Wednesday, 17 June 2020

ಜೀವನ ಮೈತ್ರಿ ಭಾಗ ೯೧(91)


ಜೀವನ ಮೈತ್ರಿ ಭಾಗ ೯೧


       ಪುರೋಹಿತರು ಮಂತ್ರೋಚ್ಛಾರಣೆ ಮಾಡುತ್ತಾ ಹವಿಸ್ಸನ್ನು ಹೋಮಕ್ಕೆ ಅರ್ಪಿಸುತ್ತಿದ್ದರು.ಕಿಶನ್ ಮೈತ್ರಿ ತಾವು ಹಸ್ತ ಮುಟ್ಟಿಕೊಳ್ಳುತ್ತಿದ್ದರು.ಪರಿಕರ್ಮಿ ಬಾಲಣ್ಣ ತಯಾರಿಸಿದ್ದ ಅಷ್ಟದ್ರವ್ಯವನ್ನು,ದನದ ತುಪ್ಪವನ್ನು ಹೋಮಕ್ಕೆ ಸುರಿಯುತ್ತಿದ್ದಂತೆ ಹೋಮದಿಂದ ವಿಶೇಷವಾದ ಪರಿಮಳ ಮನೆಯೆಲ್ಲ ಪಸರಿಸಿತು.ಹೋಮದ ಮುಂದೆ ಕುಳಿತು ಪುರೋಹಿತರು ಹೇಳಿದಂತೆ ಮಾಡುತ್ತಿದ್ದ ಮೈತ್ರಿಗೆ ತವರಿನ ಕನವರಿಕೆ.ದೇಹ ಯಾಂತ್ರಿಕವಾಗಿ ಇಲ್ಲಿದ್ದರೂ ಮನಸ್ಸು ..'ಎಷ್ಟು ಹೊತ್ತಾಯಿತು ಬರಲೇಯಿಲ್ಲ' ಎನ್ನುತ್ತಾ ರಚ್ಚೆ ಹಿಡಿದು ಪ್ರಶ್ನಿಸುತ್ತಿತ್ತು.


   ಅಂಗಳದ ತುದಿಯಲ್ಲಿ ಕಾರೊಂದು ಬಂದು ನಿಂತದ್ದೇ ತಡ ಅವಳೊಳಗೆ ಪುಳಕ.ಮನವು ಕುಣಿದಾಡಿತು.ಕಾರಿನಿಂದಿಳಿದ ಅಮ್ಮನ ಸೀರೆಯಂಚು ಕಂಡಾಗ ಮೈತ್ರಿಗೆ ನಿಟ್ಟುಸಿರು.ಬೆನ್ನು ಹಾಕಿ ನಿಂತಿರುವ ಅಮ್ಮನ ಕಪ್ಪಾದ ಉದ್ದ ಜಡೆ, ತಲೆಯಲ್ಲಿ ಮಂಗಳೂರು ಮಲ್ಲಿಗೆ ಹೂವಿನ ಮಾಲೆ,ಮತ್ತೊಂದು ಕೇಸರಿಗುಲಾಬಿ ಹೂವನ್ನು ಕಂಡೊಡನೇ ಓಡಿ ಹೋಗಿ ಅಮ್ಮನನ್ನು ಬರಸೆಳೆದು ಅಪ್ಪಿ ಹಿಡಿಯಬೇಕೆನ್ನುವ ಹಂಬಲ.. ಆದರೆ...ಪುರೋಹಿತರು 'ಈಗ ಅರ್ಧ ಗಂಟೆ ಇಲ್ಲಿಂದ ಏಳುವಂತಿಲ್ಲ 'ಎಂದು ಖಡಾಖಂಡಿತವಾಗಿ ಹೇಳಿದರು.

     ಓಹ್...ಕಾರಿನಿಂದಿಳಿದು ನಗುನಗುತ್ತಾ ಬರುತ್ತಿದ್ದಾನೆ ಕೀಟಲೆ ಕಿಟ್ಟಪ್ಪ ಮಹೇಶ್...!! ಎಷ್ಟು ದಿನವಾಯಿತು ಇವನ ಛೇಡಿಸುವ ಮಾತಿಲ್ಲದೇ...ಹಿಂದಿನಿಂದ ಬರುತ್ತಿದ್ದರು...ಅಮ್ಮ..ಅದೇನೋ ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದಾರಲ್ಲ... ಬಹುಶಃ ನನಗಾಗಿಯೇ ಇರಬೇಕು..ಮಗಳೆಂದರೆ ಬಲು ಅಕ್ಕರೆ ಅಮ್ಮನಿಗೆ.. ಎಂದಿನಂತೆ ಸರಳವಾಗಿಯೇ ಬಂದಿದ್ದಾರೆ ಅಮ್ಮ..ಒಳ್ಳೆಯ ಸೀರೆ, ತುಂಬಾ ಆಭರಣ ಇದ್ದರೂ ಅಮ್ಮ ಅದೆಲ್ಲ ಬದಿಗಿಟ್ಟು ಸಾಧಾರಣ ಅಲಂಕಾರದಲ್ಲಿ ಮುಖದ ಮೇಲೆ ಮಂದಹಾಸವರಳಿಸಿಕೊಂಡು ಬರುತ್ತಿದ್ದಾರೆ.ಅಪ್ಪಾ...ಯಾವಾಗಲೂ ಗಂಭೀರವಾಗಿ ಇರುತ್ತಿದ್ದ ಅಪ್ಪನ ಮುಖದಲ್ಲಿ ಇಂದು ನನಗೆ ಯಾವ ಗಂಭೀರತೆಯೂ ಕಾಣುವುದಿಲ್ಲ..ಅಲ್ಲ ನಾನು ನೋಡುವ ರೀತಿ ಬದಲಾಗಿದೆಯೋ ...ಎಂದೆಲ್ಲ ಮೈತ್ರಿ ಕುಳಿತಲ್ಲಿಂದಲೇ ಲೆಕ್ಕ ಹಾಕುತ್ತಿದ್ದಳು.


      ಮಂಗಳಮ್ಮ ಒಳಗೆ ಬಂದವರೇ ಮಗಳ ಬಳಿ ಬಂದು ಮಾತನಾಡಿದರು.ಮಗಳು ಅಳಿಯನನ್ನು ಹೋಮದ ಬುಡದಲ್ಲಿಯೇ ಮಾತನಾಡಿಸಿ ಮಗಳಿಗೆ-ಅಮ್ಮನಿಗೆ ಒಮ್ಮೆಯ ಕಾತುರತೆ ಕಡಿಮೆಯಾದ ಮೇಲೆ ಅಮ್ಮ ಬಾಯಾರಿಕೆ ಕುಡಿಯಲು ತೆರಳಿದರು.ಅಪ್ಪ ಬಾಯಾರಿಕೆ ಕುಡಿದು ಬಂದಾಗ ಕಿಶನ್ ಮೈತ್ರಿ ಇಬ್ಬರೂ ತಾವಿದ್ದಲ್ಲಿಂದಲೇ ಕುಶಲ ವಿಚಾರಿಸಿಕೊಂಡರು.ಇನ್ನು ತಮ್ಮ .. ಅವನನ್ನು ಇಲ್ಲಿಂದ ಮಾತನಾಡಿಸಿದರೆ ಸಾಲದು ಮೈತ್ರಿಗೆ.ಹತ್ತಿರ ಹೋಗಿ ಅವನ ಜೊತೆ ತರ್ಲೆ ಮಾಡಿದ್ರೇ ಸಮಾಧಾನ.


     ಹೋಮ ಪೂರ್ಣಾಹುತಿ ಆಗುತ್ತಿದ್ದಂತೆ ಇದ್ದ ಸ್ವಲ್ಪವೇ ಬಿಡುವಿನಲ್ಲಿ ತಮ್ಮನೆಡೆಗೆ ಧಾವಿಸಿದಳು ಮೈತ್ರಿ.."ಏನೋ ತರ್ಲೆ ತಮ್ಮ ಸಮಾಚಾರ..?"

"ಏನಮ್ಮ ಮಹಾರಾಣಿಯವರೇ..ತಾವೇ ಹೇಳಬೇಕು.."

"ಸಿಇಟಿ ,ನೀಟ್ ಪರೀಕ್ಷೆಗಳಿಗೆಲ್ಲ ಓದಿ ಆಯ್ತಾ..?ಈಗ ತೊಂದರೆ ಕೊಡೋಕೆ ಯಾರು ಇಲ್ವಲ್ಲಾ.."

"ಓದಿ ಮುಗಿಯೋದುಂಟೇ.. ? ಹೌದು.. ಲಾಲ್ ಬಾಗ್ ಹೇಗಿತ್ತು.. ? ಲಾಲ್ ಬಾಗ್ ಅನ್ನು ಲವ್ ಬಾಗ್ ಮಾಡ್ಬಿಟ್ರೋ ಹೇಗೆ..?"

"ನೀನು ಹೀಗೇನೇ..ಬದಲಾಗೋದೇ ಇಲ್ಲ.."

"ನೀನು ಅಷ್ಟೇ ಅಕ್ಕಾ..ಬದಲಾಗಲೇ ಇಲ್ಲ.. ಮೊದಲಿನಂತೆ ನನ್ನನ್ನು ಗದರಿಸೋದು ಬಿಟ್ಟಿಲ್ಲಾ.. ಹೌದು ಭಾವಂಗೂ ದಿನಾ ಹೀಗೇ ಕ್ಲಾಸ್ ತೆಗೋತೀಯಾ ಹೇಗೆ..?"

ಅಷ್ಟರಲ್ಲಿ ಭಾವನೂ ಆಗಮಿಸಿದರು..
ಇವರ ಮಾತುಕತೆ ಕೇಳಿದವರೇ "ಹೆಡ್ ಮಿಸ್ ಎದುರು ಮಾತಾಡಲು ಭಯ .. ಆಮೇಲೆ ಪನಿಶ್ಮೆಂಟ್ ಕೊಟ್ರೆ ಭಯ..ಊಟತಿಂಡಿ ಸರಿಯಾಗಿ ಸಿಗ್ಬೇಕಲ್ಲ.."

"ಹೌದ್ ಹೌದು ಭಯ... ನಾಟಕ ಸಾಕು.."ಎನ್ನುತ್ತಾ ಕಣ್ಣಲ್ಲೇ ಕಿಚಾಯಿಸಿದಳು.

"ನಮ್ಮಕ್ಕಾ ... ಹೇಗೆ.. ನಳಪಾಕ ಮಾಡಿ ಎಕ್ಸ್ಪರ್ಟ್ ಆದ್ರಾ ..ನಿಮ್ಮ ಟ್ರೈನಿಂಗಲ್ಲಿ.."

"ಅಕ್ಕನ ಕೈಯಡುಗೆ ಉಂಡು ಎರಡು ಕೆಜಿ ತೂಕ ಹೆಚ್ಚಾಗಿದೆ..ಇನ್ನೀಗ ನಂಗೆ ಡಯಟ್ ಮಾಡಿಸೋಕೆ ಒಂದು ವಾರ ತವರಲ್ಲಿರಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದಾಳೆ ನಿಮ್ಮಕ್ಕ.."

"ಎಲ್ಲ ಛೇಡಿಸೋಕೆ ಮಾತ್ರ...ಅದಕ್ಕೆಲ್ಲಿ ಬಿಡ್ತೀರಿ ನೀವು.."
ಎಂದಾಗ ಪುರೋಹಿತರು ಕರೆದರು.ಮೈತ್ರಿ ಕಿಶನ್ ತೆರಳಿದರು.


      ಕಾರ್ಯಕ್ರಮ ಮುಗಿದು ಊಟವಾದ ಬಳಿಕ ಮೈತ್ರಿ ಅಪ್ಪನಲ್ಲಿ ಮಾತನಾಡುತ್ತಿದ್ದಳು..ಅಪ್ಪ ತಗ್ಗಿದ ದನಿಯಲ್ಲಿ "ಮಗಳೇ.. ಬೆಂಗಳೂರು ಹೇಗಾಗುತ್ತದೆ..? ವಾತಾವರಣ ಹಿಡಿಸುತ್ತಾ..?" ಎಂದೆಲ್ಲ ಕೇಳುತ್ತಿದ್ದರೆ ಅಂದು ಏರುದನಿಯಲ್ಲಿ ಮಾತನಾಡಿಸುತ್ತಿದ್ದ ಅಪ್ಪ ಇವರೇನಾ..? ಎಂಬ ಪ್ರಶ್ನೆ ಅವಳೊಳಗೆ ಮೂಡಿತ್ತು.ಅಳಿಯಂದಿರ ಉದ್ಯೋಗ,ಮನೆಗೆ ಬರುವ ಸಮಯ ,ಆಫೀಸು ಎಲ್ಲವನ್ನೂ ಕುತೂಹಲದಿಂದ ತಿಳಿದುಕೊಂಡರು..ಇದು ಅಪ್ಪನ ಕರ್ತವ್ಯವೂ ಕೂಡಾ.ನಂತರ ಭಾಸ್ಕರ ಶಾಸ್ತ್ರಿಗಳು ಅಳಿಯ ಕಿಶನ್ ನಲ್ಲಿ ಸ್ವಲ್ಪ ಹೊತ್ತು ಮಾತನಾಡಿದರು.

      ಅಮ್ಮ ಮಗಳು ಒಬ್ಬರಿಗೊಬ್ಬರು ಅಂಟಿಕೊಂಡೇ ಇದ್ದರು ಎಂದರೂ ತಪ್ಪಿಲ್ಲ.ಎರಡು ವಾರದ ಮನೆಯ ಸುದ್ದಿಯನ್ನು ಮೈತ್ರಿ ಕೇಳಿ ತಿಳಿದುಕೊಂಡಳು.ಅಜ್ಜ, ಅಜ್ಜಿಯನ್ನು ವಿಚಾರಿಸಿಕೊಂಡಳು.ಮಗಳು ಅಡುಗೆಯ ಗಡಿಬಿಡಿಯಲ್ಲಿ ಮಾಡಿದ ಅವಾಂತರಗಳು, ಲಾಲ್ ಬಾಗ್ ಸುತ್ತಿದ್ದು ,ಮಾಲ್, ಸಿನಿಮಾ,ಚಿಕ್ಕಪ್ಪನ ಮನೆಗೆ ಹೋದದ್ದು ಎಲ್ಲವೂ ವರದಿಯಾಗಿತ್ತು.ಅದಕ್ಕಿಂತ ಹೆಚ್ಚಾಗಿ ಪರಸ್ಪರ ಹಂಚಿಕೊಳ್ಳಲೇಬೇಕೆಂಬ ಉತ್ಕಟತೆ ಅವರಲ್ಲಿತ್ತು..


     ಹೊರಡುತ್ತಿದ್ದಂತೆ ಅಪ್ಪ ಮೈತ್ರಿಯನ್ನು ಕರೆದು "ಇವತ್ತು ಅಮ್ಮ ಇಲ್ಲಿ ನಿಲ್ಲುತ್ತಾರೆ.. " ಎಂದಾಗ ಮೈತ್ರಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.ತಮ್ಮನಿಗೆ ಬಾಯ್ ಮಾಡಿ ಬೆನ್ನ ಮೇಲೊಂದು ಪ್ರೀತಿಯ ಗುದ್ದು ಕೊಟ್ಟು ಕಳುಹಿಸಿದಳು.ಅಪ್ಪ "ಮಗಳೇ ..ನಾಳೆ ಅಮ್ಮನನ್ನೂ ಅಳಿಯಂದಿರನ್ನೂ ಕರೆದುಕೊಂಡು ಬಾ" ಎಂದು ಹೇಳಿದರು.ವಿಷಯವೇನೆಂದು ತೀಳಿದಿರದ ಆಕೆ ಸುಮ್ಮನೆ ತಲೆಯಲ್ಲಾಡಿಸಿದಳು.


      ಮೈತ್ರಿ ಮನೆ ಕೆಲಸಗಳಲ್ಲಿ ಅತ್ತೆಗೆ ಸಹಾಯ ಮಾಡುತ್ತಾ , ಅಮ್ಮನಲ್ಲಿ ಮಾತನಾಡುತ್ತಾ ಇದ್ದರೆ ಕಿಶನ್ ಮಾತ್ರ ಒಂಟಿತನ ಅನುಭವಿಸುತ್ತಿದ್ದ.ಬೆಂಗಳೂರಲ್ಲಿದ್ದಾಗ ಸದಾ ಮಡದಿಯ ಹಿಂದೆಯೇ ಸುತ್ತಿ ಕೀಟಲೆ ಮಾಡುತ್ತಾ , ಮುದ್ದಿಸುತ್ತಾ,ಆಗಾಗ ಬಿಗಿದಪ್ಪಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದವನ ಹೃದಯವೀಗ ಅವಳ ಸನಿಹಕ್ಕೆ ಹಾತೊರೆಯುತ್ತಿತ್ತು.ಅವಳಿಗೆ ತನ್ನ ನೆನಪೇ ಇಲ್ಲವೇನೋ ಎಂಬಂತೆ ಭಾಸವಾಯಿತು ಕಿಶನ್ ಗೆ.ಬರುವಾಗ ಹಾಕಿದ್ದ ಬಟ್ಟೆಯನ್ನು ಒಗೆಯಲು ಕೊಂಡೊಯ್ಯಲು ರೂಮಿನೊಳಗೆ ಕಾಲಿಟ್ಟಳು ಮೈತ್ರಿ.ಅದನ್ನರಿತ ಕಿಶನ್ ತಾನು ಹಿಂಬಾಲಿಸಿದ.ಮೆಲ್ಲನೆ ಹಿಂದಿನಿಂದ ಬಂದು ಬಾಗಿಲು ಸರಿಸಿ ತೋಳುಗಳ ಬಿಗಿಯಾಗಿಸಿ ತನಗೆ ಬೇಕಾದಷ್ಟು ಮಧುವ ಹೀರಿದ.ಅವಳು ಕೈಯಲ್ಲಿ ಹಿಡಿದಿದ್ದ ಬಟ್ಟೆಗಳ ಕೆಳಗೆ ಹಾಕಿ ತನ್ನವನಿಗೆ ಸಾಥ್ ನೀಡಿದಳು.ತಾನು ಎಲ್ಲರೊಂದಿಗೆ ಹರಟುತ್ತಿದ್ದರೂ ಮನದಲ್ಲಿ ನಿನ್ನ ಸನಿಹ ಸುಖದ ಹಂಬಲ ಇದ್ದೇ ಇದೆ ಇನಿಯ.. ಎಂದು ತನ್ನ ಅನುರಾಗದ ನಡೆಯಲ್ಲೇ ವಿವರಿಸಿದಳು.ತುಟಿ ಕೆಂಪೇರಿತ್ತು ,ಕೆನ್ನೆ ರಂಗೇರಿತ್ತು.   "ಮತ್ತೆ ಸಿಗುವೆ" ಎಂದು ಸವಿಯಾಗಿ ಕಿವಿಯಲ್ಲುಸುರಿ ಜಾರಿಕೊಂಡಳು ಕಿಶನ್ ನ ಪ್ರೀತಿಯ ಹರಿಣಿ..ಮುದ್ದಿನರಗಿಣಿ..ಅವಳು ಹೋಗುತ್ತಲೇ ಅವನ ಕಣ್ಣುಗಳೂ ಅವಳನ್ನು ಹಿಂಬಾಲಿಸಿದವು.


     ಮಂಗಳಮ್ಮ ಮಮತಾ ಇಬ್ಬರೂ ತಮ್ಮ ಮಕ್ಕಳ ಸುದ್ದಿ ಮಾತನಾಡುತ್ತಾ ಮನೆಯನ್ನು ಒಪ್ಪ ಓರಣವಾಗಿಸಿದರು.ಮೈತ್ರಿ ಅಂಗಳದ ತುದಿಯಲ್ಲಿ ಇದ್ದ ಕಲ್ಲಿನಲ್ಲಿ ಬಟ್ಟೆಯೊಗೆದು ತಂದು ಜಗಲಿಯ ಬದಿಯಲ್ಲಿದ್ದ ಹಗ್ಗದಲ್ಲಿ ನೇತುಹಾಕಿದಳು.ಬೇಗನೆ ಸ್ನಾನ ಮುಗಿಸಿ ಬಂದವಳಲ್ಲಿ ಅತ್ತೆ "ನೀನು ದೀಪ ಹಚ್ಚು" ಎಂದರು..ದೇವರ ದೀಪ ಹಚ್ಚಿದಳು.ಅವಳ ಕಣ್ಣುಗಳಲ್ಲಿ ನಿದ್ದೆ ತೂಗುತ್ತಿತ್ತು.ಆದರೂ ಇಲ್ಲಿ ಹಾಗೆಲ್ಲ ಬೇಗ ಮಲಗಲು ಅವಳಿಗೂ ಸಂಕೋಚ.ಬೇಗಬೇಗನೆ ಕಿಶನ್ ನಲ್ಲಿ ಸ್ನಾನ ಜಪ ಮುಗಿಸಲು ಹೇಳಿದಳು.ಅದೆಲ್ಲ ಮುಗಿಯುತ್ತಿದ್ದಂತೆ ಊಟಕ್ಕಿಟ್ಟಿದ್ದಳು ಮೈತ್ರಿ.ಅವಳ ಅವಸರವನ್ನು ಅಮ್ಮಂದಿರಿಬ್ಬರೂ ಅರ್ಥೈಸಿಕೊಂಡು ಎಲ್ಲರಿಗೂ ಊಟದ ಏರ್ಪಾಡು ಮಾಡಿದರು.


     ಮಾವ ಮತ್ತು ಕಿಶನ್ ಗೆ ಬಡಿಸುತ್ತಿದ್ದ ಮೈತ್ರಿ ಯಲ್ಲಿ ನೀನೂ ಕುಳಿತುಕೋ ಎಂದರು ಅತ್ತೆ.ಅವಳೂ ಊಟ ಮುಗಿಸಿದಳು.ಅಮ್ಮ ಅತ್ತೆಗೆ ಬಡಿಸಲು ಮುಂದಾದಳು."ನಮಗೆ ನಾವೇ ಬಡಿಸಿಕೊಳ್ಳುತ್ತೇವೆ.ನೀವು ಇನ್ನು ಹೋಗಿ .ಆಯಾಸ ಪರಿಹರಿಸಿಕೊಳ್ಳಿ" ಎಂದರು.ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಯಿತು..ನಸುನಾಚುತ್ತಾ ಮಲಗಲು ತೆರಳಿದಳು ಮೈತ್ರಿ.ಆಕೆ ಹಾಸಿಗೆ ಹಾಸುತ್ತಿದ್ದಂತೆ ರೂಮಿಗಾಗಮಿಸಿದ ಪತಿರಾಯ.ಬಾಗಿಲು ಭದ್ರಪಡಿಸಿದ.ಹಿಂದಿನಿಂದ ಕೈಯಲ್ಲಿ ಆವರಿಸಿದ..ನಿನ್ನೆ ರಾತ್ರಿಯ ಪ್ರಯಾಣದ ಆಯಾಸ,ಲಲ್ಲೆಗೆರೆದು ಜೊತೆಯಾಡಲು ಸಾಧ್ಯವಾಗದ ವಿರಹ ಎರಡೂ ಕೊನೆಯಾಗುವಂತೆ ಉಸಿರೊಳಗೆ ಉಸಿರು ಬೆರೆಸಿ ಒಂದಾಯಿತು ಎಳೆಯ ನವಜೋಡಿ .ಹರುಷದ ಹೊನಲನ್ನು ಹರಿಸಿ ಪತಿಯ ಸಂತೋಷಪಡಿಸಿದಳು ಪತ್ನಿ.

     ದಾಂಪತ್ಯದ ಸವಿಯುಂಡ ದಂಪತಿ ಪರಸ್ಪರ ಮಾತನಾಡಿದರು.ಮೈತ್ರಿಯ ಬಳಿ ನಾಳೆ ಬೆಳಿಗ್ಗೆ ಬೇಗನೆದ್ದು ಮಧೂರು ಮಹಾಗಣಪತಿಯ ದೇವಸ್ಥಾನಕ್ಕೆ ಹೊರಡಬೇಕು.ಮಾವ ಇವತ್ತು ನನ್ನಲ್ಲಿ ಹೇಳಿದ್ದಾರೆ ಎಂಬುದನ್ನು ತಿಳಿಸಿದ..ಹೇಗೆ ,ಎಷ್ಟು ಹೊತ್ತಿಗೆ ಹೋಗುವುದು ಎಲ್ಲ ವಿಷಯವನ್ನು ಮೈತ್ರಿಯಲ್ಲಿ ಹಂಚಿಕೊಂಡ ಕಿಶನ್..ಶುಭಮಿಲನ,ಶುಭಸಂವಾದವು ಶುಭರಾತ್ರಿಗೆ ಮುನ್ನುಡಿ ಬರೆಯಿತು.


ಮುಂದುವರಿಯುವುದು..

✍️...ಅನಿತಾ ಜಿ.ಕೆ.ಭಟ್.
17-06-2020.







3 comments: