Monday, 15 June 2020

ಜೀವನ ಮೈತ್ರಿ ಭಾಗ ೯೦(90)




ಜೀವನ ಮೈತ್ರಿ ಭಾಗ ೯೦



      ಭಾನುವಾರ ಬೇಗನೆ ತಿಂಡಿ ತಯಾರಿಸಿ ಹೊರಟು ನಿಂತಿದ್ದಳು ಮೈತ್ರಿ.ಕಿಶನ್ ಏಳುವಾಗಲೇ ಮೈತ್ರಿಗೆ ಹೊರಟಾಗಿದ್ದನ್ನು ಕಂಡು "ಅರೇ.. ಇಷ್ಟು ಬೇಗ ಹೊರಟಾಯಿತಾ.. ಹೆಣ್ಣುಮಕ್ಕಳಿಗೆ ತವರುಮನೆಗೆ ಬಹಳ ಬೇಗನೇ ಹೊರಟಾಗುತ್ತದಂತೆ "ಎಂದು ಛೇಡಿಸಿದ..

"ಏನೇನೋ ಮಾತನಾಡುತ್ತಾ ಕಾಲಹರಣ ಮಾಡದೆ ಬೇಗನೇ ಹೊರಡಿ "ಎಂದಳು ಮೈತ್ರಿ.ನಿರ್ವಾಹವಿಲ್ಲದೆ ಪತ್ನಿಯ ಆಜ್ಞೆಯನ್ನು ಪಾಲಿಸಿದ.ಎಂಟೂವರೆಗೆ ಇಬ್ಬರೂ ಮನೆಗೆ ಬೀಗ ಹಾಕಿ ಹೊರಟರು.


      ಶಂಕರ ಶಾಸ್ತ್ರಿಗಳ ಮನೆಯಲ್ಲಿ ನವವಧೂವರರಿಗೆ ವಿವಿಧ ಅಡುಗೆಗಳನ್ನು ತಯಾರಿಸುತ್ತಿದ್ದರು .ಅಮ್ಮನ ಕೆಲಸಗಳಿಗೆ ಮಕ್ಕಳಾದ ಸಂಜನಾ ವಂದನಾ ಸಹಕರಿಸುತ್ತಿದ್ದರು. ಸಂಜನಾಗೆ ಅಕ್ಕ ಬಂದಾಗ ಮಾತನಾಡಿಸಿಯಾಳೇ ಮೊದಲಿನಂತೆ...
 ಇಲ್ಲವೋ.. ಎಂಬ ಪ್ರಶ್ನೆ ಮನದಲ್ಲಿ ಮೂಡಿತು. ಭಾವ ಅಕ್ಕನ ಜೊತೆ ಜೊತೆಗೇ ಇದ್ದರೆ ಮೊದಲಿನಂತೆ ಹರಟಲು ಸಾಧ್ಯವಿಲ್ಲ ಎಂದು ಅನಿಸಿತು.


        ಶಂಕರ ಶಾಸ್ತ್ರಿಗಳದು ನಗರದ ಹೊರವಲಯದಲ್ಲಿ 20 ಸೆಂಟ್ಸ್ ಜಾಗದಲ್ಲಿ 20 ವರ್ಷಗಳ ಮೊದಲು ಕಟ್ಟಿದ ಮನೆ. ಗಾಯತ್ರಿಯ ತವರುಮನೆ ಕೂಡ ಇದೇ ಕಡೆ. ತವರಿನ ಬಂಧುಗಳ ಕಡೆಯಿಂದಲೇ ಜಾಗವನ್ನು ಖರೀದಿಸಿದ್ದರು. ವಿಶಾಲವಾದ ಎರಡು ಅಂತಸ್ತಿನ ಮನೆ. ಮನೆಯ ಸುತ್ತಲೂ ಮರಗಿಡಗಳನ್ನು ಬೆಳೆಸಿ ಹಚ್ಚ ಹಸಿರಾಗಿರುವಂತೆ ನೋಡಿಕೊಂಡಿದ್ದರು. ಅತಿಯಾದ ವಾಹನದ ಸಂದಣಿಯಿಲ್ಲದೆ ಇರುವಂತಹ ಪ್ರಶಾಂತ ವಾತಾವರಣವಿರುವ ಪರಿಸರವಿದು.ಮನೆಯಂಗಳದಲ್ಲಿ ಮಾವು, ಪೇರಳೆ ,ಚಿಕ್ಕು, ಹಲಸು ಗಿಡಗಳನ್ನು ನೆಟ್ಟಿದ್ದರು.ಇದರಿಂದ ಮನೆಯ ವಾತಾವರಣ ತಂಪಾಗಿರುತ್ತಿತ್ತು.


      ಮಗಳು ಅಳಿಯ ಗೇಟಿನ ಬುಡದಲ್ಲಿ ಕಾರು ನಿಲ್ಲಿಸುತ್ತಿದ್ದಂತೆ ಶಂಕರ ಶಾಸ್ತ್ರಿಗಳು ಹೋಗಿ ಗೇಟ್  ತೆರೆದರು. ಅಳಿಯನಲ್ಲಿ" ಕಾರು ಒಳಗೆ ತೆಗೆದುಕೊಂಡು ಬರಬಹುದು" ಎಂದರು. ಮನೆಯಂಗಳ ವಿಶಾಲವಾಗಿತ್ತು. ಮೈತ್ರಿಯನ್ನು ಕಂಡಾಗ" ಮಗಳೇ .."ಎಂದು ಉದ್ಗರಿಸಿದರು ಶಾಸ್ತ್ರಿಗಳು. "ಚಿಕ್ಕಪ್ಪಾ...."ಎನ್ನುತ್ತಾ ಅಷ್ಟೇ  ಪ್ರೀತಿಯಿಂದ ಸಂಬೋಧಿಸಿದಳು ಮೈತ್ರಿ. ಚಿಕ್ಕಮ್ಮನೂ ಹಾಜರಾಗಿ ಕ್ಷೇಮಸಮಾಚಾರ ವಿಚಾರಿಸಿದರು. ಮನೆಯೊಳಗೆ ಕರೆದೊಯ್ದು ಬಾಯಾರಿಕೆಯಿತ್ತು ಉಪಚರಿಸಿದರು.


    ಮೈತ್ರಿ ಬಹಳ ಲವಲವಿಕೆಯಿಂದ ಬಾಯ್ತುಂಬಾ ಪಟಪಟ ಮಾತನಾಡುತ್ತಾ ಇದ್ದಳು.ಇದನ್ನು ಗಮನಿಸಿದ ಕಿಶನ್ ಗೆ "ಇವಳಿಗೆ ಒಂದು ವಾರದಿಂದ ಯಾರನ್ನು ಕಾಣದೆ ನನ್ನ ಮುಖ ನೋಡಿ ನೋಡಿ ಬೇಸರವಾಗಿರಬೇಕು.ತವರಿನವರು ಸಿಕ್ಕ ಕೂಡಲೇ ಒಮ್ಮೆಲೇ ಭಾವೋದ್ವೇಗಕ್ಕೆ ಒಳಗಾಗಿದ್ದಾಳೆ"ಅನಿಸಿತು.ತಂಗಿಯರೊಂದಿಗೆ ಎಂದಿನಂತೆ ಬೆರೆತರೂ ಚಿಕ್ಕಮ್ಮ ಮಾಡುತ್ತಿದ್ದ ಅಡುಗೆಯ ಕಡೆಗೆ ಅವಳ ಗಮನ ಹೆಚ್ಚಿತ್ತು.


      ಕಿಶನ್ ಶಂಕರ ಮಾವನಲ್ಲಿ ಚರ್ಚಿಸುತ್ತಾ ಮನೆಯನ್ನೂ,ಹೊರಾಂಗಣವನ್ನೂ ನೋಡಿ ಬಂದು ಹಾಲ್ ನಲ್ಲಿ ಆಸೀನನಾದ.ಮಡದಿಯ ಹಿಂದೆ ಸುತ್ತುತ್ತಿರಲಿಲ್ಲ.ಇದರಿಂದಾಗಿ ಅಕ್ಕ ಮೊದಲಿನಂತೆ ಇದ್ದುದು ಸಂಜನಾಗೆ ಖುಷಿ ತಂದಿತು.ಮೈತ್ರಿಗೂ ಅಷ್ಟೇ ಮನೆಯವರ ಮುಂದೆ ಮುಜುಗರವಾಗುವಷ್ಟು ಕಿಶನ್ ಹತ್ತಿರ ಸುಳಿದಾಡದಿರುವುದು ಆ ಕ್ಷಣ ಹಿತವಾಗಿತ್ತು.ತವರಿನಲ್ಲಿರುವಾಗ ಹಣ್ಣು ಹಂಪಲು ಬೇಕಾದಷ್ಟಿದ್ದರೂ, ಅಜ್ಜಿ ತುಂಡು ಮಾಡಿ ತಿನ್ನಲು ಕೊಟ್ಟರೂ, ಬೇಡ ಅನ್ನುತ್ತಿದ್ದವಳಿಗೆ ಇಲ್ಲಿ ಪೇರಳೆ ,ಚಿಕ್ಕು,ಕೈಗೆಟುಕುವಂತಿರುವ ಕಸಿಮಾವಿನ ಕಾಯಿ ಕಂಡಾಗ ಬಾಯಲ್ಲಿ ನೀರೂರಿತ್ತು.


       ಊಟದ ನಂತರ ಹಣ್ಣುಗಳನ್ನು ಶಂಕರ ಶಾಸ್ತ್ರಿಗಳು ತುಂಡು ಮಾಡಿ ಇಟ್ಟರು.ಮೈತ್ರಿ ಚೂರು ಹೆಚ್ಚೇ ಸೇವಿಸಿದಳು. ಮಾವಿನಕಾಯಿಯನ್ನು ತುಂಡು ಮಾಡಿ ಉಪ್ಪು, ಮೆಣಸಿನ ಪುಡಿ ಹಾಕಿ ಬಾಯಿ ಚಪ್ಪರಿಸುತ್ತಾ ತಿನ್ನುತ್ತಿದ್ದ ಮಗಳನ್ನು ಕಂಡು "ಮೈತ್ರಿ... ಇನ್ನೊಂದು ಹತ್ತು ಕಾಯಿ  ಕೊಯಿದು ತರ್ತೀನಮ್ಮ...ನಿಮಗೆ ಕೊಂಡೊಯ್ಯಲು.."ಎಂದಾಗ
ಕಿಶನ್"ಬೇಡ ಮಾವ.. ಮುಂದಿನ ಸಲ ಊರಿಗೆ ಹೋದಾಗ ತರುತ್ತೇನೆ"ಎಂದ.ಆದರೆ ಶಂಕರ ಶಾಸ್ತ್ರಿಗಳ ಮನಸ್ಸು ತಡೆಯಲಿಲ್ಲ. ಮಾವಿನಕಾಯಿ , ಪೇರಳೆ, ಚಿಕ್ಕು ಕೊಯ್ದು ತಂದು ಎಲ್ಲವನ್ನೂ ಪ್ಲಾಸ್ಟಿಕ್ ಕವರ್ನಲ್ಲಿ ತುಂಬಿಸಿ ಕೊಟ್ಟರು.ಗಾಯತ್ರಿ ಚಿಕ್ಕಮ್ಮ ಹದವಾಗಿ ಬಿರಿದಿದ್ದ ಕೆಂಗುಲಾಬಿ ಹೂವೊಂದನ್ನು ಕೊಯ್ದು ಮೈತ್ರಿಗೆ ಮುಡಿಸಿದರು.ಮೈತ್ರಿಗೆ ತವರಿನಿಂದ ಸಿಗುತ್ತಿದ್ದ ಪ್ರೀತಿ ಆದರಗಳನ್ನು ಕಂಡು ಕಿಶನ್ ಗೂ ಸ್ವಲ್ಪ ಹೊಟ್ಟೆಯುರಿಯಿತು.

"ಅಳಿಯಂದಿರೇ .. ಮಗಳು ಹೇಗೆ ಅಡುಗೆ ಮಾಡುತ್ತಾಳೆ "ಎಂದು ಕೇಳಿದರು .

"ವಾವ್... ಸೂಪರ್ 👌.. ಬೊಂಬಾಟ್ ಆಗಿ ಅಡುಗೆ ಮಾಡುತ್ತಾಳೆ."

"ಗಂಡನಿಗೆ ಚೆನ್ನಾಗಿ ಉಣಿಸುತ್ತಾಳೆ ಅಂತ ನೋಡಿದರೇ ಗೊತ್ತಾಗುತ್ತದೆ."ಎಂದು ಗಾಯತ್ರಿ ಚಿಕ್ಕಮ್ಮ ಹೇಳಿದಾಗ ಅದರಲ್ಲಿನ ದ್ವಂದಾರ್ಥವನ್ನು ಗುರುತಿಸಿ ಮೈತ್ರಿ ಕಿಶನ್ ಇಬ್ಬರೂ ಮುಖ ಮುಖ ನೋಡಿಕೊಂಡು ನಕ್ಕರು.



       ಸಂಜೆ ಅಲ್ಲಿಂದ ಹೊರಟು ಮಾಲ್ ಸುತ್ತಿ ಶಾಪಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು.ಕಿಶನ್ ತಂದೆ ಕರೆ ಮಾಡಿದ್ದರು.
"ಮಗನೇ.. ಈ ಶುಕ್ರವಾರ ದಿಂಡಿನ ಶಾಸ್ತ್ರ ಮಾಡುವುದೆಂದು ನಿರ್ಧರಿಸಿದ್ದೇವೆ.ನೀವಿಬ್ಬರೂ ಗುರುವಾರವೇ ಬನ್ನಿ.."

ಅಪ್ಪನ ಮಾತಿಗೆ ಏನು ಹೇಳುವುದೆಂದೇ ತಿಳಿಯಲಿಲ್ಲ ಕಿಶನ್ ಗೆ.ಕೆಲಸಕ್ಕೆ ಹಾಜರಾಗಿ ಕೆಲವೇ ದಿನಗಳಾಗಿತ್ತಷ್ಟೆ.ಈಗಲೇ ಪುನಃ ರಜೆಹಾಕುವುದು ಕಷ್ಟ.
"ಅಪ್ಪಾ.. ಭಾನುವಾರ ಆದರೆ ಒಳ್ಳೇದಿತ್ತು.. ರಜೆ ಸಿಗುತ್ತೋ ಇಲ್ವೋ..ಈ ಭಾನುವಾರ ಅಥವಾ ಮುಂದಿನ ಭಾನುವಾರ ಪುರೋಹಿತರು ಸಿಕ್ಕರೆ ಮಾಡೋಣ ಆಗದೇ... ರಜೆ ಹಾಕುವುದು ತಪ್ಪುತ್ತದೆ " ಎಂದ ಕಿಶನ್.

ಇನ್ನೊಮ್ಮೆ ಮಾತನಾಡಿ ನೋಡುತ್ತೇನೆಂದ ಗಣೇಶ ಶರ್ಮ ಮೈತ್ರಿ ಯ ಕ್ಷೇಮ ಸಮಾಚಾರ ವಿಚಾರಿಸಿ ಫೋನಿಟ್ಟರು.

ನಂತರದಲ್ಲಿ ಈ ಭಾನುವಾರವೇ ದಿಂಡಿನ ಹೋಮ ಮಾಡುವುದೆಂದು ನಿರ್ಧರಿಸಿ ಮಗನಿಗೆ ತಿಳಿಸಿದರು ಗಣೇಶ ಶರ್ಮ.ಮೈತ್ರಿಗೀಗ ತವರಿನ ಕನವರಿಕೆ ಶುರುವಾಗಿತ್ತು.ತಾನೆರಡು ದಿನ ತವರಿನಲ್ಲಿ ಇದ್ದು ಬಂದರೆ ಹೇಗೆ ಎಂದು ಆಲೋಚಿಸುತ್ತಿದ್ದಳು.ಪತಿಯಲ್ಲಿ ಹೇಳಿದರೆ ಒಪ್ಪುವರೋ ಇಲ್ಲವೋ ಎಂಬ ಯೋಚನೆ.


ಚಿಕ್ಕಪ್ಪ ಕೊಟ್ಟಿದ್ದ ಹಣ್ಣುಗಳನ್ನು ಸವಿಯುತ್ತಾ, ಗಡಿಬಿಡಿಯಲ್ಲಿ ಅಡುಗೆ ಮಾಡುತ್ತಾ,ಮನೆಯ ದೈನಂದಿನ ಕೆಲಸಗಳನ್ನು ಬೇಸರಿಸದೆ ಮಾಡುತ್ತಾ,ಗಂಡನೊಂದಿಗೆ ಸರಸವಾಡುತ್ತಾ ,
ಒಂದು ವಾರ ಸರಿದದ್ದೇ ತಿಳಿಯಲಿಲ್ಲ.ಶನಿವಾರ ಊರಿಗೆ ಹೋಗಲು ಬ್ಯಾಗ್ ರೆಡಿ ಮಾಡಿಟ್ಟಿದ್ದಳು ಮೈತ್ರಿ.ಗಂಡನಲ್ಲಿ ಸೂಕ್ಷ್ಮವಾಗಿ ಎರಡು ದಿನ ತವರಲ್ಲಿ ಇದ್ದು ಬರಲೇ ಎಂದಿದ್ದಳು .

      ಮಡದಿಯ ಮೇಲೆ ಮುತ್ತಿನ ಮಳೆಗರೆದು "ನನ್ನನ್ನು ಒಬ್ಬಂಟಿ ಮಾಡಿ ಅಲ್ಲಿ ಇರ್ತೀಯಾ.."ಎಂದು ಹೇಳಿ ಅವಳ ಕುತ್ತಿಗೆಯ ಸುತ್ತ ಬಾಹುಗಳನ್ನು ಬಂಧಿಸಿ ಕಣ್ಣಿನಲ್ಲೇ ಬೇಡ ಕಣೇ ಅಂದಿದ್ದ.ಅವನ ಕಣ್ಣಿನಲ್ಲಿ ತನ್ನದೇ ಬಿಂಬವನ್ನು ಕಂಡಳು ಮೈತ್ರಿ.ಇವನ ಈ ಹುಚ್ಚು ಹಿಡಿಸುವಷ್ಟು ಪ್ರೀತಿಯ ನೋಟಕ್ಕೇ ನಾನು ಪ್ರತಿ ಬಾರಿಯೂ ಸೋಲೋದು.. ಎನ್ನುತ್ತಾ ಅವನೆದೆಗೆ ಮುಖವಿಟ್ಟು ನಕ್ಕಳು..


        ಭಾನುವಾರ ಬೆಳಿಗ್ಗೆ  ಕಿಶನ್ ಮನೆಗೆ ತಲುಪಿದರು.ಅತ್ತೆ ಮಮತಾ ಕ್ಷೇಮ ವಿಚಾರಿಸಿ ಮಗ ಸೊಸೆಗೆ ಬಿಸಿ ಬಿಸಿ ಕಾಫಿ ಮಾಡಿ ಕೊಟ್ಟರು.
ಕಣ್ಣಲ್ಲೇ ಸೊಸೆ ಹತ್ತು ದಿನದಲ್ಲೇ ಸ್ವಲ್ಪ ದಪ್ಪವಾಗಿ ಇನ್ನಷ್ಟು ಮುದ್ದಾಗಿ ಕಾಣುತ್ತಾಳೆ ..ಸೊಸೆಯ ಅಡುಗೆಯುಂಡು ಮಗನ ಹೊಟ್ಟೆಯೂ ಸ್ವಲ್ಪ ಎದ್ದು ಕಾಣುತ್ತಿದೆ .. ನನ್ನ ಮಗ ಸೊಸೆ ಮುದ್ದಾದ ಜೋಡಿ..ಪರಸ್ಪರ ಪ್ರೀತಿಯುಂಡು ಮೈಕೈ ತುಂಬಿಕೊಂಡಿದ್ದಾರೆ .. ಎಂದುಕೊಂಡರು.

     ಬೇಗನೆ ಫ್ರೆಶ್ ಆಗಿ ತಿಂಡಿ ತಿಂದಾಗುವಷ್ಟರಲ್ಲಿ ಪುರೋಹಿತರು ಆಗಮಿಸಿದ್ದರು. ಅತ್ತಿಗೆಯಂದಿರಾದ ಚಾಂದಿನಿ ಮೇದಿನಿ ತಮ್ಮ ಗಂಡಂದಿರೊಂದಿಗೆ ಆಗಮಿಸಿದ್ದರು.ಏನೇನೋ ಹೇಳುತ್ತಾ ರೇಗಿಸಲು ಆರಂಭಿಸಿದ್ದರು.ಆದರೆ ಮೈತ್ರಿಗೆ ಅದೆಲ್ಲ ತಲೆಗೇ ಹೋಗುತ್ತಿರಲಿಲ್ಲ.ಅವಳ ತಲೆಯಲ್ಲಿದ್ದುದು ಒಂದೇ  ಯಾವಾಗ ತನ್ನ ತವರಿಂದ ಬರುತ್ತಾರೋ..ನಾನು ಯಾವಾಗ ಅಮ್ಮ, ತಮ್ಮನನ್ನು ನೋಡುತ್ತೇನೋ ಎಂದು.. ಒಂದು ವಾಹನದ ಶಬ್ದ ಕೇಳಿದರೂ ಸಾಕು  ತವರಿನಿಂದ ಬಂದರಾ ಎಂದು ಕೊರಳುದ್ದ ಮಾಡುತ್ತಿದ್ದಳು ಮೈತ್ರಿ.ಮುದ್ಗೊಂಬೆಯ ಕಾತರವನ್ನು ಕಿಶನ್ ಅರ್ಥಮಾಡಿಕೊಂಡು "ಮುದ್ಗೊಂಬೆ...ಈಗ ..ಇನ್ನರ್ಧ ಗಂಟೆಯಲ್ಲೇ ಬರುತ್ತಾರೆ.."ಅಂದಾಗ ಅವಳ ಕಂಗಳು ತುಂಬಿ ಬಂದವು.ಹನಿಗಳು ಕೆಳ ಜಾರದಂತೆ  ತನ್ನ ಅಂಗೈಯಿಂದ ಒರೆಸಿದ ಕಿಶನ್ ಹಣೆಯ ಮೇಲೊಂದು ಪ್ರೇಮಮುದ್ರೆಯನೊತ್ತಿದ.


ಮುಂದುವರಿಯುವುದು..

✍️ ಅನಿತಾ ಜಿ.ಕೆ.ಭಟ್.
15-06-2020.

   

2 comments: