ಜೀವನ ಮೈತ್ರಿ ಭಾಗ ೮೭
ಲಾಲ್ ಬಾಗ್ ಸುತ್ತಿ ಮೈತ್ರಿ ದಣಿದಳು.ನಡೆದೂ ನಡೆದೂ ಸಾಕಾಯ್ತು."ಮುಗಿಯೋದೇ ಇಲ್ವಾ... ?"ಎಂದು ಕೇಳಿದಳು.ಮುದ್ಗೊಂಬೆಯ ಮುಖ ನೋಡಿದ ಕಿಶನ್ ಗೆ 'ಪಾಪ..!! ಎಷ್ಟು ಬಸವಳಿದಿದ್ದಾಳೆ' ಅನಿಸಿತು."ಹೋಗೋಣ್ವಾ ಹಾಗಾದ್ರೆ.." ಅಂತ ಕೇಳಿದ.
"ಹೂಂ..ಹೋಗೋಣ .."
"ಬಾ "ಎಂದು ಕೈಯನ್ನು ಆಕೆಯ ಹಿಂದಿನಿಂದ ಬಳಸಿ ,ಪಕ್ಕಕ್ಕೆ ಕರೆದೊಯ್ಯುತ್ತಿದ್ದ..
"ರೀ.. ಆ ಕಡೆ ಎಲ್ಲಿಗೆ..ಈ ಕಡೆ ಅಲ್ವಾ..?"
ಕಿಶನ್ ಮಾತನಾಡದೆ ಕರೆದೊಯ್ದ.ವಿಶಾಲವಾದ ಮರದಡಿ ಸೊಂಪಾಗಿ ಗಾಳಿ ಬೀಸುತ್ತಿತ್ತು .ಮರದ ಅಡ್ಡಕ್ಕೆ ನಿಂತವನೇ ಆಕೆಯನ್ನು ಬಳಸಿ ಬಾಗಿದ.
"ಏನು ಇಲ್ಲಿ..ಛೀ..ಬೇಡಪ್ಪಾ.."
ಅಂದಾಗ ಕಚಗುಳಿಯಿಟ್ಟ.ಕಣ್ಣಲ್ಲೆ ಲಲ್ಲೆಗೆರೆದ.ಇಲ್ಲ ಇನ್ನು ಸಾಧ್ಯವೇ ಇಲ್ಲ ಎಂದು ಶರಣಾದಳು.ಅಧರಧರವ ಸೋಕಿಸಿ ಮಧುವ ಹೀರಿ ಅವಳ ಲಿಪ್ಸ್ ಸ್ಟಿಕ್ ನಲ್ಲಿಯನ್ನು ಪಾಲನ್ನು ಪಡೆದೇ ತೀರಿದ.
"ಈಗ ಎನರ್ಜಿ ಬಂತಾ..?"ಎಂದ ನಗುತ್ತಾ..
"ರೀ..ಏನು ಹುಡುಗಾಟ ನಿಮ್ಮದು?" ಎಂದು ಹುಸಿಕೋಪದಿಂದ ಅವನ ಹೊಟ್ಟೆಗೊಂದು ಪುಟ್ಟ ಒದೆ ಕೊಟ್ಟು ದೂರನಿಂತಳು."ನೀವು ಹೀಗೆಲ್ಲಾ ಮಾಡಿದ್ರೆ ಇನ್ನು ನಿಮ್ಮ ಜೊತೆ ಎಲ್ಲಿಗೂ ಬರಲ್ಲ.." ಎಂದು ಮುಖ ಊದಿಸಿದಳು.
"ನಾನೇನು ಅಪರಾಧ ಮಾಡಿದೆ ಅಂತ...ಆಯಾಸವಾಗುತ್ತೆ ಅಂದೆ.. ಸ್ವಲ್ಪ ನನ್ನಲ್ಲಿರೋ ಎನರ್ಜಿ ಕೊಟ್ಟೆ ಅಷ್ಟೆ..."
ಅನ್ನುತ್ತಿದ್ದರೆ ಮೈತ್ರಿ "ಮಾತಿನಲ್ಲಿ ಜಾಣ..ನಂಗೇ ಮಾತಾಡಲು ಬರಲ್ಲ.ಏನು ಮಾಡೋದು" ಎಂದು ಸುಮ್ಮನಾದಳು.
ಸ್ವಲ್ಪ ಹೊತ್ತು ಮರದಡಿಯಲ್ಲಿ ವಿರಮಿಸಿ ಮುಂದೆ ಸಾಗಿದರು.
ಇಡೀ ಲಾಲ್ ಬಾಗ್ ಸುತ್ತಿದಂತೆ ಮಾಡಿದಾಗಲೇ ಗಂಟೆ ಎರಡಾಗಿತ್ತು.ಇಬ್ಬರಿಗೂ ಹೊಟ್ಟೆ ಚುರುಗುಟ್ಟುತ್ತಿತ್ತು.ಹೊರಗಡೆ ಬಂದು ಅಲ್ಲೇ ಎದುರು ಬದಿಯಲ್ಲಿದ್ದ ಹೋಟೇಲೊಂದಕ್ಕೆ ತೆರಳಿದರು."ಏನು ಬೇಕಮ್ಮ ಅರಗಿಣಿ.."ಎಂದ ಕಿಶನ್.
"ನಿಮಗೇನು ಬೇಕೋ ಆರ್ಡರ್ ಮಾಡಿ" ಎಂದಳು.
ಕಿಶನ್ ಲಿಸ್ಟ್ ನೋಡುತ್ತಿದ್ದ.ಮೈತ್ರಿ "ಅದರಲ್ಲಿರುವ ಅಪರೂಪದ ಐಟಂ ಆರ್ಡರ್ ಮಾಡಿ ಗಂಟೆಗಟ್ಟಲೆ ಕಾಯುವುದಕ್ಕಿಂತ ಊಟಾನೋ, ಮಸಾಲೆ ದೋಸೆ ,ಚಪಾತಿ,ಪೂರಿನೋ ತಿಂದು ಬೇಗ ಮನೆ ಕಡೆ ಹೋಗೋಣ "ಎಂದಳು .ಅವನಿಗೂ ಸರಿ ಎನಿಸಿತು.
ಮದುವೆಯ ಓಡಾಟ, ಸಂಸಾರದ ಆರಂಭದ ಗೌಜಿ ಗದ್ದಲದಲ್ಲಿ ಆಯಾಸಗೊಂಡಿದ್ದ ಮೈತ್ರಿಗೆ ವಿಶ್ರಾಂತಿ ಸಿಕ್ಕರೆ ಸಾಕು ಎನಿಸಿತ್ತು.ಮಸಾಲೆ ದೊಸೆ ಆರ್ಡರ್ ಮಾಡಿದ ಕಿಶನ್.ಬಹಳ ಬೇಗನೆ ತಂದ ಸಪ್ಲಾಯರ್.ತಿಂದು ಮನೆ ಕಡೆಗೆ ತೆರಳಿದರು.
"ರೀ..ನಾಳೆ ಒಂದೇ ದಿನವಿರುವುದು ನಿಮಗೆ ವೆಕೇಶನ್.ಇನ್ನು ಎಲ್ಲೂ ಸುತ್ತಾಡದೆ ಮನೆಯಲ್ಲೇ ಇದ್ದು ಬಿಡೋಣ.ಆಗದೇ.ಲಾಲ್ ಬಾಗ್ ಸುತ್ತಿ ಕೈಕಾಲು ನೋಯುತ್ತಿದೆ."
"ಸರಿ .."ಎಂದ ಕಿಶನ್.
ಹೋಗುವ ದಾರಿಯಲ್ಲಿ ಮನೆಗೆ ಬೇಕಾದ ತರಕಾರಿ ಜೀನಸು ಸಾಮಾನುಗಳನ್ನು ಕೊಂಡುಕೊಂಡರು.ಅಂಗಡಿಯವರೊಂದಿಗೆ ರೇಟಿನಲ್ಲಿ ಚರ್ಚೆ ಮಾಡುತ್ತಿದ್ದ ಕಿಶನ್ ನನ್ನು ಅವಳಿಗೆ ಬಲುವಿಚಿತ್ರವಾಗಿ ಕಂಡಿತು.
ಕಾರಿಗೆ ಹತ್ತಿದ ಕೂಡಲೇ ತರಾಟೆಗೆ ತೆಗೆದುಕೊಂಡಳು."ಏನ್ರೀ..ಅದು ಅಷ್ಟೊಂದು ಚೌಕಾಸಿ ಮಾಡೋದು..ನಾನಂತೂ ಯಾರೂ ಈ ತರಹ ಮಾಡೋದು ಕಂಡಿಲಪ್ಪ.."
"ಅಲ್ಲಿ ನಮ್ಮೂರಲ್ಲಿ ಯಾರೂ ಬಾರ್ಗೈನ್ ಮಾಡಲ್ಲ.ಒಂದಕ್ಕೆರಡರಷ್ಟು ರೇಟೂ ಹೇಳಲ್ಲ.ಇಲ್ಲಿ ಹಾಗಲ್ಲ.ಬಾಯಿಗೆ ಬಂದ ರೇಟ್.ಸುಮ್ಮನೆ ದುಡ್ಡು ಕೊಟ್ಟು ಬಂದರೆ ಕಿಸೆಬೋಳಿಸಿ ಬಿಟ್ಟಾರು ಕಣೇ.."
"ಏನೋ.ನಂಗೆ ಮಾತ್ರ ಚೊರೆ ಮಾಡಿದ್ರೆ ಸರಿ ಕಾಣಲ್ಲಪ್ಪ.ಮುಂದಿನ ಸಲ ಮಾತ್ರ ಸಾಮಾನು ಕೊಂಡುಕೊಳ್ಳೋಕೆ ನಾನು ಬರಲ್ಲ.. ನಿಮ್ಮ ಜೊತೆ ಹಾಗೆ ಮಾಡಿದ್ರೆ..ನಂಗೆ ಮುಜುಗರವಾಗುತ್ತೆ..."
"ಮುಜುಗರ ಏನು ಬಂತು ಮುದ್ಗೊಂಬೆ..ನಮ್ಮದೇ ದುಡ್ಡಲ್ಲಿ ನಾವು ಮೊಸ ಹೋಗಬೇಕಾಗುತ್ತೆ ಇಲ್ಲಾಂದ್ರೆ.."
ಎಂದು ಆಕೆಗೆ ಬೆಂಗಳೂರು ನಗರದ ಬಾರ್ಗೈನ್ ವಿಚಾರವನ್ನು ವಿವರವಾಗಿ ತಿಳಿಸಿದ.
ಮನೆಗೆ ಬಂದಾಗ ಮೈತ್ರಿಗೆ ಕೆಲಸದ ರಾಶಿಯೇ ಬಿದ್ದಿತ್ತು.ಬಟ್ಟೆ ಒಗೆಯಬೇಕಿತ್ತು,ರಾತ್ರಿಗೆ ಅಡುಗೆ ಆಗಬೇಕಿತ್ತು,ಕಿಟಕಿ ಹಾಕೋದು ಮರೆತು ಹೋಗಿದ್ದಕ್ಕೆ ಪಾರಿವಾಳ ಅಲಲ್ಲಿ ಗಲಿಜು ಮಾಡಿ ಹೋಗಿತ್ತು.ಅಬ್ಬಬ್ಬಾ...ಇನ್ನೆಷ್ಟು ಕೆಲಸವಿದೆ ಎನ್ನುತ್ತಾ ಕಾದಾರಿದ ನೀರನ್ನು ಲೋಟಕ್ಕೆ ಬಸಿದು ಕಿಶನ್ ಗೆ ಕೊಟ್ಟಳು.ಆತ ತಾನು ಕುಡಿದು ನಂತರ ಮಡದಿಗೆ ತಾನೇ ನೀರು ಬಗ್ಗಿಸಿಕೊಟ್ಟ .".ಮನೆಕೆಲಸಕ್ಕೆ ನಾನೂ ಸಹಾಯ ಮಾಡುವೆ..ಟೆನ್ಶನ್ ಮಾಡಬೇಡ.ಕೂಲ್ಡೌನ್ ಡಾರ್ಲಿಂಗ್" ಅಂದ.
ಅವನ ಮಾತಿನ ವರಸೆಯಲ್ಲೇ ಮುಂದಿನ ಅವನ ಬಯಕೆಯನ್ನರಿತವಳೇ ..."ನನ್ನ ಅಪಾಯಿಂಟ್ ಮೆಂಟ್ ಇವತ್ತಿಗಿಲ್ಲ ಸರ್ "ಅಂದುಬಿಟ್ಟಳು.
ನಿರಾಸೆಯಾದರೂ ತಡೆದುಕೊಂಡು ಕಿಶನ್ ಅವಳ ಆಯಾಸವನ್ನರಿತು ತಾನು ತೊಂದರೆ ಕೊಡಬಾರದೆಂದು ಸಮ್ಮನಾದ.
ಬಟ್ಟೆಗಳನ್ನು ನೀರಿನಲ್ಲಿ ನೆನೆಸಿಟ್ಟು
ಮೈತ್ರಿ ಫ್ರೆಶ್ ಆಗಿ ಬಂದವಳೇ ಅಡುಗೆ ಮನೆಗೆ ತೆರಳಿ ಒಂದೊಂದೇ ಕೆಲಸ ಆದಂಭಿಸಿದಳು.ಕಿಶನ್ ಪಾರಿವಾಳದ ಗಲೀಜನ್ನೆಲ್ಲ ತೆಗೆದು ಮನೆಯೆಲ್ಲಾ ಗುಡಿಸಿ ಒರೆಸಿ ಕೊಟ್ಟ.ಮೈತ್ರಿ ಕಿಶನ್ ಗೆ ಬಿಸಿಬಿಸಿ ಕಾಫಿ ತಂದುಕೊಟ್ಟಳು."ನೀನೂ ಬಾರಮ್ಮ.ಮುದ್ಗೊಂಬೆ ಜೊತೆಯಲ್ಲೇ ಕಾಫಿ ಕುಡಿಯೋಣ "ಎಂದ.ಡಬ್ಬದಿಂದ ಊರಿನಿಂದ ಬರುವಾಗ ತಂದಿದ್ದ ಹಲಸಿನಕಾಯಿಯ ಸೋಂಟೆ (ಚಿಪ್ಸ್ )ಹುಡುಕಿ ಪ್ಲೇಟಿಗೆ ಹಾಕಿ ತಂದಳು.ಕಿಶನ್ ಗೆ ಸೋಂಟೆಯೆಂದರೆ ಭಾರೀ ಇಷ್ಟ.ಸನಿಹದಲ್ಲಿ ಮುದ್ಗೊಂಬೆಯೂ ಇದ್ದಾಗ ಸ್ವಲ್ಪ ಹೆಚ್ಚೇ ತಿಂದು ಬಿಟ್ಟ.
ಹೊಟ್ಟೆ ತುಂಬಿದವನಿಗೆ ನಿದ್ರೆಯ ಜೊಂಪು.".ನಾನು ಸ್ವಲ್ಪ ಮಲಗಲೇ" ಅಂದ.
"ಹೂಂ "ಅಂದಳು ಮೈತ್ರಿ.
ಮನದೊಳಗೆ ಮಾತ್ರ ಇವರಿಗೆಷ್ಟು ಆರಾಮ.ನನಗೂ ಆಯಾಸವಾಗುತ್ತಿದೆ.ಮಲಗಬೇಕೆಂದೆನ್ನುತ್ತಿದೆ ಶರೀರ.ಆದರೇನು ಮಾಡಲಿ ಕೆಲಸಗಳು ಮುಗಿಯುತ್ತಿಲ್ಲ.ನೆನೆಸಿಟ್ಟ ಬಟ್ಟೆಗಳನ್ನೆಲ್ಲ ಒಗೆಯಬೇಕು.ಎಂದು ಬಾತ್ ರೂಮ್ ಗೆ ತೆರಳಿ ಬಟ್ಟೆತೊಳೆದು ಬಾಲ್ಕನಿಯಲ್ಲಿ ಒಣಗಲು ಹಾಕಿದಳು.ವಾಷಿಂಗ್ ಮೆಷಿನ್ ಇದ್ದಿದ್ದರೆ ಒಳ್ಳೆಯದಿತ್ತು ಎಂದಿತ್ತು ಅವಳ ಮನಸು.
ರಾತ್ರಿಯಡುಗೆಗೆ ಒಗ್ಗರಣೆ ಬೀಳುತ್ತಲೇಎದ್ದ ಕಿಶನ್.ಫ್ರೆಶ್ ಆಗಲು ತೆರಳಿದವನಿಗೆ ಮೈತ್ರಿ ಬಟ್ಟೆಯೊಗೆದು ನೇತುಹಾಕಿದ್ದು ಕಂಡಿತು.ಪಾಪ ಸ್ವಲ್ಪವೂ ವಿರಮಿಸದೆ ಕೆಲಸ ಮಾಡಿದ್ದಾಳೆ ಮುದ್ಗೊಂಬೆ.. ಎಂದುಕೊಂಡು ಸ್ನಾನಮಾಡಿ ಅಡುಗೆಮನೆಗೆ ಬಂದಾಗ ಊಟಕ್ಕೆ ತಟ್ಟೆಯಿಟ್ಟಿದ್ದಳು ಮೈತ್ರಿ.ಪುಟ್ಟದಾದ ದೇವರ ಕೋಣೆಯಲ್ಲಿ ದೀಪವಿಟ್ಟು ಊದಿನಕಡ್ಡಿ ಇರಿಸಿದ ಕುರುಹು ಕಂಡಿತು.ಇವಳಿಷ್ಟು ಮಾಡಿದಾಗ ನಾನೂ ಸ್ವಲ್ಪ ಆಚಾರಪಾಲಿಸದಿದ್ದರೆ ಹೇಗೆ ಎಂದು ಕೌಳಿಗೆ ಸಕ್ಕಣ ತೆಗೆದುಕೊಂಡು ನೀರು ತುಂಬಿಸಿ,ಮೂರು ವಿಭೂತಿ ನಾಮವೆಳೆದು ಗಾಯತ್ರಿ ಜಪ,ಅಷ್ಟಾಕ್ಷರಿ,ಪಂಚಾಕ್ಷರಿ ಜಪ ಮಾಡಿ ಹೊರಗೆ ಬಂದ.ಅವನ ಮುಖ ಪ್ರಸನ್ನವಾಗಿತ್ತು.ಮೈತ್ರಿಯ ಮುಖದಲ್ಲಿ ಆಯಾಸದ ಗೆರೆಗಳು ಸ್ಪಷ್ಟವಾಗಿ ಗೋಚರಿಸುತ್ತಿದವು.
ಇಬ್ಬರೂ ಜೊತೆಯಾಗಿ ಊಟ ಮಾಡಿದರು.ಊಟವಾದ ಮೇಲೆ ಕಿಶನ್ ಎಲ್ಲವನ್ನೂ ಎತ್ತಿಡಲು ಸಹಕರಿಸಿದ..".ಮುದ್ಗೊಂಬೆ ನೀನು ಹೋಗಿ ಮಲಗು.ನಾನು ಕಿಚನ್ ಕ್ಲೀನಿಂಗ್ ಮಾಡುತ್ತೇನೆ" ಎಂದ.ಅವಳು ಒಪ್ಪಲಿಲ್ಲ.ಅವನು" ನನಗಿದೆಲ್ಲ ಹೊಸದಲ್ಲ.ಮೊದಲೂ ಮಾಡುತ್ತಿದ್ದೆ ನೀನು ಹೋಗಿ ರೆಸ್ಟ್ ಮಾಡು.ನಾಳೆ ನನ್ನನ್ನು ಆಫೀಸಿಗೆ ಹೊರಡಿಸಲು ಹೇಗೂ ಬೇಗವೇ ಏಳಬೇಕು.ಈಗ ಆದರೂ ದಣಿದ ದೇಹಕ್ಕೆ ವಿಶ್ರಾಂತಿ ಸಿಗಲಿ" ಎಂದು ಒತ್ತಾಯಿಸಿ ಕಳುಹಿಸಿದ.
ಮೈತ್ರಿಗೆ ಮಲಗಿ ಎರಡೇ ನಿಮಿಷದಲ್ಲಿ ನಿದ್ರೆ ಆವರಿಸಿತ್ತು.ಐದು ನಿಮಿಷದಲ್ಲಿ ಕಿಶನ್ ಬಂದು ನೋಡಿದಾಗ ನಿದ್ರೆಗೆ ಜಾರಿದ್ದಳು ಮುದ್ಗೊಂಬೆ.ಆಕೆಗೆ ಹೊದಿಕೆ ಹೊದೆಸಿ ಮಡದಿಯ ಮುದ್ದು ಮುಖವನ್ನೊಮ್ಮೆ ದಿಟ್ಟಿಸಿ ಅಡುಗೆ ಮನೆಕಡೆ ತೆರಳಿದ.ಕಿಚನ್ ಕ್ಲೀನಿಂಗ್ ಮುಗಿಸಿ ನಾಡಿದ್ದಿನ ಆಫೀಸ್ ಕೆಲಸಕ್ಕೊಮ್ಮೆ ಲ್ಯಾಪ್ ಟಾಪ್ ನಲ್ಲಿ ಒಳಹೊಕ್ಕು , ಆಫೀಸಿಗೆ ಹೊರಡಲು ಬೇಕಾದ ಶೂ ಸಾಕ್ಸ್ ತೆಗೆದಿಟ್ಟು, ಬಟ್ಟೆ ಐರನ್ ಮಾಡಿ ಮಲಗಲು ತೆರಳಿದ ಕಿಶನ್.
ಎಚ್ಚರವಾದ ಮೈತ್ರಿ "ಎಷ್ಟೊತ್ತಾಯ್ತು ರೀ..."ಅಂದಾಗ ಹನ್ನೊಂದು ಗಂಟೆ ಅಂದವನ ವದನದಲ್ಲಿ ಬಯಕೆಯು ಚಿಗುರೊಡೆದಿತ್ತು.ಅವಳು "ಹೂಂ "ಎನ್ನುವುದಷ್ಟೇ ಬಾಕಿಯಿತ್ತು.
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
08-06-2020.
👌🏼👌🏼👌🏼👌🏼
ReplyDelete💐🙏
Delete