Wednesday, 3 June 2020

ಜೀವನ ಮೈತ್ರಿ ಭಾಗ ೮೫(85)



ಜೀವನ ಮೈತ್ರಿ ಭಾಗ ೮೫


         ತವರಿಂದ ಬಂದು ಒಂದು ದಿನ ಪತಿ ಮನೆಯಲ್ಲಿದ್ದ ಮೈತ್ರಿಗೆ ಈಗ ಬೆಂಗಳೂರಿಗೆ ಹೊರಡುವ ಸಂಭ್ರಮ. ಬೇಕಾದ್ದನ್ನೆಲ್ಲಾ ತುಂಬಿಸಿಕೊಳ್ಳುವ ಜವಾಬ್ದಾರಿ.ಅಲ್ಲಿ ಏನಿದೆ- ಏನಿಲ್ಲ ಎಲ್ಲಾ ಕಿಶನ್ ಜೊತೆ ಚರ್ಚಿಸಿ ಬೇಕಾದ್ದನ್ನು ಪಟ್ಟಿ ಮಾಡಿಕೊಂಡು ತುಂಬಿಸಲು ತೊಡಗಿದ್ದಳು.



       ಅತ್ತೆ ಅದು ಇರಲಿ ಇದು ಇರಲಿ ಎಂದು ತನ್ನ ಸೊಸೆಗೆ ಎಲ್ಲವನ್ನು ಕೊಡುತ್ತಿದ್ದರು. ತುಂಬಿ ತುಂಬಿ ಬ್ಯಾಗುಗಳೆಲ್ಲ ತುಂಬು ಗರ್ಭಿಣಿಯಂತೆ ತುಂಬಿಕೊಂಡಿದ್ದವು. ಬೆಂಗಳೂರಿನ ಹೊಸ ವಾತಾವರಣ ಹೇಗಿರುತ್ತೆ ಎಂದು ಕಾತರ ಮನಸಲ್ಲಿ. ಕಿಶನ್ ಮದುವೆಯಾದ ಮೇಲೆ ವಾಸಿಸಲು ಎಂದು ಬಾಡಿಗೆಗೆ ಫ್ಲ್ಯಾಟ್ ಮಾಡಿಕೊಂಡಿದ್ದ.ಮದುವೆಯಾದ ಮೇಲೆ ಮೈತ್ರಿ ಹಾಲು ಉಕ್ಕಿಸಿ ಮನೆಯೊಳಗೆ ವಾಸ್ತವ್ಯ ಆರಂಭ ಮಾಡುವುದು ಎಂದು ಅವನ ಯೋಚನೆಯಾಗಿತ್ತು.


         ಮಗ ಸೊಸೆಯನ್ನು ಬೆಂಗಳೂರಿಗೆ ಕಳುಹಿಸಿ ಕೊಡುವಾಗ ಅತ್ತೆ ಭಾವುಕರಾಗಿದ್ದರು. ಮಮತಾ ಬಲು ಮೃದುಹೃದಯಿ. ಎಲ್ಲವನ್ನು ವಾಹನಕ್ಕೆ ತಂದು ತಂದು ತುಂಬಿಸಿದರು. ಮೈತ್ರಿಗೆ ಕೈತೋಟದಲ್ಲಿ ಅರಳಿದ ಎರಡು ಕಸಿ ಗುಲಾಬಿ ಹೂಗಳನ್ನು ಕೊಯ್ದು ಮುಡಿದುಕೊಳ್ಳಲು ನೀಡಿದರು.ಹೊರಡುವಾಗ ಆಗಾಗ ಬರುತ್ತಿರಿ ಎಂದು ಹೇಳಲು ಮರೆಯಲಿಲ್ಲ.ನವದಂಪತಿಯ ಪಯಣ ಬೆಂಗಳೂರು ಸಾಗಿತ್ತು.


          ಬೆಳಿಗ್ಗೆ ಬೆಂಗಳೂರು ತಲುಪಿದಾಗ  ಆಗಲೇ ಜನಜಂಗುಳಿ ಆರಂಭವಾಗಿತ್ತು. ವಾಹನ ಫ್ಲ್ಯಾಟ್ ನ ಮುಂಭಾಗದಲ್ಲಿ ನಿಂತಿತು.ಲಗೇಜ್ ಇಳಿಸಿದರು. 25 ಅಂತಸ್ತಿನ ಆಕರ್ಷಕ ಫ್ಲ್ಯಾಟ್.  ಸಧ್ಯವೇ ಕಾಮಗಾರಿ ಮುಗಿದಂತೆ ಕಾಣುತ್ತಿತ್ತು. ಕೆಳಗಡೆ ಮಧ್ಯ ವಯಸ್ಸಿನವರು ,ಹಿರಿಯರು ವಾಕಿಂಗ್ ಮಾಡುತ್ತಿದ್ದರು. ಇವರು ಬಂದರೂ ಇವರನ್ನು ಗಮನಿಸದೆ ಎಲ್ಲರೂ ತಮ್ಮ ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು. ಇದು ಮೈತ್ರಿಗೆ  ವಿಶೇಷವಾಗಿತ್ತು. ಹಳ್ಳಿಗಳಲ್ಲಿ ಒಬ್ಬ ಹೊಸಬ ಬಂದರೂ ಸಾಕು, ಜನ ಆತ ಯಾರು ಏನು ಎಂದು ವಿಚಾರಿಸಿಕೊಳ್ಳುತ್ತಿದ್ದರು.ತಂದ ಬ್ಯಾಗುಗಳನ್ನು  ಲಿಫ್ಟಿನಲ್ಲಿ ಇಟ್ಟು15ನೇ ಅಂತಸ್ತಿನಲ್ಲಿರುವ ಮನೆಯ ಎದುರು ಇಟ್ಟಾಗ ಮನಸ್ಸಿಗೆ ಏನೋ ಸಂತೃಪ್ತಿ. ಲಿಫ್ಟ್ ನ ಆಚೆಬದಿಯ ಮೂಲೆಯೊಂದರಲ್ಲಿ ಇತ್ತು ಅವರ ಮನೆ. ಕಿಶನ್ ಬಾಗಿಲು ತೆರೆದು  ಮಡದಿಯನ್ನು ಹೊಸಮನೆಗೆ ಕರೆದೊಯ್ದ.


         ಇದುವರೆಗೆ ಯಾರೂ ಉಪಯೋಗಿಸದ ಹೊಸ ಮನೆಯದು.ಪೈಂಟ್ ತನ್ನ ಹೊಸಕಂಪನ್ನು ಸೂಸುತ್ತಿತ್ತು.ಮೂಲೆಮೂಲೆಗಳಲ್ಲಿ ಅಲ್ಲಲ್ಲಿ ನಿರ್ಮಾಣ ಕಾಮಗಾರಿಯ ಕುರುಹುಗಳನ್ನು ಉಳಿಸಿದ್ದರು.'ಇನ್ನು ಇದನ್ನೆಲ್ಲ ಸ್ವಚ್ಛಗೊಳಿಸುವ ಭಾರ ನನ್ನ ಹೆಗಲ ಮೇಲಿದೆ' ಎಂದು ನಿಟ್ಟುಸಿರು ಬಿಟ್ಟಳು ಮೈತ್ರಿ.ಕಿಶನ್ ಎಲ್ಲಾ ಅಗತ್ಯ ವಸ್ತುಗಳನ್ನು ಬ್ಯಾಗಿನಿಂದ ತೆಗೆದು ಜೋಡಿಸಿಟ್ಟ.ಮೈತ್ರಿ ಹಾಲುಕ್ಕಿಸಲು ಹಾಲಿನ ಪ್ಯಾಕೆಟ್ ಒಡೆದಳು.ಹಿಂದಿನಿಂದ ಕಚಗುಳಿ ಇಟ್ಟಂತಾಯಿತು.

"ತುಂಟ..."

"ಇನ್ನು ಹೀಗೇನೇ..ನಮ್ಮ ತುಂಟಾಟಕ್ಕೆ ಯಾವುದೇ ಅಡ್ಡಿಯಿಲ್ಲ"

"ಹಾಂ.. ಈಗ ಹಾಲುಕಾಯಿಸಬೇಕು.. ಅದೆಲ್ಲ ಆಮೇಲೆ.."

ಆಕೆಯ ಹೆಗಲನ್ನು ಬಳಸಿದ.ಹಾರಾಡುತ್ತಿದ್ದ ಆಕೆಯ ಕೂದಲುಗಳ ನಡುವೆ ಬೆರಳಿರಿಸಿದ.ಬೇಡ ಬೇಡವೆಂದರೂ ಹೀಗೆ ಕಾಡಿಸುವ ಅವನ ಒಲುಮೆಗೇ ಪ್ರತಿಸಲವೂ ಆಕೆ ಸೋಲುವುದು.

"ರೀ.. ನಾನು ಹಾಲುಕ್ಕಿಸ್ತೀನಿ.. ನೀವು ಫ್ರೆಶ್ ಆಗಿ ಬನ್ನಿ.." ಎಂದಳು  ಅವನನ್ನು ಸಾಗಹಾಕುವ ಸಲುವಾಗಿ...

"ಹಾಲುಕ್ಕಿದಂತೆ ಪ್ರೇಮವೂ ಉಕ್ಕಲಿ.. " ಎನ್ನುತ್ತಾ ಬರಸೆಳೆದು ಕಣ್ಣುಗಳಲ್ಲಿ ಕಣ್ಣನಿರಿಸಿದ್ದ.ಅವನ ನೋಟವ ಆಕೆ ಸಹಿಸಿ ಸುಮ್ಮನಿರಲು ಸಾಧ್ಯವೇ.. ಅವನೆದೆಗೆ ಮುಖವಿಟ್ಟು  ಪ್ರೇಮಮುದ್ರೆಯನನುಗ್ರಹಿಸಿ ಈಗಿಷ್ಟು ಸಾಕು ಎಂದುಕೊಂಡು
"ಹಾಲುಕ್ಕುತ್ತಿದೆ ..."ಎಂದಳು ಜೋರಾಗಿ..

"ಹೌದಾ .."ಎಂದ ಆತ ಹೌಹಾರಿ..

ಅವನ ತೋಳಬಂಧನದಿಂದ ಬಚಾವಾಗಿ ಆಕೆ ನಗುತ್ತಾ ದೂರ ನಿಂತಿದ್ದಳು ..ಆತ ಪೆಚ್ಚಾಗಿ "ಆಮೇಲೆ ಸಿಗ್ತೀಯಲ್ಲಾ.." ಎಂದು ನಗುತ್ತಾ ಹೆಗಲಮೇಲೆ ಬಾತ್ ಟವಲ್ ಹಾಕಿಕೊಂಡು ವಾಶ್ ರೂಂ ಗೆ ತೆರಳಿದ.


       ಹಾಲುಕ್ಕಿಸುತ್ತಿದ್ದಂತೆ ಅಮ್ಮನ ಫೋನ್ ಬಂತು ಮೈತ್ರಿಗೆ.ಬೆಂಗಳೂರು ಮುಟ್ಟಿದ್ರಾ.. ಪ್ರಯಾಣ ಹೇಗಾಯ್ತು..ಮನೆ ಹೇಗಿದೆ..ತಿಂಡಿಗೇನು ಮಾಡುವ ಯೋಚನೆ.. ಹೀಗೆ ಅಮ್ಮನ ಕಾಳಜಿಯ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದಾಗ..ಅತ್ತೆಯ ಫೋನ್ ಕರೆ.. ಪುನಃ ಅದೇ ತೆರನಾದ ಪ್ರಶ್ನೆಗಳು..ಮಾತನಾಡಿ ಅವರ ಕುತೂಹಲಗಳಿಗೆ ತೆರೆ ಎಳೆದಳು.


        ಮೈತ್ರಿಗೆ ಈಗ ತಿಂಡಿ ಮಾಡುವ ಗಡಿಬಿಡಿ.ಯಾವುದಕ್ಕೂ ಮೊದಲು ಉಕ್ಕಿಸಿದ ಹಾಲಿಂದ ಕಾಫಿ ಮಾಡಿ ಕುಡಿಯೋಣ ಎಂದು ಹೊರಟಳು..ಕಾಫಿ ಪುಡಿ ಹುಡುಕಿದಳು .....ಸಿಕ್ಕಿಲ್ಲ.. ಕಿಶನ್ ನ ಕೇಳಿದರೆ "ಇಲ್ಲ ಕಣೇ.. ಮತ್ತೆ ತರ್ತೀನಿ" ಅಂದ..ಸರಿ ಅಂತ ಹಾಲನ್ನೇ ಗಂಡನಿಗೂ ಕೊಟ್ಟು ತಾನೂ ಕುಡಿದು ಉಪ್ಪಿಟ್ಟು ಮಾಡಲು ಹೊರಟಳು..


        ಸಜ್ಜಿಗೆ/ರವೆ ಪ್ಯಾಕೆಟ್ ಕಂಡಿತು.. ಟೊಮೆಟೊ, ಹಸಿಮೆಣಸು, ಕರಿಬೇವು..
ಊಹೂಂ..ಒಂದೂ ಇಲ್ಲ.. ಹೋಗ್ಲಿ .. ಉಪ್ಪು, ಕೆಂಪು ಮೆಣಸು,ಉದ್ದಿನ ಬೇಳೆ, ಸಾಸಿವೆ ಆದರೂ ಇದೆಯಾ ಎಂದು ಕಿಶನ್ ನ ಅಡುಗೆ ಸಾಮಾನಿನ ಡಬ್ಬದಲ್ಲಿ ಹುಡುಕಿದಳು.ಸ್ವಲ್ಪ ಸಿಕ್ಕಿತು.ಮೊದಲಿದ್ದ ರೂಮಿನಿಂದ ಇಲ್ಲಿಗೆ ಶಿಫ್ಟ್ ಮಾಡುವಾಗ ಅಲ್ಲಿ ಅಡುಗೆ ಮಾಡಿ ಉಳಿದಿದ್ದ ವಸ್ತು ಗಳನ್ನು ತಂದಿದ್ದ.. ಅಂತೂ ಇಂತೂ.. ಉಪ್ಪಿಟ್ಟು ಆಯ್ತು..


         ಬೇಗ ಹೋಗಿ ಸ್ನಾನ ಮಾಡಿ ಬಂದು, ದೇವರಿಗೆ ದೀಪ ಹಚ್ಚಿ ಕೈಮುಗಿಯುತ್ತಿದ್ದಳು.. ಕಿಶನ್ ಹಿಂದೆ ನಿಂತಿದ್ದ.ನಮಸ್ಕರಿಸಲು ಬಾಗಿದಾಗ...ಕಚಗುಳಿಯಿಟ್ಟ.. "ದೇವರಿಗೆ ನಮಸ್ಕಾರ ಮಾಡುವಾಗಲೂ....ಬೇಕಾ ಇದೆಲ್ಲಾ.."ಅವಳ ಗಂಭೀರವಾದ ಮಾತಿಗೆ ಅಷ್ಟೇ ಗಂಭೀರವಾಗಿ "ನಾನೇನೂ ಮಾಡಿಲ್ಲ.. " ಎನ್ನುತ್ತಾ ಹೊರನಡೆದ..

        ತಿಂಡಿಗೆ ತಟ್ಟೆಯಿಟ್ಟ ಕಿಶನ್.ಹಾಲಿಗೆ ಸಕ್ಕರೆ ಬೆರೆಸಿ ತಂದಳು ಮೈತ್ರಿ.ಉಪ್ಪಿಟ್ಟು ಗಂಡನಿಗೆ ಬಡಿಸಿದಳು."ನೀನೂ ಕುಳಿತುಕೋ"..ಎಂದ..
"ನಿಮ್ಮದಾಗಲಿ" ಎಂದಳು..
"ಓಹೋ.. ಮೊದಲು ನನ್ನ ಮೇಲೆ ಪ್ರಯೋಗಿಸಿ ಆಮೇಲೆ ನೀನು ತಿನ್ನುವ ಪ್ಲಾನ್.."
"ಏನು..? ನಂಗೆ ..ಉಪ್ಪಿಟ್ಟು ಮಾಡಲು ಬರುತ್ತದೆ.. ಅಷ್ಟೆಲ್ಲಾ ತಮಾಷೆ ಮಾಡ್ಬೇಡಿ.."

"ಮತ್ತೇನೇ...ಉಪ್ಪಿಟ್ಟಲ್ಲಿ ಉಪ್ಪೇಯಿಲ್ಲ.."

"ಹಾಕಿದೀನಲ್ಲ.." (ಸ್ವಗತ)ಆ ಪ್ಯಾಕೆಟ್ ನಲ್ಲಿ ಅರ್ಧದಷ್ಟು ಉಪ್ಪಿತ್ತು.. ಸಾಲ್ಟ್ ಅಂತಾನೇ ಬರೆದಿತ್ತು..ಆದರೂ..

"ನೀನೇ ತಿಂದು ನೋಡು ಬೇಕಾದರೆ.."

"ಹೌದಾ.. "ಎನ್ನುತ್ತಾ ತನ್ನ ತಟ್ಟೆಗೆ ಉಪ್ಪಿಟ್ಟು ಸ್ವಲ್ಪ ಬಡಿಸಿಕೊಂಡು ರುಚಿನೋಡಿದಳು.

"ಸರಿಯಾಗಿದೆಯಲ್ಲಾ.."

ಆತ ನಗುತ್ತಾ "ಹೂಂ.. ತಿನ್ನೋಕೆ ಶುರುಮಾಡಿದೆಯಲ್ಲಾ... ಇನ್ನು ತಿನ್ನು.."ಎಂದ..

"ಅಬ್ಬಾ.. ಉಪಾಯವೇ.. !!!"ಎಂದು ಪತಿಯ ಜೊತೆಯಲ್ಲಿ ತಾನು ಉಪ್ಪಿಟ್ಟು ಸವಿದಳು..
ಮೊದಲ ಕೈರುಚಿ ಸರಿ ಬಂದುದು ಅವಳಿಗೂ ಖುಷಿಯಾಯಿತು.ಇನ್ನು ಮಧ್ಯಾಹ್ನಕ್ಕೆ ಏನಡುಗೆ ಮಾಡಲಿ ಎಂದು ಯೋಚಿಸುತ್ತಾ ಸಿಂಕಿನಲ್ಲಿದ್ದ ಪಾತ್ರೆಗಳನ್ನೆಲ್ಲ ತೊಳೆದು ಶುಚಿಗೊಳಿಸಿದಳು.


      ಕಿಶನ್ ಕೆಳಗಡೆ ತೆರಳಿ ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದು ಮೈತ್ರಿಯ ಕೈಗೊಪ್ಪಿಸಿದ.ಮನೆಯನ್ನು ಸ್ವಚ್ಛಮಾಡಲು ಅವಳಿಗೆ ಸಹಕರಿಸಿದ.ನಡುನಡುವೆ ಸರಸ ಸಲ್ಲಾಪ ಕೆಲಸದ ಆಯಾಸವನ್ನು ಮರೆಸಿತು..ಸಂಜೆಯ ವೇಳೆ ವಾಯುವಿಹಾರ ಹೊರಟರು ಮುದ್ದಾದ ಜೋಡಿ.ಪತಿಯ ಜೊತೆ ಹೆಜ್ಜೆಹಾಕುತ್ತಾ ಹರಟುತ್ತಾ ಪಾರ್ಕ್ ನಲ್ಲಿ ವಾಕ್ ಮಾಡಿದ್ದು ಮೈತ್ರಿಗೆ ಮುದನೀಡಿತು.ಪ್ರೇಮಹಕ್ಕಿಗಳು ವಿಹಾರಗೈದು ಗೂಡು ಸೇರಿದವು.ರಾತ್ರಿಯಾಗುತ್ತಲೇ ಚಂದಿರನ ಬೆಳಕು ಇಬ್ಬರನ್ನು ಕೆಣಕಿತು.. ತಂಗಾಳಿಯ ತಂಪಿನಲ್ಲಿ ಪ್ರೇಮದ ಗುಂಗಿನಲ್ಲಿ ಮೈಮರೆತು ಈ ಪ್ರೇಮಗಾನವು ಮನೆಯೆಲ್ಲ ಪಸರಿಸಿತು.


ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
03-06-2020.

ಹೆಚ್ಚಿನ ಓದಿಗಾಗಿ...

ಬರಹ ದ ಕೆಳಗಡೆ ಇರುವ
Home,view web version,> ಅನ್ನು ಬಳಸಿಕೊಳ್ಳಬಹುದು..




2 comments: