Friday, 19 June 2020

ಜೀವನ ಮೈತ್ರಿ ಭಾಗ ೯೨(92)



ಜೀವನ ಮೈತ್ರಿ ೯೨



       ಬೆಳಗ್ಗೆ ಮನೆಯವರೆಲ್ಲರೂ ಬೇಗನೆದ್ದು ಶ್ರೀ ಮಧೂರು ಮಹಾಗಣಪತಿಯ ಮಹಾಗಣಪತಿ ದೇವಾಲಯಕ್ಕೆ ಹೊರಟರು.ಮೈತ್ರಿಯ ತಾಯಿಯೂ ಜತೆಗಿದ್ದರು. ದಾರಿಯ ಮಧ್ಯದಲ್ಲಿ  ಭಾಸ್ಕರ ಶಾಸ್ತ್ರಿಗಳು ಮತ್ತು ಮಹೇಶ ಕೂಡ ಜೊತೆಯಾದರು. ಎರಡೂ ವಾಹನಗಳು  ಒಂದರ ಹಿಂದೆ ಒಂದು ಸಾಗಿದವು.ಮಧೂರು ಗಣಪನ ಸನ್ನಿಧಾನವನ್ನು ತಲುಪಿದವು.ಸುಂದರವಾದ ಪರಿಸರ.ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಿಡಗಳು.
ಎರಡೂ ಕುಟುಂಬದ ಸಂಪ್ರದಾಯದಂತೆ ನವಜೋಡಿ ತಮ್ಮ ಬಾಳು ನಿರ್ವಿಘ್ನವಾಗಿ ಸಾಗುವಂತೆ ಶ್ರೀ ಮಹಾಗಣಪತಿ ಬೇಡಿಕೊಂಡರು. ಅಲ್ಲಿ ದೇವರಿಗೆ ಅರ್ಚನೆ ಮಾಡಿಸಿ 'ಅಪ್ಪ ಪ್ರಸಾದ 'ಸ್ವೀಕರಿಸಿದರು.  ನಂತರ ಕೆಲವೇ ಕಿಲೋಮೀಟರ್ ದೂರದಲ್ಲಿ ಇರುವಂತಹ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಅಮ್ಮನವರ ಆಶೀರ್ವಾದವನ್ನು ಪಡೆದುಕೊಂಡು... ನಂತರ ಮೈತ್ರಿಯ ಅಜ್ಜನ ಮನೆಯಲ್ಲಿ ನವ ವಧೂವರರಿಗೆ ಏರ್ಪಾಡಾಗಿದ್ದ ಔತಣ ಕೂಟಕ್ಕೆ ತೆರಳಿದರು. ಅಲ್ಲಿ ಸಾಂಪ್ರದಾಯಿಕವಾದ ಅದ್ದೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ಊಟದ ನಂತರ ಭಾಸ್ಕರ ಶಾಸ್ತ್ರಿಗಳು,ಮಂಗಳಮ್ಮ ಮಗಳು ಅಳಿಯ ಹಾಗೂ ಮಗಳ ಅತ್ತೆ ಮಾವನವರನ್ನು ಮನೆಗೆ ಬರುವಂತೆ ಆಹ್ವಾನಿಸಿದರು. ಕಿಶನ್ ಮನೆಯವರು ಮೈತ್ರಿಯ ತವರಿನ ಚಡಪಡಿಕೆಯನ್ನು ನೋಡಿ  ಶಾಸ್ತ್ರಿ ನಿವಾಸಕ್ಕೆ ಒಮ್ಮೆ ಭೇಟಿ ಕೊಡೋಣ ಎಂದು    ಶಾಸ್ತ್ರಿ ನಿವಾಸಕ್ಕೆ ಆಗಮಿಸಿದರು.


         ಮನೆಯಲ್ಲಿ ಇದ್ದಂತಹ ಅಜ್ಜ-ಅಜ್ಜಿ  ಸ್ವಾಗತಿಸಿದರು. ಅಷ್ಟೇಕೆ.. ಮೈತ್ರಿ ಬಂದದ್ದು ಕಂಡಾಗ ಕೊಟ್ಟಿಗೆಯಲ್ಲಿದ್ದ ದನಗಳೂ ಅಂಬಾಕಾರಗೈಯತೊಡಗಿದವು. . ಕಾರನ್ನು ಕಂಡಾಗ  ಬೊಗಳುತ್ತಿದ್ದ ನಾಯಿ ಮೈತ್ರಿಯನ್ನು ಕಂಡಾಗ ಸುಮ್ಮನಾಗಿತ್ತು. ಸೇಸಪ್ಪ ,ಜಿನ್ನಪ್ಪ, ಸರಸು ಎಲ್ಲರೂ ಮೈತ್ರಿ ಅಕ್ಕ ಬಂದಿದ್ದಾರೆ ಎಂದು  ಮನೆ ಹಿಂಬದಿಯ ಜಗುಲಿಗೆ ಬಂದು ಇಣುಕಿ ಮಾತನಾಡಿಸಿ ಹೋದರು.


        ಮಂಗಳಮ್ಮ ಎಲ್ಲರಿಗೂ ಗಡಿಬಿಡಿಯಲ್ಲಿ ಬಾಯಾರಿಕೆ ತಯಾರಿಸಿದರು. ಮೈತ್ರಿ ಒಂದು ನಿಮಿಷ ಕುಳಿತುಕೊಳ್ಳದೆ ಮನೆ , ಅಂಗಳದ ಸುತ್ತ ಮುತ್ತ ಎಲ್ಲಾ ಕಡೆ ಸುತ್ತು ಹಾಕಿ ಬಂದಳು. ಅಜ್ಜಿ ಮೈತ್ರಿಯಲ್ಲಿ "ಒಂದು ವಾರ ಕುಳಿತುಕೋ..ಪುಳ್ಳಿ.." ಎಂದರು.. ಅವಳಿಗೂ ಅದೇ ಆಸೆಯಾಗಿತ್ತು. ಅದನ್ನು ಕೇಳಿದ ಕಿಶನ್ ಕಣ್ಣಲ್ಲಿ ಮೈತ್ರಿಗೆ "ಬೇಡ ಕಣೇ.." ಎಂದು ಕೋರಿಕೆ ಸಲ್ಲಿಸುತ್ತಿದ್ದ.. ಮೈತ್ರಿಯ  ಅತ್ತೆ "ನಮ್ಮದೇನೂ ಅಭ್ಯಂತರವಿಲ್ಲ ಕುಳಿತುಕೊಳ್ಳುವುದಕ್ಕೆ" ಎಂದರು. ಮಾವ ಗಣೇಶ ಶರ್ಮ ಕೂಡ ಮಡದಿಯ ಮಾತಿಗೆ ಬೆಂಬಲಿಸಿದರು. ಕಿಶನ್ ನ ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ಇವರೆಲ್ಲರೂ ಸೇರಿ ಒಂದು ವಾರ ಮೈತ್ರಿಯನ್ನು ನನ್ನಿಂದ ದೂರವಿಡುತ್ತಾರೆಂದು.


       ಮಂಗಳಮ್ಮ ಬಾಯಾರಿಕೆ ತಂದು ಎಲ್ಲರಿಗೂ ನೀಡಿದರು. ಬಾಳೆಹಣ್ಣಿನ ಸವಿಯಾದ ಹಲ್ವ ಇತ್ತು. ಮದುವೆಗೆಂದು ತೆಗೆದಿಟ್ಟಿದ್ದ ಬಾಳೆಹಣ್ಣುಗಳು ಒಮ್ಮೆಲೆ ಹಣ್ಣಾಗಿದ್ದವು.  ಅದನ್ನೆಲ್ಲ ಮಂಗಳಮ್ಮ ತುಪ್ಪ ಸಕ್ಕರೆ ಹಾಕಿ ಚೆನ್ನಾಗಿ ಪಾಕಮಾಡಿ ಹಲ್ವ ತಯಾರಿಸಿದ್ದರು. ಭಾಸ್ಕರ ಶಾಸ್ತ್ರಿಗಳು ಮಡದಿಯಲ್ಲಿ "ಹಲ್ವಾ   ಮೈತ್ರಿಯ ಮನೆಗೆ ಪ್ಯಾಕ್ ಮಾಡು "ಎಂದರು. ಕಿಶನಿಗೆ ಈಗ ಸ್ವಲ್ಪ ಧೈರ್ಯ ಬಂತು. ಮಾವ ಮೈತ್ರಿಯನ್ನು ಕುಳಿತುಕೊಳ್ಳಲು ಹೇಳುತ್ತಿಲ್ಲ ಎಂದು. ಮಂಗಳಮ್ಮ ಹಲ್ವಾ ಎರಡು ಪ್ರತ್ಯೇಕ  ಪ್ಯಾಕೆಟ್ ಮಾಡಿ ತಂದುಕೊಟ್ಟರು ..ಒಂದು ಬೆಂಗಳೂರಿಗೆ ...ಒಂದು ಮಗಳ ಅತ್ತೆ-ಮಾವನಿಗೆ ಎಂದು. ಕಿಶನ್ ಮುಖದಲ್ಲಿ ಈಗ ನಗೆ ಮೂಡಿತು. ಅಬ್ಬಾ ...!!!! ಇವರು ಮೈತ್ರಿಯನ್ನು ಕೂರಿಸಿಕೊಳ್ಳುತ್ತಿಲ್ಲ .. ಅಷ್ಟೇ ಸಾಕು ಎಂದು.ಭಾಸ್ಕರ ಶಾಸ್ತ್ರಿಗಳು ಮತ್ತು ಮಂಗಳಮ್ಮನಿಗೆ ಮಗಳನ್ನು ಕೂರಿಸಿಕೊಳ್ಳುವ ಬಯಕೆ ಇದ್ದರೂ ಹೇಳಿಕೊಳ್ಳಲಿಲ್ಲ.ಈಗಲೇ  ಹೇಳಿದರೆ ಅಳಿಯನಿಗೆ ವಿರಹ ವೇದನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು . ಮೈತ್ರಿಗೆ ಅಮ್ಮ ಕುಳಿತುಕೊಳ್ಳಲು ಹೇಳಲಿಲ್ಲ ಎಂದು ಒಂದು ಕಡೆ ಸಂತೋಷ ಇನ್ನೊಂದು ಕಡೆ ದುಃಖ ಎರಡೂ ಜೊತೆ ಜೊತೆಯಲಿ ಆಯ್ತು. ಕಿಶನ್ ನ ಬಿಟ್ಟಿರುವುದು ಕಷ್ಟ. ತವರಿನಲ್ಲಿ ಒಂದೆರಡು ದಿನವಾದರೂ ಕುಳಿತುಕೊಳ್ಳಬೇಕೆಂದು ಬಯಕೆ. ಆ ಕಡೆಯೂ ಅಲ್ಲ ಈ ಕಡೆಯೂ ಅಲ್ಲ ಎನ್ನುವಂತಾಗಿತ್ತು ಅವಳ ಮನಸ್ಥಿತಿ.


      ಒಂದೆರಡು ಗಂಟೆಗಳ ಕಾಲ ತವರಿನಲ್ಲಿ ಕಳೆದು ಮನೆಗೆ ಹಿಂದಿರುಗುವಾಗ ಮೈತ್ರಿ ಗೆ ಕಣ್ತುಂಬಿ ಬಂದಿತ್ತು. ಅಮ್ಮ ಸಮಾಧಾನ ಮಾಡಿ  "ಇನ್ನೊಮ್ಮೆ ಬಂದಾಗ ಕುಳಿತುಕೊಳ್ಳುವಿಯಂತೆ" ಎಂದರು. ಏನೋ ನೆನಪಾದವರಂತೆ ಒಳಗಡೆ ಹೋಗಿ ಕೈಯಲ್ಲಿ ಪುಸ್ತಕ ಹಿಡಿದು ತಂದರು. "ಮಗಳೇ... ಇದು ಕಡೆಂಬಿಲ ಸರಸ್ವತಿ ಅಮ್ಮನವರು ಬರೆದಂತಹ ಅಡುಗೆ ಪುಸ್ತಕ. ಸಾಮಾನ್ಯವಾಗಿ ಹವ್ಯಕರು ಮಾಡುವ ಸಾಂಪ್ರದಾಯಿಕ ಅಡುಗೆಗಳೆಲ್ಲವನ್ನೂ ಸರಿಯಾದ ಅಳತೆಯಲ್ಲಿ ಇದರಲ್ಲಿ ಬರೆದಿದ್ದಾರೆ. ನಿನಗೇನಾದರೂ ಅಡುಗೆ ಮಾಡುವಾಗ ಸಂಶಯ ಬಂದರೆ ಇದನ್ನು ಉಪಯೋಗಿಸಿಕೋ. ಹಾಗೆಯೇ ಹೊಸ ಹೊಸ ರುಚಿಗಳನ್ನು ಮಾಡಿ ಅಳಿಯನಿಗೆ ತಿನಿಸು "ಎಂದು ಹೇಳಿ ಅಳಿಯನ ಮುಖವನ್ನು ನೋಡಿದರು. ಅಳಿಯನ ಮುಖ ಅರಳಿತ್ತು. ಇಂಥ ಅತ್ತೆಯವರು ಸಿಕ್ಕಿದ್ದು ನನ್ನ ಪುಣ್ಯ ಎಂದುಕೊಂಡ ಕಿಶನ್.

"ಅಕ್ಕಾ... ಚಕ್ಕುಲಿ, ಕೋಡುಬಳೆ ಮಾಡಿದಾಗ ಮರೆಯದೆ ನಮಗೂ ಪಾರ್ಸೆಲ್ ಮಾಡು .."ಎಂದ ಮಹೇಶ್..

"ನೀನು ಹೀಗೇ ಏನಾದರೂ ಹೇಳ್ತಿ ಅಂತ ಗೊತ್ತಿತ್ತು ನಂಗೆ.."

"ಹೌದು.. ಮತ್ತೆ.. ಸ್ವೀಟ್ ಮಾಡಿ ಭಾವಂಗೆ ತಿನ್ಸು..ನಮಗೆ ಅದೆಲ್ಲ ಬೇಡಪ್ಪಾ.. ಚಕ್ಕುಲಿ, ಕೋಡುಬಳೆ ಸಾಕು.."

ತಮ್ಮನ ಮಾತಿಗೆ ನಕ್ಕು ಕಾರಿನಲ್ಲಿ ಕುಳಿತಳು ಮೈತ್ರಿ.


       ಕಾರು ಸ್ಟಾರ್ಟ್ ಆಯ್ತು.. ಮುಂದೆ ಹೋಗುತ್ತಿದ್ದಂತೆ ಮೈತ್ರಿ ಹಿಂದಿರುಗಿ ಮನೆಯವರನ್ನೆಲ್ಲ ನೋಡುತ್ತಾ ಬಾಯ್ ಮಾಡಿದಳು. ತವರುಮನೆಯ ಮಾಳಿಗೆಯ ತುದಿ ಕಾಣುವವರೆಗೂ ನೋಡುತ್ತಿದ್ದಳು. ಹೃದಯ ಭಾರವಾಗಿತ್ತು. ಕಿಶನ್ ಕನ್ನಡಿಯಲ್ಲಿ ಮಡದಿಯ ಭಾವುಕವಾದ ಮುಖಭಾವವನ್ನು ಗಮನಿಸುತ್ತಿದ್ದ. ಆದರೆ ಜೊತೆಯಲ್ಲಿ ಅಪ್ಪ-ಅಮ್ಮ ಇದ್ದಾಗ ಅವನಿಗೆ ಸಮಾಧಾನ ಪಡಿಸಲು ಸಾಧ್ಯವಾಗಲಿಲ್ಲ. ಮನೆಗೆ ತಲುಪಿದ ನಂತರ ಬೆಂಗಳೂರಿಗೆ ಹೊರಟು ನಿಂತರು.


        ಎಂದಿನಂತೆ ಗಣೇಶ್ ಶರ್ಮ ತಮ್ಮ ಮಗನಿಗೆ ಹಳ್ಳಿಯಿಂದ ಕೊಂಡೊಯ್ಯಲು ತೆಂಗಿನಕಾಯಿ, ತರಕಾರಿ, ಬಾಳೆಗೊನೆ ಎಲ್ಲವನ್ನು ಸಂಗ್ರಹಮಾಡಿ ಇಟ್ಟಿದ್ದರು. ಕಾರಿಗೆ ತುಂಬಿಸಿ ಕಳುಹಿಸುವಾಗ ಅವರಿಗೂ ಮಗ-ಸೊಸೆ ಇಲ್ಲೇ ಸನಿಹದಲ್ಲಿ ಇದ್ದರೆ ಒಳ್ಳೆಯದಿತ್ತು ಎಂದು ಅನಿಸದೇ ಇರಲಿಲ್ಲ.ಆದರೂ ಮಗನ ಸಂಪಾದನೆ ಬೆಂಗಳೂರಿನಲ್ಲಿ ಚೆನ್ನಾಗಿದೆ.. ಇಲ್ಲಿದ್ದರೆ ಅಷ್ಟು ಸಂಪಾದನೆ ಮಾಡುವುದು ಅಸಾಧ್ಯ ಎಂದು ತಮ್ಮನ್ನು ತಾವು ಸಮಾಧಾನಿಸಿಕೊಂಡರು.



        ಮನೆಯಿಂದ ಹೊರಟು ಬೆಂಗಳೂರು ನಗರ ತಲುಪುವಾಗ  6:30 ಆಗಿತ್ತು. ಕಿಶನ್ ಗೆ ಆಫೀಸ್ ಗೆ ಹೋಗಬೇಕು. ತರಾತುರಿಯಲ್ಲಿ ಬೆಳಗಿನ ತಿಂಡಿ ಮಾಡಿಕೊಟ್ಟಳು ಮೈತ್ರಿ. ಬೇಗಬೇಗನೆ ಆಫೀಸಿಗೆ ತಯಾರಾಗಿ ತಿಂಡಿ ತಿಂದು ಹೊರಡುವ ಗಡಿಬಿಡಿಯಲ್ಲಿ ಮೈತ್ರಿಯನ್ನೊಮ್ಮೆ ತಬ್ಬಿ "ಸಂಜೆ ಬರ್ತೀನಿ ಕಣೇ.. ಕಾಯ್ತಾ ಇರು..ನಿನ್ನೆಯದ್ದು ಇವತ್ತಿಂದು ಎಲ್ಲ ಸೇರಿಸಿ ಪ್ರೀತಿಯ ಹಬ್ಬವನ್ನೇ ಆಚರಿಸೋಣ"ಎಂದು ಗುಳಿಕೆನ್ನೆಗೊಂದು ಸಿಹಿಗುಳಿಗೆಯನಿತ್ತು ಬಾಯ್ ಮಾಡಿದ..


   ಪತಿ ಆಫೀಸಿಗೆ ತೆರಳುತ್ತಿದ್ದಂತೆ ಜಾಡ್ಯ ಅವಳನ್ನು ಆವರಿಸಿತ್ತು..ಅಗತ್ಯದ ಕೆಲಸಗಳನ್ನು ಮಾಡಿ ಹಾಸಿಗೆಯಲ್ಲಿ ವಿರಮಿಸೋಣ ಸ್ವಲ್ಪ ಹೊತ್ತು ಎಂದು ಮಲಗಿದವಳಿಗೆ ಕಣ್ಣಿಗೆ ನಿದ್ದೆ ಆವರಿಸಿತು.. ಮಧ್ಯಾಹ್ನ ಎದ್ದವಳಿಗೆ ಒಬ್ಬಳಿಗೆ ಅಡುಗೆ ಮಾಡಿಕೊಳ್ಳಲು ಬೇಸರ..ಅನ್ನವಿಟ್ಟು... ಮೊಸರಲ್ಲಿ ಊಟಮಾಡೋಣ ಇವತ್ತು ಎಂದುಕೊಂಡಳು.. ಆಗಲೇ ಕಿಶನ್ ಎರಡು ಸಲ ಕರೆ ಮಾಡಿದ್ದು ತಿಳಿದು ಕರೆ ಮಾಡಿದಳು.
"ರೀ.. ಫೋನ್ ಮಾಡಿದ್ರಾ.."

"ಹೂಂ..ಕಣೇ..ಊಟ ಮಾಡಿದ್ಯಾ..ಅಲ್ಲ.. ಅಡುಗೆ ಮಾಡಿದ್ಯಾ ಇಲ್ವಾ.. ಒಬ್ಬಳಿಗೆ ಅಡುಗೆ ಮಾಡಿಕೊಳ್ಳಲು ಉದಾಸೀನ ಮಾಡಬೇಡ.."

ಇವರಿಗೆ ಹೇಗೆ ಗೊತ್ತಾಯಿತು ನನ್ನ ಉದಾಸೀನ ಎಂದುಕೊಳ್ಳುತ್ತಾ
"ಇವತ್ತು ಮೊಸರನ್ನ.."

"ಮನೆಯಿಂದ ತಂದ ಅಲಸಂಡೆ ಇದೆ ..ಪಲ್ಯ ಮಾಡು..ದೀಗುಜ್ಜೆ ಕೊಟ್ಟಿದ್ದಾರೆ ..ಸಾಂಬಾರ್ ಮಾಡು..ಊಟದ ವಿಷಯದಲ್ಲಿ ಅಸಡ್ಡೆ ಮಾಡಬೇಡ.."

"ಹೂಂ.."ಎಂದಳು ನೀರಸವಾಗಿ..

"ಅಂದ ಹಾಗೆ ಮುದ್ಗೊಂಬೆ.. ಇವತ್ತು ಹಿರಿಯ ಅಧಿಕಾರಿಗಳೊಂದಿಗೆ ಮೀಟಿಂಗ್ ಇದೆ.ಅಟೆಂಡ್ ಮಾಡಲೇಬೇಕು.ತಪ್ಪಿಸಿಕೊಳ್ಳುವ ಹಾಗಿಲ್ಲ.. ಬರೋದು ಲೇಟಾಗಬಹುದು ಕಣೇ.. ಪ್ಲೀಸ್.. ಇವತ್ತೊಂದಿನ ಅಷ್ಟೇ...ಬೇಸರ ಮಾಡ್ಕೋಬೇಡ ಬಂಗಾರೀ..."

    ಗಂಡನ ಮಾತಿಗೆ ಹೂಂಗುಟ್ಟಿದಳು.. ಇವತ್ತು ಆರಂಭ..ಮುಂದೆ ಇಂತಹದ್ದೆಲ್ಲ ಮಾಮೂಲಿ ಸಂಗತಿ.. ಉದ್ಯೋಗ ಅಂದ ಮೇಲೆ ಒತ್ತಡಗಳು ಇದ್ದೇ ಇರುತ್ತವೆ...ಮೈತ್ರಿ ಅಡುಗೆ ಮಾಡಲು ತೆರಳಿದಳು.ಗಂಡ ಹೇಳಿದ ಅಡುಗೆಯನ್ನು ರಾತ್ರಿಗೂ ಆಗುವಂತೆ ಸ್ವಲ್ಪ ಹೆಚ್ಚೇ ಮಾಡಿಟ್ಟಳು.ತಾನುಂಡು ಮನೆಯ ಕೆಲಸಗಳಲ್ಲಿ ತಲ್ಲೀನಳಾದಳು.ಮನೆಯಿಂದ ಬರುವಾಗ ತಂದಂತಹ ವಸ್ತುಗಳನ್ನು ಒಪ್ಪ ಓರಣವಾಗಿ ಜೋಡಿಸಿ ಇಡಲು ಒಂದು ತಾಸೇ ಹಿಡಿಯಿತು.ಬಟ್ಟೆ ಒಗೆಯುವುದು,ಗುಡಿಸಿ ನೆಲಒರೆಸಿ ಆಗುವಷ್ಟು ಹೊತ್ತಿಗೆ ಸಂಜೆಯಾಗಿತ್ತು. ಮನಸು ಖಾಲಿಯಾದ ಭಾವ.ಬಾಲ್ಕನಿಯ ಬಳಿ ನಿಂತು ಸುತ್ತಲೂ ದಿಟ್ಟಿಸತೊಡಗಿದಳು.ಕೆಳಗಡೆ ಪುಟ್ಟ ಮಕ್ಕಳು ಆಟವಾಡುತ್ತಿದ್ದಾರೆ.ಮಧ್ಯ ವಯಸ್ಸಿನವರು,ವೃದ್ಧರು ವಾಕಿಂಗ್ ಮಾಡುತ್ತಿದ್ದರು.ತಾನು ಒಬ್ಬಂಟಿ ಎನಿಸತೊಡಗಿತು.ಕಣ್ಣು ಗೋಡೆಯಲ್ಲಿರುವ ಗಡಿಯಾರದ ಕಡೆಗೆ ವಾಲಿತು.ಯಾವತ್ತೂ ಕಿಶನ್ ಬರುವ ಸಮಯ.. ಇವತ್ತು ಎಷ್ಟು ಹೊತ್ತಾಗುತ್ತೋ ಏನೋ..


    ಸ್ನಾನ ಮುಗಿಸಿ ಬಂದು ದೇವರಿಗೆ ದೀಪ ಹಚ್ಚಿ ನಮಸ್ಕರಿಸಿದಳು.ಹಿಂದೆ ಕಲಿತಿದ್ದ ಶಾಸ್ತ್ರೀಯ ಸಂಗೀತದ ರಾಗಗಳನ್ನು ಮೆಲುಕು ಹಾಕತೊಡಗಿದಳು.ಸ್ವಲ್ಪ ಮನಸು ಚೇತರಿಸಿದರೂ...ಸಮಯ ಎಷ್ಟು ನಿಧಾನವಾಗಿ ಚಲಿಸುತ್ತಿದೆ ಎನಿಸಿತು.. ಮೊಬೈಲ್ ಟಿವಿ ಎರಡೂ ಬೇಡವೆನಿಸಿತು.. ಕಿಶನ್ ನ ಸನಿಹಕ್ಕೀಗ ಮನವು ಹಂಬಲಿಸುತ್ತಿತ್ತು.

    ಗೋಡೆಗೆರಗಿ ಕುಳಿತಿದ್ದವಳಿಗೆ ನಿದ್ರೆಯ ಜೊಂಪು ಕಣ್ಣಿಗೆ ಹತ್ತಿತು.ಒಮ್ಮೆಲೇ ಡೋರ್ ಬೆಲ್ ಆದಾಗ ಫಕ್ಕನೇ ಎದ್ದು ಕಿಶನ್ ಬಂದಿರಬೇಕು ಎಂದು ಬಾಗಿಲು ತೆರೆದಳು.ಯಾರೂ ಇರಲಿಲ್ಲ..ನಂಗೆ ಕನಸು ಬಿತ್ತಾ..ಷ್.. ಎನ್ನುತ್ತಾ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡಳು.


     ಕಿಶನ್ ಮೀಟಿಂಗ್ ನಲ್ಲಿ  ಹಿರಿಯ ಅಧಿಕಾರಿಗಳ ಸಲಹೆಗಳನ್ನು ನೋಟ್ ಮಾಡಿಕೊಂಡ.ಮುಂದಿನ ಪ್ರೋಜೆಕ್ಟ್ ನ ರೂಪುರೇಷೆಗಳನ್ನು ಮಂಡಿಸುತ್ತಿದ್ದಾಗ ಗಮನವಿಟ್ಟು ಆಲಿಸುತ್ತಿದ್ದ.ಕೆಲವು ಸಮಸ್ಯೆಗಳನ್ನು ಅಧಿಕಾರಿಗಳು ಸಭೆಯ ಮುಂದಿಟ್ಟಾಗ ಕಿಶನ್ ಸಮಸ್ಯೆ ಯನ್ನು ಬಗೆಹರಿಸಲು ತನ್ನ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ಸೂಚಿಸಿದ.ಅಧಿಕಾರಿಗಳು ಮೆಚ್ಚಿ ಭೇಷ್ ಎಂದರು.

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
19-06-2020.

2 comments:

  1. ಚೆನ್ನಾಗಿ ಮೂಡಿ ಬರುತ್ತಿದೆ...

    ReplyDelete