಡಿಸುವಷ್ಟು ಕುಕ್ಕಿಂಗ್ ಎಕ್ಸ್ಪರ್ಟ್ ಆಗ್ಬೇಕು ಮತ್ತೆ..." ಎಂದಾಗ ಬಿಗುವಾಗಿದ್ದ ವಾತಾವರಣ ಹಗುರವಾಯಿತು.


          ಮುಖದ ತುಂಬಾ ಮಂದಹಾಸಬೀರುತ್ತಾ ಪತಿಯ ಮನೆಗೆ ಹೊರಟಳು ಮೈತ್ರಿ.. ಶಾಸ್ತ್ರೀ ನಿವಾಸದ ಎಲ್ಲರೂ ಮನೆಮಗಳಿಗೆ ಶುಭಹಾರೈಸಿ ಕಳುಹಿಸಿಕೊಟ್ಟರು.


ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.-
01-06-2020.

2 comments: